ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸ್ತ್ರೋಕ್ತವಾಗಿ ದೀಪಾವಳಿ ಹಬ್ಬ ಆಚರಿಸುವುದು ಹೇಗೆ?

By ವಿಷ್ಣುದಾಸ ನಾಗೇಂದ್ರಾಚಾರ್ಯ, ಮೈಸೂರು
|
Google Oneindia Kannada News

ಕಾರ್ತೀಕ ಮಾಸ ದೀಪಗಳ ಮಾಸ. ಈ ತಿಂಗಳು ಪೂರ್ಣವಾಗಿ ಮನೆಯ ಹೊರಗೆ ರಾತ್ರಿಯ ಹೊತ್ತು ದೀಪಗಳನ್ನು ಹಚ್ಚಬೇಕು. ಈ ಕಾರ್ತೀಕದೀಪೋತ್ಸವದ ಮುನ್ನುಡಿಯಾಗಿ ದೀಪಾವಳಿ ಹಬ್ಬ ಬರುತ್ತದೆ.

ಆಶ್ವೀನ ಮಾಸದ ಕೃಷ್ಣಪಕ್ಷದ ದ್ವಾದಶೀ, ತ್ರಯೋದಶೀ, ಚತುರ್ದಶೀ, ಅಮಾವಾಸ್ಯಾ ಮತ್ತು ಕಾರ್ತೀಕ ಶುಕ್ಲಪಕ್ಷದ ಪ್ರತಿಪದಾ ಈ ಐದು ದಿವಸಗಳಲ್ಲಿ ಆಚರಿಸುವ ಹಬ್ಬಕ್ಕೆ ದೀಪಾವಳಿ ಎಂದು ಹೆಸರು. ಈ ದಿವಸಗಳಲ್ಲಿ ಕೇವಲ ತ್ರಯೋದಶಿಯಿಂದ ಹಬ್ಬವನ್ನು ಆಚರಿಸುವ ಪದ್ಧತಿಯಿದೆ. ಆದರೆ ಪುರಾಣಗಳಲ್ಲಿ ಇದು ಐದು ದಿವಸಗಳ ಉತ್ಸವ ಎಂದು ಸ್ವಷ್ಟವಾಗಿದೆ. ನಾರದರ ವಾಕ್ಯ ಹೀಗಿದೆ -

"ಆಶ್ವೀನೇ ಕೃಷ್ಣಪಕ್ಷೇ ತು ದ್ವಾದಶ್ಯಾದಿಷು ಪಂಚಸು I
ತಿಥಿಷೂಕ್ತಃ ಪೂರ್ವರಾತ್ರೇ ನೃಣಾಂ ನೀರಾಜನೋ ವಿಧಿಃ II

ನೀರಾಜಯೇಯುರ್ದೇವಾಂಸ್ತು ವಿಪ್ರಾನ್ ಗಾಶ್ಚ ತುರಂಗಮಾನ್ I
ಜ್ಯೇಷ್ಠಾನ್ ಶ್ರೇಷ್ಠಾನ್ ಜಘನ್ಯಾಂಶ್ಚ ಮಾತೃಮುಖ್ಯಾಶ್ಚ ಯೋಷಿತಃ" [ಸಮೃದ್ಧಿ ಸಂಪ್ರೀತಿ ಸಮಾನತೆಯ ದೀಪಾವಳಿ]

