ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪದಿಂದ ದೀಪ ಹಚ್ಚಿ, ಪ್ರೀತಿಯಿಂದ ಪ್ರೀತಿ ಹಂಚಿ

|
Google Oneindia Kannada News

Deepavali, festival of lights across the globe
ದೀಪಾವಳಿಯೆಂದರೆ ಅಜ್ಞಾನದ ಗಾಢಾಂಧಕಾರವನ್ನು ಕಳೆದು ಜ್ಞಾನದ ಜ್ಯೋತಿ ಬೆಳಗಿಸುವ ಬೆಳಕಿನ ಹಬ್ಬ. ಮನೆ, ಮನ ಬೆಳಗಿ ಹರುಷದ ಹೊನಲು ಉಕ್ಕಿದರೆ ಜಗವೂ ಬೆಳಗಿದಂತೆ. ಈ ಬೆಳಕಿನ ಹಬ್ಬವನ್ನು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಅನೇಕ ರಾಷ್ಟ್ರಗಳಲ್ಲಿ ವಿಶಿಷ್ಟಮಯವಾಗಿ ಆಚರಿಸಲಾಗುತ್ತದೆ. ಯಾವ ದೇಶದಲ್ಲಿ ಬೆಳಕಿನ ಹಬ್ಬವನ್ನು ಹೇಗೆ ಆಚರಿಸಲಾಗುತ್ತದೆ, ಸಿಂಗಪುರದ ವಾಣಿ ರಾಮದಾಸ್ ತಿಳಿಸಿಕೊಟ್ಟಿದ್ದಾರೆ.

ಬೆಳಕಿನ ಹಬ್ಬದ ಸಂಭ್ರಮ ಹುರುಪು ಎಲ್ಲೆಲ್ಲೂ. ಭಾರತದ ಒ೦ದು ವೈಶಿಷ್ಠ್ಯವೆ೦ದರೆ ವರ್ಷಪೂರ ಬ೦ದು ಹೋಗುವ ಹಬ್ಬಗಳ ಸಾಲು. ಬಡವ-ಬಲ್ಲಿದ, ಜಾತಿ-ಭೇದವಿಲ್ಲದೆ ಸಮಾಜದ ಎಲ್ಲ ವರ್ಗದವರೂ ಅವರವರ ಅನುಕೂಲತೆಗೆ ತಕ್ಕಂತೆ ಆಚರಿಸುವ ಹಬ್ಬಗಳಲ್ಲಿ ದೀಪಾವಳಿಯದೊ೦ದು ವೈಶಿಷ್ಟ್ಯ. ದೀಪಾವಳಿ ಎಂದರೆ ಪಟಾಕಿ ಮತ್ತು ಹಣತೆಗಳ ಸಾಲಷ್ಟೇ ಅಲ್ಲ. ಸಂಭ್ರಮದ ಹಿಂದೆ ರೈತರು ಜಾನುವಾರುಗಳಿಗೆ ಪೂಜಿಸುವ, ಅನ್ನ ನೀಡುವ ಹೊಲಗಳಿಗೆ ನಮಿಸುವ ಸಂಪ್ರದಾಯವೂ ಅಲ್ಲಿ ಅಡಗಿದೆ.

ದೀಪಾವಳಿ ಶರದೃತುವಿನ ಹಬ್ಬ - ಆಶ್ವಯುಜ ಮಾಸದ ಕೊನೆ ಹಾಗೂ ಕಾರ್ತಿಕ ಮಾಸದ ಆದಿಯಲ್ಲಿ ಇದರ ಆಚರಣೆ, ಹಗಲು ಕಡಿಮೆಯಾಗಿ ರಾತ್ರಿ ವಿಸ್ತರಿಸುವ ಕಾಲವಿದು. ಸ೦ಜೆಯ ವೇಳೆ ಕತ್ತಲನ್ನು ಚದರಿಸಿ ಬೆಳಕನ್ನು ಹಬ್ಬಿಸುವ ಹಣತೆಗಳನ್ನು ಮನೆ ಮನೆಗಳಲ್ಲೂ ಮು೦ಭಾಗದಲ್ಲಿ ಹಚ್ಚಿಡಲು ತೊಡಗುತ್ತಾರೆ.

