ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಹಣ ಕಾಲದಲ್ಲಿ ಏನು ಮಾಡಬೇಕು, ಏನು ಮಾಡಬಾರದು

By ವಿಷ್ಣುದಾಸ ನಾಗೇಂದ್ರಾಚಾರ್ಯ, ಮೈಸೂರು
|
Google Oneindia Kannada News

ಇಂದಿನ ದಿನಗಳಲ್ಲಿ ಗ್ರಹಣದ ಆಚರಣೆ, ಸೂತಕದ ಆಚರಣೆ, ಉಳಿದ ಮೈಲಿಗೆಗಳ ಆಚರಣೆ ಎಂದರೆ ಮೂಗು ಮುರಿಯುವ ಮಂದಿಯೇ ಬಹಳ. ಮಾಡುವ ಮನಸ್ಸು ತಮಗಿಲ್ಲ ಎನ್ನುವ ಕಾರಣಕ್ಕೆ ಕಂಡಕಂಡ ಕಾರಣಗಳನ್ನು ನೀಡುತ್ತಾರೆ. ಆದರೆ, ಶಾಸ್ತ್ರದ ವಚನ ಎಂದರೆ ಭಗವಂತನ ಆದೇಶ. ಪರಮಾತ್ಮ ನಮ್ಮ ಬದುಕಿಗೆ ಹಾಕಿದ ಸಂವಿಧಾನ ಅದು. ಅವಶ್ಯವಾಗಿ ಆಚರಣೆ ಮಾಡಲೇಬೇಕು.

ಈಗ ಗ್ರಹಣಕಾಲದ ಅನುಷ್ಠಾನದ ಕುರಿತ ವಚನಗಳ ಅರ್ಥವನ್ನು ತಿಳಿಸುತ್ತ ಹೋಗುತ್ತೇನೆ.

ವೇಧದ ಆಚರಣೆ

ಸಾಮಾನ್ಯವಾಗಿ ಗ್ರಹಣ ಆರಂಭವಾಗುವ ಹನ್ನೆರಡು ಗಂಟೆಗಳನ್ನು (ನಾಲ್ಕು ಯಾಮಗಳು) ವೇಧ ಎನ್ನುತ್ತಾರೆ. ಈ ಸಂದರ್ಭದಲ್ಲಿ ಮೈಲಿಗೆಯಿರುವದಿಲ್ಲ, ಆದರೆ, ಊಟ, ಉಪಾಹಾರ, ನೀರು, ಏನನ್ನೂ ಸೇವಿಸಬಾರದು. ಪೂಜೆ, ಅರ್ಚನೆಗಳನ್ನೂ ಮಾಡಬಾರದು. ಸಂಧ್ಯಾವಂದನೆ, ಪಾರಾಯಣಗಳನ್ನು ಮಾಡಬೇಕು.

ಸಂಜೆಯ ಹೊತ್ತು, ರಾತ್ರಿಯ ಹೊತ್ತು ಗ್ರಹಣವಿದ್ದಾಗ ಸೂರ್ಯೋದಯದಿಂದಲೇ ವೇಧವಿರುತ್ತದೆ. ಅಂತಹ ಸಂದರ್ಭದಲ್ಲಿ ಬೆಳಿಗ್ಗೆ ಸ್ನಾನ ಮಾಡಿ, ನಿರ್ಮಾಲ್ಯ ವಿಸರ್ಜನೆಯನ್ನು ಮಾತ್ರ ಮಾಡಬೇಕು. ಗ್ರಹಣ ಬಿಟ್ಟ ನಂತರ ಪೂಜೆಯನ್ನು ಮಾಡಬೇಕು. ಗ್ರಹಣ ಬಿಟ್ಟ ನಂತರವೇ ಅಡಿಗೆ ಮಾಡಿ, ನೈವೇದ್ಯ ಮಾಡಿ ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು, ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟು ತಿನ್ನಬಾರದು. [ಎಲ್ಲಲ್ಲಿ ಗೋಚರಿಸಲಿದೆ ಮಾರ್ಚ್ 9ರ ಸೂರ್ಯ ಗ್ರಹಣ?]

Dos and Don'ts during Solar eclipse

ಚಂದ್ರಗ್ರಹಣ ಆರಂಭವಾಗುವ ಮೂರು ಯಾಮಗಳ ಮೊದಲು (ಒಂಭತ್ತು ಗಂಟೆಗಳು) ಸೂರ್ಯಗ್ರಹಣ ಆರಂಭವಾಗುವ ನಾಲ್ಕು ಯಾಮಗಳ (ಹನ್ನೆರಡು ಗಂಟೆಗಳು) ವೇಧ ಇರುತ್ತದೆ ಎನ್ನುವದು ಸಾಮಾನ್ಯ ನಿಯಮ. ಚಂದ್ರೋದಯವಾಗಬೇಕಾದರೇ ಗ್ರಹಣವಿದ್ದರೆ ಆ ಇಡಿಯ ಹಗಲಿನಲ್ಲಿ ಉಪವಾಸವಿರಬೇಕು.

