ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಾಸೆ ದಿನ ಬಂದ್ರೆ ರಾಜ್ ನೆನಪು ಬರ್ತದೆ

By Shami
|
Google Oneindia Kannada News

ಆಷಾಢಮಾಸ ಕೃಷ್ಣ ಪಕ್ಷ ಸೋಮವಾರ-ಮಂಗಳವಾರ ಆಗಸ್ಟ್ 9-10, ಭೀಮನ ಅಮಾವಾಸ್ಯೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಈ ದಿನವನ್ನು ಒಂದು ವ್ರತದ ದಿನವನ್ನಾಗಿ, ಹಬ್ಬದ ದಿನವನ್ನಾಗಿ, ಪೂಜಾ ಪುನಸ್ಕಾರಗಳ ದಿವವನ್ನಾಗಿ ಆಚರಿಸುವುದುಂಟು. ವರ್ಷದ ಪ್ರತೀ ತಿಂಗಳು ಅಮಾವಾಸ್ಯೆ ಬರುತ್ತದೆ. ಆದರೆ, ಭೀಮನ ಅಮಾವಾಸ್ಯೆಯ ಜತೆಗೆ ಆಗಮಿಸುವ ಧಾರ್ಮಿಕ ಚಟುವಟಿಕೆಗಳಿಂದಾಗಿ ಅದು ಹೆಚ್ಚು ಜನಪ್ರಿಯ.

ಕನ್ನಡನಾಡಿನ ಸಾಮಾಜಿಕ ಚರಿತ್ರೆಯಲ್ಲಿ ಭೀಮನ ಅಮಾವಾಸ್ಯೆಗೆ ಕರಾಳ ಛಾಯೆ ಲೇಪಿತವಾಗಿದೆ. ಕಾರಣ, ನಟ ಸಾರ್ವಭೌಮ ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಅವರನ್ನು ಖಳ ವೀರಪ್ಪನ್ ಅಪಹರಿಸಿ ಕಾಡಿಗೆ ಕದ್ದೊಯ್ದದ್ದು ಈ ದಿನವೇ. ಈ ಘಟನೆ ನಡೆದು ಇಂದಿಗೆ ಸರಿಯಾಗಿ ಹತ್ತು ವರ್ಷಗಳು ತುಂಬುತ್ತವೆ. ಕನ್ನಡಿಗರು ಮರೆಯಲಾಗದ ಕಪ್ಪು ದಿನಕ್ಕೆ ಈ ಅಮಾವಾಸ್ಯೆಯ ದಿನ ಸೇರ್ಪಡೆಯಾಗಿದೆ.

ರಾಜ್ ಅಪಹರಣ, 108 ದಿನಗಳ ವನವಾಸ, ಈ ಮಧ್ಯೆ ವೀರಪ್ಪನ್ ಮತ್ತು ಆತನ ಸಹಚರರೊಂದಿದೆ ಸಂಧಾನಗಳು, ಮಾತುಕತೆಗಳು ನಡೆದುದು ನಮಗೆ ನೆನಪಿದೆ. ಅಂತೂ ಇಂತೂ ರಾಜಣ್ಣನ ಬಿಡುಗಡೆಯಾಗಿ ಅವರು ಕನ್ನಡ ನೆಲಕ್ಕೆ ಮರಳಿ ಬಂದುದು ಒಂದು ರೋಚಕ ಕತೆ. ಅಣ್ಣ ಅವರು ಈಗ ನಮ್ಮ ಕಣ್ಣು ಮುಂದೆ ಇಲ್ಲ ನಿಜ, ಆದರೆ ಅವರ ಪಟ್ಟ ನೋವು, ನಲಿವು ಸಂಭ್ರಮಗಳಲೆಲ್ಲ ಭಾಗಿಯಾಗುವುದಕ್ಕೆ ಅವರ ಅಭಿಮಾನಿ ಸಮೂಹ ಯಾವ ಕ್ಷಣದಲ್ಲೂ ಸಿದ್ಧ.

ಈ ಸಂದರ್ಭಕ್ಕೆ ರಾಜ್ ಅಪಹರಣದ ಸುದ್ದಿಯ ಕೆಲವು ಸುದ್ದಿ ಚಿತ್ರಗಳನ್ನು ಈ ದಿನ ನಾವು ನಿಮಗೆ ಪುನಃ ನೆನಪಿಸುತ್ತಿದ್ದೇವೆ. ಸುಸಜ್ಜಿತ ಮನೆಯಲ್ಲಿ, ಸಂಸಾರ ಸಮೇತ ಬಾಳುತ್ತಿದ್ದ ಒಬ್ಬ ಸುಸಂಸ್ಕೃತ ವ್ಯಕ್ತಿ ಕಾಡುಮೇಡುಗಳಲ್ಲಿ 108 ದಿನ ಅಲೆಯಬೇಕಾದ ವಿಧಿ ವಿಚಿತ್ರವನ್ನು ಊಹಿಸಿಕೊಂಡರೆ ಮೈ ಝುಂ ಎನ್ನದೇ ಇರುವುದಿಲ್ಲ.

