• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಣಪಣ್ಣ ಪ್ಲೀಸ್ ನೆಕ್ಸ್ಟ್ ವರ್ಷ ವೀಕೆಂಡ್ ಬಾರಣ್ಣ!

By * ವೈಶಾಲಿ ಹೆಗಡೆ, ಮೆಸಾಚುಸೆಟ್ಸ್
|

ಲೋಕಸಂಚಾರಿ ಗಣೇಶ ಎಲ್ಲರ ಶುಭ ಹಾರೈಕೆಗಳೊಂದಿಗೆ ಪ್ರತಿ ಬಾರಿಯಂತೆ ಈ ಬಾರಿ ನಮ್ಮನೆಗೂ ಬಂದ. ಹಿಂದಿನ ದಿನವೇ ಅವನಮ್ಮ ಬಂದು ಬಿಡಾರ ಹಾಕಿದ್ದಳಲ್ಲ, ಅವ ಬರದೆ ಮತ್ತೆಲ್ಲಿ ಹೋಗುತ್ತಾನೆ?

ಡಿಂಗ್ ಡಾಂಗ್ ಎಂದು ಬಾಗಿಲು ಬಡಿದರೆ ಬಾಗಿಲು ತೆರಯಲೂ ಪುರುಸೊತ್ತಿಲ್ಲದಂತೆ ಓಡಾಡುತ್ತಿದ್ದೆ ನಾನು. ಇದ್ಯಾರು ಬಾಗಿಲು ಬಡಿದಿದ್ದು? ಅಯ್ಯೋ ಈಗಷ್ಟೇ ಶಾಲೆ ಪುನರಾರಂಭವಾಗಿದೆ. ಬೇಗನೆ ಮಕ್ಕಳನ್ನೆಬ್ಬಿಸಿ ಸ್ನಾನ ಮಾಡಿಸಬೇಕು, ಡಬ್ಬಿ ಕಟ್ಟಬೇಕು. ತಿಂಡಿ ತಿನ್ನಿಸಿ ಅಲ್ಲಲ್ಲ ತುರುಕಬೇಗು ಅವರ ಬಾಯಿಗೆ. ಅಂಥದ್ದರಲ್ಲಿ ಇದ್ಯಾರು ಬೆಳ್ಳಂಬೆಳಿಗ್ಗೆ? ದಡಬಡಿಸಿ ಬಾಗಿಲು ತೆರೆದವಳಿಗೆ ಆಶ್ಚರ್ಯ, ಖುಷಿ ಜೊತೆಗೆ ಸಣ್ಣಗೆ ಟೆನ್ಶನ್ ಬೇರೆ.

ಎದುರಿಗೆ ಮುದ್ದುಮುದ್ದಾಗಿ ಎಲ್ಲೆಲ್ಲೋ ಮೆಂದುಬಂದು ಒಂದಿಷ್ಟು ಕಟ್ಟಿಕೊಂಡು ಬೇರೆ ಬಂದಿದ್ದವುಗಳನ್ನು ಮೆಲ್ಲುತ್ತ ನಿಂತಿದ್ದಾನೆ ಹೊಟ್ಟೆಪ್ಪ. ಬಾರಯ್ಯ ಬಾ, ನಿನ್ನಮ್ಮ ನಿನ್ನೆನೇ ಬಂದು ಕೂತಿದ್ದಾಳೆ, ಬಾ ಮರೆತೇ ಹೋಗಿತ್ತು ನೋಡು ನೀನು ಬರುವುದು ಎನ್ನುತ್ತಾ ಒಳಕರೆದುಕೊಂಡು ಹೋದೆ. ಇಲ್ಲಿ ಕೇಳು, ನನಗೀಗ ಕೈತುಂಬಾ ಕೆಲಸ. ನೀನು ಬರುತ್ತೀ ಎಂದು ಈ ಅಮೆರಿಕನ್ನರೇನು ರಜಾ ಕೊಡುವುದಿಲ್ಲ, ಸ್ವಲ್ಪ ಸುಧಾರಿಸಿಕೊಳ್ಳಬೇಕು ಓಕೆ ಎಂದೆ. ಮತ್ತೊಮ್ಮೆ ಮುಗುಳ್ನಕ್ಕು ಬೆಳ್ಳಗೆ ಬೆಳಗುತ್ತಾ ಕೂತುಬಿಟ್ಟ.

