• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಿಳಾ ದಿನಾಚರಣೆ ಬಗ್ಗೆ ಮಹಿಳೆಯರಿಗೆಷ್ಟು ಗೊತ್ತು?

By ವಾಣಿ ರಾಮದಾಸ್, ಸಿಂಗಪುರ
|

"ಹ್ಯಾಪಿ ವುಮೆನ್ಸ್ ಡೇ" ಎಂದು ಶುಭ ಕೋರಿದರು ಒಬ್ಬ ಹಿತಚಿಂತಕರು. ವಿದ್ಯೆ, ಕ್ರೀಡೆ, ರಾಜಕೀಯ, ಕಲೆ ಹೀಗೆ ಬಹುತೇಕ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮನಾಗಿ ನಿಂತು ಸ್ವತಂತ್ರರಾಗಿ, ಸ್ವಾವಲಂಬಿಗಳಾಗಿ ಬದುಕುತ್ತಿರುವ ಮಹಿಳೆಯರ ನೆನಪಾಗಿ ಮನ ಹರುಷಗೊಂಡಿತು. ಅಂಥವರು ಬೆರಳೆಣಿಕೆಯಷ್ಟು ಮಾತ್ರ. ಆದರೆ ನಿತ್ಯ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯ, ಭ್ರೂಣ ಹತ್ಯೆ, ವೇಶ್ಯಾವಾಟಿಕೆ, ಆಸಿಡ್ ದಾಳಿ, ವರದಕ್ಷಿಣೆ ಹಿಂಸೆ, ಬಲಿ ಇವೂ ಕಣ್ಮುಂದೆ ಹಾಯ್ದು 'ಮಹಿಳಾ ದಿನಾಚರಣೆ'ಗೆ ಅರ್ಥವಿದೆಯೇ ಎಂಬ ಕಟುಸತ್ಯ ಮನವನು ಇರಿಯಿತು. ಈ ದಿನಾಚರಣೆ ಬರೀ ಕ್ಯಾಲೆಂಡರ್‍, ಸಭೆ-ಸಮಾರಂಭಗಳಲ್ಲಿ ನಡೆಸುವ ಒಂದು ದಿನದ ಆಚರಣೆ ಮಾತ್ರ. ಈ ದಿನದ ಬಗ್ಗೆ ಅದೆಷ್ಟು ಮಹಿಳೆಯರಿಗೆ ಗೊತ್ತು?

ಮಹಿಳಾ ದಿನಾಚರಣೆ ಹಬ್ಬವೂ ಅಲ್ಲ, ಆನಂದದಿಂದ ಆಚರಣೆಗೊಂಡ ದಿನವೂ ಅಲ್ಲ. ನ್ಯೂಯಾರ್ಕ್‍ನಲ್ಲಿ ಕ್ಲಾರಾ ಜೆಟ್‍ಕಿನ್ ಎಂಬ ಮಹಿಳಾ ಕಾರ್ಮಿಕೆ ಕೆಲಸಕ್ಕಾಗಿ, ಸಮಾನ ವೇತನಕ್ಕಾಗಿ, ಹೆರಿಗೆ ಸೌಲಭ್ಯಕ್ಕಾಗಿ ತಿಂಗಳುಗಟ್ಟಲೆ ಹೋರಾಟ ನಡೆಸಿ ಗೆಲುವು ಸಾಧಿಸಿದ ದಿನ. ಹುಟ್ಟಿನಿಂದ ಸಾಯುವವರೆಗೂ ದಿನ ನಿತ್ಯ ಒಂದಿಲ್ಲೊಂದು ಸಂಘರ್ಷದಲ್ಲಿ ಬಿದ್ದು ಸಾಧಿಸಲು ಪ್ರಯತ್ನ ಪಡುತ್ತಿರುವ, ಸಂಘರ್ಷದಿಂದ ಸಾಧಿಸಿದ ದಿನದ ಒಂದು ಸ್ಮರಣೆಯ ದಿನ ಮಾತ್ರ.

ವಿಶ್ವಸಂಸ್ಥೆ 1975ರಲ್ಲಿ ಈ ದಿನವನ್ನು "ವಿಶ್ವ ಮಹಿಳಾ ದಿನ" ಎಂದು ಘೋಷಿಸಿತು. ದುಡಿವ ಮಹಿಳೆಯರನ್ನು ಗೌರವಿಸಿ, ಪ್ರೋತ್ಸಾಹ ನೀಡುವುದಕ್ಕೆ "ಮಹಿಳಾ ದಿನ" ಆಚರಿಸಲಾಗುತ್ತದೆ. ಇದು ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಯ ಸಂಕೇತ ದಿನ. [ಸಹನೆಯ ಸಾಕಾರ ಮೂರ್ತಿಗಿರಲಿ ನಮ್ಮದೊಂದು ಸಲಾಮ್]

