ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫರೀದಾಬಾದ್‌ ಕನ್ನಡ ರಾಜ್ಯೋತ್ಸವ

By Staff
|
Google Oneindia Kannada News

Faribadabad Kannada Sangha
ಫರೀದಾಬಾದ್, ಡಿ.8 : ಅನೇಕ ಕಾರಣಗಳಿಂದ ತಾಯಿ ನಾಡು ಬಿಟ್ಟು ಹೊರನಾಡಿಗೆ ಬಂದು, ಇಲ್ಲಿಯೇ ನೆಲೆಸಿ, ಇಲ್ಲಿನ ಜನರು, ಸಂಸ್ಕೃತಿಯೊಂದಿಗೆ ಹೊಂದಿಕೊಂಡಿದ್ದರೂ ಹೃದಯದಲ್ಲಿ ಕನ್ನಡವನ್ನು ಪೋಷಿಸಿಕೊಂಡು ಬರುತ್ತಿರುವ ಎಲ್ಲ ಕನ್ನಡಿಗರೂ ಅಭಿನಂದನಾರ್ಹರು ಎಂದು ವಾರ್ತಾ ಇಲಾಖೆ ನಿರ್ದೇಶಕರಾದ ಎನ್.ಆರ್. ವಿಶುಕುಮಾರ್ ಹೇಳಿದರು.

ಅವರು, ವಾರ್ತಾ ಇಲಾಖೆಯ ಕರ್ನಾಟಕ ವಾರ್ತಾ ಕೇಂದ್ರದ ಹಾಗೂ ಫರೀದಾಬಾದ್ ಕನ್ನಡ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ "ಕರ್ನಾಟಕ ರಾಜ್ಯೋತ್ಸವ 2009" ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. "ಕನ್ನಡಿಗರು ತಾವು ಹೋದ ಕಡೆಯಲ್ಲೆಲ್ಲ ಅಲ್ಲಿನ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು, ಅಲ್ಲಿನ ಮುಖ್ಯ ವಾಹಿನಿಯೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ. ಅತ್ಯಂತ ಸಭ್ಯ ಜೀವನ ಸಾಗಿಸುತ್ತಾ, "ಎಲ್ಲರೊಳಗೊಂದಾಗೋ ಮಂಕುತಿಮ್ಮ" ಎಂಬ ಕವಿವಾಣಿಯಂತೆ ಎಲ್ಲರೊಳಗೊಂದಾಗುತ್ತಾ ಕನ್ನಡ ಸಂಸ್ಕೃತಿ ಜೀವಂತವಾಗಿರುವಂತೆ ನೋಡಿಕೊಳ್ಳುತ್ತಾರೆ ಎಂಬುದೇ ಹೆಮ್ಮೆಯ ಸಂಗತಿ" ಎಂದು ಅವರು ನುಡಿದರು.

ಹೊರನಾಡ ಕನ್ನಡಿಗರು ವರ್ಷಕ್ಕೆ ಒಂದು ಬಾರಿ ಕನ್ನಡ ರಾಜ್ಯೋತ್ಸವದ ಹೆಸರಿನಲ್ಲಿ ಕನ್ನಡದ ಉತ್ತಮ ಗೀತೆಗಳನ್ನು ಕೇಳುವುದು, ಕನ್ನಡದ ವಾತಾವರಣದಲ್ಲಿ ಸಂಪೂರ್ಣ ಭಾಗಿಯಾಗುವುದು ಮತ್ತು ಆ ಮೂಲಕ ಕರ್ನಾಟಕದಲ್ಲಿ ಆದ ರಾಜ್ಯದ ಅಭಿವೃದ್ಧಿ ಕಾರ್ಯಗಳತ್ತ ಒಂದು ಪಕ್ಷಿ ನೋಟ ಪಡೆಯುವುದಕ್ಕಾಗಿ ನಾವು ಈ ವರ್ಷ ಕರ್ನಾಟಕ ವಾರ್ತಾ ಕೇಂದ್ರದ ಮೂಲಕ ದೆಹಲಿ ಸುತ್ತಮುತ್ತಲಿನ ನಾಲ್ಕು ಕಡೆಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಿದೆವು. ಈ ಕಾರ್ಯಕ್ರಮದಲ್ಲಿ ನೀವೆಲ್ಲರೂ ಇಷ್ಟೊಂದು ಉತ್ಸಾಹದಿಂದ ಪಾಲ್ಗೊಂಡಿರುವುದನ್ನು ನೋಡಿದರೆ, ನಾವು ಮಾಡಿದ ಶ್ರಮ ಸಾರ್ಥಕವಾಯಿತು ಎಂದೆನಿಸುತ್ತದೆ ಎಂದರು.

