ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಾರ್ಮಿಕ ದಿನ' ಎಂಬ ಅಸಂಬದ್ಧ ಆಚರಣೆ!

By Staff
|
Google Oneindia Kannada News

Should india celebrate May day?
ಮೇ 1, ಕಾರ್ಮಿಕ ದಿನ. ಇದು ನಮ್ಮದಲ್ಲ. ಆದರೆ ನಮ್ಮದೆಂದು ಒಪ್ಪಿಕೊಂಡು-ಅಪ್ಪಿಕೊಂಡು ಪ್ರತಿ ವರ್ಷ ಆಚರಿಸುತ್ತಿದ್ದೇವೆ. ನಮ್ಮ ದೇಶದ ಅಸಂಘಟಿತ ವಲಯದ ಕಾರ್ಮಿಕರಿಗೆ 'ಕಾರ್ಮಿಕ ದಿನ'ದಿಂದ ಚಿಕ್ಕಾಸಿನ ಪ್ರಯೋಜನವೂ ಇಲ್ಲ. ಅವರಲ್ಲಿ ಬಹುಮಂದಿಗೆ ಈ ದಿನಾಚರಣೆಯ ಅರಿವೇ ಇಲ್ಲ. ಅದೇವೇಳೆ, ಸಂಘಟಿತ ವಲಯದ ಬಹುತೇಕ ಕಾರ್ಮಿಕರು ತಮ್ಮ ಎಂದೂ ಮುಗಿಯದ ಬೇಡಿಕೆಗಳನ್ನು ಪ್ರತಿಪಾದಿಸುತ್ತ 'ಕಾರ್ಮಿಕ ದಿನ'ವನ್ನು 'ಅಧಿಕೃತ ಕೆಲಸಗೇಡಿ ದಿನ'ವನ್ನಾಗಿ ಆಚರಿಸುತ್ತಿದ್ದಾರೆ!

* ರಾಮ್, ಬೆಂಗಳೂರು

ಕೇಂದ್ರ ಸರ್ಕಾರದ ಆಣತಿ ಮೇರೆಗೆ ನಮ್ಮ ಉದ್ಯೋಗದಾತರು ನಾಯಿಗಳಿಗೆ ಬಿಸ್ಕತ್ ಬಿಸಾಕುವಂತೆ ಮೇ ಒಂದನೇ ದಿನವನ್ನು ಸಂಘಟಿತ ಕಾರ್ಮಿಕರಿಗೆ ಬಿಸಾಕುತ್ತಾರೆ. ಕಾರ್ಮಿಕರು ರಜಾ ಎಂಬ ಆ ಬಿಸ್ಕತ್ ತಿಂದು, ಒಂದಷ್ಟು ಘೋಷಣೆ ಕೂಗಿ ಸುಮ್ಮನಾಗುತ್ತಾರೆ. 'ಕಾರ್ಮಿಕ ದಿನ'ವೆಂಬುದು ನಮ್ಮೀ ದೇಶದಲ್ಲಿ ಇದಕ್ಕಿಂತ ಹೆಚ್ಚೇನನ್ನೂ ಸಾಧಿಸಿಲ್ಲ.