21ನೆಯ ಶತಮಾನದಲ್ಲಿ ಮಹಿಳೆ ಪಾತ್ರ ಬದಲಾಗಿದೆ. ವೃತ್ತಿ, ಸಂಸಾರ ಎರಡನ್ನೂ ನಿಭಾಯಿಸಬಲ್ಲೆ ಎಂದು ಮಾದರಿಯಾಗಿ ನಿಂತಿದ್ದಾಳೆ. ಹೆಣ್ಣು ಇದೀಗ ಕಷ್ಟವಿದ್ದಲ್ಲಿ ಗೊಳೋ ಎಂದು ಅಳುವ ಅಳುಮುಂಜಿಯಾಗಿಲ್ಲ. ದಿಟ್ಟೆಯಾಗಿ ಜೀವನದ ಪ್ರತಿಯೊಂದು ಸಮಸ್ಯೆಯನ್ನೂ ಪರಿಹರಿಸಿಕೊಳ್ಳುವ ಶಕ್ತಿ ತನ್ನಲ್ಲೂ ಇದೆ ಎಂದು ತೋರಿಸಿಕೊಟ್ಟಿದ್ದಾಳೆ. ಬದುಕು ಎಂದರೆ ನೋವು ನಲಿವುಗಳ ಸಮ್ಮಿಲನ. ಆದರೆ ಹೆಣ್ಣಿನ ಬದುಕು ಅಂದರೆ ಅದು ಕೇವಲ ನೋವುಗಳ ಸಂಕಲನ. ಬುದ್ಧಿವಂತಿಕೆ, ಪರಿಶ್ರಮ, ಕ್ರೀಯಾಶಿಲತೆ, ನೋವು ನುಂಗುವ ಶಕ್ತಿ ಮತ್ತು ಸಂಘಟನೆಯಲ್ಲಿ ತಾನು ಮುಂದು ಎಂದು ಹೆಣ್ಣು ತೋರಿಸಿಕೊಟ್ಟಿದ್ದಾಳೆ.

ಬಹುತೇಕ ಪ್ರಮುಖ ಹುದ್ದೆಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ರಾರಾಜಿಸುತ್ತಿದ್ದಾಳೆ. ಇವತ್ತು ಮಹಿಳೆ ಉತ್ತಮ ಶಿಕ್ಷಣ ಪಡೆಯುತ್ತಿದ್ದಾಳೆ. ಒಳಮನೆ ಮಾತ್ರವೇ ಅಲ್ಲ ಹೊರ ಜಗತ್ತಿನ ಅರಿವೂ ಆಕೆಗೆ ಆಗಿದೆ. ಯಾರನ್ನು ಹೇಗೆ ಎಲ್ಲಿ ನಿಭಾಯಿಸಬೇಕೆಂಬ ಕಲೆಯೂ ಕರಗತವಾಗಿದೆ. ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ತಾಳ್ಮೆ ಮತ್ತು ಚಾಕಚಕ್ಯತೆ ಆಕೆಯ ರಕ್ತದಲ್ಲೇ ಇದೆ. ಅದಕ್ಕೀಗ ವೇದಿಕೆ ದೊರಕುತ್ತಿದೆಯಷ್ಟೆ. ಆದರೆ ಇಡೀ ದಿನ ಮನೆಯಲ್ಲಿ ದುಡಿಯುವ ಹೆಂಡತಿ/ತಾಯಿ/ಅಕ್ಕ-ತಂಗಿಯರ ಪರಿಶ್ರಮಕ್ಕೂ ಒಂದು ಪ್ರೋತ್ಸಾಹ, ಶಹಬಾಸ್‍ಗಿರಿ ಸಿಗಬೇಕು, ಹೌದಲ್ಲವೇ? [ಅಂದು ಉಪನ್ಯಾಸಕಿ, ಇಂದು ಸಾಹಿತ್ಯ ಪ್ರಸಾರಕಿ]

ಮಹಿಳಾ ಸಬಲೀಕರಣ ಎಂಬುದು ಒಂದು ಪ್ರಬಲ ಅಂಶ ಹುಟ್ಟಿಕೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ಮುನ್ನಡೆದಿದ್ದರೂ ಅವಳ ಸ್ಥಿತಿಗತಿ, ಸ್ಥಾನಮಾನ, ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಮೇಲಕ್ಕೇರಿಸುವುದು ಹೆಚ್ಚು ಸಾಧ್ಯವಾಗಿಲ್ಲ. ಇದಕ್ಕೆ ಕಾರಣಗಳು ಹಲವಾರು ಇದ್ದರೂ ಉತ್ತರ ಅತ್ಯಂತ ಸರಳ. ಮಹಿಳಾ ಅಭಿವೃದ್ಧಿ ಎಂದಾಕ್ಷಣ ಕೇವಲ ಬೆರಳೆಣಿಕೆಯ ಮಹಿಳೆಯರಿಗೆ ಅವಕಾಶ ಕಲ್ಪಿಸುವುದು, ಸಬಲೀಕರಣ ಎಂದಾಕ್ಷಣ ಗಂಡನನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವುದು ಎಂದರ್ಥವಲ್ಲ. 'ಮಹಿಳಾ ಪರ ಸಂಘರ್ಷ' ಎನ್ನುವುದು ಒಂದು ದಿನದ ಕಾರ್ಯಕ್ರಮ ಮಾಡಿ ಮುಗಿಸುವಂತದ್ದಲ್ಲ.

