ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂತಾಯಿಯ ಒಕ್ಕಲುಮಗ ಗಣಪ್ಪ

By Staff
|
Google Oneindia Kannada News

Ganesha
ಗಣೇಶನ ಬಯೋಡೇಟಾ ತುಂಬಾ ದೊಡ್ಡದು. ಅವನು ತನ್ನ ವೃತ್ತಿ ಜೀವನದಲ್ಲಿ ನಾನಾ ಬಗೆಯ ಸಾಹಸಗಳನ್ನು ಮಾಡಿದ್ದರೂ ಮೂಲತಃ ಆತ ಮಣ್ಣಿನ ಮಗನೆ, ನೇಗಿಲಯೋಗಿಯೇ. ಉಚಿತ ಕರೆಂಟು ಕೇಳದ, ರಸಗೊಬ್ಬರ ಬಯಸದ, ಸಾಲಬಾಧೆಯ ಬಲೆಯೊಳಗೆ ಸಿಲುಕದ ಸಹಜ ಕೃಷಿಕ. ಆತನ ಪೂರ್ವಾಪರಗಳನ್ನು ಉಲ್ಲೇಖಿಸುವ ಉತ್ತರ ಕರ್ನಾಟಕದ ಜಾನಪದ ಕಥಾಕಣಜದಿಂದ ಆಯ್ದ ಒಂದು ಪ್ರಸಂಗ, ನಿಮಗಾಗಿ.

ಲೇಖನ : ಚಂದ್ರೇಗೌಡ ಕುಲಕರ್ಣಿ, ತಾಳಿಕೋಟೆ

ನಮ್ಮ ಸಂಸ್ಕೃತಿಯಲ್ಲಿಯ ಅನೇಕ ಆಚರಣೆಗಳು ನಮ್ಮ ಪಾರಂಪರಿಕ ಬದುಕಿನ ಕಾಲಘಟ್ಟದ ಅನೇಕ ಸಂಗತಿಗಳನ್ನು ರೂಪಕ, ಸಂಕೇತಗಳ ಮೂಲಕ ತಲೆಮಾರಿನಿಂದ ತಲೆಮಾರಿಗೆ ಹೊತ್ತು ತಂದಿವೆ. ಅಂತಹ ರೂಪಕವಾಗಿ ಕಾಲ ಕಾಲಕ್ಕೆ ಹೊಸ ಅರ್ಥ ಪಡೆಯುತ್ತ ಬಂದಿರುವ ಜೀವಂತ ಆಚರಣೆಯೇ ಚವತಿಯ ಗಣಪ್ಪ.

ಗಣಪ್ಪ ಗೌರಿಯ ಮಗ. ಶಿವ ಪಶುಪಾಲಕ. ಮನುಷ್ಯ ಜೀವನದ ಕಾಲಘಟ್ಟಗಳಲ್ಲಿ ಮೊದಲ ಘಟ್ಟ ಸಾಕು ಪ್ರಾಣಿ ಕುರಿಯನ್ನು ಸಾಕಿದ್ದು. ಆ ಜೀವನದ ಪ್ರತಿನಿಧಿ, ಸಂಕೇತ - ದಕ್ಷಬ್ರಹ್ಮ. ಅನಂತರದಲ್ಲಿ ಬಂದದ್ದು ಪಶು ಸಾಕಾಣಿಕೆ. ಆ ಜೀವನದ ಪ್ರತಿನಿಧಿ ಮತ್ತು ಮುಖ್ಯಸ್ಥನೇ ಶಿವ. ಅಂತೆಯೇ ಶಿವನಿದ್ದಲ್ಲಿ ನಂದಿ ಇದ್ದೇ ಇರುವುದು, ಅಷ್ಟೇ ಅಲ್ಲ ಬಲಶಾಲಿಯಾದ ಶಿವ ಕುರಿಗಾಹಿ ದಕ್ಷಬ್ರಹ್ಮನನ್ನು ಹತ್ಯೆ ಮಾಡಿದ ಸಂಗತಿ ಆ ಎರಡು ಗುಂಪುಗಳಲ್ಲಿ ಸಂಘರ್ಷ ನಡೆಯುತ್ತಿತ್ತು ಎಂಬುದರ ಪ್ರತೀಕ.

