ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ನನ್ನ ಹರಪನಹಳ್ಳಿ ಮೇಷ್ಟ್ರು...

By * ಅಮರನಾಥ್.ವಿ.ಬ್ಯಾಡಗಿ, ಹರಪನಹಳ್ಳಿ
|
Google Oneindia Kannada News

Tribute to my Master- Amarnath VB
"ಅಣ್ಣಾ ಕಂಗ್ರಾಟ್ಸ್, ಹೃತ್ಪೂರ್ವಕ ಶುಭಾಶಯಗಳು, ತುಂಬಾ ಸಂತೋಷ"

"ಓ... ಥ್ಯಾಂಕ್ಯೂ... ಯಾರು ಹೇಳಿದ್ರು ನಿಂಗೆ?

"ನಮ್ಮಣ್ಣ ಈಗ ಫೋನ್ ಮಾಡಿ ಹೇಳಿದ್ರು ನಿಮಗೆ ಪ್ರಶಸ್ತಿ ಬಂದ ವಿಷಯ"

"ಹೋ ಹೌದಾ... ಸರಿ ಸರಿ, 5ನೇ ತಾರೀಖು ಬಂದ್ ಬಿಡಪ್ಪಾ ಬಳ್ಳಾರಿಗೆ, ಅಲ್ಲಿಯೇ ಪ್ರಶಸ್ತಿ ಪ್ರದಾನ ಸಮಾರಂಭವಿರೋದು"

"ಹೌದಣ್ಣಾ! ಸರಿ, ಖುಷಿಯಾಯ್ತು" ಎಂದ್ ಹೇಳಿ ಫೋನ್ ಇಟ್ಟ ಮೇಲೆ ಅಪ್ರಯತ್ನ ಪೂರ್ವಕವಾಗಿ ನನ್ ಮೇಷ್ಟ್ರು ನೆನಪಿನಂಗಳದಲ್ಲಿ ಅಡಿಯಿಟ್ರು. ಅವರೇ ನನ್ನ ಬದುಕಿಗೆ ಸರಿಯಾದ ದಾರಿ ತೋರಿಸಿ ಕೊಟ್ಟಂತಹವರು. ಅವರೊಂದಿಗೆ ಕಳೆದ ಸವಿ ನೆನಪುಗಳು ಕಣ್ಣ ಪರದೆಯ ಮೇಲೆ ಬರ್ತಾಯಿದ್ರೆ, ಮೊಗವರಳದೆ ಇರಲು ಸಾಧ್ಯವಿರಲಿಲ್ಲ.

ನನಗಿನ್ನೂ ನೆನಪಿದೆ, ನಾನು ಹರಪನಹಳ್ಳಿಯ ಜ್ಯೂನಿಯರ್ ಕಾಲೇಜಿನಲ್ಲಿ ಎಂಟನೇ ತರಗತಿಯಲ್ಲಿದ್ದಾಗ ಮಕ್ಕಳ ದಿನಾಚರಣೆಗೆ ಭಾಷಣ ಮಾಡೋಕೆ ಹೆಸರು ನೊಂದಾಯಿಸಲು ಸುತ್ತೋಲೆ ಬಂದಾಗ ಉತ್ಸಾಹದಿಂದ ನಾನೆ ಮೊದಲು ಹೆಸರು ಕೊಟ್ಟೆ ನಂತರ ಉಳಿದವರು ಕೊಟ್ರು.

ಕೊನೆಗೆ ಗುರುಗಳು ಅಂದ್ರು," "ಭಾಷಣಕ್ಕೆ ಹೆಸರು ಕೊಟ್ಟಿದ್ದೀರಿ, ಆದರೆ ಯಾರಾದರೊಬ್ಬರು, ಅಧ್ಯಕ್ಷರು ಆಗ್ಬೇಕಲ್ಲ, ಯಾರಾರಿಗೆ ಆಸಕ್ತಿಯಿದೆ ಕೈಯೆತ್ತಿ ಎಂದಾಗ, ಕೈಯೆತ್ತಿದ್ರೆ ಯಾರಾದ್ರು ಹೊಡಿತಾರೆ ಅನ್ನೋಹಾಗೆ ಕೈಯೆ ಮರೆತವರ ಹಾಗೆ ಕೂತಿದ್ವಿ, ಆಗ ಅವರ ಕಣ್ಣಿಗೆ ಬಿದ್ದದ್ದು ನಾನು.