'ನನಗೆ ಬರುತ್ತಿರುವ ಸಂಬಳ ಮತ್ತು ಭತ್ಯೆಗಳು ತೃಪ್ತಿಕರವಾಗಿವೆ; ಸೇವಾ ನಿಯಮಗಳೂ ಸೌಲಭ್ಯಗಳೂ ಉತ್ತಮವಾಗಿವೆ; ನಾನು ಅದೃಷ್ಟವಂತ', ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಕಾರ್ಮಿಕರು ನಮ್ಮಲ್ಲಿ ಎಷ್ಟು ಮಂದಿ ಇದ್ದಾರೆ? ಅದೇ ವೇಳೆ, 'ನನ್ನ ಕೆಲಸಗಾರರೆಲ್ಲ ಚೆನ್ನಾಗಿ ದುಡಿಯುತ್ತಿದ್ದಾರೆ, ಹಾಗಾಗಿಯೇ ನಾನು ಪ್ರವರ್ಧನ ಹೊಂದಿದ್ದೇನೆ, ಅವರು ಇನ್ನೂ ಹೆಚ್ಚಿನ ಸಂಬಳ, ಸೌಲಭ್ಯಗಳಿಗೆ ಅರ್ಹರು', ಎಂದು ಹೇಳುವ ಒಬ್ಬನಾದರೂ ಮಾಲೀಕ ನಮ್ಮಲ್ಲಿದ್ದಾನೆಯೇ? ಎಷ್ಟು ಕೊಟ್ಟರೂ ಸಾಲದೆನ್ನುವ ಮತ್ತು ಸೇವಾ ಸೌಲಭ್ಯಗಳ ಬಗ್ಗೆ ಸದಾ ಅತೃಪ್ತಿ ಹೊಂದಿರುವ ಸಂಘಟಿತ ಕಾರ್ಮಿಕರು ಒಂದು ಕಡೆ, ದುಡಿದು ಅರೆಜೀವವಾದರೂ ಎರಡು ಹೊತ್ತಿನ ಕೂಳು ಕಾಣದ ಅಸಂಘಟಿತ ಕಾರ್ಮಿಕರು ಇನ್ನೊಂದು ಕಡೆ, ಮತ್ತು ಈ ಎರಡೂ ಬಗೆಯ ಕಾರ್-ಮಿಕಗಳನ್ನು ತಮ್ಮ ಬಲೆಗೆ ಕೆಡವಿಕೊಂಡು ಇವರ ಹೆಸರಿನಲ್ಲಿ ಕಾಸು, ಕುರ್ಚಿ, ಕೀರ್ತಿ ಇತ್ಯಾದಿ 'ಭೋಗ'ಗಳನ್ನು ತಮ್ಮದಾಗಿಸಿಕೊಳ್ಳುವ-'ಕರ್ಮಯೋಗಿ' ಮುಖವಾಡದ-ಕಾರ್ಮಿಕ ಧುರೀಣರು ಮತ್ತೊಂದು ಕಡೆ; ಇಂಥ ವಿಪರ್ಯಾಸ-ವೈಪರೀತ್ಯಗಳ ನಡುವೆ ಅದ್ಯಾವ ಕರ್ಮಕ್ಕೋ ನಾವು 'ಕಾರ್ಮಿಕ ದಿನ'ವನ್ನು ಆಚರಿಸುತ್ತಿದ್ದೇವೆ. 'ಈ ದಿನವು ಕಾರ್ಮಿಕರಿಗೆ ಗೌರವದ ಸಂಕೇತ', ಎಂದು ಓಳು ಬಿಡುತ್ತಿದ್ದೇವೆ (ಕಪಟವಾಡುತ್ತಿದ್ದೇವೆ).

ಕಾರ್ಮಿಕ ದಿನಾಚರಣೆಯ ಮೂಲ

ಇಷ್ಟಕ್ಕೂ, ನಮ್ಮ ಈ 'ಕಾರ್ಮಿಕ ದಿನ'ವೆಂಬುದು ವಿದೇಶೀ ಬಳುವಳಿ. 1856ರ ಏಪ್ರಿಲ್ 21ರಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ ಪ್ರದೇಶದಲ್ಲಿ ಕಲ್ಲುಕುಟಿಗರು ಮತ್ತು ಕಟ್ಟಡ ಕಾರ್ಮಿಕರು ದಿನಂಪ್ರತಿ ಎಂಟು ಗಂಟೆಗಳ ದುಡಿಮೆ ಮಿತಿಗೆ ಆಗ್ರಹಿಸಿ ಮುಷ್ಕರ ನಡೆಸಿ, ತಮ್ಮ ಬೇಡಿಕೆ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದು ಮುಂದೆ ವಿವಿಧೆಡೆಗಳಲ್ಲಿ 'ಮೇ ದಿನ'ದ ಆಚರಣೆಗೆ ಪರೋಕ್ಷವಾಗಿ ಸ್ಫೂರ್ತಿಯಾಯಿತು.

ಎಂಟು ಗಂಟೆಗಳ ದುಡಿಮೆ ಮಿತಿಗಾಗಿ 1886ರ ಮೇ ಒಂದರಂದು ಅಮೆರಿಕದ ಹಲವೆಡೆ ಕಾರ್ಮಿಕರ ರ್‍ಯಾಲಿಗಳು ನಡೆದವು. ಮೇ ಮೂರರಂದು ಚಿಕಾಗೋದಲ್ಲಿ ಬದಲಿ ಕೆಲಸಗಾರರು ಕೆಲಸಕ್ಕೆ ಹಾಜರಾಗಲೆತ್ನಿಸಿದಾಗ ಘರ್ಷಣೆ ಸಂಭವಿಸಿ ಪೋಲೀಸರ ಗುಂಡಿಗೆ ನಾಲ್ವರು ಕಾರ್ಮಿಕರು ಬಲಿಯಾದರು. ಮೇ ನಾಲ್ಕರಂದು ಅಲ್ಲಿನ ಹೇ ಮಾರ್ಕೆಟ್ ಚೌಕದಲ್ಲಿ ಕಾರ್ಮಿಕರ ರ್‍ಯಾಲಿ ನಡೆದಿದ್ದಾಗ ಬಾಂಬ್ ಎಸೆತಕ್ಕೆ ಓರ್ವ ಪೋಲೀಸ್ ಸಾವನ್ನಪ್ಪಿದನಲ್ಲದೆ ಅನಂತರ ನಡೆದ ಗುಂಡಿನ ಕಾಳಗದಲ್ಲಿ ಏಳು ಮಂದಿ ಪೋಲೀಸರು ಮತ್ತು ನಾಲ್ವರು ಕಾರ್ಮಿಕರು ಪ್ರಾಣ ಕಳೆದುಕೊಂಡರು. ಮುಂದಿನ ದಿನಗಳಲ್ಲಿ ಈ ಘಟನೆಯ ವಿಚಾರಣೆ ನಡೆದು ಏಳು ಮಂದಿ ದಂಗೆಕೋರರನ್ನು ಮರಣದಂಡನೆಗೆ ಗುರಿಪಡಿಸಲಾಯಿತು.

