• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಣೇಶ ಚತುರ್ಥಿ ಸ್ಪೆಷಲ್: ಕರಾವಳಿಯ ಐತಿಹಾಸಿಕ ಆರು ವಿನಾಯಕ ದೇವಾಲಯಗಳ ರೌಂಡ್ ಅಪ್

|

ಶ್ರೀಗುರುಗಣಾಧಿಪತಯೇ ನಮಃ. ಪರಶುರಾಮ ಸೃಷ್ಟಿಯೆಂದೇ ಕರೆಯಲ್ಪಡುವ ಕರಾವಳಿಯ ದೇವಾಲಯಗಳಲ್ಲಿನ ಪೂಜಪದ್ದತಿ ವೈಶಿಷ್ಟತೆಯಿಂದ ಕೂಡಿರಲ್ಪಟ್ಟಿರುತ್ತದೆ. ಈ ಭಾಗದ ಹೆಚ್ಚಿನ ದೇವಾಲಯಗಳು ಮಹಾತೋಭಾರ ಪದ್ದತಿಯನ್ನು ಪಾಲಿಸಿಕೊಂಡು ಬರುತ್ತದೆ. ಜೊತೆಗೆ, ಇಲ್ಲಿನ ದೇವಾಲಯಗಳ ಗರ್ಭಗುಡಿಯಲ್ಲಿ ಕರೆಂಟ್ ದೀಪದ ವ್ಯವಸ್ಥೆ ಇರುವುದು ಕಮ್ಮಿ.

ವೈವಿಧ್ಯತೆಯಿಂದ ಕೂಡಿರುವ ನಮ್ಮ ದೇಶ ಮತ್ತು ನಮ್ಮ ಹಿಂದೂಗಳಲ್ಲಿ ಒಂದೊಂದು ಪ್ರದೇಶಗಳಲ್ಲಿ ಒಂದೊಂದು ಹಬ್ಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಆದರೆ, ಇಡೀ ದೇಶದಲ್ಲಿ ಎಲ್ಲರೂ ಆಚರಿಸುವ ಹಬ್ಬಗಳಲ್ಲಿ ಪ್ರಮುಖವಾದದ್ದು, ಗಣೇಶ ಚತುರ್ಥಿ. ಭಾದ್ರಪದ ಶುಕ್ಲ, ಚತುರ್ಥಿಯಂದು ನಾಡಿನೆಲ್ಲಡೆ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ.

ಭಕುತಿಯಿಂದ ಪೂಜಿಸಿದ ಗಣಪನ ಫೋಟೋ ನಮಗೆ ಕಳಿಸಿಕೊಡಿ

ವಿಘ್ನನಾಶಕ, ಪ್ರಥಮ ಪೂಜಿತ ಗಣೇಶ, ವಿದ್ಯೆ ಮತ್ತು ಜ್ಞಾನದ ಅಧಿಪತಿ. ಚದುರಿ ಹೋಗಿದ್ದ ಅಂದಿನ ಅನಕ್ಷರಸ್ಥ ಸಮಾಜದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಂದೇ ವೇದಿಕೆಯಡಿ ಏಕೀಕರಣಗೊಳಿಸಲು ಲೋಕಮಾನ್ಯ ಬಾಲಗಂಗಾಧರ ತಿಲಕರು ಆಯ್ಕೆ ಮಾಡಿಕೊಂಡಿದ್ದು ಗಣೇಶ ಹಬ್ಬವನ್ನು.

ಗಣೇಶ ಹಬ್ಬದ ದಿನ ಚಂದ್ರ ದರ್ಶನ ಮಾಡಿದವರು 'ಚೋರ' ನೆಂಬ ಅಪಖ್ಯಾತಿಗೆ ಗುರಿಯಾಗುತ್ತಾರಂತೆ, ಅದಕ್ಕೆ 'ಶಮಂತಕಕೋಪಾಖ್ಯಾನದ' ಪುರಾಣದಲ್ಲಿ ಈ ಬಗ್ಗೆ ಉಲ್ಲೇಖವಿದೆ. ಇನ್ನೊಂದು ಕಥೆಯ ಪ್ರಕಾರ, ಎಲ್ಲರೂ ಕೊಟ್ಟ ಸಿಹಿತಿಂಡಿಗಳನ್ನು ತಿಂದು ಡೊಳ್ಳೊಟ್ಟೆಯನ್ನು ಉಬ್ಬಿಸಿ ತನ್ನ ವಾಹನ ಇಲಿಯ ಮೇಲೆ ಸವಾರಿ ಮಾಡುತ್ತಾ ಬರುತ್ತಿದ್ದಾಗ, ಇಲಿಯ ಮೇಲೆ ಕುಳಿತಿದ್ದ ಗಣೇಶ ಕೆಳಗೆ ಬೀಳುತ್ತಾನೆ.

