ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣೇಶ ಚತುರ್ಥಿ ವಿಶೇಷ: ಗಜಮುಖನಿಗ್ಯಾಕೆ ಇಷ್ಟೊಂದು ಹೆಸರು?

By ಉಮಾದೇವಿ ಎ.ಸಿ
|
Google Oneindia Kannada News

Recommended Video

Ganesha Chaturthi 2018 : ಗಣೇಶನ 32 ಹೆಸರುಗಳುಬಗ್ಗೆ ನೀವು ತಿಳಿಯಲೇಬೇಕು

ಗಣಪತಿಯ ಹೆಸರು ಎರಡು ಶಬ್ದಗಳಿಂದ ಕೂಡಿದೆ. ಗಣ ಮತ್ತು ಪತಿ. ಇಲ್ಲಿ ಗಣವೆಂದರೆ 'ಇಂದ್ರಿಯಗಳ ಗುಂಪು' ಮತ್ತು ಪತಿ ಎಂದರೆ 'ಒಡೆಯ' ಎಂದರ್ಥ.

ಅಂದರೆ ಯಾವ ವ್ಯಕ್ತಿ/ಜ್ಞಾನಿಯು ತನ್ನ ಇಂದ್ರಿಯಗಳನ್ನು ನಿಯಂತ್ರಣವಿಟ್ಟುಕೊಂಡಿರುತ್ತಾನೆಯೋ ಅವನೇ ಗಣಪತಿ. ಗಣಪತಿಯು ಯಾವುದೇ ವ್ಯಕ್ತಿಯ ಸೂಚಕವಲ್ಲದೇ ಶಕ್ತಿಯ ಪ್ರತೀಕವಾಗಿದೆ, ಜ್ಞಾನವಂತ ಮನುಷ್ಯನ ಪ್ರತೀಕವಾಗಿದೆ. ಹಾಗಾಗಿ ಅವನು ಗುಣಗಳ ಸಾಂಕೇತಿಕ ದೇವತೆ ಆಗಿದ್ದಾನೆ. ಜ್ಞಾನಿಯಾಗಿರುವವನು ಸದಾ ನಿರ್ವಿಘ್ನನೂ ಆಗಿರುತ್ತಾನೆ. ಹಾಗಾಗಿ ಅವನಿಗೆ ವಿಘ್ನವಿನಾಶಕನೆಂದು ಕರೆಯಲಾಗುತ್ತದೆ. ಅವನ ಬುದ್ಧಿ-ಶಕ್ತಿ ಮತ್ತು ಯುಕ್ತಿಯ ಮುಂದೆ ಯಾವುದೇ ಸಮಸ್ಯೆಯಾಗಲಿ, ವಿಘ್ನವಾಗಲಿ ನಿಲ್ಲಲಾರದು.

ಗಜಮುಖ: ಆನೆಯನ್ನು ಬಹಳ ಬುದ್ಧಿವಂತ ಪ್ರಾಣಿ ಎಂದು ಹೇಳಲಾಗುತ್ತದೆ. ಅದರ ತಲೆಯು ವಿಶಾಲವಾಗಿರುತ್ತದೆ. ಅಂದರೆ ಆನೆಯ ಸ್ಮೃತಿಯು ಬಹಳ ಚೆನ್ನಾಗಿರುತ್ತದೆ ಎಂದು ಹೇಳಲಾಗುತ್ತದೆ. ಅದು ಸುತ್ತಮುತ್ತಲಿನ ವಾತಾವರಣವನ್ನು ಬಹುಬೇಗ ಗ್ರಹಿಸುತ್ತದೆ. ಆದ್ದರಿಂದ ಇಂಗ್ಲೀಷ್ ನಲ್ಲಿ ಈ ಗಾದೆ ಮಾತಿದೆ "As wise as an elephant" and "As faithful as an elephant" (ಆನೆಯಂತೆ ಬುದ್ಧಿವಂತರಾಗಿರಬೇಕು ಮತ್ತು ನಂಬಿಕಸ್ಥರಾಗಿರಬೇಕು). ಯಾವ ಮನುಷ್ಯನಿಗೆ ಆತ್ಮ ಮತ್ತು ಪರಮಾತ್ಮನ ಸ್ಪಷ್ಟ ಜ್ಞಾನವಿದೆಯೋ ಮತ್ತು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆಯೋ ಅವನನ್ನು 'ವಿಶಾಲಬುದ್ಧಿ' ಎಂದು ಕರೆಯುತ್ತಾರೆ. ಇಂತಹ ವಿಶಾಲಬುದ್ಧಿಯ ಮನುಷ್ಯನಲ್ಲಿ ಸದಾ ಕಾಲ ಪರಮಾತ್ಮನ ಸ್ಮೃತಿಯು ಇರುವ ಕಾರಣ ಮತ್ತು ನಿಶ್ಚಯ ಹಾಗೂ ಶ್ರದ್ಧೆ ಇರುವ ಕಾರಣ ಅವನಿಗೆ ಆನೆಯ ತಲೆಯನ್ನು ತೋರಿಸಿರುವುದು ಯುಕ್ತಿಯುಕ್ತವಾಗಿದೆ. ಸಾಮಾನ್ಯವಾಗಿ ಯಾವುದೇ ವ್ಯಕ್ತಿ ತನ್ನ ವ್ಯವಹಾರದಲ್ಲಿ ಬಹಳಷ್ಟು ನೆನಪಿಟ್ಟುಕೊಂಡರೆ ಅವನಿಗೆ ಜನರು 'ಇವನದು ಆನೆಯಂತಹ ತಲೆ' ಎಂದು ಹೇಳುತ್ತಾರೆ.

