ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಳಿ ಆಚರಿಸೋಣು, ಓಕುಳಿ ಎರಚೋಣು ಬರ್ರಿ

By * ಪ್ರಸಾದ ನಾಯಿಕ
|
Google Oneindia Kannada News

ಬ್ಯಾಸಿಗಿ ಶುರು ಆಗಿ ಹುಡುಗೋರು ಆಟಪಾಟ ಎಲ್ಲಾ ಬಾಜೂಕಿಟ್ಟು ಕಣ್ಣಾಗ ಎಣ್ಣಿ ಹಾಕ್ಕೊಂಡು ಪರೀಕ್ಷಾಕ್ಕ ತಯಾರಿ ಮಾಡಲಿಕ್ಕೆ ಶುರು ಮಾಡತಿದ್ಹಂಗ ನಮ್ ಸಾಲಿ ದಿನಗೋಳು, ಆಟಪಾಟ, ಹೋಳಿ ಹುಣ್ಣವಿ ಎಲ್ಲಾ ನೆನಪಾಗಲಿಕ್ಕೆ ಶುರು ಮಾಡತಾವ. ಈಗಿನ ಹುಡುಗೋರದು ಏನು ಓದೋಣಿಕಿ ಅಂತೇನಿ? ಓದಲಿಕ್ಕೆ ಶುರು ಹಚ್ಚಿದ್ರ ಮುಗದ ಹೋತು. ಅದೂ ಒಂದು ರೀತಿ ಛೋಲೋ ಬಿಡ್ರಿ.

ನಮ್ ಕಾಲದಾಗ (ಅಂದ್ರ ನಾವು ಸಣ್ಣಾವ್ರಿದ್ದಾಗ) ಹಿಂಗ ಇದ್ದಿದ್ದಿಲ್ಲಪ್ಪಾ. ಓದು ಅಂತನೂ ಹೇಳತಿದ್ದಿದ್ದಿಲ್ಲ, ಓದಬ್ಯಾಡ ಅಂತನೂ ಹೇಳತಿದ್ದಿದ್ದಿಲ್ಲ. ಅದರಾಗ ಹೋಳಿ ಹುಣ್ಣವಿ ಬಂದರಂತೂ ಮುಗದಹೋತು. ಪುಸ್ತಕಾನ ಎಲ್ಲಾ ಪಾಟೀಚೀಲದಾಗ ತುರುಕಿಟ್ಟು ಹುಯ್ ಅಂತ ಹೊರಗ ಹೊಂಟ್ರ, 'ಸಾಕ ಬರ್ರಿನ್ನ' ಅಂತ ಬೈಸಿಕೊಳ್ದ ಒಳಗ ಬರತಿದ್ದಿದ್ದಿಲ್ಲ. ಹೇಳಿಕೇಳಿ ಹುಬ್ಬಳ್ಳಿ-ಧಾರವಾಡದವರು, ಕೇಳಬೇಕ? ಎಗ್ಝಾಮ್ ಇನ್ನೂ ನಾಲ್ಕು ದಿನಾ ಇದ್ರೂ ಪಟ್ಟಿ ಎತ್ತೋದು, ಕಾಮಣ್ಣನ್ನ ಸುಡೋದು, ಓಕುಳಿ ಆಡೋದು ಬಿಡತಿದ್ದಿದ್ದಿಲ್ಲ.

