ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಕ ಪ್ರಿಯನಿಗೆ ಮೋದಕದ ನೈವೇದ್ಯ

By Staff
|
Google Oneindia Kannada News

Mooshika vahana modaka hasta
ಭಾದ್ರಪದ ಶುಕ್ಲ ಚತುರ್ಥಿಯಂದು ವಿಘ್ನ ವಿನಾಯಕ ಗಣೇಶನಿಗೆ 21 ನಮಸ್ಕಾರ ಹಾಕಿ ಕುಚ್ಚಿದ ಕಡುಬು ಅನ್ನ ಪಾಯಸದ ನೈವೇದ್ಯ ತೋರಿಸಿ, ಮೋದಕದ ನೈವೇದ್ಯವಿಲ್ಲದೇ ಎಲ್ಲ ವಿಘ್ನಗಳನ್ನು ನಿವಾರಿಸಿ ಸಂಕಷ್ಟದಿಂದ ಪಾರು ಮಾಡಪ್ಪಾ ಅಂತ ಬೇಡಿಕೊಂಡರೆ ಗಣೇಶ ವರ ನೀಡುವಲ್ಲಿ ಜಿಪುಣತನ ತೋರಿಯಾನು. ಆದ್ದರಿಂದ ಕಷ್ಟವೆನಿಸಿದರೂ ಮೋದಕ ಪ್ರಿಯನಿಗೆ ಮೋದಕದ ನೈವೇದ್ಯ ತೋರಲು ಮರೆಯಬೇಡಿ.

* ನಿವೇದಿತಾ ಪ್ರಭಾಕರ್, ಬೆಂಗಳೂರು

ಬೆಲ್ಲ ಕಡಲೇಬೇಳೆ ಹೂರಣದ ಕಡುಬಿಗಿಂತ ರುಚಿರುಚಿಯಾದ ಬೆಲ್ಲ ಕೊಬ್ಬರಿ ಮೋದಕ ನಮ್ಮ ಗಣಪನಿಗೆ ಮಾತ್ರ ಪ್ರಿಯವಲ್ಲ, ಲಂಗ ದಾವಣಿ ತೊಟ್ಟು ಪುಟಪುಟನೆ ಓಡಾಡುವ ಪುಟಾಣಿ ಹೆಣ್ಮಕ್ಕಳು, ಮುದ್ದಾಗಿ ಮಡಿಯುಟ್ಟು ಬಾಲ ಗಣಪನಂತೆಯೇ ಕಾಣು ಚಿಣ್ಣಾರಿಗಳಿಗೂ ಮೋದಕ ಅತ್ಯಂತ ಪ್ರಿಯವಾದ ಖಾದ್ಯ. ಮಕ್ಕಳು ಮನಸೋ ಇಚ್ಛೆ ತಿಂದರೆ ಗಜಾನನನಿಗೂ ನೈವೇದ್ಯ ಸಂದಂತೆಯೇ. ಕ್ಯಾಸೆಟ್ಟಿನಲ್ಲಿ ಪೂಜಾರಿ ಹೇಳಿದ ಮಂತ್ರ ಕೇಳುತ್ತ ಗಣೇಶನ ಪೂಜೆ ಮುಗಿಸಿ ನೈವೇದ್ಯವಿಟ್ಟಾಗ ಮಕ್ಕಳು ಮೋದಕದ ಮೇಲೆ ಕಣ್ಣು ಕೈಹಾಕಿದರೆ ಬೈಯಬೇಡಿ, ಇಲ್ಲ ಅನ್ನಬೇಡಿ. ಮಕ್ಕಳು ತಿಂದರೆ ಲಂಬೋಧರನೇನೂ ಬೇಜಾರು ಮಾಡಿಕೊಳ್ಳುವುದಿಲ್ಲ. ಬಿಸಿಬಿಸಿ ತುಪ್ಪ ಅನ್ನ, ಕಟ್ಟಿನ ಸಾರು, ಕೋಸಂಬರಿ, ಕುಚ್ಚಿದ ಕಡುಬು, ಅಂಬೋಡೆ, ಪಾಯಸದ ಜೊತೆ ಮೋದಕ ಮೆಲ್ಲಿದಾಗಲೇ ಊಟ ಪೂರ್ತಿಯಾದಂತೆ.

ಬೇಕಾಗುವ ಪದಾರ್ಥಗಳು

ಗೋಧಿ ಹಿಟ್ಟು 2 ಬಟ್ಟಲು
ಮೈದಾ ಹಿಟ್ಟು 1 ಸ್ಪೂನಿನಷ್ಟು
ಬೆಲ್ಲ 1 ಬಟ್ಟಲು
ತುರಿದ ಕೊಬ್ಬರಿ 1 ಬಟ್ಟಲು
ಏಲಕ್ಕಿ ಪುಡಿ ಚಿಟಿಕೆಯಷ್ಟು
ತುಪ್ಪ ಅಥವಾ ಕುಕಿಂಗ್ ಮೀಡಿಯಂ

