ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕಿನಲ್ಲಿ ಅಮ್ಮನಂತಹ ವಿಶ್ವಸುಂದರಿ ಇರಲು ಸಾಧ್ಯವೇ?

By ಆರ್.ಟಿ. ವಿಠ್ಢಲಮೂರ್ತಿ
|
Google Oneindia Kannada News

ಅಮ್ಮನನ್ನು ನಾವು ಯಾಕಷ್ಟು ಪರಿ ಪ್ರೀತಿಸುತ್ತೇವೆ? ಆಕೆ ನಮ್ಮನ್ನು ನಿಷ್ಕಲ್ಮಶ ಪ್ರೀತಿಯಿಂದ ನೋಡಿಕೊಂಡಿರುತ್ತಾಳೆ ಎಂದೇ? ಬದುಕಿನ ಮೊಟ್ಟ ಮೊದಲ ಗುರು ಎಂದೇ? ಜೀವ ಹೋದರೂ ಪರವಾಗಿಲ್ಲ, ನನ್ನ ಮಗು ಸುಖವಾಗಿರಬೇಕು ಎಂದು ಬಯಸಿರುತ್ತಾಳೆ ಎಂದೇ? ಒಂಭತ್ತು ತಿಂಗಳು ಹೊಟ್ಟೆಯಲ್ಲಿಟ್ಟುಕೊಂಡು ಜೋಪಾನ ಮಾಡಿಕೊಂಡಿರುತ್ತಾಳೆ ಎಂದೇ?

ಯಾಕೆ? ಈ ಪ್ರಶ್ನೆಯನ್ನೇ ಪಾತ್ರೆಯನ್ನಾಗಿ ಮಾಡಿಕೊಂಡು ನೀರು ಸುರಿದು ನೋಡಿ. ಈ ಎಲ್ಲ ಪ್ರಶ್ನೆಗಳಿಗೂ ಒಗ್ಗಿಕೊಳ್ಳುವ ಪಾತ್ರೆಯಾಗಿ ಬಿಡುತ್ತಾಳೆ ತಾಯಿ. ಬದುಕಿನಲ್ಲಿ ಅಂತಹ ಪಾತ್ರೆಯನ್ನು ನೀವು ಯಾವ ಅಂಗಡಿಯಲ್ಲಿ ಹುಡುಕಿದರೂ ಸಿಗುವುದಿಲ್ಲ. ಎಷ್ಟು ಕೋಟಿ ಸುರಿದರೂ ದಕ್ಕುವುದಿಲ್ಲ.

ಮೊನ್ನೆ ಫೇಸ್ ಬುಕ್ ಗೆಳೆಯ ವಿನಾಯಕ ಜೋಷಿ ಅವರ ತಾಯಿ ತೀರಿಕೊಂಡರು ಎಂಬ ವಿಷಯ ಗೊತ್ತಾಗುತ್ತಿದ್ದಂತೆಯೇ ಅಗೋಚರ ಶಕ್ತಿಯೊಂದು ಕೈ ಕಟ್ಟಿ ಹಾಕಿದಂತಾಯಿತು. ಜಪ್ಪಯ್ಯ ಅಂದರೂ ಬರೆಯಲು ಸಾಧ್ಯವಾಗುತ್ತಿಲ್ಲ. ಯಾಕೆ ತಾಯಿ ಅಂದ ಕೂಡಲೇ ಹೃದಯ ಈ ಪರಿ ತಲ್ಲಣಿಸುತ್ತದೆ? ಕನವರಿಸುತ್ತದೆ? ಕಂಗಾಲಾಗುತ್ತದೆ? ಬೆಚ್ಚಿ ಬೀಳುತ್ತದೆ?

Only mother can make the sound of love in silence

ನನ್ನ ತಾಯಿ ಪ್ರಭಾವತಿ ಬಾಯಿ ಅವರಿಗೆ ನಾವು ಮೂವರು ಮಕ್ಕಳು. ದೊಡ್ಡವನು ಮಹೇಂದ್ರನಾಥ್, ನಂತರ ನಾನು, ಚಿಕ್ಕವನು ಪಾಂಡುರಂಗ. ಸಾಗರದ ಅಶೋಕಾ ರಸ್ತೆಗೆ ಬಿ.ಹೆಚ್.ರಸ್ತೆಯಿಂದ ಎಂಟ್ರಿ ಕೊಟ್ಟರೆ ಮೊದಲು ಸಿಗುತ್ತಿದ್ದುದೇ ನಮ್ಮ ಮನೆ.