ಈ ಎರಡು ಹಂತಗಳನ್ನು ದಾಟಿದ ಮನುಷ್ಯ ಅನಂತರ ನೆಲೆಮಾರಿಯಾದ. ಒಕ್ಕಲುತನದಿಂದ ನದಿ ದಡದಲ್ಲಿ ಬದುಕಲು ಕಲಿತ. ಇಂತಹ ಒಕ್ಕಲುಮಕ್ಕಳ ಪ್ರತಿನಿಧಿ ನಮ್ಮ ಗಣಪ್ಪ. ಈತ ಮೂಲತಃ ಕೃಷಿಕ. ಭೂಮಿತಾಯಿಯ ಮಗ. ಗಣಪನ ಮುಂದೆ ಚಟ್ಟು ಕಟ್ಟಿ ಅದರಲ್ಲಿ ಅನೇಕ ತರಹದ ಹಣ್ಣುಗಳನ್ನು ಜೋತುಬಿಡುವ ಪದ್ಧತಿ ಈಗಲೂ ಹಳ್ಳಿಯಲ್ಲಿ ಜೀವಂತವಾಗಿದೆ. ರೈತನ ವೈರಿಯಾದ ಇಲಿಯನ್ನು ವಾಹನ ಮಾಡಿಕೊಂಡು ಸವಾರಿ ಮಾಡುವುದು ಮತ್ತು ಹೊಲದ ಸಾರ - ಸತ್ವವನ್ನು ಹಾಳುಮಾಡುವ ಗರಕಿ ಅವನ ಪೂಜೆಗೆ ಬೇಕಾದ ವಸ್ತುವಾಗಿರುವುದು ಅವನು ಅಪ್ಪಟ ರೈತನಾಗಿದ್ದಕ್ಕೆ ಪುರಾವೆಯಾಗಿವೆ.

ಗಣಪ್ಪ ಗಣಪ್ಪ ಮೋರಯ್ಯ ಪುಂಡಿ ಪಲ್ಲೆ ಸೋರಯ್ಯ' ಎಂಬ ಈ ಹಾಡಲ್ಲೂ ಸಹ ರೈತನ ಮೂಲ ಬೆಳೆಗಳ ಪ್ರಸ್ತಾಪವಿದೆ. ಇಂತಹ ಕೃಷಿ ವಿಜ್ಞಾನಿಯಾದ ಗಣಪ ಗೋವುಗಳನ್ನು ಮತ್ತು ರೈತ ಬೆಳೆದ ವಸ್ತುಗಳನ್ನು ಹಾಳು ಮಾಡುವ ಯಜ್ಞದ ವಿರೋಧಿಯಾಗಿದ್ದ, ಯಜ್ಞಕ್ಕೆ ವಿಘ್ನಗಳನ್ನು ಒಡ್ಡುತ್ತಿದ್ದ. ಅಂತೆಯೇ ಅವನು ವಿಘ್ನಕಾರಕ, ವಿಘ್ನೇಶ್ವರ. ನೆನಪಿಡಿ ವಿಘ್ನನಾಶಕ ಅಲ್ಲ.