(ಮನ್ಮಥಸಂವತ್ಸರದ ಮಾಘ ಕೃಷ್ಣ ಅಮಾವಾಸ್ಯೆಯ ಈ ಬಾರಿಯ ಗ್ರಹಣದಲ್ಲಿ ಮಧ್ಯಾಹ್ನ ಮಂಗಳವಾರ ಮಧ್ಯಾಹ್ನ 3-40ರಿಂದ ವೇಧ ಆರಂಭ. 3-40ರ ನಂತರ ಯಾವ ರೀತಿಯ ಆಹಾರವನ್ನೂ ಸ್ವೀಕರಿಸಬಾರದು. ತೀರ ಅಶಕ್ತರು ಮಂಗಳವಾರ ರಾತ್ರಿ ಏಳು ಗಂಟೆಯವರೆಗೆ ಲಘು ಆಹಾರವನ್ನು ಸ್ವೀಕರಿಸಬಹುದು. ಆ ನಂತರ ಅವರೂ ಸಹ ಸ್ವೀಕರಿಸಬಾರದು.)

ಗ್ರಹಣದ ಸ್ನಾನ

ಗ್ರಹಣದ ಆರಂಭ ಅಂತ್ಯಗಳಲ್ಲಿ ಸ್ನಾನವನ್ನು ಮಾಡಬೇಕು. ಗ್ರಹಣ ಹಿಡಿದಾಗ ಮಾಡುವ ಸ್ನಾನವನ್ನು ಸ್ಪರ್ಶಸ್ನಾನ ಎನ್ನುತ್ತಾರೆ. ಗ್ರಹಣ ಬಿಟ್ಟಾಗ ಮಾಡುವ ಸ್ನಾನವನ್ನು ಮೋಕ್ಷಸ್ನಾನ ಎನ್ನುತ್ತಾರೆ. ಎರಡೂ ಸಹ ಅತ್ಯವಶ್ಯವಾಗಿ ಮಾಡಲೇಬೇಕು. [ಬ್ರಾಹ್ಮಣರನ್ನು ಹಿಗ್ಗಾಮಗ್ಗಾ ಬೈಯುವ ಮಂದಿಗೆ ಕೆಲ ಪ್ರಶ್ನೆ!]

Dos and Don'ts during Solar eclipse

ಗ್ರಹಣದ ಆದಿ ಅಂತ್ಯಗಳಲ್ಲಿ ಸ್ನಾನವನ್ನೇಕೆ ಮಾಡಬೇಕು?

ಇದಕ್ಕೆ ಬ್ರಹ್ಮಪುರಾಣ ಉತ್ತರ ನೀಡಿದೆ.

"ಅಶೌಚಂ ಜಾಯತೇ ನೃಣಾಂ ಗ್ರಹಣೇ ಚಂದ್ರಸೂರ್ಯಯೋಃ
ರಾಹುಸ್ಪರ್ಶೇ ದ್ವಯೋಃ ಸ್ನಾತ್ವಾ ದಾನಾದೌ ಕಲ್ಪತೇ ನರಃ"

ಗ್ರಹಣದ ಸಂದರ್ಭದಲ್ಲಿ ಮನುಷ್ಯರಿಗೆ ಅಶೌಚದ ಮೈಲಿಗೆ ಉಂಟಾಗುತ್ತದೆ. ಅದಕ್ಕೇ ಆರಂಭದಲ್ಲಿ ಸ್ನಾನ ಮಾಡಿಯೇ ದಾನಾದಿಗಳನ್ನು ಮಾಡಬೇಕು. ಅಂತ್ಯದಲ್ಲಿ ಸ್ನಾನ ಮಾಡಿದರೇ ಮುಂದಿನ ಕಾರ್ಯಗಳಿಗೆ ಶುದ್ಧಿ. ಗ್ರಹಣದ ಆರಂಭದಲ್ಲಿ ಸ್ನಾನ ಮಾಡಿದರೆ ಮಾತ್ರ ನಾವು ಮಾಡುವ ಜಪ, ಪಾರಾಯಣ ಮತ್ತು ದಾನಾದಿಗಳು ಫಲಪ್ರದ. ಇಲ್ಲದಿದ್ದರೆ ಸರ್ವಥಾ ಇಲ್ಲ. ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ.

ಈ ಮೈಲಿಗೆ ಬ್ರಾಹ್ಮಣರಿಗೆ ಮಾತ್ರವೋ, ಅಥವಾ ಎಲ್ಲರಿಗೂ ಉಂಟೋ?