ಮೋದಕಪ್ರಿಯ ಗಣೇಶನ 32 ಹೆಸರುಗಳು: ಚಿತ್ರ ಮಾಹಿತಿಮೋದಕಪ್ರಿಯ ಗಣೇಶನ 32 ಹೆಸರುಗಳು: ಚಿತ್ರ ಮಾಹಿತಿ

ಆನೆಯ ಒಂದು ವಿಶೇಷತೆ ಈ ರೀತಿಯಾಗಿದೆ - ಅದು ಗಲ್ಲಿ-ಓಣಿ-ರಸ್ತೆ ಅಥವಾ ಮಾರುಕಟ್ಟೆಯನ್ನು ಹಾದು ಹೋಗುವಾಗ ಅನೇಕ ಮಂಗಗಳು ಅದನ್ನು ದಿಟ್ಟಿಸಿ ನೋಡಬಹುದು ಅಥವಾ ನಾಯಿಗಳು ಬೊಗಳಬಹುದು, ಆದರೆ ಅದು ಅವುಗಳಿಗೆ ತಲೆಕೆಡಿಸಿಕೊಳ್ಳದೇ ತನ್ನ ಖುಷಿಯಲ್ಲಿಯೇ ಇರುತ್ತದೆ. ತನ್ನ ಸೊಂಡಿಲನ್ನು ಮತ್ತು ಬಾಲವನ್ನು ಅಲುಗಾಡಿಸುತ್ತಾ ರಾಜನಡಿಗೆಯಲ್ಲಿ ಸಾಗುತ್ತದೆ. ಅದು ವ್ಯರ್ಥ ಮಾತುಗಳ ಕಡೆಗೆ ಗಮನನೀಡುವುದಿಲ್ಲ. ಕೀಳು ಮಾತುಗಳ ಬಗ್ಗೆ ಉತ್ತೇಜಿತಗೊಳ್ಳುವುದಿಲ್ಲ. ಅದು ಹಸು ಅಥವಾ ಮೇಕೆ/ಕುರಿಗಳಂತೆ ಓಡಿಹೋಗುವುದಿಲ್ಲ. ಆತ್ಮವಿಶ್ವಾಸದಿಂದ ತನ್ನ ಮಾರ್ಗದಲ್ಲಿ ಮುಂದೆ ಸಾಗುತ್ತದೆ. ಜ್ಞಾನಯುಕ್ತ ಮತ್ತು ಯೋಗಯುಕ್ತ ವ್ಯಕ್ತಿಯೂ ಸಹ ಇದೇ ರೀತಿ ಇರುತ್ತಾನೆ. ಹಾಗಾಗಿ ಇಲ್ಲಿ ಗಣಪತಿಗೆ ಆನೆಯ ತಲೆಯನ್ನು ತೋರಿಸಿರುವುದು ಉಪಯುಕ್ತವಾಗಿದೆ.

