• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುರುವಿಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ

By ಪೂರ್ಣಿಮ ಜಿ.ಆರ್, ಬೆಂಗಳೂರು
|

ಏಕಲವ್ಯ ಬಿಲ್ವಿದ್ಯೆ ಕಲಿಯಲು ದ್ರೋಣಾಚಾರ್ಯರನ್ನು ವಿನಂತಿಸುತ್ತಾನೆ. ಆದರೆ ದ್ರೋಣಾಚಾರ್ಯರು ಕ್ಷತ್ರೀಯರ ಹೊರತು ಬೇರೆಯವರಿಗೆ ವಿದ್ಯೆ ಕಲಿಸುವುದಿಲ್ಲವೆಂದು ಅವನ ವಿನಂತಿಯನ್ನು ನಿರಾಕರಿಸುತ್ತಾರೆ. ಆದರೆ ನಿರಾಶನಾಗದ ಏಕಲವ್ಯ ಅವರ ಮಣ್ಣಿನ ಮೂರ್ತಿ ಮಾಡಿ ಮಾನಸಿಕವಾಗಿ ಅವರನ್ನು ಗುರುಗಳಾನ್ನಾಗಿ ಸ್ವೀಕರಿಸಿ ಬಿಲ್ವಿದ್ಯೆ ಕಲಿಯುತ್ತಾನೆ ಎಂಬುದು ಎಲ್ಲರಿಗೂ ತಿಳಿದ ಪುರಾಣದ ಕತೆ.

ಗುರುವಿಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ. ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟುಹಾಕುವ ಸೂತ್ರಧಾರನೇ ಶಿಕ್ಷಕ. ದೇಶದ ಪ್ರಗತಿಯಲ್ಲಿ ಶಿಕ್ಷಣಕ್ಕೆ ಎಷ್ಟು ಮಹತ್ವವಿದೆಯೋ, ಅಷ್ಟೇ ಮಹತ್ವ ಶಿಕ್ಷಕನಿಗೂ ಇದೆ. ವಿದ್ಯಾರ್ಥಿಗಳ ಭವಿಷ್ಯವು ಶಿಕ್ಷಣದಲ್ಲಿದ್ದರೆ ಅದನ್ನು ಸಾಕಾರಗೊಳಿಸುವ ಸೂತ್ರ ಶಿಕ್ಷಕರಲ್ಲಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರವು ಸಹ ಪ್ರತಿವರ್ಷ ಶಿಕ್ಷಕರ ದಿನಾಚರಣೆಯಂದು ಉತ್ತಮ ಸಾಧನೆ ಗೈದ ಶಿಕ್ಷಕರನ್ನು ಸನ್ಮಾನಿಸುತ್ತದೆ.

ಪುರಸ್ಕರಿಸಬೇಕಾದ ಗುರುವಿನ ಗೌರವ ಕುಸಿಯಲು ಕಾರಣವೇನು?

ಗುಣಮಟ್ಟದ ಶಿಕ್ಷಣವು ಸುಸ್ಥಿರ ಅಭಿವೃದ್ಧಿಯ ಅಡಿಪಾಯ. ಶಿಕ್ಷಣವು ಸ್ವಯಂ ಅವಲಂಬನೆ, ಕೌಶಲ್ಯ ವೃದ್ಧಿ, ಆರ್ಥಿಕ ಬೆಳವಣಿಗೆ, ಉತ್ತಮ ಜೀವನೋಪಾಯ ನೀಡುತ್ತದೆ. ಇದರ ಮಹತ್ವವನ್ನು ಮನಗಂಡ ಯುನೈಟೆಡ್ ನೇಷನ್ 4ನೇ ಸುಸ್ಥಿರ ಅಭಿವೃದ್ಧಿ ಗುರಿಯಾದ ಗುಣಮಟ್ಟದ ಶಿಕ್ಷಣವನ್ನು 2030 ಹೊತ್ತಿಗೆ ಸಾಧಿಸುವ ಗುರಿಯನ್ನು ತನ್ನ ಸದಸ್ಯ ರಾಷ್ಟ್ರಗಳಿಗೆ ನೀಡಿದೆ.