ಬೆಂಗಳೂರು ಕಡೆನೂ ಹುಡುಗೋರು, ಹುಡುಗೀರು ಹೋಳಿ ಆಚರಿಸ್ತಾರ! ಅದೂ ಆಚರಣೆನ? ನಾಕ ಹುಡುಗೋರು ಸೇರಿಕೊಂಡು ರಸ್ತೆದಾಗ ಸ್ವಲ್ಪ ಬಣ್ಣ ಚಲ್ಲಿದ್ರ ಅದ ಹೋಳಿ! ಹೋಳಿ ಹಬ್ಬದಾಗ ಹುಣ್ಣಿಮೆ ಹಿಂದಿನ ದಿನ ಕಾಮಣ್ಣನ ದಹನ ಆಗಬೇಕು. ಹುಣ್ಣಿಮೆ ದಿನ ಎಲ್ಲಾ ಗೆಳ್ಯಾರು, ಬಂಧುಗಳು ಒಟ್ಟಿಗೆ ಸೇರಿ ಬಣ್ಣಾ ಆಡಿದ ಮ್ಯಾಲ ಅಮ್ಮ ಮಾಡಿದ ಹೋಳಿಗೆ ತುಪ್ಪ ಹೊಡೀಬೇಕು. ಕಾಮಣ್ಣನ ದಹನ ಎಲ್ಲಿ ಮಾಡ್ತಾರ ಇಲ್ಲೆ? ಕಾಮಣ್ಣನೂ ಇಲ್ಲ ಮಣ್ಣೂ ಇಲ್ಲ, ಬರೇ ಕಾಮದಾಟ! ಇರ್ಲಿ ಬಿಡ್ರಿ ನಮ್ ಉತ್ತರ ಕರ್ನಾಟಕದ ಕಡೆ ಹೋಳಿ ಹಬ್ಬದ ಆಚರಣೆ, ಅದರ ಸಡಗರ, ಅದರ ರಂಗನ ಬ್ಯಾರೆ. [ಕನಸುಗಳಿಗೂ ಬಣ್ಣ ಹಚ್ಚುವ ಕಾಮನಹಬ್ಬ ಹೋಳಿ]

Festival of Colors

ಉತ್ತರ ಕರ್ನಾಟಕದ ಎಲ್ಲಾ ಕಡೆ ಒಂದ ದಿನ ಓಕುಳಿ ಆಡಿದ್ರ, ಹುಬ್ಬಳ್ಳಿ ಕಡೆ ಐದು ದಿನ ರಂಗ್ ಎರಚಾಡತಾರ. ಅದಕ್ಕ ಅದನ್ನು 'ರಂಗಪಂಚಮಿ' ಅಂತ ಕರೀತಾರ. ಹಣ್ಮಕ್ಕಳನ್ನ ಬಿಟ್ಟು ಯಾರೂ ಬಣ್ಣ ಆಡದ ಮನೀ ಒಳಗ ಕೂಡಂಗಿಲ್ಲ. ಎಲ್ಲಾರೂ ಆಡಲಿಕ್ಕೇಬೇಕು. ಮನಿ ಒಳಗ ಅಡಿಕ್ಕೊಂಡು ಕುಂತ್ರ ಹಂಚಿನ ಮ್ಯಾಲಿಂದ ಇಳದು ಹೊರಗ ದರದರ ಎಳಕೊಂಡು ಬಂದು ಮುಖಕ್ಕ ವಾರ್ನೀಸು, ಗುಲಾಲ್, ಸುನೇರಿ ಬಳೀತಾರ. ಅದರ ಖದರನ ಬ್ಯಾರೆ. ಊರತುಂಬ ಓಣಿ ಓಣ್ಯಾಗ ಕಾಮಣ್ಣನ ಸುಡ್ತಾರ, ಊರತುಂಬ ಜಗ್ಗಲಿಗಿ ಹಿಡದು ಮೆರವಣಿಗಿ ಮಾಡತಾರ, ಚುರಮುರಿ ಕೊಡತಾರ, ಸಂತೋಷ ಹಂಚತಾರ. [ಹೋಳಿ ಹುಣ್ಣಿಮೆಯ ಪೌರಾಣಿಕ ಕಥೆ - ಭಾಗ1]

