ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಂದರಿ, ಕೊನೆಗೂ ಸಿಕ್ಕಿದೆ ನಿನ್ನ ಪ್ರಶ್ನೆಗೆ ಉತ್ತರ!

By ಅಂಜಲಿ ರಾಮಣ್ಣ
|
Google Oneindia Kannada News

Why are you happy to be woman?
ಹೂಂ, ಹೀಗೊಂದೂರು. ಅಲ್ಲೊಂದು ಕಾಲೇಜು. "ಬನ್ನಿ ನಮ್ಮ ಮಕ್ಕಳ ತಲೆನೂ ತಿನ್ನಿ" ಅಂತ ಕರೆದಾಗ ನಾ ಹೋದೆ. ಆ ಮಾತು ಈ ಮಾತು ಮತ್ತೇನೇನೋ ಮಾತುಗಳಾಯ್ತು. ಸುಂದರ ಹುಡುಗಿಯೊಬ್ಬಳು ಎದ್ದು ನಿಂತು ಕೇಳಿದಳು "ಮೇಡಂ, ನೀವು ಹೆಣ್ಣು ಅಂತ ಸಂತೋಷ ಪಡೋದಕ್ಕೆ ಏನಾದ್ರು ಒಂದು ಕಾರಣ ಹೇಳಿ" ಅಂತ.

ವೇದಿಕೆಯ ಮೇಲೆಯೇ ನಾ ತಬ್ಬಿಬ್ಬಾದೆ. ಯಾಕಂದ್ರೆ, ಇನ್ನೇನೋ ಆಗದೆ ಹೆಣ್ಣಾದೆ ಸದ್ಯ ಅಂತ ನಾ ಎಂದೂ ಸಂಭ್ರಮ ಪಟ್ಟಿರಲಿಲ್ಲ. ನಾ ಏನೋ ಅದು ನನಗೆ ಅತ್ಯಂತ ಸಹಜವಾಗಿತ್ತು ಮತ್ತು ನಾ ಹಾಗೆಯೇ ಸುಖಿಯೂ ಹೌದು. ತುಟಿಬಿರಿಸುತ್ತಾ ಒಂದುತ್ತರ ಕೊಟ್ಟು, ಹೂಗುಚ್ಛ ಹಿಡಿದು ಮನೆ ದಾರಿ ಹಿಡಿದೆ. ಹಾದಿಯುದ್ದಕ್ಕೂ ಕಣ್ಣೇನೋ ಮುಚ್ಚಿತ್ತು. ಆದರೆ ಈ ಮನಕ್ಕೆ ನಿದ್ರಿಸಿ ತಿಳಿದಿಲ್ಲವಲ್ಲ. ಕಿವಿಯಂತೂ ಆ ಯುವತಿಯ ಪ್ರಶ್ನೆಗೆ ಗೋಳಗುಂಬಜ಼್‌ನಂತಾಗಿತ್ತು. ಹೌದಲ್ಲ, ನಾ ಸಂತೋಷಪಡೋಕ್ಕೆ ಏನಿದೆ ಕಾರಣ? ಈ ಹೆಣ್ಣು ದೇಹದೊಳಗಿನ ಒಬ್ಬ ಸ್ವಸ್ಥ ಮನುಷ್ಯ ನಾನು ಅನ್ನೋದಷ್ಟೇ ಸಾಲದೇನು ನನ್ನ ಖುಷಿಗೆ, ಬದುಕಿಗೆ?

ನನ್ನ ಪಪ್ಪ ಅಮ್ಮನಿಗೆ ಇರೋದು ಬರೀ ಹೆಣ್ಣು ಮಕ್ಕಳು. ಆದರೆ ಅವರೆಂದೂ ನಮ್ಮನ್ನು ಮಕ್ಕಳಂತೆ ಮಾತ್ರ ಬೆಳೆಸಿದರು. ತುಂಬು ಕುಟುಂಬದ ಅಣ್ಣತಮ್ಮಂದಿರ ನಡುವೆ ಬೆಳೆದೆ, ಬಾಲ್ಯವಂತೂ ಬರೀ ಗೆಳೆಯರಿಂದ ತುಂಬಿತ್ತು. ನಾ ಹೆಣ್ಣು ಅನ್ನುವ specific ಭಾವವೇ ಬರಿಸದಂತಿತ್ತು ಬಾಳು. ಹೆಣ್ಣು ಎನ್ನುವ ಒಂದೇ ಕಾರಣಕ್ಕೆ ನಾ ಎಲ್ಲೂ ತಾತ್ಸಾರಕ್ಕೆ ಒಳಗಾಗಿರಲಿಲ್ಲ. ಅತೀ ಸಂರಕ್ಷಣೆಗೆ ಆತುಕೊಂಡಿರಲಿಲ್ಲ. ಹೆಚ್ಚು ಪ್ರೀತಿಗೂ ಪಾತ್ರಳಾಗಿರಲಿಲ್ಲ. ಸೆಕ್ಷುಯೆಲ್ ಹಿಂಸೆ ಅನ್ನೋದೆಲ್ಲಾ ಆ ದಿನಗಳ ನಿಘಂಟಿನಲ್ಲೂ ಇರಲಿಲ್ಲ. ಒಂದು ನವಿರಾದ ನಾರ್ಮಲ್ ಜೀವನ ಅದು. ಎಷ್ಟೋ ಜನಗಳಿಗೆ ಆಗೋ ಹಾಗೇ ನನಗೂ ಮದುವೆ ಆಯ್ತು. ಈ ಮನೆಯ ಬಳಗದವರ ಮನೆಯ ಹಿರಿಸೊಸೆ ಚೊಚ್ಚಲ ಬಸುರಿ ದೂರದೇಶದಲ್ಲಿದ್ದಳು.