ಆಗ ನಾವು ಗುಡಿಗಾರ್ ದೇವಪ್ಪ ಅವರ ಮನೆಯಲ್ಲಿ ಬಾಡಿಗೆಗಿದ್ದೆವು. ಬೆಳಿಗ್ಗೆ ಐದು ಗಂಟೆಗೆ ಮುನ್ಸಿಪಾಲಿಟಿ ನಲ್ಲಿಯಲ್ಲಿ ನೀರು ಬರುತ್ತಿತ್ತು. ಅಷ್ಟೊತ್ತಿಗೆ ಎದ್ದು ನಾನು, ಅಣ್ಣ ಮಹೇಂದ್ರನಾಥ್ ಸೇರಿ ಮಿನಿಮಮ್ ಇಪ್ಪತ್ತು ಕೊಡಪಾನದಷ್ಟು ನೀರು ಹಿಡಿದುಕೊಂಡು ಬಂದು ಹಂಡೆಗೆ, ಪಾತ್ರೆಗೆ ಅಂತ ತಂದು ಹಾಕಬೇಕಿತ್ತು.
ಇದು ಮುಗಿಯುತ್ತಿದ್ದಂತೆಯೇ ನಮ್ಮ ತಂದೆ ತಾರಾನಾಥ್ ಸರ್ಕಲ್ ಲಾಡ್ಜ್ ಪಕ್ಕದಲ್ಲಿದ್ದ ಸಾಗರ್ ಹೋಟೆಲ್ ಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಟೀ ಕುಡಿದ ನಂತರ ವಾಪಸ್ಸು ಮನೆಗೆ. ಆನಂತರ ಮನೆಯ ಕಸ ಗುಡಿಸಿ, ನೆಲ ಒರೆಸುವುದು ನಮ್ಮಣ್ಣನ ಡ್ಯೂಟಿ.

ಮಗಳು ಬರೆದ ಲೇಖನ ಓದಿ ಅಪ್ಪನ ಕಣ್ಣಲ್ಲಿ ಅಶ್ರುಧಾರೆ!ಮಗಳು ಬರೆದ ಲೇಖನ ಓದಿ ಅಪ್ಪನ ಕಣ್ಣಲ್ಲಿ ಅಶ್ರುಧಾರೆ!

ಎಂಟು ಗಂಟೆಯಷ್ಟೊತ್ತಿಗೆ ತಿಂಡಿಯ ಜತೆ ಅಡುಗೆಯನ್ನೂ ಮಾಡುತ್ತಿದ್ದ ಅಮ್ಮನಿಗೆ ಮಸಾಲೆ ಅರೆದು ಕೊಡುವುದು ನನ್ನ ಕೆಲಸ. ಹೀಗಾಗಿ ಮಸಾಲೆ ಅರೆದು, ಅರೆದು ಚಂದಗೆ ಅಭ್ಯಾಸವಾಗಿ ಹೋಗಿತ್ತು. ಅಡುಗೆಗೆ ಬೇಕಾದ ಮಸಾಲೆಯಿಂದ ಹಿಡಿದು ದೋಸೆ ಹಿಟ್ಟು ಅರೆಯುವ ತನಕ ಶಂಭೋ ಶಂಕರಾ ಅಂತ ಒಂದೇ ಸಮನೆ ಕೆಲಸ ಮಾಡುತ್ತಿದ್ದೆ. ಅದಾದ ನಂತರ ನೋಡುತ್ತಿದ್ದುದು ಶಾಲೆಯ ದಿಕ್ಕು.

ಚಿಕ್ಕವರಿದ್ದಾಗ ನಮ್ಮ ಖರ್ಚಿಗೆ ಅಂತ ಬೇಕಾದಷ್ಟು ದುಡ್ಡು ಸಿಗುತ್ತಿರಲಿಲ್ಲ. ಅಪ್ಪ ವಾರಕ್ಕೆ ಹತ್ತು ಪೈಸೆ ಕೊಟ್ಟರೆ, ಆನಂದಪುರದ ಸಂತೆಗೆ ಬಟ್ಟೆ ಮಾರಲು ಹೋಗುತ್ತಿದ್ದ ಅಜ್ಜಿ ತುಳಸೀಬಾಯಿ, ಮರುದಿನ ನಮಗೆ ಐದು ಪೈಸೆ ಕೊಡುತ್ತಿದ್ದರು. ಅಂದರೆ ನಮ್ಮ ವಾರದ ಆದಾಯ ಹದಿನೈದು ಪೈಸೆ. ಆದರೆ ಖರ್ಚು ಐವತ್ತು ಪೈಸೆಯಷ್ಟಿತ್ತು. ಈ ಖರ್ಚನ್ನು ಸರಿದೂಗಿಸಬೇಕಲ್ಲ?

