ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸ್ತ್ರಬದ್ಧವಾಗಿ ಗಣಪತಿಯನ್ನು ವಿಸರ್ಜಿಸುವ ಕ್ರಮ

By ವಿಷ್ಣುದಾಸ ನಾಗೇಂದ್ರಾಚಾರ್ಯ, ಮೈಸೂರು
|
Google Oneindia Kannada News

ಶುದ್ಧವಾದ ಜೇಡಿಮಣ್ಣಿನಿಂದ ತಯಾರಿಸಿದ ಗಣಪತಿಯನ್ನು ತಂದು, ಚಂದನ ಕುಂಕುಮ ಸಿಂಧೂರಗಳ ಬಣ್ಣ ಹಚ್ಚಿ, ಮನೆಯಲ್ಲೇ ಬೆಳೆದ ಹೂಗಳಿಂದ ಗರಿಕೆಗಳಿಂದ ಗಣಪತಿಯನ್ನು ಅರ್ಚಿಸಿ ನೋಡಿ, ಅದರ ಪಾವಿತ್ರ್ಯದ ಅನುಭವವಾಗುತ್ತದೆ ಎಂದು ಹಿಂದಿನ ಲೇಖನಗಳಲ್ಲಿ ಬರೆದಿದ್ದೆ.

ತುಂಬ ಜನ ಆ ರೀತಿಯಾಗಿ ಮಾಡಿದ್ದಾರೆ. ಮನೆಯಲ್ಲಿಯೇ ಗಣಪತಿಯನ್ನು ತಯಾರಿಸಿದ್ದಾರೆ. ಮುದ್ದುಮುದ್ದಾಗಿ ಮೂಡಿ ಬಂದಿರುವ ಆ ಗಣಪತಿಗೆ ಸಿಂಧೂರ ಕುಂಕುಮಗಳ ಅಲಂಕಾರವನ್ನು ಮಾಡಿ ಮನೆಯಲ್ಲಿನ ಹೂಗಳಿಂದ ಅರ್ಚಿಸಿದ್ದಾರೆ. ತಮಗಾದ ಅನುಭವವನ್ನು ನನ್ನೊಡನೆ ಹಂಚಿಕೊಂಡಿದ್ದಾರೆ. ಎಂದೂ ಅನುಭವಿಸದ ತೃಪ್ತಿಯನ್ನು ಈ ಬಾರಿ ಅನುಭವಿಸಿದ್ದೇವೆ ಎಂದು ತುಂಬ ಸಂತೋಷದಿಂದ ದಾಖಲಿಸಿದ್ದಾರೆ.

ಶ್ರೀಮತೀ ಉಮಾ ಕೃಷ್ಣಮೂರ್ತಿಯವರ ಅನುಭವ ತೀರ ವಿಭಿನ್ನ. ಅಂಗಡಿಗೆ ಹೋಗಿ ಸುಂದರವಾದ ಗಣಪತಿಯನ್ನು ತಂದಿದ್ದಾರೆ. ಆದರೆ, ಮನೆಗೆ ಬಂದು ನೋಡಿದರೆ POPಯಿಂದ ಮಾಡಿದ ಗಣಪತಿ! ಆ ಹೆಣ್ಣುಮಗಳಿಗೆ ವಿಪರೀತ ಸಿಟ್ಟು ಬಂದಿದೆ. ಮೋಸವಾದ ಅನುಭವ. ಹೀಗಾಗಿ ಮಗನ ಜೊತೆ ಕುಳಿತು ಹಿತ್ತಲಿನ ಮಣ್ಣಿನಿಂದಲೇ ಗಣಪತಿಯನ್ನು ತಯಾರಿಸಿದ್ದಾರೆ. ಕುಂಕುಮ ಸಿಂಧೂರಗಳಿಂದ ಅಲಂಕರಿಸಿದ್ದಾರೆ. ಅವರಿಗಾದ ಖುಷಿಯ ಪರಮಾವಧಿಗೆ ಗಣಪತಿಯ ಮೇಲೊಂದು ಸುಂದರ ಕವನ ಬರೆದು ಹಂಚಿಕೊಂಡಿದ್ದಾರೆ. (Facebook ಚಿತ್ರದಲ್ಲಿರುವ ಗಣಪತಿ ಶ್ರೀಮತೀ ಉಮಾ ಮತ್ತು ಅವರ ಮಗು ಆಯುಷ್ ತಯಾರು ಮಾಡಿದ್ದು) [ಗಣೇಶನ ಹಬ್ಬಕ್ಕೆ ಬದಲಾವಣೆ ನಿಮ್ಮಿಂದಲೇ ಆರಂಭವಾಗಲಿ!]