ಆಗ ಅವರ ಎಂದಿನ ಶೈಲಿಯಲ್ಲಿ ಅಂದರೆ ಕೈಯನ್ನು ಹಿಂದಕ್ಕೆ ಕಟ್ಟಿಕೊಂಡು ಮುಂದಕ್ಕೆ ಬಗ್ಗಿ ಮೋಡಗಳ ಮರೆಯಿಂದ ಇಣುಕುವ ಸೂರ್ಯನ ಹಾಗೆಯಿದ್ದ ಕಣ್ಣುಗಳ ಮಿಟುಕಿಸಿ, "ಅಮರನಾಥ ವಿರುಪಾಕ್ಷಪ್ಪ ಬ್ಯಾಡಗಿ(ನನ್ನನ್ನ ಯಾವಾಗ್ಲೂ ಹೀಗೆಯೆ ಕರಿತಾ ಇದ್ದದ್ದು) ನೀನು ಅಧ್ಯಕ್ಷ ಆಗ್ತಿಯಾ?". "ಇಲ್ಲಾ ಸರ್, ಭಯವಾಗುತ್ತೆ" ಅಂತ ಎಷ್ಟು ಅಂದರೂ ಕೇಳಿರಲಿಲ್ಲ, ಹುರಿದುಂಬಿಸಿ ಮಾತಾಡಿ, ಕೊನೆಗೆ ನನ್ನನ್ನು ಆ ಕಾರ್ಯಕ್ರಮಕ್ಕೆ ಯಶಸ್ವಿ ಅಧ್ಯಕ್ಷನನ್ನಾಗಿ ಮಾಡಿಯೆ ಬಿಟ್ಟರು.

ಪದವಿ ಪೂರ್ವ ತರಗತಿಗಳೂ ಇದ್ದಿದ್ದರಿಂದ ಪ್ರಾಂಶುಪಾಲರ ಜೊತೆಗೆ ವೇದಿಕೆ ಹಂಚಿಕೊಳ್ಳುವಂತಹ ಭಾಗ್ಯ ಆ ನನ್ನ ನೆಚ್ಚಿನ ಮೇಷ್ಟ್ರರಿಂದಾಗಿ ನನಗೆ ಸಿಗುವಂತಾಯಿತು. ಹೀಗೆ ಅವರು ಯಾವಾಗ್ಲೂ ಎಲ್ಲರನ್ನೂ ಪ್ರೋತ್ಸಾಹಿಸುತ್ತಾ, ನಕ್ಕು-ನಗಿಸುತ್ತಾ, ಪ್ರೀತಿಯಿಂದ ಕಾಣ್ತಾ ಇದ್ದಿದ್ದರಿಂದ ಎಲ್ಲರಿಗೂ ತುಂಬಾ ಅಚ್ಚು-ಮೆಚ್ಚಿನ ಮೇಷ್ಟ್ರಾಗಿದ್ದರು.

ನಾವೇನಾದ್ರು ತಪ್ಪು ಮಾಡಿದ್ರೆ, ತಪ್ಪು ಉತ್ತರ ಹೇಳಿದ್ರೆ ಮೂತಿ ತಿರುಗಿಸಿ ಕೋಪ ಮಾಡಿಕೊಳ್ತಾಯಿದ್ದದ್ದು, ನಮ್ಮಲ್ಲಿ ಆ ತಪ್ಪು ಮರುಕಳಿಸಿದಂತೆ ಮಾಡುತ್ತಿತ್ತು. ವಿದ್ಯಾಭ್ಯಾಸ ಮುಗಿಸಿದ ಮೇಲೆ ಊರಿಗೆ ಹೋದಾಗ, ಅವರು ಯಾವಾಗಲಾದರೂ ಎದುರಿಗೆ ಸಿಕ್ಕಾಗ ನಿಂತು ಮಾತನಾಡಿಸದಿದ್ದರೆ ಸಮಾಧಾನವಿರುತ್ತಿರಲಿಲ್ಲ.