ಗಣೇಶ ಚತುರ್ಥಿ: ಹೂವು-ಹಣ್ಣು ಪೆಟ್ರೋಲ್ ನಷ್ಟೇ ದುಬಾರಿ

ಅದನ್ನು ಚಂದ್ರ ನೋಡಿ ಅಪಹಾಸ್ಯ ಮಾಡುತ್ತಾನಂತೆ, ಇದರಿಂದ ಸಿಟ್ಟಾದ ಗಣೇಶ, ಗಣೇಶ ಚತುರ್ಥಿಯಂದು ಯಾರು ನಿನ್ನನ್ನು ದರ್ಶನ ಮಾಡುತ್ತಾರೋ ಅವರಿಗೆ ಚೋರ ಎಂದು ಅಪಖ್ಯಾತಿ ಬರಲಿ ಎಂದು ಶಾಪ ನೀಡುತ್ತಾನಂತೆ. ಗೌರಿ, ಗಣೇಶ ಹಬ್ಬದ ಈ ಸಂದರ್ಭದಲ್ಲಿ ನಮ್ಮೆಲ್ಲಾ ಓದುಗರಿಗೂ ಹಬ್ಬದ ಶುಭಾಶಯವನ್ನು ಕೋರುತ್ತಾ, ಕರ್ನಾಟಕ ಕರಾವಳಿಯ ಪುರಾಣಪ್ರಸಿದ್ದ ಆರು ವಿನಾಯಕ ದೇವಾಲಯಗಳ ಇತಿಹಾಸದ ಬಗ್ಗೆ ಒಂದು ಸಂಕ್ಷಿಪ್ತ ವರದಿ, ಮುಂದೆ ಓದಿ..

ಆನೆಗುಡ್ಡೆ (ಕುಂಭಾಶಿ) ವಿನಾಯಕ ದೇವಾಲಯ

ಆನೆಗುಡ್ಡೆ (ಕುಂಭಾಶಿ) ವಿನಾಯಕ ದೇವಾಲಯ

ಆನೆಗುಡ್ಡೆ (ಕುಂಭಾಶಿ) ವಿನಾಯಕ ದೇವಾಲಯ, ಪರಶುರಾಮ ಸೃಷ್ಟಿಯ ಸಪ್ತಕ್ಷೇತ್ರಗಳಲ್ಲೊಂದು. ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನಲ್ಲಿರುವ ಈ ದೇವಾಲಯ ಉಡುಪಿ - ಕುಂದಾಪುರ ರಾ.ಹೆ 66ರಲ್ಲಿದೆ. ನಿಂತಿರುವ ಭಂಗಿಯಲ್ಲಿರುವ ವಿನಾಯಕ ಮೂರ್ತಿ, ಎರಡು ವರದ ಹಸ್ತ, ಇನ್ನೆರಡು ಶರಣಾಗತಿಯಾಗಿರಬೇಕು ಎಂಬುದನ್ನು ತೋರಿಸುತ್ತದೆ ಎನ್ನುವುದು ಪ್ರತೀತಿ.

ಪುರಾಣದ ಪ್ರಕಾರ, ಈಶ್ವರನನ್ನು ಪೂಜೆಸಿ ವರ ಪಡೆದ ಕುಂಭಾಸುರ ಎಂಬ ರಾಕ್ಷಸನ ಉಪಟಳ ಕ್ಷೇತ್ರದಲ್ಲಿ ಎಲ್ಲೆ ಮೀರಿರುತ್ತದೆ. ಆ ವೇಳೆ, ತೀರ್ಥಯಾತ್ರೆಯಲ್ಲಿದ್ದ ಪಾಂಡವರು ತುಂಗಭದ್ರಾ ತೀರದಲ್ಲಿರುತ್ತಾರೆ. ಅಲ್ಲಿಗೆ ಬರುವ ಗೌತಮ ಮುನಿಗಳು ಕುಂಭಾಸುರ ನೀಡುತ್ತಿರುವ ತೊಂದರೆಯ ಬಗ್ಗೆ ಪಾಂಡವರಿಗೆ ವಿವರಿಸುತ್ತಾರೆ.