Traditional method of Ganesh visarjan (immersion)

ಹಾಗೆಯೇ ಶ್ರೀ ಬದರೀನಾರಾಯಣ ಅವರು ಹೀಗೆ ಬರೆದಿದ್ದಾರೆ -

ನಮಸ್ಕಾರ ಆಚಾರ್ಯರೇ, ನಿಮ್ಮ ಅಂತರ್ಗತ ದೇವರ ವಾಕ್ಯದಂತೆ, ಮಣ್ಣಿನ ಗಣಪ ಮನೆಗೆ ಬಂದಿದ್ದಾನೆ. ಕ್ಷಮೆ ಇರಲಿ, ಪಂಚಭೂತಗಳಲ್ಲಿ ಸನ್ನಿಹಿತನಾದ ಗಣಪತಿ ಬಂದಿದ್ದಾನೆ. ಅವನ ಅಲಂಕಾರಕ್ಕೆ ಕುಂಕುಮ, ಚಂದನ, ತುಪ್ಪ ಸೇರಿಸಿ ಹಚ್ಚಿದ ಬಣ್ಣ ಮನಸ್ಸಿನ ತುಂಬ ಆಹ್ಲಾದ ತುಂಬಿದೆ. ಇಷ್ಟು ದಿನ ಪೂಜೆ ಮಾಡಿದ ತೃಪ್ತಿಗಿಂತ ಈ ಸಲದ ತೃಪ್ತಿ ಅಧಿಕವಾಗಿದೆ. ಗಣಪ್ಪನನ್ನು ತರುವಾಗಲೂ ಪ್ರತಿಮೆಗಳಲ್ಲಿ ವಾಯುವಿನಲ್ಲಿರುವ ಗೌರಿ ಗಣಪತಿಯರು ಪ್ರತಿಮೆಗಳಲ್ಲಿ ಸೇರಿಕೊಂಡ ಅನುಭವವಾಯಿತು. ಅನುಸಂಧಾನಪೂರ್ಣ ಪೂಜೆ ಬಹಳ ಖುಷಿ ತಂದಿದೆ. ಪರಿಸರ ತೃಪ್ತಿ ಬಹಳ ಇದೆ. ನಿಮ್ಮ ಅಂತರ್ಗತ ಪರಮಾತ್ಮನಿಗೆ ಅನಂತ ನಮಸ್ಕಾರಗಳು.
***
ಇವತ್ತಿನ ಥಳಕುಬಳುಕು ಗಣಪತಿಯನ್ನು ದೂರವಿಟ್ಟು ಈ ರೀತಿಯಾಗಿ ಶುದ್ಧವಾದ ಕ್ರಮದಲ್ಲಿ ಪೂಜೆ ಮಾಡಿದಲ್ಲಿ ಅದ್ಭುತವಾದ ಅನುಭವ ನಮ್ಮದಾಗುತ್ತದೆ ಎನ್ನುವದರಲ್ಲಿ ಸಂಶಯವೇ ಇಲ್ಲ ಎನ್ನುವದಕ್ಕೆ ಆ ಬಾರಿ ಆ ರೀತಿ ಪೂಜೆ ಮಾಡಿರುವವರೇ ಸಾಕ್ಷಿ.

ಇನ್ನು ಗಣಪತಿಯ ವಿಸರ್ಜನೆಯ ಕುರಿತು ಶಾಸ್ತ್ರೀಯವಾದ ಕ್ರಮ ಏನೆಂದು ತಿಳಿಯೋಣ.

ಈ ಬಾರಿ ಗೌರೀದೇವಿ ನಮ್ಮ ಮನೆಗಳಲ್ಲಿ ಹನ್ನೊಂದು ದಿನವಿದ್ದು ಪೂಜೆ ಸ್ವೀಕರಿಸುತ್ತಾಳೆ. ಭಾದ್ರಪದ ಶುದ್ದ ತ್ರಯೋದಶೀ (26-09-2015 ಶನಿವಾರ) ಬೆಳಿಗ್ಗೆ 7-45 ರಿಂದ 9 ಗಂಟೆಯ ಒಳಗೆ ಅಥವಾ 10-50 ರಿಂದ 12 ಗಂಟೆಯ ಮಧ್ಯದಲ್ಲಿ ವಿಸರ್ಜನೆ ಮಾಡಬೇಕು. ಅಷ್ಟು ದಿವಸ ಪ್ರತೀದಿವಸ ಬೆಳಿಗ್ಗೆ ಸಂಜೆ ಪೂಜೆಯನ್ನು ಸಲ್ಲಿಸಬೇಕು. ಹಣ್ಣುಗಳನ್ನು ನೈವೇದ್ಯ ಮಾಡಬೇಕು.

ಕಳುಹಿಸುವ ದಿವಸ ಗೌರೀದೇವಿಗೆ ಭಕ್ತಿಯಿಂದ ಪೂಜೆಯನ್ನು ಮಾಡಿ, ಸಿಹಿ ಪದಾರ್ಥವನ್ನು ಮಾಡಿ ನೈವೇದ್ಯವನ್ನು ಮಾಡಿ, ಮಂಗಳಾರತಿಯನ್ನು ಮಾಡಿ ನಮಸ್ಕರಿಸಬೇಕು.