ಈ ಪ್ರಶ್ನೆಗೆ ವೃದ್ಧವಸಿಷ್ಠರು ಉತ್ತರ ನೀಡಿದ್ದಾರೆ.

"ಸರ್ವೇಷಾಮೇವ ವರ್ಣಾನಾಂ ಸೂತಕಂ ರಾಹುಸೂತಕೇ"
ಎಲ್ಲ ವರ್ಣದವರೂ ಗ್ರಹಣಕಾದಲ್ಲಿ ಮೈಲಿಗೆಯನ್ನು ಆಚರಿಸಬೇಕು.

ಜನನಾಶೌಚವಿರುವವರು, ಮೃತಾಶೌಚವಿರುವವರು ಮತ್ತು ರಜಸ್ವಲೆಯಾದವರೂ ಸಹ ಗ್ರಹಣದ ಸ್ಪರ್ಶಸ್ನಾನ, ಮುಕ್ತಿಸ್ನಾನಗಳನ್ನು ಮಾಡಲೇಬೇಕು. ಅವರು ಜಪ ಪಾರಾಯಣಗಳನ್ನು ಮಾಡಬಾರದು. [ಸಜ್ಜನರು ಆಚರಿಸಬೇಕಾದ ಸತ್ಕರ್ಮ : ಮಡಿಮೈಲಿಗೆ]

ಸ್ನಾನದ ಕುರಿತ ವಸಿಷ್ಠರ ವಚನ ಹೀಗಿದೆ.

ಗ್ರಹಣೇ ಸಂಕ್ರಮೇ ಚೈವ ನ ಸ್ನಾಯಾದ್ ಯದಿ ಮಾನವಃ ।
ಸಪ್ತಜನ್ಮನಿ ಕುಷ್ಠೀ ಸ್ಯಾದ್ ದುಃಖಭಾಗೀ ಚ ಜಾಯತೇ

ಗ್ರಹಣದ ಆರಂಭದಲ್ಲಿ, ಅಂತ್ಯದಲ್ಲಿ ಸ್ನಾನಮಾಡದ ಮನುಷ್ಯ ಏಳು ಜನ್ಮಗಳಲ್ಲಿ ಕುಷ್ಠರೋಗಿಯಾಗಿ ಹುಟ್ಟುತ್ತಾನೆ. ಪರಮದುಃಖವನ್ನು ಅನುಭವಿಸುತ್ತಾನೆ. ಅಷ್ಟೇ ಅಲ್ಲ, ಗ್ರಹಣದ ಆದಿ ಅಂತ್ಯಗಳಲ್ಲಿ ಸ್ನಾನ ಮಾಡದವನು ಮುಂದಿನ ಗ್ರಹಣ ಬರುವವರೆ ಮೈಲಿಗೆಯಾಗಿರುತ್ತಾನೆ. "ಮುಕ್ತೌ ಯಸ್ತು ನ ಕುರ್ವೀತ ಸ್ನಾನಂ ಗ್ರಹಣಸೂತಕೇ । ಸ ಸೂತಕೀ ಭವೇತ್ ತಾವದ್ ಯಾವತ್ ಸ್ಯಾದಪರೋ ಗ್ರಹಃ"

Dos and Don'ts during Solar eclipse

ಸ್ನಾನ ಮಾಡುವ ರೀತಿ

ಗ್ರಹಣದ ಎರಡೂ ಸ್ನಾನಗಳಲ್ಲಿ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು. (ಹೀಗೆ ಹೇಳಿದರೆ ಇಂದಿನವರಿಗೆ ಅರ್ಥವಾಗುವದಿಲ್ಲ. ನಾವು ಪ್ರತಿನಿತ್ಯ ಸ್ನಾನವನ್ನು ಮಾಡಬೇಕಾದರೆ, ಮೊದಲಿಗೆ ಒದ್ದೆ ಬಟ್ಟೆಯನ್ನುಟ್ಟು ಆ ಬಳಿಕ ಸ್ನಾನ ಮಾಡಬೇಕು. ಒಣ ಬಟ್ಟೆಯನ್ನುಟ್ಟು ಸ್ನಾನ ಮಾಡಬಾರದು. ಕ್ಷೌರಕ್ಕೆ ಹೊಗಿ ಬಂದಾಗ, ರಜಸ್ವಲೆಯರು, ಮೃತಾಶೌಚ, ಜನನಾಶೌಚ, ಗ್ರಹಣ ಮುಂತಾದವುಗಳಲ್ಲಿ ಉಟ್ಟ ಬಟ್ಟೆಯಲ್ಲಿಯೇ ಸ್ನಾನಕ್ಕಿಳಿಯಬೇಕು. ಸ್ನಾನದ ನೀರಿನಿಂದಲೇ ಬಟ್ಟೆ ತೋಯಬೇಕು. ಆದರೆ, ಪ್ರತೀನಿತ್ಯ ಸ್ನಾನ ಮಾಡಬೇಕಾದರೆ ಸರ್ವಥಾ ಹೀಗೆ ಮಾಡಬಾರದು. ಮೊದಲು ಒದ್ದೆ ಬಟ್ಟೆಯನ್ನುಟ್ಟು ಸ್ನಾನ ಮಾಡಬೇಕು. ಇದು ಹೆಣ್ಣುಮಕ್ಕಳಿಗೂ ಅನ್ವಯಿಸುತ್ತದೆ.)

