ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಚ್ಚುವಂತೆ ಮಾಡುತ್ತಿದ್ದ ಅಪ್ಪನ ಬೆಚ್ಚನೆಯ ಪ್ರೀತಿಗೆ ನಮನ

By ಸಂಧ್ಯಾ ಭಟ್, ತೀರ್ಥಹಳ್ಳಿ
|
Google Oneindia Kannada News

ಸುಮಾರು ಇಪ್ಪತ್ತು ವರ್ಷದ ಹಿಂದಿನ ಮಾತು.ಮನೇಲಿ ಹಬ್ಬದ ಆಚರಣೆ ಅಂದ್ರೆ ನಲವತ್ತು ಜನ ಒಟ್ಟಿಗೆ ಸೇರ್ತಿದ್ವಿ.ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ ಮಕ್ಕಳು ಮರಿ ಅಂತಾ ಒಟ್ಟಾರೆ ಹಬ್ಬ ಅಂದ್ರೆ ಮನೇಲಿ ಇದ್ದಷ್ಟು ಸಂಭ್ರಮ ಇನ್ನೆಲ್ಲೂ ಇರಲ್ಲ ಅನ್ನಿಸ್ತಿತ್ತು. ನಾವೆಲ್ಲಾ ಹೆಚ್ಚಾಗಿ ಬೆಳೆದದ್ದು ದೊಡ್ಡಪ್ಪ, ದೊಡ್ಡಮ್ಮನ ಮಡಿಲಲ್ಲೇ ಅನ್ನಬಹುದು.

ಮನೇಲಿ ಹಿರಿದೊಡ್ಡಪ್ಪ ಎಲ್ಲ ಮಕ್ಕಳಿಗೂ ಒಂದೇ ತರದ ಬಟ್ಟೆ ತಂದು ಕೊಡುತ್ತಿದ್ರು.ನಮಗೆಲ್ಲಾ ಪೆಪ್ಪರ್ ಮೆಂಟ್ ತಂದು ಕೊಟ್ರೆ ಅದೇನೋ ಸಡಗರ. ಆಗೆಲ್ಲಾ ನಮ್ಗೆ ಅಪ್ಪನ ಅಟಾಚ್ಮೆಂಟ್ ತುಂಬಾ ಕಮ್ಮಿ. ಏನೇ ಕೇಳದಿದ್ರೂ, ಹೇಳದಿದ್ರೂ ದೊಡ್ಡಪ್ಪಂಗೆ ಹೇಳಿದ್ರೆ ಎಲ್ಲವೂ ನಡೀತಿತ್ತು.[ಫಾದರ್ಸ್ ಡೇ: ಫುಟ್ಬಾಲ್ 'ಸ್ಟಾರ್' ಅಪ್ಪಂದಿರು]

Fathers Day Special article by Sandhya Bhat

ವರ್ಷಕಳಿತಿದ್ದಂತೆ ಅಪ್ಪ ಬೇರೆ ಕಡೆ ಬೀಡು ಬಿಡುವ ಯೋಚನೆ ಮಾಡಿದರಾದ್ರೂ ನಮಗೆಲ್ಲಾ ಮನಸ್ಸಿಲ್ಲದ ಮನಸ್ಸಿನಲ್ಲಿ ಹೊರಬರಲೇ ಬೇಕೆನ್ನುವ ಸ್ಥಿತಿ. ಆಗ ನಮ್ಗೆ ಅಪ್ಪನ ಹತ್ತಿರದಿಂದ ನೋಡುವ ಸಂದರ್ಭ. ನಮ್ಮ ಅಪ್ಪ ತುಂಬಾ ಜೋರು. ಅಂದ್ರೆ ಜೋರಾಗಿ ಮಾತು, ಬೈಯ್ಯೋದು,..