ಆನೆ-ಸೊಂಡಿಲು

ಆನೆ-ಸೊಂಡಿಲು

ಆನೆಯ ಸೊಂಡಿಲು ಬಹಳ ಶಕ್ತಿಶಾಲಿಯಾಗಿರುತ್ತದೆ. ಅದು ವೃಕ್ಷವನ್ನೂ ಸಹ ಕಿತ್ತೆಸೆಯಬಲ್ಲದು, ಸೊಂಡಿಲಿನಲ್ಲಿ ಸುತ್ತಿಕೊಂಡು ಮೇಲೆಕ್ಕೆ ಎಸೆಯಬಲ್ಲದು. ಅಂದರೆ ಅದು ಒಂದು ಬುಲ್ಡೋಜರ್ ಮತ್ತು ಕ್ರೇನ್ ಎರಡರ ಕೆಲಸವನ್ನೂ ತಾನೇ ಮಾಡುತ್ತದೆ. ಅದು ಸೊಂಡಿಲಿನಲ್ಲಿ ಮಕ್ಕಳಿಗೆ ನಮಸ್ಕಾರವೂ ಮಾಡಬಲ್ಲದು. ಅನೇಕರಿಗೆ ಪುಷ್ಪವನ್ನು ಅರ್ಪಿಸಬಲ್ಲದು ಅಥವಾ ನೀರಿನಿಂದ ಮೂರ್ತಿಯನ್ನು ಪೂಜಿಸಲೂಬಹುದು. ಸೊಂಡಿಲಿನಿಂದ ಆನೆಯು ಅತೀ ಸೂಕ್ಷ್ಮವಸ್ತುವಾದ ಸೂಜಿಯನ್ನು ಎತ್ತಬಲ್ಲದು. ಇದೇ ರೀತಿ ಜ್ಞಾನಿಯೂ ಸಹ ತನ್ನ ದುರಭ್ಯಾಸಗಳನ್ನು ಬೇರುಸಮೇತ ಕಿತ್ತುಹಾಕಬಲ್ಲನು ಮತ್ತು ಸೂಕ್ಷ್ಮ ವಿಷಯಗಳನ್ನೂ ಕೂಡ ಗ್ರಹಿಸಬಲ್ಲನು. ಅವನು ಅನೇಕರಿಗೆ ಗೌರವ, ಸ್ನೇಹ ಮತ್ತು ಆದರ ತೋರುವುದರಲ್ಲಿ ನಿಪುಣನಾಗಿರುತ್ತಾನೆ. ಹಳೆಯ ಸಂಸ್ಕಾರಗಳ ಬೇರುಗಳನ್ನು ಕಿತ್ತುಹಾಕಲು ಸೊಂಡಿಲಿನಂತಹ ಆಧ್ಯಾತ್ಮಿಕ ಶಕ್ತಿ ಬೇಕು. ಆದ್ದರಿಂದ ಆನೆಯ ಸೊಂಡಿಲೂ ಕೂಡ ಮನುಷ್ಯನ ಕೆಲವು ವಿಶೇಷಗಳನ್ನು ಸೂಚಿಸುತ್ತದೆ.

ಗಣೇಶನ ಮೂರ್ತಿಯನ್ನು ನೀರಲ್ಲಿ ಮುಳುಗಿಸೋದು ಯಾಕೆ ಗೊತ್ತಾ?ಗಣೇಶನ ಮೂರ್ತಿಯನ್ನು ನೀರಲ್ಲಿ ಮುಳುಗಿಸೋದು ಯಾಕೆ ಗೊತ್ತಾ?

ಆನೆಯ ಕಿವಿ

ಆನೆಯ ಕಿವಿ

ಆನೆಯ ಕಿವಿಗಳು ಬಹಳ ದೊಡ್ಡದಾಗಿರುತ್ತವೆ. ಕಿವಿಗಳು ಮುಖ್ಯ ಜ್ಞಾನೇಂದ್ರಿಯಗಳಾಗಿವೆ. ನಾವು ಯಾರಿಗಾದರೂ ಬಹುಮುಖ್ಯ ವಿಷಯಗಳನ್ನು ಹೇಳುವಾಗ 'ಕಿವಿ ತೆರೆದುಕೊಂಡು ಚೆನ್ನಾಗಿ ಕೇಳಿಸಿಕೊಳ್ಳಿ' ಎಂದು ಹೇಳುತ್ತೇವೆ. ಗುರುಗಳೂ ಸಹ ತಮ್ಮ ಶಿಷ್ಯಂದಿರಿಗೆ ಕಿವಿಗಳಲ್ಲಿಯೇ ಮಂತ್ರೋಚ್ಛಾರಣೆ ಮಾಡುತ್ತಾರೆ. ಅರ್ಜುನನೂ ಸಹ ಗೀತಾಜ್ಞಾನವನ್ನು ಕಿವಿಗಳಿಂದಲೇ ಕೇಳಿದ್ದನು. ಆದ್ದರಿಂದ ದೊಡ್ಡ-ದೊಡ್ಡ ಕಿವಿಗಳು ಜ್ಞಾನ-ಶ್ರವಣದ ಪ್ರತೀಕಗಳಾಗಿವೆ. ಗಮನಕೊಟ್ಟು ಆಸಕ್ತಿಯಿಂದ, ಜಿಜ್ಞಾಸೆಯಿಂದ, ಗ್ರಹಿಸುವ ಭಾವನೆಯಿಂದ ಸಂಪೂರ್ಣವಾಗಿ ಮನಸ್ಸನ್ನು ತೊಡಗಿಸಿಕೊಂಡು ಕೇಳಿಸಿಕೊಳ್ಳುವ ಪ್ರತೀಕವಾಗಿ ಕಿವಿಗಳಿವೆ. ಜ್ಞಾನದ ಸಾಧನೆಯಲ್ಲಿ ಶ್ರವಣ, ಮನನ ಮತ್ತು ಚಿಂತನೆಗೆ ವಿಶೇಷ ಸ್ಥಾನವಿದೆ. ಇವುಗಳಲ್ಲಿ ಪ್ರಥಮ ಸ್ಥಾನವನ್ನು ಶ್ರವಣಕ್ಕೆ ನೀಡಲಾಗಿದೆ. ಜ್ಞಾನಸಾಗರ ಪರಮಾತ್ಮನ ವಿಸ್ತøತ ಜ್ಞಾನವನ್ನು ಈ ಕಿವಿಗಳಿಂದಲೇ ಕೇಳುವುದು ವಿಶೇಷವಾಗಿದೆ.