ನಂತರ ಅವರು ಬೇರೆ ಊರಿಗೆ ಹೋದಮೇಲೆ ಅವರ ಬಗ್ಗೆ ಅಷ್ಟೊಂದು ಮಾಹಿತಿ ಇರಲಿಲ್ಲ, ಸಾಫ್ಟ್ ವೇರ್ ಇಂಜಿನಿಯರ್ ಆದ್ಮೇಲೆ ಅವರನ್ನು ಭೆಟ್ಟಿಯಾಗಲು ಆಗಿರಲಿಲ್ಲ. ತುಂಬಾ ದಿನಗಳಿಂದ ಅವರನ್ನು ಭೆಟ್ಟಿಯಾಗಿ "ಸರ್ ನಿಮ್ಮಿಂದಾಗಿ ನಾವು ಜೀವನದಲ್ಲಿ ಇಷ್ಟು ಮುಂದೆ ಬರಲು ಸಾಧ್ಯವಾಯ್ತು" ಎಂದು ಹೇಳಲು ಮನಸ್ಸು ಕುಣಿತಾಯಿತ್ತು. ಅದ್ಯಾಕೋ ಗೊತ್ತಿಲ್ಲ ಒಂದಿನ ಇದ್ದಕ್ಕಿದ್ದಂಗೆ ಅವರನ್ನು ತುಂಬಾ ನೋಡಬೇಕು, ಮಾತನಾಡಿಸಬೇಕು ಅನ್ನಿಸ್ತು ಆದರೆ ಅವರ ಬಗ್ಗೆ ಸುಳಿವು ಸಿಕ್ಕಿರಲಿಲ್ಲ.

ಊರಿಗೆ ಹೋದಾಗ ಅವರ ಜೊತೆ ಕೆಲಸ ಮಾಡಿದ್ದ ನಮ್ಮ ದೊಡ್ಡಪ್ಪ-ದೊಡ್ಡಮ್ಮನವರ ಹತ್ತಿರ ವಿಚಾರಿಸಿದರೆ ಅವರು ಹಗರಿಬೊಮ್ಮನಹಳ್ಳಿಯಲ್ಲಿ ಇದ್ದ ಹಾಗೆ ಇತ್ತು ಅಂತ ಉತ್ತರ ಬಂತು, ಆಯ್ತು ಮತ್ತೊಮ್ಮೆ ಬಂದಾಗ ಅಲ್ಲಿಗೆ ಹೋಗಿ ಮಾತಾನಾಡಿಸಿ ಬಂದರಾಯ್ತು ಅಂತ ಅನ್ಕೊಂಡು ಬೆಂಗಳೂರಿಗೆ ವಾಪಾಸು ಬಸ್ನಲ್ಲಿ ಬರಬೇಕಾದ್ರೆ, ಎಂದೂ ಮಾಡದ ಹಳೆಯ ಸ್ನೇಹಿತನೊಬ್ಬ ಫೋನ್ ಮಾಡಿ, "ಹೇ ಎರಡು ದಿನಗಳ ಹಿಂದೆ ತಿಪ್ಪೇಸ್ವಾಮಿ ಸರ್ ನಮ್ಮನ್ನು ಬಿಟ್ಟು ಹೋಗ್ಬಿಟ್ರು, ಏನೋ ಹೃದಯ ಸಮಸ್ಯೆ ಆಗಿತ್ತಂತೆ, ಹೈದರಾಬಾದಿಗೆ ಕರ್ಕೊಂಡ್ರು ಹೋಗಿದ್ದರಂತೆ ಏನೂ ಉಪಯೋಗವಾಗಲಿಲ್ಲವಂತೆ".

ಕೇಳಿ ಮನಸ್ಸಿಗೆ ತುಂಬಾ ಖೇದವಾಯ್ತು, ಛೇ ಕಡೆಗೂ ಅವರನ್ನ ನೋಡೋ ಭಾಗ್ಯ ನನಗೆ ಆ ದೇವರು ಕರುಣಿಸಲಿಲ್ಲವಲ್ಲ ಅನ್ನೋ ಕೊರಗು ಹಾಗೆಯೆ ಉಳಿಯಿತು. ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲೆಂದು ಈ ನುಡಿ ನಮನ.

ಸತ್ಯ-ಧರ್ಮ-ನಂಬಿಕೆಗಳ ಬುನಾದಿ ತೋಡಿ
ಗುರಿಯತ್ತ ದಾರಿ ತೋರಿ
ಮುನ್ನಡೆಸಿದ ಗುರುಗಳಿಗೆ
ಈ ಶಿಷ್ಯನ ನುಡಿ ನಮನ,
ಮತ್ತೊಮ್ಮೆ ಹುಟ್ಟಿಬನ್ನಿ
ಅರಳಿಸಲು ಭವ್ಯ ಪ್ರಜೆಗಳ ಭವಿಷ್ಯವನ್ನ;

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X