• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇವರು ನಮ್ಮ ಸಾವಿತ್ರಿ, ದಾಕ್ಷಾಯಿಣಿ, ರಮಣಿ!

By * ಅಂಜಲಿ ರಾಮಣ್ಣ, ಬೆಂಗಳೂರು
|

ರಾತ್ರಿ 12ಕ್ಕೆ ಎಸೆಂಎಸ್ “ಟಿಂಗ್” ಅಂತು “Happy Woman’s Day”. ಆಗ್ಲೇ ನಂಗ್ನೆನಪಾಗಿದ್ದು ನಾ ಮಹಿಳೆ ಅಂತ. ಅಡುಗೆ ಮನೆ ಲೈಟ್ ಆರ್ಸಿ, ಹಾಲಿನ ಕೂಪನ್ ತಗುಲಿಸಿ ಬೀದಿ ಬಾಗಿಲು ಹಾಕೊಂಡ್ಬಂದು ಟೀವಿ ಹಾಕ್ಕೊಂಡೆ ನಂಗಿಷ್ಟವಾದ “ಜೇನಿನಗೂಡು ನಾವೆಲ್ಲಾ ಬೇರೆಯಾದರೆ ಜೇನಿಲ್ಲ….” ಹಾಡು ಬರ್ತಿತ್ತು. ನೋಡ್ತಾ ನೋಡ್ತಾ ಅದ್ಯಾವಾಗ 1 ಗಂಟೆಯಾಯ್ತೋ, ಕಣ್ಣು ಮುಚ್ಚಲು ಹೊರಟೆ ಮತ್ತೆ ಎಸೆಂಎಸ್‍ನ “ಟಿಂಗ್” ಹೇಳಿತು “ಇದು ಮಹಿಳಾ ದಿನಾಚರಣೆಯ ನೂರೊಂದನೆಯ ವರ್ಷ” ಅಂತ. ತಕ್ಷಣ ನನಗೆ ನಾ ಮಹಿಳೆ, ಪಕ್ಕದವ ಪುರುಷ ಅಂತೆಲ್ಲಾ ಮರೆತೇಹೋಯ್ತು. ಜರಾಸಂಧನ ಕಥೆ ನೆನಪಾಗಿ ನಿದ್ದೆಯೆಲ್ಲಾ ಬೆವತು ಹರಿಯೋಕ್ಕೆ ಶುರುವಾಯ್ತು. ಭಯ ಕಳೆಯೋಕ್ಕೆ ದೀಪ ಹಾಕೊಂಡು ಪದಾರ್ಥ ಚಿಂತಾಮಣಿ ಪುಸ್ತಕ ಕೈಗೆತ್ತ್ಕೊಂಡೆ. ಅದರಲ್ಲೂ ಸ್ತ್ರೀಗಿರುವ ಹತ್ತಾರು ಪರ್ಯಾಯ ಪದಗಳಿರೋ ಪುಟಾನೇ ತೆರ್ಕೊಳ್ಳ್ಬೇಕೇ?! ಆಗ ಮಹಿಳಾ ದಿನಾಚರಣೆಯ ಬಗ್ಗೆ ಆಲೋಚನೆ ಝಗ್ಗ್ ಅಂತ ಅರಮನೆ ದೀಪದ ಹಾಗೆ ಹತ್ತ್ಕೊಳ್ಳ್ತು. ಜೊತ್ಜೊತೆಗೆ ಇವರ್ಮೂರ್ಜನಾನೂ ದಬದಬ ಅಂತ ನೆನಪಿನ ಕದ ತಟ್ಟ್ತಾ ಹೋದ್ರು!