ಅದೇ ವೇಳೆ, ಕ್ಷೇತ್ರದಲ್ಲಿ ತೀವ್ರ ಬರಗಾಲ ಎದುರಾದಾಗ, ಅಗಸ್ತ್ಯ ಮುನಿಗಳು ವರುಣನ ಮನವೂಲಿಸಲು ಯಾಗವೊಂದನ್ನು ನೆರವೇರಿಸುತ್ತಾರೆ. ಈ ಯಾಗವನ್ನು ಭಂಗಗೊಳಿಸಲು ಕುಂಭಾಸುರನೆಂಬ ರಾಕ್ಷಸನು ಮುನಿಗಳಿಗೆ ಉಪಟಳ ನೀಡಲಾರಂಭಿಸುತ್ತಾನೆ. ಸಹೋದರನ ಅಣತಿಯಂತೆ, ಋಷಿಗಳನ್ನು ಕಾಪಾಡಲು ಭೀಮನು ಗಣೇಶನಿಂದ ವರವಾಗಿ ಪಡೆದ ಗದೆಯಿಂದ ಕುಂಭಾಸುರನನ್ನು ಕೊಲ್ಲುತ್ತಾನೆ. ಹಾಗಾಗಿ, ಈ ಕ್ಷೇತ್ರಕ್ಕೆ ಕುಂಭಾಸಿ ಎನ್ನುವ ಹೆಸರು ಬಂದಿದೆ.

ಕ್ಷೇತ್ರದಲ್ಲಿ ನಡೆಯುವ ಮೂಡ ಗಣಪತಿ ಸೇವೆ, ರಂಗಪೂಜೆ ಹೆಸರುವಾಸಿ. ದೇವಾಲಯದ ವಿಳಾಸ - ಆನೆಗುಡ್ಡೆ ವಿನಾಯಕ ದೇವಸ್ಥಾನ ಕುಂಭಾಶಿ, ಕುಂದಾಪುರ ತಾ, ಉಡುಪಿ ಜಿಲ್ಲೆ - 576257. ದೂ. 08254-261079.

ಅದ್ದೂರಿ ಸ್ವರ್ಣಗೌರಿ ವ್ರತಕ್ಕೆ 16 ಸಲಹೆ: ಚಿತ್ರಮಾಹಿತಿ

ಶರವು ಮಹಾಗಣಪತಿ ದೇವಾಲಯ

ಶರವು ಮಹಾಗಣಪತಿ ದೇವಾಲಯ

ಶರವು ಮಹಾಗಣಪತಿ ದೇವಾಲಯ, ಮಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ ಐತಿಹಾಸಿಕ ದೇವಾಲಯ. ಕ್ಷೇತ್ರದ ಇತಿಹಾಸದ ಪ್ರಕಾರ, ಸುಮಾರು ಎಂಟು ಶತಮಾನಗಳ ಹಿಂದೆ, ಇಲ್ಲಿನ ತುಳುನಾಡ ಅರಸ ವೀರಬಾಹು, ಕಾಡುಪ್ರಾಣಿಗಳಿಂದ ಹಾನಿಗೊಳಗಾಗುತ್ತಿದ್ದ ಬೆಳೆಗಳನ್ನು ರಕ್ಷಿಸಲು ಬೇಟೆಗೆ ತೆರಳುತ್ತಾನೆ. ಬೇಟೆಯಾಡುತ್ತಾ, ಸ್ವರ್ಣ ಕದಲಿ ಎನ್ನುವ ದಟ್ಟಾರಣ್ಯದತ್ತ ಸಾಗುತ್ತಾನೆ. ಅಲ್ಲಿ ಹುಲಿ ಮತ್ತು ಹಸುವನ್ನು ಕಂಡಾಗ, ಹುಲಿಯು ಹಸುವನ್ನು ಬೇಟೆಯಾಡಲು ಸಜ್ಜಾಗುತ್ತಿದೆ ಎಂದು ತಪ್ಪಾಗಿ ಅರ್ಥೈಸಿ ಹುಲಿಯನ್ನು ಕೊಲ್ಲಲು ಬಾಣ ಹೂಡುತ್ತಾನೆ.

