ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷಯ ತದಿಗೆ : ಚಿನ್ನದಂತಹ ದಿನಾಚರಣೆ

By * ಗುರುರಾಜ ಪೋಶೆಟ್ಟಿಹಳ್ಳಿ
|
Google Oneindia Kannada News

Akshaya Tritiya, auspecious day to purchase gold
ಯುಗಾದಿ ಬೇವು ಬೆಲ್ಲದ ಸವಿ ಆರುವ ಮುನ್ನ ಭುವಿಯು ಬೆಂದು ಬಾಯ್ದೆರೆದು ಮಳೆಗಾಗಿ ಕಾತರಿಸುವ ಸಮಯ. ಹಸುರುಡುಗೆಗಾಗಿ ಇಳೆ ಎದುರುನೋಡುವ ಸಮಯ. ಅದೇ ಸಮಯದಲ್ಲಿ ಮನೆಯಲ್ಲಿ ಅಮ್ಮನ ಗೊಣಗು. ಈ ಸಲದ ತದಿಗೆಗೆ ಒಂದು ಮೂಗು ಬೊಟ್ಟು ಆದರೂ ಕೊಳ್ಳಲಾಗುವುದೋ ಇಲ್ಲವೋ?

ಆಭರಣಗಳ ಭಂಡಾರವೇ ಮನೆಯಲ್ಲಿದ್ದರೂ ಅಂದು ಕೊಳ್ಳುವುದೊಂದು ರೂಢಿ. ಸಾಸಿವೆ ಡಬ್ಬದ ಉಳಿತಾಯದ ಹಣ ಅಪ್ಪನ ಕಣ್ತಪ್ಪಿಸಿ ಎತ್ತಿಟ್ಟ ಕಾಂಚಾಣ. ನಗುನಗುತ್ತಲೇ ಹಳದಿ ಲೋಹಕ್ಕಾಗಿ ಪುಡಿಗಾಸನ್ನು ಬರಿದು ಮಾಡುವ ದಿನ. ಅದು ಅಕ್ಷಯ ತದಿಗೆ. ಎಂದೂ ಕರಗದ ತನ್ನ ಇಡುಗಂಟನ್ನು ಆಭರಣದಂಗಡಿಗೆ ದಾಂಗುಡಿ ಇಟ್ಟು ಇಡಿ ಇಡಿಯಾಗಿ ಕರಗಿಸುವ ದಿನ.

ಸಂಪತ್ತಿನ ಸಂಚಯವೆಂದರೆ ಕೇವಲ ಕೂಡಿಡುವುದಲ್ಲ, ಕಾಪಾಡುವುದಲ್ಲ, ಬದುಕಿನ ಸಂಭ್ರಮವನ್ನು ಅಭಿವ್ಯಕ್ತಗೊಳಿಸಲು, ಮುಂದಿನ ದಿನಗಳಿಗೆ ಒಳ್ಳೆಯ ನೆಲೆಯನ್ನು ಒದಗಿಸಲು ಆಪತ್‌ಕಾಲಕ್ಕೆ ಒದಗಿಬರಲು ಸಂಪತ್ತನ್ನು ಕೂಡಿಡುವುದು 'ಜಾಣತನ". ಅಕ್ಷಯ ತೃತೀಯ ಅದಕ್ಕೊಂದು ಶುಭ ಸಂದರ್ಭ. ಅಕ್ಷಯ ತೃತೀಯಾ-ಅಕ್ಷಯ ಭಾಗ್ಯ, ಅನನ್ಯ ಶುಭ, ಅಗಣಿತ ಪುಣ್ಯ, ಅಗಮ್ಯ ಶ್ರೇಯಸ್ಸು ಸಿದ್ದಿಸಲು ವಿಶೇಷ ಸಂದರ್ಭ.