ಆ ಹಿರಿಯರ ಮನೆಯಲ್ಲಿ ಕಾಲುಚಾಚಿ ಟೀವಿ ನೋಡುತ್ತಾ ಕೂತಿದ್ದೆ. ಕೋಣೆಯಲ್ಲಿ ಹಿರಿ ದಂಪತಿಗಳು ಮಧ್ಯಾಹ್ನದ ಸಿಹಿ ನಿದ್ದೆಯಲ್ಲಿದ್ದರು. ಮಯೂರ ಓದುತ್ತಿದ್ದ ಆಂಟಿ ಅಲ್ಲಿಂದಲೇ ನನ್ನ ಕೂಗಿ "ನೋಡು, ಅಭಿಸಾರಿಕೆ ಅನ್ನೋ ಹೆಸರು ಎಷ್ಟು ಚೆನ್ನಾಗಿದೆ" ಅಂದರು. ನಾ ಪೂರ್ತಿಯಾಗಿ "ಹೂಂ" ಅನ್ನುವುದರೊಳಗೇ ಅಂಕಲ್ "ಶ್! ಸೊಸೆಗೆ ಹೆರಿಗೆ ಆಗುವವರೆಗೂ ಮನೆಯಲ್ಲಿ ಹೆಣ್ಣು ಮಕ್ಕಳ ಹೆಸರು ಹೇಳಬೇಡಿ" ಅಂದರು. ಅಲ್ಲಿಂದ ನನ್ನ ಮನಸ್ಸಿಗೆ ಹೆಣ್ಣು ಎನ್ನುವ ಕಸಿವಿಸಿ ಹಂತಹಂತವಾಗಿ ಅಂಟ್ಕೋತಾ ಹೋಯ್ತು. ಆಮೇಲೆ ದೂರದೇಶದಿಂದ ಬಂದ ಗರ್ಭಿಣಿಗೆ ನಮ್ಮೂರಲ್ಲೇ ಪ್ರಸವ. ಮುದ್ದಿನ ಮೂಟೆಯನ್ನು ಕೈಗಿಡುತ್ತಾ ನರ್ಸ್ "ಹೆಣ್ಣು ಮಗು" ಅಂದಾಗ , ಕೂಸಿನ ಅಪ್ಪ ತಕ್ಷಣವೇ "ಪರವಾಗಿಲ್ಲಾ ನಮಗೆ ಎಲ್ಲಾನೂ ಒಂದೇ" ಅಂದ. ನನಗೋ ಮಗು ಎಂದರೆ ಅದು ಹೆಣ್ಣೂ ಅಲ್ಲ ಗಂಡೂ ಅಲ್ಲ ಅದೊಂದು ಪರಿಮಳ ಅಷ್ಟೆ. ಅದಕ್ಕೇ ನನಗೇನೋ ಗೊಂದಲ. ಇದೇ ಮಗು ಗಂಡಾಗಿದ್ದಿದ್ದರೆ ಪ್ರತಿಕ್ರಿಯೆ ಏನಿರುತ್ತಿತ್ತು ಅಂತ ರಾತ್ರಿಯೆಲ್ಲಾ ನಿದ್ದೆಗೆಟ್ಟೆ.

