ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ ಹೆಸರು ಹೇಗೆ ಬಂತು ಗೊತ್ತಾ?

By ರಾಘವೇಂದ್ರ ಅಡಿಗ ಎಚ್ಚೆನ್
|
Google Oneindia Kannada News

ದೀಪಾವಳಿ, ಇದು ಕೇವಲ ಹಣವಂತರ, ಹಬ್ಬವಲ್ಲ. ಬದಲಾಗಿ ಇದಕ್ಕೆ ಜನಪದ ದೀವಳಿಗೆಯ ಸ್ವರೂಪವೂ ಇದೆ. ಹಳ್ಲಿಗಾಡಿನ ಜನರು ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಅದರಲ್ಲಿಯೂ ಮಲೆನಾಡಿನ ಜನರು ಐದು ದಿನದ ಈ ಹಬ್ಬವನ್ನು ಬಹಳ ವಿಶಿಷ್ಟವಾಗಿ ಆಚರಿಸುತ್ತಾರೆ. ದೀಪಾವಳಿಯ ಈ ಸಮಯದಲ್ಲಿ ಆಚರಿಸಲ್ಪಡುವ ಅಂಟಿಗೆ ಪಿಂಟಿಗೆ, ಬುರೆ ಹಬ್ಬಗಳು ಮಲೆನಾಡಿನ ಪ್ರಮುಖ ವೈಶಿಷ್ಟ್ಯಪೂರ್ಣ ಆಚರಣೆಯಾಗಿದೆ.

ಮಲೆನಾಡಿನವರಲ್ಲಿ ಆಚರಣೆಯಲ್ಲಿರುವ ಅಂಟಿಗೆ ಪಿಂಟಿಗೆಗೆ ಅದರದೇ ಆದ ಹಿನ್ನೆಲೆ ಇದೆ. ದೀಪಾವಳಿಯ ಸಮಯದಲ್ಲಿ ಊರಿನ ಕೆಲ ಯುವಕರು ಗುಂಪಾಗಿ ಹಬ್ಬಕ್ಕೆ ಕೆಲದಿನಗಳ ಮೊದಲೇ ತಮ್ಮಲ್ಲಿನ ಜನಪದ ಕಲೆಯ ಪ್ರದರ್ಶನಕ್ಕೆ ಸಜ್ಜಾಗುತ್ತಾರೆ. ಅದಕ್ಕಾಗಿ ಸಾಕಷ್ಟು ಅಭ್ಯಾಸದಲ್ಲಿ ತೊಡಗುವ ಯುವಕರು ದೀಪಗಳ ಹಬ್ಬದ ಹಿಂದಿನ ದಿನ ಅಂಟಿಗೆ ಪಿಂಟಿಗೆಯ ಜ್ಯೋತಿಯನ್ನು ಬೆಳಗಿಸಲಾಗುತ್ತದೆ. ಹೀಗೆ ಒಮ್ಮೆ ಬೆಳಗಿದ ಜ್ಯೋತಿಯು ಮತ್ತೆ ಆರಿಹೋಗುವಂತಿಲ್ಲ. ತಂಡದ ಸದಸ್ಯರುಗಳು ಆ ಜ್ಯೋತಿಗೆ ಸದಾ ತೈಲವನ್ನು ಹಾಕುತ್ತಾ ಜ್ಯೋತಿಯು ಆರಿಹೋಗದಂತೆ ಕಾಪಾಡಿಕೊಳ್ಳಬೇಕೆನ್ನುವುದು ಅಂಟಿಗೆ ಪಿಂಟಿಗೆಯ ಪ್ರಮುಖ ನಿಯಮಗಳಲ್ಲಿ ಒಂದು.

Festival Of Lights Deepavali - Folk story

ತದನಂತರ ತಂಡದ ನಾಯಕನಾದವನು ಊರಲ್ಲಿನ ಮನೆ ಮನೆಗೂ ಭೇಟಿ ನೀಡಿ ಸುದ್ದಿ ಮುಟ್ಟಿಸಿ ಬರುತ್ತಾನೆ.ಆ ಬಳಿಕ ಸುಮಾರು ಎಂಟರಿಂದ ಹತ್ತು ಮಂದಿಯ ತಂಡ ಅಂಟಿಗೆ ಪಿಂಟಿಗೆ ಪದಗಳನ್ನು ಹೇಳಿಕೊಳ್ಳುತ್ತಾ ಮನೆ ಮನೆಗಳಿಗೆ ಭೇಟಿ ನೀಡುತ್ತಾರೆ. ಇವರಿಗೆ ಆಯಾ ಮನೆಯ ಯಜಮಾನರು ತಾವು ಹೊಸ ಬಟ್ಟೆಯನ್ನೋ ಇಲ್ಲವೆ ತಮ್ಮ ಶ್ಕ್ತಿಗನುಸಾರವಾಗಿ ಧಾನ್ಯವನ್ನೋ ನೀಡಿ ಸತ್ಕರಿಸಬೇಕು.

