ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯ ನಾಮ ಸಂವತ್ಸರದ ದೀಪಾವಳಿ ಕವನ

By ಹಂಸಾನಂದಿ
|
Google Oneindia Kannada News

ದೀಪಾವಳಿಯ ಸಂದರ್ಭಕ್ಕೆ ಹೊಂದುವ ಕೆಲವು ಅಲಂಕಾರಯುಕ್ತವಾದ ಐದು ಪದ್ಯಗಳನ್ನು ಭಾಮಿನೀ ಷಟ್ಪದಿಯಲ್ಲಿ ಹಂಸಾನಂದಿ ಅವರು ಹೊಸೆದಿದ್ದಾರೆ.

ಮೊದಲ ಪದ್ಯ, ದೀಪಾವಳಿಯ ಮೊದಲದಿನವಾದ ನೀರು ತುಂಬುವ ಹಬ್ಬ, ಎರಡನೇ ಪದ್ಯ ಎರಡನೆಯ ದಿನವಾದ ನರಕ ಚತುರ್ದಶಿಯ ಬಗ್ಗೆ, ಮೂರನೇ ದಿನ ಕಾಳ ಕತ್ತಲೆಯ ಅಮಾವಾಸ್ಯೆಯ ಲಕ್ಷ್ಮೀ ಪೂಜೆಗೆ, ನಾಲ್ಕನೇ ಪದ್ಯ ಕರ್ನಾಟಕದಲ್ಲಿ ದೀಪಾವಳಿಯ ಅತೀ ಜನಪ್ರಿಯ ದಿನವಾದ ಬಲಿಪಾಡ್ಯಮಿಯ ಹಬ್ಬದೂಟದ ಬಗ್ಗೆ, ಮತ್ತೆ ಐದನೇ ಪದ್ಯ ಅಣ್ಣತಮ್ಮಂದಿರನ್ನು ಸತ್ಕರಿಸುವ ಸೋದರ ಬಿದಿಗೆಯ ಬಗ್ಗೆ ಎಂದು ಓದಿಕೊಳ್ಳಬಹುದು.ಎಲ್ಲರಿಗೂ ಮತ್ತೊಮ್ಮೆ ದೀಪಾವಳಿಯು ಆನಂದವನ್ನು ತರಲೆಂಬ ಹಾರೈಕೆಗಳು.

Deepavali poem in Bhamini Shatpadi

ನೀರು ತುಂಬುವ ಹಬ್ಬ ಬಂದಿರೆ
ನೀರೆಯರು ಮನೆತುಂಬ ನಾನಾ-
ಕಾರದಲಿ ಚಿತ್ತಾರ ರಂಗೋಲಿಗಳ ಹಾಕುತಲಿ |
ಮಾರುಮಾರಿಗು ಬಣ್ಣಬಣ್ಣದ
ಹಾರಗಳ ಕಟ್ಟುತ್ತ ಸೊಗಸಿನ
ತೋರಣದ ಚಿಗುರಲ್ಲಿ ಕೋರುತಲೆಲ್ಲರೊಳಿತನ್ನು ||1||

ಅಂದು ನರಕಾಸುರನ ಭಯದಲಿ
ನೊಂದಿರುವ ಜಗವನ್ನು ಕಾಯಲಿ-
ಕೆಂದು ಕೃಷ್ಣನು ಕೊಂದನಾತನ ವಿಷ್ಣು ಚಕ್ರದಲಿ |
ಇಂದಿಗೂ ನೆನೆಯುವೆವು ಮಹದಾ-
ನಂದದಿಂದಲಿ ದುಷ್ಟ ದಮನವ
ಚಂದದಿಂದಲಿ ನಾವು ಹೊತ್ತಿಸಿ ವಿಷ್ಣು ಚಕ್ರಗಳ ||2||

ಸಾಲು ಸಾಲಿನ ಸೊಡರ ಕುಡಿಗಳು
ಮಾಲೆ ಹಾಕಿದ ಮಿಂಚು ದೀಪವು
ಮೂಲೆಮೂಲೆಗಳಲ್ಲಿ ಸುರುಸುರು ಬತ್ತಿಗಳ ಬೆಳಕು |
ಮೇಲಿನಾಗಸದಲ್ಲಿ ಹೊಳೆಯುವ
ಸಾಲು ತಾರಾಗಣವ ಮೀರಿಸಿ
ಪೇಲವವಗೈದಿರಲಿ ಮನಸಿನ ಕಾಳಕತ್ತಲೆಯ ||3||

ಪೇರಿಸಿರುವೊಬ್ಬಟ್ಟು ಲಡ್ಡುವು
ಗಾರಿಗೆಯು ಸಜ್ಜಪ್ಪ ಶಾವಿಗೆ
ಮಾರು ಹೋಗದೆಯಿರುವುದುಂಟೇನಿಂಥ ಪರಿಮಳಕೆ |
ಮೂರು ಸುತ್ತಲು ಹಬ್ಬುತಿರಲೀ
ಸಾರಿನೊಗ್ಗರಣೆಯು ಕಮ್ಮನೆ
ಮೇರೆ ಮೀರಿಸಿ ಹಬ್ಬದೂಟದ ಬಯಕೆ ಮನದಲ್ಲಿ ||4||

ಸೊಡರು ಹಬ್ಬದ ಕೊನೆಯ ದಿನ ಮನೆ
ಯೊಡತಿ ತನ್ನೊಡಹುಟ್ಟಿದವರನು
ಸಡಗರಿಸಿ ಕರೆಯುವಳು ಮರೆಯದೆ ತವರ ಕುಡಿಗಳನು |
ನುಡಿಯುತಲಿ ಸಂತಸದ ಮಾತುಗ
ಳೊಡನೆ ಸತ್ಕರಿಸುತ್ತಲವರನು
ಹಡೆದ ಮನೆಗೆಂದೆಂದು ಹದುಳವ ಕೋರಿ ಸೊಗವಡೆದು ||5||

ಹಂಸಾನಂದಿ ಅವರ ಬ್ಲಾಗಿಗೆ ದಾರಿ ಇಲ್ಲಿದೆ

English summary
Five poems on Deepavali festival of lights celebration and rituals in Bhamini Shatpadi by Hamsanandi aka Ram Prasad KV
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X