• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಕ್ಕೆಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ: ಇತಿಹಾಸ, ಆಚರಣೆ ಮಹತ್ವ

By ಬಿ.ಎಂ.ಲವಕುಮಾರ್
|

ಸುಬ್ರಹ್ಮಣ್ಯ ಸ್ವಾಮಿಯನ್ನು ಎಲ್ಲೆಲ್ಲಿ ಪೂಜೆ ಮಾಡಲಾಗುತ್ತದೆಯೋ ಅಲ್ಲೆಲ್ಲ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದಕ್ಕೆ ಕಾರಣ ಇದೇ ತಿಂಗಳ 17ರಂದು ಆಚರಿಸಲಾಗುತ್ತಿರುವ ಚಂಪಾಷಷ್ಠಿ. ಸುಬ್ರಹ್ಮಣ್ಯ, ನಾಗ, ಸರ್ಪದೋಷ ಹೀಗೆ ಮಾತುಗಳು ಬಂದಾಗಲೆಲ್ಲ ನಮಗೆ ದಕ್ಷಿಣಕನ್ನಡದ ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರ ಕಣ್ಮುಂದೆ ಬರುತ್ತದೆ.

ಸುತ್ತಲೂ ಹಸಿರು ಹಚ್ಚಡವನ್ನೊದ್ದು ಮುಗಿಲೆತ್ತರಕ್ಕೇರಿ ನಿಂತ ಪರ್ವತಶ್ರೇಣಿಗಳು... ಅವುಗಳ ನಡುವಿನಲ್ಲಿ ತೂಗಿ ತೊನೆಯುವ ತೆಂಗು ಅಡಿಕೆ ತೋಟಗಳು... ಜುಳು ಜುಳು ನಿನಾದಗೈಯ್ಯುತ್ತಾ ಹರಿವ ಕುಮಾರಧಾರಾ ನದಿ... ದೇಗುಲದಿಂದ ಅಲೆಅಲೆಯಾಗಿ ಹೊರಹೊಮ್ಮುವ ಗಂಟೆಯ ನಿನಾದ... ಕಿವಿಗೆ ಅಪ್ಪಳಿಸುವ ಚಂಡೆಯ ಸದ್ದು... ಭಕ್ತಿ ಭಾವದಿಂದ ಸುಬ್ರಹ್ಮಣ್ಯನಿಗೆ ನಮಿಸುವ ಭಕ್ತರು... ಇದು ಸಪ್ತ ಮಹಾಕ್ಷೇತ್ರಗಳಲ್ಲೊಂದಾದ ಪರಶುರಾಮ ಸೃಷ್ಟಿಯ ನಾಗಪೂಜೆಯ ನಾಡು ಶ್ರೀ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾಣಸಿಗುವ ದಿನನಿತ್ಯದ ಸುಂದರ, ರಮಣೀಯ ದೃಶ್ಯಗಳು.[ಎಂಜಲೆಲೆಯ ಮೇಲೆ ಉರುಳಲು ಸಿದ್ಧ ಎನ್ನುತ್ತಿದ್ದಾರೆ ಮಲೆಕುಡಿಯರು]

ಪರಮಪವಿತ್ರ ಕ್ಷೇತ್ರ, ಪ್ರವಾಸಿ ತಾಣವೂ ಆಗಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿಗೆ ಸೇರಿದೆ. ಕೊಡಗು, ಹಾಸನ ಜಿಲ್ಲೆಗಳಿಗೆ ಹೊಂದಿಕೊಂಡಂತಿರುವ ಈ ಕ್ಷೇತ್ರದ ಪೂರ್ವಕ್ಕೆ ಸಹ್ಯಾದ್ರಿ ಶ್ರೇಣಿಯ ಕುಮಾರ ಪರ್ವತ, ಶೇಷ ಪರ್ವತ ಹಾಗೂ ಸಿದ್ದ ಪರ್ವತಗಳಿದ್ದು, ದಟ್ಟ ಕಾಡನ್ನು ಹೊಂದಿ ತನ್ನದೇ ಆದ ನಿಸರ್ಗ ರಮಣೀಯತೆಯಿಂದ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಇದೀಗ ನಡೆಯಲಿರುವ ಚಂಪಾಷ್ಠಿಗೆ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.