ಮುಂದೊಂದಿನ ನಾ ಬಸಿರಾದೆ. ಹೆಣ್ಣು ಗಂಡು ಅನ್ನೋ ಬೇಧ ಯಾಕೆ ಅಂತ ಪ್ರಶ್ನಿಸಿ ತನ್ನ ಮಿತಿಯಲ್ಲೇ ಎಷ್ಟೋ ಕ್ರಾಂತಿಗಳನ್ನು ಮಾಡಿದ್ದ ಅಮ್ಮ ಕೂಡ "ನಿನಗೆ ಗಂಡು ಮಗು ಆಗಿಬಿಡ್ಲಿ. ಇಲ್ಲದಿದ್ದರೆ ತಾಯಿಯಂತೆ ಮಗಳು ಅಂದಾರು ನಿಮ್ಮತ್ತೆ ಮನೆಯವರು" ಅಂದಳು. ನನ್ನಮ್ಮನಂತೆಯೇ ಆದರೆ ನಾನು ಮಾತ್ರ ಏನು, ಇಡೀ ಜಗತ್ತೇ ಅಭಿಮಾನ ಪಡುವಂಥ ವ್ಯಕ್ತಿತ್ವದ ಅಮ್ಮನೂ ಹೀಗಂದಿದ್ದು ನನ್ನನ್ನು ಕಂಗಾಲುಗೊಳಿಸಿತ್ತು. ಸೀಮಂತದ ದಿನ ಮೂರು ಜನ ಯಶಸ್ವೀ ಹೆಣ್ಣು ಮಕ್ಕಳ ಹಿರಿಯರೊಬ್ಬರಿಗೆ ನಮಸ್ಕರಿಸಿದೆ. ಅವರು ಕೂಡ "ಗಂಡು ಮಗುವಾಗಲಿ" ಎಂದು ಅಶೀರ್ವಾದ ಮಾಡಿದಾಗ ರೋಮ ರೋಮಕ್ಕೂ ಆಂಟ್ಯಾಸಿಡ್ ಮೆತ್ತಿಕೊಳ್ಳುವಷ್ಟು ಉರಿದೆ.

ನಡೆನಡೆಯಲ್ಲಿ ನಾ ಗಮನಿಸಿದ ಮತ್ತೊಂದು ರೋಸಿಹೋಗುವಂಥ ವಿಷಯ ಅಂದ್ರೆ, ಹೆಣ್ಣು ಮಕ್ಕಳ ತಾಯ್ತಂದೆಯರೆಲ್ಲಾ ನಿರ್ಭಯರಾಗಿ "ನಮಗೆ ಹೆಣ್ಣು ಮಕ್ಕಳೇ ಬೇಕಿತ್ತು. We are very happy" ಅಂತ ಹೇಳಿಕೊಳ್ಳ್ತಾರೆ. ಆದರೆ ಗಂಡು ಮಕ್ಕಳ ಹೆತ್ತವರೊಬ್ಬರೂ ನಮಗೆ ಗಂಡು ಮಕ್ಕಳೇ ಬೇಕಿತ್ತು ಅಂತ ಎಂದೂ ಹೇಳದ್ದು. ಎಷ್ಟೋ ತಾಯಂದಿರಂತೆ ನಾ ಕೂಡ ಎರಡು ಆರೋಗ್ಯವಂತ ಗಂಡು ಮಕ್ಕಳನ್ನು ಹೆತ್ತೆ. ನನ್ನ ಪಾಲಿಗೆ ಅದು ಯಾವ ವಿಧದಲ್ಲೂ ಸಾಧನೆಯಲ್ಲ. ಯಾಕಂದ್ರೆ, ಮಕ್ಕಳು ಗಂಡಾಗುವುದರಲ್ಲಿ ನನ್ನ ಪಾತ್ರವೇನೂ ಇರಲಿಲ್ಲ. ನಾ ಸ್ಪೆಷಲ್ ಅಂತ ಕೆಲವು ಹೆಣ್ಣು ಮಕ್ಕಳ ತಾಯ್ತಂದೆಯರಿಗೆ ಅನ್ನಿಸುವಂತೆ ನನಗೆ ಮಾತ್ರ ಅನ್ನಿಸಲೇ ಇಲ್ಲ. ಮತ್ತೆ ಅದೇ ಒಂದು ನವಿರಾದ ನಾರ್ಮಲ್ ಬದುಕು.