ಪ್ರತಿಯೊಂದು ಹಬ್ಬವೂ ತನ್ನದೇ ಆದ ಸಂದೇಶವನ್ನು ಸಾರುತ್ತದೆ. ದೀಪಾವಳಿ ದೀಪಗಳ ಆವಳಿ. ದೀಪಾವಳಿಯ ಸಂಕೇತ ಅಜ್ಞಾನದ ಕತ್ತಲನು ನೀಗಿಸಿ, ಸುಜ್ಞಾನದ ಬೆಳಕು ಎಲ್ಲೆಡೆ ಚೆಲ್ಲಲಿ ಎಂದು. ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನ್ನು ಎಂಬ ಕವಿವಾಣಿ ದೀಪಾವಳಿ ಹಬ್ಬಕ್ಕೆ ಅರ್ಥವತ್ತಾಗಿದೆ. ಮಕ್ಕಳಿಗೆ ಪಟಾಕಿ, ಹಿರಿಯರಿಗೆ ನವೋಲ್ಲಾಸ, ನವ ದಂಪತಿಗಳಿಗೆ ಮೊದಲ ದೀವಳಿಗೆ ಹೊಸತು ಸಂಭ್ರಮ. ದೀಪಾವಳಿಗೆ ಅಳಿಯ೦ದಿರು ಮಾವನ ಮನೆಗೆ ಬರುವ ರೂಢಿ ಇತ್ತು. ರಾಯರು ಬ೦ದರು ಮಾವನ ಮನೆಗೆ, ರಾತ್ರಿಯಾಗಿತ್ತು! ಪದುಮಳು ಒಳಗಿಲ್ಲ, ಬಳೆಗಳ ದನಿಯಿಲ್ಲ...ಕಾಲ ಬದಲಾಗಿದೆ, ಕೆ.ಎಸ್.ನ ಕವನ ಮಾತ್ರ ಅಮರವಾಗಿ ನಿಂತಿದೆ.

ಎಲ್ಲರ ಮನೆ, ಮನದಲ್ಲೂ ಬೆಳಕು ಚೆಲ್ಲುವ. ಜಯ, ಸಮೃದ್ಧಿ, ಅಭಿವೃದ್ಧಿಗಳ ಬೆಳಕಿನ ಹಬ್ಬವನ್ನು ಕರ್ನಾಟಕದ ಬೇರೆ ಬೇರೆ ಪ್ರಾಂತ್ಯಗಳಲಿ ದೀಪಾವಳಿ ಆಚರಿಸುವ ಪರಿ ಹೀಗಿದೆ. ಮನೆ ಮನೆಗೂ ದೀಪದ ಬೆಳಕು ಹಂಚುವ ಮಲೆನಾಡಿನ ಅಂಟಿಗೆ-ಪಿಂಟಿಗೆ' ಅಥವಾ ದೀಪ್ ದೀಪೋಳ್ಗೆ, ಧಾರವಾಡ, ಗುಲ್ಬರ್ಗ, ಬೀದರ್, ರಾಯಚೂರು ಜಿಲ್ಲೆಗಳಲ್ಲಿ ದೀಪದ ಹಬ್ಬದ ಸುತ್ತಮುತ್ತ ಸಗಣಿಯಿಂದ ಪಾಂಡವರ ಬೊಂಬೆಗಳನ್ನು ಮಾಡಿ ಪೂಜಿಸುವ ಸಂಪ್ರದಾಯವಿದೆ. ತುಳುನಾಡಿನಲ್ಲಿ ದೀಪಾವಳಿಯ ಬಲಿಪಾಡ್ಯಮಿಯಂದು ಬಲಿ ಚಕ್ರವರ್ತಿಗೆ ಪೂಜೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನರಕ ಚತುರ್ದಶಿಯಂದು ಕದಿಯುವುದಕ್ಕೆ ಮುಕ್ತ ಅವಕಾಶ! ಉತ್ತರ ಕನ್ನಡದ ಹಳ್ಳಿಗಳ ದೀಪಾವಳಿ ಸ್ಪೆಷಲ್ ಬೂರೆಕಳವು ಅಥವಾ ಬೂರ್‌ಗಳವು. ಬೇಕಾದ್ದನ್ನು ಕದಿ ಎಂಬುದು ಯಾರಿಗೆ ಪ್ರಿಯವಲ್ಲ ಹೇಳಿ! ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿನ ಬುಡಕಟ್ಟು ಜನಾಂಗದಲಿ ತಿಂಗಳಿಡಿ ದೀಪಾವಳಿ ಆಚರಣೆ ಇಂದಿಗೂ ಚಾಲ್ತಿಯಲ್ಲಿದೆ.