ಗಡಿಬಿಡಿ ಜೊತೆಗೆ ಒಂತರ ಬೇಜಾರು. ಛೆ ಇಲ್ಲಿನ ಹಬ್ಬಗಳಾದರೆ ಈ ಜನ ನೀಟಾಗಿ ಶುಕ್ರವಾರ ಇಲ್ಲವೇ ಸೋಮವಾರ ಅತ್ತತ್ತ ಎಂದರೆ ಗುರುವಾರ ಎಂದು ಹಂಚಿಕೊಂಡು ವೀಕೆಂಡನ್ನು ಉದ್ದನೆಯ ವೀಕೆಂಡ್ ಮಾಡಿ ಹಬ್ಬವಾಚರಿಸಿಬಿಡುತ್ತಾರೆ. ನಮಗಾದರೆ ತಿಥಿ, ವಾರ, ಪಕ್ಷ, ನಕ್ಷತ್ರ ಎಂದೆಲ್ಲ ಗುಣಾಕಾರ ಭಾಗಾಕಾರ ಮಾಡಿ ಬರುವ ಹಬ್ಬಗಳು ವೀಕೆಂಡ್ಗೆ ಮಾತ್ರ ಬಾ ಎಂದರೆ ಪಾಪ ಅವಾದರೂ ಹೇಗೆ ಬರುತ್ತವೆ? ರಜೆ ಹಾಕಿ ಹಬ್ಬ ಮಾಡುವಷ್ಟು ರಜವೂ ಇಲ್ಲ. ಇದ್ದ ರಜವೆಲ್ಲ ಭಾರತ ಪ್ರವಾಸಕ್ಕೆ ಬೇಕಲ್ಲ? ಮತ್ತೆ ಶಾಲೆಗೆ ರಜಾ, ಮಕ್ಕಳಿಗೆ ಹುಷಾರಿಲ್ಲ, ಇಂತವಕ್ಕೆಲ್ಲ ಚೂರುಪಾರು ಉಳಿಸಿಕೊಳ್ಳಬೇಕಲ್ಲ. ಪಾಪ ಈ ಅಮ್ಮಮಗನಿಗೆ ಭರ್ಜರಿ ಊಟ ಹಾಕುವ ಉಮೇದಿದ್ದರೂ ಉಪಾಯವಿಲ್ಲವಲ್ಲೇ ಎಂದು ನನ್ನಷ್ಟಕ್ಕೆ ಗೊಣಗಿಕೊಳ್ಳುತ್ತಾ ಮನೆಮಂದಿಯನ್ನೆಲ್ಲ ಅವರವರ ದಿನಚರಿಗೆ ಸಾಗಹಾಕಿದೆ.

ನಾನು ಸ್ನಾನ ಕಾರ್ಯಾದಿಗಳನ್ನು ಮುಗಿಸಿಕೊಂಡು ಬರುವಷ್ಟರಲ್ಲಿ ಪುಟ್ಟ ಗಣಪನ ತಿಂಡಿ ಸ್ಟಾಕ್ ಖಾಲಿಯಾಗಿ ಹೋಗಿತ್ತು. ಲಗುಬಗೆಯಲ್ಲಿ ಬೇಲಿಯ ದಾಸವಾಳಗಳನ್ನೆಲ್ಲ ಕೊಯ್ದು ಹೂಮುಡಿಸಿ ಸಿಂಗರಿಸಿ, ದೀಪ ಹಚ್ಚಿಟ್ಟು ಹೇಳಿದೆ "ಅಮ್ಮ ಮಗ ಇಬ್ಬರೂ ಸಂಜೆವರೆಗೆ ಇಲ್ಲೇ ಸಮಾಧಾನದಲ್ಲಿ ಕೂತಿರಿ. ಈಗ ತುಪ್ಪ ಸಕ್ಕರೆ, ಹಾಲು ಕೊಡುತ್ತೇನೆ, ಎಷ್ಟು ಬೇಕೋ ಪಟ್ಟಾಗಿ ಹೊಡೆದುಬಿಡಿ. ಎಲ್ಲ ಗೊತ್ತಿರುವುದೇ ಸೈ. ನಾ ಬರುವುದರೊಳಗೆ ಹಸಿವೆಯಾದರೆ ಫ್ರಿಜ್ನಲ್ಲಿ, ಕಪಾಟುಗಳಲ್ಲಿ ಹುಡುಕಿಕೊಂಡು ತಿನ್ನಿ. ಹಾಗೆ ಒಂದು ಸಣ್ಣ ನಿದ್ದೆ ತೆಗೆಯಿರಿ. ಬೋರಾದರೆ ಸಾಕಷ್ಟು ಪುಸ್ತಕಗಳಿವೆ, ಟೀವಿಯಿದೆ ಆಯ್ತಾ." ಎನ್ನುತ್ತಾ ಮತ್ತೊಂದಿಷ್ಟು ಹಾಲು, ಸಕ್ಕರೆ ಸುರಿದುಕೊಟ್ಟೆ. ಅಮ್ಮ ಮಗ ಸೊರ ಸೊರ ಹಾಲು ಸುರಿಯುವ ಶಬ್ದ ಕೇಳಿಸುತ್ತಿದ್ದಂತೆ ಗ್ಯಾರೇಜ್ ಡೋರ್ ಹಾಕಿಕೊಂಡ ಶಬ್ದವೂ ಆಯಿತು.