ಮಾಡುವ ವಿಧಾನ

ಮೊದಲಿಗೆ ಪುಡಿ ಮಾಡಿದ ಬೆಲ್ಲ ಮತ್ತು ತುರಿದ ಹಸಿ ಕೊಬ್ಬರಿಯನ್ನು ಒಟ್ಟಿಗೆ ಸೇರಿಸಿ ಬಾಣಲೆಯಲ್ಲಿ ಹಾಕಿ ಮಂದ ಉರಿಯಲ್ಲಿ ಬಿಸಿ ಮಾಡಬೇಕು. ಇದರಲ್ಲೇ ಏಲಕ್ಕಿ ಪುಡಿ ಹಾಕಿದರೆ ಉತ್ತಮ. ಸತತ ಕೈಯಾಡಿಸುತ್ತ ಬೆಲ್ಲ ಕಾದು ನೀರಾಗಿ ಬೆಲ್ಲ ಮತ್ತು ಕೊಬ್ಬರಿಯ ಹೂರಣ ತಾರಾಗುತ್ತದೆ. ಎರಡೂ ಸಮನಾಗಿ ಮಿಶ್ರಣವಾದನಂತರ ಸ್ಟೌ ಆರಿಸಿ ಕೆಳಗಿಳಿಸಿಕೊಳ್ಳಬೇಕು.

ನಂತರ ಗೋಧಿ ಹಿಟ್ಟನ್ನು ಮೈದಾ ಹಿಟ್ಟಿನ ಜೊತೆ ಸೇರಿಸಿ ಸ್ವಲ್ಪ ಗಟ್ಟಿಯಿರುವಂತೆ ತುಪ್ಪ ಮತ್ತು ನೀರಿನೊಡನೆ ನಾದಿಕೊಳ್ಳಬೇಕು. ಹುದು ಚಪಾತಿ ಹಿಟ್ಟಿನಷ್ಟು ಗಟ್ಟಿಯಾಗಿರಬೇಕು. ಆಗಲೇ ಹುದುವನ್ನು ಹಿಟ್ಟು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ.

ಈಗ, ಹಿಟ್ಟನ್ನು ಕೈಯಲ್ಲಿ ಒಂದು ಉಂಡೆಯಷ್ಟು ತೆಗೆದುಕೊಂಡು ಪೂರಿಯ ಗಾತ್ರದಲ್ಲಿ ತಟ್ಟಿ ಅದರಲ್ಲಿ ಬೆಲ್ಲ ಕೊಬ್ಬರಿ ಹೂರಣವನ್ನು ತುಂಬಿ ಬೆಳ್ಳುಳ್ಳಿ ಕಾಣುವಂತೆ ಮೇಲ್ತುದಿಯನ್ನು ಮುಚ್ಚಬೇಕು. ಇದನ್ನು ಬೆಲ್ಲ ಕೊಬ್ಬರಿ ಹೋಳಿಗೆಯ ಹಾಗೆ ತಟ್ಟುವ ಅಗತ್ಯವಿಲ್ಲ. ಮೋದಕ ವಿಪರೀತ ಸಿಹಿಯಾಗದಂತೆ ಮತ್ತು ಮುಚ್ಚಿದಾಗ ಹಿಟ್ಟು ಹರಿಯದಂತೆ ಮಾಡಲು ಹೂರಣ ಸ್ವಲ್ಪ ಕಡಿಮೆ ಹಾಕುವುದು ಒಳಿತು.

ಒಂದೆಡೆ ಎಂಟ್ಹತ್ತು ಮೋದಕಗಳನ್ನು ರೆಡಿಯಾಗಿಟ್ಟುಕೊಂಡು ರಿಫೈನ್ಡ್ ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಕರಿಯಿರಿ. ಬಿಸಿಬಿಸಿ ತಿನ್ನುವಾಗ ಹುಷಾರಾಗಿರಿ ಬಾಯಿ ಸುಟ್ಟುಹೋದೀತು.

ನೆನಪಿನಲ್ಲಿಡಿ : ಊಟ ಮಾಡುವಾಗ ಮೊದಲಿಗೆ ತಿನ್ನುವ ಅನ್ನ ಸಾರನ್ನು ಸ್ವಲ್ಪ ಕಡಿಮೆ ತಿನ್ನಿರಿ. ಹೆಚ್ಚು ಕಡುಬು, ಮೋದಕಗಳನ್ನು ಹೊಟ್ಟೆಗಿಳಿಸಿ. ಊಟ ಉಬ್ಬರವಾಗಿ ಹೊಟ್ಟೆ ನಿಬ್ಬರಾದರೆ ಊಟವಾದನಂತರ ಎಲೆ ಅಡಿಕೆ ಹಾಕಿದರೆ ತಿಂದ ಊಟ ಸರಿಯಾಗಿ ಜೀರ್ಣವಾಗುತ್ತದೆ. ಇನ್ನೊಂದು ಮಾತು, ಮೋದಕಗಳನ್ನು ಮೆದ್ದು ಸಂಜೆ ಮೋಡದಲ್ಲಿ ಇಣುಕುವ ಚಂದಿರನನ್ನೂ ನೋಡೀರಿ ಜೋಕೆ. ಯಾವುದೋ ಅಪವಾದ ನಿಮಗೆ ತಟ್ಟೀತು. ನೋಡಿದರೂ ಪರವಾಗಿಲ್ಲ ಶ್ಯಮಂತಕ ಮಣಿ ಕದ್ದ ಅಪವಾದ ಹೊತ್ತ ಕೃಷ್ಣನ ಕಥೆ ಕೇಳಿ ಅಪವಾದ ಪರಿಹರಿಸಿಕೊಳ್ಳಿರಿ. ಗಜಾನನ ನಿಮಗೆಲ್ಲ ಒಳ್ಳೆಯದು ಮಾಡಲಿ. ಹ್ಯಾಪಿ ಗಣೇಶ ಚತುರ್ಥಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X