ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನತಪ್ಪ: ಇದು ಕೃಷ್ಣನ ಕೊಳಲಿನ ಹಬ್ಬ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Chinnatappa festival, Kodagu
ಅಲೆ ಅಲೆಯಾಗಿ ತೇಲಿ ಬರುತ್ತಾ ಕಿವಿಗೆ ಇಂಪು ನೀಡುತ್ತಿದ್ದ ಶ್ರೀಕೃಷ್ಣನ ಕೊಳಲಿನ ನಿನಾದ... ಮೈನವಿರೇಳಿಸುವ ಚಂಡೆಮದ್ದಳೆಯ ಸದ್ದು... ಪ್ರತಿ ಮನೆಯಲ್ಲಿಯೂ ಸುಧಾಮನ ನೆನಪಲ್ಲಿ ಅವಲಕ್ಕಿ ಭೋಜನ... ಎಲ್ಲೆಡೆ ಕೃಷ್ಣ ಜಪ... ಪೂಜೆ... ಪುನಸ್ಕಾರ... ಇದು ಕೊಡಗಿನ ನಿಸರ್ಗದ ನಡುವೆ ಹುದುಗಿರುವ ಪುಟ್ಟ ಗ್ರಾಮ ಅಯ್ಯಂಗೇರಿ ಎಂಬಲ್ಲಿ ಕಳೆದ ಮೂರು ದಿನಗಳಿಂದ ನಡೆದ ವಿಶಿಷ್ಟ "ಚಿನ್ನತಪ್ಪ" ಹಬ್ಬದಲ್ಲಿ ಕಂಡು ಬಂದಂತಹ ದೃಶ್ಯಗಳು.

ಕೊಡಗಿನ ಮುಖ್ಯಪಟ್ಟಣ ಮಡಿಕೇರಿಯಿಂದ ನಾಪೋಕ್ಲು ಮೂಲಕ ಭಾಗಮಂಡಲಕ್ಕೆ ತೆರಳುವ ಮಾರ್ಗದಲ್ಲಿ ಸುಮಾರು 40 ಕಿ.ಮೀ. (ಭಾಗಮಂಡಲಕ್ಕೆ 6 ಕಿಮೀ) ದೂರದಲ್ಲಿ ಸಿಗುವ ಪುಟ್ಟ ಗ್ರಾಮವೇ ಅಯ್ಯಂಗೇರಿ. ಇಲ್ಲಿರುವ ಪುರಾತನ ಶ್ರೀಕೃಷ್ಣನದು ಎನ್ನಲಾದ ಕೊಳಲಿಗೆ ವಿವಿಧ ವಿಧಿ ವಿಧಾನದೊಂದಿಗೆ ಪೂಜೆ ಸಲ್ಲಿಸುವುದೇ "ಚಿನ್ನತಪ್ಪ" ಹಬ್ಬದ ವಿಶೇಷತೆಯಾಗಿದೆ.

ಸುತ್ತಲೂ ಬೆಟ್ಟದಿಂದ ಆವೃತಗೊಂಡು, ಕಾಫಿ ತೋಟ ಹಾಗೂ ಗದ್ದೆ ಬಯಲಿನ ನಡುವೆ ಅಲ್ಲೊಂದು ಇಲ್ಲೊಂದು ಮನೆಗಳಿಂದ ಕೂಡಿರುವ ನಿಸರ್ಗ ರಮಣೀಯ ತಾಣವಾಗಿರುವ ಅಯ್ಯಂಗೇರಿ ಇಲ್ಲಿರುವ ಕೃಷ್ಣ ದೇಗುಲ, ಹಾಗೂ ವರ್ಷಕ್ಕೊಮ್ಮೆ ನಡೆಯುವ "ಚಿನ್ನತಪ್ಪ" ಹಬ್ಬದಿಂದ ಜನಮನ ಸೆಳೆದಿದೆ. ಜಿಲ್ಲೆಯಲ್ಲಿಯೇ ಏಕೈಕ ಕೃಷ್ಣ ದೇಗುಲವಿರುವ ಏಕೈಕ ಗ್ರಾಮ ಎಂಬ ಹೆಗ್ಗಳಿಕೆಯೂ ಇಲ್ಲಿಗಿದೆ.