ಗೌರಿಗೆ ಉಡಿ ತುಂಬುವ ಪರಿ

ಆ ಬಳಿಕ ಗಂಡನ ಮನೆಗೆ ಹೊರಟು ನಿಂತ ನಮ್ಮ ಮನೆಮಗಳು ಗೌರೀದೇವಿಗೆ ಉಡಿ ತುಂಬಬೇಕು. ಅಕ್ಕಿ ಬೇಳೆ ಬೆಲ್ಲ ಮುಂತಾದ ಧಾನ್ಯಗಳನ್ನು ಗೌರೀದೇವಿಯ ಮುಂದೆ ಒಂದು ಕಂಚಿನ ಪಾತ್ರೆಯಿಟ್ಟು, (ಕಂಚಿನಲ್ಲಿ ಉಡಿ ತುಂಬುವದು ಸರ್ವಶ್ರೇಷ್ಠ. ಹಿತ್ತಾಳೆ, ಅಥವಾ ಆ ಪಾತ್ರೆಯಲ್ಲಿ ಒಂದು ಕುಪ್ಪುಸದ ಖಣವನ್ನು ಹರಡಿ ಅದಕ್ಕೆ ಮೊದಲು ಅರಿಶಿನ ಕುಂಕುಮ ಹಾಕಿ ಆ ಬಳಿಕ ಈ ಧಾನ್ಯಗಳನ್ನು ಮೂರು ಮೂರು ಬಾರಿ ಬೊಗಸೆ ಮಾಡಿ ಅದರೊಳಗೆ ಹಾಕಬೇಕು. ಗೌರೀದೇವಿಯ ಸೆರಗಿನಲ್ಲಿ ತುಂಬುತ್ತಿದ್ದೇವೆ ಎಂದು ಅನುಸಂಧಾನ ಮಾಡಬೇಕು. ಕಡೆಯಲ್ಲಿ ಆ ಪಾತ್ರೆಯಿಂದ ಸ್ವಲ್ವಸ್ವಲ್ಪ ಧಾನ್ಯವನ್ನು ಮೂರು ಬಾರಿ ತೆಗೆದಿಟ್ಟುಕೊಳ್ಳಬೇಕು. ಈ ತೆಗೆದಿಟ್ಟು ಕೊಂಡ ಧಾನ್ಯವನ್ನು ಮನೆಯ ಧಾನ್ಯಕ್ಕೆ ಸೇರಿಸಿದರೆ ಆ ಅನ್ನಪೂರ್ಣೆಯ ಅನುಗ್ರಹದಿಂದ ಎಂದಿಗೂ ಮನೆಯಲ್ಲಿ ಧಾನ್ಯದ ಕೊರತೆ ಉಂಟಾಗುವದಿಲ್ಲ.

ಗಮನಿಸಿ, ಉಡಿ ತುಂಬವದು ದಾನವಲ್ಲ. ಹೀಗಾಗಿ ಅದನ್ನು ಮತ್ತೆ ತೆಗೆದುಕೊಂಡರೆ ತಪ್ಪಿಲ್ಲ.

(ಈ ರೀತಿಯ ಎಲ್ಲ ಆಚರಣೆಗಳನ್ನೂ Animation ಮಾಡಿಸಿ ಸರಿಯಾದ ವಿಧಾನವನ್ನು ವಿಡಿಯೋ ಮುಖಾಂತರ ತೋರಿಸುವ ಹಂಬಲವಿದೆ ನನಗೆ. ಆಗ ಹೇಳಬೇಕಾದ ಹಾಡುಗಳು, ಮಂತ್ರಗಳು, ಅದರ ಅರ್ಥ, ಯಾವುದನ್ನು ಮಾಡಬಾರದು, ಯಾವುದನ್ನು ಮಾಡಬೇಕು ಈ ಎಲ್ಲವನ್ನೂ ವಿಡಿಯೋ ಮುಖಾಂತರ ಮಾಡಿ ತೋರಿಸಲು ಸಾಧ್ಯ. ಗುರು ದೇವತೆಗಳ ಅನುಗ್ರಹದಿಂದ ನಾನಂದುಕೊಂಡಿರುವ Sattelite TV Channelನ ಕಾರ್ಯ ಕಾರ್ಯಗತವಾದರೆ ಯುಗಾದಿಯಿಂದ ಹಿಡದು ಕಾಮನ ಹುಣ್ಣಿಮೆಯವರೆಗಿನ ಹಬ್ಬಗಳ ವಿಧಾನವನ್ನೂ, ವ್ರತಗಳ ಆಚರಣೆಯನ್ನು, ನಾಮಕರಣದಿಂದ ಹಿಡಿದು ವಿವಾಹದವರೆಗಿನ ಎಲ್ಲ ಸಂಸ್ಕಾರಗಳ ವಿಧಿವಿಧಾನಗಳನ್ನೂ, ಬ್ರಹ್ಮಾಂಡದ ಸೃಷ್ಟಿಯಿಂದ ಹಿಡಿದು ಪ್ರಳಯದವರೆಗಿನ ಪ್ರಕ್ರಿಯೆಗಳನ್ನೂ, ದೃಶ್ಯ ಮಾಧ್ಯಮದಲ್ಲಿ ತೋರಿಸುತ್ತೇನೆ. ದೇವರು ಗುರುಗಳು ಅನುಗ್ರಹಿಸಿ ಮಾಡಿಸಬೇಕು.)