ಆದರೆ, ಆ ಬಾಣ ಹುಲಿಗೆ ತಾಗದೆ, ಹಸುವಿಗೆ ತಾಗಿ ಅದು ಅಲ್ಲೇ ಅಸುನೀಗುತ್ತದೆ. ಗೋಹತ್ಯೆ ಮಾಡಿದ್ದೇನೆಂದು ಪಶ್ಚಾತ್ತಾಪ ಪಡುತ್ತಾ, ಭಾರದ್ವಾಜ ಮುನಿಗಳ ಬಳಿ ಬಂದಾಗ, ಹಸು ಪ್ರಾಣಬಿಟ್ಟ ಜಾಗದಲ್ಲಿ ಶಿವಲಿಂಗವನ್ನು ಮುನಿಗಳೇ ಪ್ರತಿಷ್ಟಾಪಿಸುತ್ತಾರೆ. ನಂತರ, ಶಿವಲಿಂಗಕ್ಕೆ ಗಂಗಾಭಿಷೇಕ ಮಾಡಲು ಗಂಗೆಯ ನೀರನ್ನು ತರುವಂತೆ ಸೂಚಿಸುತ್ತಾರೆ. ಮುನಿಗಳ ಅಣತಿಯಂತೆ, ವಾರಣಾಸಿಗೆ ರಾಜ ತೆರಳಿದಾಗ, ಗಣಪತಿ ಇಲ್ಲಿಗೆ ಬಂದು ದಕ್ಷಿಣದ ಭಾಗದಲ್ಲಿ ಬಂದು ನೆಲೆಸುತ್ತಾನೆ.

ಶರದಿಂದ (ಬಾಣ) ಗೋವನ್ನು ಹತ್ಯೆ ಮಾಡಿದ ಪಶ್ಚಾತ್ತಾಪಕ್ಕಾಗಿ ದೇವಾಲಯ ನಿರ್ಮಾಣವಾಗಿರುವುದರಿಂದ ಕ್ಷೇತ್ರಕ್ಕೆ ಶರವು ಎನ್ನುವ ಹೆಸರು ಬಂದಿದೆ. ಕ್ಷೇತ್ರದಲ್ಲಿ ಪಂಚಕಜ್ಜಾಯ ಸೇವೆ, ಒಂದು ತೆಂಗಿನಕಾಯಿ ಗಣಹೋಮ ಹೆಸರುವಾಸಿ. ವಿಳಾಸ - ಶರವು ಮಹಾಗಣಪತಿ ದೇವಾಲಯ, ಮಂಗಳೂರು - 575001. ದೂ. 0824- 2440328.

ಇಡಗುಂಜಿ ಮಹಾಗಣಪತಿ

ಇಡಗುಂಜಿ ಮಹಾಗಣಪತಿ

ಪುರಾಣ ಪ್ರಸಿದ್ದ ಇಡಗುಂಜಿ ಮಹಾಗಣಪತಿ, ಉತ್ತರಕನ್ನಡ ಜಿಲ್ಲೆ, ಹೊನ್ನಾವರ ತಾಲೂಕಿನಲ್ಲಿದೆ. ದ್ವಿಭುಜ ಭಂಗಿಯಲ್ಲಿ ನಿಂತಿರುವ ಗಣೇಶನ ಮೂರ್ತಿಯ ಬಲ ಕೈಯಲ್ಲಿ ಕಮಲದ ಹೂ ಮತ್ತು ಎಡ ಕೈಯಲ್ಲಿ ಮೋದಕವನ್ನು ಹೊಂದಿದೆ. ಸುಮಾರು 1,500 ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಈ ದೇವಾಲಯ, ಹೊನ್ನಾವರದಿಂದ ಏಳು ಕಿ.ಮೀ ದೂರದಲ್ಲಿದೆ.

