ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರಿಯಾದಲ್ಲಿ ಮೂಡಿದ ಕನ್ನಡ ಕಂಪು

|
Google Oneindia Kannada News

ನೀ ಮೆಟ್ಟುವ ನೆಲ, ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್
ಎಂದೆಂದಿಗು ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಎಂದೆಂದಿಗೂ ನೀ ಕನ್ನಡವಾಗಿರು

ನಮ್ಮ ರಾಷ್ಟ್ರಕವಿಯಾಗಿದ್ದಂತಹ ಕುವೆಂಪು ರವರ ಈ ಸಾಲುಗಳು ನಿಜಕ್ಕೂ ಒಬ್ಬೊಬ್ಬ ಕನ್ನಡಿಗನಿಗೂ ತಮ್ಮ ನಾಡಿನ ಬಗ್ಗೆ ಪ್ರೇಮವನ್ನು ಮೂಡಿಸುತ್ತವೆ.


ಸುವಾನ್, ದಕ್ಷಿಣ ಕೊರಿಯಾದಲ್ಲಿರುವ ಒಂದು ಸಣ್ಣ ನಗರ. ಎಲ್ ಅಂಡ್ ಟಿ ಇನ್ಫೋಟೆಕ್ ನ ಉದ್ಯೋಗಿಗಳಾಗಿ ಕಾರ್ಯನಿಮಿತ್ತ ನಾವಿರುವುದು ಈ ಸುಂದರವಾದ ನಗರಿಯಲ್ಲಿ. ಕಳೆದ 2 ವರ್ಷಗಳಿಂದ ಕನ್ನಡ ಮತ್ತು ಕನ್ನಡೇತರ ಗೆಳೆಯರೆಲ್ಲ ಕೂಡಿಕೊಂಡು ಕರ್ನಾಟಕ ರಾಜ್ಯೋತ್ಸವವನ್ನು ಈ ನಗರದಲ್ಲಿ ಆಚರಣೆ ಮಾಡುತ್ತಿರುವುದು ಕನ್ನಡಿಗರಿಗೆಲ್ಲ ಒಂದು ಹೆಮ್ಮೆ.

ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ದಿಢೀರ್ ಸಿದ್ಧತೆ ನಡೆಯಿತು. ಲೋಹಿತ್, ಮಂಜು, ಬಸು, ರಾಘು, ಬದ್ರಿ, ಪ್ರಭು ಮತ್ತು ಸಚಿನ್ ರಾಜ್ಯೋತ್ಸವದ ಆಚರಣೆಗೆ ರೂಪುರೇಷೆಯನ್ನು ಮಾಡಿದರು. ಮೊದಲೇ ಕನ್ನಡ ಮತ್ತು ಕನ್ನಡೇತರ ಸ್ನೇಹಿತರಿಗೆ ಈ-ಸಂದೇಶದ ಮೂಲಕ ಆಹ್ವಾನ ಕಳಿಸಿಯಾಗಿತ್ತು.

ಕರ್ನಾಟಕದಲ್ಲಿ ಈ ಬಾರಿ ನೆರೆ ಹಾವಳಿ ಬಂದು ಲಕ್ಷಾಂತರ ಮಂದಿ ನಿರ್ವಸಿತರಾಗಿರುವುದು ನಮಗೆಲ್ಲಾ ಗೊತ್ತಿರುವುದೇ. ನಮ್ಮ ಸಹಾಯ ಹಸ್ತವನ್ನು ಚಾಚುವುದು ಅತ್ಯವಶ್ಯಕವಾಗಿತ್ತು. ಇದಕ್ಕಾಗಿ ನಾವೆಲ್ಲಾ ಕೂಡಿಕೊಂಡು ನೆರೆ ಸಂತ್ರಸ್ತರಿಗೆ ನಮ್ಮ ಕಡೆಯಿಂದ ಸಾಧ್ಯವಾದಷ್ತು "ನಿಧಿ" ಸಂಗ್ರಹಿಸಲು ನಿರ್ಧಾರ ಮಾಡಿ ಅದಕ್ಕಾಗಿ ಸಿದ್ಧತೆಯನ್ನು ಮಾಡಿಕೊಂಡೆವು.