ಆ ನಂತರ ಗೌರೀದೇವಿಯ ಜೊತೆಯಲ್ಲಿ ಕಳುಹಿಸಲು ಒಂದು ಪುಟ್ಟ ಬಾಗಿನವನ್ನು ತಯಾರು ಮಾಡಿಕೊಂಡಿರಬೇಕು. ಆ ಬಾಗಿನವನ್ನು ಗೌರೀದೇವಿಗೆ ನೀಡಿ, ಮತ್ತೆ ಮುಂದಿನ ವರ್ಷ ಬಾ ತಾಯಿ ಎಂದು ಪ್ರಾರ್ಥಿಸಿ, ಮನಸ್ಸಿನ ಪ್ರಾರ್ಥನೆಗಳನ್ನು ಸಲ್ಲಿಸಿ, ಮನೆಯಲ್ಲಿ ಆಗಬೇಕಾಗಿರುವ ಕಾರ್ಯಗಳನ್ನು ಮತ್ತೊಮ್ಮೆ ನಿವೇದಿಸಿಕೊಂಡು, ಆರತಿಯೆತ್ತಿ ಮಂತ್ರಪುರಸ್ಸರವಾಗಿ ಗೌರೀದೇವಿಯನ್ನು ಉದ್ವಾಸನ ಮಾಡಬೇಕು. (ಮಂತ್ರದಿಂದ ದೇವತೆಯನ್ನು ಪ್ರತಿಮೆಯಲ್ಲಿ ನೆಲೆಗೊಳ್ಳುವಂತೆ ಮಾಡುವದನ್ನು ಆವಾಹನೆ ಎನ್ನುತ್ತಾರೆ. ಮಂತ್ರದಿಂದ ದೇವತೆಯನ್ನು ಪ್ರತಿಮೆಯಿಂದ ಹೊರಬರುವಂತೆ ಮಾಡಲು ಉದ್ವಾಸನ ಎನ್ನುತ್ತಾರೆ. ವಿಸರ್ಜನೆ ಬೇರೆ ಉದ್ವಾಸನ ಬೇರೆ. ವಿಸರ್ಜನೆ ಎಂದರೆ ನೀರಿನಲ್ಲಿ ವಿಸರ್ಜಿಸುವದು, ಉದ್ವಾಸನ ಎಂದರೆ 'ಪೂಜ್ಯ'ವಾದ ಸನ್ನಿಧಾನವನ್ನು ಪ್ರತಿಮೆಯಿಂದ ಬೇರೆ ಮಾಡುವದು.)

ಆ ನಂತರ ಗಣಪತಿಗೂ ಪೂಜೆ ನೈವೇದ್ಯಗಳನ್ನು ಸಲ್ಲಿಸಿ, ಬುತ್ತಿಗಾಗಿ ಮೊಸರವಲಕ್ಕಿಯನ್ನು ನೈವೇದ್ಯ ಮಾಡಿ (ಕಳುಹಿಸುವ ದಿವಸಕ್ಕೆ ಮೊಸರಿನ ವ್ರತ ಮುಗಿದಿರುತ್ತದೆ) ಗಣಪತಿಯ ಮುಂದೆ ಭಕ್ತಿಯಿಂದ ಪ್ರಾರ್ಥನೆಯನ್ನು ಸಲ್ಲಿಸಿ ಮಂತ್ರಪುರಸ್ಸರವಾಗಿ ಉದ್ವಾಸನ ಮಾಡಬೇಕು.

ಆ ನಂತರ ಗೌರೀಗಣಪತಿರನ್ನು ಅಕ್ಕಿ ತುಂಬಿದ ತಟ್ಟೆಯ ಸಮೇತವಾಗಿ ತೆಗೆದುಕೊಂಡು ಗಂಟೆ ಜಾಗಟೆಗಳನ್ನು ಬಾರಿಸುತ್ತ, ಮಂಗಳವಾದ್ಯಗಳನ್ನು ನುಡಿಸುತ್ತ, ಗೌರೀಗಣಪತಿಯರ ಸ್ತೋತ್ರಗಳನ್ನು ಹೇಳುತ್ತ ನದೀ ಕೆರೆಗಳ ಬಳಿ ಹೋಗಿ ಅಲ್ಲಿ ವಿಸರ್ಜಿಸಬೇಕು.