ಮನ ಮನದಲ್ಲಿ ಕನ್ನಡ: ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ದೆಹಲಿ ಕನ್ನಡ ಸೀನಿಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ಜಿ.ಬಿ. ಹೆಗಡಿ ಅವರು ಮಾತನಾಡಿ, "ಮನೆ ಮನೆಯಲ್ಲಿ ಕನ್ನಡ, ಮನಮನದಲ್ಲಿ ಕನ್ನಡದ ಕಂಪು ಹರಿಸುವ ಕೆಲಸವನ್ನು ವಾರ್ತಾ ಇಲಾಖೆ ಮತ್ತು ಫರೀದಾಬಾದ್ ಕನ್ನಡ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ ಮಾಡುತ್ತಿದ್ದಾರೆ; ಇವರಿಬ್ಬರೂ ಅಭಿನಂದನಾರ್ಹರು" ಎಂದರು.

ಅಧ್ಯಕ್ಷತೆ ವಹಿಸಿದ್ದ ಫರೀದಾಬಾದ್ ಕನ್ನಡ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮಾತನಾಡಿ, "ಕಳೆದ ಎರಡು ವರ್ಷಗಳಿಂದ ನಾವು ಕನ್ನಡದ ಯಾವುದೇ ಕಾರ್ಯಕ್ರಮವನ್ನು ಮಾಡಿರಲಿಲ್ಲ; ಕರ್ನಾಟಕ ವಾರ್ತಾ ಕೇಂದ್ರದ ವೀರಣ್ಣ ಅವರು ನನಗೆ ಹೇಳುತ್ತಲೇ ಇದ್ದರು; ಇಂಥದ್ದೊಂದು ಕಾರ್ಯಕ್ರಮ ಮಾಡೋಣ ಎಂದು. ಅದೀಗ ಅವರ ಒತ್ತಾಸೆಯಿಂದ ಮತ್ತು ನಮ್ಮ ಸಂಘಟನೆಯ ಪದಾಧಿಕಾರಿಗಳ ಸಂಪೂರ್ಣ ಸಹಕಾರದಿಂದ ಸಾಕಾರಗೊಂಡಿದೆ; ಹೀಗಾಗಿ ನಿಮ್ಮ ಮುಂದೆ ನೃತ್ಯ, ಸಂಗೀತ ಮತ್ತು ಹಾಸ್ಯ ಕಲೆಗಳ ಸಂಗಮ ಇಂದು ಆಗಿದೆ" ಎಂದರು.

ನಾವು "ದೆಹಲಿ ಮಿತ್ರ" ಸಂಘಟನೆಯ ಮೂಲಕ ಈಗಾಗಲೇ ನಾಲ್ಕು ಪುಸ್ತಕಗಳನ್ನು ಪ್ರಕಟ ಮಾಡಿದ್ದೇವೆ. ನವದೆಹಲಿಯಲ್ಲಿ ಇರುವ ಏಕೈಕ ಕನ್ನಡ ಪ್ರಕಟಣಾ ಸಂಸ್ಥೆ ಎನಿಸಿದ "ದೆಹಲಿ ಮಿತ್ರ"ವು ಇದೀಗ ಐ. ರಾಮ್‌ಮೋಹನ್ ರಾವ್ ಅವರ ಕುರಿತ "ಅದಮ್ಯ" ಎಂಬ ಕೃತಿಯನ್ನು ಹೊರ ತಂದಿದೆ. ಈಗಾಗಲೇ ಅದನ್ನು ಮಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿದೆ. ಈ ದಿನ ನಾವು ಸಂಜೆ ಅದನ್ನು ದೆಹಲಿ ಕರ್ನಾಟಕ ಸಂಘದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದರು.