ಅಂತೂ ಸತ್ಯವಾನ ಸ್ವರ್ಗಕ್ಕೆ ಹೋದ : ಸಾವಿತ್ರಿದು ತಿಂಗಳ ಸಂಬಳದಲ್ಲೇ ನೆಮ್ಮದಿ ಕಾಣುತ್ತಿದ್ದ ಒಬ್ಬ ಮಗಳು ಒಬ್ಬ ಮಗನಿರೋ ಸಂಸಾರ. ಇದ್ದ ಒಬ್ಬ ದುಡಿಯೋ ಗಂಡನ ಹೃದಯ ಎರಡು ತಿಂಗಳ ಹಿಂದೆ ಏಕ್‍ದಂ ನಿಂತ್ಹೋಯ್ತು. ಪಾಪ, ಹೋಗೇಬಿಟ್ಟ. ಮಕ್ಕಳ ಮುಖ ನೋಡ್ಕೊಂಡ್ತಾನೆ ಎಲ್ಲಾ ಅಮ್ಮಂದಿರು ಬದ್ಕಿರೊದು? ಸಾವಿತ್ರಿ ಮನ್ಮನೆ ಕೆಲಸಕ್ಕೆ ಸೇರ್ಕೊಂಡ್ಲು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಕೇಳ್ಕೊಂಡ್ಬಂದವಳನ್ನು ಕೇಳಿದೆ “ಉಳಿತಾಯ ಎಷ್ಟಿದೆ?” ಅವಳು ಹೇಳಿದ್ಲು “ಉಳಿತಾಯ ಎಲ್ಲಿಮ್ಮ, 70,000 ಸಾಲ ಇದೆ”. ನನ್ನ ಬಿಟ್ಟ್ಬಾಯಿ ಮುಚ್ಚ್ದೇ ಕೇಳಿತು “ಅಷ್ಟೊಂದು ಸಾಲ ಯಾಕಾಯ್ತು?” ಅವಳು ಕಣ್ಣೀರಾಗ್ತಾ ಹೇಳಿದ್ಲು “ಏನ್ಮಾಡೋದಮ್ಮ ನಮ್ಮೂರ್ಕಡೆ ತುಂಬಾ ಸಂಪ್ರದಾಯ. ನನ್ನ ಗಂಡನ ತಿಥಿಗೆ ಎಲ್ಲ್ರನ್ನೂ ಕರೆದು ಅದೂ ಇದೂ ಅಂತ ಮಾಡ್ಲೇಬೇಕಿತ್ತು. ಅದಕ್ಕೆ ಸಾಲ ಮಾಡಿದೆ. ನೀವು ನನ್ನ್ಮಕ್ಕಳನ್ನು ನೋಡ್ಕೊಂಡ್ರೆ ನಾ ಮನೆ ಕೆಲಸ ಮಾಡಿ ಹೇಗೋ ಸಾಲ ತೀರಿಸ್ಕೊಳ್ಳ್ತೀನಿ “70,000 ರೂಪಾಯಿಯ ಸಾಲದಲ್ಲಿ ಸ್ವರ್ಗ ಸೇರಿದ ಸತ್ಯವಾನ ನನ್ನನ್ನು ನಿರುತ್ತರಳನ್ನಾಗಿಸಿದ್ದ.