ಈ ಸಮಯದಲ್ಲಿ ಸ್ನಾನ ಮಾಡುವದರಿಂದ ಉಂಟಾಗುವ ಫಲವನ್ನು ದಕ್ಷಪ್ರಜಾಪತಿ ಹೇಳಿದ್ದಾರೆ.

"ಉಷಸ್ಯುಷಸಿ ಯತ್ ಸ್ನಾನಂ ಸಂಧ್ಯಾಯಾಮುದಿತೇ ರವೌ
ಚಂದ್ರಸೂರ್ಯೋಪರಾಗೇ ಚ ಪ್ರಾಜಾಪತ್ಯೇನ ತತ್ ಸಮಮ್"

ಇಡಿಯ ಒಂದು ವರ್ಷದ ಸಮಯದಲ್ಲಿ ಪ್ರತೀದಿವಸ ಮುಂಜಾವಿನ ಉಷಃಕಾಲದಲ್ಲಿ ಸ್ನಾನಮಾಡಿದರೆ ಪ್ರಾಜಾಪತ್ಯದಿಂದ ಉಂಟಾಗುವ ಫಲ ದೊರೆಯುತ್ತದೆ. ಗ್ರಹಣದಲ್ಲಿ ಆರಂಭ ಮತ್ತು ಅಂತ್ಯದಲ್ಲಿ ಸ್ನಾನ ಮಾಡುವದರಿಂದ ಈ ಪ್ರಾಜಾಪತ್ಯದ ಫಲ ದೊರೆತುಬಿಡುತ್ತದೆ.

ಪ್ರಾಜಾಪತ್ಯದ ಮಹತ್ತರ ವಿಧಿಗಳನ್ನು ಕಂಡಾಗ ಮನುಷ್ಯರು ಮಾಡಲು ಸಾಧ್ಯವೇ ಇಲ್ಲ ಎನ್ನುವದು ನಿಶ್ಚಯ. ಆದರೆ, ಪರಮಾತ್ಮನ ಕಾರುಣ್ಯ ಅಪಾರ, ಕೇವಲ ಬೆಳಗಿನ ಝಾವದ ಸ್ನಾನದಿಂದ ಮತ್ತು ಕೇವಲ ಗ್ರಹಣಕಾಲದ ಸ್ಪರ್ಶ, ಮೋಕ್ಷಗಳಸ್ನಾನದಿಂದ ಅದು ದೊರೆತುಬಿಡುತ್ತದೆ.

ಗ್ರಸ್ಯಮಾನೇ ಭವೇತ್ ಸ್ನಾನಂ ಗ್ರಸ್ತೇ ಹೋಮೋ ವಿಧೀಯತೇ
ಮುಚ್ಯಮಾನೇ ಭವೇದ್ ದಾನಂ ಮುಕ್ತೌ ಸ್ನಾನಂ ವಿಧೀಯತೇ

ಅತ್ತ ಗ್ರಹಣ ಆರಂಭವಾಗುತ್ತಿರುವಾಗ, ಇತ್ತ ನಾವು ಸ್ನಾನವನ್ನು ಆರಂಭಿಸಬೇಕು. ಗ್ರಹಣ ಹಿಡಿದಾಗ ಹೋಮ, ಶ್ರಾದ್ಧ, ಪಾರಾಯಣಗಳನ್ನು ಮಾಡಬೇಕು. ಇನ್ನೇನು ಗ್ರಹಣ ಬಿಡುತ್ತದೆ ಎನ್ನುವಾಗ ಮಾಡುವ ದಾನ ಅತೀಶ್ರೇಷ್ಠ. ಗ್ರಹಣ ಪೂರ್ಣವಾಗಿ ಬಿಟ್ಟ ಮೇಲೆ ಸ್ನಾನವನ್ನು ಆಚರಿಸಬೇಕು.