ಆ ಹುಡುಗಿಯ ಪ್ರಶ್ನೆಗೆ ನಾ ಏನು ಉತ್ತರಿಸಬೇಕಿತ್ತು? ನಾರ್ಮಲ್ ಆಗಿರುವುದಕ್ಕೇ ಸಂತೋಷವಾಗಿದ್ದೇನೆ ಅಂದಿದ್ದರೆ ಅವಳಿಗೆ ಉತ್ತರ ಸಿಕ್ಕ ತೃಪ್ತಿಯಿರುತ್ತಿತ್ತೇ? ಅಥವಾ ನನ್ನ ಮೇಲೆ ಅತ್ಯಾಚಾರವಾಗಿಲ್ಲ, ದೌರ್ಜನ್ಯವಾಗಿಲ್ಲ, ಆಸಿಡ್ ಅಟ್ಯಾಕ್ ಆಗಿಲ್ಲ, ದುಡಿಯುತ್ತೇನೆ, ಸ್ವತಂತ್ರಳು ಅದಕ್ಕೇ ನಾ ಸಂತೋಷವಾಗಿದ್ದೇನೆಂದು ಹೇಳಿದ್ದರೆ ಅವಳಿಗೆ ಉತ್ತರ ಸಿಕ್ಕಿದಂತಾಗುತ್ತಿತ್ತೇನು? ಓಹ್, ಹೆಣ್ಣು ಎನ್ನುವ ಒಂದೇ ಕಾರಣಕ್ಕೆ ಸಂತೋಷವನ್ನೂ ಕಾರಣಗಳೊಂದಿಗೆ ಸಮೀಕರಿಸಿಕೊಳ್ಳುವ ಪಾಡು ಹಿತವಿಲ್ಲ. "Because I am a woman, I must make unusual efforts to succeed. If I fail, no one will say, 'she doesn't have what it takes'. They will say, Woman don't have what it takes" ಅನ್ನೋ Clare Boothe Luce ಹೇಳಿದ ಮಾತು ಅರ್ಥವಾಗೋ ಘಟ್ಟಕ್ಕೆ ಬಂದು ನಿಂತಿದೆ ಜೀವನ. ನಿಜ, ಅವಳು ತನ್ನ ನೆಮ್ಮದಿಯನ್ನು ತಾನೇ ದುಡಿಯಬೇಕು ಆದರೆ ಅವನು ಮನಸ್ಸು ಮಾಡಿದರೆ ಎಷ್ಟು ಹೆಣ್ಣುಗಳಿಗೆ ನೆಮ್ಮದಿಯ ದಾತನಾಗಬಹುದು? ಹೀಗೆ ಸಿಈಟಿ ಪ್ರಶ್ನೆ ಪತ್ರಿಕೆಯೊಂದು ನನ್ನ ಕಣ್ಣ್ಮನದ ಮುಂದೆ ಸುಳಿಯುತ್ತಿತ್ತು. ಬದುಕು ಎನ್ನುವ Public Sector Companyಯಲ್ಲಿ Complications ಅನ್ನುವ Shareholdersಏ ಹೆಚ್ಚಿರುತ್ತಾರೇನೋ ಎನ್ನುವ ಅನುಮಾನ ಕಾಡುತ್ತಿತ್ತು. ಅದರೂ ಅವಳು ಕೇಳಿದಂತೆ ನಾ ಹೆಣ್ಣಾಗಿರೋದಕ್ಕೆ ಸಂತೋಷಪಡಲು ಕಾರಣದ ಬೆಂಬೆತ್ತಿ ಹೋದೆ.

ಓಹೋಹೋ, ಕಾರಣದ ಎಳೆಯೊಂದು ಸಿಕ್ಕಿತು. ಅವಳಿಗೆ ಕರೆ ಮಾಡಿದೆ. "ಸುಂದರ ಹುಡುಗಿ ಕೇಳು, ಕೊನೆಗೂ ಸಿಕ್ಕಿದೆ ಉತ್ತರ ನಿನ್ನ ಪ್ರಶ್ನೆಗೆ. ಅತ್ಯಾಚಾರ ಮಾಡದ, ಆಸಿಡ್ ಸುರಿಯದ, ದೌರ್ಜನ್ಯ ನೀಡದ, ವರದಕ್ಷಿಣೆ ಕೇಳದ, ಹೆಣ್ಣುಮಕ್ಕಳನ್ನು ಮೂದಲಿಸದ, ನಿಂದಿಸದ ಎರಡು ಗಂಡು ಮಕ್ಕಳ ತಾಯಿ ನಾನು ಅನ್ನೋದೆ ನಾ ಹೆಣ್ಣಾಗಿ ಸಂತೋಷ ಪಡೋದಕ್ಕೆ ಕಾರಣವಾಗಿದೆ" ಅಂದೆ. ಹುಡುಗಿ "Happy Woman's Day Madam" ಎಂದುಲಿಯುತ್ತಾ ಫೋನ್ ಇಟ್ಟಳು. ಮನೆಗೆ ಬಂದು ನಾನು "Elimination of all discriminations against women" ಎನ್ನುವ ವಿಷಯದ ಬಗ್ಗೆ ಮತ್ತೊಂದು ಭಾಷಣ ನೀಡಲು ತಯಾರಾಗಲು ಕುಳಿತೆ.

English summary
Why are you so happy to be a woman? Is there any particular reason? A question posed by a beautiful young college girl made Anjali Ramanna stun. Yes, Anjali found the answer and congratulated the girl. Every happy woman should ask this question to themselves. Happy Womens Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X