ಚಂಪಾಷಷ್ಠಿಯನ್ನು ಮಾರ್ಗಶಿರ ಮಾಸದಲ್ಲಿ ಆಚರಿಸಲಾಗುತ್ತದೆ. ಇದನ್ನು ಸುಬ್ಬರಾಯನ ಷಷ್ಠಿ ಎಂದು ಕೂಡ ಕರೆಯಲಾಗುತ್ತದೆ. ಪ್ರಸಕ್ತ ವರ್ಷ ಡಿಸೆಂಬರ್ 17ರಂದು ಷಷ್ಠಿಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭ ಇಲ್ಲಿ ಮಹಾರಥೋತ್ಸವವು ನಡೆಯುತ್ತದೆ.

ಸಾಮಾನ್ಯವಾಗಿ ಚಂಪಾಷಷ್ಠಿಯಂದು ಎಲ್ಲಿ ಸುಬ್ರಹ್ಮಣ್ಯ ದೇಗುಲವಿದೆಯೋ ಅಲ್ಲೆಲ್ಲಾ ವಿಶೇಷ ಪೂಜೆಗಳು ನಡೆಯುತ್ತವೆ. ಅಷ್ಟೇ ಅಲ್ಲ ಅಶ್ವತ್ಥ ಕಟ್ಟೆಯಲ್ಲಿ ಸರ್ಪಾಕಾರದ ವಿಗ್ರಹವನ್ನಿಟ್ಟು ಸುಬ್ರಹ್ಮಣ್ಯ ಸ್ವಾಮಿಯನ್ನು ಆವಾಹನೆ ಮಾಡಿ ಹಾಲೆರೆದು ಅಭಿಷೇಕ ಮಾಡಿ ಪಾಯಸದ ನೈವೇದ್ಯ ಅರ್ಪಿಸಿ ಅಂದು ಉಪವಾಸ ವೃತವನ್ನು ಆಚರಿಸಲಾಗುತ್ತದೆ.[ಕುಕ್ಕೆ ಕ್ಷೇತ್ರ ಸುತ್ತಿಕೊಂಡು ಬನ್ನಿ]

ಹಾಗೆ ನೋಡಿದರೆ ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರವು ನಾಗಪೂಜೆಗೆ ಹೆಸರುವಾಸಿಯಾಗಿದೆ. ವಲ್ಮೀಖ ಅರ್ಥಾತ್ ಹುತ್ತ ಇಲ್ಲಿನ ಆರಾಧ್ಯ ದೈವ. ಅಲ್ಲಿಂದ ತೆಗೆದ ಮಣ್ಣು ಪ್ರಸಾದವಾಗಿದೆ. ಸರ್ಪದೋಷಕ್ಕೊಳಗಾದವರು ಇಲ್ಲಿ ಸರ್ಪ ಸಂಸ್ಕಾರ ಮಾಡಿ ತಮ್ಮ ಪಾಪ ಕಳೆದು ಕೊಳ್ಳುತ್ತಾರೆ.

ಸುಬ್ರಹ್ಮಣ್ಯ ದೇವಾಲಯವು ಸುಮಾರು ಎಂಟನೆಯ ಶತಮಾನದ್ದು ಎನ್ನಲಾಗಿದೆ. ಇಲ್ಲಿ ನರಸಿಂಹ, ಉಮಾಮಹೇಶ್ವರ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆಯಾದರೂ ಸುಬ್ರಹ್ಮಣ್ಯನೇ ಆದಿದೈವನಾಗಿದ್ದಾನೆ.