ಆದರೆ, ಈ ದಿವಸ ಕೆರೆ ನದಿಗಳಲ್ಲಿ ಬಿಡುವದು ತುಂಬ ದೊಡ್ಡ ಅಪರಾಧವಾಗುತ್ತದೆ. ಪರಿಸರದ ಮಾಲಿನ್ಯ ಎಂಬ ಕಾರಣ ಸರಿಯೇ ಸರಿ. ಆದರೆ, ಇವತ್ತು ಕೆರೆಗಳಿಗೆ, ನದಿಗಳಿಗೆ ಇಡಿಯ ಊರಿನ ಚರಂಡಿ ಹರಿದುಬರುತ್ತದೆ. ಮಲಮೂತ್ರಗಳ ನೀರಿನಲ್ಲಿ ಗಣಪತಿಯ ವಿಸರ್ಜನೆಯೇ? ಮಹತ್ತರ ಅಪರಾಧ. ಬೇಡವೇ ಬೇಡ.

ಗಣೇಶನ ವಿಸರ್ಜನೆ ಹೀಗಿರಲಿ

ಅದಕ್ಕಾಗಿ ಅತ್ಯಂತ ಸೂಕ್ತವಾದ ಒಂದು ಮಾರ್ಗವನ್ನು ತಿಳಿಸುತ್ತೇನೆ. ಒಂದು ಹಿತ್ತಾಳೆಯ ಬಿಂದಿಗೆ, ಬಕೆಟ್ಟು ಅಥವಾ ದೊಡ್ಡ ಕೊಳಗ ಯಾವುದನ್ನಾದರೂ ತೆಗೆದುಕೊಳ್ಳಿ. ದೇವರು ಶಕ್ತಿ ನೀಡಿದ್ದರೆ ಅವಶ್ಯವಾಗಿ ಆ ರೀತಿಯಾದ ಒಂದನ್ನು ಕೊಂಡು ತನ್ನಿ. ಸಾಧ್ಯವೇ ಇಲ್ಲ ಎಂಬ ಪಕ್ಷದಲ್ಲಿ ಒಂದು ಸ್ಟೀಲಿನ ಕೊಳಗವನ್ನೆ ತೆಗೆದುಕೊಳ್ಳಿ. ಸರ್ವಥಾ Plastic ಪದಾರ್ಥಗಳು ಬೇಡ.

ಆ ಕೊಳಗ ಗೌರೀ ಗಣಪತಿಯರು ಮುಳುಗುವಷ್ಟಿರಬೇಕು. ನಿಮ್ಮ ಮನೆಯಲ್ಲಿ ಅನುಕೂಲವಿದ್ದರೆ ಹಿತ್ತಲಿನಲ್ಲಿ ಅಥವಾ ಅಂಗಳದಲ್ಲಿ ಅದನ್ನು ಸ್ಥಾಪಿಸಿ. ಇಲ್ಲದಿದ್ದರೆ ಮನೆಯಲ್ಲಿಯೆ ಇಟ್ಟು ಮುಂದಿನ ಕ್ರಮವನ್ನು ಅನುಸರಿಸಿ. ಅದರಲ್ಲಿ ಶುದ್ಧವಾದ ನೀರನ್ನು ತುಂಬಿಸಿ. ಆ ನೀರಿಗೆ ಸ್ವಲ್ವ ಅರಿಶಿನ ಕುಂಕುಮ ಹೂಗಳನ್ನು ಹಾಕಿ. ಕೊಳಗಕ್ಕೆ ನಾಲ್ಕೂ ಕಡೆಯಲ್ಲಿಯೂ ಅರಿಶಿನ ಕುಂಕುಮ ಗಂಧ ಅಕ್ಷತೆಗಳಿಂದ ಅಲಂಕಾರವನ್ನು ಮಾಡಿ. ಅದಕ್ಕೊಂದು ಹೂವಿನ ಹಾರವನ್ನು ಹಾಕಿ. ಕೊಂಡ ಹೂಗಳು ಸರ್ವಥಾ ಬೇಡ, ಬೆಳೆದ ಹೂ ಇಲ್ಲವಾದರೆ ಮಾವಿನಸೊಪ್ಪನ್ನು ಸುತ್ತಲೂ ಕಟ್ಟಿ.