ಆ ಕೆಲಸದವರಿಗೆ ಬೈಯ್ಯೋವಾಗ ನಾವೆಲ್ಲಾ ಬೆಚ್ಚಿಬೀಳ್ತಿದ್ವಿ. ಏನಾದ್ರೂ ಬೇಕು ಅಂದ್ರೆ ಅಪ್ಪ ಹತ್ರ ನೇರವಾಗಿ ಕೇಳೋ ಅಧಿಕಾರ ಕೂಡಾ ಇರಲಿಲ್ಲ. ಅಮ್ಮನ ಹತ್ರ ಹೇಳಿಸಿ ಆಮೇಲೆ ಅಪ್ಪಂಗೆ ವಿಚಾರ ಗೊತ್ತಾಗಿ ಆಗ ನಮ್ಗೆ ಬೇಕಾದ ವಸ್ತು ಸಿಗುತ್ತಿತ್ತು.[ಫಾದರ್ಸ್ ಡೇ ಹಿ(ಮಿ)ಷ್ಟರಿ ಬಹಿರಂಗ]

ಅದ್ರಲ್ಲೂ ನಮ್ಮಪ್ಪ ಹೊಡಿತಿದ್ದ ಪೆಟ್ಟು, ಒಂದು ವಾರವಾದ್ರೂ ಮರೆಯೋಕ್ಕೆ ಆಗುತ್ತಿರಲಿಲ್ಲ. ಅಷ್ಟು ಜೋರಾಗಿ ಹೊಡಿತಿದ್ರು. ನಾನಂತು ಮಗ್ಗಿ ಕಲಿಯುವಾಗ ತುಂಬಾ ಪೆಟ್ಟು ತಿಂತಿದ್ದೆ. ಬರಲಿಲ್ಲ ಅಂದ್ರೆ ಅಮ್ಮನ್ನ ನೋಡಿ ನಾನೇ ಮೊದಲು ಅಳೋಕ್ಕೆ ಶುರು ಮಾಡಿದ್ರೆ, ಅಪ್ಪ ಹೊಡೆಯೋಲ್ಲ ಅಂತ ನಂಬಿಕೆ. ಆದ್ರೂ ಅಪ್ಪ ಬಿಡ್ತಿರಲಿಲ್ಲ.

ಇನ್ನೂ ಕಲಿಲಿಲ್ವಾ ಅಂತಾ ಎರಡು ಪೆಟ್ಟು ಬಿದ್ದೇ ಬೀಳುತ್ತಿತ್ತು.ಆದ್ರೆ ನಮ್ಗೆ ಅಪ್ಪ ಅಂದ್ರೆ ಎಷ್ಟು ಭಯ ಇತ್ತೋ, ಅಷ್ಟೇ ಭಕ್ತಿ ಕೂಡಾ ಇತ್ತು.ಅವರೆದುರು ನಿಂತು ಮಾತನಾಡುವ ಧೈರ್ಯ ಮಾತ್ರ ನಾವು ಮಾಡ್ತಿರಲಿಲ್ಲ.[ನಿಮ್ಮ ನೆನಪು ನಿಮ್ಮ ಮಾತು ಕಾಡುವುದು ಪರಿ ಪರಿ]

Fathers Day Special article by Sandhya Bhat

ಏನೇ ಆದ್ರೂ ಅವರ ನಿತ್ಯ ಪೂಜೆ, ಅವರ ಸಂಸ್ಕಾರ, ಇವತ್ತು ನಾವು ಈ ಮಟ್ಟಕ್ಕೆ ಬರೋಕ್ಕೆ ಮುಖ್ಯ ಕಾರಣ. ನಮಗೆ ಅಷ್ಟು ಬುದ್ದಿ ಹೇಳಿ.ಹೆದರಿಸದೇ ಬೆಳೆಸದಿದ್ದರೆ ಬಹುಶ: ನಾವೂ ಕೂಡಾ ಏನಾಗುತ್ತಿದ್ದೆವೋ..ಕಲ್ಪನೆಗೆ ಸಿಲುಕ್ಕದ್ದು. ಈಗ ಒಂದೊಂದು ಸಾರಿ ಅನ್ನಿಸುತ್ತೆ.ನಮ್ಮಪ್ಪ ನಮ್ಮ ಹುಟ್ಟುಹಬ್ಬ ಅಂದ್ರೆ ವಿಶ್ ಮಾಡ್ತಿರಲಿಲ್ಲ.ಒಂದು ಬಟ್ಟೆ ತಂದು ಕೊಡ್ತಿರಲಿಲ್ಲ ಅಂತ ಬೇಜಾರಾಗುತ್ತಿತ್ತು.