ಪ್ರಥಮ ಪೂಜಿತಗೆ ಶರಣು, ಶ್ರದ್ಧೆಯ ಗಣೇಶೋತ್ಸವ ನಮ್ಮದಾಗಲಿಪ್ರಥಮ ಪೂಜಿತಗೆ ಶರಣು, ಶ್ರದ್ಧೆಯ ಗಣೇಶೋತ್ಸವ ನಮ್ಮದಾಗಲಿ

ಆನೆಯ ಕಣ್ಣುಗಳು

ಆನೆಯ ಕಣ್ಣುಗಳು

ಆನೆಗಳ ಕಣ್ಣುಗಳ ವಿಶೇಷತೆ ಏನೇಂದರೆ ಅದಕ್ಕೆ ಚಿಕ್ಕ ವಸ್ತವೂ ಸಹ ಬಹಳಷ್ಟು ದೊಡ್ಡದಾಗಿ ಕಂಡು ಬರುತ್ತದೆ. ಗೂಬೆಯ ಕಣ್ಣುಗಳು ಸೂರ್ಯನ ಕಿರಣಗಳಲ್ಲಿ ನೋಡಲಾರವು. ಆದ್ದರಿಂದ ಅದು ಕಣ್ಣನ್ನು ಮುಚ್ಚಿಕೊಳ್ಳುತ್ತದೆ. ಬೆಕ್ಕಿಗೆ ರಾತ್ರಿಯಲ್ಲಿಯೂ ನೋಡುವಂತಹ ಶಕ್ತಿ ಇದೆ. ಇದೇ ರೀತಿಯಲ್ಲಿ ಚಿಕ್ಕ ವಸ್ತುವೂ ಕೂಡ ಆನೆಯ ಕಣ್ಣುಗಳಿಗೆ ಬಹಳ ದೊಡ್ಡದಾಗಿ ಕಂಡು ಬರುತ್ತವೆ. ಅದಕ್ಕೆ ಚಿಕ್ಕದಾಗಿಯೇ ಕಂಡು ಬಂದಿದ್ದರೆ ಎಲ್ಲರನ್ನೂ ಅದು ಕಾಲಿನಲ್ಲಿ ಒಸಕಿಹಾಕುತ್ತಿತ್ತು. ಇದರ ಅರ್ಥವೇನೆಂದರೆ ಜ್ಞಾನಿಯು ಚಿಕ್ಕವರಲ್ಲಿಯೂ ದೊಡ್ಡತನವನ್ನು ನೋಡುತ್ತಾನೆ. ಹಾಗಾಗಿ ಸರ್ವರಿಗೂ ಗೌರವವನ್ನು ನೀಡುತ್ತಾನೆ. ಹಾಗಾಗಿ ಗಣಪತಿಯ ಕಣ್ಣುಗಳನ್ನು ಈ ರೀತಿ ತೋರಿಸಲಾಗಿದೆ.

ಗಜವದನ

ಗಜವದನ

ಆನೆಯ ಮುಖವು ಬಹಳ ಉದ್ದ ಮತ್ತು ಅಗಲವಾಗಿರುತ್ತದೆ. ಇದು ಪುಣ್ಯ ಕರ್ಮ ಮಾಡುವಂತಹ ವ್ಯಕ್ತಿಯ ಪ್ರತೀಕವಾಗಿದೆ. ಯಾವುದೇ ವ್ಯಕ್ತಿ ಪಾಪ ಕರ್ಮವನ್ನು ಮಾಡಿದಾಗ ಜನರು 'ಅವನ ಮುಖವೇ ಚಿಕ್ಕದಾಯಿತು ನೋಡಿ' ಎಂದು ಹೇಳುತ್ತಾರೆ. ಯಾರಾದರೂ ದುರ್ಬಲರಾದರೆ ಜನರು 'ಇವರ ಮುಖವೇ ಅರ್ಧದಷ್ಟು ಆಗಿದೆ' ಎಂದು ಹೇಳುತ್ತಾರೆ. ಈ ರೀತಿಯಾಗಿ ದೊಡ್ಡ ಮುಖವು ಒಳ್ಳೆಯ ಕರ್ಮಗಳ ಕಾರಣ ನಿರ್ಭಯತೆಯ ಮತ್ತು ಆತ್ಮಿಕ ಶಕ್ತಿಯ ಕಾರಣ ಸಾಮರ್ತ್ಯದ ಪ್ರತೀಕವಾಗಿದೆ.