ಹಾಗಂತ ಒಂದು ದಿವಸ ನಾನು, ನಮ್ಮತ್ತೆಯ ಮಗ ಸೇರಿ ಒಂದು ಪ್ಲಾನು ಕಂಡು ಹಿಡಿದುಬಿಟ್ಟೆವು. ಸಾಗರದ ಅಶೋಕಾ ರಸ್ತೆ ಎಂದರೆ ಮೊದಲೇ ಸೋನಗಾರರು ಹೆಚ್ಚಿದ್ದ ಕೇರಿ. ಸೋನಗಾರರು ಎಂದರೆ ಬಂಗಾರದ ಕೆಲಸ ಮಾಡುವವರು. ಹೀಗಾಗಿ ರಸ್ತೆಯ ಅಕ್ಕ ಪಕ್ಕದಲ್ಲಿದ್ದ ಚರಂಡಿಗೆ ನಿರ್ದಿಷ್ಟ ಭಾಗದಲ್ಲಿ ಮಣ್ಣು ಸುರಿದು, ಹರಿಯುವ ನೀರನ್ನು ತಡೆಗಟ್ಟಿ ಅದನ್ನೆಲ್ಲ ಉಗ್ಗಿ, ಉಳಿಯುವ ಮಣ್ಣನ್ನು ಬಾಣಲೆಯಲ್ಲಿ ಹಾಕಿಕೊಂಡು ರವುಂಡಾಗಿ ಸುತ್ತಿಸಿದರೆ ಸಣ್ಣ ಸಣ್ಣ ಬಂಗಾರದ ಪೀಸುಗಳು ಸಿಗುತ್ತಿದ್ದವು.

ಅಮ್ಮ... ನಮ್ಮೆಲ್ಲರ ಬದುಕಿನ ಜೀವಂತ ಪವಾಡ!ಅಮ್ಮ... ನಮ್ಮೆಲ್ಲರ ಬದುಕಿನ ಜೀವಂತ ಪವಾಡ!

ನಾವು ಒಂದು ದಿನ ಮುಲಾಜೇ ನೋಡದೆ ಈ ಕೆಲಸಕ್ಕಿಳಿದೆವು. ಹೀಗೆ ಸಿಗುವ ಬಂಗಾರವನ್ನು ಕರಿ ಮೇಣದಲ್ಲಿ ಅಂಟಿಸಿಕೊಳ್ಳಬಹುದಿತ್ತು. ಹೀಗೆ ಕರಿ ಮೇಣದಲ್ಲಿ ಅಂಟಿಸಿಕೊಂಡರೆ ಬಂಗಾರದ ತುಣುಕುಗಳು ಎದ್ದು ಕಾಣುತ್ತಿದ್ದವು. ಹೀಗೆ ಮೇಣದಲ್ಲಿ ಅಂಟಿಸಿಕೊಂಡು ರಾಮಚಂದ್ರ ಅವರ ಅಂಗಡಿಗೋ, ಸೀತಾರಾಮಣ್ಣನ ಅಂಗಡಿಗೋ ಹೋದರೆ ಕನಿಷ್ಟ ಒಂದೂವರೆಯಿಂದ ಎರಡು ರೂಪಾಯಿಗಳಷ್ಟು ದುಡ್ಡು ಸಿಗುತ್ತಿತ್ತು. ಅವತ್ತಿನ ದಿನಗಳಿಗೆ ಅದು ಬಂಪರ್ ಲಾಟರಿ. ಅಲ್ಲಿಗೆ ಖರ್ಚಿಗೆ ಒಂದು ದಾರಿ ಸಿಕ್ಕಂತಾಯಿತು.