ಆ ನಂತರ ಅದರ ಮುಂದೆ ಒಂದು ಮಣೆಯನ್ನು ಹಾಕಿ ಕುಳಿತುಕೊಳ್ಳಿ. ಭಕ್ತಿಯಿಂದ ಎಲ್ಲ ತೀರ್ಥಾಭಿಮಾನಿದೇವತೆಗಳನ್ನು ಪ್ರಾರ್ಥಿಸಿ.

ಗಂಗಾ ಗೋದಾವರೀ ಚ ಸದಮಲಕೃಷ್ಣಾ ಮಾನಸ-ಸ್ವಾಮಿ-ಚಂದ್ರಾಃ
ಕಾವೇರೀ ಬ್ರಹ್ಮಪತ್ಯೌ ಶುಭತಮಸರಯೂ ತುಂಗಭದ್ರಾ ಸುಪುಣ್ಯಾ I
ಕಾಲಿಂದೀ ನರ್ಮದಾ ಚ ಮೃತಿಹರಸರಿತಃ ಸಿಂಧುಸಂಸಾರಹರ್ತ್ಯೌ
ನದ್ಯೋ ವಿಷ್ಣ್ವಂಗಜಾತಾಃ ಪ್ರದಿಶತು ನೃಹರೌ ಭಕ್ತಿಮಾತ್ಯಂತಿಕೀ ನಃ II

ಕುಮದ್ವತೀ ಘೋರಮಲಾಪಹಾ ಚ
ಸಾ ತಾಮ್ರಪರ್ಣೀ ವರಚಂದ್ರಭಾಗಾ I
ಸಮುದ್ರಗಾ ನಿಮ್ನಗಾಸ್ತತ್ಸಮಾನಾಃ
ತತೋ ನೀಚಾ ಸಿಂಧ್ವಗಾ ನಃ ಪುನಂತು II

ಗಂಗಾ, ಗೋದಾವರೀ, ಕೃಷ್ಣಾ, ಮಾನಸಸರೋವರ, ಸ್ವಾಮಿಪುಷ್ಕರಿಣಿ, ಶ್ರೀರಂಗದ ಚಂದ್ರಾಪುಷ್ಕರಿಣೀ, ಕಾವೇರಿ, ಸರಸ್ವತೀ, ಸರಯೂ, ತುಂಗಭದ್ರಾ, ಯಮುನಾ, ನರ್ಮದಾ, ಸಿಂಧೂ, ಭವನಾಶಿನೀ, ಕುಮದ್ವತಿ, ಮಲಪ್ರಭಾ, ತಾಮ್ರಪರ್ಣೀ, ಭೀಮಾ, ಪಿನಾಕಿನೀ ಮುಂತಾದ ಎಲ್ಲನದಿಗಳನ್ನು ಸ್ಮರಿಸಿ ಅವರ ಸನ್ನಿಧಾನವನ್ನು ಆ ನೀರಿನಲ್ಲಿ ಪ್ರಾರ್ಥಿಸಿ.

ಗಂಡಸರು ಅದರ ಮೇಲೆ ಕೈಯನ್ನಿಟ್ಟು ಕಲಶಪೂಜೆಯನ್ನು ಮಾಡಿ ಎಲ್ಲ ದೇವತೆಗಳ, ತೀರ್ಥಗಳ ಸನ್ನಿಧಾನವನ್ನು ಪ್ರಾರ್ಥಿಸಿ.

ಭಕ್ತಿಯಿಂದ ಓಗೊಟ್ಟರೆ, ನಾವು ಮಾಡುವ ಸ್ನಾನದ ನೀರಿನಲ್ಲಿಯೇ ಗಂಗಾದಿ ದೇವತೆಗಳು ಸನ್ನಿಹಿತರಾಗುತ್ತಾರೆ. ಅಂತಹುದರಲ್ಲಿ ಗಂಗಾದೇವಿಗೆ ಜ್ಞಾನ ಭಕ್ತಿ ವೈರಾಗ್ಯಗಳನ್ನು ಕರುಣಿಸಿ, ಅವಳಿಗೆ ಪಾವಿತ್ರ್ಯವನ್ನು ನೀಡುವ, ಅವಳಿಗೆ ಭಗವಂತನನ್ನು ತೋರಿಸಿಕೊಟ್ಟು ಅವಳನ್ನು ಉದ್ಧಾರ ಮಾಡುವ ಗಣಪತಿಯ ನಿಮಜ್ಜನಕ್ಕೆ, ಗೌರೀದೇವಿಯ ನಿಮಜ್ಜನಕ್ಕೆ ಅವಳು ಬಾರದಿರುತ್ತಾಳೆಯೇ? ನಾವು ಭಕ್ತಿಯಿಂದ ಕರೆದಲ್ಲಿ ಅವಶ್ಯವಾಗಿ ಸಕಲ ತೀರ್ಥಾಭಿಮಾನಿದೇವತೆಗಳ ಸಮೇತವಾಗಿ ಅವಳು ಸನ್ನಿಹಿತಳಾಗುತ್ತಾಳೆ.