ಏಕದಂತ

ಏಕದಂತ

ಆನೆಗೆ ಬಾಹ್ಯವಾಗಿ ಕಾಣುವ ದಂತಗಳು ತೋರಿಸಲು ಮಾತ್ರವಾಗಿವೆ. ಅದು ಆಹಾರವನ್ನು ಸೇವಿಸಲಿಕ್ಕೆ ಬೇರೆ ಹಲ್ಲುಗಳನ್ನು ಬಳಸಿಕೊಳ್ಳುತ್ತದೆ. ಈ ಜಗತ್ತಿನಲ್ಲಿ ಅನೇಕ ಜನರು ವಿಘ್ನಗಳನ್ನು ಉಂಟು ಮಾಡಿದಾಗ ಅದನ್ನು ನಾವು ಎದುರಿಸಲೇಬೇಕು. ಬಾಹ್ಯದಂತಗಳು ಕೂಡ ಸಬಲತೆಯ ಪ್ರತೀಕವಾಗಿವೆ. ನಮ್ಮ ಬಳಿ ಕಾರ್ಯವನ್ನು ಸುಗಮವಾಗಿ ಮಾಡಲು ಸಾಧನಗಳು ಮತ್ತು ಸಾಮಥ್ರ್ಯವಿದೆ. ಆದರೆ ಆತ್ಮ-ರಕ್ಷಣೆಗೆ ಯಾವುದೇ ಉಪಾಯವಿರುವುದಿಲ್ಲ. ಉಪಾಯಗಳಿದ್ದರೆ ಅಥವಾ ಅಸ್ತ್ರಶಸ್ತ್ರಗಳಿದ್ದರೆ ಜನರು ನಮ್ಮನ್ನು ಕೆಣಕಲು ಹಿಂಜರಿಯುತ್ತಾರೆ. ಈ ಏಕದಂತವು ಅನ್ಯರಿಗೆ ಹಾನಿಯನ್ನುಂಟು ಮಾಡಲು ಇಲ್ಲ, ಅನ್ಯರನ್ನು ಹೆದರಿಸಲು ಮಾತ್ರವಿರುವ ಒಂದು ಅಸ್ತ್ರವಷ್ಟೇ. ಇದೊಂದು ನೀತಿ ಮಾತ್ರವಾಗಿದೆ. ನೀತಿ-ನೈಪುಣ್ಯತೆಯೂ ಸಹ ಒಬ್ಬ ಕುಶಲ ವ್ಯಕ್ತಿಯ ವ್ಯಕ್ತಿತ್ವದ ಗುಣವಾಗಿದೆ. ನೀತಿಯೆಂದರೆ ಕುಟಿಲನೀತಿಯಲ್ಲ. ಮನಸ್ಸಿನಲ್ಲಿ ಅರಿವು, ಉಪಾಯ, ದೂರದರ್ಶಿತ್ವ ಮತ್ತು ಚತುರತೆ ಇರುವುದಾಗಿದೆ.

ಮಹೋದರ

ಮಹೋದರ

ಯಾವುದೇ ಒಬ್ಬ ವ್ಯಕ್ತಿ ಒಳ್ಳೆಯ ಮತ್ತು ಕೆಟ್ಟ ಎಲ್ಲಾ ಪರಿಸ್ಥಿತಿಗಳನ್ನು ತನ್ನಲ್ಲಿ ಜೀರ್ಣಿಸಿಕೊಂಡಾಗ ಆಡುಭಾಷೆಯಲ್ಲಿ 'ಆ ವ್ಯಕ್ತಿಯ ಹೊಟ್ಟೆ ದೊಡ್ಡದು' ಎಂದು ಹೇಳುತ್ತಾರೆ. ಅವರಿಗೆ ಯಾವ ವಿಚಾರವನ್ನು ಹೇಳಿದರೂ ಹೊರಗೆ ಹಾಕುವುದಿಲ್ಲ. ಹೊಟ್ಟೆಯು ಜೀರ್ಣಿಸಿಕೊಳ್ಳುವ ಕ್ರಿಯೆಯನ್ನು ಸೂಚಿಸುತ್ತದೆ. ಜ್ಞಾನಿಯ ಮುಂದೆ ನಿಂದನೆ-ಸ್ತುತಿ, ಜಯ-ಪರಾಜಯ, ಏರುಪೇರಿನ ಪರಿಸ್ಥಿತಿಗಳೂ ಬಂದರೂ ಅವನು ಅವುಗಳೆಲ್ಲವನ್ನೂ ತನ್ನೊಳಗೆ ಜೀರ್ಣಿಸಿಕೊಳ್ಳುತ್ತಾನೆ. ಯಾವುದೇ ಪರಿಸ್ಥಿತಿಯಲ್ಲಿಯೂ ಉಬ್ಬುವುದೂ ಇಲ್ಲ ಅಥವಾ ಕುಗ್ಗುವುದೂ ಇಲ್ಲ. ದೊಡ್ಡ ಹೊಟ್ಟೆಯು ಈ ಗುಣದ ಪ್ರತೀಕವಾಗಿದೆ.