ಶಿವಪುರಾಣಕ್ಕೆ ಈಗ ಸೇರಿದೆ ಮತ್ತೊಂದು ಅಧ್ಯಾಯ : ದಾಕ್ಷಾಯಿಣಿ ಗಾರ್ಮೆಂಟ್ ಕೆಲಸಕ್ಹೋಗ್ತಾಳೆ. ಗಂಡನ ದರ್ಶನ ಎರಡೇ ಸರ್ತಿ ಆಗಿದ್ದ್ರಿಂದ ಸದ್ಯ ಎರಡೇ ಮಕ್ಕಳ ತಾಯಿ ಅವಳು. ಕೋಲಾರದಂಚ್ನಲ್ಲಿರೋ ಯಾವುದೋ ಊರ್ನಲ್ಲಿ ರಾಗಿ, ಜೋಳ ಬೆಳೆಯೋ ಹೊಲ ಇದೆಯಂತೆ. 4 ಎಕರೆ ಮಾವಿನ ತೋಪಿದೆಯಂತೆ. ಹುಣಸೆಹಣ್ಣು, ತೆಂಗಿನಕಾಯಿ ಮನೆಗಾಗೋಷ್ಟು ಬೆಳೆಯತ್ತಂತೆ. ಕಡ್ಲೇಕಾಯಿ, ಕಬ್ಬು ಸಂಕ್ರಾಂತಿಗೆ ತಪ್ಪಲ್ಲ್ವಂತೆ. “ಓಹೋಹೋ, ಅಲ್ಲ ಇಷ್ಟೆಲ್ಲಾ ಅನುಕೂಲ ಇದ್ದ್ರೂ ಮತ್ತ್ಯಾಕಲ್ಲಿರ್ದೆ ಬೆಂಗಳೂರಿನ ಗಾರ್ಮೆಂಟ್ ಹೊಲಿಯೋಕ್ಬಂದೆ? ಅಲ್ಲೇ ಹೋಗಿ ಸುಖವಾಗಿರ್ಬಾರ್ದಾ?” ನಾ ಕೇಳಲೇ ಬೇಕಾಯ್ತು. “ಅಯ್ಯೋ, ಅಕ್ಕ ಅಣ್ಣ ನಮ್ಮೋನಾದ್ರೂ ಅತ್ತಿಗೆ ನಮ್ಮೋಳಾಯ್ತಾಳಾ?!” ಅನ್ನೋ ಅವಳ ಪ್ರಶ್ನೆಯಿಂದ ಗೊತ್ತಾಯ್ತು ಅವೆಲ್ಲಾ ಅಪ್ಪನ ಮನೆ ಆಸ್ತಿ ಅಂತ. “ಆ ತರಹ ಏನಿರಲ್ಲ. ನೀ ಹೊಂದ್ಕೊಂಡ್ಹೋದ್ರೆ ಅವಳೂ ಚೆನ್ನಾಗೇಯಿರ್ತಾಳೆ. ನಿನ್ನ್ಗಂಡ ಹೇಗೂ ಸರಿಯಿಲ್ಲ. ನೀ ಊರಲ್ಲೇ ಇದ್ದು ಮಕ್ಕಳ್ನೋಡ್ಕೊಂಡು ಸುಖವಾಗಿರ್ಬಾರದಾ?” ಅಂದೆ. ಅದಕ್ಕೆ ನಿಜಕ್ಕೂ ಸತಿ ಹೋಮದ ಹೊಗೆಯಿಂದ ಭಗ್ಗಂತೆದ್ದ ಹೊಗೆಯ ಭರದಲ್ಲಿ “ಅಯ್ಯೋ ಅಕ್ಕ, ನನ್ನ್ಗಂಡ ಸರಿಯಿಲ್ಲ ಅಂತಾನೇ ನಾ ಕಷ್ಟಕ್ಕ್ಬಿದ್ದಿರೋದು. ನೀ ಟೀವಿ ನೋಡಲ್ಲ ಅನ್ನ್ಸತ್ತೆ. ಒಂದೆರಡು ಸೀರಿಯಲ್ಲ್‍ಗಳನ್ನ ನೋಡು ಗೊತ್ತಾಯ್ತದೆ. ಅಲ್ಲ್ಯೇಳ್ತಾರೆ, ಕೆಟ್ಟು ತವರ್ಮನೆ ಸೇರ್ಬಾರ್ದೂ ಅಂತ. ಉಟ್ಟಿದ ಮನೇಲಿ ಎಣ್ಣು ಸಾಯ್ಬಾರ್ದು ಅಕ್ಕ. ಎಣ ಏಳೋದೇ ಆದ್ರೆ ಗಂಡನ ಮನೆಯಿಂದಾನೇ. ಅದಕ್ಕೆ ನಾ ಇಲ್ಲೇ ಇರೋದು. ನಾ ಮಾತ್ರ ತಾಯಿ ಮನೆಗ್ಸೇರ್ಕೊಳಲ್ಲ ಅಕ್ಕ” ಅಂತಂದ್ಲು. ನಾ ಮರುಮಾತಿಲ್ಲದೆ ತೆಪ್ಪಗಾದೆ. ಮೊನ್ನ್ಮೊನೆ ತಾನೆ ನೋಡಿಬಂದಿದ್ದ ಕನ್ಯಾಕುಮಾರಿಯ ಅಮ್ಮನವರ ಮೂಗ್ಬೊಟ್ಟು ಫಳಫಳ ಅಂತ ಹೊಳೀತ್ತ್ತು ನನ್ನ ಮನಸ್ನಲ್ಲಿ.