ಆ ನಂತರ ಕೊಳಗದಲ್ಲಿರುವ ಸಕಲ ತೀರ್ಥದೇವತೆಗಳಿಗೆ ಬಾಳೆಹಣ್ಣುಗಳನ್ನಿಟ್ಟು ನೈವೇದ್ಯ ಮಾಡಿ ಮಂಗಳಾರತಿಯನ್ನು ಮಾಡಿ.

ಆ ಬಳಿಕ ಗಂಡ ಹೆಂಡತಿಯರು ಸ್ತೋತ್ರಗಳನ್ನು ಹಾಡುಗಳನ್ನು ಒಟ್ಟಿಗೆ ಹೇಳುತ್ತ, ಮಕ್ಕಳು ಗಂಟೆ ಜಾಗಟೆಗಳನ್ನು ಬಾರಿಸುತ್ತ ಗೌರೀ ಗಣಪತಿಯರನ್ನು ಎತ್ತಿಕೊಂಡು ಬಂದು ಆ ಕೊಳಗದ ಪಕ್ಕದಲ್ಲಿಟ್ಟು ಮತ್ತೊಮ್ಮೆ ನೈವೇದ್ಯ ಮಂಗಳಾರತಿ ನಮಸ್ಕಾರಗಳನ್ನು ಸಲ್ಲಿಸಿ, ಸದಾ ನಮ್ಮನ್ನು ರಕ್ಷಿಸಿ ಎಂದು ಪ್ರಾರ್ಥಿಸಿ ಮೊದಲಿಗೆ ಗೌರೀ ದೇವಿಯನ್ನು ತೆಗೆದುಕೊಂಡು ನೀರಿನಲ್ಲಿ ಮೂರು ಬಾರಿ ಮುಳುಗಿಸಿ ಎತ್ತಿ ಮೂರನೇ ಬಾರಿ ಪೂರ್ಣ ಮುಳುಗಿಸಿ ಬಿಡಿ. ಆ ನಂತರ ಗಣಪತಿಯನ್ನು ಹಾಗೇ ಮೂರು ಬಾರಿ ಮುಳುಗಿಸಿ ಮೂರನೇ ಬಾರಿ ಮುಳುಗಿಸಿ ಬಿಡಿ.

ತಟ್ಟೆಯಲ್ಲಿರುವ ಅಕ್ಕಿ, ಬೆಲ್ಲ, ಹೂಗಳನ್ನೂ ಅದರಲ್ಲಿಯೇ ಹಾಕಿ.

ಇದೇ ವಿಸರ್ಜನೆ.

ಶುದ್ಧವಾದ ಮಣ್ಣಿನಿಂದ ಮಾಡಿದ್ದಲ್ಲಿ ಒಂದೆರಡು ಗಂಟೆಗಳಲ್ಲಿ ಪ್ರತಿಮೆಗಳು ಕರಗುತ್ತವೆ. ಹೂ ಎಲೆಗಳು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಮಂತ್ರಪೂರ್ವಕವಾಗಿ ಆವಾಹಿಸಿ, ಭಕ್ತಿಯಿಂದ ಪೂಜಿಸಿದ ಈ ಮಣ್ಣಿನಲ್ಲಿ ವಿಶಿಷ್ಟವಾದ ಶಕ್ತಿಯಿರುತ್ತದೆ. ಹೀಗಾಗಿ ಇದನ್ನು ಕಂಡಕಂಡಲ್ಲಿ ಬಿಸಾಡತಕ್ಕದ್ದಲ್ಲ.

ನಿಮ್ಮದೇ ಆದ ಜಮೀನಿದ್ದರೆ ಅಲ್ಲಿಗೆ ತೆಗೆದುಕೊಂಡು ಹೋಗಿ ಈ ಮಣ್ಣನ್ನು ಹಾಕಿ. ಬೆಳೆ ಸಮೃದ್ಧವಾಗಿ ಬರುತ್ತದೆ. ಅದಿಲ್ಲದಿದ್ದರೆ ಯಾವುದಾದರೂ ಮರದ ಬುಡಕ್ಕೆ ಹಾಕಿ. ಸರ್ವೋತ್ತಮವಾದ ಪಕ್ಷ ಎಂದರೆ ನಿಮ್ಮ ಮನೆಯಲ್ಲಿನ ಗಿಡದ ಬುಡಕ್ಕೇ ಅದನ್ನು ಹಾಕಿ. ಮನೆಯಲ್ಲಿ ಒಂದೂ ಗಿಡವಿಲ್ಲದಿದ್ದರೆ ಅಷ್ಟು ಮಣ್ಣು ಹಿಡಿಯುವ ಒಂದು ಪಾಟನ್ನು ತಂದು ಅದರಲ್ಲಿ ಈ ಮಣ್ಣನ್ನು ಹಾಕಿ ಒಂದು ಹೂವಿನ ಗಿಡವನ್ನು ನೆಡಿ. ದಿವಸಾ ನೀರೆರಿಯಿರಿ. ಅದರಲ್ಲಿ ಬೆಳೆದ ಹೂವಿನಿಂದ ದೇವರನ್ನು ಅರ್ಚಿಸಿ.