ಹೀಗೇ ಹಲವು ವಾರ ಮುಂದುವರಿಯಿತು ನಮ್ಮ ಚರಂಡಿ ಆದಾಯ. ಒಂದು ದಿನ ನೋಡಿದವರೊಬ್ಬರು ಸೀದಾ ಹೋಗಿ ಮನೆಗೆ ಹೇಳಿದ್ದಾರೆ. ಆದರೆ ನಮ್ಮಮ್ಮ, ಅವನು ಕಳ್ಳತನ ಮಾಡಿದ್ದರೆ ಹೇಳಿ. ಕೊಬ್ಬರಿ ತುರಿದು ಹಾಕಿದಂತೆ ತುರಿದು ಹಾಕಿಬಿಡುತ್ತೇನೆ. ಆದರೆ ಆತ ಮಾಡುತ್ತಿರುವುದು ಕಳ್ಳತನವಲ್ಲ ಬಿಡಿ ಎಂದುಬಿಟ್ಟರು.
ಅವರೆದುರು ಹಾಗೆ ಹೇಳಿದವರು, ಮರುದಿನ ನನ್ನನ್ನು ಹತ್ತಿರ ಕರೆದು, ಯಾಕೋ ಮಗಾ? ನಿನಗೆ ಸಿಗುತ್ತಿರುವ ದುಡ್ಡು ಸಾಕಾಗುತ್ತಿಲ್ಲವಾ? ಪರವಾಗಿಲ್ಲ ಬಿಡು. ಚರಂಡಿ ತೊಳೆಯುತ್ತಾ ಯಾಕೆ ಓದುವುದನ್ನು ಮರೆಯುತ್ತೀಯಾ? ಬಳೆ ಮಾರಿದ ದುಡ್ಡು ನನ್ನ ಬಳಿಯೇ ಇರುತ್ತಲ್ಲ? ಅದರಲ್ಲಿ ನಿನಗೆ ನಾಲ್ಕಾಣೆಯೋ, ಎಂಟಾಣೆಯೋ ಬೇಕಿದ್ದರೆ ತಗೋ ಎಂದರು.

ಆಕೆ ಕೊಟ್ಟ ಉತ್ತರ ಜೀವನದಲ್ಲಿ ಎಂದೂ ಮರೆಯಲಾಗದುಆಕೆ ಕೊಟ್ಟ ಉತ್ತರ ಜೀವನದಲ್ಲಿ ಎಂದೂ ಮರೆಯಲಾಗದು

ಅವತ್ತಿಗೆ ನಾನು ಚರಂಡಿ ಆದಾಯದ ಮೂಲವನ್ನು ಬಿಟ್ಟು ಬಿಟ್ಟೆ. ನಾವು ಕಷ್ಟದಲ್ಲಿದ್ದೇವೆ ಎಂಬ ಕಾರಣಕ್ಕಾಗಿ ಆಕೆ ಆ ದಿನಗಳಲ್ಲಿ ಬಳೆ ಮಾರಿ ಸಂಪಾದಿಸುತ್ತಿದ್ದಳು. ಹೀಗಾಗಿ ತನಗೆ ಬರುತ್ತಿದ್ದ ಸಣ್ಣ ಪುಟ್ಟ ಲಾಭದ ಹಣವನ್ನು ಸಂಸಾರ ನಡೆಸುವ ಸಲುವಾಗಿ ಟ್ರಂಕಿನಲ್ಲಿ ಜೋಡಿಸಿಡುತ್ತಿದ್ದಳು. ಅರೇ, ದುಡ್ಡು ಆಕೆಯೇ ಇಟ್ಟುಕೊಂಡಿರುತ್ತಾಳಲ್ಲ? ಅಂದುಕೊಂಡು ಒಂದು ದಿನ ಮೆಲ್ಲಗೆ ಕಳ್ಳತನ ಶುರುವಿಟ್ಟುಕೊಂಡೆ.
ಆಕೆ ಟ್ರಂಕಿನಲ್ಲಿದ್ದ ಒಂದು ಸಣ್ಣ ಕೈ ಚೀಲದಲ್ಲಿ ನಾಣ್ಯಗಳನ್ನು ಜೋಡಿಸಿಡುತ್ತಿದ್ದಳು. ಆಗೆಲ್ಲ ಲಾಭವೆಂದರೆ ನಾಣ್ಯಗಳ ಮೊತ್ತದಲ್ಲಿಯೇ ಇರುತ್ತಿತ್ತು.