ಗೊಲ್ಲ ಜನಾಂಗದವರು ನಡೆಸುವ ಈ ಹಬ್ಬ ಪ್ರತಿವರ್ಷ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಮೂರು ದಿನಗಳ ಕಾಲ ವಿವಿಧ ಸಂಪ್ರದಾಯದೊಂದಿಗೆ ನೆರವೇರುತ್ತದೆ. (ಈ ವರ್ಷ ಫೆಬ್ರವರಿ 25 ರಿಂದ 28ರವರೆಗೆ ವಿಜೃಂಭಣೆಯಿಂದ ನಡೆಯಿತು.) ಇಲ್ಲಿ ಭವ್ಯ ದೇಗುಲದ ನಿರ್ಮಾಣವೂ ಪ್ರಗತಿಯಲ್ಲಿದ್ದು, ಶ್ರೀಕೃಷ್ಣಜನ್ಮಾಷ್ಠಮಿಯ ಸಂದರ್ಭ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ.

ಚಿನ್ನತಪ್ಪನ ದಂತ ಕಥೆ: ಪುರಾಣ ಕಾಲದಲ್ಲಿ ಬೆಟ್ಟಗುಡ್ಡ ಕಾಡುಗಳಿಂದ ಆವೃತವಾಗಿದ್ದ ಈ ಪ್ರದೇಶದಲ್ಲಿ ದನಗಳನ್ನು ಮೇಯಿಸಲಾಗುತ್ತಿತ್ತಂತೆ. ಪ್ರತಿದಿನವೂ ತಾಯಿ ಯಶೋಧೆ ಕೃಷ್ಣನಿಗೆ ಹೊಸ ಬಟ್ಟೆ ತೊಡಿಸಿ ಜೊತೆಯಲ್ಲಿ ತಿನ್ನಲು ವಿವಿಧ ತಿಂಡಿಗಳನ್ನು ಕೊಟ್ಟು ಬಲರಾಮನೊಂದಿಗೆ ದನಗಳನ್ನು ಮೇಯಿಸಿಕೊಂಡು ಬರಲು ಕಳಿಸುತ್ತಿದ್ದಳಂತೆ. ಅಲ್ಲಿ ದನ ಮೇಯಿಸಲು ಬರುತ್ತಿದ್ದ ಗೊಲ್ಲ ಮಕ್ಕಳೊಂದಿಗೆ ಬೆರೆಯುತ್ತಾ... ಕೊಳಲನ್ನು ಊದುತ್ತಾ ಕೃಷ್ಣ ಸಂತೋಷದಿಂದ ದಿನ ಕಳೆಯುತ್ತಿದ್ದನಂತೆ. ಆದರೆ ಮುಂದೆ ಮಥುರೆಗೆ ಹೋಗುವ ಸಂದರ್ಭ ತನ್ನ ಮೆಚ್ಚಿನ ಕೊಳಲನ್ನು ಇಲ್ಲಿಯೇ ಬಿಟ್ಟು ಹೋದನಂತೆ. ಅದನ್ನು ಜೋಪಾನವಾಗಿರಿಸಿ ಪೂಜಿಸುತ್ತಾ ಬರಲಾಯಿತಂತೆ.