How to celebrate Deepavali (Diwali), the festival of lights

ದ್ವಾದಶೀ, ತ್ರಯೋದಶೀ, ಚತುರ್ದಶೀ, ಅಮಾವಾಸ್ಯಾ ಮತ್ತು ಪ್ರತಿಪದಾ ಈ ಐದು ದಿವಸಗಳಲ್ಲಿ ಸೂರ್ಯ ಮುಳುಗಿದ ಬಳಿಕ ಮನೆಯ ಹೆಣ್ಣುಮಕ್ಕಳೆಲ್ಲ ಕೂಡಿಕೊಂಡು ಮೊದಲಿಗೆ, ದೇವರಿಗೆ, ಆ ನಂತರ ಜ್ಞಾನಿಗಳಾದ ಗುರುಗಳಿಗೆ, ಆ ನಂತರ ಮನೆಯಲ್ಲಿರುವ ಹಸು, ಎತ್ತು, ಕುದುರೆಗಳಿಗೆ, (ಹಿಂದಿನ ಕಾಲದಲ್ಲಿ ಕುದುರೆಗಳೇ ವಾಹನವಾದ್ದರಿಂದ ಪ್ರಾಯಃ ಪ್ರತಿಯೊಬ್ಬರ ಮನೆಯಲ್ಲಿಯೂ ಕುದುರೆಗಳಿರುತ್ತಿದ್ದವು) ಆ ನಂತರ ಮನೆಯ ಹಿರಿಯರಿಗೆ, ಆ ನಂತರ ಮನೆಯ ಕಿರಿಯರಿಗೆ ಹೀಗೆ ಕ್ರಮವಾಗಿ ನೀರಾಜನವನ್ನು - ಆರತಿಯನ್ನು - ಮಾಡಬೇಕು.

ಮೊದಲಿಗೆ ದೇವರ ಬಳಿ, ತುಳಸಿಯ ಬಳಿ, ಗೋಶಾಲೆಯ ಬಳಿ, ಮನೆಯ ಸುತ್ತಲೂ ದೀಪಗಳನ್ನು ಹಚ್ಚಬೇಕು. [ದೀಪಾವಳಿ ಕೇವಲ ಮನೆ ಜ್ಯೋತಿಯಲ್ಲ, ಆತ್ಮಜ್ಯೋತಿ]

ಒಂದು ಬೆಳ್ಳಿಯ ಅಥವಾ ತಾಮ್ರದ ತಟ್ಟೆಯಲ್ಲಿ ಸ್ವಲ್ವ ನೀರು ಹಾಕಿ ಅರಿಶಿನ ಕುಂಕುಮಗಳನ್ನು ಅದರೊಳಗೆ ಹಾಕಿ ಕಲಸಿ, ಅದರಲ್ಲಿ ಎರಡು ದೀಪಗಳನ್ನಿಟ್ಟು ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮುತ್ತೈದೆಯರು ಹಾಡನ್ನು ಹೇಳುತ್ತ ಆರತಿಯನ್ನು ಮಾಡಬೇಕು. ಆ ನಂತರ ಗುರುಗಳಿಗೆ ಆರತಿಯನ್ನೆತ್ತಬೇಕು.

ಹಸು, ಎತ್ತು, ಕುದುರೆಗಳನ್ನು ತೊಳೆದು ಸಿಂಗರಿಸಿ, ಅವುಗಳಲ್ಲಿ ಭಗವಂತನ ದೇವತೆಗಳ ಚಿಂತನೆಯನ್ನು ಮಾಡುತ್ತ ಅರಿಶಿನ ಕುಂಕುಮಗಳಿಂದ ಪೂಜಿಸಿ, ಅವುಗಳಿಗೆ ಸಮೃದ್ದವಾಗಿ ಹುಲ್ಲನ್ನು ನೀಡಿ ನೀರಾಜನವನ್ನೆತ್ತಬೇಕು. [ಮೊದಲ ದೀಪಾವಳಿಗೆ ಅತ್ತೆ ಚೊಂಬು ಕೊಟ್ಟ ಕಥೆ]

How to celebrate Deepavali (Diwali), the festival of lights

ಆ ನಂತರ ಮನೆಯ ಹಿರಿಯರು ಪಂಚೆಯನ್ನುಟ್ಟು, ಹೊದೆಯವ ಪಂಚೆಯನ್ನು ಹೊದ್ದು (ಮೈಮೇಲೆ ಹೊದ್ದುಕೊಳ್ಳುವ ಉತ್ತರೀಯವಿಲ್ಲದೇ ಆರತಿ ಮಾಡಿಸಿಕೊಳ್ಳಬಾರದು) ಒಂದು ಮಣೆಯ ಮೇಲೆ ಕುಳಿತುಕೊಳ್ಳಬೇಕು. ಅವರಿಗೆ ಮನೆಯ ಹೆಣ್ಣುಮಕ್ಕಳು ಹಣೆಗೆ ಸಿಂಧೂರದಿಂದ ತಿಲಕವನ್ನಿಡಬೇಕು.