ಅಕ್ಷಯ ತೃತೀಯಾ ಸಮೀಪಿಸುತ್ತಿದ್ದಂತೆ (16 ಮೇ ಭಾನುವಾರ) ಚಿನ್ನಾಭರಣಗಳನ್ನು ಮಾಡಿಸಿಟ್ಟು ಆ ದಿನವೇ ಅಕಾರಗಳನ್ನು ಪಡೆದುಕೊಳ್ಳುವವರಿದ್ದಾರೆ. ಚಿನ್ನಕ್ಕೆ ಚಿನ್ನವೇ ಸಾಟಿ. ಚಿನ್ನಾಭರಣಗಳಿಗೆ ಮನಸೋಲದವರು ಯಾರು? ವಜ್ರದ ವೈಭವಕ್ಕೆ ತಲೆದೂಗದವರು ಯಾರು? ಮುತ್ತುರತ್ನಗಳ ಅದ್ಭುತ ವಿನ್ಯಾಸಗಳಿಗೆ ಮಾರು ಹೋಗದವರು ಯಾರು? ಪ್ಲಾಟಿನಂ ಆಭರಣಗಳ ಘನತೆಗೆ ಮನ್ನಣೆ ನೀಡದವರು ಯಾರು?

ರಾಜ ಮಹಾರಾಜರುಗಳ ಕಾಲದಲ್ಲಿ ಚಿನ್ನದ ನಾಣ್ಯಗಳೇ ಚಲಾವಣೆಯಲ್ಲಿದ್ದವರು. ಈಗ ದೇವಸ್ಥಾನಗಳಿಗೆ ಚಿನ್ನದ ಆಭರಣ, ಕಿರೀಟ ಇತ್ಯಾದಿಗಳ ಜೊತೆಗೆ ಚಿನ್ನದ ರಥವನ್ನು ಕೂಡ ನಿರ್ಮಿಸಲಾಗುತ್ತಿದೆ. ಇದು ನಿಜ ಅರ್ಥದ ಸುವರ್ಣಯುಗ. ಅಕ್ಷಯ ತೃತೀಯ ಬಂತೆಂದರೆ ಸಾಕು ಬಂಗಾರದ ಅಂಗಡಿಗಳಲ್ಲಿ ಗಡಿಬಿಡಿ ಆರಂಭವಾಗುತ್ತದೆ. ತಿಂಗಳಿಗೂ ಮೊದಲೇ ಬುಕಿಂಗ್. ವಿಶೇಷ ರಿಯಾಯಿತಿ ದರದ ಮಾರಾಟ, ತರಾವರಿ ವಿನ್ಯಾಸಗಳ ಪರಿಚಯ, ಒಟ್ಟಿನಲ್ಲಿ ಗ್ರಾಹಕರನ್ನು ಸೆಳೆಯಲು ಇನ್ನಿಲ್ಲದ ಹರಸಾಹಸ. ಅಕ್ಷಯ ತೃತೀಯದಂದು ಬಂಗಾರವನ್ನು ಖರೀದಿಸುವುದು ಪ್ರಶಸ್ತ ಎಂದು ನಿರೂಪಿಸುವ ದೃಷ್ಟಾಂತಗಳು ಭಾರತೀಯ ಪುರಾಣಗಳಲ್ಲಿ ಹೇರಳವಾಗಿವೆ.

ಭಾರೀ ಬೇಡಿಕೆ : ದೇಶದಲ್ಲಿ ದಿನವೊಂದಕ್ಕೆ ಸುಮಾರು 1.75 ಟನ್ ಚಿನ್ನದ ಖರೀದಿಯಾಗುತ್ತದೆ. ಆದರೆ ಅಕ್ಷಯ ತದಿಗೆ ದಿನದಂದು ಇದರ ಖರೀದಿ 7 ಟನ್‌ಗಳಿಗೆ ಮುಟ್ಟುತ್ತದೆ ಎನ್ನುವ ಅಂದಾಜು ಇದೆ. ಈ ಕಾರಣದಿಂದಲೇ ರಾಜ್ಯದ ಎಲ್ಲಾ ಚಿನ್ನದ ಮಳಿಗೆಗಳು ಅಂದು ನವವಧುವಿನಂತೆ ಕಂಗೊಳಿಸುತ್ತದೆ. ಕಣ್ಣುಗಳನ್ನು ಕೋರೈಸುವ ವಿವಿಧ ನಮೂನೆಗಳ ಚಿನ್ನದ ಒಡವೆಗಳು ಮಳಿಗೆಗಳನ್ನು ಅಲಂಕರಿಸುತ್ತವೆ.

