ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತಿಯ ಆಯುಷ್ಯವೃದ್ಧಿಗಾಗಿ ಇಂದು ಭೀಮನ ಅಮಾವಾಸ್ಯೆ ವ್ರತ: ಹಿನ್ನೆಲೆ ಏನು?

By ಪಂಡಿತ್ ವಿಠ್ಠಲ ಭಟ್
|
Google Oneindia Kannada News

ವ್ರತಕ್ಕೆ ಭೀಮನಮವಾಸ್ಯೆ ವ್ರತ, ಭೀಮೇಶ್ವರ ವ್ರತ, ಜ್ಯೋತಿರ್ಭೀಮೇಶ್ವರ ವ್ರತ ಎಂದು ಅನೇಕ ಹೆಸರಗಳಿವೆ. ಈ ಹಬ್ಬವನ್ನು ಇಂದು(ಆ.11) ಕರ್ನಾಟಕದಾದ್ಯಂತ ಶ್ರದ್ಧೆ-ಭಕ್ತಿಯಿಂದ ಆಚರಿಸಲಾಗುತ್ತಿದೆ.

ಕನ್ಯೆಯರು ತಮಗೆ ಉತ್ತಮವಾದ ಸಕಲಗುಣಸಂಪನ್ನನಾದ ದೀರ್ಘಾಯಸ್ಸಿರುವ ಯೋಗ್ಯ ಪತಿ, ಸುಖೀ ದಾಂಪತ್ಯ ಪ್ರಾಪ್ತಿಗೆ, ಸುಮಂಗಲಿಯರು ತಮ್ಮ ಮಾಂಗಲ್ಯ ಭಾಗ್ಯ ಶಾಶ್ವತವಾಗಿರಲಿ, ಪತಿಗೆ ದೀರ್ಘಾಯಸ್ಸು, ಸುಖ, ಸಂಪತ್ಸಮೃದ್ಧಿ ವೃದ್ಧಿಸುತ್ತಿರಲಿ ಎಂದು ಶ್ರದ್ಧಾ ಭಕ್ತಿಯಿಂದ ಈ ವ್ರತವನ್ನಾಚರಿಸುತ್ತಾರೆ.

ಆ.11 ರಂದು ಭೀಮನ ಅಮಾವಾಸ್ಯೆ ವ್ರತ: ಏಕೆ? ಹೇಗೆ?ಆ.11 ರಂದು ಭೀಮನ ಅಮಾವಾಸ್ಯೆ ವ್ರತ: ಏಕೆ? ಹೇಗೆ?

ಪತಿವ್ರತೆ ಸಾವಿತ್ರಿಯು ಈ ವ್ರತವನ್ನಾಚರಿಸಿ ನಿಧನನಾಗಿದ್ದ ಪತಿ ಸತ್ಯವಾನನನ್ನು ಶಿವನ ಕೃಪೆಯಿಂದ ಬದುಕಿಸಿಕೊಂಡಳು. ಈಶ್ವರನು ಕೈಲಾಸದಲ್ಲಿ ಮೊದಲು ಸನತ್ಕುಮಾರರಿಗೆ ಇದನ್ನು ಉಪದೇಶಿಸಿ, ಅವರು ಭೂಲೋಕದ ತಪಸ್ವಿಗಳ ಪತ್ನಿಯರಿಗೆ ತಿಳಿಸಿ,ಅವರ ಮೂಲಕ ಎಲ್ಲೆಡೆ ವ್ಯಾಪಿಸಿತು. ಜ್ಯೋತಿರ್ಭೀಮೇಶ್ವರ ವ್ರತವನ್ನು ಮೊಟ್ಟ ಮೊದಲು ಕೃತಯುಗದಲ್ಲಿ ಮೃಕಂಡ ಮುನಿಯ ಪತ್ನಿ ಸೌಮಿತ್ರೆ, ತ್ರೇತಾಯುಗದಲ್ಲಿ ಅತ್ರಿ ಮಹರ್ಷಿಯ ಪತ್ನಿ ಅನಸೂಯಾ, ದ್ವಾಪರದಲ್ಲಿ ಶ್ರೀಕೃಷ್ಣನ ಪತ್ನಿ ರುಕ್ಮಿಣಿ, ಕಲಿಯುಗದಲ್ಲಿ ರತ್ನವೇಣಿ ಮಾಡಿದ್ದರು.