ಕೆಲಸಕ್ಕೆ ಬಂದರೆ ಇವರಿಗೆಲ್ಲ ಹೇಗೆ ಹೇಳುವುದು ಮನೆಯಲ್ಲಿ ಗಣಪ ಕಾಯುತ್ತಿದ್ದಾನೆ ಬೇಗ ಹೋಗಬೇಕು, ಕನಿಷ್ಠಪಕ್ಷ ಮೋದಕ ಪಂಚಕಜ್ಜಾಯವನ್ನಾದರೂ ಬಡಿಸಬೇಕು ಎಂದು? ಅಷ್ಟಷ್ಟು ಹೊತ್ತಿಗೆ ಪಾಪ ಅವನಿಗೆ ಎಷ್ಟು ಹಸಿವೆಯೋ ಎನ್ನಿಸುತ್ತಿತ್ತು. ನಾನು ಬರೀ ಸೊಪ್ಪುಸದೆ ಕೊಂಡು ತಿಂದರೂ ಯಾಕೋ ಗಿಲ್ಟಿ. ಕಂಡವರಿಗೆಲ್ಲ 'ಐ ನೀಡ್ ಟು ಗೋ ಅರ್ಲೀ, ಐ ಹ್ಯಾವ್ ಸ್ಪೆಷಲ್ ಗೆಸ್ಟ್ ಅಟ್ ಹೋಂ' ಎನ್ನುತ್ತಾ ತಲೆತಿನ್ನುವವರನ್ನೆಲ್ಲ ಸಾಗಹಾಕುತ್ತ ಹೇಗೋ ಸಂಜೆವರೆಗೆ ಕೆಲಸ ಮುಗಿಸಿ ಮಕ್ಕಳನ್ನು ಕರೆದುಕೊಂಡು ಮನೆಗೆ ಹೋದೆ. ಗಣಪ ಬಂದು ಕೂತಿದ್ದನ್ನು ಕಂಡು ಮಕ್ಕಳಿಗೋ ಖುಷಿಯೋ ಖುಷಿ. ಆದರೆ ಸ್ನಾನ ಮಾಡುವುದು ಮಾತ್ರ ಬೇಡ.

