ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಟ್ ಕೊಳ್ಳಲು ಬಂದೈತೆ ದುಬೈ ಪಾರ್ಟಿ

By * ಗೋಪಿನಾಥ ರಾವ್, ದುಬೈ
|
Google Oneindia Kannada News

(ಮುಂದುವರಿದಿದೆ...) ಬೆಳ್ತಂಗಡಿಯಲ್ಲಿದ್ದ ನನ್ನ ದೂರದ ಸಂಬಂಧಿ, ಹೆಚ್ಚು ಕಡಿಮೆ ನನ್ನದೇ ವಯಸ್ಸಾದರೂ ನನ್ನ ಚಿಕ್ಕಪ್ಪ ಆಗುವವ ಒಬ್ಬ ಪುಣ್ಯಾತ್ಮನ ನೆನಪಾಯಿತು. ಸಣ್ಣ ಪುಟ್ಟ ವಹಿವಾಟೇ ಆತನ ಉದ್ಯೋಗ. ಎಲ್ಲಾ ಕಡೆ ಪರಿಚಯ. ನನಗೊಂದು ಜೊತೆಯಾಯಿತು ಅಂತ ಅವನನ್ನು ಬರಹೇಳಿದೆ. ಖರ್ಚೆಲ್ಲ ನೋಡುತ್ತಾರೆ ಅನ್ನುವ ಭರವಸೆಯಿದ್ದರೆ ಅಂಥವರ ಜೊತೆ ಆತ ನರಕಕ್ಕೂ ಹೊರಡಲು ತಯಾರು. "ಈಗಲೇ ಹೊರಟೆ" ಅಂದವ ಮಧ್ಯಾಹ್ನವೇ ಪ್ರತ್ಯಕ್ಷನಾದ. "ಇಂತಹ ಕೆಲಸಕ್ಕೆ ಹೊರಡುವಾಗ ಹಿರಿಯರೂಂತ ಒಬ್ಬರು ಒಟ್ಟಿಗೆ ಬೇಕು.... ನನ್ನನ್ನು ಕರೆದು ಒಳ್ಳೇ ಕೆಲಸ ಮಾಡಿದೆ" ಹೀಗೆ ಹೇಳಿ ನನ್ನ ಬೆನ್ನು ಬೇರೆ ತಟ್ಟಿದ!

ಕಾರಲ್ಲಿ ಕುಳಿತೆವು. ಒಡೋಡಿ ಬಂದ ನನ್ನಾಕೆ "ಮಾವ, ಇವರು ಗೊತ್ತಲ್ಲ ನಿಮಗೆ, ಕಂಜೂಸು ಸ್ವಭಾವ. ಹಣ ಸ್ವಲ್ಪ ಜಾಸ್ತಿಯಾದ್ರೂ ಚಿಂತಿಲ್ಲ, ಒಳ್ಳೆ ಸೈಟು ಹುಡುಕಿ" ಅಂದಳು. "ಒಳ್ಳೆಯ ಸೈಟುಗಳನ್ನು ನೋಡಿ ಲಿಸ್ಟ್ ಮಾಡಿ ಕೊಡುವುದು ಮಾತ್ರ ನಮ್ಮಿಬ್ಬರ ಕೆಲಸ. ಅವುಗಳಲ್ಲಿ ಒಂದನ್ನು ಕೊನೆಗೆ ನೀನೇ ನಿರ್ಧರಿಸುವುದು" ಅಂದ ನಮ್ಮ ಖದೀಮ ಮಾವ! ನನ್ನಾಕೆಯ ಮುಖ ಇಷ್ಟಗಲವಾಯಿತು. ಅವಳ ಕೈಯಲ್ಲಿದ್ದ ಹೊಸ ಪಾರ್ಕರ್ ಪೆನ್ನು ಚಿಕ್ಕಪ್ಪನ ಕಿಸೆ ಸೇರಿತು. ನನಗೆ ಸಂಶಯ... ಹೆಂಗಸರನ್ನು ಇಷ್ಟು ಸುಲಭವಾಗಿ ಪಟಾಯಿಸುವ ಕಲೆ ನನ್ನದೇ ವಂಶದವನಾದ ಇವನಿಗೆಲ್ಲಿಂದ ಬಂತು?

ಬ್ರೋಕರ್, ಡೆವಲಪರ್, ಓನರ್ ಅಂತ ಜಾಹೀರಾತುಗಳನ್ನು ನೋಡಿ ಸಿಕ್ಕಲ್ಲೆಲ್ಲಾ ತಿರುಗಾಡಿದೆವು. ಮೂವತ್ತು - ನಲವತ್ತು ಲಕ್ಷಕ್ಕೆ ಮೇಲೇರದ ನಮ್ಮ ರೇಟು ಕೇಳಿ ಯಾರೂ ನಮ್ಮನ್ನು ಯಾರೂ ಕ್ಯಾರೇ ಅನ್ನಲಿಲ್ಲ. "ಇಲ್ಲೇ ನನ್ನ ಪರಿಚಯದ ಬ್ರೋಕರ್ ಇದ್ದಾನೆ. ಅವನನ್ನು ಕೇಳೋಣ" ಎಂದ ಚಿಕ್ಕಪ್ಪ. ಅಲ್ಲಿಗೆ ಹೋದೆವು; ಅವನ ಆಫೀಸು ಬೆಂಗಳೂರಿನಲ್ಲಿ ಚದರಡಿ ಜಾಗಕ್ಕೆ ಎಷ್ಟು ಬೆಲೆಯಿದೆ ಎಂದು ತೋರಿಸುವುದಕ್ಕೇನೋ ಎಂಬಂತಿತ್ತು. ಮೂರು ಸಣ್ಣ ಸ್ಟೂಲುಗಳನ್ನು ನಾಲ್ಕು ಬೈ ನಾಲ್ಕು ಚದರಡಿ ಜಾಗದಲ್ಲಿಟ್ಟಿದ್ದ. ನಾನು ಕೂತರೆ ಉಳಿದ ಜಾಗದಲ್ಲಿ ಚಿಕ್ಕಪ್ಪ ಕಷ್ಟದಲ್ಲಿ ಅರ್ಧ ಅಂಡೂರಬಹುದು ಅಷ್ಟೆ. ಚಿಕ್ಕಪ್ಪ ಕೂಡ ಸ್ಟೂಲು ಸರಿಸಿ ಸರಿಯಾಗಿ ಕೂತರೆ ಬ್ರೋಕರ್ ತನ್ನ ಸ್ಟೂಲು ಬಿಟ್ಟು ಆಫೀಸಿನ ಹೊರಗೆ ನಿಲ್ಲಬೇಕು.