ವ್ರತ ಮಾಡುವ ಕ್ರಮ

ವ್ರತ ಮಾಡುವ ಕ್ರಮ

ಆಷಾಢ ಅಮವಾಸ್ಯೆಯಂದು, ಗೋಧೂಳಿ ಸಮಯವಾದ ಸಂಜೆಯಲ್ಲಿ, ಅಕ್ಕಿಯ ಮೇಲಿಟ್ಟ ಜೋಡಿ ಕಲಶಗಳ ಬಲಕ್ಕೆ ತುಪ್ಪದ, ಎಡಕ್ಕೆ ಎಣ್ಣೆಯ ದೀಪವನ್ನು ಹಚ್ಚಿಟ್ಟು, ಅರಿಶಿನದ ನೀರಿನಲ್ಲಿ ನೆನಸಿದ ಹಸಿದಾರಕ್ಕೆ 16 ಗಂಟು, ಹಾಕಿ ವಿಳ್ಯದೆಲೆ ಅಡಿಕೆಯೊಂದಿಗೆ ಕಲಶದ ಅಕ್ಕಿಯ ಮೇಲಿಟ್ಟು ಈಶ್ವರನ ಸ್ವರೂಪವಾದ ಭೀಮೇಶ್ವರನನ್ನು ಕಲಶ ಮತ್ತು ದೀಪಕ್ಕೆ ಆವಾಹನೆ ಮಾಡಿ, ಅರ್ಘ್ಯಪಾದ್ಯಾದಿ ಷೋಡಶೋಪಚಾರ, ಅಂಗಪೂಜೆ, ಪತ್ರ, ಪುಷ್ಪಗಳಿಂದ ಪೂಜೆ, 108 ನಾಮ ಪೂಜೆ ಮಾಡಿ, ದಾರದ ಗ್ರಂಥಿ (ಗಂಟು)ಗಳನ್ನೂ ಪೂಜಿಸಿ ನಂತರ ಧೂಪ, ದೀಪಾರತಿ ಮಾಡಿ, ಕಡುಬು, ಚಕ್ಕುಲಿ, ಪಾಯಸಾದಿ ಪಂಚಭಕ್ಷ್ಯಗಳು, ವಿಧವಿಧವಾದ ಫಲಗಳನ್ನು, ತಾಂಬೂಲ ಸಹಿತ ನೇವೇದ್ಯ ಮಾಡಿ, ಮಂಗಳಾರತಿ ನೆರವೇರಿಸಿ, ದಾರವನ್ನು

ಮೃತ್ಯುಂಜಯ ನಮಸ್ತುಭ್ಯಂ,
ತವಮೇ ಸೂತ್ರಧಾರಣಂ |

ಸೌಭಾಗ್ಯಂ ಧನ ಧಾನ್ಯಂಚ
ಪ್ರಜಾವೃದ್ಧಿಂ ಸದಾಕುರು ||

ಎಂದು ಪ್ರಾರ್ಥಿಸಿ, ದಾರವನ್ನು ಆಚಾರ್ಯನಿಂದ ಬಲಗೈಗೆ ಕಟ್ಟಿಸಿಕೊಂಡು ವ್ರತದ ಕಥೆಯನ್ನು ಕೈಯಲ್ಲಿ ತೆಂಗಿನಕಾಯಿ, ಅಥವಾ ಯಾವುದಾದರೂ ಹಣ್ಣನ್ನು ಹಿಡಿದುಕೊಂಡು ಕೇಳಿ, ನಂತರ ಕೈಯಲ್ಲಿದ್ದ ಫಲವನ್ನು ದಕ್ಷಿಣೆಯೊಂದಿಗೆ ಪುರೋಹಿತರಿಗೆ ದಾನ ಕೊಡಬೇಕು.

ವ್ರತ ಮುಗಿದ ನಂತರ ಪುರೋಹಿತರಿಗೆ ಉಪಾಯನ ದಾನವನ್ನು, ಕೊಡಬೇಕು.

ಭೀಮನ ಅಮಾವಾಸ್ಯೆ ವ್ರತ ಆಚರಣೆ ಸಂಪೂರ್ಣ ವಿಧಾನಭೀಮನ ಅಮಾವಾಸ್ಯೆ ವ್ರತ ಆಚರಣೆ ಸಂಪೂರ್ಣ ವಿಧಾನ

ವ್ರತದ ಕಥೆ

ವ್ರತದ ಕಥೆ

ಪೂರ್ವದಲ್ಲಿ ನೈಮಿಷಾರಣ್ಯದಲ್ಲಿದ್ದ ಶೌನಕಾದಿ ಋಷಿಗಳು, ಸಕಲಶಾಸ್ತ್ರ ಪಾರಂಗತರಾದ ಸೂತಪುರಾಣಿಕರನ್ನು "ಸ್ತ್ರೀಯರಿಗೆ ಯೋಗ್ಯ ಪತಿ ಪ್ರಾಪ್ತಿಗೆ,
ದೀರ್ಘಸೌಮಂಗಲ್ಯತ್ವಕ್ಕೆ, ಸುಖೀದಾಂಪತ್ಯಕ್ಕಾಗಿ ಆಚರಿಸಬಹುದಾದ ಉತ್ತಮ ವ್ರತ" ಒಂದನ್ನು ಹೇಳಬೇಕೆಂದು ಪ್ರಾರ್ಥಿಸಿದಾಗ ಸೂತಪುರಾಣಿಕರು ಅವರಿಗೆ ಆಷಾಢ ಅಮವಾಸ್ಯೆಯ ಭೀಮೇಶ್ವರ ವ್ರತವು ಬಹಳ ಪುಣ್ಯದಾಯಕ ಎಂದು ಆ ವ್ರತ ಮಹಾತ್ಮ್ಯೆಯನ್ನು ಹೇಳಿದರು.

ಬಹಳ ಹಿಂದೆ ಸೌರಾಷ್ಟ್ರ ದೇಶದಲ್ಲಿ ವಜ್ರಬಾಹುವೆಂಬ ಮಹಾಪರಾಕ್ರಮಿಯಾದ ರಾಜನಿಗೆ, ಜಯಶೇಖರ ಎಂಬ ಸುಂದರನೂ, ಸರ್ವಗುಣಸಂಪನ್ನನಾದ ಮಗನಿದ್ದನು.ಆದರೆ ಅವನು ವಿಧಿವಶದಿಂದ ಅಕಾಲಮರಣಕ್ಕೀಡಾದನು. ವಜ್ರಬಾಹುವಿಗೆ ಪುತ್ರಶೋಕ ಬಲವಾಗಿ, ತನಗೂ, ತನ್ನ ಪಿತೃಗಳಿಗೂ ತಿಲೋದಕ ಕೊಡುವವರೇ ಇಲ್ಲದಂತಾಯಿತಲ್ಲ ಎಂದು ದುಃಖಿಸುತ್ತ ಕೊನೆಗೊಂದು ನಿರ್ಧಾರಕ್ಕೆ ಬಂದು, "ನನ್ನ ಮಗನ ಈ ಶವಕ್ಕೆ ಯಾರು ತನ್ನ ಮಗಳನ್ನು ಮದುವೆ ಮಾಡಿಕೊಡುತ್ತಾರೆಯೋ ಅವರಿಗೆ ಕೋಟಿ ನಾಣ್ಯವನ್ನು ಬಹುಮಾನವಾಗಿ ಕೊಡುತ್ತೇನೆ" ಎಂದು ಡಂಗುರ ಸಾರಿಸಿದನು.

ಅದೇ ಊರಿನಲ್ಲಿ ಸಕಲ ವೇದ ಶಾಸ್ತ್ರ ಪಾರಂಗತನಾದರೂ ಕಡುಬಡತನದಿಂದ ಸಂಸಾರ ಸಾಕುವುದೇ ಕಷ್ಟವಾಗಿದ್ದ ಮಾಧವಶರ್ಮನೆಂಬ ಬ್ರಾಹ್ಮಣನು ಇದನ್ನು ಕೇಳಿ,ತನ್ನ ಐವರು ಹೆಣ್ಣು ಮಕ್ಕಳಲ್ಲಿ ಹಿರಿಯವಳನ್ನು ಕೊಡುತ್ತೇನೆ, ನಮಗಿರುವ ಹದಿನಾಲ್ಕು ಮಕ್ಕಳನ್ನು ಪೋಷಿಸುವುದು ಬಹಳ ಕಷ್ಟವಾಗಿದೆ ಎಂದು ತನ್ನ ಪತ್ನಿ ಸುಶೀಲೆಗೆ ತಿಳಿಸಿದನು.