ವೀರಪ್ಪನ್ ವಿರೋಧಿ ದಿನಾಚರಣೆ : ಭೀಮನ ಅಮಾಸ್ಯೆಯಂದು ರಾಜ್ ಅವರ ಸ್ಮರಣೆ ಮಾಡುವುದು ಅನೇಕ ದೃಷ್ಯಿಕೋನಗಳಿಂದ ಅರ್ಥಪೂರ್ಣವಾಗುತ್ತದೆ. ದಕ್ಷಿಣ ಭಾರತದಲ್ಲು ತಾಂಡವವಾಡಿದ್ದ ಭಯೋತ್ಪಾದನೆ, ಆನೆಗಳ ಸಾವು, ದಂತ ಕಳ್ಳತನ, ಶ್ರೀಗಂಧದ ಮರ ಕಳ್ಳ ಸಾಗಾಣಿಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಿರಪರಾಧಿ, ಕರ್ತವ್ಯ ನಿರತ ಪೊಲೀಸ್ ಮತ್ತು ಅಮಾಯಕ ಪ್ರಜೆಗಳ ದಾರುಣ ಹತ್ಯೆಯನ್ನು ಸಾಂಕೇತಿಕವಾಗಿ ವಿರೋಧಿಸುವ ಸಂದರ್ಭ ಇದಾಗಿದೆ.

ಅಲ್ಲದೆ, ಶಿಸ್ತಿಗೆ ಕಾರ್ಯತತ್ಪರತೆಗೆ, ಅಭಿನಯಕ್ಕೆ ಮತ್ತು ಸರಳ ಜೀವನಕ್ಕೆ ಇನ್ನೊಂದು ಹೆಸರಾಗಿದ್ದ ರಾಜ್ ಕುಮಾರ್ ಅವರ ವೃತ್ತಿ ಮತ್ತು ಜೀವನದ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದರತ್ತ ಪ್ರತಿಜ್ಞೆ ಮಾಡುವುದಕ್ಕೆ ಕನ್ನಡ ಚಿತ್ರೋದ್ಯಮಕ್ಕೆ ಈ ದಿನಕ್ಕಿಂತ ಒಳ್ಳೆಯ ಇನ್ನೊಂದು ಸುದಿನ ಇರಲಾರದು. ಒಂದು ಚಿತ್ರದಲ್ಲಿ ಕೆಲಸಮಾಡಿ, ಐದು ನಿಮಿಷದ ಟಿವಿ ಸಂದರ್ಶನ ಕೊಟ್ಟವರೆಲ್ಲ ಬಹಳ ಸಾಧಿಸಿದವರಂತೆ ಭಾವಿಸುವ ಮನೋಭಾವ ಅಳಿಯಬೇಕು.

ಕಲಾಸೇವೆ, ಜತೆಗಾರರ ಚಿತ್ರ ಕರ್ಮಿಗಳಿಗೆ ಗೌರವ ಮತ್ತು ಉತ್ತಮ ಸಂದೇಶ ಬೀರುವ ಕೌಟುಂಬಿಕ ಚಿತ್ರಗಳನ್ನು ನಿರ್ಮಿಸದೆ ಅದೇ ಕಚಪಚ ಚಿತ್ರಗಳನ್ನು ತೆಗೆಯುತ್ತಾ ಹೋಗುತ್ತಿದ್ದರೆ ಕನ್ನಡದ ಹಿರಿಯ ಚಿತ್ರ ಕರ್ಮಿಗಳಿಗೆ ನಿಜವಾದ ಗೌರವ ತೋರಿದಂತಾಗುವುದಿಲ್ಲ. ಭೀಮನ ಅಮಾವಾಸ್ಯೆಯ ಕತ್ತಲೆ ದಾರಿ ದೂರ, ಇನ್ನೂ ದೂರ ಆಗುತ್ತದೆ, ಅಷ್ಟೆ.

ಓದಲು ಮರೆಯದಿರಿ
ವೀರಪ್ಪನ್ ನಿಂದ ರಾಜ್ ಅಪಹರಣ ಆಗಿದ್ದು ಹೀಗೆ...
ಅಮಾವಾಸ್ಯೆ ರಾತ್ರಿ ಅಂದುಕೊಂಡದ್ದು ಕಾಡುಗಳ್ಳ ಸಾಧಿಸಿದ್ದು ಹೀಗೆ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X