ಹೀಗಾಗಿ ಒಂದು ದಿನ ಆಕೆ ಮನೆಯಲ್ಲಿಲ್ಲದ ದಿನ ಹೇರ್ ಪಿನ್ನು ತೆಗೆದುಕೊಂಡು, ಟ್ರಂಕಿಗೆ ತಗಲಿಸಿದ್ದ ಬೀಗದೊಳಗೆ ಹಾಕಿ ತಿರುಗಿಸಿದೆ ನೋಡಿ. ಫಟಕ್ಕಂತ ಬೀಗ ಬಿಚ್ಚಿಕೊಂಡಿತು. ಸರಿ, ಅದನ್ನು ತೆಗೆದವನೇ, ಕೈ ಚೀಲದಲ್ಲಿದ್ದ ನಾಣ್ಯಗಳ ಪೈಕಿ ಒಂದು ರೂಪಾಯಿಯ ನಾಣ್ಯ ತೆಗೆದುಕೊಂಡೆ. ಇದೂ ಸ್ವಲ್ಪ ಕಾಲ ಮುಂದುವರಿಯಿತು. ಆದರೆ ಒಂದು ದಿನ ಆಕೆ ಒಬ್ಬಳೇ ಕುಳಿತು, ಅರೇ, ನೂರು ರೂಪಾಯಿ ಆಗಲಿ ಅಂತ ಹಣ ಹಾಕುತ್ತಲೇ ಇದ್ದೇನೆ. ಆದರೆ ಏನು ಮಾಡಿದರೂ ನೂರು ರೂಪಾಯಿ ಆಗುತ್ತಿಲ್ಲ. ದುಡ್ಡೇನಾಗುತ್ತಿದೆಯಪ್ಪಾ ದೇವರೇ? ಅಂತ ಗೊಣಗಿಕೊಳ್ಳುತ್ತಿದ್ದಳು.

ಅವತ್ತು ಆಕೆ ಗೊಣಗಿಕೊಳ್ಳುತ್ತಿದ್ದುದನ್ನು ನೋಡಿ ಜೀವ ಜಲ್ಲೆಂದು ಹೋಯಿತು. ಅಯ್ಯೋ, ಅಷ್ಟು ಕಷ್ಟಪಟ್ಟು ಆಕೆ ದುಡಿಯುತ್ತಿರುವುದೇ ನಮ್ಮ ಹೊಟ್ಟೆ ತುಂಬಿಸಲು. ಅಂತಹ ದುಡ್ಡನ್ನೇ ಕದಿಯುವ ಹೀನ ಕೆಲಸ ಮಾಡುತ್ತಿದ್ದೇನಲ್ಲ? ಎಂದುಕೊಂಡು ಗಳಗಳನೆ ಅತ್ತುಬಿಟ್ಟೆ. ನನ್ನ ಕಣ್ಣೀರು ನೋಡಿದ ಅಮ್ಮ, ಯಾಕೋ ಮಗಾ ಅಳುತ್ತಿದ್ದೀಯ? ಅಂದಳು. ನಾನು ನಿಜ ಹೇಳಿಬಿಟ್ಟೆ.

"ಅಮ್ಮಾ, ನಿನ್ನ ಟ್ರಂಕಿನ ಬೀಗಕ್ಕೆ ಹೇರ್ ಪಿನ್ ಹಾಕಿ ತಿರುವಿದರೆ ತೆರೆದುಕೊಳ್ಳುತ್ತದೆ. ಹೀಗೆ ಮಾಡಿ ಮಾಡಿಯೇ ಇಪ್ಪತ್ತರಿಂದ ಇಪ್ಪತ್ತೈದು ರೂಪಾಯಿಗಳಷ್ಟು ಹಣವನ್ನು ಕದ್ದು ಖರ್ಚು ಮಾಡಿದ್ದೇನೆ. ತಪ್ಪಾಯಿತಮ್ಮ" ಅಂತ ಬಿಕ್ಕಿದೆ. ಅಯ್ಯೋ, ಅದಕ್ಕೇಕೆ ಅಳುತ್ತೀಯ? ಸದ್ಯ ನೀನು ಕದ್ದಿರುವುದು ನಿಮ್ಮಮ್ಮ ದುಡಿದ ದುಡ್ಡನ್ನಲ್ಲವಾ? ನನ್ನ ಮಗ ಬೇರೆ ಯಾರದೋ ದುಡ್ಡು ಕದಿಯುತ್ತಿದ್ದಾನೆ ಅಂತ ಗೊತ್ತಾಗಿದ್ದರೆ ನಾನು ಮುಖ ಎತ್ತಿಕೊಂಡು ತಿರುಗುವುದೂ ಕಷ್ಟವಾಗುತ್ತಿತ್ತು. ಹೋಗಲಿ, ಬಿಡು ಎಂದಳು.

