• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಿಳಾ ದಿನ: ನಮ್ಮ ವೃಕ್ಷ ಮಹಿಳೆ, ನಮ್ಮ ಹೆಮ್ಮೆ

By ರಾಘವೇಂದ್ರ ಅಡಿಗ
|

ಮಾರ್ಚ್ 8 'ಅಂತಾರಾಷ್ಟ್ರೀಯ ಮಹಿಳಾ ದಿನ'. ಇಂದು ಮಹಿಳೆ ತಾನು ಪುರುಷನಿಗೆ ಸರಿಸಮನಾಗಿ ಕಛೇರಿ ಕೆಲಸದಿಂದ ತೊಡಗಿ, ಬಾಹ್ಯಾಕಾಶ ಯಾನದವರೆವಿಗಿನ ಎಲ್ಲಾ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿದ್ದಾಳೆ. ಅಂಥವರಲ್ಲಿ ನಮ್ಮ ಸಾಲು ಮರದ ತಿಮ್ಮಕ್ಕ ನವರ ಸಾಧನೆಯೂ ಸ್ತುತ್ಯಾರ್ಹವಾದುದು.

ಕೆಲ ವರ್ಷಗಳ ಹಿಂದೊಮ್ಮೆ ದಾವಣಗೆರೆ ಲೋಕಸಭಾ ಸದಸ್ಯರಾಗಿದ್ದ ಶ್ಯಾಮನೂರು ಶಿವಶಂಕರಪ್ಪನವರು ತಾವು ಕಾರ್ಯಕ್ರಮವೊಂದರ ನಿಮಿತ್ತ ಕನಕಪುರದತ್ತ ಹೊರಟಿರುತ್ತಾರೆ. ಅದಾಗ ಮಾರ್ಗ ಮದ್ಯದಲ್ಲಿ ವಾಹನವನ್ನು ನಿಲ್ಲಿಸಿ ತಾವು ದೇಹಬಾಧೆಯನ್ನು ಕಳೆಯಲೋಸುಗ ಮರಗಳ ಮರೆಗೆ ಸಾಗುತ್ತಾರೆ. ಅಲ್ಲಿ ಬೆಳೆದಿದ್ದ ಸಾಲು ಮರಗಳನ್ನು ಕಂಡು ಅಚ್ಚರಿಗೊಂಡ ಶಿವಶಂಕರಪ್ಪನವರು ಅಲ್ಲಿನ ದಾರಿಹೋಕರನ್ನು "ಈ ಮರಗಳಾನ್ನೆಲ್ಲಾ ಯಾವ ಮಂಡಲ ಪಂಚಾಯ್ತಿಯವ್ರು ಬೆಳೆಸಿದ್ದಾರೆ?" ಎಂದು ಪ್ರಶ್ನಿಸುತ್ತಾರೆ. ಆಗ ಆ ದಾರಿಹೋಕನು ಹೇಳಿದ ಉತ್ತರ ಕೇಳಿ ಶಿವಶಂಕರಪ್ಪನವರಿಗೆ ಆಶ್ಚರ್ಯದೊಂದಿಗೆ ಮನಸ್ಸು ತುಂಬಿ ಬರುತ್ತದೆ.