ಕೊನೆಗೂ ಗಣಪನನ್ನು ಅರಿಶಿಣ ಕುಂಕುಮ ಹೂ ಹಚ್ಚಿ ಸಿಂಗಾರ ಮಾಡಬೇಕು ಎಂದಾದಲ್ಲಿ ಸ್ನಾನ ಮಾಡಲೇಬೇಕು ಎಂದಿದ್ದಕ್ಕೆ ಬಗ್ಗಿದವು ಅವು. ಜೊತೆಗೆ ಹೂರಣಕ್ಕೂ ಹೆಲ್ಪ್ ಮಾಡಲು ಹವಣಿಕೆ. ಗಣಪನಿಗೂ ನೀನು ಸ್ನಾನ ಮಾಡದಿದ್ದರೆ ಪೂಜೆಯಿಲ್ಲ ಆರತಿಯಿಲ್ಲ ಅಷ್ಟೇ ಎಂದು ಸಣ್ಣಗೆ ಗದರಿಸಿದೆ. ಗಣಪನಿಗೆ ಸ್ನಾನ ಮಾಡಿಸಿ, ಹೂ, ಅಲಂಕಾರ ಮಾಡುವ ಇವುಗಳನ್ನು ಕಂಡು ಅವನಿಗೂ ಖುಷಿ. ನೋಡೇ ಇಲ್ಲೇ ಒಂಚೂರು ಎಂದು ಅವರಪ್ಪ ಕೂಗುಹಾಕಿದ ಹೊಡೆತಕ್ಕೆ ನಾ ಬಂದು ನೋಡುವಷ್ಟರಲ್ಲಿ ಗೌರಮ್ಮನಂತೂ ಅರಿಶಿಣ ಕುಂಕುಮದಲ್ಲಿ ಮುಚ್ಚಿಹೋಗಿದ್ದಾಳೆ. ಅಲ್ಲೆಲ್ಲ ಚೊಕ್ಕಟಗೊಳಿಸಲು ನೋಡಿದರೆ ಅವಳೇ ಅಂದಳು, ಇರಲಿ ಬಿಡು ಇದೊಂಥರ ಚೆನ್ನಾಗಿದೆ, ಮಕ್ಕಳಲ್ಲವೇ ಹೇಗಾದರೂ ಅಲಂಕಾರ ಮಾಡಲಿ ಬಿಡು. ಅಷ್ಟಂದಿದ್ದೆ ಸಾಕಾಯಿತು ಅವುಗಳಿಗೂ.

ಗಣಪ ಈಗ ದಾಸವಾಳ, ಗುಲಾಬಿ, ರಜನೀಗಂಧ, ಗ್ಲಡಿಯೋಲಾಸ್ ಜೊತೆಗೆ ಮನೆಯಲ್ಲೇ ಬೆಳೆದ ಟೊಮೆಟೋಗಳಿಂದಲೂ ಅಲಂಕೃತಗೊಂಡಿದ್ದಾನೆ. ಮಗಳ ಪುಟ್ಟ ಕೈಗಳಲ್ಲಿ ಹಲವಾರು ಅಕೃತಿಗಳಲ್ಲಿ ಮೂಡಿದ ಮೋದಕಗಳು ಗಣಪನಷ್ಟೇ ಮುದ್ದಾಗಿ ಎದುರಿಗೆ ಕೂತಿವೆ. ಪಾಪ ಬೆಳಗಿಂದ ಬರೀ ಹಾಲುಸುರಿಯುತ್ತ ಕೂತ ಅವನೋ ಪುರುಸೊತ್ತಿಲ್ಲದಂತೆ ಕಬಳಿಸುತ್ತಿದ್ದಾನೆ. ಅಂತೂ ಮೋದಕ ಬಿಸಿಯನ್ನ, ಹಾಲು ತಿಂದ ತೃಪ್ತಿಯಲ್ಲಿ ಗೌರಮ್ಮನಿಗೂ ಅವಳ ಮಗನಿಗೂ ಕಣ್ಣೆಳೆಯುತ್ತಿದೆ. ನಾನು ಮಕ್ಕಳಿಗೆ ಗಲಾಟೆ ಮಾಡಬೇಡಿ, ಪಾಪ ಸುಸ್ತಾಗಿದೆ ಎಷ್ಟೆಲ್ಲಾ ದೂರದಿಂದ ಬಂದು ಸಂಜೆತನಕ ಕಾದು ಬೇರೆ ಕುಳಿತಿದ್ದರು ಎನ್ನುತ್ತೇನೆ. ಇನ್ನೆರಡು ದಿನ ಜಾಸ್ತಿ ಇದ್ದು ವೀಕೆಂಡ್ ಮುಗಿಸಿಕೊಂಡು ಹೋಗುವಿರಾದರೆ ಕರಜಿಕಾಯಿ, ಪಾಯಸಗಳನ್ನು ಮಾಡಿಕೊಡುತ್ತೇನೆ. ಅಲ್ಲದೆ ಮುಂದಿನ ವರುಷ ಸ್ವಲ್ಪ ಅಡ್ಜಸ್ಟ್ ಮಾಡಿಕೊಂಡು ವೀಕೆಂಡಿಗೆ ಬನ್ನಿ, ಹೀಗೆ ವೀಕ್ ಡೆ ಬಂದರೆ ನನಗೂ ಗಡಿಬಿಡಿ, ನಿಮಗೂ ಪಾಪ ಅರೆಹೊಟ್ಟೆ ಎಂದು ಡೀಲ್ ಕುದುರಿಸಲು ನೋಡುತ್ತೇನೆ. ನಿದ್ದೆ ಅಮಲಲ್ಲಿ ಹೂಂ ಖಂಡಿತ ಎಂದು ಅವರೂ ಪ್ರಾಮಿಸ್ ಮಾಡಿದ್ದಾರೆ.

