ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವರಾತ್ರಿಯ ಮೂರನೇ ದಿನ : ಶಾಮಾಶಾಸ್ತ್ರಿ ಕೃತಿ

By ಹಂಸಾನಂದಿ
|
Google Oneindia Kannada News

ಮೈಸೂರು ಮತ್ತು ತಂಜಾವೂರು ಎರಡೂ 18-19ನೇ ಶತಮಾನಗಳಲ್ಲಿ ದಕ್ಷಿಣ ಭಾರತದ ಪ್ರಮುಖ ಸಾಂಸ್ಕೃತಿಕ ನೆಲೆಗಳಾಗಿ ರೂಪುಗೊಂಡವು. ಹಾಗಾಗಿಯೇ ಇಂದಿಗೂ ನಾವು ವೀಣೆ, ಚಿತ್ರಕಲೆ ಮತ್ತು ಭರತನಾಟ್ಯ ಇವೆರಡರಲ್ಲೂ, ಮೈಸೂರು ಶೈಲಿ ಮತ್ತು ತಂಜಾವೂರು ಶೈಲಿ ಎಂದು ಎರಡು ಪ್ರಮುಖ ಶೈಲಿಗಳನ್ನು ನೋಡಬಹುದು. ಕರ್ನಾಟಕ ಸಂಗೀತ ತ್ರಿಮೂರ್ತಿಗಳೆಂದೇ ಹೆಸರಾದ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತ ಮತ್ತು ಶಾಮಾಶಾಸ್ತ್ರಿ ಅವರು ಬಾಳಿದ್ದು ತಂಜಾವೂರು ರಾಜ್ಯದಲ್ಲೇ. ಅದರಲ್ಲಿಯೂ ಶಾಮಾಶಾಸ್ತ್ರಿ ಅವರು ಇದ್ದದ್ದಂತೂ ತಂಜಾವೂರು ನಗರದಲ್ಲೇ.

ಶಾಮಾಶಾಸ್ತ್ರಿ ಅವರ ನಿಜವಾದ ಹೆಸರು ವೆಂಕಟಕೃಷ್ಣ. ಆದರೆ, ಹೆಚ್ಚಾಗಿ ಅವರು ಶಾಮಾಶಾಸ್ತ್ರಿ ಎನ್ನುವ ಹೆಸರಿನಿಂದಲೇ ಪ್ರಖ್ಯಾತರಾಗಿದ್ದಾರೆ. ತಮ್ಮ ರಚನೆಗಳಲ್ಲಿ ಶಾಮಕೃಷ್ಣ ಎಂಬ ಅಂಕಿತವಿಟ್ಟಿದ್ದಾರೆ. ಇವರು ತಮ್ಮ ರಚನೆಗಳಲ್ಲಿ ದೇವಿಯನ್ನು, ಸಾಧಾರಣವಾಗಿ ಶಾಮಕೃಷ್ಣಸೋದರಿ ಎಂದು ಕರೆಯುತ್ತಾರೆ. ಇವರು ತಂಜಾವೂರಿನ ಬಂಗಾರು ಕಾಮಾಕ್ಷಿಯ ಅರ್ಚಕರಾಗಿದ್ದರು. ಹೆಚ್ಚಾಗಿ ಇವರ ರಚನೆಗಳು ಈ ಬಂಗಾರು ಕಾಮಾಕ್ಷಿಯ ಮೇಲೇ ರಚಿತವಾಗಿವೆ. ಸಂಗೀತ ತ್ರಿಮೂರ್ತಿಗಳಲ್ಲಿ, ಸಂಖ್ಯೆಯ ದೃಷ್ಟಿಯಿಂದ ನೋಡಿದರೆ, ಇವರು ಎಲ್ಲರಿಗಿಂತ ಕಡಿಮೆ ರಚನೆಗಳನ್ನು ಮಾಡಿದ್ದಾರೆ. ಆದರೆ, ಒಂದೂಂದೂ ಅನರ್ಘ್ಯ ರತ್ನವೆಂದು ಹೇಳಬಹುದು.