1890ರ ಮೇ ಒಂದರಂದು ಈ ಕಾರ್ಮಿಕ ಪ್ರತಿಭಟನೆಯು ಮರುಜೀವ ಪಡೆದಾಗ ಬೇರೆ ಕೆಲ ದೇಶಗಳ ಕಾರ್ಮಿಕ ಸಂಘಟನೆಗಳಿಗೂ ಇದನ್ನು ವಿಸ್ತರಿಸಲಾಯಿತು. ಹೀಗೆ ಇದಕ್ಕೆ ಅಂತರ ರಾಷ್ಟ್ರೀಯ ಕಾರ್ಮಿಕ ದಿನದ ರೂಪು ಕೊಡಲಾಯಿತು. ಇದರ ಹಿಂದೆ, ಹೇ ಮಾರ್ಕೆಟ್ 'ಹುತಾತ್ಮ'ರಿಗೆ ಗೌರವ ಸೂಚಿಸುವ ಉದ್ದೇಶ ಅಡಕವಾಗಿತ್ತು. ಇಂಥದೊಂದು ಹುನ್ನಾರಕ್ಕೆ ಭಾರತದ ಕಾರ್ಮಿಕ ಬಲಿಯಾಗಬೇಕೇ? ಹಾಗೊಂದು ವೇಳೆ 'ಕಾರ್ಮಿಕ ದಿನ' ಆಚರಿಸಲೇಬೇಕೆಂದರೆ, ನಮ್ಮಲ್ಲಿ ಕಾರ್ಮಿಕ ಕ್ರಾಂತಿಗೇನು ಕೊರತೆಯೇ? ಏಪ್ರಿಲ್-ಮೇ 1862ರ ಮತ್ತು 1940-46ರ ರೈಲ್ವೆ ಚಳವಳಿಗಳು, 1937ರಲ್ಲಿ ಜವಳಿ ಕಾರ್ಮಿಕರು ನಡೆಸಿದ ಐತಿಹಾಸಿಕ ಘೇರಾವೋ, 1940ರ ದಶಕದ ಅವರ ಚಳವಳಿಗಳು, ಫೆಬ್ರವರಿ 1946ರ ನೌಕಾ ದಂಗೆ, 1955ರ ಬಂದರು ಕಾರ್ಮಿಕರ ಚಳವಳಿ, 1881, 90, 95, 96ರ ಸೆಣಬು ಕಾರ್ಖಾನೆ ಕಾರ್ಮಿಕರ ಮುಷ್ಕರಗಳು, ನವೆಂಬರ್ 18, 1907ರ ಅಸನ್‌ಸೋಲ್ ರೈಲ್ವೆ ನೌಕರರ ಮುಷ್ಕರ, ಬ್ರಿಟಿಷ್ ಆಡಳಿತಗಾರರ ವಿರುದ್ಧ ಸರ್ಕಾರಿ ಮುದ್ರಣಾಲಯದ ಕೆಲಸಗಾರರು 1905ರಲ್ಲಿ ಒಂದು ತಿಂಗಳ ಕಾಲ ನಡೆಸಿ ಯಶಸ್ಸು ಸಾಧಿಸಿದ ಆ ಐತಿಹಾಸಿಕ ಮುಷ್ಕರ, ಹೀಗೆ ಅದೆಷ್ಟು ಉಲ್ಲೇಖಾರ್ಹ ಕಾರ್ಮಿಕ ಚಳವಳಿಗಳು ನಮ್ಮ ದೇಶದಲ್ಲಿ ಘಟಿಸಿಲ್ಲ? ಇವನ್ನೆಲ್ಲ ಬದಿಗೆ ತಳ್ಳಿ, ಆ ಅಮೆರಿಕನ್ನರನ್ನು ನೆನೆಯುವ ದಿನವನ್ನೇ ನಾವು 'ಕಾರ್ಮಿಕ ದಿನ'ವೆಂದು ಸ್ವೀಕರಿಸಿದ್ದೇವಲ್ಲಾ!