ಹೀಗೆ ರಾಜ್ಯದ ವಿವಿಧ ಭಾಗಗಳಲ್ಲಿ ದೀಪಾವಳಿ ಸಂಭ್ರಮವು ವೈವಿಧ್ಯವಾಗಿ ಆಚರಿಸಲ್ಪಡುತ್ತದೆ. ಭಾರತೀಯರು ಹೆಚ್ಚಾಗಿ ನೆಲೆಸಿರುವ ಸಿಂಗಪುರ, ಟ್ರಿನಿಡಾಡ್, ಟೊಬಾಗೋ, ಮಲೇಶಿಯಾಗಳಲ್ಲಿ ಕೂಡ ದೀಪಾವಳಿ ದೊಡ್ಡ ಹಬ್ಬ. ಸಿಂಗಪುರದಲ್ಲಿ ದೀಪಾವಳಿ ರಜಾದಿನ. ಇಲ್ಲಿ ನೆಲೆಸಿರುವ ಭಾರತೀಯರು ಹೆಚ್ಚಾಗಿ ತಮಿಳುನಾಡಿನಿಂದ ವಲಸೆ ಬಂದವರು. ಸಿಂಗಪುರ ಹಾಗೂ ಮಲೇಷಿಯಾದಲಿ ನೆಲೆಸಿರುವ ಭಾರತೀಯರಿಗೆ ದೀಪಾವಳಿ "ಹರಿ ಹಬ್ಬ"- ಹರಿ(ಶುಭ) ದೀಪಾವಳಿ. ತರಾವರಿಯ ಬೆಣ್ಣೆಬಿಸ್ಕತ್ತು ಹಾಗೂ ಚಕ್ಕುಲಿ ದೀಪಾವಳಿಯ ವಿಶೇಷ. ಸ್ನಾನಾನಂತರ ಮನೆಯ ಹಿರಿಯರಿಗೆ, ಮಕ್ಕಳಿಗೆ ಸಿಹಿ ಉಣಿಸಿ, ದೇಗುಲಕ್ಕೆ ಭೇಟಿ ನೀಡುವುದು ಸಂಪ್ರದಾಯ. ಟ್ರಿನಿಡಾಡ್ ನಲ್ಲಿ ಅತೀ ಹೆಚ್ಚು ಸಂಖ್ಯೆಯಲಿ ಭಾರತೀಯರು ನೆಲೆಸಿದ್ದಾರೆ. ಇಲ್ಲಿಯೂ ಕೂಡ ದೀಪಾವಳಿಯಂದು ಸಾರ್ವಜನಿಕ ರಜೆ. ವಿವಿಧ ಸಾಂಪ್ರದಾಯಿಕ ರೀತಿಯಲಿ ದೀಪಾವಳಿ ಆಚರಿಸಲ್ಪಡುತ್ತದೆ.