ಆ ನಂತರ ಅವರಿಗೆ ದೀಪದಿಂದಲೇ ನೀರಾಜನವನ್ನು ಮಾಡಬೇಕು. (ಬೇರೆಯ ಸಂದರ್ಭಗಳಲ್ಲಿ ಕೇವಲ ನೀರಿನಿಂದ ಆರತಿ, ಆದರೆ ದೀಪಾವಳಿಯ ಈ ಐದು ದಿವಸಗಳಲ್ಲಿ ದೀಪದಿಂದಲೇ ನೀರಾಜನ). ಆ ಬಳಿಕ ಮನೆಯ ಸಣ್ಣ ಮಕ್ಕಳನೆಲ್ಲ ಕೂಡಿಸಿ ಆರತಿಯನ್ನು ಮಾಡಬೇಕು. ಆ ನಂತರ ಮನೆಯ ಕಿರಿಯರು ಹಿರಿಯರಿಗೆ ನಮಸ್ಕಾರ ಮಾಡಿ ಆಶೀರ್ವಾದವನ್ನು ತೆಗೆದುಕೊಳ್ಳಬೇಕು. ಈ ಆರತಿಯನ್ನು ಐದೂ ರಾತ್ರಿಗಳಲ್ಲಿ ಮಾಡಬೇಕು.

***
ತ್ರಯೋದಶಿಯಂದು ಯಮದೀಪದಾನ

ತ್ರಯೋದಶಿಯ ಸಂಜೆ ಮನೆಯ ಮುಂದೆ ಯಮದೀಪವನ್ನು ಹಚ್ಚಬೇಕು. ಭಾದ್ರಪದಕೃಷ್ಣಪಕ್ಷದಿಂದ ಆಶ್ವೀನಕೃಷ್ಣಪಕ್ಷದವರೆಗೆ ಭೂಮಿಯಲ್ಲಿ ಸಂಚಾರಕ್ಕಾಗಿ ಬರುವ ಯಮಧರ್ಮ ಮತ್ತು ಪಿತೃದೇವತೆಗಳು ತಮ್ಮ ಲೋಕಕ್ಕೆ ಹಿಂತಿರುಗುವ ಸಮಯ ಈ ತ್ರಯೋದಶೀ. ರಾತ್ರಿಯ ಹೊತ್ತಿನಲ್ಲಿ ಹೊರಟ ಅವರಿಗೆ ದೀಪವನ್ನು ಸಮರ್ಪಣೆ ಮಾಡಿದರೆ ನಮ್ಮ ಮನೆಯಲ್ಲಿ ಅಪಮೃತ್ಯು ಬಾರದಂತೆ ಅನುಗ್ರಹಿಸುತ್ತಾರೆ.

How to celebrate Deepavali (Diwali), the festival of lights

"ಕಾರ್ತೀಕಸ್ಯಾಸಿತೇ ಪಕ್ಷೇ ತ್ರಯೋದಶ್ಯಾಂ ನಿಶಾಮುಖೇ I

ಯಮದೀಪಂ ಬಹಿರ್ದದ್ಯಾದಪಮೃತ್ಯುರ್ವಿನಶ್ಯತಿ"

ಎಂದು ಸ್ಕಂದಪುರಾಣ ತಿಳಿಸುತ್ತದೆ. (ಕೃಷ್ಣಪಕ್ಷಕ್ಕೆ ಸಂಬಂಧಿಸಿದ ಯಾವುದೇ ವಿಧಿಯನ್ನಾದರೂ ಪುರಾಣಗಳು ಎರಡು ಪಕ್ಷಗಳ ಹೆಸರಿನಿಂದ ಉಲ್ಲೇಖಿಸುತ್ತವೆ. ಇಲ್ಲಿಯೂ ಸಹ ಆಶ್ವೀನ ಕೃಷ್ಣಪಕ್ಷವನ್ನು ಕಾರ್ತೀಕಕೃಷ್ಣಪಕ್ಷ ಎಂದು ಉಲ್ಲೇಖಿಸುತ್ತಿದ್ದಾರೆ. ಕೃಷ್ಣಾಷ್ಟಮಿಯ ಕುರಿತಾದ ಬನ್ನಂಜೆಯ ದುರ್ವಾದವನ್ನು ವಿಮರ್ಶಿಸುವಾಗ ನನ್ನ ಪುಸ್ತಕದಲ್ಲಿ ವಿವರವಾಗಿ ತಿಳಿಸಿದ್ದೇನೆ.)