ಇಂತಹ ರೈತನ ಮಗನೇ ಕಾಲಾಂತರದಲ್ಲಿ ಶ್ರಮಜೀವನ ತೊರೆದು ಭೋಗ ಜೀವನಕ್ಕೆ ದಾಸಾನುದಾಸನಾದ. ಹೊಟ್ಟೆಬಾಕನಾದ. ಮನೆ ಮನೆ ತಿರುಗಿ ಬಾಯಿ ಚಪಲಕ್ಕೆ ತುತ್ತಾಗಿ ಶ್ರಮವನ್ನೇ ಮರೆತ. ಹರಿದ ಹೊಟ್ಟೆಯಿಂದ ಜಾರಿ ಬಿದ್ದ ಕಡಬುಗಳನ್ನು ಆಯ್ದು ತುಂಬಿಕೊಳ್ಳುವಷ್ಟು ಆಶೆಬುರುಕನಾದ. ಚಂದ್ರನ ಅಪಹಾಸ್ಯಕ್ಕೆ ಗುರಿಯಾದ. ರೈತರಿಗೆ ಕೈಕೊಟ್ಟದ್ದಕ್ಕೆ, ಆ ರೈತರ ಪ್ರತಿನಿಧಿ ಜೋಕುಮಾರನ ಕೈಗೆ ಸಿಗದಂತೆ (ಆನೆ)ಮುಖವಾಡ ಧರಿಸಿ ಓಡಾಡಿದ. ಮುಖ ತಪ್ಪಿಸಿದ. ಕಡೆಗೂ ಸಿಕ್ಕಾಗ ಅವನ ಸಿಟ್ಟಿಗೆ ಗುರಿಯಾಗಿ ಹೊಳೆಕಂಡ. ಗಣಪನಿಗೆ ಸವಿ ಸವಿ ಅಡಿಗೆ ಮಾಡಿಹಾಕಿ ಒಲೈಸಿದ ಮೇಲ್ವರ್ಗದ ಜನ ಜೋಕುಮಾರ ಹುಡುಕಲು ಬಂದಾಗ ಮನೆಯಲ್ಲಿ ಅಡಗಿಸಿಟ್ಟು ಇಲ್ಲ ಎಂದು ಸುಳ್ಳು ಹೇಳಿದರು. ಈಗಲೂ ಗಣಪ ಹೊಳೆಕಂಡ ಮರುದಿನ ಹುಟ್ಟುವ ಜೋಕುಮಾರ ಮನೆಗೆ ಬಂದಾಗ ಗಣಪನ ಮಾಡನ್ನು ಮುಚ್ಚುವ ಪದ್ಧತಿ ಇದೆ, ಉತ್ತರ ಕರ್ನಾಟಕದಲ್ಲಿ.

ಗಣಪ್ಪನ ಹುಟ್ಟಿನ ಸಂಗತಿ ಇನ್ನೊಂದು ನೆಲೆಯಲ್ಲಿ ಸೃಷ್ಟಿ ರಹಸ್ಯವನ್ನು ಸಂಕೇತಿಸುತ್ತದೆ ಎನಿಸುತ್ತದೆ. ಬೀಜ ಮೊದಲೋ ಗಿಡ ಮೊದಲೋ ? ಈ ಪ್ರಶ್ನೆಗೆ ಉತ್ತರ ಇಲ್ಲಿದೆಯೆನೊ. ಗೌರಿಯಲ್ಲಿ ಮೈಬೆವರಿನಿಂದ ಜನಿಸಿದ ಗಣಪ ಸ್ವೇದಜನಾಗಿದ್ದಾನೆ. (ಅಂಡಜ, ಪಿಂಡಜ... ..ನೆನಪಿಸಿಕೊಳ್ಳಿ) ಅಂದರೆ ಬೀಜಕ್ಕಿಂತ ಮೊದಲು ಈ ಜಗದಲ್ಲಿ ಸಸ್ಯ ಸಂಕುಲ ಹುಟ್ಟಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ಎನಿಸುತ್ತದೆ. ಭೂಮಿಯ ಯಾವುದೊ (ಈಗ ತದ್ರೂಪಿ ಸೃಷ್ಟಿ!) ಪ್ರಕ್ರಿಯೆಯಿಂದ ಮೊದಲ ಸಾರಿ ಸಸ್ಯ ಜನಿಸಿದೆ.(ಈ ಮಾತು ಎಲ್ಲ ಜೀವಿತ ವಸ್ತುಗಳಿಗೂ ಆನ್ವಯವಾಗುವದು.)