ಆದ್ರೆ ಅಪ್ಪ ಅವರು ಕಷ್ಟ ಅನುಭವಿಸಿದ್ದನ್ನ ಆ ಕ್ಷಣಗಳನ್ನ ನಮಗೂ ತೋರಿಸಿಕೊಡುತ್ತಿದ್ರು.ಆಗೆಲ್ಲ ಬೇಜಾರು ಮಾಡಿಕೊಳ್ಳೋ ಪ್ರಸಂಗವೇ ಬರ್ತಿಲಿಲ್ಲ. ನಮಗೆ ಅರ್ಥ ಆಗುತ್ತಿತ್ತೋ ಇಲ್ವೋ, ಆದ್ರೆ ನಾವೂ ಕೂಡಾ ಅಪ್ಪ ಅದು ಕೊಡ್ಸಿ, ಇದು ಕೊಡ್ಸಿ ಅಂದೋರಲ್ಲ. ಆದ್ರೂ ನಂಗೆ ಸ್ಪಲ್ಪ ಹಟದ ಸ್ವಭಾವ. ನನ್ನ ದೊಡ್ಡಪ್ಪ ಮುದ್ದಿಂದ ಸಾಕಿದ್ರು. ಹಾಗಾಗಿ ಬೇಕೇ ಬೇಕೆನ್ನುವ ಹಟ ಮಾಡಿದಾಗ ಅಪ್ಪ ಒಂದು ಸಾರಿ ಸಿಟ್ಟಿನಿಂದ ನೋಡಿದ್ರೆ, ಜೀವವೇ ತಣ್ಣಗಾಗುತ್ತಿತು.[ಮಡುಗಟ್ಟಿದ್ದ ದುಃಖ ಒಡೆದು ಹನಿಗೂಡಿದಾಗ...]

ಅಪ್ಪ ಅಂದಾಗ ಯಾವಾಗ್ಲೂ ನೆನಪಾಗೋ ಒಂದು ಸಂಗತಿ ಅಂದ್ರೆ, ಸಿಟಿ ಶಾಲೆಗೆ ನಮ್ಮನ್ನು ಸೇರಿಸಿ ಮರುದಿನದಿಂದ ನೀವೇ ಹೋಗಬೇಕು ಅಂದಾಗ ಎಲ್ಲಾ ರಸ್ತೆಗಳನ್ನು ನೋಡಿ ತಬ್ಬಿಬ್ಬಾಗ್ತಿದ್ದೆ.

ಅಳು ಬರುತ್ತಿದ್ದರೂ ಅವರಿವರನ್ನ ಕೇಳಿ ಶಾಲೆಗೆ ಹೋಗುತ್ತಿದ್ದೆ.ಮಾಕ್ಸ್ ಕಾರ್ಡಿಗೆ ಅಕ್ಕನ ಹತ್ರ ಸಹಿ ಹಾಕಿಸಿಕೊಂಡು, ಅಪ್ಪ ಮನೇಲಿಲ್ಲ ಅನ್ನೋ ಸುಳ್ಳು ಹೇಳಿ ಕೊನೆಗೇ ನನ್ನ ಮಾಸ್ಟಜೀಗೆ ಅಪ್ಪ ಸಿಕ್ಕಾಗ, ಮನೆಗೆ ಬಂದು ತಪ್ಪಿಸಿಕೊಳ್ಳಲಾಗದೇ ಬೈಗುಳಗಳ ಸರಮಾಲೆ ಸ್ವೀಕರಿಸಿದ್ದು ಇವತ್ತಿಗೂ ಮನಸ್ಸಿನಲ್ಲಿದೆ.[ಅಪ್ಪನ ಬೆವರ ಹನಿಯ ಸಾಲ, ತೀರಿಸಲಾಗದ ಋಣಭಾರ]

ಕಾಲೇಜು ಮೆಟ್ಟಿಲೇರಿದ್ರೂ ಅಪ್ಪ ಹತ್ರ ಮಾತಾಡೋಕ್ಕೆ ಹೆದರಿಕೆ. ನಂಗೆ ಸ್ವಲ್ಪ ಬರವಣಿಗೆ ಹುಚ್ಚು. ಏನಾದ್ರೂ ಬರೀತಾ ಇರ್ತಿದ್ದೆ.