ಒಂದು ಕೈಯಲ್ಲಿ ಕೊಡಲಿ:

ಒಂದು ಕೈಯಲ್ಲಿ ಕೊಡಲಿ:

ಗಣಪತಿಯ ನಾಲ್ಕು ಭುಜಗಳಲ್ಲಿ ಒಂದು ಭುಜದಲ್ಲಿ ಕೊಡಲಿಯನ್ನು ತೋರಿಸಲಾಗುತ್ತದೆ. ಕೊಡಲಿಯು ಕತ್ತರಿಸುವ ಸಾಧನವಾಗಿದೆ. ಜ್ಞಾನಿಯಲ್ಲಿ ಮೋಹ-ಮಮತೆಯ ಬಂಧನಗಳನ್ನು ಕತ್ತರಿಸುವ ಮತ್ತು ಹಳೆಯ ಸಂಸ್ಕಾರಗಳನ್ನು ಬೇರುಸಮೇತ ಕಿತ್ತುಹಾಕುವ ಸಾಮರ್ಥ್ಯವಿರುತ್ತದೆ. ಕೊಡಲಿಯು ಅದರ ಪ್ರತೀಕವೇ ಆಗಿದೆ. ಭಗವದ್ಗೀತೆಯಲ್ಲಿ ಜ್ಞಾನವನ್ನು ಹರಿತವಾದ ಖಡ್ಗವೆಂದು ಹೇಳಲಾಗಿದೆ. ಅದರಿಂದ ಕಾಮವೆಂಬ ಶತ್ರುವನ್ನು ಸಂಹಾರ ಮಾಡಲು ತಿಳಿಸಲಾಗಿದೆ. ಅಸುರಿ ಸಂಸ್ಕಾರಗಳನ್ನು ಹೊಡೆದೊಡಿಸಲು ಜ್ಞಾನವೆಂಬ ಕೊಡಲಿಯು ಯಾರ ಹತ್ತಿರವಿದೆಯೋ ಅವನೇ ಆಧ್ಯಾತ್ಮಿಕ ಯೋಧನಾಗಿದ್ದಾನೆ.

ಇನ್ನೊಂದು ಕೈಯಲ್ಲಿ ಹಗ್ಗ

ಇನ್ನೊಂದು ಕೈಯಲ್ಲಿ ಹಗ್ಗ

ಗಣಪತಿಯ ಇನ್ನೊಂದು ಕೈಯಲ್ಲಿ ಹಗ್ಗವನ್ನು ತೋರಿಸಲಾಗಿದೆ. 'ದೈಹಿಕ ಬಂಧನಗಳನ್ನು ಜ್ಞಾನವೆಂಬ ಕೊಡಲಿಯಿಂದ ಕತ್ತರಿಸಿಕೊಳ್ಳಬೇಕು, ಆದರೆ ಸ್ವತ: ತಮ್ಮನ್ನು ದಿವ್ಯ ನಿಯಮಗಳೆಂಬ ಬಂಧನದಲ್ಲಿ ಬಂಧಿಸಿಕೊಳ್ಳಬೇಕು ಎಂಬುದನ್ನು ಈ ಹಗ್ಗವು ಸೂಚಿಸುತ್ತದೆ. ಇದು ಶುಭ ಬಂಧನವಾಗಿದೆ, ಇದರಲ್ಲಿ ಮನುಷ್ಯನ ಸದ್ಗತಿಯೇ ಅಡಗಿದೆ. ವಾಸ್ತವವಾಗಿ ಇದು ಬಂಧನವಾಗದೇ ಸಂಬಂಧವಾಗಿದೆ. ಪರಮಾತ್ಮನೊಂದಿಗೆ ಸಂಬಂಧ ಜೋಡಿಸುವುದು ಪ್ರೇಮದ ಬಂಧನವಾಗಿದೆ. ಗಣಪತಿಯ ಕೈಯಲ್ಲಿರುವ ಹಗ್ಗವು ಪ್ರೇಮದ ಹಗ್ಗವಾಗಿದೆ ಅಥವಾ ಅದು ದಿವ್ಯನಿಯಮಗಳ ಶುದ್ಧ ಬಂಧನವಾಗಿದೆ. ಜ್ಞಾನಿಯು ಸ್ವತ: ತನ್ನನ್ನು ದಿವ್ಯನಿಯಮಗಳಲ್ಲಿ ಬಂಧಿಸಿಕೊಂಡು ಆಚರಣೆಯಲ್ಲಿ ತರದಿದ್ದರೆ ಅವನು ಉತ್ತಮ ಪುಸ್ತಕಗಳನ್ನು ಹೊತ್ತುಕೊಂಡಂತಹ ಕತ್ತೆಯಂತಾಗುತ್ತಾನೆ.