ದೀಪಾವಳಿಯ ಸಮಯದಲ್ಲಿ ನೀರು ತುಂಬುವ ದಿನದಂದು ಮಲೆನಾಡಿನ ಹಳ್ಳಿಯ ಜನರಾರೂ ರಾತ್ರಿ ಮಲಗಲಾರರು. ಇದಕ್ಕೆ ಕಾರಣವೆಂದರೆ ಅಂದು ಊರಿನ ಕೆಲ ಯುವಕರು ಗುಂಪು ಗುಂಪಾಗಿ ಹಳ್ಳಿಗರ ತೋಟಕ್ಕೆ ಕನ್ನ ಹಾಕುತ್ತಾರೆ. ತೋಟಗಳಲ್ಲಿ ಬೆಳೆದ ಹಣ್ಣು- ತರಕಾರಿಗಳನ್ನು ಕದ್ದು ತರುತ್ತಾರೆ. ಹೀಗೆ ಕದ್ದು ತರುವಾಗ ಸಮಯವಶಾತ್ ಸಿಕ್ಕಿ ಬಿದ್ದರೂ ಯಜಮಾನನು ಅವರಿಗೆ ಬೈಯ್ಯುವಂತಿಲ್ಲ, ಅದು ಆ ದಿನದ ನಿಯಮ! ಹೀಗೆ ಕಳ್ಳತನ ಮಾಡಿ ತಂದ ತರಕಾರಿ, ಹಣ್ಣುಗಳನ್ನು ಭೂಮಿ ಹುಣ್ಣಿಮೆಯಂದು ಭೂಮಿತಾಯಿಗೆ ನೈವೇದ್ಯಕ್ಕಾಗಿ ಮಾಡುವ ಅಡುಗೆಗಳಲ್ಲಿ ಬಳಸಲಾಗುತ್ತದೆ.

ಇನ್ನು ಜನಪದರ ಪ್ರಕಾರ ದೀಪಾವಳಿ ಹಬ್ಬ ಆಚರಣೆಗೆ ಬರಲು ಕಾರಣವೆಂದು ಹೇಳಲಾಗುವ ವಿಶಿಷ್ಟ ಕಥೆಯೊಂದು ಹೀಗಿದೆ-

ಒಂದೂರಿನಲ್ಲಿ ಒಬ್ಬರಾಜನಿದ್ದನು. ಅವನಿಗೆ ಎರಡು ಹೆಣ್ಣು ಮಕ್ಕಳಿದ್ದರು. ರಾಜ್ಯವು ಸಮೃದ್ದಿಯಿಂದ ಕೂಡಿದ್ದ ಪ್ರಜೆಗಳೆಲ್ಲಾ ಸುಖ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಹೀಗಿರಲು ಒಮ್ಮೆ ರಾಜನು ತನ್ನೆರಡೂ ಮಕ್ಕಳನ್ನು ಕರೆದು 'ತನ್ನ ರಾಜ್ಯದ ಸುಭಿಕ್ಷವಾಗಿರಲು ಕಾರಣವನ್ನು ತಿಳಿಸಿ' ಎನ್ನಲು ಹಿರಿಯ ಮಗಳು 'ಇದಕ್ಕೆಲ್ಲಾ ನಿನ್ನ ಆಡಳಿತವೇ ಕಾರಣ' ಎನ್ನುತ್ತಾಳೆ. ಆದರೆ ಕಿರಿಯಳಾದ ದೀಪಾ ಮಾತ್ರವೆ 'ಇದಕ್ಕೆಲ್ಲಾ ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಕೃಪಾಕಟಾಕ್ಷವು ಕಾರಣ' ಎಂದು ಹೇಳುವಳು. ಇದನ್ನು ಕೇಳಿದ ರಾಜನಿಗೆ ಕೋಪವುಕ್ಕಿ ಕಿರಿ ಮಗಳನ್ನು ರಾಜ್ಯದಿಂದಲೇ ಹೊರಹಾಕುತ್ತಾನೆ.