Dos and Don'ts during Solar eclipse

ಎಲ್ಲಿ ಸ್ನಾನ ಮಾಡಬೇಕು

ಗ್ರಹಣಕಾಲದಲ್ಲಿ ನದಿಗಳಲ್ಲಿ, ಮಹಾನದಿಗಳಲ್ಲಿ ಮಾಡುವ ಸ್ನಾನ ಅತೀ ಶ್ರೇಷ್ಠ. ನಿಮಗೆ ಹತ್ತಿರವಿರುವ ನದಿಗಳಿಗೆ ಹೋಗಿ ಸ್ನಾನ ಮಾಡುವದು ಮಹಾಪುಣ್ಯಪ್ರದ. ಸಮುದ್ರಸ್ನಾನ ಸರ್ವೋತ್ತಮ. ಶ್ರೀಮದಾಚಾರ್ಯರೂ ಸಹ ಗ್ರಹಣದ ಸಂದರ್ಭದಲ್ಲಿ ಸಮುದ್ರಸ್ನಾನ ಮಾಡಿದ ಘಟನೆಯನ್ನು ನಾವು ಮಧ್ವವಿಜಯದಲ್ಲಿ ಕೇಳುತ್ತೇವೆ. (ಶ್ರೀ ಮಧ್ವವಿಜಯದ ಹದಿನಾರನೆಯ ಸರ್ಗದ ಎರಡನೆಯ ಉಪನ್ಯಾಸದಲ್ಲಿ ಇದನ್ನು ವಿಸ್ತೃತವಾಗಿ ವಿವರಿಸಿದ್ದೇನೆ. ವೇಧದ ಕಾಲದಲ್ಲಿ ಇದನ್ನು ಕೇಳಿ.) ದಾನವನ್ನು ಮಾಡಲು ಕುರುಕ್ಷೇತ್ರ ಅತೀಪ್ರಶಸ್ತವಾದದ್ದು. ಆ ಕುರುಕ್ಷೇತ್ರದಲ್ಲಿ ಗೋದಾನ, ಗಜದಾನ, ತಿಲದಾನ, ಧಾನ್ಯದಾನ, ರತ್ನದಾನ, ಸುವರ್ಣದಾನ, ಭೂದಾನಗಳನ್ನು ಒಟ್ಟಿಗೆ ಮಾಡಿದರೆ ಎಷ್ಟು ಫಲವೋ ಅಷ್ಟು ಫಲ ಗ್ರಹಣಕಾಲದಲ್ಲಿ ಸಮುದ್ರಸ್ನಾನ ಮಾಡುವದರಿಂದ ಬರುತ್ತದೆ.

ಗ್ರಹಣಕಾಲದಲ್ಲಿ ಬಿಸಿನೀರಿನ ಸ್ನಾನ ಮಾಡಬಾರದು ಎಂದು ಯಮನ ಆದೇಶವಿದೆ. ತೀರ ಅಶಕ್ತರಾದವರು ಮಾತ್ರ ಬಿಸಿನೀರಿನಿಂದ ಸ್ನಾನವನ್ನು ಮಾಡಬೇಕು.

ಗ್ರಹಣದಲ್ಲಿಯೂ ಉತ್ತಮ, ಅತ್ಯುತ್ತಮ ಮತ್ತು ಸರ್ವೋತ್ತಮ ಕಾಲಗಳು (ಬ್ರಹ್ಮಪುರಾಣದ ವಚನ)

"ಉಪಮರ್ದೇ ಲಕ್ಷಗುಣಂ ಗ್ರಹಣೇ ಚಂದ್ರಸೂರ್ಯಯೋಃ
ಪುಣ್ಯಂ ಕೋಟಿಗುಣಂ ಮಧ್ಯೇ ಮುಕ್ತಿಕಾಲೇ ತ್ವನಂತಕಮ್ "

ಗ್ರಹಣದ ಆರಂಭದಲ್ಲಿ ಮಾಡುವ ವಿಷ್ಣುಸ್ಮರಣೆ, ವಿಷ್ಣುನಮಸ್ಕಾರ ಮುಂತಾದವು ಬೇರೆಯ ಸಂದರ್ಭದಲ್ಲಿ ಮಾಡುವದಕ್ಕಿಂತ ಲಕ್ಷಪಟ್ಟು ಹೆಚ್ಚಿನ ಫಲವನ್ನು ನೀಡುತ್ತವೆ. ಗ್ರಹಣದ ಸಂದರ್ಭದಲ್ಲಿ ಮಾಡುವ ಇದೇ ಸತ್ಕರ್ಮಗಳು ಕೋಟಿಪಟ್ಟು ಫಲವನ್ನು ಕೊಡುತ್ತವೆ. ಗ್ರಹಣದ ಅಂತ್ಯದಲ್ಲಿ ಮಾಡುವ ಇದೇ ಸತ್ಕರ್ಮಗಳು ಅನಂತ ಫಲವನ್ನು ನೀಡುತ್ತವೆ. ಹೀಗಾಗಿ, ಇಡಿಯ ಗ್ರಹಣದ ಸಮಯವನ್ನು ನಮ್ಮ ಸಾಧನೆಯ ಸಮಯವನ್ನಾಗಿ ಮಾಡಿಕೊಳ್ಳಬೇಕು.

