ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ಲಾಂ ಎಂದರೇನು? ರಂಜಾನ್ ವೈಶಿಷ್ಟ್ಯ ಏನು?

By * ಶಾಮ್
|
Google Oneindia Kannada News

Five pillars of Islam
ಇಸ್ಲಾಮ್ ಧರ್ಮದ ಮೂಲ ಮಂತ್ರಗಳು ಐದು. 1) ಕಲ್ಮ : ಹೆಂಗಸು, ಗಂಡಸು ಭೇದಭಾವವಿಲ್ಲದೆ ದೇವರ ಪ್ರಾರ್ಥನೆಯನ್ನು ಪ್ರತಿಯೊಬ್ಬರೂ ಪ್ರತಿದಿನ ಮಾಡಬೇಕು. ಕ್ಲಿಷ್ಟಕರವಾದ ಅಧ್ಯಾಯಗಳನ್ನು ಮೌಲ್ವಿಗಳು ಪಠಿಸಿದರೆ, ಶ್ರೀಸಾಮಾನ್ಯರು ಸಿಂಪಲ್ಲಾರಗಿರುವಂತಹ "ಶುಕ್ಲಾಂಭರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ" ಮಾದರಿಯ ಶ್ಲೋಕಗಳನ್ನು ಮನೆಯಲ್ಲಿ, ಮನದಲ್ಲಿ ಹೇಳಿಕೊಳ್ಳಬೇಕು.

2) ನಮಾಜ್ : ಪ್ರತಿದಿನ ಐದು ಬಾರಿ ನಮಾಜ್ ಮಾಡತಕ್ಕದ್ದು. ಮಸೀದಿಗೆ ತೆರಳಿ ನಮಾಜ್ ಮಾಡಿದರೆ ಶ್ರೇಷ್ಠ. ಸಾಧ್ಯವಾಗದಿದ್ದರೆ ಎಲ್ಲೇ ಇರಲಿ ಅಲ್ಲಿಂದಲೇ ನಮಾಜ್ ಮಾಡಬಹುದು. ಪಾಕಿಸ್ತಾನಿ ಕ್ರಿಕೆಟ್ ಆಟಗಾರರು ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಪಂದ್ಯದ ವೇಳೆ ನಮಾಜ್ ಮಾಡಿದ್ದು ನಿಮಗೆ ನೆನಪಿರಬಹುದು.

3) ರೋಜಾ : ಅಂದರೆ ಉಪವಾಸ. ಉಪವಾಸ ಮಾಡುವುದು ಇಸ್ಲಾಂ ಧರ್ಮದ ಅಪ್ಪಣೆಗಳಲ್ಲಿ ಮುಖ್ಯವಾದದ್ದು. ನಿರಶನ ಮಾಡುವುದರಿಂದ ಕಾಮ, ಕ್ರೋಧ, ಮದ, ಮತ್ಸರಗಳಿಗೆ ಆಗಾಗ ಬ್ರೇಕ್ ಬೀಳುತ್ತದೆ. ಮನುಷ್ಯನ ಆಲೋಚನಾ ಲಹರಿ ಶಾಂತಿ ಮತ್ತು ಸಹಬಾಳ್ವೆಯ ಕಡೆಗೆ ವಾಲುತ್ತದೆ. ದೇಹ ದಂಡನೆಯ ಫಲ ಧನಾತ್ಮಕವಾಗಿರುತ್ತದೆ.

4) ಹಜ್ : ಮುಸ್ಲಿಂ ಮತದ ಅನುಯಾಯಿಗಳಿಗೆ ಅತ್ಯಂತ ಪವಿತ್ರವಾದ ತೀರ್ಥಯಾತ್ರೆ. ಸೌದಿ ಅರೇಬಿಯಾದಲ್ಲಿರುವ ಮೆಕ್ಕಾ ಮತ್ತು ಮದೀನಾಗೆ ಪ್ರವಾಸ ಹೋಗಿ ಅಲ್ಲಿ ಅಲ್ಲಾಹುವಿನ ಮುಂದೆ ಶರಣಾಗುವುದು. ಆದರೆ, ಇಸ್ಲಾಂ ಗ್ರಂಥಗಳಲ್ಲಿ ತೀರ್ಥಯಾತ್ರೆ ಕಡ್ಡಾಯವೇನಲ್ಲ. ಕಾರಣ ಬಡತನ, ಅನಾರೋಗ್ಯ ಮತ್ತು ಪ್ರವಾಸದ ಕಷ್ಟಗಳನ್ನು ಗಮನವಿಟ್ಟು ಈ ರಿಯಾಯಿತಿ ಇದೆ. ಈ ಬಾರಿ ಕರ್ನಾಟಕದಿಂದ ಮೆಕ್ಕಾಗೆ 5,677 ಮಂದಿ ಪ್ರವಾಸಿಗಳು ಹಜ್ ಯಾತ್ರೆ ಕೈಗೊಂಡಿದ್ದಾರೆ. ಇದು ಸರಕಾರಿ ಪ್ರಾಯೋಜಿತ ಯಾತ್ರೆ. ಭಾರತದಿಂದ ಈ ಬಾರಿ ಹಜ್ ಯಾತ್ರೆ ಕೈಗೊಳ್ಳುತ್ತಿರುವವರ ಒಟ್ಟು ಸಂಖ್ಯೆ ಸುಮಾರು 1 ಲಕ್ಷ 10 ಸಾವಿರ.