ಇದರ ಮುಖ್ಯ ಉದ್ದೇಶ ಎಲ್ಲರನ್ನೂ ಒಳಗೊಳ್ಳುವ ಮೂಲಕ ಸಮಾನ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಕೊಳ್ಳುವುದು ಮತ್ತು ಎಲ್ಲರಿಗೂ ಜೀವನಪೂರ್ತಿ ಕಲಿಕಾ ಅವಕಾಶಗಳನ್ನು ಪ್ರೋತ್ಸಾಹಿಸುವುದು. ಹಾಗೆಯೇ ಭಾರತ ಸರ್ಕಾರವು ಶಿಕ್ಷಣ ಹಕ್ಕು ಕಾಯ್ದೆಯಡಿ 14 ವರ್ಷ ಒಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ವ್ಯವಸ್ಥೆಯನ್ನು ಮಾಡಿದೆ.

ಇದರ ಮುಖ್ಯ ಉದ್ದೇಶವೆಂದರೆ, ಎಲ್ಲಾ ಮಕ್ಕಳನ್ನು ಶಾಲಾ ಶಿಕ್ಷಣದ ವ್ಯಾಪ್ತಿಯಲ್ಲಿ ತರುವ ಮೂಲಕ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು. ಹೀಗಾಗಿ ಶಾಲಾಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಕಲಿಕಾ ಫಲಿತಾಂಶವನ್ನು ಹೆಚ್ಚಿಸುವುದು ಮತ್ತು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದ್ದರೂ ಸಹ ಅದಕ್ಕೆ ಬೇಕಾದ ಪೂರಕ ವಾತಾವರಣ ಮತ್ತು ಸೌಲಭ್ಯಗಳನ್ನು ಕಡೆಗಣಿಸುವಂತಿಲ್ಲ. ಈ ಕೆಳಗಿನ ಅಂಕಿಅಂಶಗಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸಂಬಂಧಿಸಿದ ಪೂರಕ ಅಂಶಗಳನ್ನು ಪ್ರತಿನಿಧಿಸುತ್ತದೆ.

ಆದರ್ಶ ಶಿಕ್ಷಕರೆಂದರೆ ಯಾರು? ತಲೆಯೆತ್ತಿ ನೋಡುವಂಥ ಶಿಕ್ಷಕರೇಕೆ ಹುಟ್ಟುತ್ತಿಲ್ಲ?

ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸಂಬಂಧಿಸಿದ ಅಂಕಿ ಅಂಶಗಳು : (ಮೂಲ U-DISE ವರದಿ)

ಶಿಕ್ಷಣ ಮತ್ತು ಶಿಕ್ಷಣದ ಗುಣಮಟ್ಟವನ್ನು ಪ್ರಭಾವಿಸುವ ಪ್ರಮುಖ ಅಂಶವೆಂದರೆ ಶಿಕ್ಷಕ. ಗುಣಮಟ್ಟ, ದಕ್ಷತೆ, ಬೋಧನೆ ಮತ್ತು ಕಲಿಕೆಗೆ ಸಂಬಂಧಿಸಿದ ಅಂಶಗಳು ಶಿಕ್ಷಕರಿಂದ ಪ್ರಭಾವಕ್ಕೊಳಗಾಗುತ್ತವೆ. ಯುನಿಫೈಡ್ ಡಿಸ್ಟ್ರಿಕ್ಟ್ ಇನ್‌ಫರ್‌ಮೇಷನ್ ಸಿಸ್ಟಮ್ ಫಾರ್ ಎಜುಕೇಶನ್(U-DISE)ನ 2015-16ರ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 8.08 ಮೀಲಿಯನ್ ಶಿಕ್ಷಕರು ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶೇ.48ರಷ್ಟು ಮಹಿಳಾ ಶಿಕ್ಷಕಿಯರನ್ನು ಹೊಂದಿದೆ.