ಹೀಗೆ ದೀಪಾ ಗಡಿಪಾರಾದ ಮೇಲೆ ರಾಜ್ಯದಲ್ಲೆಲ್ಲಾ ಕ್ಷಾಮವು ತಲೆದೋರುತ್ತದೆ. ಜನರು ಆಹಾರವಿಲ್ಲದೆ ಕಂಗಾಲಾಗುತ್ತಾರೆ. ಬಡತನವು ತಾಂಡವವಾಡುತ್ತದೆ. ಹೀಗಿರಲು ದೀಪಾಳಿಗೆ ತಾಯಿ ಶ್ರೀಲಕ್ಷ್ಮಿಯು ತಾನು ಪ್ರತ್ಯಕ್ಷವಾಗಿ 'ನೀನು ನಿನ್ನ ತಂದೆಯ ಬಳಿ ಮರಳಿದೆಯಾದರೆ ನಿಮ್ಮ ರಾಜ್ಯವು ಪುನಃ ಸಮೃದ್ದಿಯನ್ನು ಕಾಣುತ್ತದೆ' ಎಂದು ಅನುಗ್ರಹಿಸುತ್ತಾಳೆ. ಅದರಂತೆ ದೀಪಾಳು ತನ್ನ ತಂದೆಯ ಬಳಿ ಹಿಂತಿರುಗಿದಾಗ ರಾಜ್ಯದಲ್ಲಿ ಮತ್ತೆ ಮಳೆ-ಬೆಳೆಗಳು ಸಮೃದ್ದವಾಗಿ ಆಗುತ್ತದೆ. ಜನರೆಲ್ಲರೂ ದೀಪಾಳ ಪುನರಾಗಮನವೇ ಇದಕ್ಕೆಲ್ಲಾ ಕಾರಣವೆಂದರಿತು ಅವಳ ಹೆಸರಿನಲ್ಲಿ 'ದೀಪಾವಳಿ' ಎನ್ನುವ ಹಬ್ಬವನ್ನಾಚರಿಸಿದರು. ಅಂದಿನಿಂದ ದೀಪಾವಳಿ ಆಚರಣೆಗೆ ಬಂದಿತು ಎನ್ನುವ ಪ್ರತೀತಿ ಜನಪದರಲ್ಲಿದೆ.

ಸ್ನೇಹಿತರೆ, ಹೀಗೆ ನಮ್ಮ ಪರಂಪರೆಯಲ್ಲಿ ದೀಪಾವಳಿಯ ಪ್ರತಿ ದಿನಕ್ಕೂ ಅದರದೇ ಆದ ಮಹತ್ವವಿದೆ. ನಮ್ಮ ಹಿರಿಯರು, ಜನಪದರು ಪರಂಪರೆಯಿಂದ ಆ ಮಹತ್ವವನ್ನರಿತು ಹಬ್ಬವನ್ನಾಚರಿಸಿಕೊಂಡು ಬಂದಿದ್ದಾರೆ. ಇಂದು ನಾವು ಕೂಡ ನಮ್ಮ ಆಚರಣೆಯ ಹಿಂದಿರುವ ಅರ್ಥವನ್ನು ಅರಿತುಕೊಳ್ಳುವುದರ ಮುಖೇನ ಹಬ್ಬವನ್ನು ಅರ್ಥವತ್ತಾಗಿ ಆಚರಿಸೋಣ.

ಬನ್ನಿ, ಹಣತೆಯನ್ನು ಬೆಳಗೋಣ
ಅಂತರಂಗದ ಕತ್ತಲನು ತೊಡೆಯೋಣ
ಜಗದ ತುಂಬೆಲ್ಲ ಜ್ಞಾನದ ದೀವಿಗೆಯನ್ನು ಹಚ್ಚೋಣ.

English summary
Deepavali (deepa + aavaLi) or Diwali is celebrated on the previous and next day of Amavasye (New Moon Day) as Naraka Chaturdashi (before new-moon day) resembling Satyabhama's victory over Narakasura and as Bali Padyami, the first day of Kartika masa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X