ಕ್ಷೇತ್ರದ ಇತಿಹಾಸ: ಕಲಿಯುಗ ಆರಂಭವಾಗುವ ಮೊದಲು, ಈ ಯುಗದಲ್ಲಿ ಬರಬಹುದಾದ ಎಲ್ಲಾ ಅಡ್ಡಿಗಳನ್ನು ಜಯಿಸಲು ಶ್ರೀಕೃಷ್ಣನ ಸಹಾಯವನ್ನು ಕೋರಿ ಮುನಿಗಳು ಪ್ರಾರ್ಥನೆಗಳನ್ನು ಮಾಡಲಾರಂಭಿಸಿದರು. ಋಷಿಗಳು ಶರಾವತಿ ನದೀ ತೀರದಲ್ಲಿ ತಪಸ್ಸನ್ನು ಮಾಡುತ್ತಿದ್ದಾಗ ಹಲವು ಅಡಚಣೆಗಳನ್ನು ಎದುರಿಸಬೇಕಾಯಿತು. ಆಗ ಋಷಿಗಳು ನಾರದರ ಸಹಾಯವನ್ನು ಕೋರಿದರು.

ಆಗ, ಗಣೇಶನ ಆಶೀರ್ವಾದ ಮುಖ್ಯ ಎಂದು ಗಣೇಶನನ್ನು ಕಳುಹಿಸಿಕೊಡಲು ಪಾರ್ವತಿಯನ್ನು ವಿನಂತಿಸಿದರು. ಋಷಿಗಳು ಪ್ರಾರ್ಥನೆಗೆ ಮೆಚ್ಚಿದ ಗಣೇಶ, ಈ ಸ್ಥಳದಲ್ಲೇ ಉಳಿಸಲು ಸಮ್ಮತಿಸಿದನು. ದೇವಾಲಯಕ್ಕೆ ನೀರನ್ನು ತರಲು ಇನ್ನೊಂದು ಸರೋವರವನ್ನು ಸೃಷ್ಟಿಸಿ ಅದಕ್ಕೆ ಗಣೇಶ-ತೀರ್ಥ ಎಂದು ಹೆಸರಿಸಲಾಯಿತು. ಇದೇ ಸ್ಥಳವನ್ನು ಈಗ ಇಡುಗುಂಜಿ ಎಂದು ಕರೆಯಲಾಗುತ್ತದೆ.

ದೇವಸ್ಥಾನದಲ್ಲಿ ತುಲಾಭಾರ, ರಂಗಪೂಜೆ ಸೇವೆ ವಿಶೇಷ. ವಿಳಾಸ: ವಿನಾಯಕ ದೇವರು, ಮೇಲಿನ ದೇವರು ಇಡಗುಂಜಿ ಪೋಸ್ಟ್, ಹೊನ್ನಾವರ ತಾ. ಉ.ಕನ್ನಡ ಜಿಲ್ಲೆ - 581423. ದೂ. 08387-247227

ಸೌತಡ್ಕ ಮಹಾಗಣಪತಿ ದೇವಾಲಯ

ಸೌತಡ್ಕ ಮಹಾಗಣಪತಿ ದೇವಾಲಯ

ಸೌತಡ್ಕ ಮಹಾಗಣಪತಿ ದೇವಾಲಯ, ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಇಲ್ಲಿನ ಗಣೇಶನಿಗೆ ಗರ್ಭಗುಡಿಯಿಲ್ಲ. ಕ್ಷೇತ್ರದ ಇತಿಹಾಸ; ಸುಮಾರು 8೦೦ ವರ್ಷಗಳ ಹಿಂದೆ ಈ ಪ್ರದೇಶದ ಸಮೀಪದಲ್ಲಿ ರಾಜವಂಶಕ್ಕೊಳಪಟ್ಟ ದೇವಾಲಯವು ಯುದ್ದವೊಂದರಲ್ಲಿ ನಾಶವಾಗಿ ದೇವಾಲಯ ಧ್ವಂಸವಾಗಿತ್ತು. ಈ ದೇವಾಲಯದಲ್ಲಿ ಪೂಜಿಸಲಾಗುತ್ತಿದ್ದ ಈ ಗಣಪತಿ ವಿಗ್ರಹವು ದನಗಳನ್ನು ಕಾಯುತ್ತಿದ್ದ ಗೋಪಾಲ ಬಾಲಕರಿಗೆ ಗೋಚರವಾಯಿತು.