ಇದು 2005-06ರಲ್ಲಿ ಶೇ.40.33ರಷ್ಟಿದ್ದು ಗಣನೀಯ ಪ್ರಮಾಣದ ಏರಿಕೆಯನ್ನು ಕಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.41ರಷ್ಟು, ನಗರಪ್ರದೇಶದಲ್ಲಿ ಶೇ.66ರಷ್ಟು ಮಹಿಳಾ ಶಿಕ್ಷಕರನ್ನು ಹೊಂದಿವೆ. ಇನ್ನೂ ಖಾಸಗಿ ಶಾಲೆಗಳಲ್ಲಿ ಶೇ.56 ಹಾಗೂ ಸರ್ಕಾರಿ ಶಾಲೆಗಳಲ್ಲಿ ಶೇ.42ರಷ್ಟು ಮಹಿಳಾ ಶಿಕ್ಷಕಿರಿದ್ದಾರೆ. 2015-16ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಶೇ.53.94, ತಮಿಳುನಾಡಿನಲ್ಲಿ ಶೇ.80.64 ಮತ್ತು ಗೋವಾದಲ್ಲಿ ಶೇ.90.62 ಮಹಿಳಾ ಶಿಕ್ಷಕಿಯರು ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಡೀ ಕರ್ನಾಟಕಕ್ಕೇ ಮಾದರಿ ಶಿವಮೊಗ್ಗದ ಸಂಕ್ಲಾಪುರ ಸರಕಾರಿ ಶಾಲೆ

2005-06ರಲ್ಲಿ ಭಾರತದ ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಪಾತವು 36 ಇದ್ದು, 2015-16ರಲ್ಲಿ 24ರಷ್ಟಿದ್ದು ಗಣನೀಯ ಪ್ರಮಾಣದ ಏರಿಕೆ ಹೊಂದಿರುವುದನ್ನು ಗಮನಿಸಬಹುದು. ಆದರೆ ಕೆಲವು ರಾಜ್ಯಗಳಲ್ಲಿ ಈ ಅನುಪಾತವು 30ಕ್ಕಿಂತ ಹೆಚ್ಚಿರುವುದು ಕಂಡುಬಂದಿದೆ. ಅವುಗಳೆಂದರೆ: ಬಿಹಾರ(66), ದೆಹಲಿ(43) ಜಾರ್ಖಂಡ್(41) ಮತ್ತು ಉತ್ತರಪ್ರದೇಶ (58), ಈ ರಾಜ್ಯಗಳು ಕನಿಷ್ಠ ಪ್ರಮಾಣದ ವಿದ್ಯಾರ್ಥಿ ಮತ್ತು ಶಿಕ್ಷಕರ ಪ್ರಮಾಣವನ್ನು ಕಾಯ್ದುಕೊಳ್ಳುವ ಅವಶ್ಯಕತೆ ಇದೆ.

ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಶೇಕಡವಾರು ಪ್ರಮಾಣವು ಕಡಿಮೆಯಾಗಿರುವುದು ಕಂಡುಬಂದಿದೆ. 2006-07ರಲ್ಲಿ 69.14, 2012-13ರಲ್ಲಿ 61.47, 2015-16ರಲ್ಲಿ 57.87ರಷ್ಟಿದೆ. ಅಭಿವೃದ್ಧಿಯ ದೃಷ್ಠಿಯಿಂದ ಇದು ಗುರುತರ ಬೆಳವಣಿಗೆ ಅಲ್ಲ.