ಇನ್ನು ಕೆಲವರ ಪ್ರಕಾರ ಹಿಂದಿನ ಕಾಲದಲ್ಲಿ ಗ್ರಾಮದ ಚೀಂಗಂಡ ಹಾಗೂ ಬಿದ್ದಿಯಂಡ ಕುಟುಂಬದ ಹಿರಿಯರು ಗದ್ದೆ ಉಳುಮೆ ಮಾಡುತ್ತಿದ್ದ ಸಂದರ್ಭ ಶ್ರೀಕಷ್ಣನ ಕೊಳಲು ನದಿಯೊಂದರಲ್ಲಿ ತೇಲಿ ಬರುತ್ತಿದ್ದುದನ್ನು ಕಂಡು ಅದು ನದಿನೀರಲ್ಲಿ ಕೊಚ್ಚಿ ಹೋಗುವುದನ್ನು ತಪ್ಪಿಸಿ ಬಿದ್ದಿಯಂಡ ಕುಟುಂಬದ ಐನ್‌ಮನೆಗೆ ಕೊಂಡೊಯ್ದು ಪೂಜಿಸುತ್ತಾ ಬಂದರಂತೆ. ಇದು ಕೊಳಲಿನ ಬಗ್ಗೆ ಗ್ರಾಮಸ್ಥರಲ್ಲಿರುವ ನಂಬಿಕೆಯಾಗಿದೆ.

ಗ್ಯಾಲರಿ:
ಚಿನ್ನತಪ್ಪ ಹಬ್ಬದ ಸಂಭ್ರಮ

ಈ ಕೊಳಲನ್ನು ಶ್ವೇತ ವಸ್ತ್ರಗಳಿಂದ ಮುಚ್ಚಿ ವೀಕ್ಷಕರ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸುವುದು ಇಲ್ಲಿನ ಮತ್ತೊಂದು ವಿಶೇಷತೆ. ಹಾಗಾಗಿ ಇದುವರೆಗೆ ಕೃಷ್ಣನ ಕೊಳಲು ಹೇಗಿದೆ ಎಂಬುವುದು ಕೊಳಲನ್ನು ಊದುವ ತಕ್ಕ ಮುಖ್ಯಸ್ಥರನ್ನು ಹೊರತು ಬೇರೆಯವರಿಗೆ ತಿಳಿದಿಲ್ಲ.

ಹಬ್ಬದ ವಿಶಿಷ್ಟ ಆಚರಣೆ : "ಚಿನ್ನತಪ್ಪ" ಹಬ್ಬವನ್ನು ಗ್ರಾಮಸ್ಥರು ಕಟ್ಟುನಿಟ್ಟಾಗಿ ಆಚರಿಸುತ್ತಾರೆ. ಹಬ್ಬ ಆಚರಣೆಯ ಮುನ್ನ ಅಶ್ವತ್ಥ ವೃಕ್ಷಕ್ಕೆ ಕಟ್ಟು ಕಟ್ಟಲಾಗುತ್ತದೆ. ಅದರಂತೆ ಅಂದಿನಿಂದ ಹಬ್ಬ ಮುಗಿಯುವ ತನಕ ಊರೊಳಗೆ ಪ್ರಾಣಿ ಹಿಂಸೆ, ಮಾಂಸ ಸೇವನೆ ಸೇರಿದಂತೆ ಮದುವೆ ಇನ್ನಿತರ ಶುಭಕಾರ್ಯ ಮಾಡುವಂತಿಲ್ಲ. ಅಲ್ಲದೆ ಹಬ್ಬದ ಸಂದರ್ಭ ಗ್ರಾಮದಲ್ಲಿ ಮಂಚದಲ್ಲಿ ಮಲಗುವಂತಿಲ್ಲ. ಎಲ್ಲರೂ ಮನೆಯಲ್ಲಿ ಅವಲಕ್ಕಿಯನ್ನೇ ಸೇವಿಸಬೇಕು ಎಂಬಂತಹ ಕಟ್ಟುಪಾಡು ಆಚರಣೆಯಲ್ಲಿರುತ್ತದೆ.