ಇಷ್ಟಕ್ಕೂ ಆ ದಾರಿಹೋಕನು "ಈ ಮರಗಳನ್ನೆಲ್ಲಾ ಯಾವ ಮಂಡಲ ಪಂಚಾಯ್ತಿಯವ್ರೋ, ತಾಲೂಕು ಪಂಚಾಯ್ತಿಯವ್ರೋ ಬೆಳೆಸಿದ್ದಲ್ರೀ... ಇದನ್ನ ಬೆಳೆಸಿದ್ದು ಬಡತನದಲ್ಲೇ ಬಾಳಿ ಬದುಕುತ್ತಿರೋ ಚಿಕ್ಕಯ್ಯ ಮತ್ತು ತಿಮ್ಮಕ್ಕ ಎಂಬೋ ದಂಪತಿಗಳು" ಎಂದು ಉತ್ತರಿಸುತ್ತಾನೆ. ಸುಮಾರು 4 ಕಿಲೋಮೀಟರ್ ದೂರದವರೆಗೆ ಒಟ್ಟು 284 ಆಲದ ಮರಗಳನ್ನು ಬೆಳೆಸಿದವರು ಆ ಬಡ ದಂಪತಿಗಳು ಎನ್ನುವ ವಿಚಾರ ತಿಳಿಯುತ್ತಿದ್ದಂತೆ, ಶಿವಶಂಕರಪ್ಪನವರು ತಾವೇ ಖುದ್ದಾಗಿ ಆ ದಂಪತಿಗಳನ್ನು ಭೇಟಿ ಮಾಡಲು ಹೊರಡುತ್ತಾರೆ. ಹಾಗೆ ಭೇಟಿ ಮಾಡಿ ಕುಶಲೋಪರಿಗಳನ್ನು ವಿಚಾರಿಸಿದ ಬಳಿಕ ಶಿವಶಂಕರಪ್ಪನವರು "ತಮಗೆ ಮಕ್ಕಳೆಷ್ಟು?" ಎಂದು ಕೇಳಿದಾಗ ತಿಮ್ಮಕ್ಕ "ನಮ್ಗೆ ಮಕ್ಳೇ ಬೇಡ ಸ್ವಾಮೀ... ಈ ಮರ್ಗೋಳೇ ನಮ್ ಮಕ್ಳು.." ಎನ್ನುತ್ತಾರೆ.

ಬಡತನದ ಬೇಗೆಯ ನಡುವೆಯೂ ಆದರ್ಶಮಯ ಜೀವನ ನಡೆಸುತ್ತಿರುವ ಸಾರ್ಥಕ ಜೀವ. ಮಕ್ಕಳಿಲ್ಲದ ಕೊರಗು, ಬಡತನದಿಂದ ಬೆಂಡಾದ ಬಾಳ್ವೆಯ ನಡುವೆಯೂ ‘ನೆರಳು ನೀಡುವ ಮರಗಳೆ ನನ್ನ ಮಕ್ಕಳು, ಅವುಗಳನ್ನು ಬೆಳೆಸಿ ಪೋಷಿಸುವುದೇ ನನ್ನ ಜೀವನದ ಗುರಿ' ಎಂದು ನಂಬಿ ನಡೆದ ಈ ವೃಕ್ಷ ಮಹಿಳೆಗೆ ನಮನ.

ತಿಮ್ಮಕ್ಕ ತಾವು ಅಕ್ಷರದ ಮುಖ ನೋಡಿದವರಲ್ಲ, ತಮ್ಮ ಕಾಯಕದ ಮೂಲಕವೇ ತತ್ವಾದರ್ಶಗಳಾನ್ನು ರೂಢಿಸಿಕೊಂಡು ಅಕ್ಷರಸ್ಥರ ಸರಿಸಮವೆಂಬಂತೆ ಆದರ್ಶ ಮಹಿಳೆಯಾಗಿ ಬೆಳೆದ ಮಹಾನ್ ಚೇತನ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿರುವ ಹುಳಿಕಲ್ಲು ಗ್ರಾಮದವರಾದ ತಿಮ್ಮಕ್ಕ ಹುಟ್ಟುತ್ತಲೇ ಬಡತನವನ್ನು ಹಾಸಿ ಹೊದ್ದು ಬಂದವರು. ಯಾವುದೇ ಬಗೆಯ ಔಪಚಾರಿಕ ಶಿಕ್ಷಣವನ್ನು ಪಡೆಯದ ಈಕೆ ತಾವು ಕಲ್ಲು ಗಣಿಯೊಂದರಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು.

ತಮ್ಮದೇ ಊರಿನಲ್ಲಿ ದನಗಳನ್ನು ಕಾಯುತ್ತಿದ್ದ ಚಿಕ್ಕಯ್ಯ ಎಂಬುವವನೊಡನೆ ವಿವಾಹವಾದ ತಿಮ್ಮಕ್ಕನವರಿಗೆ ದುರಾದೃಷ್ಟವಶಾತ್ ಮಕ್ಕಳಾಗಲಿಲ್ಲ. ಆದರೆ ಎಲ್ಲರಂತೆಯೇ ಅದನ್ನೊಂದು ಕೊರಗು ಎಂದುಕೊಂಡು ತಿಮ್ಮಕ್ಕನವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಬದಲಾಗಿ ಆಲದ ಸಸಿಗಳನ್ನು ಸಾಲು ಸಾಲಾಗಿ ನೆಡಲು ಮೊದಲು ಮಾಡಿದರು.