ಅಲ್ಲಿಗೆ ನನ್ನ ಕಳ್ಳತನದ ವೃತ್ತಿಯೂ ತನ್ನಿಂತಾನೇ ದೂರವಾಯಿತು. ಯಾವಾಗ ಅಮ್ಮ ಹಾಗೆ ಹೇಳಿದಳೋ? ಅದಾದ ನಂತರ ನಾನೂ ಆಕೆಯ ಜತೆ ಸೇರಿ ಬಳೆ ತೊಡಿಸುವ ಕೆಲಸ ಶುರು ಮಾಡಿದೆ. ಆಗೆಲ್ಲ ಬಳೆಯಲ್ಲಿ ಹಲವು ವೆರೈಟಿಗಳು. ಆಗಷ್ಟೇ ಸನಾದಿ ಅಪ್ಪಣ್ಣ ಪಿಕ್ಚರು ಬಂದಿತ್ತು. ಅದರ ಹೆಸರಿನಲ್ಲಿ ಒಂದು ಬಳೆ. ಇನ್ನೇನೋ ಹೆಸರಿನಲ್ಲಿ ಮತ್ತೊಂದು ಬಳೆ. ನಾನು ವಯಸ್ಸಿನಲ್ಲಿ ಸಣ್ಣವನಾದ್ದರಿಂದ ಹೆಣ್ಣು ಮಕ್ಕಳು ಕೂಡಾ ಯಾವುದೇ ಸಂಕೋಚವಿಲ್ಲದೆ ಕೈ ನೀಡಿ ಬಳೆ ತೊಡಿಸಿಕೊಳ್ಳುತ್ತಿದ್ದರು.

ಅಂದ ಹಾಗೆ ಯಾರಿಗಾದರೂ ಬಳೆ ತೊಡಿಸಬಹುದು. ಆದರೆ ದೀವರ ಹೆಣ್ಣು ಮಕ್ಕಳಿಗೆ ಬಳೆ ತೊಡಿಸುವಷ್ಟರಲ್ಲಿ ಬೆವರು ಇಳಿದು ಹೋಗುತ್ತಿತ್ತು. ಮೊದಲೇ ಶ್ರಮಜೀವಿಗಳು. ಹಾಲು ಮಾರುವುದರಿಂದ ಹಿಡಿದು ಅಬ್ಬಲಿಗೆ, ಸುರಿಗೆ ಹೂವು ಅಂತ ಮಾರುವ ತನಕ ಹಲವು ಕೆಲಸ ಮಾಡುತ್ತಿದ್ದ ಈ ಹೆಣ್ಣು ಮಕ್ಕಳು ಐದಾರು ಕಿಲೋಮೀಟರುಗಳಷ್ಟು ದೂರದಿಂದ ನಡೆದುಕೊಂಡು ಬರುತ್ತಿದ್ದರು. ವಿಪರೀತ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ಜನರಾದ್ದರಿಂದಲೋ ಏನೋ, ಅವರ ಕೈಗಳು ಒಳ್ಳೆ ಹತೋಡಾ ಇದ್ದಂತಿರುತ್ತಿದ್ದವು. ಹೀಗಾಗಿ ಅವರ ಕೈಗಳಿಗೆ ಬಳೆ ತೊಡಿಸಲು ಹೋದರೆ ಹತ್ತರಲ್ಲಿ ನಾಲ್ಕೈದು ಬಳೆಗಳು ಒಡೆದು ಶಿವನ ಪಾದ ಸೇರಿಬಿಡುತ್ತಿದ್ದವು.

ಹೀಗಾಗಿ ಅವರಿಗೆ ಬಳೆ ತೊಡಿಸುವುದು ಒಂದು ರೀತಿಯ ಕಲೆಯೇ ಆಗಿತ್ತು. ಮೊದಲು ಕೈಗೆ ವ್ಯಾಸಲೀನ್ ಹಚ್ಚಿ, ಆನಂತರ ಹಳದಿ ಬಣ್ಣದ ಮೇಲೆ, ಕೆಂಪು ಚುಕ್ಕೆಗಳನ್ನು ಹೊಂದಿರುವ ಬಳೆಗಳನ್ನು ಅವರ ಕೈಗೆ ತೊಡಿಸುವ ಕೆಲಸ ಮಾಡುತ್ತಿದ್ದೆವು. ವ್ಯಾಸಲೀನ್ ಮೂಲಕ ಅವರ ಹೆಬ್ಬೆರಳನ್ನು ಮೃದುಗೊಳಿಸದಿದ್ದರೆ ಬಳೆಗಳನ್ನು ಕೂರಿಸಲು ಸಾಧ್ಯವೇ ಆಗುತ್ತಿರಲಿಲ್ಲ.