ಕಳೆದ ಬಾರಿ ಅಕ್ಷಯ ತದಿಗೆಯಂದು ಅನೇಕ ಚಿನ್ನದ ಮಳಿಗೆಗಳಲ್ಲಿ ಜನರ ಜಾತ್ರೆ ಎಷ್ಟಿತ್ತೆಂದರೆ ಅನೇಕ ಅಂಗಡಿಗಳನ್ನು ಜನರನ್ನು ನಿಯಂತ್ರಿಸಲಾರದೇ ಬಾಗಿಲನ್ನು ಮುಚ್ಚಿದ್ದವು. ಇನ್ನು ಅನೇಕ ಮಳಿಗೆಗಳು ಬೆಳಿಗ್ಗೆ 6 ಗಂಟೆಗೆ ತೆರೆದಿದ್ದವು. ಅವು ಮುಚ್ಚಿದ್ದು ಮರುದಿನ ಬೆಳಿಗ್ಗೆಯೇ! ಈ ದಿನದಂದು ವರ್ಷದಿಂದ ವರ್ಷಕ್ಕೆ ಚಿನ್ನದ ಖರೀದಿದಾರರು ಹೆಚ್ಚುತ್ತಿರುವುದೇ ಇದಕ್ಕೆ ಕಾರಣ ಎಂದು ಹೇಳಬಹುದೇನೋ.

2004ರಲ್ಲಿನ ಅಕ್ಷಯ ತದಿಗೆ ದಿನ 8 ಸಾವಿರ ಕೆ.ಜಿ. ಮಾರಾಟವಾಗಿದ್ದರೆ 2005ರಲ್ಲಿ 15 ಸಾವಿರ ಕೆ.ಜಿ.ಗೆ ಏರಿತ್ತು. 2006ರಲ್ಲಿ ಇದರ ಸಂಖ್ಯೆ 40 ಸಾವಿರ ಕೆ.ಜಿ. ಮುಟ್ಟಿತ್ತು. 2007ರಲ್ಲಿ ಸುಮಾರು 60 ಸಾವಿರ ಕೆ.ಜಿ. ವಹಿವಾಟು ನಡೆದಿತ್ತು ಎನ್ನುತ್ತದೆ ವರದಿ.

ಯಾವುದು ಮರುಳು?

ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ 'ಅಕ್ಷಯ ತೃತೀಯ"ದಂತಹ ಹಬ್ಬಗಳ ಹೆಸರಿನಲ್ಲಿ ಜನರನ್ನು ಮರುಳು ಮಾಡಲು ಅಂಗಡಿಯ ಮಾಲೀಕರು ಕಾಯುತ್ತಾರೆ. ಉಚಿತ ಕೊಡುಗೆ, ರಿಯಾಯಿತಿ ಬೆಲೆಯಲ್ಲಿ ಆಭರಣಗಳ ಮಾರಾಟ ಬಲೆ ಜೋರು. ಸಂಪ್ರದಾಯದ ಹೆಸರಿನಲ್ಲಿ ಹಬ್ಬಗಳು ವಾಣಿಜ್ಯೀಕರಣ ಆಗುತ್ತಿದೆಯೇ ಅಥವಾ ಈ ಒಂದು ಪುಣ್ಯದಿನ ಚಿನ್ನ ಪಡೆದರೆ ಅದು ವೃದ್ಧಿಯಾಗುತ್ತದೇ ಎಂಬುದು ಅವರವರ ತರ್ಕಕ್ಕೆ ಬಿಟ್ಟ ವಿಚಾರ.

ಸಾಂಪ್ರದಾಯಿಕ ಹಿಂದೂ ಕ್ಯಾಲೆಂಡರ್‌ನಲ್ಲಿ ಅಮಾವಾಸ್ಯೆ ಕಳೆದು ಬರುವ ವೈಶಾಖ ಮಾಸದ ಮೂರನೇ ದಿನ ಅಕ್ಷಯ ತೃತೀಯ. ಧಾರ್ಮಿಕ ನಂಬಿಕೆಯುಳ್ಳವರಿಗೆ ಉತ್ತರೋತ್ತರ ಯಶಸ್ಸು, ಅಭಿವೃದ್ಧಿಗೆ ನಾಂದಿ ಹಾಡುವ ದಿನ. ಸಾಮಾಜಿಕ ನಿರ್ಬಂಧ, ಧಾರ್ಮಿಕ ಬೇಧವಿಲ್ಲದೇ ಎಲ್ಲ ವರ್ಗದವರೂ ಈ ದಿನಕ್ಕೆ ವಿಶೇಷ ಪ್ರಾಧಾನ್ಯ ಕೊಡುತ್ತಾರೆ.