ಅನಂತರದ ಕಾಲದಲ್ಲಿ ಬೀಜದಿಂದ ಮತ್ತೆ ಸಸ್ಯ ಹುಟ್ಟುವ ಕ್ರಿಯೆ ಮುಂದುವರೆದಿದೆ. ಈ ಕಾಲಘಟ್ಟದ ಪ್ರತೀಕವೇ ಜೋಕುಮಾರ! ಏಕೆಂದರೆ ಜೋಕುಮಾರ ಬೀಜದ ಪ್ರತೀಕ. ಇಲ್ಲಿ ಇನ್ನೊಂದು ಸಂಗತಿಯನ್ನು ಮರೆಯದೇ ಗಮನಿಸಬೆಕು. ಅದೇನೆಂದರೆ ಹಡೆದ ತಾಯಿಯನ್ನೇ ಭೋಗಿಸಿದ ಜೋಕುಮಾರ ಎಂಬ ಮಾತು. ಇಲ್ಲಿ ವಾಚ್ಯಾರ್ಥವಿಲ್ಲ. ಧ್ವನ್ಯಾರ್ಥವಿದೆ. ಅಂದರೆ ತಾಯಿಯ ಉದರದಲ್ಲಿ ಜನಿಸಿದ ಬೀಜ ಮತ್ತೆ ತಾಯಿಯ ಗರ್ಭವನ್ನು ಪ್ರವೇಶಿಸುತ್ತದೆ. ತಾಯಿಯಲ್ಲಿ ಜನಿಸಿದ ಬೀಜವೇ ಮತ್ತೆ ತಾಯಿಯ ಗರ್ಭಕಟ್ಟುವುದಕ್ಕೆ, ಹೊಸ ಸಂತಾನಕ್ಕೆ ಕಾರಣವಾಗುತ್ತದೆ ಎಂಬ ತತ್ವವನ್ನು ಇಲ್ಲಿ ಅಡಗಿಸಿಡಲಾಗಿದೆ. ಇದು ನಮ್ಮ ಜನಪದರ ಜಾಣ್ಮೆಯಾಗಿದೆ.

ಹೀಗೆ ನಮ್ಮ ಜೀವನದ ನಾಲ್ಕು ನೆಲೆಗಳನ್ನು ದಕ್ಷಬ್ರಹ್ಮ, ಶಿವ, ಗಣಪ್ಪ ಮತ್ತು ಜೋಕುಮಾರ ಪ್ರತಿಬಿಂಬಿಸುತ್ತವೆ! ಈಗ ಬೀಜಕ್ಕೆ ಬಸಿರಿಲ್ಲದ (ಬೀಜಕ್ಕೆ ಬಸಿರಿಲ್ಲ ; ರೈತನಿಗೆ ಉಸಿರಿಲ್ಲ) ಹೈಬ್ರೀಡ್ ಯುಗದಲ್ಲಿ ನಾವಿದ್ದೇವೆ ಅಲ್ಲವೆ?

ಓದಿಗೆ ಮತ್ತು ತಿನಿಸಿಗೆ

ಮನುಜ ಮತಿ ಮತ್ತು ಗಣಪತಿ
ಗಣೇಶ ಬಂದ... ಎಷ್ಟೊಂದು ಕಡುಬು ತಂದ...
ಸಂಗೀತಪ್ರಿಯ, ನಾದಲೋಲ ನಮ್ಮ ಗಣೇಶ
ಕಲಾವಿದನ ಕುಂಚಕ್ಕೆ ಕುಣಿಯುವ ಕೈಗೊಂಬೆಯೋ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X