ಚೋದ್ಯವೆಂದರೆ, ಸ್ವಯಂ ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶಗಳೇ 'ಕಾರ್ಮಿಕ ದಿನ'ವನ್ನು ಮೇ ಒಂದರಂದು ಆಚರಿಸದೆ ಬೇರೆ ದಿನಗಳಂದು ಆಚರಿಸುತ್ತವೆ! ಮೇ ಒಂದರ ಆಚರಣೆಗೆ ಇರುವ 'ಕಮ್ಯೂನಿಸ್ಟ್' ಹಣೆಪಟ್ಟಿ ಆ ದೇಶಗಳಿಗೆ ಬೇಡವಂತೆ! ಎಲ್ಲ ಐರೋಪ್ಯ ರಾಷ್ಟ್ರಗಳೂ 'ಕಾರ್ಮಿಕ ದಿನ'ವನ್ನು ತಮಗೆ ಬೇಕಾದಂತೆ ಅರ್ಥೈಸಿ, ತಮಗೆ ಬೇಕಾದ ದಿನ ಆಚರಿಸುತ್ತವೆ; ಆದರೆ ಭಾರತದಂಥ ಅಭಿವೃದ್ಧಿಶೀಲ ದೇಶ ಮೊದಲ್ಗೊಂಡು 'ಮೂರನೇ ವಿಶ್ವ'ದ ರಾಷ್ಟ್ರಗಳೆಲ್ಲ ಅಮೆರಿಕ-ಆಸ್ಟ್ರೇಲಿಯಾಗಳಲ್ಲಿ ಘಟಿಸಿದ ಎರಡು ವಿದ್ಯಮಾನಗಳನ್ನು ಪ್ರಸಾದವೆಂದು ಸ್ವೀಕರಿಸಿ ಸಂಬಂಧಿತ ದಿನವಾದ ಮೇ ಒಂದರಂದು 'ಕಾರ್ಮಿಕ ದಿನ'ವನ್ನು ಆಚರಿಸಬೇಕೆಂದು ಈ ಐರೋಪ್ಯ ರಾಷ್ಟ್ರಗಳು ಬಯಸುತ್ತವೆ. ಅದರಂತೆ ಭಾರತದಲ್ಲಿ ನಾವು ಆಚರಿಸುತ್ತಿದ್ದೇವೆ!

ಭಾರತದಲ್ಲಿ ಮೊಟ್ಟಮೊದಲ 'ಕಾರ್ಮಿಕ ದಿನ' (ಮೇ ಡೇ) ನಡೆದದ್ದು ಮದ್ರಾಸ್(ಚೆನ್ನೈ)ನಲ್ಲಿ. 'ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್' ಸಂಘಟನೆಯು ತನ್ನ ಧುರೀಣ ಸಿಂಗಾರವೇಲು ಚೆಟ್ಟಿಯಾರ್ ನೇತೃತ್ವದಲ್ಲಿ 1923ರ ಮೇ ಒಂದರಂದು ಮದ್ರಾಸ್‌ನ ಎರಡು ಬೀಚ್‌ಗಳಲ್ಲಿ ಸಭೆಗಳನ್ನು ಸಂಘಟಿಸಿತ್ತು. ದೇಶದಲ್ಲೇ ಪ್ರಥಮ ಬಾರಿಗೆ ಅಲ್ಲಿ ಕೆಂಪು ಧ್ವಜವನ್ನು ಬಳಸಲಾಯಿತು. ಇದೇ ತಮಿಳುನಾಡಿನಲ್ಲೇ ಜಯಲಲಿತಾ 2003ರಲ್ಲಿ ಮುಷ್ಕರ ನಿರತ 176000 ಸರ್ಕಾರಿ ನೌಕರರು ಹಾಗೂ ಶಿಕ್ಷಕರನ್ನು ವಜಾ ಮಾಡಿದ್ದು! (ಆಮೇಲೆ ಅವರನ್ನು ಕೆಲಸಕ್ಕೆ ವಾಪಸ್ ಸೇರಿಸಿಕೊಳ್ಳಲಾಯಿತೆನ್ನಿ.)

ಮುಂದೆ ಓದಿ : ರಜಾ ಮಜಾ ಹೊರತು ಮತ್ತೇನೂ ಇಲ್ಲ! »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X