ಸುಮಾರು ಐವತ್ತರ ಹರೆಯದ ಧಡೂತಿ ಆಸಾಮಿ ಪಾನ್ ಸವಿಯುತ್ತ ಅಲ್ಲೇ ಹೊರಗೆ ನಿಂತಿದ್ದ. "ನಮಸ್ಕಾರ ಶಾಮಣ್ಣ. ಇವರು ನಮ್ಮ ಸಂಬಂಧ. ದುಬೈ ಪಾರ್ಟಿ" ಎಂದ ನನ್ನ ಚಿಕ್ಕಪ್ಪ. "ನಮಸ್ಕಾರ ಸಾರ್. ಬನ್ನಿ ಬನ್ನಿ" ಅಂದ ಆತ. ಚಿಕ್ಕಪ್ಪ ನನ್ನನ್ನು ದುಬೈ ಪಾರ್ಟಿ ಅಂತ ಪರಿಚಯ ಮಾಡಿಸಿದ್ದು ನನಗೆ ಸ್ವಲ್ಪವೂ ಸರಿ ಕಾಣಲಿಲ್ಲ. ಶಾಮಣ್ಣ ಪಾನ್ ಉಗಿಯಲು ಆಚೆಗೆ ಹೋದಾಗ ಚಿಕ್ಕಪ್ಪನಲ್ಲಿ "ದುಬೈ ಸುದ್ದಿ ಯಾಕೆ ಹೇಳಿದ್ದು? ಈಗ ಬ್ರೋಕರ್ ಎಲ್ಲ ಸೈಟಿಗೂ ದುಬೈ ಬೆಲೆ ಹೇಳ್ತಾನೆ" ಎಂದೆ ನಾನು. "ಸುಮ್ನಿರೋ, ಅವನು ಮೊದಲು ಜಾಗ ತೋರಿಸಲಿ, ದುಬೈ ಅನ್ನದಿದ್ದರೆ ಈ ನನ್ಮಕ್ಕಳ ಬೊಜ್ಜುದೇಹ ಕುರ್ಚಿ ಬಿಟ್ಟೇಳುವುದೇ ಇಲ್ಲ. ರೇಟು ಅವ ಎಷ್ಟೂ ಸೇರಿಸಿ ಹೇಳಲಿ, ಕೊಡೋದು ಬಿಡೋದು ನಾವು ತಾನೆ" ಅಂದ ಚಿಕ್ಕಪ್ಪ. ಸುಮ್ಮನಾದೆ ನಾನು.

ಪಾನ್ ಉಗಿದು ಗಂಟಲು ಸರಿಪಡಿಸಿಕೊಳ್ಳುತ್ತ ಬಂದ ಶಾಮಣ್ಣ. ಮೊಬೈಲು ಒತ್ತಿ "ರಾಜಾ ಕೆಳಗೆ ಬಾರೋ.. ಪಾರ್ಟಿ ಬಂದಿದೆ, ಒಂದು ರೌಂಡ್ ಸೈಟ್ ತೋರಿಸ್ಕೊಂಡ್ ಬಾ" ಎಂದ. ಎಲ್ಲಿಂದಲೋ ನಿಮಿಷದಲ್ಲಿ ಹಾಜರಾದ ರಾಜನನ್ನು ತೋರಿಸಿ "ಸಾರ್...ನನ್ನ ಅಸಿಸ್ಟೆಂಟು... ಹೋಗಿಬನ್ನಿ" ಅಂದ ಶಾಮಣ್ಣ. ರಾಜ "ಹೋಗುವಾ?" ಅನ್ನುತ್ತ ಯುದ್ಧಕ್ಕೆ ತೆರಳುವ ಯೋಧ ಆಯುಧಗಳನ್ನು ಎತ್ತಿಕೊಳ್ಳುವ ಹಾಗೆ ಡ್ರಾವರಿನಲ್ಲಿದ್ದ ಮೂರ್ನಾಲ್ಕು ಮೊಬೈಲು ಎತ್ತಿಕೊಂಡು ಹೊರಟ ಅವನೊಂದಿಗೆ ಕಾರಿನೆಡೆಗೆ ನಡೆದೆವು. "ಇದಾ ಕಾರು?! ... ಬೇಡ, ನಮ್ಮ ಕಾರಲ್ಲೇ ಹೋಗುವ... ಎಂದ ರಾಜ ನನ್ನ ಹಳೇ ಮಾರುತಿ ಕಾರನ್ನು ನೋಡಿ.

English summary
Buying sites in Bangalore is dream of everyone. But, prevailing rates and demand for it never makes the dream come true, even for an NRI. A humor by Gopinath Rao, Dubai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X