ಬೆಳಕಿನ ಹಬ್ಬ, Festival of Lights. ನಾಮ ಒಂದೇ ಆದರೂ ರೂಪ ಹಲವು. ಸಂಕೇತ ಮಾತ್ರ ನಮ್ಮನ್ನು ನಾವು ತಿದ್ದಿಕೊಂಡು ಮುನ್ನಡೆಯಬೇಕು. ವಿವಿಧ ದೇಶಗಳ ಆಚರಿಪ ಬೆಳಕಿನ ಹಬ್ಬದ ಬಗ್ಗೆ ಬನ್ನಿ ಸ್ವಲ್ಪ ಅರಿಯೋಣ.

ನೇಪಾಳ : ನೇಪಾಳದಲ್ಲಿ ತಿಹರ್ ಅಥವಾ ಸ್ವಂತಿ ಎಂದು ಕರೆಸಿಕೊಳ್ಳುವ ಬೆಳಕಿನ ಹಬ್ಬ ಐದು ದಿನಗಳ ಮಟ್ಟಿಗೆ ಆಚರಿಸಲ್ಪಡುತ್ತದೆ. ಮೊದಲ ದಿನ ಕಾಗ್ ತಿಹರ್(ಕಾಗೆ ಪೂಜೆ). ಎರಡನೆಯ ದಿನ ಕುಕರ್ ತಿಹರ್(ನಾಯಿ ಪೂಜೆ). ಮೂರನೆಯ ದಿನ ಲಕುಮಿ, ನಾಲ್ಕನೆಯ ದಿನ ಹಸು ಹಾಗು ಐದನೆಯ ದಿನ ಭಾಯ್‌ಟಿಕ್(ಅಣ್ಣ-ತಂಗಿಯರ ಹಬ್ಬ).

ಇರಾನ್ ಜಶ್ನ್ ಏ ಸದೇಹ್ : ಇದು ಇರಾನಿನಲ್ಲಿ ಆಚರಿಸಲ್ಪಡುವ ಬೆಳಕಿನ ಹಬ್ಬ. ಹಬ್ಬದ ಹಿಂದಿನ ದಿನ ದೊಡ್ಡದಾಗಿ ಬೆಂಕಿ ಹಾಕಿ ಮರುದಿನ ಪ್ರಾತಃಕಾಲ ಪ್ರತಿಯೊಂದು ಮನೆಯಿಂದ ಮಹಿಳೆಯೊಬ್ಬಳು ಬಂದು ಕೆಂಡವನ್ನು ಒಯ್ದು ಪೂಜಿಸಿ ಸಂಭ್ರಮಿಸುತ್ತಾರೆ. ಪಾರ್ಸಿಗಳು ಅಗ್ನಿಯ ಆರಾಧಕರು.

ಯಹೂದಿ : ಹನುಕ್ಕಾಹ್ ಇದು ಯಹೂದಿಯರ ಹಬ್ಬ. ಮೆಕ್ಕಾಬೀಸ್ ಹಾಗೂ ಸೈರಿಯನ್ನರ ನಡುವೆ ನಡೆದ ಯುದ್ದದಲಿ ಯಹೂದಿಗಳಿಗೆ ಜಯ ದೊರಕಿತು. ಯಹೂದಿಗಳು ತಮ್ಮ ಪವಿತ್ರ ದೇಗುಲಕ್ಕೆ ತೆರಳಿದಾಗ ಅಲ್ಲಿಯ ಪವಿತ್ರ ದೀಪ ನಂದಿ ಹೋಗುವ ಸ್ಥಿತಿಯಲ್ಲಿತ್ತು. ಯಹೂದಿಯೊಬ್ಬ ಹೊರಗೆ ಹೋಗಿ ಎಣ್ಣೆ ತರುವವರೆಗೂ ಸುಮಾರು 8 ದಿನಗಳ ಕಾಲ ಆ ದೀಪ ನಂದದಂತೆ ದೇವಸ್ಥಾನದಲ್ಲಿದ್ದ ಯಹೂದಿಗಳು ನೋಡಿಕೊಂಡರು. ಇದನ್ನು ಯಹೂದಿಗಳು ಬೆಳಕಿನ ಹಬ್ಬವಾಗಿ ಆಚರಿಸುತ್ತಾರೆ.