ಇಡಿಯ ವರ್ಷ, ಆ ಕೆಲಸ ಈ ಕೆಲಸ ಅಂತ ದೇವರನ್ನು ಮರೆತು ಕೂಡುತ್ತೇವೆ. ಆದರೆ, ಗ್ರಹಣದ ಅತ್ಯಲ್ಪ ಸಮಯದಲ್ಲಿಯಾದರೂ ಬೇರೆ ಯಾವ ಲೌಕಿಕ ಕಾರ್ಯಗಳನ್ನು ಮಾಡದೇ ನಾವು ಅದನ್ನು ಸಾಧನೆಗಾಗಿ ಉಪಯೋಗಿಸಿಕೊಂಡಾಗ ಪರಮಾತ್ಮ ಒಲಿಯುತ್ತಾನೆ.

Dos and Don'ts during Solar eclipse

ಗ್ರಹಣಕಾಲದಲ್ಲಿ ಯಾವುದು ಮೈಲಿಗೆ, ಯಾವುದಲ್ಲ?

ಯಾವುದೇ ಬೇಯಿಸಿದ ಪದಾರ್ಥ ಗ್ರಹಣಕಾಲದಲ್ಲಿ ಮೈಲಿಗೆ, ಹೀಗಾಗಿ ಗ್ರಹಣದ ನಂತರ ಅದನ್ನು ತಿನ್ನಲು ಬರುವದಿಲ್ಲ. ಅಂದರೆ, ಮೊದಲೇ ಉಪ್ಪಿಟ್ಟು, ಅವಲಕ್ಕಿ, ಕೋಸಂಬರಿ, ಅನ್ನ, ಮುಂತಾದವನ್ನು ಮಾಡಿ ಆ ಮೇಲೆ ತಿನ್ನುವದು ಸರ್ವಥಾ ನಿಷಿದ್ದ.

ಹಾಲು, ಮೊಸರು, ತುಪ್ಪ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಈ ಭೋಜ್ಯ ಪದಾರ್ಥಗಳ ಮೇಲೆ ದರ್ಭೆಯನ್ನು ಹಾಕಿರಬೇಕು. ಆಗ ಮಾತ್ರ ಗ್ರಹಣದ ನಂತರವೂ ತೆಗೆದುಕೊಳ್ಳಲು ಬರುತ್ತದೆ.

ನೀರೂ ಸಹ ಮೈಲಿಗೆಯಾಗುತ್ತದೆ. ಆದರೆ ತುಂಬ ದೊಡ್ಡದಾದ ಮಡಿಕೆಯಲ್ಲಿನ ನೀರಿನ ಮೇಲೆ ದರ್ಭೆ ಹಾಕಿದ್ದಾಗ ಮೈಲಿಗೆಯಿರುವದಿಲ್ಲ ಎಂದು ಶಾಸ್ತ್ರವಿದೆ. "ಮಣಿಕಸ್ಥೋದಕಂ ಚೈವ ನ ದುಷ್ಯೇದ್ ರಾಹುಸೂತಕೇ" ಎಂದು.

ಯಾರ ಮನೆಯಲ್ಲಿ ಭಾವಿ ಮುಂತಾದವುಗಳಿಂದ ಗ್ರಹಣದ ನಂತರ ಶುದ್ಧ ನೀರನ್ನು ತೆಗೆದುಕೊಳ್ಳಲು ಸಾಧ್ಯವಿದೆಯೋ ಅಂತಹವರು ಹಾಗೆಯೇ ಮಾಡಬೇಕು. ಯಾರ ಮನೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಇದೆ (ನೋಡಿ, ಯೋಚನೆ ಮಾಡಿ, ನದೀತೀರಗಳಲ್ಲಿ ವಾಸ ಮಾಡುವ ಸಂಕಲ್ಪವನ್ನಾದರೂ ಮಾಡಿ, ಭಗವಂತ ದಾರಿ ತೋರುತ್ತಾನೆ) ಅಂತಹವರು ನೀರಿನ ಪಾತ್ರೆಗಳ ಮೇಲೆ ದರ್ಭೆಯನ್ನು ಹಾಕಿರಬೇಕು. ಆದರೆ ಗ್ರಹಣಕಾಲದಲ್ಲಿ ಸರ್ವಥಾ ಆ ನೀರನ್ನು ಮುಟ್ಟಬಾರದು. ಮುಟ್ಟಿದರೆ ಗ್ರಹಣದ ನಂತರ ಸ್ವೀಕರಿಸಲು ಬರುವದಿಲ್ಲ.