ಬಂಗಾರವೇ ಬೇಕೆಂದೇನಿಲ್ಲ. ಬೆಳ್ಳಿಯನ್ನು ಪ್ಲಾಟಿನಂ ಹಾಗೂ ಚಿನ್ನಕ್ಕೆ ಪೂರಕವಾಗಿ ಬಳಸಬಹುದು. ಬೆಳ್ಳಿ ಲೋಹ, ಬಂಗಾರ ಪ್ಲಾಟಿನಂಗಳನ್ನು ಬೆಲೆ ಬಾಳುವಂತದ್ದೂ ಅಲ್ಲ. ಆದರೆ ಬೆಳ್ಳಿ ಕೂಡ ಆಕರ್ಷಕ ಲೋಹ. ಅದರಿಂದ ತಯಾರಿಸಿದ ನಾನಾ ವಿನ್ಯಾಸದ ಒಡವೆಗಳು ನಿಮ್ಮ ವ್ಯಕ್ತಿತ್ವಕ್ಕೆ ಒಂದಿಷ್ಟು ಮೆರುಗು ನೀಡುತ್ತವೆ. ಚಿನ್ನ ಎಲ್ಲರ ಚರ್ಮಕ್ಕೂ ಹೊಂದಿಕೊಳ್ಳುವುದಿಲ್ಲ. ಅಲರ್ಜಿಯೂ ಉಂಟಾಗಬಹುದು. ಹೀಗಾಗಿ ಎಂಥ ಲೋಹದ ಆಭರಣ ತಮ್ಮ ಚರ್ಮಕ್ಕೆ ಸೂಕ್ತ ಎಂಬುದನ್ನು ತಿಳಿದಿಕೊಂಡು ಆನಂತರ ಖರೀದಿಸಿ.

ಎಚ್ಚರ ಎಚ್ಚರ!

* ಹಾಲ್ ಮಾರ್ಕ್ ಉಳ್ಳ ಒಡವೆಗಳನ್ನೇ ಖರೀದಿಸಿ.
* ಚಿನ್ನದ ಅಲರ್ಜಿ ಇರುವವರು ಪ್ಲಾಟಿನಂ ಒಡವೆ ಖರೀದಿಸುವುದು ಸೂಕ್ತ.
* ಮುತ್ತು, ಹವಳ ಖರೀದಿಸುವಾಗ ಅಸಲಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
* ಗುಣಮಟ್ಟದ ಸೇವೆ ಒದಗಿಸುವ ಆಭರಣ ಮಳಿಗೆಗಳಿಗೆ ಭೇಟಿ ನೀಡುವುದು ಒಳ್ಳೆಯದು.
* ಆನ್‌ಲೈನ್ ಮೂಲಕ ಆಭರಣ ಖರೀದಿಸಬೇಕೆಂದರೆ ಅಲ್ಲಿಯ ನಿಯಮ, ಷರತ್ತುಗಳ್ನು ಸರಿಯಾಗಿ ಓದಿಕೊಳ್ಳಿ.
* ಆಭರಣ ಶುದ್ಧೀಕರಿಸುವಾಗ ಎಚ್ಚರ ವಹಿಸಿ.
* ಹೂಡಿಕೆಗಾಗಿ ಮಾತ್ರ ಚಿನ್ನ ಖರೀದಿಸುವುದಾದರೆ ಆಭರಣ ಖರೀದಿ ಅನಗತ್ಯ.