ಇನ್ನೂ ಸೇವಾ ತರಬೇತಿಯನ್ನು ಪಡೆದ ಶಿಕ್ಷಕರ ಸಂಖ್ಯೆಯನ್ನು ಗಮನಿಸಿದರೆ 2010-11ರಲ್ಲಿ ಶೇ.40.21ರಷ್ಟಿದ್ದು, ಇದು 2014-15ರಲ್ಲಿ ಶೇ.18.34ಕ್ಕೆ ಇಳಿದಿದ್ದು, 2015-16ರಲ್ಲಿ ಶೇ.14.90ಕ್ಕೆ ಬಂದು ನಿಂತಿದೆ. ಹಾಗೆಯೇ 2014-15ರಲ್ಲಿದ್ದ ಸರ್ಕಾರಿ ಶಾಲೆಯ ಶಿಕ್ಷಕರ ಮೌಲ್ಯವು ಶೇ.27.9ರಿಂದ 2015-16ರಲ್ಲಿ 23.17ಕ್ಕೆ ಇಳಿದಿದೆ. ಗುಣಾತ್ಮಕ ಶಿಕ್ಷಣವನ್ನು ನಿರ್ಣಯಿಸುವ ಅಂಶಗಳಲ್ಲಿ ತರಬೇತಿಯು ಪ್ರಮುಖವಾಗಿದ್ದು ಶಿಕ್ಷಕರಿಗೆ ಆಧುನಿಕ ಶೈಕ್ಷಣಿಕ ವ್ಯವಸ್ಥೆಗೆ ಅನುಗುಣವಾದ ಶೈಕ್ಷಣಿಕ ಮತ್ತು ತಾಂತ್ರಿಕ ತರಬೇತಿಯನ್ನು ನೀಡಬೇಕು.

ಕಲಿಕೆಯ ಹಸಿವನ್ನು ನೀಗಿಸಲು ಅರಿವೆಂಬ ತುತ್ತು ತಿನ್ನಿಸುವ ಶಿಕ್ಷಕ

ಇತ್ತೀಚಿನ National Achievement Survey-2017ರ ವರದಿಯಲ್ಲಿ ತಿಳಿಸಿರುವಂತೆ ಹೆಚ್ಚಿನ ತರಗತಿಗೆ ಹೋಗುತ್ತಿರುವ ವಿದ್ಯಾರ್ಥಿಗಳು ಕಡಿಮೆ ಕಲಿಕಾ ಸಾಮರ್ಥ್ಯ ಹೊಂದಿರುವುದು.

ಆಧುನಿಕ ಶೈಕ್ಷಣಿಕ ವ್ಯವಸ್ಥೆಯು ಬಹಳಷ್ಟು ಸುಧಾರಿಸಿದ್ದು, ಮಕ್ಕಳನ್ನು ಶಾಲೆಗೆ ಆಕರ್ಷಿಸುವ ಪ್ರಯತ್ನವು ಸಾಕಷ್ಟು ನಡೆದಿದೆ. ಸರ್ಕಾರಿ ಶಾಲೆಗಳು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಸಮವಸ್ತ್ರ ವಿತರಣೆ, ಬೈಸಿಕಲ್ ವಿತರಣೆ, ಮಧ್ಯಾಹ್ನದ ಬಿಸಿಯೂಟ ಮುಂತಾದ ವ್ಯವಸ್ಥೆಗಳನ್ನು ಉಚಿತವಾಗಿ ನೀಡುವ ಮೂಲಕ ಮಕ್ಕಳನ್ನು ಶಾಲೆಯತ್ತಾ ಆಕರ್ಷಿಸಲು ಪ್ರಯತ್ನಿಸಿದರೆ, ಖಾಸಗಿ ಶಾಲೆಗಳು ಸೌಕರ್ಯಗಳನ್ನೇ ಆಕರ್ಷಣೆಯಾಗಿ ಪ್ರದರ್ಶಿಸಿ ಶಿಕ್ಷಣವನ್ನು ವ್ಯಾಪರೀಕರಣಗೊಳಿಸುತ್ತಿವೆ.