ಮೊದಲ ವರ್ಷದಲ್ಲಿ ಕುದೂರು ಬಳಿಯ ಹೆದ್ದಾರಿಯ 4 ಕಿಲೋಮೀಟರ್ ಅಂತರದಲ್ಲಿ 10 ಸಸಿಗಳನ್ನು ನೆಟ್ಟಂತಹಾ ತಿಮ್ಮಕ್ಕ ಎರಡನೇ ವರ್ಷ 15, ಮೂರನೇ ವರ್ಷ 20, ಹೀಗೆ ಸಸಿಗಳನ್ನು ನೆಡುತ್ತಾ ಹೋದರು. ತಿಮ್ಮಕ್ಕ ನವರ ಪತಿ ಚಿಕ್ಕಯ್ಯ ರವರೂ ತಮ್ಮ ಪತ್ನಿಯ ಕಾಯಕದಲ್ಲಿ ಕೈ ಜೋಡಿಸಿದರು. ಸಸಿಗಳಿಗೆ ನೀರುಣಿಸುವುದಲ್ಲದೆ, ಸಸಿಗಳನ್ನು ಜಾನುವಾರುಗಳಿಂದ ರಕ್ಷಿಸುವ ಸಲುವಾಗಿ ಅವುಗಳ ಸುತ್ತ ಮುಳ್ಳಿನ ಪೊದೆಗಳಾನ್ನು ಹೊದ್ದಿಸಿ ಕಾಪಾಡಿದರು.

ಸಸಿಗಳ ಬೆಳವಣಿಗೆಗೆ ನೀರಿನ ಅವಶ್ಯಕತೆಯಿದ್ದ ಕಾರಣದಿಂದ ಮಳೆಗಾಲದ ಸಮಯದಲ್ಲಿಯೇ ಸಸಿಗಳನ್ನು ನೆಡುತ್ತಿದ್ದರು, ಆ ಸಸಿಗಳು ಮುಂದಿನ ಮಳೆಗಾಲದ ಸಮಯದಲ್ಲಿ ಆ ಎಲ್ಲಾ ಸಸಿಗಳು ಚೆನ್ನಾಗಿ ಬೆಳೆದು ನೆಲದಲ್ಲಿ ಆಳವಾಗಿ ಬೇರು ಬಿಟ್ಟಿರುತ್ತಿದ್ದವು. ಬೇಸಿಗೆಯ ಸಮಯದಲ್ಲಿ ಸಸಿಗಳಿಗೆ ನೀರಿನ ಕೊರತೆಯಾಗಲು ಕೆಲವೊಮ್ಮೆ ತಿಮ್ಮಕ್ಕ ದಂಪತಿಗಳು ನಾಲ್ಕು ಕಿಲೋಮೀಟರ್ ದೂರದಿಂದ ಕೊಳಗಗಳಲ್ಲಿ ನೀರನ್ನು ತಂದು ಸಸಿಗಳಿಗೆ ನೀರುಣಿಸುತ್ತಿದ್ದರು.

ಹೀಗೆ ತಿಮ್ಮಕ್ಕ ದಂಪತಿಗಳು ತಾವು ಮಕ್ಕಳಿಲ್ಲದ ಕೊರಗನ್ನು ನೀಗಲು ಅನುಸರಿಸಿದ ದಾರಿಯಿಂದಾಗಿ ಇಂದು 4 ಕಿಲೋಮೀಟರ್ ಅಂತರದಲ್ಲಿ ಒಟ್ಟು 284 ಸಾಲು ಮರಗಳು(ಇದೀಗ ಈ ಮರಗಳ ನಿರ್ವಹಣೆಯನ್ನು ರಾಜ್ಯ ಸರಕಾರ ವಹಿಸಿಕೊಂಡಿದೆ.) ಬೆಳೆದು ನಿಂತು ಆ ಮಾರ್ಗವಾಗಿ ಸಾಗುವ ಪ್ರಯಾಣಿಕರಿಗೆ ನೆಮ್ಮದಿಯ ನೆರಳು ನೀಡುತ್ತಿವೆ. ಕೇವಲ ಆತ್ಮ ಸಂತೋಷಕ್ಕಾಗಿ ಮರಗಳನ್ನು ಬೆಳೆಸುವ ಕಾಯಕಕ್ಕಿಳಿದ ತಿಮ್ಮಕ್ಕ ತಾವು ಎಂದಿಗೂ ಪ್ರಚಾರ ಬಯಸಿದವರಲ್ಲ. ಪ್ರಶಸ್ತಿ, ಪುರಸ್ಕಾರಗಳಿಗಾಗಿ ಹಂಬಲಿಸಿದವರಲ್ಲ. ಆದರೆ ತಿಮ್ಮಕ್ಕನವರ ನಿಸ್ವಾರ್ಥ ಸೇವೆ, ಅದು ತನ್ನಿಂದ ತಾನು ಜನರ ಮದ್ಯೆ ಪಸರಿಸಿ ಅವರನ್ನು ಜನಪ್ರಿಯಗೊಳಿಸಿತು.