ಧಾರೆಪೂಜೆ, ಪಟ್ಟಣಿ, ಭಂಡಾರ ಹಾಕುವುದು ಹೀಗೆ ಮೂರು ದಿನಗಳ ಕಾಲ ನಡೆಯುವ ಹಬ್ಬದ ಆಚರಣೆ ಕೂಡ ವಿಭಿನ್ನವೂ, ವಿಶಿಷ್ಟವೂ ಆಗಿರುತ್ತದೆ. ಹಬ್ಬದ ಮೊದಲ ದಿನ ಬೆಳಿಗ್ಗೆ ಸಾಂಪ್ರದಾಯಿಕ ಉಡುಗೆ ತೊಟ್ಟು ದೇವಾಲಯಕ್ಕೆ ಆಗಮಿಸುವ ತಕ್ಕ ಮುಖ್ಯಸ್ಥರು ಹಬ್ಬಕ್ಕೆ ಚಾಲನೆ ನೀಡುತ್ತಾರೆ. ಈ ಸಂದರ್ಭ ದೇವಾಲಯದ ಒಂದು ಪಾರ್ಶ್ವದಲ್ಲಿ ಚಂಡೆ ಸದ್ದು ನೀರವ ಮೌನವನ್ನು ಸೀಳಿ ಹಬ್ಬಕ್ಕೆ ರಂಗು ನೀಡುತ್ತದೆ.

ಇದೇ ಸಂದರ್ಭ ಶ್ವೇತ ವಸ್ತ್ರದಿಂದ ಮುಚ್ಚಲಾದ ಶ್ರೀಕೃಷ್ಣನ ಕೊಳಲನ್ನು ಹೊರತರಲಾಗುತ್ತದೆ. ಬಳಿಕ ಅದನ್ನು "ಊರ್‌ಮಂದ್"ನ ಗದ್ದೆ ಬಳಿಯಲ್ಲಿರುವ ನಿರ್ದಿಷ್ಟ ಸ್ಥಳಕ್ಕೆ ತಂದು, ಆ ನಂತರ ದೇವಾಲಯಕ್ಕೆ ಹಿಂತಿರುಗಿಸಲಾಗುತ್ತದೆ. ಈ ಸಂದರ್ಭ ನಡೆಯುವ ಪೂಜಾ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಮಾತ್ರವಲ್ಲದೆ, ಸುತ್ತಮುತ್ತಲಿನ ಗ್ರಾಮಗಳಿಂದಲೂ ಭಕ್ತರು ಆಗಮಿಸುತ್ತಾರೆ. ಅಂದು ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆಯೇ ತಕ್ಕ ಮುಖ್ಯಸ್ಥರು ಕೊಳಲಿನೊಂದಿಗೆ ದೇವಾಲಯದ ಎಡಭಾಗದಲ್ಲಿರುವ ಕಲ್ಲುಹೊಳೆಗೆ ತೆರಳಿ ಅಲ್ಲಿ ರಾತ್ರಿ 7.30 ರಿಂದ ಮರುದಿನ ಮುಂಜಾನೆ 3.30ರವರೆಗೆ ಧಾರೆಪೂಜೆಯನ್ನು ನೆರವೇರಿಸುತ್ತಾರೆ. ಧಾರೆಪೂಜೆ ಬಳಿಕ ಕೊಳಲನ್ನು ಮತ್ತೆ ದೇವಸ್ಥಾನಕ್ಕೆ ತರಲಾಗುತ್ತದೆ.

ಎರಡನೆಯ ದಿನ ನಡೆಯುವುದು ಪಟ್ಟಣಿ ಹಬ್ಬವಾಗಿದ್ದು, ಅಂದು ಬೆಳಿಗ್ಗೆಯಿಂದ ಪೂಜಾ ಕಾರ್ಯಕ್ರಮಗಳು ನಡೆದು ಮಧ್ಯಾಹ್ನವಾಗುತ್ತಿದ್ದಂತೆಯೇ ತಕ್ಕ ಮುಖ್ಯಸ್ಥರಲ್ಲದೆ, ಬಿದ್ದಿಯಂಡ ಹಾಗೂ ಚೀಂಗಂಡ ಕುಟುಂಬದಿಂದ ತಲಾ ಒಬ್ಬರಂತೆ ಸೇರಿ ವಸ್ತ್ರದಿಂದ ಮುಚ್ಚಲಾದ ಕೊಳಲನ್ನು ನಿರ್ದಿಷ್ಟ ಸ್ಥಳದಲ್ಲಿ ನುಡಿಸುತ್ತಾ ಊರ್‌ಮಂದ್‌ಗೆ ಬರುತ್ತಾರೆ. ಇಲ್ಲಿಗೆ ಸಮೀಪದಲ್ಲಿರುವ ಗದ್ದೆ ಬಳಿ ಕೊಳಲು ನುಡಿಸಲಾಗುತ್ತದೆ. ಅಲ್ಲಿಂದ ನಂತರ "ನಾಳೆಯಂಡ ಮಾನಿ" ಎಂಬಲ್ಲಿಗೆ ತೆರಳುತ್ತಾರೆ. ಅಲ್ಲಿ ಎತ್ತುಪೋರಾಟವೂ ನಡೆಯುತ್ತದೆ.