ಸ್ವೀಡನ್ : ಸ್ವೀಡನ್ ಸಂತ ಲೂಸಿಯಾ ದಿನ. ಡಿಸೆಂಬರ್ 13 ಅತೀ ಉದ್ದನೆಯ ರಾತ್ರಿ ಸ್ವೀಡನ್ನಿನಲ್ಲಿ. ಅಂದು ಸೂರ್ಯನ ಕಿರಣ ಬರೀ ಕೆಲವು ಗಂಟೆಗಳು ಮಾತ್ರ. ಅಂದಿನ ರಾತ್ರಿ ಮನೆಯ ಹಿರಿಮಗಳು ಬಿಳಿಯ ನಿಲುವಂಗಿ ಧರಿಸಿ, ತಲೆಗೆ ಕೆಂಪು ಬಟ್ಟೆಯಿಂದ ಮಾಡಿದ ಸಿಂಬಿಯನ್ನು ತಲೆಯ ಮೇಲೆ ಇಟ್ಟುಕೊಂಡು ತಟ್ಟೆಯಲಿ ಮೋಂಬತ್ತಿಯನು ಹಚ್ಚಿಟ್ಟುಕೊಂಡು ಅದನು ತಲೆಯ ಮೇಲೆ ಹೊತ್ತು ಮನೆಯ ಅಂಗಳದಲಿ ಕೆಲವು ಮೋಂಬತ್ತಿಯ ದೀಪಗಳನ್ನು ಹಚ್ಚುತ್ತಾಳೆ.

ಥೈಲಾಂಡಿನಲಿ ಲೊಯಿ ಕ್ರಥೊನ್ಗ್ : ಲೊಯ್ ಎಂದರೆ ತೇಲುವುದು, ಕ್ರಥೊಂಗ್ ಕಮಲದ ಹೂವಿನ ತರಹ ಬಾಳ್ ಎಲೆಯಲಿ ಮಾಡಿದ್ದು. ನಮ್ಮಲಿ ನೀರಿನಲಿ ದೀಪ ಬಿಡುವ ಹಾಗೆ ಅವರು ಆ ಬಾಳೆ ಎಲೆಯಲಿ ಮಾಡಿದ ಒಳಗೆ ಕ್ಯಾಂಡಲ್ ಇಟ್ಟು ನದಿ, ಕೆರೆಗಳಲಿ ತೇಲಿ ಬಿಡುತ್ತಾರೆ. ನೀರಿನ ದೇವತೆಗೆ ಕೃತಜ್ಞತೆ ಸಲ್ಲಿಪ ವಿಧಾನವಿದು. ನೀರಿನಲಿ ದೀಪಗಳು ತೇಲಿ ಹೋದಂತೆ ಕಷ್ಟಗಳು ಕೂಡ ತೇಲಿ ಹೋಗುವುದೆಂದು ಅಲ್ಲಿನವರ ನಂಬಿಕೆ.

ಈಜಿಪ್ಟ್ : ಕ್ರಿಸ್ಮಸ್ ಜನವರಿ 6 ಹಾಗು 7ರಂದು. ಇಲ್ಲಿ ಮನೆ ಮನೆಗೂ ಮೋಂಬತ್ತಿ ಹಂಚುವ ಪರಿಪಾಠ. ಕ್ರಿಸ್ತ ಹುಟ್ಟುವ ಸಮಯದಲ್ಲಿ ದೀಪವಿಲ್ಲದ ಕಾರಣ ಜೋಸೆಪ್ ಮೇರಿಗೆ ಮೋಂಬತ್ತಿ ಹಿಡಿದು ನಿಂತಿದ್ದನಂತೆ. ಅದಕ್ಕಾಗಿ ಕ್ರಿಸ್ಮಸ್ ಹಬ್ಬದ ರಾತ್ರಿ ಮೋಂಬತ್ತಿ ಹಚ್ಚುವ ಪರಿಪಾಠವಿದೆ.