ಸುಶೀಲೆಯು "ಪತಿಯೇ,ಲೋಕದಲ್ಲಿ ಮಗಳನ್ನು ಮದುವೆ ಮಾಡಿಕೊಡಲು ಬಹಳ ಆಲೋಚಿಸಿ, ಅತ್ಯುತ್ತಮ ಧನವಂತರ ಮನೆಗೇ ಬಡವರು ಹೆಣ್ಣು ಕೊಟ್ಟರೆ ಅವಮಾನ,ತಪ್ಪದು ಎಂದು ಕೊಡಲಿಚ್ಛಿಸುವುದಿಲ್ಲ. ಇನ್ನು ನಪುಂಸಕ ,ನಿರುದ್ಯೋಗಿ, ಅಂಗಹೀನರಿಗೂ ಕನ್ಯೆಯನ್ನು ಕೊಡುವುದಿಲ್ಲ. ಹೀಗಿರುವಾಗ ನೀವು ಮೃತನಾದವನಿಗೆ ಮಗಳನ್ನು ಕೊಡುತ್ತೇನೆ ಎನ್ನುವಿರಲ್ಲ!
ಅವಳು ವಿಧವೆಯಾಗಿಯೇ ಬಾಳಬೇಕೇ? ಇದು ಯುಕ್ತವಲ್ಲ" ಎಂದಳು. ನಿನಗೆ ಒಬ್ಬಳು ಮಗಳು ಕಡಿಮೆ ಎಂದು ಭಾವಿಸಿಕೋ, ನಾನು ಮೃತರಾಜಪುತ್ರನಿಗೆ ಹಿರಿಯ ಮಗಳು ಚಾರುಮತಿಯನ್ನು ಕೊಟ್ಟೇ ಕೊಡುತ್ತೇನೆಂದು ಮದುವೆ ಮಾಡಿಕೊಟ್ಟನು.

ಭೀಮನ ಅಮಾವಾಸ್ಯೆ: ತಿಳಿಯಬೇಕಾದ 10 ಸಂಗತಿಭೀಮನ ಅಮಾವಾಸ್ಯೆ: ತಿಳಿಯಬೇಕಾದ 10 ಸಂಗತಿ

ನಡೆಯಿತು ಪವಾಡ

ನಡೆಯಿತು ಪವಾಡ

ಮಾತಿನಂತೆ ರಾಜನು ಅವನಿಗೆ ಕೋಟಿ ಹೊನ್ನು ಕೊಟ್ಟನು. ನಂತರ ಪುತ್ರನ ಶವವನ್ನು ಸ್ಮಶಾನಕ್ಕೆ ಸಾಗಿಸಿ, ಸೊಸೆಗೆ ಚಿತೆಗೆ ಅಗ್ನಿಸ್ಪರ್ಶ ಮಾಡಲು ಹೇಳಿದನು. ಆಕೆಯು ಶುಚಿರ್ಭೂತಳಾಗಿ,
ಸರ್ವಾಭರಣ ಧರಿಸಿ, ಯಥೇಚ್ಛ ಮಂಗಳದ್ರವ್ಯಗಳನ್ನು ದಾನಮಾಡಿ ,ಭಕ್ತಿಯಿಂದ ಪರಮೇಶ್ವರನನ್ನು ಧ್ಯಾನಿಸುತ್ತ , ಶಾಂತ ಮನಸ್ಸಿನಿಂದ ಚಿತೆಗೆ ಅಗ್ನಿಸ್ಪರ್ಶ ಮಾಡಿದಳು. ಕೂಡಲೇ ಇದ್ದಕ್ಕಿದ್ದಂತೆ ವರ್ಷಧಾರೆಯಾಗಿ ಚಿತೆಯ ಬೆಂಕಿಯು ಆರಿಹೋಯಿತು. ಸೂರ್ಯನೂ ಮುಳುಗಿ ಕತ್ತಲಾಗಿ ಸ್ವಲ್ಪ ಸಮಯದಲ್ಲಿಯೇ ಗಾಢಾಂಧಕಾರವು ಆವರಿಸಿತು.