ಇಲ್ಲಿನ ಹಬ್ಬಗಳೆಂದರೆ ಒಂದೋ ಅವರವರ ಮನೆಯಲ್ಲಿ ಹೇಗೆ ಬೇಕೋ ಹಾಗೆ. ಇಲ್ಲವೇ ಬಂಧು ಬಳಗ, ಗೆಳೆಯರು, ಊರವರು, ರಾಜ್ಯದವರು, ದೇಶದವರು, ಎಲ್ದೆಲ್ಲ ಒಟ್ಟಾಗಿ ಎಲ್ಲರಿಗೂ ಅನುಕೂಲಕರವಾದ ಒಂದು ಶನಿವಾರ ಹಬ್ಬವಾಚರಿಸುವುದು. ನಮಗೆಲ್ಲ ಎಲ್ಲ ಒಟ್ಟು ಸೇರಿದಾಗಲೇ ಹಬ್ಬ, ಅದು ಇಂಥದ್ದೇ ದಿನವಾಗಬೇಕೆಂದಿಲ್ಲ. ಇಲ್ಲಿನ ಬಹಳಷ್ಟು ಜನರು ಪುಟ್ಟ ಮಣ್ಣಿನ ಗಣಪತಿಯನ್ನು ಮನೆಗೆ ಕರೆತಂದು 2-3 ದಿನ ಕೂಡಿಸಿ ಆಮೇಲೆ ಬಕೆಟಿನ ನೀರಿನಲ್ಲಿ ಮುಳುಗಿಸಿ ಮೋರಯಾ ಮಾಡಿಬಿಡುತ್ತಾರೆ. ನನಗೇಕೋ ಪಾಪಚ್ಚಿ ಮರಿಯನ್ನು ಉಸಿರುಗಟ್ಟಿಸಿ ಕೈಲಾಸಕ್ಕೆ ಕಳುಹಿಸುವ ವಿಧಾನ ಎಂದೂ ಒಗ್ಗಿಬಂದಿಲ್ಲ.

ಸ್ನೇಹಿತರೊಬ್ಬರು ಫೋನಾಯಿಸಿ ಅವ್ರ ಸ್ನೇಹಿತರೊಬ್ಬರ ಮನೆಗೆ ಗಣಪತಿ ಪೂಜೆಗೆ ಹೋದ ಸಂಭ್ರಮವನ್ನು ವಿವರಿಸುತ್ತಿದ್ದರು. ಅಲ್ಲಿ ಬಕೆಟಿನಲ್ಲಿ ಮುಳುಗಿದ ವಿನಾಯಕನಿಗೇಕೋ ಅವರ್ಯಾರೂ ಯಾವ ವಿನಾಯಿತಿಯೂ ಕೊಟ್ಟಂತೆ ಕಾಣಲಿಲ್ಲವಂತೆ. ಕರಗಲು ಒಪ್ಪದ ಅವನತಲೆಮೇಲೆ ಬಿಸಿನೀರು ಸುರಿಯಿರಿ ಎಂದು ಬೊಂಬಾಟ್ ಸಲಹೆ ಕೊಟ್ಟರಂತೆ ನೆರೆದವರಲ್ಲೊಬ್ಬರು. ಅವರು ಹೇಳಿ ಮುಗಿಸುವ ಪುರುಸೊತ್ತಿಲ್ಲ ಇನ್ನೊಬ್ಬರು ಪಾತ್ರೆಯೊಂದರಲ್ಲಿ ಬಿಸಿನೀರು ಹಿಡಿದು ಬಂದೇಬಿಟ್ಟರಂತೆ. ಇಲ್ಲೇನು ಒಲೆಮೇಲೆ ನೀರಿಟ್ಟು ಕಾಸಬೇಕೆ ಬೇಸಬೇಕೆ, ನಲ್ಲಿಯ ಒಂದು ಕಿವಿ ಹಿಂಡಿದರೆ ತಣ್ನೀರು, ಇನ್ನೊಂದು ಕಿವಿ ಹಿಂಡಿದರೆ ಬಿಸಿನೀರು. ತಗೋ ಗಣಪನಿಗೆ ಬಿಸಿಹಂಡೆ ನೀರಿನ ಸ್ನಾನ. ಬರೀ ಬಿಸಿಯಾಗಿದ್ದರೆ ಸರಿಯಿತ್ತೇನೋ, ಮಧ್ಯೆ ಮಧ್ಯೆ ಉರಿಬಿಸಿ ನೀರನ್ನು ಎರಚೆರಚಿ ಅಂತೂ ಕರಗಿಸಿ ಕೈಲಾಸಕ್ಕೆ ಕಳಿಸಿದರಂತೆ. ಪಾಪ ಯಾಕೋ ಪುಟ್ಟ ತಮ್ಮಣ್ಣ ಮೈಮೇಲೆ ಗುಳ್ಳೆಗಳೆದ್ದು ಬೊಬ್ಬೆಹೊಡೆದು ಅಳುತ್ತ ಹೋದನೇನೋ ಅನ್ನಿಸಿ ಒಳಕೋಣೆಯಲ್ಲಿ ಗೊರೆಯುತ್ತಿದ್ದ ಗಣಪನ ಮೈಮೇಲೆನಾದರೂ ಸುಟ್ಟ ಗಾಯಗಳಾಗಿವೆಯೇ ನೋಡಿ ಬಂದೆ.

