ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಬಾಲ್ಯ ಮರುಕಳಿಸಿದ ಶಿಕ್ಷಕರ ದಿನಾಚರಣೆ

By * ಪ್ರಹ್ಲಾದ ಕುಳಲಿ, ಬೆಂಗಳೂರು
|
Google Oneindia Kannada News

Prahlad Kulali, Journalist
ನೆನಪುಗಳೇ ಹಾಗೆ, ನಮ್ಮನ್ನು ಹಿಂಬರಕಿ ಎಳೆದೊಯ್ದು ಬಾಲ್ಯದಲ್ಲಿ ನಾವು ಕಳೆದ ಅದ್ಭುತ ದಿನಗಳತ್ತ ಎಳೆದೊಯ್ದು ನಿಲ್ಲಿಸಿಬಿಡುತ್ತವೆ. ಸೆಪ್ಟೆಂಬರ್ 5 ಬಂದರೆ ಪ್ರತಿವರ್ಷ ನನ್ನ ಅಂಗಿಯನ್ನು ಹಿಡಿದೆಳೆದು ನೇರವಾಗಿ ಅಂದಿನ ವಿಜಾಪುರ ಜಿಲ್ಲೆ, ಈಗಿನ ಬಾಗಲಕೋಟೆ ಜಿಲ್ಲೆಯ ಕವಿಚಕ್ರವರ್ತಿ ರನ್ನ ಖ್ಯಾತಿಯ ಮುಧೋಳದ ಸರಕಾರಿ ಪ್ರಾಥಮಿಕ ಶಾಲೆಯ ಮೆಟ್ಟಿಲುಗಳ ಮೇಲೆ ಕುಳ್ಳಿರಿಸಿಬಿಡುತ್ತದೆ.

ನಾನೀಗ ಹೇಳುತ್ತಿರುವುದು ಸರಿಯಾಗಿ ಆರೂವರೆ ದಶಕಗಳ ಹಿಂದೆ ನಾನು ಆ ಕುಗ್ರಾಮದಲ್ಲಿ ಕಳೆದ ಬಾಲ್ಯ ಮತ್ತು ಎಂದೂ ಮರೆಯಲಾಗದ, ಮನಃಪಟಲದ ಮೇಲೆ ಅಚ್ಚಳಿಯದೆ ಉಳಿದಿರುವ ಶಾಲಾ ಮುಖ್ಯೋಪಾಧ್ಯಾಯರ ಬಗ್ಗೆ. ನನಗೀಗ 74 ವರ್ಷ ವಯಸ್ಸು. ಆದರೂ, ಆ ನೆನಪುಗಳನ್ನು ನೆನೆದರೆ, ಮುಖ್ಯೋಪಾಧ್ಯಾಯರ ವ್ಯಕ್ತಿತ್ವವನ್ನು ಮೆಲುಕುಹಾಕಿದರೆ ನನಗೆ ಚಡ್ಡಿ ಹಾಕಿ ತಿರುಗುತ್ತಿದ್ದ ಬಾಲ್ಯವನ್ನು ಮರುಕಳಿಸಿಬಿಡುತ್ತದೆ, ಮತ್ತೆ ಬಾಲಕನನ್ನಾಗಿ ಮಾಡಿಬಿಡುತ್ತದೆ, ಮನಸ್ಸು ಮತ್ತೂ ಕೋಮಲವಾಗಿಬಿಡುತ್ತದೆ. ಅದು, ನೆನಪುಗಳ ಶಕ್ತಿ.

ಶಾಲಾ ಕಟ್ಟಡದ ಮುಂಭಾಗದ ಒಂದು ಮೂಲೆಯಲ್ಲಿ ಮಾತನಾಡದೆ ಕುಳಿತುಕೊಂಡೇ ವಿದ್ಯಾರ್ಥಿಗಳಲ್ಲಿ, ಶಿಕ್ಷಕ ವೃಂದದಲ್ಲಿ ಸಮಯಪಾಲನೆ, ಶಿಸ್ತನ್ನು ಮೂಡಿಸುತ್ತಿದ್ದ ಅವರ ವೈಖರಿ ಎಂಥವರಿಗೂ ಆದರ್ಶ. ತರಗತಿಗೆ ವಿದ್ಯಾರ್ಥಿಗಳು ತಡವಾಗಿ ಬರುವುದನ್ನು ಅವರು ಎಳ್ಳಷ್ಟೂ ಸಹಿಸುತ್ತಿರಲಿಲ್ಲ. ಅರ್ಧಗಂಟೆ ಮೊದಲೇ ಕುಳಿತು ಸುತ್ತಲೂ ದೃಷ್ಟಿ ಹರಿಸುತ್ತಿದ್ದರು. ತಡ ಮಾಡಿ ಬಂದಾಗ, ಅವರ ಕಣ್ಣು ತಪ್ಪಿಸಿ ತರಗತಿ ಸೇರಿಕೊಳ್ಳುವ ವಿದ್ಯಾರ್ಥಿಗಳ ಸಾಹಸ, ದುಸ್ಸಾಹಸವಾಗುತ್ತಿತ್ತು. 'ಯಾರದು?' ಎಂಬ ಮೂರಕ್ಷಗಳ ಗುಡುಗು ಹೆದರಿದ ವಿದ್ಯಾರ್ಥಿಗಳ ಧೈರ್ಯವನ್ನೆಲ್ಲ ದ್ರವೀಕರಿಸುತ್ತಿತ್ತು. ತಡವಾಗಿ ಬಂದ ಶಿಕ್ಷಕರ ಪಾಡು ಸಹ ಅದೇ ಆಗಿರುತ್ತಿತ್ತು!

ಶಿಕ್ಷಕರ ದಿನ ನಮ್ಮ ವ್ಯಕ್ತಿತ್ವವನ್ನು ರೂಪಿಸಿದ ಎಲ್ಲ ಗುರುಗಳಿಗೂ ಒಂದು ನಮಸ್ಕಾರ ಹೇಳೋಣ. ಕಾಲ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಹಳೆ ನೀರು ಹರಿದು ಹೊಸ ನೀರು ಸೇರಿಕೊಂಡಿದೆ. ಶಿಕ್ಷಣದ ವ್ಯವಸ್ಥೆ ಬದಲಾಗಿದೆ. ಶಿಕ್ಷಕರ ಮನೋಭಾವ, ಕಲಿಸುವ ರೀತಿ, ವಿದ್ಯಾರ್ಥಿಗಳನ್ನು ನಡೆಸಿಕೊಳ್ಳುವ ಬಗೆ ಎಲ್ಲವೂ ಬದಲಾಗಿದೆ. ಆದರೆ, ಇಂದಿನ ದಿನವೂ ಅಂದು ನಾನು ಕಂಡ, ಪೂಜ್ಯಭಾವದಿಂದ ಗೌರವಿಸಿದ ಮುಖ್ಯೋಪಾಧ್ಯಾಯ(ರಂಗಣ್ಣ ಅವರ ಹೆಸರಿರಬಹುದೆಂದು ನನ್ನ ಊಹೆ)ರಂಥ ಗುರುವು ಇಂದಿನ ವಿದ್ಯಾರ್ಥಿಗಳಿಗೂ ಇದ್ದಿದ್ದರೆ ಎಷ್ಟು ಚೆನ್ನ ಎಂದು ಅನ್ನಿಸದೇ ಇರದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X