'ದೆಹಲಿ ಅತ್ಯಾಚಾರ ಘಟನೆ ಸಾಂಕೇತಿಕ ಮಾತ್ರ. ಈಗಾಗಲೇ ಸಾಕಷ್ಟು ಅತ್ಯಾಚಾರ ಪ್ರಕರಣಗಳು ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಉಳಿದಿವೆ. ತ್ವರಿತ ನ್ಯಾಯಾಲಯಕ್ಕೆ ರವಾನಿಸಿ, ಅಪರಾಧಿಗಳಿಗೆ ಬೇಗನೇ ಶಿಕ್ಷೆ ಕೊಡುವಂತಾಗಬೇಕು. ಅದಕ್ಕಾಗಿಯೇ ಒಂದು ಕಾನೂನನ್ನು ಜಾರಿಗೊಳಿಸಬೇಕು'. ಶಿಕ್ಷಣ, ಆರ್ಥಿಕ ಸಬಲೀಕರಣ ಸಾಧಿಸಿ ಸ್ವಾವಲಂಬಿ ಬದುಕು ನಡೆಸುತ್ತಿರುವ ಮಹಿಳೆ ಇನ್ನೂ ಮೀಸಲಾತಿಯಡಿಯಲ್ಲಿ ದುಡಿಯಬೇಕಾದ ಅನಿವಾರ್ಯತೆ. ಮಹಿಳೆಯರಿಗೆ ಹಕ್ಕು, ಹಿತರಕ್ಷಣೆ, ಜಾಗತಿಕ ಮಟ್ಟದಲ್ಲಿ ತಿಳಿವಳಿಕೆ, ಶಿಕ್ಷಣ, ತರಬೇತಿ, ವಿಜ್ಞಾನ, ತಂತ್ರಜ್ಞಾನಕ್ಕೆ ನೆರವು ನೀಡಿ, ಸಮಾಜದಲ್ಲಿ ಸಮಾನತೆಯ ವೈಶಿಷ್ಟ್ಯಪೂರ್ಣ ಬದಲಾವಣೆಗಳಿಗೆ ಅವಕಾಶ ಕಲ್ಪಿಸಬೇಕು.

ಉದ್ಯೋಗ ಕ್ಷೇತ್ರದಲ್ಲಿ ಹೆಣ್ಣು ಗಂಡಿಗೆ ಸರಿಸಮಾನ ಎಂದು ತೋರಿಸಿಕೊಂಡಿದ್ದರೂ, ಹಲವೆಡೆಗಳಲ್ಲಿ ಇನ್ನೂ ನಡೆಯುತ್ತಿರುವ ಲಿಂಗ ತಾರತಮ್ಯ, ಹೆಣ್ಣು ಭ್ರೂಣಹತ್ಯೆ, ಅತ್ಯಾಚಾರ ಇವುಗಳನ್ನು ತಡೆಯಬೇಕು. ವಿಶ್ವಾಸ, ಪ್ರೀತಿ, ಮಮತೆ, ನಂಬಿಕೆ, ನೈತಿಕ ಮೌಲ್ಯಗಳು ನಮ್ಮ ಸಮಾಜದ ಕಣ್ಣುಗಳಾಗಬೇಕು. ಮಹಿಳೆಯರ ಸಾಧನೆಗೆ ಪ್ರೋತ್ಸಾಹ ನೀಡಬೇಕು. ಇದಕ್ಕೆ ಪುರುಷರ ನೈತಿಕ ಬೆಂಬಲ ದೊರಕಬೇಕು.

'ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ತತ್ರ ದೇವತಾಃ' ಎಂಬ ಮಾತು ಕೇವಲ ಮಾತಾಗಿಯೇ ಇರಬಾರದು, ಅದನ್ನು ಆಚರಣೆಗೆ ತರಬೇಕು. ಆಗ ಮಾತ್ರ ಈ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಒಂದು ಒಳ್ಳೆಯ ಸ್ಥಾನ ಸಿಗಲು ಸಾಧ್ಯ. ಹೀಗಾದಲ್ಲಿ ಮಾತ್ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ದೇಶ ಅರ್ಥಪೂರ್ಣ. ಮಹಿಳೆಯರಿಗೆ "ಮಹಿಳಾ ದಿನಾಚರಣೆಯ ಶುಭಾಶಯಗಳು".

English summary
Why should women's day be celebrated? How many people, especially women know about the significance of liberation of women? Vani Ramdas from Singapore throws light on the status women are enjoying and plight they are suffering.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X