ಸ್ವಾಗತ ಭಾಷಣ ಮಾಡಿದ ಕರ್ನಾಟಕ ವಾರ್ತಾ ಕೇಂದ್ರದ ಉಪ ನಿರ್ದೇಶಕ ವೀರಣ್ಣ ಕಮ್ಮಾರ ಮಾತನಾಡಿ, "ಈ ಕಾರ್ಯಕ್ರಮದಲ್ಲಿ ಭಾಷಾ ಬಾಂಧವ್ಯ ಬೆಸೆಯುವ ಕನ್ನಡ ತಮಿಳು ಸಂಸ್ಕೃತ ಹಾಡುಗಳ ನೃತ್ಯ ಕಾರ್ಯಕ್ರಮ ಏರ್ಪಡಿಸಿದ್ದೇವೆ; ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ನಡುವೆ ಮೂರ್ತಿ ಪ್ರತಿಷ್ಠಾಪನೆಯ ಮೂಲಕ ಎರಡು ರಾಜ್ಯಗಳ ನಡುವೆ ಹೊಸ ಬಾಂಧವ್ಯ ಮೂಡಿಸಲಾಗಿದೆ; ಹಾಗೆಯೇ ಅಂತಹ ಬಾಂಧವ್ಯ ನೃತ್ಯದ ಮೂಲಕವೂ ಆಗಲಿ ಎಂಬ ಉದ್ದೇಶದಿಂದ ನಾವು ಭಾಷಾ ಬಾಂಧವ್ಯ ನೃತ್ಯ ಕಾರ್ಯಕ್ರಮ ಏರ್ಪಡಿಸಿದ್ದು, ಕುಮಾರಿ ಸಪ್ನಾ ಅತ್ತಾವರ ಮತ್ತು ತಂಡದವರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹಾಗೆಯೇ ಇಂದು ಕನ್ನಡದ ನಾಡು ನುಡಿ ಕುರಿತಾದ ಗಾಯನ ಕಾರ್ಯಕ್ರಮ ಏರ್ಪಡಿಸಿದ್ದು, ಅದನ್ನು ಟಿ.ಎಸ್. ರಮೇಶ್ ಮತ್ತು ತಂಡದವರು ನಡೆಸಿಕೊಡಲಿದ್ದಾರೆ" ಎಂದರು.

ಕಾರ್ಯಕ್ರಮದಲ್ಲಿ ತಿಮ್ಮಪ್ಪ ಮತ್ತು ಪ್ರಭಾಕರ್ "ಹಾಸ್ಯ ಲಾಸ್ಯ" ಕಾರ್ಯಕ್ರಮ ನಡೆಸಿಕೊಟ್ಟರು. ಟಿ.ಎಸ್. ರಮೇಶ್ ತಂಡದ ಅಶೋಕ್ ಕುಂಬಾರ್, ಶ್ರೀಮತಿ ಪೂಜಾ ರಾವ್, ಗೋವಿಂದರಾಜ್, ಉಲ್ಲಾಸ್, ಕುಮಾರಿ ಪ್ರೇರಣಾ, ಶಾಸ್ತ್ರಿ ಅವರ ಗೀತ ಗಾಯನ ಎಲ್ಲರನ್ನೂ ರಂಜಿಸಿತು. ಸಪ್ನಾ ಅತ್ತಾವರ, ಅಶ್ವಥಿ ನಾಯರ್, ಮೇಘಾ ರಾಮಚಂದ್ರನ್ ನೃತ್ಯ ಕಾರ್ಯಕ್ರಮ ಮನರಂಜಿಸಿತು. ಫರೀದಾಬಾದ್ ಕನ್ನಡ ಸಂಘದ ಕಾರ್ಯದರ್ಶಿ ಅರುಣ್‌ಕುಮಾರ್ ವಂದಿಸಿದರು. ಕಾರ್ಯಕ್ರಮದ ನಂತರ ಕರ್ನಾಟಕ ಶೈಲಿಯ ಭೋಜನ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X