ಗ್ರಹಣಕಾಲದಲ್ಲಿ ಮಲಮೂತ್ರ ವಿರ್ಸಜನೆ ಮಹಾದೋಷವನ್ನು ಉಂಟುಮಾಡುತ್ತದೆ. ಅದಕ್ಕೇ ವೇಧಕಾಲದಲ್ಲಿ ಏನನ್ನೂ ತಿನ್ನಬೇಡಿ, ಕುಡಿಯಬೇಡಿ ಎನ್ನುತ್ತದೆ ಶಾಸ್ತ್ರ.

ಗ್ರಹಣಕಾಲದ ಕರ್ತವ್ಯ ಅಕರ್ತವ್ಯಗಳು

ವೇಧವಿರುವ ಕಾಲದಲ್ಲಿ ಪೂಜೆ, ಅರ್ಚನೆ, ಪಾಠ ಮುಂತಾದವುಗಳನ್ನು ಮಾಡಬಾರದು. ಸಂಧ್ಯಾವಂದನೆ, ಜಪ, ಪಾರಾಯಣಗಳನ್ನು ಮಾಡಬೇಕು. ವೇಧಕಾಲದಲ್ಲಿ ಮೈಲಿಗೆಯಿರುವದಿಲ್ಲ.

ಗ್ರಹಣಕಾಲದಲ್ಲಿ ಮಾಡಬಾರದ್ದು

* ಗ್ರಹಣಕಾಲದಲ್ಲಿ ಬಿಸಿನೀರಿನ ಸ್ನಾನ ಮಾಡಬಾರದು. (ತೀರ ಅಶಕ್ತರನ್ನು ಹೊರತುಪಡಿಸಿ)
* ಗ್ರಹಣಕಾಲದಲ್ಲಿ ಮಲಮೂತ್ರ ವಿಸರ್ಜನೆ ಮಾಡಬಾರದು.
* ಗ್ರಹಣಕಾಲದಲ್ಲಿ ಏನನ್ನೂ ತಿನ್ನಬಾರದು, ಏನನ್ನೂ ಕುಡಿಯಬಾರದು. (ಹಾಲು ಕುಡಿಯುವ ವಯಸ್ಸಿನ ಮಕ್ಕಳಿಗೂ ಸಾಧ್ಯವಿದ್ದಷ್ಟು ಹಾಲನ್ನು ಆ ಸಂದರ್ಭದಲ್ಲಿ ಕುಡಿಸಬೇಡಿ. ಆದರೆ, ಕೆಲವು ಬಾರಿ ಗ್ರಹಣದ ಸಮಯ ಹೆಚ್ಚಾಗಿದ್ದಾಗ ಕುಡಿಸಬಹುದು. ಆದರೆ ಬೇಯಿಸಿದ ಪದಾರ್ಥವನ್ನು ಅವರಿಗೂ ತಿನ್ನಿಸತಕ್ಕದ್ದಲ್ಲ)
* ಗ್ರಹಣಕಾಲದಲ್ಲಿ ನಿದ್ರೆ ಮಾಡಬಾರದು. (ಮಾಡುವವರು ಬುದ್ಧಿಮಾಂದ್ಯರಾಗಿ ಹುಟ್ಟುತ್ತಾರೆ)

ಗ್ರಹಣಕಾಲದಲ್ಲಿ ಮಾಡಬೇಕಾದ್ದು

* ಗ್ರಹಣ ಆರಂಭವಾಗುತ್ತಿದ್ದಂತೆ ಉಟ್ಟಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.
* ಇಡಿಯ ಗ್ರಹಣ ಕಾಲದಲ್ಲಿ ವಿಷ್ಣುಸ್ಮರಣೆ, ವಿಷ್ಣುನಮಸ್ಕಾರ, ಜಪ. ಪಾರಾಯಣಗಳನ್ನು ಮಾಡಬೇಕು.
* ಗ್ರಹಣ ಶ್ರಾದ್ಧವನ್ನು ಮಾಡುವವರು ಹಿಟ್ಟಿನಿಂದ ಶ್ರಾದ್ಧವನ್ನು ಮಾಡಬೇಕು. ಅನ್ನದಿಂದ ಪಿಂಡವನ್ನು ಕಟ್ಟಬಾರದು. ಅಥವಾ ಹೇಮಶ್ರಾದ್ಧವನ್ನು ಮಾಡಬಹುದು. (ಬಂಗಾರದ ತುಂಡನ್ನೇ ಪಿಂಡವನ್ನಾಗಿ ಇಡುವ ಶ್ರಾದ್ಧ)
* ಗ್ರಹಣದ ದೋಷವಿದ್ದವರು ಗ್ರಹಣಕಾಲದಲ್ಲಿ ಹೋಮವನ್ನು ಮಾಡಬಹುದು.
* ಗ್ರಹಣ ಕಾಲದಲ್ಲಿ ತರಕಾರಿ, ಧಾನ್ಯಗಳನ್ನು ದಾನ ಮಾಡಬಾರದು. ಯಾವ ವಸ್ತುವನ್ನು ಗ್ರಹಣದ ನಂತರವೂ ತೆಗೆದುಕೊಳ್ಳಲು ಬರುತ್ತದೆಯೋ ಅವನ್ನು ಮಾತ್ರ ದಾನ ಮಾಡಬೇಕು.
* ಗ್ರಹಣ ಬಿಟ್ಟ ಬಳಿಕ ಗ್ರಹಣಕಾಲದಲ್ಲಿ ಮುಟ್ಟಿರುವ ಸಕಲ ಬಟ್ಟೆಗಳನ್ನೂ ತೋಯಿಸಿ ಶುದ್ದಿ ಸ್ನಾನವನ್ನು ಮಾಡಬೇಕು.