ಹಿಂದೆ ಸುಬ್ರಹ್ಮಣ್ಯವು ಬಲ್ಲಾಳರಾಜನ ರಾಜಧಾನಿಯಾಗಿತ್ತು ಎನ್ನಲಾಗಿದೆ. ಇಲ್ಲಿನ ದೇವಾಲಯದಲ್ಲಿರುವ ಮೂರ್ತಿ ಬಲ್ಲಾಳ ಅರಸರದ್ದಾಗಿದೆ. ಇತಿಹಾಸದ ಪ್ರಕಾರ ದಕ್ಷಿಣಕನ್ನಡ ಜಿಲ್ಲೆಯನ್ನು ಹನ್ನೊಂದನೇ ಶತಮಾನದಲ್ಲಿ ಹೊಯ್ಸಳ ಬಲ್ಲಾಳ ಅರಸರು ಆಳುತ್ತಿದ್ದರೆನ್ನಲಾಗಿದೆ. ಆದರೆ ಇಕ್ಕೇರಿ ಅರಸರು ಆಳ್ವಿಕೆ ನಡೆಸಲು ಆರಂಭಿಸಿದ ಬಳಿಕ ಕೆಲವೊಂದು ಗ್ರಾಮಗಳಲ್ಲಿ ಮಾತ್ರ ಬಲ್ಲಾಳ ಅರಸರ ಆಳ್ವಿಕೆ ನಡೆಯುತ್ತಿತ್ತು. ಆ ಸಂದರ್ಭ ಸುಬ್ರಹ್ಮಣ್ಯವೂ ಅವರ ಆಳ್ವಿಕೆಗೆ ಒಳಪಟ್ಟಿತ್ತು ಎನ್ನಲಾಗುತ್ತಿದೆ.

ಈ ದೇಗುಲದಲ್ಲಿ ಪ್ರತಿಷ್ಠಾಪಿತವಾಗಿರುವ ಬಲ್ಲಾಳ ಅರಸರ ಮೂರ್ತಿಯ ಹಿಂದೆ ದಂತಕಥೆಯೊಂದು ಇರುವುದನ್ನು ನಾವು ಕಾಣಬಹುದು. ಅದೇನೆಂದರೆ ವೇದವ್ಯಾಸ ಸಂಪುಟದ ವಿಗ್ರಹವನ್ನು ಯಾರಿಂದಲೂ ಭಗ್ನಗೊಳಿಸುವುದು ಅಸಾಧ್ಯ ನಂಬಿಕೆ ಹರಡಿತ್ತು. ಇದನ್ನು ಪರೀಕ್ಷಿಸಿ ನೋಡಿಯೇ ಬಿಡೋಣ ಎಂಬ ತೀರ್ಮಾನಕ್ಕೆ ಬಂದ ಅರಸ ಆನೆಯ ಮೂಲಕ ಮುರಿಯಲು ಮುಂದಾದನು. ಈ ಸಂದರ್ಭ ಅರಸನಿಗೆ ಇದ್ದಕ್ಕಿಂದತೆಯೇ ಮೈಮೇಲೆ ಉರಿಬಾಧೆ ಕಾಣಿಸಿಕೊಂಡಿತು.

ತಕ್ಷಣ ಅವನಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿದನೆಂದೂ ಈ ಸಂದರ್ಭ ಸುಬ್ರಹ್ಮಣ್ಯ ಸ್ವಾಮಿ ಅರಸನ ಪ್ರತಿಮೆಯನ್ನು ದೇವಾಲಯದ ಮುಖ್ಯದ್ವಾರದಲ್ಲಿಡಲು ಆದೇಶಿಸಿದನೆಂದೂ ಅದರಂತೆ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಲಾಗಿದೆ. ಇಂದಿಗೂ ಕೂಡ ಚಂಪಾಷಷ್ಠಿಯ ದಿನದಂದು ಸುಬ್ರಹ್ಮಣ್ಯಸ್ವಾಮಿಯ ಉತ್ಸವ ಮೂರ್ತಿಯನ್ನು ಹೊರಗೆ ಮೆರವಣಿಗೆಯಲ್ಲಿ ತಂದಾಗ ಮೊದಲು ಬಲ್ಲಾಳರಸರ ಪ್ರತಿಮೆಗೆ ಪೂಜೆ ಸಲ್ಲಿಸಿದ ಬಳಿಕ ಮುಂದಿನ ಕೈಂಕರ್ಯಗಳು ನಡೆಯುತ್ತದೆ.