ಹೀಗೆ ಬಳೆ ತೊಡಿಸುವ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಮ್ಮ ಹೇಳುತ್ತಿದ್ದುದು ಒಂದೇ ಮಾತು. ಮಗಾ, ಬದುಕಿಗಾಗಿ ಕಷ್ಟಪಟ್ಟು ಏನು ಬೇಕಾದರೂ ಮಾಡು. ಆದರೆ ತಪ್ಪಿ ಕೂಡಾ ಕಳ್ಳತನ ಮಾಡಬೇಡ, ಜೂಜಾಡಬೇಡ, ಮೋಸ ಮಾಡಬೇಡ. ನೀನು ಚರಂಡಿಯಲ್ಲಿ ಬಂಗಾರ ಹುಡುಕಿ ಮಾರಿದರೂ ನಾನು ಮಾತನಾಡುವುದಿಲ್ಲ. ಆದರೆ ಕಳ್ಳತನ ಮಾಡಿ ಬಂದೆ ಎಂದರೆ ಅದನ್ನು ತಡೆದುಕೊಳ್ಳುವ ಶಕ್ತಿ ನನಗಿಲ್ಲ.
ಹೀಗೆ ಅಮ್ಮ ಹೇಳಿದ ಮಾತುಗಳ ಪ್ರಭಾವ ಹೇಗಿತ್ತು ಎಂದರೆ, ದುಡ್ಡು ಬೇಕು ಎಂದರೆ ಕಷ್ಟಪಟ್ಟು ದುಡಿಯಬೇಕೇ ವಿನ: ಅಡ್ಡ ಮಾರ್ಗ ಹಿಡಿಯಬಾರದು ಅನ್ನುವ ಅಂಶ ತಲೆಯಲ್ಲಿ ಸ್ಥಿರವಾಗಿ ಹೋಯಿತು.

ಹೀಗಾಗಿಯೇ ಬೆಂಗಳೂರಿಗೆ ಇಷ್ಟು ವರ್ಷಗಳ ಪತ್ರಿಕೋದ್ಯಮದಲ್ಲಿ ಬರೋಬ್ಬರಿ ಹನ್ನೆರಡು ಮಂದಿ ಮುಖ್ಯಮಂತ್ರಿಗಳನ್ನು, ನೂರಾರು ಮಂದಿ ಮಂತ್ರಿಗಳನ್ನು ನೋಡಿದರೂ, ಒಟ್ಟಿಗೇ ಊಟ ಮಾಡಿ ಗಂಟೆಗಟ್ಟಲೆ ಮಾತುಕತೆ ನಡೆಸುವ ಅವಕಾಶ ಒದಗಿ ಬಂದರೂ, ಹಣಕ್ಕಾಗಿ ಪರ್ಯಾಯ ಮಾರ್ಗ ಹಿಡಿಯುವ ಅವಶ್ಯಕತೆ ಕಂಡುಬರಲೇ ಇಲ್ಲ. ದುಡ್ಡು ಬೇಕಾ? ಒಂದಲ್ಲ, ಹತ್ತು ಪೇಪರುಗಳಿಗೆ ಕೆಲಸ ಮಾಡಿದ್ದೇನೆ. ಜಾತಿ, ಮತ, ಪಂಥಗಳ ರಗಳೆಯೇ ಇಲ್ಲದೆ ಬದುಕಿದ್ದೇನೆ.