ಈ ಬಾಲಕರೆಲ್ಲರೂ ಸೇರಿಕೊಂಡು ಗಣಪತಿ ವಿಗ್ರಹವನ್ನು ಎತ್ತಿಕೊಂಡು ದಾರಿಯುದ್ದಕ್ಕೂ ಭಜನೆ ಪೂಜೆಗಳನ್ನು ಮಾಡುತ್ತಾ ಈಗ ಇರುವ ಮರದ ಬುಡದಲ್ಲಿ ಕಟ್ಟೆ ಕಟ್ಟಿ, ತಾವು ಬೆಳೆಯುತ್ತಿರುವ ಸೌತೆ ಮಿಡಿಗಳನ್ನು ಪ್ರತಿ ದಿನ ನೈವೇದ್ಯವನ್ನಾಗಿ ಅರ್ಪಿಸಿ ಭಜನೆ ಪೂಜೆಗಳನ್ನು ಮಾಡತೊಡಗಿದರು. ಅಂದಿನಿಂದ ಈ ಕ್ಷೇತ್ರಕ್ಕೆ ಸೌತಡ್ಕ ಎಂದು ಹೆಸರು ಬಂತು. (ಸೌತೆ + ಅಡ್ಕ : ಅಡ್ಕ ಎಂದರೆ ಬಯಲು ಎಂದರ್ಥ)

ಈ ಕ್ಷೇತ್ರದಲ್ಲಿ ಮೂಡಪ್ಪ ಸೇವೆ, ಮಹಾರಂಗ ಪೂಜೆ ಸೇವೆ ವಿಶೇಷ. ವಿಳಾಸ: ಶ್ರೀ ಮಹಾಗಣಪತಿ ದೇವಾಸ್ಥಾನ, ಸೌತಡ್ಕ, ಕೊಕ್ಕಡ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ-574 198. ದೂ. 08251 - 202161

ಗೋಕರ್ಣ ಮಹಾಗಣಪತಿ ದೇವಾಲಯ

ಗೋಕರ್ಣ ಮಹಾಗಣಪತಿ ದೇವಾಲಯ

ಗೋಕರ್ಣ ಮಹಾಗಣಪತಿ ದೇವಾಲಯ, ಕುಮಟ ತಾಲೂಕು, ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಗೋಕರ್ಣ ಮಹಾಬಲೇಶ್ವರ ದೇವಾಲಯದ ಆವರಣದಲ್ಲೇ ಇರುವ ಗಣೇಶನಿಗೆ ಇಲ್ಲಿ ಪ್ರಥಮ ಪೂಜೆ. ಇಡಗುಂಜಿಯ ನಂತರ, ನಿಂತ ಭಂಗಿಯಲ್ಲಿರುವ ದ್ವಿಬಾಹು ಗಣಪತಿ ದೇವಸ್ಥಾನ ಇರುವುದು ಇಲ್ಲಿ ಮಾತ್ರ.

ಕ್ಷೇತ್ರ ಪುರಾಣದ ಪ್ರಕಾರ, ರಾಕ್ಷಸರ ರಾಜನಾದ ರಾವಣನನ್ನು ವಂಚಿಸಿ ಆತ್ಮಲಿಂಗವನ್ನು ಅವನಿಂದ ದೂರ ಮಾಡಿ ಯಶಸ್ವಿಯಾದ ಗಣಪತಿಯ ಸ್ಮರಣೆಗಾಗಿ ಈ ದೇವಾಲಯವನ್ನು ನಿರ್ಮಿಸಲಾಯಿತು. ಸ್ಥಳೀಯರ ನಂಬಿಕೆಯ ಪ್ರಕಾರ, ಭಕ್ತರು ಮಹಾಬಲೇಶ್ವರ ದೇವಸ್ಥಾನಕ್ಕೆ ಹೋಗುವ ಮೊದಲು ಮಹಾ ಗಣಪತಿ ದೇವಸ್ಥಾನ ಭೇಟಿ ನೀಡಬೇಕು. ಈ ದೇವಸ್ಥಾನ ತನ್ನ 1.3 ಮೀಟರ್ ಎತ್ತರದ ಗಣೇಶನ ಕಪ್ಪು ಕಲ್ಲಿನ ವಿಗ್ರಹದಿಂದ ಪ್ರವಾಸಿಗರಲ್ಲಿ ಪ್ರಖ್ಯಾತಿ ಹೊಂದಿದೆ.