ಇದೇ ವೇಳೆಗೆ ಶ್ವೇತವಸ್ತ್ರಧಾರಿಣಿ ಸ್ತ್ರೀಯರು ಅಕ್ಕಿ, ಹೂ, ದೀಪವಿರುವ ಹರಿವಾಣವನ್ನು ಹೊತ್ತು ಎತ್ತುಪೋರಾಟದೊಂದಿಗೆ ಊರ್‌ಮಂದ್‌ಗೆ ಬರುತ್ತಾರೆ. ಅಲ್ಲಿ ಮೂರು ಬಾರಿ ಎತ್ತುಪೋರಾಟ ನಡೆಯುತ್ತದೆಯಲ್ಲದೆ, ಅಶ್ವತ್ಥ ವೃಕ್ಷದ ಮೇಲೆ ಕಟ್ಟಲಾದ ತೆಂಗಿನಕಾಯಿಗೆ ಗುಂಡು ಹಾರಿಸಿ ಕಟ್ಟನ್ನು ಸಡಿಲಿಸಲಾಗುತ್ತದೆ. ಬಳಿಕ ಕೊಳಲನ್ನು ನಿರ್ದಿಷ್ಟ ಸ್ಥಳದಲ್ಲಿ ನುಡಿಸುತ್ತಾ ಬಿದ್ದಿಯಂಡ ಮಾನಿಯತ್ತ ತೆರಳುತ್ತಾರೆ.

ಈ ಸಂದರ್ಭ ಎತ್ತುಪೋರಾಟದ ಎತ್ತುಗಳನ್ನು ಓಡಿಸಲಾಗುತ್ತದೆ. ಆಮೇಲೆ ದೇವರ ಜಳಕಕ್ಕೆ ಅನುಮತಿ ಕೋರಲಾಗಿ, ಧಾರೆಪೂಜೆ ನಡೆದ ಸ್ಥಳಕ್ಕೆ ತೆರಳಿ ಎಲ್ಲರೂ ಜಳಕ ಮಾಡಿ ದೇವಾಲಯಕ್ಕೆ ಹಿಂತಿರುಗುತ್ತಾರೆ. ಅಲ್ಲಿಗೆ ಪಟ್ಟಣಿ ಹಬ್ಬ ಮುಗಿಯುತ್ತದೆ. ಕೊನೆಯ ದಿನ ದೇವರಿಗೆ ಭಂಡಾರ ಹಾಕಲಾಗುತ್ತದೆ. ಈ ಸಂದರ್ಭ ನೂರಾರು ಲೀಟರ್ ಹರಕೆಯ ಎಣ್ಣೆಯನ್ನು ಭಕ್ತರು ದೇವರಿಗೆ ಅರ್ಪಿಸುತ್ತಾರೆ. ಪೂಜೆಯೊಂದಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುತ್ತದೆ. ಇಲ್ಲಿಗೆ ಮೂರು ದಿನಗಳ ಹಬ್ಬಕ್ಕೆ ತೆರೆಬೀಳುತ್ತದೆ.

English summary
Chinnatappa Lord Sri Krishna's Flute Festival celebrated by Kodavas in lone temple in Ayengeri village in Kodagu. Chinnatappa festival will be held in the month of February or in March. Golden Flute covered in white cloth of deity Lord Krishna will be brought out of temple. People will not eat meat and won't sleep on cot during the festival time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X