Fathers Day Special article by Sandhya Bhat

ಮನೆಗೆ ಒಂದೆರಡು ಲೋಕಲ್ ಪೇಪರ್‍ಗಳು ಬರುತ್ತಿತ್ತು. ಅಪ್ಪ ಬಸ್ಸಿಗೆ ಅಂತ ಕೊಟ್ಟ ಎರಡು ರೂಪಾಯಿ ಬಸ್ ಚಾರ್ಜ್‍ನಲ್ಲಿ ಹಾಗೂ ಹೀಗೂ ದುಡ್ಡು ಉಳಿಸಿ, ಪೋಸ್ಟ್ ಕಾರ್ಡ್ ತಂದು ನಾನು ಬರೆದ ಒಂದು ಕವನವನ್ನು ಪೇಪರ್ ವಿಳಾಸಕ್ಕೆ ಕಳಿಸಿದೆ. ಒಂದು ವಾರದ ಬಳಿಕ ಆ ಪೇಪರ್‍ನಲ್ಲಿ ನನ್ನ ಕವನ ಪ್ರಕಟಗೊಂಡಿತ್ತು.ಆದ್ರೆ ಅಪ್ಪ ಬೈತಾರೆ ಅಂತ ಅಮ್ಮಂಗೆ ಆ ಪೇಪರ್ ತೋರಿಸಿ ಮುಚ್ಚಿಟ್ಟಿದ್ದೆ.

ಅಪ್ಪನ ಬಗೆಗೆ ಅಪಾರ ಗೌರವ ಆರಂಭ ಆಯ್ತು: ಅಪ್ಪಂಗೆ ಹೊರಗಿನ ಅನೇಕರು ಈ ವಿಚಾರವನ್ನು ತಿಳಿಸಿದ್ದರು..ನಿಮ್ಮ ಮಗಳು ಚನ್ನಾಗಿ ಬರೀತಾಳೆ ಅಂತಿದ್ರು ಅಂತ ಅಮ್ಮನ ಹತ್ರ,ಅಪ್ಪ ಹೇಳಿದ್ರಂತೆ.ಆಗ ಸ್ವಲ್ಪ ಧೈರ್ಯ ಮಾಡಿ ಮುಂದಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಬರೀತಿದ್ದ,ಕವನ ಲೇಖನಗಳನ್ನು ತೋರಿಸ್ತಿದ್ದೆ.[ಅಪ್ಪನ ದಿನ ವಿಶೇಷ : ಸೀದಾ ಸಾದಾ ನನ್ನ ದಾದಾ]

ಹೀಗೆ ಸ್ವಲ್ಪ ಹೆದರಿಕೆ ಕಡಿಮೆ ಆಗ್ತಾ ಇದ್ದಂತೆ, ಕಾರ್ಯಕ್ರಮಗಳಿಗೂ ಅಪ್ಪ ಬರ್ತಿದ್ರು..ಆಗ ಅಲ್ಲಿನ ಜನರ ಮದ್ಯ ವೇದಿಕೆಲಿ ಇರೋದು "ನನ್ನ ಮಗಳು"ಅಂತ ಹೆಮ್ಮೆ ಇಂದ ಹೇಳಿಕೊಳ್ಳೊದನ್ನ ಗಮನಿಸಿ, ಅಪ್ಪನ ಬಗೆಗೆ ಅಪಾರ ಗೌರವ ಆರಂಭ ಆಯ್ತು.

ನಂತರದ ದಿನಗಳಲ್ಲಿ ಅಪ್ಪನೆದುರು ನಿಂತು ಹೀಗೆ-ಹಾಗೇ ಅಂತಾ ಮಾತಾಡೋ ರೀತಿ ಬದಲಾಗ್ತಾ ಹೋಯಿತು. ಅಪ್ಪಾ ಕೂಡಾ ನಮ್ಮೊಟ್ಟಿಗೆ ಅವರ ಹಲವಾರು ವಿಚಾರಗಳನ್ನ ಹೇಳಿಕೊಳ್ತಿದ್ರು.. [ಅಪ್ಪನಿಗೆ ಬೇಕಿರುವುದು ಒಂದು ಹಿಡಿ ಪ್ರೀತಿಯಷ್ಟೆ!]