ಫಿಲಿಪೈನ್ಸ್ : ಕ್ರಿಸ್‌ಮಸ್ ಗೆ ಒಂಬತ್ತು ದಿನಗಳ ಮೊದಲು ಕ್ರಿಸ್ತನ ಜನ್ಮದ ನಾಟಕಗಳು ನಡೆಯುತ್ತದೆ. ಜನ ಕ್ಯಾಂಡಲ್ ಹಿಡಿದು ಚರ್ಚ್ ಗಳಿಗೆ ತೆರಳುತ್ತಾರೆ.

ಚೀನದಲ್ಲಿ ಕ್ರಿಸ್ಮಸ್ ಮರವನ್ನು ಬೆಳಕಿನ ಮರ ಎನ್ನುತ್ತಾರೆ. ಮೆಕ್ಸಿಕನ್ನರು ಮನೆಯಿಂದ ಮನೆಗೆ ಕ್ಯಾಂಡಲ್ ಹಿಡಿದು ಜೋಸೆಫ್ ಹಾಗೊ ಮೇರಿಯನ್ನು ಹುಡುಕುತ್ತಾರೆ. ಬ್ರೆಜಿಲ್ ನಲ್ಲಿ ಹೊಸವರುಷದ ಹಿಂದಿನ ದಿನ ಲೆಮಾಂಜ (ಅಪ್ಪ್ರಿಕನ್ ದೇವತೆ) ನೀರಿನ ದೇವತೆಯನ್ನು ಪೂಜಿಸುವುದು ವಾಡಿಕೆ. ನದಿ, ಸಮುದ್ರದ ತೀರಗಳಲ್ಲಿ ಮರಳಿನ ಮೇಲೆ ಮೋಂಬತ್ತಿ ಹಚ್ಚಿ ಬೆಳಕು ನೀಡು ಎಂದು ಬೇಡುವ ರೀತಿ. ನೀರಿನ ದೇವತೆಗೆ ಬಾಚಣಿಗೆ ಹಾಗೊ ಸುಗಂಧ ದ್ರವ್ಯ ಇಷ್ಟವೆಂದು ಅದನ್ನು ನೀರಿನೊಳಗೆ ಎಸೆಯುವ ವಾಡಿಕೆಯೂ ಉಂಟಂತೆ.

ಹಬ್ಬದ ಸಂಭ್ರಮ ಆಚರಿಸುವುದಕ್ಕೆ ಯಾವುದೇ ನೆಪಗಳು ಬೇಕಿಲ್ಲ. ನಮ್ಮ ಮನಸ್ಸಿನೊಳಗಿನ ಕಲ್ಮಶಗಳನ್ನು, ಗಾಢಾಂಧಕಾರಮಯ ಆಲೋಚನೆಗಳನ್ನು ತೊಲಗಿಸಲು ಜ್ಞಾನದ ಬೆಳಕು ನೀಡುವ ಹಣತೆ ಹಚ್ಚಬಯಸುತ್ತೇವೆ. ಅದಕ್ಕೆ ಹಬ್ಬಗಳ ಮೊರೆ ಹೋಗುತ್ತೇವೆ. ಯಾಂತ್ರಿಕ ಜೀವನದಲಿ ಯಂತ್ರವಾಗಿರುವ ನಮಗೆ ಹಬ್ಬದ ಸಡಗರ ನವೋಲ್ಲಾಸ ತರುತ್ತದೆ. ಒಂದು ದಿನದ ಮಟ್ಟಿಗಾದರೂ ಎಲ್ಲರೊಂದಿಗೆ ಬೆರೆವ ಅವಕಾಶವನ್ನು ನೀಡುತ್ತದೆ. ಈ ಮೂಲಕ ನೆಮ್ಮದಿಯನ್ನು ಕಾಣಬಯಸುತ್ತೇವೆ. ಏಕತಾನತೆ ಕಳೆಯಲು ಪ್ರಯತ್ನಿಸುತ್ತೇವೆ.

ದೀಪದಿಂದ ದೀಪ ಹಚ್ಚಿ, ಪ್ರೀತಿಯಿಂದ ಪ್ರೀತಿ ಹಂಚಿ....ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X