ಪ್ರಶಸ್ತಿ-ಪುರಸ್ಕಾರಗಳು : ಹಲವಾರು ಪ್ರಶಸ್ತಿ-ಪುರಸ್ಕಾರಗಳು ಅರಸಿ ಬಂದವು. ತಿಮ್ಮಕ್ಕ ಬೀಗಲಿಲ್ಲ, ತಾವು ಮಾಡುವ ಕೆಲಸವನ್ನು ನಿಲ್ಲಿಸಲಿಲ್ಲ. ಮರಗಳೆಂಬ ಮಕ್ಕಳನ್ನು ನಿರಂತರವಾಗಿ ಬೆಳೆಸುತ್ತಲೇ ಹೋದರು, ಅಕ್ಕರೆಯಿಂದ, ಪ್ರೀತಿಯಿಂದ, ತಾಯಿಯಂತೆ ಪ್ರತಿಯೊಂದು ಸಸಿಗಳನ್ನು ಜೋಪಾನ ಮಾಡುತ್ತಾ ಅದರಿಂದಲೇ ಆತ್ಮ ಸಂತೃಪ್ತಿಯನ್ನು ಕಂಡುಕೊಂಡರು. ನೂರಾರು ಜನರಿಗೆ ಸ್ಪೂರ್ತಿಯ ಚಿಲುಮೆಯಾದರು, ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ ಎಂದು ಖ್ಯಾತರಾದರು.

ತಿಮ್ಮಕ್ಕ ನವರ ಮರಗಳ ಪೋಷಣೆ ಕಾರ್ಯವನ್ನು ಗಮನಿಸಿ ರಾಶ್ಟ್ರೀಯ, ಅಂತರಾಷ್ಟ್ರೀಯ ಸಂಘ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ. 1995ರಲ್ಲಿ ರಾಷ್ಟ್ರೀಯ ಪೌರ ಪ್ರಶಸ್ತಿ, 1997ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, ವೀರ ಚಕ್ರ ಪ್ರಶಸ್ತಿ, ಕರ್ನಾಟಕ ಸರಕಾರದ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯಿಂದ ಪ್ರಮಾಣ ಪತ್ರ, ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಿಂದ ಶ್ಲಾಘನೆಯ ಪ್ರಮಾಣ ಪತ್ರ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಗಾಡ್‌ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ. ಹಂಪಿ ವಿಶ್ವವಿದ್ಯಾನಿಲಯದಿಂದ "ನಾಡೋಜ" ಗೌರವ, ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಸಹ ಭಾಜನರಾಗಿದ್ದಾರೆ. ಹೀಗೆ ತಿಮ್ಮಕ್ಕ ನವರು ಹತ್ತಾರು ರಾಷ್ಟ್ರ ಮಟ್ಟದ, ರಾಜ್ಯ ಮಟ್ಟದ ಪ್ರಶಸ್ತಿ ಗಳಿಸಿದ್ದಾರೆ