ಬೆಳ್ಳಗಿರುವುದೆಲ್ಲ ಹಾಲಲ್ಲ ಎನ್ನುವಂತೆ, ಹೊಳೆಯುವುದೆಲ್ಲ ಚಿನ್ನವಲ್ಲ. ಅದಕ್ಕಾಗಿ ಚಿನ್ನ ಖರೀದಿಗೆ ಸಾಕಷ್ಟು ಎಚ್ಚರಿಕೆಯನ್ನೂ ವಹಿಸಬೇಕು. ಚಿನ್ನದ ಬೆಲೆ ಯಾವತ್ತೂ ಸ್ಥಿರವಾಗಿರಲಾರದು. ಹೆಣ್ಣಿನ ಮನಸ್ಸಿನಂತೆ ಅದೂ ಚಂಚಲ. ದಿನದಿಂದ ದಿನಕ್ಕೆ ಬೆಲೆ ಬದಲಾಗುತ್ತಲೇ ಇರುತ್ತದೆ. ದೇಶದಾದ್ಯಂತ ಒಂದೆ ಬೆಲೆಯೂ ಇರಲಾರದು. ಪ್ರತಿಯೊಂದು ಜಿಲ್ಲೆ, ರಾಜ್ಯಕ್ಕೆ ಬೆಲೆ ವ್ಯತ್ಯಾಸ ಇರುತ್ತದೆ. ತೆರಿಗೆ ಸ್ವರೂಪ, ಸಾಗಾಣಿಕೆ ಮತ್ತಿತರ ವೆಚ್ಚಕ್ಕೆ ಅನುಗುಣವಾಗಿ ಬೆಲೆಯಲ್ಲಿ ವ್ಯತ್ಯಾಸ ಇದ್ದರೂ ಅದು ಗಮನಾರ್ಹ ಪ್ರಮಾಣದಲ್ಲಿ ಇರಲಾರದು. ದೇಶದ ಪ್ರಮುಖ ಮಾರುಕಟ್ಟೆಯ ಬೆಲೆಗಿಂತ ಸ್ಥಳೀಯ ಚಿನ್ನಾಭರಣ ವ್ಯಾಪಾರಿಗಳು ಶೇ.4ರಿಂದ ಶೇ. 8ರಷ್ಟು ಹೆಚ್ಚಿನ ಬೆಲೆಯಲ್ಲಿ ವಹಿವಾಟು ನಡೆಸುತ್ತಾರೆ.

ಚಿನ್ನಾಭರಣ ಖರೀದಿಸುವಾಗ, ಚಿನ್ನದ ಮಾರುಕಟ್ಟೆ ಬೆಲೆ ಗೊತ್ತಿರುವಂತೆ ಆಭರಣ ತಯಾರಿಕೆ ಶುಲ್ಕ ತಿಳಿದಿರಬೇಕು. ವಿಶಿಷ್ಟ ವಿನ್ಯಾಸ ರೂಪಿಸಲು ಕುಶಲ ಕಾರ್ಮಿಕರಿಗೆ ನೀಡುವ ಶುಲ್ಕವು ಆಭರಣದ ಬೆಲೆಯನ್ನು ಒಳಗೊಂಡಿರುತ್ತದೆ. ದೊಡ್ಡ ನಗರಗಳಲ್ಲಿ ಜನಪ್ರಿಯ ಬ್ರಾಂಡ್‌ನ ಮಳಿಗೆಗಳಿಗೆ ತೆರಳಿದಾಗ ಅಲ್ಲಿ 'ಬಿಐಎಸ್ ಪ್ರಮಾಣೀಕೃತ" ಮತ್ತು 'ಹಾಲ್‌ಮಾರ್ಕ್" ಆಭರಣಗಳ ಫಲಕಗಳೂ ಗಮನ ಸೆಳೆಯುತ್ತವೆ. ಇವು ಚಿನ್ನದ ಪರಿಶುದ್ಧತೆ ಮತ್ತು ಆಭರಣ ಒಳಗೊಂಡಿರುವ ಚಿನ್ನದ ನಿಗದಿತ ಪ್ರಮಾಣದ ಬಗ್ಗೆ ಇವು ಗ್ರಾಹಕರಿಗೆ ಖಾತರಿ ನೀಡುತ್ತವೆ. ಬಿಐಎಸ್ ಅಂದರೆ, ಭಾರತೀಯ ಮಾನದಂಡ ಮಂಡಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X