ಕರ್ನಾಟಕ ರಾಜ್ಯೋತ್ಸವದ ದಿನ ಬಂದೇಬಿಟ್ಟಿತು. ಲೋಹಿತ್, ಮಂಜು ಧ್ವಜ ಮತ್ತು ಧ್ವಜದ ಕಂಬಗಳನ್ನು ತಂದು ಸಿದ್ಧತೆಗಳನ್ನು ಶುರು ಮಾಡಿಕೊಂಡರು. ಉಳಿದ ಗೆಳೆಯರೆಲ್ಲ ಅವರನ್ನು ಕೂಡಿಕೊಂಡು ಸಿದ್ಧತೆಯನ್ನು ಪೂರ್ಣಗೊಳಿಸಿದರು. ಮೊದಲೇ ಗೊತ್ತುಪಡಿಸಿದ್ದ ಸ್ಥಳಕ್ಕೆ ಎಲ್ಲ ಗೆಳೆಯರು ಸೇರಿ ಧ್ವಜಾರೋಹಣಕ್ಕೆ ಅಣಿಯಾದೆವು. ನಮ್ಮ ಗೆಳೆಯ ಆನಂದ್ ಅವರು ಧ್ವಜಾರೋಹಣ ಮಾಡಿದಾಗ ಎಲ್ಲರಿಂದ ಚಪ್ಪಾಳೆ. ತದನಂತರ ನಮ್ಮ ನಾಡಗೀತೆ "ಜಯ ಭಾರತ ಜನನಿಯ ತನುಜಾತೆ" ಸಚಿನ್ ಅವರ ಮೊಬೈಲ್ ನಲ್ಲಿ ಮೂಡಿಬಂತು. ನಾಡಗೀತೆ ನಂತರ ಅಲ್ಲಿ ಸೇರಿದ್ದ ಗೆಳೆಯರಿಗೆಲ್ಲ ಸಿಹಿಯನ್ನು ಹಂಚಿ ನಮ್ಮ ಕಾರ್ಯಕ್ರಮಕ್ಕೆ ಮಂಗಳ ಹಾಡುವ ಮೊದಲು ಈ ಸಂಭ್ರಮದ ತುಣುಕುಗಳನ್ನು ಬಹುಕಾಲ ನೆನೆಯಲು ಫೋಟೊದಲ್ಲಿ ಸೆರೆಹಿಡಿದೆವು.

ನಮ್ಮ ಗೆಳೆಯರೆಲ್ಲ "ಸಂತ್ರಸ್ತರ ನಿಧಿ"ಗೆ ಸಾಧ್ಯವಾದಷ್ಟು ಕಾಣಿಕೆಯನ್ನು ನೀಡಿ ತಮ್ಮ ಉದಾರತೆಯನ್ನು ಮೆರೆದರು. ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಗೂಡಿದರೆ ಬಳ್ಳದ ಮಾತಿನಂತೆ ನಮ್ಮ ಅಳಿಲ ಸೇವೆಯನ್ನು ಸಂತ್ರಸ್ತರಿಗೆ ಮಾಡಿದ್ದೀವೆ. ಎಲ್ಲಾ ಕನ್ನಡಿಗರು ಈ ಸಂತ್ರಸ್ತರಿಗೆ ನೆರವಾಗಲಿ ಎಂದು ನಾವೆಲ್ಲಾ ಬಯಸುತ್ತೇವೆ. ತಾಯಿ ಭುವನೇಶ್ವರಿಯ ಆಶೀರ್ವಾದದಿಂದ ಸಂತ್ರಸ್ತರೆಲ್ಲಾ ಮತ್ತೆ ತಮ್ಮ ತಮ್ಮ ವಸತಿ-ವ್ಯವಸ್ಥೆಗಳನ್ನು ಕಲ್ಪಿಸಿಕೊಳ್ಳಲಿ ಎಂಬುದು ನಮ್ಮ ಆಶಯ. ಕುವೆಂಪುರವರು ಹೇಳಿದಂತೆ "ನೀ ಮೆಟ್ಟುವ ನೆಲ, ಅದೆ ಕರ್ನಾಟಕ", ನಿಜಕ್ಕೂ ಸುವಾನ್ ನಗರ ಕನ್ನಡ ನೆಲವಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X