ಗ್ರಹಣಕಾಲದಲ್ಲಿ ಮಾಡಬಹುದಾದ ವಿಶೇಷಧರ್ಮಗಳು

ಶ್ರೇಷ್ಠ ನದಿಗಳಲ್ಲಿ, ಮಹಾನದಿಗಳಲ್ಲಿ, ಸಮುದ್ರದಲ್ಲಿ ಸ್ನಾನ. ನಮಗೆ ಶಕ್ತಿಯದ್ದಷ್ಟು ದಾನ. ತಂದೆ ಇಲ್ಲದವರು ಸಮಸ್ತಪಿತೃಗಳಿಗೂ ತಿಲತರ್ಪಣವನ್ನು ನೀಡಬೇಕು.

ಗ್ರಹಣಕಾಲದಲ್ಲಿ ಮಾಡಲೇಬೇಕಾದ್ದು

ನಿರಂತರ ವಿಷ್ಣುಸ್ಮರಣೆ. ಮನುಷ್ಯಜನ್ಮವೇ ದುರ್ಲಭ. ಅದರಲ್ಲಿಯೂ ವೈಷ್ಣವ ಜನ್ಮ ಅತ್ಯಂತ ದುರ್ಲಭ. ಅದರಲ್ಲಿಯೂ ಶ್ರೀಮದಾಚಾರ್ಯರ ಶಾಸ್ತ್ರದ ಕುರಿತ ಎಚ್ಚರ ಬರುವದು ಅತ್ಯಂತ ಅತ್ಯಂತ ದುರ್ಲಭ. ಇದು ದೊರೆತಾಗಲೂ ಇಡಿಯ ವರ್ಷವನ್ನು ವ್ಯರ್ಥ ಮಾಡುತ್ತಿರುತ್ತೇವೆ. ಅಂತಹುದರಲ್ಲಿ ಗ್ರಹಣಕಾಲ ಒದಗಿದಾಗ, ಅಷ್ಟು ಸಮಯವನ್ನಾಗರೂ ವಿಷ್ಣುಸಹಸ್ರನಾಮ, ವಾಯುಸ್ತುತಿ, ಮಧ್ವವಿಜಯ, ದಾಸರಪದಗಳ ಪಾರಾಯಣಕ್ಕಾಗಿ ಉಪಯೋಗಿಸಲೇಬೇಕು. ಹರಿಯನ್ನು ಒಲಿಸಿದಕೊಳ್ಳುವ ಸುಲಭದ ಮಾರ್ಗವಿದು.

ಗ್ರಹಣದ ಸಮಯ ಅತ್ಯಂತ ಕಡಿಮೆಯಿದ್ದಲ್ಲಿ, ವೇಂಕಟೇಶಸ್ತೋತ್ರ, ನವಗ್ರಹಸ್ತೋತ್ರ ಮುಂತಾದ ಪುಟ್ಟ ಕೃತಿಗಳ ಪಾರಾಯಣವನ್ನು ಮಾಡಬೇಕು.

ಮುಂದಿನ ಲೇಖನದಲ್ಲಿ ಗ್ರಹಣಕಾಲದಲ್ಲಿ ಪಠಿಸಬೇಕಾದ ಶ್ಲೋಕಗಳ ಅರ್ಥವನ್ನು ತಿಳಿಸುತ್ತೇನೆ.

English summary
Dos and Don'ts during Solar eclipse. Vishnudasa Nagendracharya explains what one should to during eclipse as per Hindu rituals. When to take bath and how many times, how to worship lord Vishnu etc. Don't take it lightly, there is scientific reason behind these practices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X