ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವರಾತ್ರಿಯ ನಾಲ್ಕನೇ ದಿನ : ಜಿಎನ್‌ಬಿ ಕೃತಿ

By ಹಂಸಾನಂದಿ
|
Google Oneindia Kannada News

ಇವತ್ತು ದಸರಾ ಹಬ್ಬದ ನಾಲ್ಕನೇ ದಿನ. ಈಗಾಗಲೇ ಮೊದಲ ಮೂರು ದಿನಗಳಲ್ಲಿ, ತ್ಯಾಗರಾಜರ, ಮುತ್ತಯ್ಯಭಾಗವತರ ಮತ್ತು ಶಾಮಾಶಾಸ್ತ್ರಿ ಅವರ ಒಂದೊಂದು ರಚನೆಗಳ ಬಗ್ಗೆ ಬರೆದಿದ್ದೆ. ಕೇಳಿಲ್ಲದವರು ಕೇಳಿ ಆನಂದಿಸಿ.

ನವರಾತ್ರಿಯ ನಾಲ್ಕನೇ ದಿನ ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಹಾಡುವ ಸ್ವಾತಿ ತಿರುನಾಳರ ಕೃತಿ ತೋಡಿ ರಾಗದ ಭಾರತಿ ಮಾಮವ ಎಂಬ ರಚನೆ. ಅಂದಹಾಗೆ, ಸಂಗೀತದ ಸೊಗಸು ಬರೀ ಮಾತಾಡಿದಾಗ- ಬರೆದಾಗ ಸಿಗುವುದಿಲ್ಲವಲ್ಲ? ನವರಾತ್ರಿಗೋಸ್ಕರ ನಡೆಯುತ್ತಿದ್ದ ಸಂಗೀತ ಕಚೇರಿಯೊಂದಕ್ಕೆ ಹೋಗುವ ಅವಕಾಶ ಸಿಕ್ಕಿತು; ಅಲ್ಲಿಯೂ ಕೂಡ ಒಂದು ಒಳ್ಳೆ ತೋಡಿ ರಾಗದ ಉಣಿಸು ಸಿಕ್ಕಿತು. ಮುತ್ತುಸ್ವಾಮಿ ದೀಕ್ಷಿತರ ಕಮಲಾಂಬಾ ನವಾವರಣದ ಧ್ಯಾನ ಕೃತಿಯಾದ ಕಮಲಾಂಬಿಕೇ. ತೋಡಿ ರಾಗದ ಒಂದು ವಿಶೇಷ ರಚನೆ ಅದು.

ಅದಿರಲಿ. ಇವತ್ತು ನಾನು ವಿವರಿಸಹೊರಡಲಿರುವ ದೇವೀ ಪರವಾದ ಕೃತಿ 20ನೇ ಶತಮಾನದಲ್ಲಿ ಬಂದ ಒಬ್ಬ ಮಹಾನ್ ಕಲಾವಿದರ ರಚನೆ. ಇವರು ಸಂಗೀತಗಾರರಷ್ಟೇ ಅಲ್ಲದೆ, ತಮಿಳು ಸಿನಿಮಾ ರಂಗದಲ್ಲೂ ಹೆಸರು ಮಾಡಿದ್ದವರು. ಇವರೇ ಜಿ.ಎನ್.ಬಿ. ಎಂಬ ಹೆಸರಿನಲ್ಲೇ ಚಿರಪರಿಚಿತರಾದ ಜಿ.ಎನ್.ಬಾಲಸುಬ್ರಮಣಿಯನ್.


ಜಿ.ಎನ್.ಬಿ. (1910-1965) ಸಂಗೀತ ರಂಗಕ್ಕೆ ಪರಿಚಿತರಾಗಿದ್ದು ಒಂದು ವಿಶಿಷ್ಟ ಸಂದರ್ಭದಲ್ಲಂತೆ. ಒಮ್ಮೆ, ಯಾರೋ ವಿದ್ವಾಂಸರು ಒಂದು ಕಚೇರಿಗೆ ಬರಲಾಗಲಿಲ್ಲ. ಆಗ, ಆ ಸಮಯದಲ್ಲಿ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ಜಿ.ಎನ್.ಬಿ. ಅವರನ್ನು, ಅವರ ಸ್ಥಾನ ತುಂಬಲು ಕಳಿಸಲಾಯಿತಂತೆ. ಅಂದು ತಮ್ಮ ಶೈಲಿಯಿಂದ ಎಲ್ಲ ರಸಿಕರ ಮನಗೆದ್ದುಬಿಟ್ಟ ಜಿ.ಎನ್.ಬಿ. ಮತ್ತೆ ಹಿಂತಿರುಗಿ ನೋಡಲಿಲ್ಲ.