ಮೊದಲಿಗೆ ಒಂದು ದೊಡ್ಡ ದೀಪವನ್ನು ತೆಗೆದುಕೊಂಡು ಅದರಲ್ಲಿ ಸಾಕಷ್ಟು ಎಳ್ಳೆಣ್ಣೆಯನ್ನು ತುಂಬಿಸಬೇಕು. (ದೀಪ ರಾತ್ರಿಯೆಲ್ಲ ಉರಿಯುವದು ಅತ್ಯಂತ ಪ್ರಶಸ್ತ) ಆ ಬಳಿಕ ದೊಡ್ಡ ಹೂಬತ್ತಿಯನ್ನು ಅದರಲ್ಲಿಟ್ಟು, ದೇವರ ಮುಂದೆ ಅಪಮೃತ್ಯು ಪರಿಹಾರಕ್ಕಾಗಿ ಪ್ರಾರ್ಥಿಸಬೇಕು.

ಆ ನಂತರ ಆ ದೀಪವನ್ನು ತೆಗೆದುಕೊಂಡು ಮನೆಯ ಆಗ್ನೇಯ ಅಥವಾ ದಕ್ಷಿಣದಿಕ್ಕಿನಲ್ಲಿ ಎತ್ತರದ ಸ್ಥಾನದಲ್ಲಿಡಬೇಕು. ಮನೆಯ ಮೇಲ್ಭಾಗದಲ್ಲಿಟ್ಟರೆ ಇನ್ನೂ ಒಳಿತು. ಆ ನಂತರ ದಕ್ಷಿಣ ದಿಕ್ಕಿಗೆ ಕೈ ಮುಗಿದು

ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಯಾ ಸಹ I
ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜಃ ಪ್ರೀಯತಾಂ ಮಮ II

ಸರ್ವಸಂಹಾರಕನಾದ ಕಾಲರೂಪೀ ಭಗವಂತ, ಸರ್ವಸಂಹರ್ತ್ರಿಯಾದ ದುರ್ಗಾದೇವಿ, ರುದ್ರದೇವರಿಂದ ಸಮೇತನಾದ, ಪ್ರಿಯೆಯಾದ ಶ್ಯಾಮಲಾದೇವಿಯಿಂದ ಒಡಗೂಡಿದ, ಕೈಯಲ್ಲಿ ಪಾಶ ದಂಡಗಳನ್ನು ಹಿಡಿದ ಸೂರ್ಯಪುತ್ರ ಯಮಧರ್ಮ ನನಗೆ ಪ್ರೀತನಾಗಲಿ ಎಂದು ಪ್ರಾರ್ಥಿಸಿ ದೀಪವನ್ನು ಹಚ್ಚಿ, ಅದು ಗಾಳಿಗೆ ಆರದಂತೆ ನೋಡಿಕೊಂಡು ಸ್ವಲ್ಪ ಕಾಲ ಅಲ್ಲಿದ್ದು ಮನೆಯ ಒಳಗಡೆ ಬರಬೇಕು. ಹೀಗೆ ಮಾಡುವದರಿಂದ ಅಪಮೃತ್ಯು ಪರಿಹಾರವಾಗುತ್ತದೆ.

English summary
How to celebrate Deepavali (Diwali), the festival of lights? Vishnudasa Nagendracharya from Mysuru explains the way the festival to be celebrated in a scientific and methodical way. May Goddess Lakshmi bless everyone with health and wealth and prosperity. Happy Deepavali to everyone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X