ಇನ್ನು ಶಿಕ್ಷಕರ ವಿಷಯಕ್ಕೆ ಬಂದರೆ ಸರ್ಕಾರಿ ಶಾಲೆಯ ಶಿಕ್ಷಕರಿಗೂ ಖಾಸಗಿ ಶಾಲೆಗಳ ಶಿಕ್ಷಕರಿಗೂ ಬೋಧಿಸುವ ಕ್ರಮ, ಮಾಧ್ಯಮ, ಶಾಲೆಗಳಲ್ಲಿ ಅಳವಡಿಸಿಕೊಳ್ಳುವ ತಾಂತ್ರಿಕ ಸೌಲಭ್ಯಗಳು ಹಾಗು ಪಠ್ಯೇತರ ಚಟುವಟಿಕೆಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಇವುಗಳನ್ನು ಮೀರಿ ಗುಣಮಟ್ಟದ ಕಲಿಕೆಗೆ ಆಧ್ಯತೆ ನೀಡುವ ಶಿಕ್ಷಕರು ಸಮಾಜಕ್ಕೆ ಬೇಕು.

ಸರ್ಕಾರಿ, ಖಾಸಗಿ ಶಾಲೆಯ ಶಿಕ್ಷಕರ ಪಾತ್ರ ಮತ್ತು ಸರ್ಕಾರದ ಜವಾಬ್ದಾರಿ

ಖಾಸಗಿ ಶಾಲೆ ಮತ್ತು ಸರ್ಕಾರಿ ಶಾಲೆಯ ಶಿಕ್ಷಕರ ಪಾತ್ರ ಮತ್ತು ಜವಾಬ್ದಾರಿಯನ್ನು ಗಮನಿಸಿದಾಗ, ಖಾಸಗಿ ಶಾಲೆಯ ಶಿಕ್ಷಕರಿಗೆ ಮಕ್ಕಳ ಫಲಿತಾಂಶವನ್ನು ಒಂದು ಮಾನದಂಡವಾಗಿ ಪರಿಗಣಿಸಿರುವುದು ಕಂಡುಬರುತ್ತದೆ. ಆದರೆ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಮಕ್ಕಳ ಫಲಿತಾಂಶದ ಜೊತೆಗೆ ಜನಗಣತಿ, ಸಾರ್ವಜನಿಕರಲ್ಲಿ ಅರಿವಿನ ಕಾರ್ಯಕ್ರಮ, ಶಾಲೆಯನ್ನು ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕಾರ್ಯಕ್ರಮ, ಬಿಸಿಯೂಟ ಇತರೆ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಸರ್ಕಾರವು ನೀಡುತ್ತದೆ.

ಇವುಗಳ ಮಧ್ಯೆ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ, ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳು, ಪಠ್ಯ ಪುಸ್ತಕಗಳು ಸರಿಯಾದ ಸಮಯಕ್ಕೆ ದೊರೆಯದೆ ಇರುವುದು, ಬಿಸಿಯೂಟ ತಿಂದು ಮಕ್ಕಳು ಅಸ್ವಸ್ಥರಾಗಿರುವ ಅನೇಕ ವಿಷಯಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವುದನ್ನು ಗಮನಿಸಬಹುದು. ಈ ಸಮಸ್ಯೆಗಳನ್ನೆಲ್ಲಾ ಹೊರತುಪಡಿಸಿ ಎಲ್ಲಾ ಮಕ್ಕಳಿಗೂ ಗುಣಾತ್ಮಕ ಶಿಕ್ಷಣವನ್ನು ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಇದನ್ನು ಸಾಕಾರಗೊಳಿಸಲು ಸರ್ಕಾರವು ಶಿಕ್ಷಕರಿಗೆ ಕಾಲ ಕಾಲಕ್ಕೆ ತರಬೇತಿಯನ್ನು ನೀಡುವುದರ ಜೊತೆಗೆ, ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಉತ್ತಮ ಕಲಿಕಾ ವ್ಯವಸ್ಥೆಯನ್ನು ದೇಶವು ಅಳವಡಿಸಿಕೊಳ್ಳುವ ಹಾಗೆ ಮಾಡಬೇಕು.