ಕೇವಲ ಐವತ್ತೈದು ವರ್ಷದ ಕಿರಿಯ ವಯಸ್ಸಿನಲ್ಲೇ ರಸಿಕರು ಇವರನ್ನು ಕಳೆದುಕೊಳ್ಳಬೇಕಾಯಿತು. ಆದರೆ, ಇವರ ಹಲವಾರು ಶಿಷ್ಯರು ಇವರ ಪರಂಪರೆಯನ್ನು ಮುಂದುವರೆಸಿಕೊಂಡುಹೋಗಿದ್ದಾರೆ. ಪ್ರಸಿದ್ಧ ಸಂಗೀತಗಾರರಾದ ಎಮ್.ಎಲ್.ವಸಂತಕುಮಾರಿ, ತ್ರಿಶೂರು ರಾಮಚಂದ್ರನ್, ರಾಧಾ-ಜಯಲಕ್ಷ್ಮಿ ಇವರೆಲ್ಲ ಜಿ.ಎನ್.ಬಿ. ಪರಂಪರೆಯವರೇ.

ಜಿ.ಎನ್.ಬಿ. ಅವರು ಸುಮಾರು ಐವತ್ತಕ್ಕೂ ಹೆಚ್ಚು ರಚನೆಗಳನ್ನು ಸಂಸ್ಕೃತ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಚಿಸಿದ್ದಾರೆ. ಹಿಂದೆ ಕೇಳಿಲ್ಲದ ಹೊಸ ರಾಗಗಳನ್ನು ಸೃಷ್ಟಿಸಿ, ಅದರಲ್ಲಿ ಕೃತಿಗಳನ್ನು ಮಾಡಿದ್ದಾರೆ. ಆದರೆ, ಇವರು ತಮ್ಮ ಕಚೇರಿಗಳಲ್ಲಿ ತಮ್ಮ ಕೃತಿಗಳನ್ನು ಹೆಚ್ಚಾಗಿ ಹಾಡುತ್ತಿರಲಿಲ್ಲ ಎಂದು ಕೇಳಿದ್ದೇನೆ.

ಈಗ ಇವತ್ತು ನವರಾತ್ರಿಯ ನಾಲ್ಕನೇ ದಿನ ಕೇಳಿ. ಜಿ.ಎನ್.ಬಿ. ಅವರು ರಚಿಸಿದ, ಅಮೃತಬೇಹಾಗ್ ರಾಗದ ಕಮಲಚರಣೇ ಕನಕಾರುಣೇ ಎಂಬ ಕೃತಿ - ಸಂಗೀತಾ ಶಿವಕುಮಾರ್ ಅವರ ಕಂಠದಲ್ಲಿ:


ಅಮೃತಬೇಹಾಗ್ ರಾಗ ಜಿ.ಎನ್.ಬಿ. ಅವರ ಹೊಸ ಕಲ್ಪನೆಯೇ. ಆ ಮೊದಲೇ ಪ್ರಸಿದ್ಧವಾಗಿದ್ದ ಅಮೃತ ವರ್ಷಿಣಿ ಮತ್ತು ಬೇಹಾಗ್ ರಾಗಗಳಿಂದ ಕೆಲವು ಅಂಶಗಳನ್ನು ಹೆಕ್ಕಿ ತೆಗೆದುಕೊಂಡು, ಈ ರಾಗಕ್ಕೊಂದು ರೂಪಕೊಟ್ಟಿದ್ದಾರೆ. ರಾಗದ ಸ್ವರೂಪ ತಿಳಿಯುವಂತಹ ಉತ್ತಮ ಚಿಟ್ಟೆಸ್ವರವನ್ನೂ ಹೊಸೆದಿದ್ದಾರೆ.

ಕೃತಿಯ ಸಾಹಿತ್ಯ ಸಂಸ್ಕೃತದಲ್ಲಿದೆ. ಕೊನೆಯ ಸಾಲಿನಲ್ಲಿ ಬರುವ ವಿಮರ್ಶನಾನಂದ ಎಂಬುದು ಜಿ.ಎನ್.ಬಿ. ಅವರ ಅಂಕಿತ. [ಕೃಪೆ : ಹಂಸ ನಾದ]

English summary
Dasara is celebrated in Tiruvanantapuram in a grand fashion as it is celebrated in Mysore. On all the 9 days of Navaratri musical programmes will be organized. G. N. Balasubramaniam (6 Jan 1910 - 1 May 1965), popularly known as GNB, was a legendary vocalist in the Carnatic tradition. He became the first superstar of Carnatic music.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X