ರಾಜ ಪರಿವಾರವು ಅವಳನ್ನು ಅಲ್ಲಿಯೇ ಬಿಟ್ಟು ಹಿಂದಿರುಗಿತು. ಸ್ಮಶಾನದಲ್ಲಿ ಏಕಾಂಗಿಯಾಗಿದ್ದ ಚಾರುಮತಿಯು ಭಯಗ್ರಸ್ತಳಾಗಿ ನಡುಗುತ್ತ , ಧೈರ್ಯತಂದುಕೊಂಡು ದುಃಖಾತಿಶಯದಿಂದ
"ಭಗವಂತ ಕಾಪಾಡು,ಕಾಪಾಡು" ಎಂದು ದೀನಳಾಗಿ ಪ್ರಾರ್ಥಿಸುತ್ತ , "ನೀನು ಹಿಂದೆ ಮಾರ್ಕಂಡೇಯ, ಸತ್ಯವಾನ, ಚ್ಯವನ, ಮನ್ಮಥ, ಶ್ವೇತವಾಹನ ಮೊದಲಾದ ಅಲ್ಪಾಯುಗಳಿಗೆ ದೀರ್ಘಾಯುವನ್ನು ಕರುಣಿಸಿದವನು. ನಾನೇನು ಅಪರಾಧ ಮಾಡಿದ್ದೇನೆಂದು ನನಗೀ ಶಿಕ್ಷೆ ? ಕೃಪೆ ಮಾಡು ದೇವ" ಎಂದು ಅಳುತ್ತಲೇ ಪ್ರಜ್ಞಾಹೀನಳಾದಳು.

ಪ್ರತ್ಯಕ್ಷನಾದ ಪರಶಿವ

ಪ್ರತ್ಯಕ್ಷನಾದ ಪರಶಿವ

ಪರಶಿವನು ಪಾರ್ವತಿಯೊಂದಿಗೆ ವೃಷಭಾರೂಢನಾಗಿ ಪ್ರತ್ಯಕ್ಷನಾಗಿ,
"ಎದ್ದೇಳು ಪುತ್ರಿ.ಬೇಕಾದ ವರವನ್ನು ಕೇಳು" ಎಂದಾಗ ಎಚ್ಚೆತ್ತು ಶಿವನ ಪಾದದ ಮೇಲೆ ತಲೆ ಇಟ್ಟು , ಸೌಮಂಗಲ್ಯ, ಸೌಭಾಗ್ಯ, ಸುಖ ಸಂಪತ್ಸಮೃದ್ಧಿಯನ್ನು ಕೊಡುವ ವ್ರತವನ್ನು ನನಗೆ ಉಪದೇಶಿಸು" ಎಂದು ಬೇಡಿದಳು.ಈಶ್ವರನು ತಥಾಸ್ತು ಎಂದು ಜ್ಯೋತಿರ್ಭೀಮೇಶ್ವರ ವ್ರತವನ್ನು ಉಪದೇಶಿಸಿ, ವ್ರತವಿಧಿಯನ್ನು ತಿಳಿಸಿ, ಒಂಬತ್ತು ವರ್ಷ ವ್ರತವನ್ನಾಚರಿಸಿ ನಂತರ ಉದ್ಯಾಪನೆ ಮಾಡಬೇಕು. ನಾಡಿದ್ದು ಆಷಾಢ ಅಮವಾಸ್ಯೆ. ಅಂದು ಇಲ್ಲಿ ಸಿಕ್ಕುವ ವಸ್ತುಗಳನ್ನೇ ವ್ರತಕ್ಕೆ ಬೇಕಾದ ಸಾಮಗ್ರಿಗಳೆಂದು ಮನಸ್ಸಿನಲ್ಲಿ ಭಾವಿಸಿ ವ್ರತ ಆಚರಿಸು.ನಿನ್ನ ಪತಿಯು ನಿದ್ದೆಯಿಂದೆಚ್ಚತ್ತವನಂತೆ ಮೇಲೆದ್ದು ನವತಾರುಣ್ಯದೊಂದಿಗೆ ನಿನ್ನೊಂದಿಗೆ ಇರುತ್ತಾನೆ" ಎಂದು ಹೇಳಿ ಅಂತರ್ಧಾನನಾದನು.