ಅಮ್ಮ ಹತ್ರ ಹೋಗಿ ಅತ್ತಿದ್ವಿ: ಆದ್ರೆ ಅವರಿಗೆ ಒಮ್ಮೆ ಹೃದಯಾಘಾತ ಆಗಿದೆ ಅನ್ನೋ ಸುದ್ದಿ ಮಾತ್ರ ಸಹಿಸಿಕೊಳ್ಳಲು ಅಸಾಧ್ಯ..ನಮ್ಮ ನೋವನ್ನ, ಅಳುವನ್ನು ಅವರೆದುರು ತೋರಿಸಿಕೊಳ್ಳೋಕ್ಕೆ ಆಗದೇ ಅಮ್ಮ ಹತ್ರ ಹೋಗಿ ಅತ್ತಿದ್ವಿ.

ದೇವರು ಕಣ್ಣು ಬಿಟ್ಟು ಅಪ್ಪನ್ನ ಬದುಕಿಸಿದ. ಆಗ ನಂಗೆ ಮದ್ವೆ ಆಗಿ ಒಂದು ಮಗು ಆಗಿತ್ತು..ಅಪ್ಪ ನನ್ನ ಮಗುವಿನ ಜೊತೆ ಆಡೋದನ್ನ, ಅದಕ್ಕೆ ಆಸೆ ಮಾಡೋ ರೀತಿನ ನೋಡಿ ಇವತ್ತು ನಿಜಕ್ಕೂ ತುಂಬಾ ಸಂತೋಷ ಆಗುತ್ತೆ. ಕಾಲಕ್ಕೆ ತಕ್ಕಂತೆ ಅಪ್ಪ ಬದಲಾದ್ರು. ಕಷ್ಟ, ನೋವು ಅನುಭವಿಸಿ ಇಂದು ನಲಿವಿನಲ್ಲಿ ನಮ್ಮೊಟ್ಟಿಗಿದ್ದಾರೆ.ಅಪ್ಪ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದರು ಅನ್ನೋ ಹೆಮ್ಮೆ ಇದೆ.

ಅಪ್ಪ ಇವತ್ತು ನಮ್ಮೊಟ್ಟಿಗೆ ನಮ್ಮಂತೆ ಬೆರೆಯೋದನ್ನ ಕಂಡು ನಿಜಕ್ಕೂ ಖುಷಿ ಆಗುತ್ತೆ..ಆಗೆಲ್ಲಾ ಒಂದೊಂದು ರೂಪಾಯಿಗೂ ಕಿತ್ತಾಡುವ ಪರಿಸ್ಥಿತಿ..ಈಗ ಹಾಗಲ್ಲ ನಮ್ಮ ಮಕ್ಕಳಿಗೆ ಅವರ ತಾತ ಕೊಡಿಸಿದ್ರೆ ಅವಕ್ಕೇನೋ ಖುಷಿ.ಒಟ್ಟಾರೆ ನಮ್ಮನ್ನ ಬೆಳೆಸಿದ ರೀತಿ ನಿಜಕ್ಕೂ ಖುಷಿ ತರುತ್ತೆ..ಅಪ್ಪ ನಿಮಗಿದೋ ನನ್ನ ಪ್ರೀತಿ ಪೂರ್ವಕ, ಭಕ್ತಿ ಪೂರ್ವಕ ನಮಸ್ಕಾರ.

ನೀವು ಕೂಡಾ ನಿಮ್ಮ ಅಪ್ಪನ ಬಗ್ಗೆ ಚೆಂದದ ಲೇಖನವನ್ನು ಫೋಟೋ ಸಮೇತ ನಮಗೆ ಇಮೇಲ್ ಮಾಡಿ

English summary
Fathers Day Special article by Sandhya Bhat, Thirthahalli. Father was very strict, always scolding for right reasons, but he instilled values in us. He taught us how to lead a comfortable life even in difficult times. We are very happy to have a father like him, writes Sandhya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X