ಕುಮಾರಸ್ವಾಮಿಯು ದೇವಸೇನೆಯೊಂದಿಗೆ ಮತ್ತು ಭಕ್ತ ವಾಸುಕಿಯೊಂದಿಗೆ ಇಲ್ಲಿ ನೆಲೆಸಿದ್ದರಿಂದ ಪುತ್ರನ ಮೇಲಿನ ವಾತ್ಸಲ್ಯದಿಂದ ಶಿವಪಾರ್ವತಿಯರು ಕುಕ್ಕೆಲಿಂಗ ರೂಪದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆಯಿದೆ. ಕುಮಾರಸ್ವಾಮಿಯು ನಾಲ್ಕು ಪುರುಷಾರ್ಥಗಳನ್ನು ಅನುಗ್ರಹಿಸಬಲ್ಲ ದೇವತೆಯಾಗಿದ್ದು, ಬ್ರಹ್ಮಜ್ಞಾನ, ಆಯಸ್ಸು, ಆರೋಗ್ಯ, ಉಪಸ್ಮಾರ, ಕುಷ್ಠಾದಿ ಮಹಾರೊಗಗಳ ಪರಿಹಾರ, ಭೂತ ಪೀಡೆ ಪರಿಹಾರ, ಸಂತಾನ ಸೌಭಾಗ್ಯ, ಪುಷ್ಠಿ, ತುಷ್ಠಿ, ಕೀರ್ತಿ, ಶತ್ರುಜಯವನ್ನು ವಿಶೇಷವಾಗಿ ಕರುಣಿಸುತ್ತಿದ್ದಾನೆ. ಸುಬ್ರಹ್ಮಣ್ಯನಿಗೆ ಸ್ಕಂದ, ಕಾರ್ತಿಕೇಯ, ಷಣ್ಮುಖ, ಕುಮಾರಸ್ವಾಮಿ ಎಂಬ ನಾಮಗಳಿವೆ.

ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯನನ್ನು ನಾಗ(ಸರ್ಪ) ರೂಪದಲ್ಲಿ ಪೂಜಿಸಲಾಗುತ್ತಿದೆ. ಸರ್ಪದೋಷದಿಂದ ಬಳಲುವವರು ಇಲ್ಲಿ ಎರಡು ದಿನಗಳ ಕಾಲ ತಂಗಿ ಸೇವೆ ಕೈಗೊಂಡರೆ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆಯೂ ಇದೆ. ಹಾಗಾಗಿಯೇ ನಾಗಪೂಜೆಯ ನಾಡಾಗಿ ಪ್ರಸಿದ್ಧಿ ಹೊಂದಿದೆ.

ಇಲ್ಲಿನ ನಾಗಮಂಟಪದಲ್ಲಿ ಶಿಲಾ ನಾಗನ ಪ್ರತಿಷ್ಠೆ, ಆಶ್ಲೇಷ ಬಲಿ ಹೀಗೆ ವಿವಿಧ ಸೇವೆಗಳು ಕೂಡ ನಡೆಯುತ್ತವೆ. ಷಷ್ಠಿ ದಿನದಂದು ಬ್ರಹ್ಮರಥ, ಪಂಚಮಿ ತೇರು, ಚಂದ್ರಮಂಡಲ, ಹೂವಿನ ತೇರುಗಳನ್ನು ಎಳೆಯಲಾಗುತ್ತದೆ. ಇಲ್ಲಿರುವ ಬ್ರಹತ್ ಆಕಾರದ ರಥ ಸುಮಾರು ಒಂದೂವರೆ ಶತಮಾನಗಳ ಹಿಂದಿನದು ಎಂದು ಹೇಳಲಾಗಿದೆ.

ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು, ಮುಖ್ಯ ದ್ವಾರದ ಎದುರಿಗೆ ಸುಬ್ರಹ್ಮಣ್ಯ ಸ್ವಾಮಿಯ ಗರ್ಭಗುಡಿಯಿದೆ. ಈ ಗರ್ಭಗೃಹ ಮತ್ತು ನೂತನವಾಗಿ ಕಟ್ಟಲ್ಪಟ್ಟ ಮುಖಮಂಟಪದ ಮಧ್ಯದಲ್ಲಿ ಗರುಡ ಕಂಬವಿದೆ. ಈ ಗರುಡ ಕಂಬವನ್ನು ಗರುಡ ಮಂತ್ರವನ್ನು ಮಂತ್ರಿಸಿ ವಾಸುಕಿಯ ಉಸಿರಾಟದ ವಿಷಬಾಧೆ ತಟ್ಟಬಾರದೆಂಬ ಉದ್ದೇಶದಿಂದ ನಿರ್ಮಿಸಿರುವುದಾಗಿ ಹೇಳಲಾಗಿದೆ.

ಇನ್ನು ದೇವಾಲಯದಿಂದ ಉತ್ತರ ಭಾಗಕ್ಕೆ ತೆರಳಿದರೆ ಇಲ್ಲಿ ನಾವು ಹಲವು ಲಿಂಗಗಳನ್ನು ಕಾಣಬಹುದು. ಈ ಲಿಂಗಗಳನ್ನು ಕುಕ್ಕೆಯಲ್ಲಿಟ್ಟು ಪೂಜಿಸುತ್ತಿದ್ದುದರಿಂದ ಕುಕ್ಕೆಲಿಂಗ ಎಂದು ಕೂಡ ಕರೆಯಲಾಗುತ್ತಿದೆ.

ದೇವಸ್ಥಾನದಿಂದ ಅನತಿ ದೂರದಲ್ಲಿ ಆದಿಸುಬ್ರಹ್ಮಣ್ಯನ ದೇವಾಲಯವಿದೆ. ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿದವರು ಇಲ್ಲಿಗೆ ತೆರಳಿ ದರ್ಶನ ಮಾಡದೆ ಮರಳುವಂತಿಲ್ಲ. ಇಲ್ಲೊಂದು ಬೃಹತ್ ವಲ್ಮಿಕ(ಹುತ್ತ) ಇದ್ದು, ಅಲ್ಲಿಂದ ತೆಗೆದ ಮಣ್ಣನ್ನು ಪ್ರಸಾದವಾಗಿ ನೀಡಲಾಗುತ್ತದೆ.