ಖಾಸಗಿಯಾಗಿ ಟ್ರಾವೆಲ್ ಕಂಪನಿಗಳು ಹಜ್ ಪ್ರವಾಸ ಏರ್ಪಡಿಸುತ್ತವೆ. ಸರಕಾರಿ ಪ್ರಾಯೋಜಿತ ಯಾತ್ರೆಯಲ್ಲಿ ವಿಮಾನ ಟಿಕೆಟ್ ಮತ್ತು ವಸತಿ ಸೌಕರ್ಯಗಳು ಸೇರಿರುತ್ತವೆ. ಅಡುಗೆಯನ್ನು ಯಾತ್ರಾರ್ಥಿಗಳೇ ಮಾಡಿಕೊಳ್ಳಬೇಕಾಗುತ್ತದೆ. ಈಗ ಕಾಲ ಮತ್ತು ಜೀವನಶೈಲಿ ಬದಲಾಗಿರುವುದರಿಂದ ಖಾಸಗಿ ಪ್ರಾಯೋಜಿತ ಹಜ್ ನಲ್ಲಿ ದೊರಕುವ ಪ್ರಯಾಣ, ವಸತಿ ಮತ್ತು ಊಟ ಸೌಲಭ್ಯಗಳನ್ನು ಜನ ಇಷ್ಟಹಡುತ್ತಾರೆ.

ಖಾಸಗಿಯಾದುದು ಕೊಂಚ ದುಬಾರಿಯಾದರೂ ಪ್ರವಾಸಿಗಳಿಗೆ ಅನುಕೂಲ. ಈ ಬಾರಿ ಕರ್ನಾಟಕದಿಂದ ಖಾಸಗಿಯಾಗಿ ಹಜ್ ಯಾತ್ರೆಗೆ ತೆರಳುತ್ತಿರುವವರ ಸಂಖ್ಯೆ 2,000 ಮೀರಿದೆ. ಸರಕಾರದ ವತಿಯಿಂದ ಪ್ರಯಾಣ ಮಾಡಿದರೆ ತಗಲುವ ಖರ್ಚು ಸುಮಾರು 1 ಲಕ್ಷ ರು. ಖಾಸಗಿಯಾದರೆ 2 ಲಕ್ಷ ರು. ಅಂದಹಾಗೆ, ಜೀವನದಲ್ಲಿ ಒಂದ್ಸಲನಾದರೂ ಹಜ್ ಯಾತ್ರೆ ಮಾಡು ಎನ್ನುತ್ತದೆ ಕುರಾನ್.

5) ಜಕತ್ : ಜಕತ್ ಎಂದರೆ ದಾನ ಧರ್ಮ. ಇಸ್ಲಾಂ ಧರ್ಮದಲ್ಲಿ ಇದು ಅತ್ಯಂತ ಪ್ರಮುಖವಾದ ಕಟ್ಟಳೆ. ಗ್ರಂಥಗಳು ಹೇಳುವ ಪ್ರಕಾರ, 460 ಗ್ರಾಂ ಬೆಳ್ಳಿ, 70 ಗ್ರಾಂ ಚಿನ್ನ ಅಥವಾ ಅದಕ್ಕೆ ತತ್ಸಮಾನವಾದ ಸಂಪತ್ತು ಉಳ್ಳವನು ಅದರ ಪ್ರತಿಶತ ಎರಡೂವರೆ ಭಾಗ (2.5%) ಅಥವಾ ಅದಕ್ಕೂ ಹೆಚ್ಚು ಸಂಪತ್ತನ್ನು ತುಂಬಾ ಅಗತ್ಯವಿರುವವರಿಗೆ ಪ್ರತಿವರ್ಷ ಯಾವುದೇ ಸಮಯದಲ್ಲಿ ದಾನ ಮಾಡತಕ್ಕದ್ದು.

ಆದ್ಯತೆಯ ಮೇರೆಗೆ ಉಳ್ಳವನು ಈ ದಾನವನ್ನು ತುಂಬ ಕಷ್ಟದಲ್ಲಿ ಬದುಕುತ್ತಿರುವ ನೆಂಟರಿಷ್ಟರಿಗೆ ಕೊಡಬೇಕು. ಕುಚೇಲರಿಗೆ ಶ್ರೀಮಂತ ಬಂಧುವಿನಲ್ಲಿ ನೆರವು ಕೇಳುವುದಕ್ಕೆ ಸಂಕೋಚ ಮತ್ತು ಮುಜುಗರವಿರುತ್ತದೆ. ಅಂಥವರಿಗೆ ದಾಕ್ಷಿಣ್ಯ ಬಾಧೆ ತಟ್ಟದ ಹಾಗೆ, ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗದ ಹಾಗೆ ತಲುಪಿಸಬೇಕು.

English summary
Five Pillars of Islam : Creed, daily prayers, fasting during Ramadan, alms giving and pilgrimage to Mecca, at least once in a lifetime. The Quran presents them as a framework for worship and a sign of commitment to the faith. Oneindia-Kannada greetings on the occasion of Eid-ul-Fitr. My religion, my community and my friends: A chit chat with Maqsood Ahmed in BTM layout Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X