ಮೋದಲ ಪ್ರಿಯ

ಮೋದಲ ಪ್ರಿಯ

ಮೋದಕ ಶಬ್ದವು ಲಡ್ಡುವಿನ ವಾಚಕವೂ ಆಗಿದೆ. ಇದು ಖುಷಿಯನ್ನು ನೀಡುವಂತಹ ವಸ್ತುವಾಗಿದೆ. ಲಡ್ಡು ತಯಾರು ಮಾಡಲು ಕಡ್ಲೆಬೇಳೆಯನ್ನು ಚೆನ್ನಾಗಿ ಒಣಗಿಸಿ ಬೀಸಿ ಉರಿಯಬೇಕಾಗುತ್ತದೆ. ನಂತರ ಅದು ಒಂದು ಉತ್ತಮ ಪದಾರ್ಥವಾಗುತ್ತದೆ. ಇದೇ ರೀತಿಯಲ್ಲಿ ಜ್ಞಾನಿಯು ಅನೇಕ ಪರಿಸ್ಥಿತಿಗಳನ್ನು, ಸಂಕಟಗಳನ್ನು, ಸಮಸ್ಯೆಗಳನ್ನು ಇತ್ಯಾದಿಗಳನ್ನು ಹಾದು ಹೋಗಬೇಕಾಗುತ್ತದೆ. ಇನ್ನೊಂದು ಮಾತಿನಲ್ಲಿ ಹೇಳಬೇಕಾದರೆ 'ಅವನು ಚೆನ್ನಾಗಿ ತಪಸ್ಸು ಮಾಡಬೇಕಾಗುತ್ತದೆ, ಜೀವಂತವಾಗಿದ್ದೂ ಸಾಯಬೇಕಾಗುತ್ತದೆ.' ಇದರಿಂದ ಅವನಲ್ಲಿ ಆಧ್ಯಾತ್ಮಿಕ ಮಧುರತೆ ಮತ್ತು ಜ್ಞಾನದ ರಸವು ತುಂಬುತ್ತಾ ಹೋಗುತ್ತದೆ. ಆಗ ಅವನು ಸ್ವತ: ಸದಾ ಮುದಿತನಾಗಿರುತ್ತಾನೆ ಮತ್ತು ಅನ್ಯರನ್ನು ಸಹ ಮುದಿತರನ್ನಾಗಿ ಮಾಡುತ್ತಾನೆ. ಈ ರೀತಿಯಾಗಿ ಕೈಯಲ್ಲಿನ ಮೋದಕವು ಜ್ಞಾನ-ನಿಷ್ಠೆ, ಜ್ಞಾನ-ರಸದಿಂದ ತುಂಬಿಕೊಂಡಿರುವ ಸ್ಥಿತಿಯ ಪ್ರತೀಕವಾಗಿದೆ. ಮೋದಕವು ಜ್ಞಾನದಿಂದ ಪ್ರಾಪ್ತಿಯಾಗಿರುವ ಮುದಿತ ಸ್ಥಿತಿಯ ಪ್ರತೀಕವಾಗಿದೆ.

ಮೋದಕವು ಯಶಸ್ಸಿನ ಪ್ರತೀಕವೂ ಆಗಿದೆ. ಯಾರೇ ಆಗಲಿ ತಮ್ಮ ಮನೋಕಾಮನೆ ಪೂರ್ಣವಾದಾಗ ಅಥವಾ ಗುರಿಯನ್ನು ಮುಟ್ಟಿದಾಗ ಲಡ್ಡುವನ್ನು ಹಂಚುತ್ತಾರೆ. ಇದೇ ರೀತಿ ಜ್ಞಾನಿಯು ತನ್ನ ಬುದ್ಧಿ ಮತ್ತು ಸ್ಥಿತಿಯ ಬಲದಿಂದ ಕಾರ್ಯವನ್ನು ನಿರ್ವಿಘ್ನವನ್ನಾಗಿ ಮಾಡಿ ಯಶಸ್ಸಿನೆಡೆಗೆ ಕೊಂಡೊಯ್ಯುತ್ತಾನೆ. ಆದ್ದರಿಂದ ಅವನು ಸ್ವತ: ಖುಷಿಯಾಗಿರುತ್ತಾನೆ ಮತ್ತು ಅನ್ಯರಿಗೂ ಖುಷಿಯನ್ನು ಹಂಚುತ್ತಾನೆ.

ಸಂಕ್ಷಿಪ್ತವಾಗಿ ಹೇಳುವುದಾದರೆ 'ಮೋದಕ'ವು ಪರಿಶ್ರಮ, ತಪಸ್ಸು ಮತ್ತು ಬುದ್ಧಿಯ ಬಲದಿಂದ ಯಶಸ್ಸು ಮತ್ತು ಖುಷಿಯ ಪ್ರಾಪ್ತಿಯ ಸೂಚಕವಾಗಿದೆ. ಆದರೆ ಜ್ಞಾನಿಯು ಸ್ತುತಿ-ಮಹಿಮೆ, ಯಶಸ್ಸಿನಿಂದ ಪಡೆದುಕೊಳ್ಳುವ ಹಿರಿಮೆ-ಗರಿಮೆಯನ್ನು ಆಂತರಿಕವಾಗಿ ಸ್ವೀಕರಿಸುತ್ತಾ ಆ ರಸದಿಂದ ಮದೋನ್ಮತ್ತನಾಗುವುದಿಲ್ಲ.