ಸುಬ್ರಹ್ಮಣ್ಯ ದೇವಾಲಯದ ಸುತ್ತ ಹಲವು ದೇವಾಲಯಗಳನ್ನು ನಾವು ಕಾಣಬಹುದಾಗಿದೆ. ಇಲ್ಲಿ ಭೈರದೇವರ ದೇವಾಲಯವಿದ್ದು, ಇದನ್ನು ಕಪಾಲೇಶ್ವರ ದೇವಾಲಯ ಎಂದು ಕೂಡ ಕರೆಯಲಾಗುತ್ತದೆ. ಸುಬ್ರಹ್ಮಣ್ಯ ದೇವಾಲಯದ ಗರ್ಭಗೃಹದ ಈಶಾನ್ಯಕ್ಕೆ ಉಮಾಮಹೇಶ್ವರ ದೇವಾಲಯವಿದ್ದು, ಇಲ್ಲಿನ ಆರಾಧ್ಯ ದೈವ ಉಮಾಮಹೇಶ್ವರನಾದರೂ ಸೂರ್ಯ, ಅಂಬಿಕಾ, ವಿಷ್ಣು, ಗಣನಾಥ ದೇವರ ಮೂರ್ತಿಗಳು ಇಲ್ಲಿವೆ. ಇವುಗಳೆಲ್ಲವೂ ಪ್ರಾಚೀನ ಕಾಲದ ಮೂರ್ತಿಗಳಾಗಿವೆ. ಗರ್ಭಗೃಹದ ಆಗ್ನೇಯ ದಿಕ್ಕಿಗೆ ವೇದವ್ಯಾಸ ಸಂಪುಟ ನರಸಿಂಹ ದೇವರ ದೇವಾಲಯವಿದೆ. ಸುಬ್ರಹ್ಮಣ್ಯ ದೇವಾಲಯದ ದಕ್ಷಿಣಕ್ಕೆ ಹೊಸಳ್ಳಿಗಮ್ಮನ ದೇವಾಲಯವಿದ್ದು, ಹೊಸಳ್ಳಿಗಮ್ಮ ಹಾಗೂ ಪುರುಷರಾಯ ಆರಾಧ್ಯದೈವರಾಗಿದ್ದಾರೆ.

ದೇವಾಲಯದ ಹೊರಪ್ರಕಾರದ ಈಶಾನ್ಯ ದಿಕ್ಕಿಗೆ ಶೃಂಗೇರಿ ಮಠವಿದ್ದು, ಇಲ್ಲಿ ಚಂದ್ರಮೌಳೇಶ್ವರ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಮಹಾದ್ವಾರದ ಎದುರಿಗೆ ಕಂಡುಬರುವ ಚಿಕ್ಕ ಹೊಳೆಯನ್ನು ದರ್ಪಣತೀರ್ಥ ಎಂದು ಕರೆಯಲಾಗುತ್ತದೆ. ಇದು ಉತ್ತರದಿಂದ ದಕ್ಷಿಣಕ್ಕೆ ಸುಮಾರು ಒಂದು ಮೈಲಿಗೂ ಹೆಚ್ಚು ದೂರ ಹರಿದು ಮತ್ಸ್ಯ ತೀರ್ಥವನ್ನು ಸೇರುತ್ತದೆ.

ಕುಕ್ಕೆ ಸುಬ್ರಮಣ್ಯಕ್ಕೆ ಮಾರ್ಗಸೂಚಿ

ಸುಬ್ರಹ್ಮಣ್ಯ ದೇವಾಲಯದಿಂದ ಕೆಲವೇ ದೂರದಲ್ಲಿ ಕಾಶಿಕಟ್ಟೆಯಿದ್ದು, ಇಲ್ಲಿ ಆಂಜನೇಯ ಹಾಗೂ ಗಣಪತಿ ದೇವರುಗಳ ದೇವಾಲಯ ಹಾಗೂ ಬೃಹತ್ ಅಶ್ವತ್ಥ ಕಟ್ಟೆಯನ್ನೂ ಕಾಣಬಹುದು. ತೇರು ಬೀದಿಯ ಉತ್ತರಕ್ಕೆ ದ್ವೈತ ಸಂಪ್ರದಾಯದ ಉತ್ತರಾದಿಮಠವಿದ್ದು, ಇಲ್ಲಿ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ದೇವಾಲಯದಿಂದ ಕುಮಾರಧಾರಾ ನದಿಯತ್ತ ಸಾಗುವಾಗ ದಾರಿ ಮಧ್ಯೆ ಕಂಡು ಬರುವ ಬಿಲದ್ವಾರ ಪವಿತ್ರಕ್ಷೇತ್ರವಾಗಿದ್ದು, ಇದೊಂದು ಗುಹೆಯಾಗಿದ್ದು, ಇದಕ್ಕೆ ಎರಡು ದಾರಿಗಳಿವೆ. ಒಂದು ದಕ್ಷಿಣಕ್ಕೆ, ಮತ್ತೊಂದು ಉತ್ತರಕ್ಕೆ ಸಾಗುತ್ತದೆ. ಕಾರ್ತಿಕದಿಂದ ಜೇಷ್ಠಮಾಸದವರೆಗೆ ಯಾತ್ರಿಕರು ಇಲ್ಲಿಗೆ ಭೇಟಿ ನೀಡಬಹುದಾಗಿದೆ. ಪುರಾಣದ ಪ್ರಕಾರ ಗರುಡ ನೀಡುತ್ತಿದ್ದ ತೊಂದರೆಯಿಂದ ತಪ್ಪಿಸಿಕೊಳ್ಳಲು ವಾಸುಕಿ ಈ ಗುಹೆಯಲ್ಲಿ ಆಶ್ರಯ ಪಡೆದಿದ್ದನೆಂದು ಹೇಳಲಾಗಿದೆ.