ಸುಖನಿದ್ರೆಯಲ್ಲಿದ್ದ ಅಮ್ಮ ಮಗ ಮತ್ತೊಂದೆರಡು ದಿನವಿದ್ದು ನಮ್ಮ ಜೊತೆಗೆ ಸೀರಿಯಲ್ಲೂ, ನೂಡಲ್ಸ್, ಎಲ್ಲ ತಿಂದು, ಪಾಯಸ ಮಾಡಿಕೊಟ್ಟರೆ, ಎಲ್ಲರ ಮನೆಯಲ್ಲೂ ತಿಂದು ಬೇಜಾರಾಗಿದೆ, ಚಪಾತಿ ಕೂರ್ಮ ಬಡಿಸು ಎಂದು ತಿಂದುಕೊಂಡು ಹೋಗಿದ್ದಾರೆ. ಜೊತೆಗೆ ಕೈಲಾಸದವರೆಲ್ಲ ಬರೀ ವಡೆ, ಚಕ್ಲಿ ಎಂದು ತಿಂದು ಬೋರಗಿರ್ತಾರೆ ಒಂದಿಷ್ಟು ಕಟ್ಟಿಕೊಡು ಎನ್ನುತ್ತಾ ಚಿಪ್ಸ್, ಸಾಲ್ಸ, ಪಾಸ್ತಾ, ಎಲ್ಲ ಹೇರಿಕೊಂಡು ಹೋಗಿದ್ದಾರೆ. ಜೊತೆಗೆ ಒಂದಿಷ್ಟು ಕರಜಿಕಾಯನ್ನು ತೆಗೆದುಕೊಂಡು ಹೋಗಲು ಮರೆಯಲಿಲ್ಲ ಎನ್ನಿ. ಹೇಗೂ ಎಲ್ಲ ಕಡೆ ಸುತ್ತಿ ಮತ್ತೆ ಸ್ವಲ್ಪ ದಿನಕ್ಕೆ ಇಲ್ಲಿಗೇ ಬರುತ್ತಾರಲ್ಲ. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ಯಾರು ಏನೇ ಮಾಡಿ ಬಡಿಸಿದರೂ ನಮ್ಮನೆ ಗೌರಮ್ಮನಿಗೆ ತುಪ್ಪಸಕ್ಕರೆಯೇ ಪ್ರೀತಿ, ಗಣಪನಿಗೆ ಹಾಲನ್ನ, ಮೋದಕವೇ ಪಂಚಪ್ರಾಣ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
If at all Ganesha chaturthi comes in the weekend, how it is celebrated in USA? Here is humor by Vaishali Hegde, America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more