ನಾವು ಆಚರಿಸ್ತಿದ್ದ ರೀತಿ

ಸಣ್ಣಾವ್ರಿದ್ದಾಗ ಚಾಳದಾಗಿನ ಎಲ್ಲಾ ಮನೀಗೂ ಹೋಗಿ 'ಕಾಮಣ್ಣನ ಮಕ್ಕಳು ಕಳ್ಳ ಸೋಳೆ ಮಕ್ಕಳು, ಏನೇನು ಕದ್ದರು ಕುಳ್ಳು ಕಟಗಿ ಕದ್ದರು, ಯಾತಕ್ಕೆ ಕದ್ದರು ಕಾಮಣ್ಣನ್ನು ಸುಡ್ಲಿಕ್ಕೆ' ಅಂತ ಬೊಂಬಡಾ ಹೊಡಕೋತ ಒಂದು ಎರಡು ರೂಪಾಯಿ ಪಟ್ಟಿ ಕೇಳೋದು. ಜೋಡಿ ಕೊಟ್ರ ಕುಳ್ಳು ಕಟಗಿ ಶೇಖರಿಸಿಟ್ಟುಕೊಳ್ಳೋದು. ಹುಣ್ಣವಿ ಹಿಂದಿನ ದಿನ ಒಂದು ಸಣ್ಣ ಮಂಟಪ ಹಾಕಿ ಢಂಕಣ್ಣಕ್ಕ ಢಂಕಣ್ಣಕ್ಕ ಹಲಗಿ ಬಾರಿಸಿಕೊಂಡು ಕಾಮಣ್ಣನ ಪ್ರತಿಕೃತಿ, ಒಟ್ಟಿಟ್ಟಿದ್ದ ಕಟಿಗಿ ಕಾಯೋದ ನಮ್ ಕೆಲಸ ಆಗಿತ್ತು. ಪಟ್ಟಿ ಕಲೆಕ್ಟ್ ಮಾಡಿದ್ದನ್ನ ಸ್ವಾರ್ಥಕ್ಕ ಖರ್ಚ್ ಮಾಡತಿದ್ದಿದ್ದಿಲ್ಲ. ಚುನಮರಿ, ಬೆಂಡು, ಬೆತ್ತಾಸ, ಚೂಡಾ ತರಲಿಕ್ಕೆ ಮಾತ್ರ ಖರ್ಚು ಮಾಡತಿದ್ವಿ. ಈಗಿನಾವ್ರು ಅಂಗಿ, ಪ್ಯಾಂಟು ಹೊಲಿಸಿಕೋತಾರ ಅಂತ ಕೇಳೇನಿ. ಇರ್ಲಿ.

ಹಾಕಾವ್ರು ಲೈಟಾಗಿ ಕ್ವಾರ್ಟರ್ ಹಾಕ್ತಿದ್ರು. ಹೊಡದಾಡಾವ್ರು ಹೊಡದಾಡ್ತಿದ್ರು, ಕುಣ್ಯಾವ್ರು ಇಡೀ ರಾತ್ರಿ ಕುಣೀತಾನ ಇರತಿದ್ರು. ನಾವು ಬಾರಿಸೋ ಹಲಗಿ ಮಾತ್ರ ನಿದ್ದಿ ಮಾಡತಿದ್ದಿದ್ದಿಲ್ಲ. ಲಬೋ ಲಬೋ ಹೊಯ್ಕೊಳ್ಳೋದು ನಿಲ್ತಿದ್ದಿದ್ದಿಲ್ಲ. ಎಲ್ಲಾ ಮನಿಯಾವ್ರೂ ಪಟ್ಟಿ ಕೊಡಲಿಕ್ಕೇ ಬೇಕಿತ್ತು. ಇಲ್ಲದಿದ್ದರ ಹುಣ್ಣವಿ ದಿನ ಬೆಳಿಗ್ಗೆ ನೋಡೋದರಾಗ ಅವರ ಮನಿ ಮುಂದಿನ ಗೇಟು ಛೂಮಂತ್ರ ಆಗಿರ್ತಿತ್ತು, ಕಾಮಣ್ಣನ ಜೋಡಿ ಬೂದಿ ಆಗಿರ್ತಿತ್ತು. ಯಾರ ಮ್ಯಾಲೇನಾದ್ರೂ ಸಿಟ್ಟಿದ್ರ ಅದನ್ನ ಅವರ ಮನಿ ಗೇಟಿನ ಮ್ಯಾಲ ತೋರಿಸತಿದ್ವಿ. ಏನ್ ಮಜಾ ಅಂತೀರಿ? ಒಂದ್ಸಲ ಹಿಂಗ ಆಗಿ ಗೇಟು ಕದೀಲಿಕ್ಕೆ ಹೋಗಿ ಸಿಗ್ಹಾಕ್ಕೊಂಡು ಬ್ಯಾಡ ಫಜೀತಿ.