ವ್ರತ ಕೈಗೊಂಡ ಚಾರುಮತಿ

ವ್ರತ ಕೈಗೊಂಡ ಚಾರುಮತಿ

ಚಾರುಮತಿಯು ಸ್ಮಶಾನದ ಮರಗಳಪತ್ರೆ, ಪುಷ್ಪ, ಫಲಾದಿಗಳನ್ನೇ ವ್ರತಸಾಮಗ್ರಿಯಾಗಿ ಭಾವಿಸಿ, ಶುಚಿರ್ಭೂತಳಾಗಿ, ಮಣ್ಣಿನಿಂದ ದೀಪಸ್ತಂಭ ರಚಿಸಿ, ಅಗ್ನಿಯನ್ನಾವಾಹಿಸಿ, ಸಂಜೆ ಭಕ್ತಿಯಿಂದ ವ್ರತ ಮಾಡಿದಳು. ವ್ರತಪೂಜಾ ಮಹಿಮೆಯಿಂದ ರಾಜಪುತ್ರನು ಕಣ್ತೆರೆದು ಎದ್ದು, ಆಶ್ಚರ್ಯ ಚಕಿತನಾಗಿ, ಅಲ್ಲಿಯವರೆಗಿನ ವೃತ್ತಾಂತವನ್ನು ಚಾರುಮತಿಯಿಂದ ಕೇಳಿ ಆನಂದಭರಿತನಾದನು. ಬೆಳಗಾಗುತ್ತಲೇ ರಾಜಭಟರಿಂದ ವಿಷಯ ತಿಳಿದ ರಾಜ ವಜ್ರಬಾಹುವು ಆಗಮಿಸಿ, ಚಾರುಮತಿಯಿಂದ ವಿಷಯ ತಿಳಿದು ಸಂತೋಷಗೊಂಡು ಅವಳನ್ನು ಸಮಾಧಾನ ಪಡಿಸಿ,ಇಬ್ಬರನ್ನೂ ಮೆರವಣಿಗೆಯ ಮೂಲಕ ಅರಮನೆಗೆ ಕರೆತಂದು ,ಚಾರುಮತಿಯ ಕೈಯಿಂದ ಯಥೇಚ್ಛ ದಾನಧರ್ಮ ಮಾಡಿಸುತ್ತ , ಸಂತೋಷದಿಂದ ಇದ್ದನು." ಹೀಗೆ ಸೂತಪುರಾಣಿಕರು ಹೇಳಿದ ಕತೆ ಕೇಳಿದ ಶೌನಕಾದಿ ಋಷಿಗಳೂ ಭಕ್ತಿಯಿಂದ ವ್ರತವನ್ನು ಆರಂಭಿಸಿದರು.

ಈ ಕಥೆಯನ್ನು ಯಾರು ಹೇಳುತ್ತಾರೆಯೋ,ಯಾರು ವ್ರತವನ್ನು ಆಚರಿಸಿ ಈ ಕಥೆಯನ್ನು ಕೇಳುತ್ತಾರೆಯೋ ಅವರೆಲ್ಲ ಇಹದಲ್ಲಿ ಸುಖ ಸಂಪತ್ತನ್ನು ಹೊಂದಿ,
ಪರದಲ್ಲಿ ಮುಕ್ತಿ ಪಡೆಯುತ್ತಾರೆ ಎಂದು ಸ್ಕಾಂದ ಪುರಾಣದಲ್ಲಿ ಹೇಳಿದೆ.
ಜ್ಯೋತಿರ್ಭೀಮೇಶ್ವರಾರ್ಪಣಮಸ್ತು.

English summary
Bheemana Amavasya is a unique Hindu festival celebrated across Karnataka. This year it falls on Aug 11. This is the last festival of Aashada month. Here is history and importance of the festival
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X