ತಮ್ಮ ಕೆಲಸಗಳಿಂದಾಗಿ ಅಂತರಾಷ್ಟ್ರೀಯವಾಗಿಯೂ ಗುರುತಿಸಿಕೊಂಡಿರುವ ತಿಮ್ಮಕ್ಕನವರಿಗೆ ಅನೇಕ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಸಂದಿವೆ, ಸಾಲುಮರದ ತಿಮ್ಮಕ್ಕ ತನ್ನ ನಿಸ್ವಾರ್ಥ ಕರ್ಮದ ಮೂಲಕ ಜನಜನಿತರಾಗಿದ್ದಾರೆ. ಅಷ್ಟೇ ಅಲ್ಲ. ಪರಿಸರ ರಕ್ಷಣೆಯ ಕಾಯಕದ ಜತೆ ಜತೆಗೆ ಸಮಾಜ ಸೇವಾ ಕೈಂಕರ್ಯವನ್ನು ತಿಮ್ಮಕ್ಕ ನಡೆಸಿಕೊಂಡು ಬರುತ್ತಿದ್ದಾರೆ. 1991ರಲ್ಲಿ ತಮ್ಮ ಪತಿ ತೀರಿ ಹೋದ ಬಳಿಕ ತಿಮ್ಮಕ್ಕ ಬದುಕು ಸಮಾಜ ಕಾಯಕಕ್ಕೆ ಮೀಸಲಾಗಿದೆ.

ತಮಗೆ ಯಾರಾದರೂ ಹಣ ಸಹಾಯ ಮಾಡಿದರೆ ಅದನ್ನು ಸಮಾಜದ ಕೆಲಸಕ್ಕೆ ಉಪಯೋಗಿಸುವತಿಮ್ಮಕ್ಕನವರ ನಿಸ್ಪೃಹ ಸೇವೆಯನ್ನು ಯಾರೇ ಆದರೂ ಮೆಚ್ಚದಿರಲು ಸಾಧ್ಯವೆ? ಸಹಾರ ವಿಮಾನ ಸಂಸ್ಥೆಯು ವೃಕ್ಷಮಾತೆಗೆ ನಗದು ಸಹಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕೇಂದ್ರ ಸರಕಾರವು ರಾಷ್ಟ್ರೀಯ ನಾಗರಿಕ ಪ್ರಶಸ್ತಿ ನೀಡಿದೆ. ಆದರೆ ತಿಮ್ಮಕ್ಕನವರು ಈ ಹಣವನ್ನು ತಮ್ಮ ಹಳ್ಳಿಯಲ್ಲಿ ನಿರ್ಮಿಸಲಾಗುತ್ತಿರುವ ಹೆರಿಗೆ ಆಸ್ಪತ್ರೆಯ ಕಟ್ಟಡದ ನಿರ್ಮಾಣ ಕಾರ್ಯಕ್ಕೆ ನೀಡಿದ್ದಾರೆ. ತಾವೊಬ್ಬ ಅನ್ಕ್ಷರಸ್ಥೆಯಾಗಿದ್ದು ಸಮಾಜದ ಒಳಿತಿಗಾಗಿ ಸತತ ಸುಡಿಯುವ ತಿಮ್ಮಕ್ಕ ನವರ ಸಂಸ್ಕಾರವಂತ ಜೀವನ ಇಂದಿನ ವಿದ್ಯಾವಂತರಿಗೆಲ್ಲರಿಗೂ ಮಾದರಿಯಾಗಬಲ್ಲುದು.ತನಗೆ ಎಷ್ಟು ಬೇಕೋ ಅಷ್ಟನ್ನು ಪಡೆದುಕೊಂಡು ಉಳಿದುದನ್ನು ಸಮಾಜಕ್ಕೆ ಉಪಯೋಗಿಸುವ ತಿಮ್ಮಕ್ಕನವರ ಬದುಕು ಅರ್ಥಪೂರ್ಣವಾದುದು. ಇವರ ಬದುಕು, ಕಾಯಕ, ವಿಚಾರಧಾರೆ ಮುಂದಿನ ಪೀಳಿಗೆಗೆ ದಾರಿದೀಪವಾಗಲಿ.

ಇಂತಹಾ ವೃಕ್ಷ ಮಹಿಳೆಗೆ ಅಂತರಾಷ್ಟ್ರೀಯ ಮಹಿಳಾ ದಿನದ ಈ ಸಂದರ್ಭದಲ್ಲಿ ನಮ್ಮದೊಂದು ಸಲಾಮ್ ಇರಲಿ....

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Saalumarada Thimmakka self styled environmentalist, An illiterate lady, green warrior from Karnataka. Her untiring efforts in planting and tending to 284 banyan trees on Kudur Road (Tumkur Dist). On the occasion of world women day (2014) Oneindia acknowledge her selfless contribution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more