ನಮ್ಮ ರಾಜ್ಯ ಸರ್ಕಾರವು ಕರ್ನಾಟಕ ಜ್ಞಾನ ಆಯೋಗವು ಸಿದ್ಧಪಡಿಸಿರುವ ಕರ್ನಾಟಕ ರಾಜ್ಯ ಶಿಕ್ಷಣ ನೀತಿಯಲ್ಲಿ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಗುಣಮಟ್ಟ, ಮಾಹಿತಿ ತಂತ್ರಜ್ಞಾನದ ಬಳಕೆ, ಶಿಕ್ಷಕರ ತರಬೇತಿ ಮತ್ತು ಮೌಲ್ಯಮಾಪನದ ಬಗ್ಗೆ ನೀಡಿರುವ ಶಿಫಾರಸ್ಸುಗಳನ್ನು ಅಳವಡಿಸಿಕೊಳ್ಳುವತ್ತಾ ಚಿಂತನೆ ಮಾಡಬೇಕು. ಇವುಗಳ ಜೊತೆಗೆ ಸರ್ಕಾರವು ಕಾಲಕಾಲಕ್ಕೆ ಗುಣಾತ್ಮಕ ಶಿಕ್ಷಣವನ್ನು ಮೌಲ್ಯಮಾಪನ ಮಾಡುವ ಮೂಲಕ ಶಿಕ್ಷಕರು ತಮ್ಮ ವೃತ್ತಿಗೆ ಜವಾಬ್ದಾರರಾಗುವಂತೆ ಮಾಡಬೇಕು. ಹಾಗೆಯೇ ಶಿಕ್ಷಕರು ಸಹ ಯಾವುದೇ ರಾಜಕೀಯ, ಧಾರ್ಮಿಕ ಪ್ರಭಾವಕ್ಕೊಳಾಗಾಗದೆ ತಮ್ಮ ಶಿಕ್ಷಣ ವೃತ್ತಿಯನ್ನು ಜವಾಬ್ದಾರಿಯನ್ನು ನಿರ್ವಹಿಸಬೇಕು.

ಪರಿಣಾಮಕಾರಿ ಸೇವೆಯನ್ನು ಒದಗಿಸುವ ಉದ್ದೇಶದಿಂದ ಸರ್ಕಾರವು ವಿಕೇಂದ್ರಿಕರಣ ಮತ್ತು ನಾಗರಿಕ ಭಾಗವಹಿಸುವಿಕೆಗೆ ಒತ್ತು ನೀಡಿ, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯನ್ನು ರಚಿಸಿದೆ. ಎರಡು ಕೈಸೇರಿದರೆ ಚಪ್ಪಾಳೆ ಎನ್ನುವ ಹಾಗೆ ಈ ಸಮಿತಿಯು ಉತ್ತಮವಾಗಿ ಕಾರ್ಯನಿರ್ವಹಿಸಲು ಸಮಿತಿಯ ಸದಸ್ಯರು(ನಾಗರಿಕರು) ಮತ್ತು ಶಿಕ್ಷಕರು ಸೇರಿ ಶಿಕ್ಷಣದ ಅಭಿವೃದ್ಧಿಯನ್ನು ಕೈಗೊಳ್ಳಬೇಕು, ಆಗ ಮಾತ್ರ ನಾಗರಿಕರ ಭಾಗವಹಿಸುವಿಕೆಗೆ ಸರಿಯಾದ ಅರ್ಥ ಕಲ್ಪಿಸಿದಂತಾಗುತ್ತದೆ. ವಿದ್ಯಾರ್ಥಿಯ ಭವಿಷ್ಯ, ರಾಷ್ಟ್ರದ ಪ್ರಗತಿ ಮತ್ತು ಶಿಕ್ಷಣದ ಮಹತ್ವ ಅರಿತು ಕಾರ್ಯನಿರ್ವಹಿಸುವ ಶಿಕ್ಷಕರು ದೇಶಕ್ಕೆ ಬೇಕು. (ಪೂರ್ಣಿಮ ಜಿ.ಆರ್., ಸಿನೀಯರ್ ಪ್ರೋಗಾಂ ಆಫೀಸರ್, ಪಬ್ಲಿಕ್ ಅಫೇರ್ಸ್ ಸೆಂಟರ್, ಬೆಂಗಳೂರು.)

English summary
Happy Teachers Day 2018. Poornima GR, senior program officer, Public Affirs Center, says there is need for quality education in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more