ಸುಬ್ರಹ್ಮಣ್ಯ ಕೇತ್ರದಲ್ಲಿ ಹರಿಯುವ ಕುಮಾರಧಾರಾ ನದಿ ಪವಿತ್ರವಾಗಿದ್ದು, ಇದು ಭೂಮಿಯ ಒಡಲಾಳದಿಂದ ಉಕ್ಕಿಹರಿದ ಎಲ್ಲಾ ತೀರ್ಥಗಳ ಸಾರವನ್ನು ಹೊಂದಿದೆ ಎಂದು ನಂಬಲಾಗಿದೆ. ಇದನ್ನು ಹಿಂದೆ ಮಹೀನದಿ ಎಂದು ಕರೆಯಲಾಗುತ್ತಿತ್ತಂತೆ ಕಾಲಾಂತರದಲ್ಲಿ ಈ ನದಿಯ ನೀರನ್ನು ಕುಮಾರಸ್ವಾಮಿ(ಸುಬ್ರಹ್ಮಣ್ಯ)ಯ ಪೂಜೆಯ ಅಭಿಷೇಕಕ್ಕೆ ಉಪಯೋಗಿಸಲು ಆರಂಭಿಸಿದ ಬಳಿಕ ಕುಮಾರಧಾರಾ ಎಂಬ ಹೆಸರು ಬಂತೆಂದು ಹೇಳಲಾಗುತ್ತಿದೆ. ಈ ನದಿಯಲ್ಲಿ ಸ್ನಾನ ಮಾಡಿದರೆ ಚರ್ಮರೋಗಗಳು ವಾಸಿಯಾಗುವುದಾಗಿ ನಂಬಿಕೆಯಿದೆ.

ಇನ್ನು ಸುಬ್ರಹ್ಮಣ್ಯಕ್ಕೆ ಭೇಟಿ ನೀಡುವವರು ಚಾರಣ ಮಾಡಲು ಬಯಸಿದರೆ ಸುಮಾರು ಹನ್ನೆರಡು ಮೈಲಿ ದೂರದಲ್ಲಿರುವ, ಸಮುದ್ರ ಮಟ್ಟದಿಂದ 4000 ಅಡಿ ಎತ್ತರದಲ್ಲಿರುವ ಕುಮಾರಪರ್ವತವನ್ನು ಏರಬಹುದಾಗಿದೆ. ಅಲ್ಲದೆ ನಿಸರ್ಗ ರಮಣೀಯ ವೀಕ್ಷಣಾ ತಾಣವಾದ ಬಿಸಿಲೆ ಘಾಟಿಗೂ ತೆರಳಬಹುದಾಗಿದೆ. ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಎಲ್ಲ ಕಡೆಗಳಿಂದಲೂ ಬಸ್ ಸಂಪರ್ಕವಲ್ಲದೆ, ರೈಲು ಸಂಪರ್ಕವೂ ಇರುವುದರಿಂದ ಭಕ್ತರಿಗೆ ಅನುಕೂಲವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The renowned Holy place Kukke Subramanya temple cellabarating Champa Shasti on December 18. What is the history and importance Champa Shasti here is full details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more