ರಂಗಣ್ಣ ಆಡಿದ ಅಪ್ಪ ಅಮ್ಮನಾಟ : ಬೇಸ್ಗೇ ರಜದಲ್ಲಿ ಬೇಲದ ಪಾನ್ಕ ಕುಡಿಯೋಕ್ಕ್ಹೋಗ್ತ್ತಿದ್ದ್ನಲ್ಲ ಆ ಚಿಕ್ಕ್ಪೇಟೆ ಅಜ್ಜಿ ಮನೆಯ ಪಕ್ಕದ ಮನೆ ಹುಡುಗನ ಚಿಕ್ಕಮ್ಮನ ಮಗ ಈ ರಂಗಣ್ಣ. ಒಳ್ಳೆ ಕೆಲಸದಲ್ಲಿದ್ದ. ರಮಣಿನ ಮದುವೆಯಾಗಿ ಹತ್ತ್ವರ್ಷ ಆದ್ರೂ ಪಾಪ ಮಕ್ಕಳಾಗಿರ್ಲಿಲ್ಲ. ದೊಡ್ಡ್ಪೇಟೆಗೆ ವರ್ಗ ಆಯ್ತು. ರಮಣೀನ ಅಪ್ಪ ಅಮ್ಮನ ಸೇವೆಗ್ಹಾಕಿ ಒಬ್ಬನೆ ಹೊರಟ್ನಿಂತ. ಹಾಗೂ ಹೀಗೂ ಹೇಗೋ ಒಂದಷ್ಟು ತಿಂಗಳಲ್ಲಿ ಆಫೀಸಿನ ಮಾನಿನಿ ಮೇಡಂ ಮೇಲೆ ಮನಸ್ಸಾಯ್ತು. ನೆಗಡಿ ತರಹದ ಈ ವೈರಸ್ ಹರಡದೇಯಿರುತ್ತಾ? ಚಿಕ್ಕ್ಪೇಟೆ ಮನೆಯಲ್ಲಿ ರಾದ್ಧಾಂತ, ಕಣ್ಣೀರು ಕಿರುಚಾಟ. ಪಾಪ, ರಂಗಣ್ಣ ಸಾಧು ಸತ್ಪುರುಷ. ಎಲ್ಲ್ರೆದುರೇ ಮಾನಿನಿ ಮೇಡಂಗೂ ತಾಳಿ ಬಿಗಿದು ಹೆಂಡತಿ ಪಟ್ಟ ಕೊಟ್ಟೇಬಿಟ್ಟ. ನಂತರದ ದಿನಗಳಲ್ಲಿ ನಾಕ್ದಿನ ಆ ಪೇಟೆ ಆರ್ದಿನ ಈ ಪೇಟೆ ಅಂತ ಸುತ್ತ್ಕೊಂಡು ಅಂತೂ ಸಂಸಾರದ ಸುಖ ಭರಪೂರ ಪಡೆತಿದ್ದ. ಐದು ವರ್ಷ ಆದ್ರೂ ದೊಡ್ಡ್ಪೇಟೆ ಮಾನಿನಿ ಮೇಡಂ‍ನವರೂ ತೊಟ್ಟಿಲು ತೂಗ್ಲಿಲ್ಲ. ಆದ್ರೂ ಯಾರದ್ದೂ ತಗಾದೆ ಬರ್ಲಿಲ್ಲ. ಯಾಕಂದ್ರೆ ಮಾನಿನಿ ಮೇಡಂ ಕುತ್ತಿಗ್ಗೇಲಿ ರಂಗಣ್ಣ ಕಟ್ಟಿದ ತಾಳಿ ನೇತಾಡೋಕ್ಕೆ ಶುರುವಾದ್ಮೇಲೆ ರಮಣೀಗೆ ದಷ್ಟ್ಪುಷ್ಟವಾಗಿರೋ ಎರಡೆರ್ಡು ಗಂಡು ಮಕ್ಕಳು ಹುಟ್ಟ್ಬಿಟ್ಟಿದ್ದ್ವು. ನಾ ಒಂದ್ಸಲಿ ಪಾನ್ಕದಜ್ಜಿನ ಕೇಳೇಬಿಟ್ಟೆ “ಅಲ್ಲ ಅಜ್ಜಿ ಹತ್ತ್ವರ್ಷದಿಂದ ಜೊತೇಲಿದ್ದ್ರೂ ಆಗದ ಮಕ್ಕಳು ಅವನು ಬೇರೆ ಊರಿಗ್ಹೋದ್ಮೇಲೆ ಹೇಗಾದ್ವು?” ಅಂತ. ಅಜ್ಜಿ ಪಾನಕಾನ ಲೋಟಕ್ಕೆ ಹುಯ್ಯುತ್ತಾ “ರಂಗಣ್ಣ ಎರಡನೆ ಮದುವೆ ಮಾಡ್ಕೊಂಡ, ರಮಣಿ ಮಾಡ್ಕೊಳ್ಳಲಿಲ್ಲ ಅದಕ್ಕೆ” ಅಂತ್ಹೇಳಿ ಕಿಸ್ಸಕ್ಕಂತ ನಕ್ಕಿದ್ದ್ಲು.

ಶಬ್ಧರಹಿತ ರಾತ್ರಿಯಲ್ಲಿ ಅಜ್ಜಿ ನಗುವಿನ ಧ್ವನಿ ನನ್ನ ಸ್ತ್ರೀವಾದದಲ್ಲಿ ಲೀನವಾಗೋದಕ್ಕೆ ಮುಂಚೆ ನೆನಪಾಯ್ತು ವಿಶ್ವಸಂಸ್ಥೆಯವರು ಈ ವರ್ಷದಲ್ಲಿ “ಹಸಿವು ಮತ್ತು ಬಡತನ ನಿರ್ಮೂಲನೆಯ ನಿಟ್ಟಿನಲ್ಲಿ ಮಹಿಳಾ ಸಬಲೀಕರಣ” ಮಾಡ್ಬೇಕು ಅಂದ್ಕೊಂಡಿದ್ದಾರೆ ಅಂತ. ನಾನು ಆಳುವ ವರ್ಗದವಳಲ್ಲ್ವಲ್ಲ. ನನ್ನ ಆಲೋಚನಾ ವ್ಯವಸ್ಥೆ ಒಂದು ಸಣ್ಣ ಸಂಸ್ಥೆ ಅಷ್ಟೆ. ಹಾಗಾಗಿ ನನ್ನ ಗಮನವೆಲ್ಲಾ ಸಾವಿತ್ರಿ, ದಾಕ್ಷಾಯಿಣಿ, ರಮಣಿಯರ ಮೇಲೆ. ಇವರುಗಳು ಸಬಲೆಯರೋ ಅಬಲೆಯರೋ ಅಂತ ಯೋಚಿಸ್ತಾನೇ ಕೋಳಿ ಕೂಗ್ತು. ನಾ ಮೈಮುರಿದೆದ್ದು ವೀರ ವನಿತೆಯಾಗಿದ್ದೆ. ಮೊಬೈಲ್ ಕೈಗೆತ್ತ್ಕೊಂಡು ಗ್ರೂಪ್ ಎಸೆಂಎಸ್ ಮಾಡಿದೆ “Happy Woman’s Day”.

English summary
Meet our own Savitri, Dakshayini and Ramani, who have been struggling, fighting for their existence. Happy Woman’s Day. An article by Anjali Ramanna, advocate and social activist in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more