ನಾವೆಲ್ಲಿ ಏನು ಹೆಚ್ಚೂ ಕಡಿಮಿ ಮಾಡ್ಕೋತೇವಿ ಅಂತ ನಮ್ಮ ತಂದೆ ತಾಯಿಯವರೂ ಇಡೀ ರಾತ್ರಿ ಎದ್ದು ನಮ್ಮನ್ನ ಕಾಯತಿದ್ರು. ಬೆಳಗಾಮುಂಜಾನೆ ನಾಲ್ಕು ಗಂಟೆಗೆ ಕಾಮಣ್ಣನ ಸುಟ್ಟು ಆರೇಳು ಗಂಟೇಕ ಹರಿದಿದ್ದು ಅಥವಾ ಹಳೇ ಅಂಗಿ ಚ್ವಣ್ಣ ಹಾಕ್ಕೊಂಡು ಪಿಚಕಾರಿ ಹಿಡದು ಹೊಂಟ್ರ ಓಣಿಓಣಿ ಗಲ್ಲಿಗಲ್ಲಿ ಸುತ್ತಾಡಿ ಬಣ್ಣಾ ಆಡಿ ಮಧ್ಯಾಹ್ನ ಬರತಿದ್ವಿ. ಬಣ್ಣ ಖರೀದಿ ಮಾಡಲಿಕ್ಕೆ ರೊಕ್ಕ ಇಲ್ದೋರು ಬ್ಯಾಟರಿ ಸೆಲ್ ಒಡದು ಅದರಾಗಿನ ಕಾರ್ಬನ್ ಕುಟ್ಟಿ ಪುಡಿಪುಡಿ ಮಾಡಿ ಅದನ್ನ ಬಣ್ಣದಂಗ ಮಾಡಿ ಹಚ್ಚಲಿಕ್ಕೆ ಬರತಿದ್ರು. ಕೆಲವೊಬ್ರು ಎಂಟು ದಿನ ಕಳದ್ರೂ ಹೋಗಲಾರದಂಥ ವಾರ್ನೀಸು ಹಚ್ಚಿ ಹುಚ್ಚು ಸಂತೋಷ ಪಡತಿದ್ರು. ಅಂಥವರಿಂದ ತಪ್ಪಿಸಿಕೊಳ್ಳೋದಂದ್ರ ಸಾಕಾಗಿಬಿಡತಿತ್ತು.

ಆಮೇಲೆ ಎಂಥಾ ಸೋಪು ಹಚ್ಚಿ ತಿಕ್ಕಿದ್ರೂ ಗುಲಾಲ್ ಬಣ್ಣ ಹೋಗತಿದ್ದಿದ್ದಿಲ್ಲ. ಸ್ನಾನ ಮಾಡಿದ ಮ್ಯಾಲ ಇನ್ನೇನು ಹೋಳಿಗಿ ತುಪ್ಪಾ ಹೊಡಿ ನಮ್ಮಪ್ಪ. ಈಗಿನ ಕಾಲದಾಗ ಹಿಂಗ ಆಚರಿಸ್ತಾರೋ ಇಲ್ಲೋ ಗೊತ್ತಿಲ್ಲ. ಕಾಲ ಬದಲಾಗೇದ. ಐದೈದು ದಿನ ಬಣ್ಣಾ ಆಡಬೇಕಂತಿಲ್ಲ. ಆದರ, ನಮ್ಮ ಸಂಪ್ರದಾಯ, ಆಚರಣೆ, ಆ ಸಂಭ್ರಮ ಬಿಡಬಾರದು. ಏನಂತೀರಿ?

English summary
An overview about the Holi festival celebrated in north Karnataka. It is festival of colors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X