ಈ ರೀತಿ ವಸುದೈವ ಕುಟುಂಬಕಂ ಅನ್ನುವ ಪಾಠ ಕಲಿಸಿದವಳು ನನ್ನ ತಾಯಿ. ಬದುಕಿನಲ್ಲಿ ಇಷ್ಟೆಲ್ಲವನ್ನೂ ಗಳಿಸಲು ಕಾರಣವಾದವಳು ನನ್ನ ತಾಯಿ. ಹೀಗಾಗಿ ನನ್ನ ಕರುಳುಬಳ್ಳಿಯ ಎಲ್ಲ ಗಳಿಕೆಯ ಮೂಲವೇ ನನ್ನ ತಾಯಿ. ನನಗನ್ನಿಸುವ ಪ್ರಕಾರ, ಮನುಷ್ಯ ತನ್ನ ಬದುಕಿನಲ್ಲಿ ನೋಡುವ ನಿಜವಾದ ವಿಶ್ವಸುಂದರಿ ಅಮ್ಮನೇ.
ಆದ್ದರಿಂದಲೇ ಅಮ್ಮ ಅಂದ ಕೂಡಲೇ ನನ್ನ ಜೀವ ಕರಗುತ್ತದೆ.

ವಿನಾಯಕ ಜೋಷಿ ಅವರೇನೂ ತೀರಾ ದೂರದವರೇನಲ್ಲ. ಆದರೆ ನಾವು ಸಹೋದರರಂತಾಗಲು ಇಷ್ಟು ವರ್ಷ ಬೇಕಾಯಿತು. ಇವತ್ತಿನ ಅವರ ಚಡಪಡಿಕೆಯನ್ನು ಸಹಿಸಿಕೊಳ್ಳಲು ನನ್ನ ಕೈಲೇ ಸಾಧ್ಯವಾಗುತ್ತಿಲ್ಲ. ಅಂದ ಮೇಲೆ ಅವರಿನ್ನೆಷ್ಟು ಬಳಲಿರಬೇಕು? ಹೇಳಲು ನನ್ನಲ್ಲಿ ಪದಗಳೇ ಇಲ್ಲ. ಅಮ್ಮ ಅಂದರೆ ಹಾಗೆ.

ಅಂದ ಹಾಗೆ ಸಂತರ ಮನ:ಸ್ಥಿತಿಯಿರುವವರಿಗೆ ಶಬ್ದದೊಳಗಣ ನಿಶ್ಯಬ್ಧದಂತೆ ಎಂಬ ಪದವನ್ನು ಬಳಸುವ ರೂಢಿಯಿದೆ. ಆದರೆ ಅಮ್ಮ ಎಂದರೆ ನನಗೆ ನಿಶ್ಯಬ್ಧದೊಳಗಣ ಶಬ್ಧದಂತೆ. ಬೇಕಿದ್ದರೆ ನೀರವ ವಾತಾವರಣದಲ್ಲಿ, ಸದ್ದೇ ಇಲ್ಲದ ವಾತಾವರಣದಲ್ಲಿ ನಿಮ್ಮ ಕಿವಿಯನ್ನು ಅಗಲಿಸಿ. ಕ್ರಮೇಣ ನಿಮಗೆ ಅರಿವಾಗದಂತೆ ಒಂದು ರೀತಿಯ ಧ್ವನಿ ಬಂದು ನಿಮ್ಮನ್ನಾವರಿಸುತ್ತದೆ. ಅದು ಪ್ರಕೃತಿಯ ಸದ್ದು. ಮೌನದಲ್ಲಿ ಮಾತ್ರ ಆಲಿಸಲು ಸಾಧ್ಯವಾಗುವ ಸದ್ದು.

ಅದಕ್ಕೆ ಸೂಟಬಲ್ ಆಗುವ ಶಕ್ತಿ ಅಂತಿದ್ದರೆ ಅದು ಅಮ್ಮ ಮಾತ್ರ. ಯಾಕೆಂದರೆ ನಿಶ್ಯಬ್ಧದಲ್ಲೂ ಪ್ರೀತಿಯ ಸದ್ದು ಮಾಡುವ ಶಕ್ತಿ ಇರುವುದು ಅಮ್ಮನಿಗೆ ಮಾತ್ರ. ಅಂದ ಹಾಗೆ ಇವತ್ತು ಯಾಕೋ ಏನೋ, ತುಂಬ ಭಾವುಕವಾಗಿ ಮಾತನಾಡಿಬಿಟ್ಟೆ. ದಣಿವಾಗಿದ್ದರೆ ಕ್ಷಮಿಸಿ.

English summary
Only mother can make the sound of silence of love. Listen to that sound in silence, you will find the mother. No doubt mother is the most beautiful woman in the universe. Kannada journalist recalls the childhood memories, where his mother taught him some wonderful lessons. Happy Mothers Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X