ವರದ ಹಸ್ತ

ವರದ ಹಸ್ತ

ಗಣಪತಿಯ ಒಂದು ಕೈ ಸದಾ ವರದ ಮುದ್ರೆಯಲ್ಲಿ ಪ್ರದರ್ಶಿತವಾಗುತ್ತದೆ. ಏಕೆಂದರೆ ಜ್ಞಾನಿಯು ಈ ಮುಂಚೆ ಹೇಳಿದ ಎಲ್ಲಾ ವಿಷಯಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಅನ್ಯರಿಗೂ ಸಹ ನಿರ್ಭಯತೆ ಮತ್ತು ಶಾಂತಿಯ ವರದಾನಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಅವನು ತನ್ನ ಮನಸ್ಸಿನಿಂದ ಅನ್ಯರಿಗೆ ಆಶೀರ್ವಾದಗಳನ್ನು ಮಾತ್ರ ನೀಡುತ್ತಾನೆ. ಆದ್ದರಿಂದ ವರದ ಹಸ್ತವು ಜ್ಞಾನ-ನಿಷ್ಠ ಸ್ಥಿತಿಯ ಪರಾಕಾಷ್ಠತೆಯ ಪ್ರತೀಕವಾಗಿದೆ.

ಮೂಷಕ ವಾಹನ

ಮೂಷಕ ವಾಹನ

ಎಲ್ಲಾ ದೇವಿ-ದೇವತೆಗಳಿಗೆ ತನ್ನದೇ ಆದ ವಾಹನಗಳನ್ನು ತೋರಿಸಲಾಗಿದೆ. ಆದರೆ ಗಣಪತಿಗೆ ತೋರಿಸಿರುವ ಮೂಷಕ ವಾಹನವು ಗಣಪತಿಯ ಆಕಾರಕ್ಕೆ ತದ್ವಿರುದ್ಧವಾಗಿದೆ. ಗಣಪತಿಯ ದೇಹವನ್ನು ದೊಡ್ಡದಾಗಿ ತೋರಿಸಲಾಗುತ್ತದೆ. ಆದರೆ ಇಲಿಯನ್ನು ಚಿಕ್ಕದಾಗಿ ತೋರಿಸಲಾಗುತ್ತದೆ. ಇಲಿ ಒಂದೆಡೆ ಯಾವಾಗಲೂ ಶಾಂತವಾಗಿ ಕುಳಿತುಕೊಳ್ಳುವುದಿಲ್ಲ, ಅದನ್ನು ಚಂಚಲವಾಗಿ ತೋರಿಸಲಾಗುತ್ತದೆ. ವಾಸ್ತವಿಕವಾಗಿ ಇಲಿಯು ಮನಸ್ಸಿನ ಪ್ರತೀಕವಾಗಿದೆ. ಮನಸ್ಸನ್ನು ಚಂಚಲವೆಂದು ಹೇಳುತ್ತಾರೆ. ಜ್ಞಾನಿಯು ತನ್ನ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುತ್ತಾನೆ. ಗಣಪತಿಯು ಸಹ ತನ್ನ ಮನಸ್ಸು-ಬುದ್ಧಿಯ ಮೇಲೆ ನಿಯಂತ್ರಣ ಹೊಂದಿರುತ್ತಾನೆ ಎಂಬುದನ್ನು ತೋರಿಸಲು ಮೂಷಕ ವಾಹನನನ್ನು ತೋರಿಸಲಾಗಿದೆ.

ಈ ರೀತಿಯಾಗಿ ಮೇಲಿನ ಎಲ್ಲಾ ಪ್ರತೀಕಗಳ ಅರ್ಥವನ್ನು ಅರಿತು ಗಣೇಶ ಚತುರ್ಥಿಯನ್ನು ಆಚರಿಸಿದರೆ ಗಣೇಶನಲ್ಲಿರುವ ಗುಣ-ವಿಶೇಷತೆಗಳು ನಮ್ಮಲ್ಲಿಯೂ ಬಂದು ನಾವು ಕೂಡ ವಿಘ್ನವಿನಾಶಕರಾಗಿ ನಮ್ಮ ಮತ್ತು ಅನ್ಯರ ಜೀವನವನ್ನು ಸುಖಮಯ ಮಾಡಿಕೊಳ್ಳಬಹುದು.

(ಮೂಲ ಹಿಂದಿ ಲೇಖಕರು: ಬ್ರಹ್ಮಾಕುಮಾರ ಜಗದೀಶ್ ಚಂದ್ರ ಹಸೀಜ)

English summary
Ganesha Chaturthi special articles: Before every traditional rituals we worship lord Ganesha to remove all obstacles. And we give him many names which explains his glory. Here are few of them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X