ಈ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ, ಸುವರ್ಣ, ರಜತ ನಾಗಾಭರಣ ಸೇವೆ ವಿಶೇಷ. ವಿಳಾಸ: ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವ , ಶ್ರೀ ಕ್ಷೇತ್ರ ಗೋಕರ್ಣ. ಅಂಚೆ ಗೋಕರ್ಣ , ಕುಮಟ ತಾಲೂಕು, ಉತ್ತರ ಕನ್ನಡ ಜಿಲ್ಲೆ - 581 326. ದೂ - 08386 - 257956, 257955.

ಹಟ್ಟಿಯಂಗಡಿ ಸಿದ್ದಿ ವಿನಾಯಕ ದೇವಸ್ಥಾನ

ಹಟ್ಟಿಯಂಗಡಿ ಸಿದ್ದಿ ವಿನಾಯಕ ದೇವಸ್ಥಾನ

ಹಟ್ಟಿಯಂಗಡಿ ಸಿದ್ದಿ ವಿನಾಯಕ ದೇವಸ್ಥಾನ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆಯಲ್ಲಿದೆ. ಇಲ್ಲಿನ 2.5ಮೀಟರು ಎತ್ತರದ ಸಾಲಿಗ್ರಾಮದಿಂದ ಮಾಡಲಾಗಿರುವ ದೇವರ ಮೂರ್ತಿಯು ಎಡಗಡೆಗೆ ವಾಲಿಕೊಂಡಿದೆ. ವಾರಾಹಿ ನದಿಯ ಸಮೀಪದಲ್ಲಿ ಈ ದೇವಸ್ಥಾನವಿದೆ.

ಕ್ಷೇತ್ರದ ಇತಿಹಾಸದ ಪ್ರಕಾರ, ಈ ಸಿದ್ದಿವಿನಾಯಕ ದೇವಸ್ಥಾನ 8ನೇ ಶತಮಾನದ್ದು. ಜಟೆಯನ್ನು ಹೊಂದಿರುವ ವಿನಾಯಕನ ಮೂರ್ತಿಯಿರುವುದು ಇಲ್ಲಿ ಮಾತ್ರ. ಭಕ್ತರಿಗೆ ಬೇಡಿದ್ದನ್ನು ಕರುಣಿಸುವವನು ಎಂಬುದರಿಂದಾಗಿ ಸಿದ್ಧಿ ಎಂಬ ಹೆಸರನ್ನು ಈ ವಿನಾಯಕನಿಗೆ ಇಡಲಾಗಿದೆ. ಹಟ್ಟಿಯಂಗಡಿಯು

ಕುಂದಾಪುರದಿಂದ ಸುಮಾರು 8 ಕಿ.ಮೀ ದೂರದಲ್ಲಿದೆ. (ಕುಂದಾಪುರ - ಕೊಲ್ಲೂರು ಮಾರ್ಗ)

ತುಳುನಾಡು ಆಳಿದ ಪ್ರಪ್ರಥಮ ರಾಜವಂಶದ ಆಳುಪ ರಾಜರ ಹೆಸರಿನಲ್ಲಿ 'ಪಟ್ಟಿ' ಪ್ರಮುಖವಾಗಿ ಕಾಣಿಸಿಕೊಂಡಿದೆ. ಪಟ್ಟಿ ಅಥವಾ ಹಟ್ಟಿ ಎಂದರೆ ಒಂದು ಕಿರುಗ್ರಾಮ, ಒಂದು ಗುಂಪಿನವರು ವಾಸಿಸುವ ಸ್ಥಳ, ಮನೆ, ಬೀಡು ಎಂಬಿತ್ಯಾದಿ ಅರ್ಥಗಳು ಇವೆ. ವಿಳಾಸ: ಶ್ರೀ ಸಿದ್ದಿವಿನಾಯಕ ದೇವಸ್ಥಾನ, ಹಟ್ಟಿಯಂಗಡಿ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ - 576283. ದೂ. 08254-264201.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Must visit Six famous Ganesha Temples in coastal part of Karnataka. These temples having hundred of years history and these temples include Anegudde, Sowthadka, Sharavu, Gokarna etc.,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more