ಕೊಂಡ ಹೂವಿನಿಂದ ಪೂಜೆ ಮಾಡಿದರೆ ಹೆಣ್ಣುಮಕ್ಕಳು ವಿಧವೆಯರಾಗುತ್ತಾರೆ, ಗಂಡಸರು ವಿಧುರರಾಗುತ್ತಾರೆ ಎಂದು ಪುರಾಣಗಳು ತಿಳಿಸುತ್ತವೆ. ಬೇಡ. ಗಂಡ ಹೆಂಡತಿಯರ ಮಧ್ಯದಲ್ಲಿ ವಿರಸ ವಿಚ್ಛೇದನಗಳಂಟಾಗುವದೂ ಬೇಡ. ನಿಮ್ಮ ಮನೆಯಲ್ಲಿಯೇ ಹೂ ಬೆಳೆದು ದೇವರಿಗೆ ಅರ್ಪಿಸಿ. ನಿಮ್ಮ ದಾಂಪತ್ಯ ಸುಖಕರವಾಗಿರಲಿ. ಪ್ರತೀಜನ್ಮದಲ್ಲಿಯೂ ಪ್ರೇಮಪುತ್ಥಳಿಗಳು ನಿಮಗೆ ಸಂಗಾತಿಯರಾಗಿ ದೊರಕಲಿ.

ಈ ಬಾರಿ, ಕೆರೆಗಳಲ್ಲಿ ವಿಸರ್ಜಿಸಬೇಡಿ. ನಿಮ್ಮ ಮನೆಯಲ್ಲಿಯೇ ಈ ರೀತಿ ಹಿತ್ತಾಳೆ, ತಾಮ್ರಗಳ ಕೊಳಗಗಳನ್ನಿಟ್ಟು ಪ್ರತಿಮಾವಿಸರ್ಜನೆ ಮಾಡಿ. ಪರಿಸರ ಉಳಿಯುತ್ತದೆ. ಅದು ಉಳಿದರೆ ನಾವು ಉಳಿಯುತ್ತೇವೆ, ನಮ್ಮ ಮಕ್ಕಳು ಉಳಿಯುತ್ತಾರೆ.

ನೀವೆಲ್ಲರೂ ವಿಶ್ವನಂದಿನಿಯ ಲೇಖನಗಳಿಗೆ ತೋರುತ್ತಿರುವ ಪ್ರತಿಕ್ರಿಯೆಗಳಿಗೆ, ಪ್ರೀತಿಗೆ ನಾನು ಆಭಾರಿ. ಧರ್ಮದಲ್ಲಿನ ನಿಮ್ಮ ಶ್ರದ್ಧೆಯನ್ನು ನೋಡುತ್ತಿದ್ದರೆ ಮತ್ತಷ್ಟು ಉತ್ಸಾಹದಿಂದ ಬರೆಯಲು ಕೂಡುತ್ತಿದ್ದೇನೆ. ಬರೆದದ್ದು ಸಾಕಾರವಾಗಿ ಕಣ್ಣ ಮುಂದೆ ಕಾಣುವದಕ್ಕಿಂತ ದೊಡ್ಡ ಸೌಭಾಗ್ಯವುಂಟೇ?

ಎಲ್ಲರೂ ಕೂಡಿ ಸನಾತನ ಸಂಸ್ಕೃತಿಯನ್ನು ಉಳಿಸೋಣ. ನಮ್ಮ ವೇದಪುರಾಣಗಳ ಧರ್ಮ ಇಡಿಯ ಜಗತ್ತಿನಲ್ಲಿಯೇ ಸರ್ವಶ್ರೇಷ್ಠವಾದ ಧರ್ಮ ಎಂದು ಸಾರಿಸಾರಿ ಹೇಳೋಣ. ಗೌರೀ ಗಣಪತಿಯರ ಅನುಗ್ರಹ ನಿಮ್ಮೆಲ್ಲರ ಮೇಲಿರಲಿ. ನಿಮ್ಮ ಮನಸ್ಸಿನ ಅಭೀಷ್ಟಗಳು ಪೂರ್ಣವಾಗಲಿ.

English summary
Do not immerse Lord Ganesha in lakes or tanks. Gowri-Ganesh visarjan can be done at your home only using vessles made of steel or kanchu. Immerse clay Ganapati in vessel and reuse the mud for pots. By doing so we can save the nature, say Vishnudasa Nagendracharya. Have a blessed Ganesha festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X