Navaratri music fete, day 3 - Syama sastri kritis

ಶರಭೋಜಿ (ಕ್ರಿ.ಶ.1777-1832) ತಂಜಾವೂರಿನ ರಾಜನಾಗಿದ್ದಾಗ, ಬೊಬ್ಬಿಲಿ ಕೇಶವಯ್ಯ ಎಂಬ ಸಂಗೀತಗಾರರು ಅವನ ಆಸ್ಥಾನಕ್ಕೆ ಬಂದರಂತೆ. ಎಲ್ಲಿ ಹೋದರೂ, ಅಲ್ಲಿ ಸಂಗೀತಗಾರರನ್ನು ತನ್ನ ಸಂಗೀತ ಚತುರತೆಯಿಂದ, ಸವಾಲು ಹಾಕಿ ಸೋಲಿಸುತ್ತಿದ್ದರಂತೆ. ಹಾಗಾಗಿ ಆತನು ತಂಜಾವೂರಿನ ರಾಜಾಸ್ತಾನಕ್ಕೆ ಬಂದಾಗ, ಅವನ ಸವಾಲನ್ನು ಎದುರಿಸಲು ಯಾರೂ ತಯಾರಿರಲಿಲ್ಲವಂತೆ. ಆಗ, ರಾಜ ಶರಭೋಜಿ ಶಾಮಾಶಾಸ್ತ್ರಿಗಳನ್ನು ತನ್ನ ರಾಜ್ಯದ ಮಾನ ಉಳಿಸಲು ಕೇಳಿಕೊಂಡನಂತೆ. ಈ ಸವಾಲುಗಳು ಹೇಗೆ ನಡೆಯುತ್ತಿದ್ದವೆಂದರೆ, ಒಬ್ಬ ಸಂಗೀತಗಾರ ಮೊದಲಿಗೆ ಒಂದು ರಾಗದಲ್ಲಿ, ಕ್ಲಿಷ್ಟವಾದ ತಾಳಪ್ರಸ್ತಾರದಲ್ಲಿ ಪಲ್ಲವಿಯೊಂದನ್ನು ಹಾಡಬೇಕು. ಎದುರಾಳಿ, ಅದನ್ನು ಆ ಕ್ಷಣದಲ್ಲೇ ಗ್ರಹಿಸಿ ಅದನ್ನು ಮತ್ತೆ ಹಾಡಬೇಕು. ಅದು ಆಗದಿದ್ದರೆ, ಅವನು ಸೋತಂತೆ.

ಬೊಬ್ಬಿಲಿ ಕೇಶವಯ್ಯ ಶಾಮಾಶಾಸ್ತ್ರಿಯರ ಮುಖಾಮುಖಿಯಾದದ್ದೂ ಹೀಗೆಯೇ. ಕೇಶವಯ್ಯ ಸಿಂಹನಂದನ ತಾಳದಲ್ಲಿ ಕ್ಲಿಷ್ಟವಾದ ಪಲ್ಲವಿಯನ್ನು ಹಾಡಿದ್ದಾಯಿತು. ಅದನ್ನು ಶಾಮಾಸಾಸ್ತ್ರಿ ಮರಳಿ ಹಾಡಿದ್ದೂ ಆಯಿತು. ಮರುದಿನ ಶಾಮಾಶಾಸ್ತ್ರಿಗಳ ಸರದಿ. ಅಂದು ರಾತ್ರಿ, ತಮಗೆ ಸ್ಪರ್ಧೆಯಲ್ಲಿ ಜಯ ಲಭಿಸಲಿ, ರಾಜ್ಯದ ಮಾನ ಉಳಿಯಲಿ ಎಂದು ಯೋಚಿಸುತ್ತಾ ದೇವಿಯನ್ನು ಪೂಜಿಸುವಾಗ ಹೊಸತೊಂದೇ ರಾಗದ ಸೃಷ್ಟಿ ಆಯಿತಂತೆ. ಇಂತಹ ಕಷ್ಟಕಾಲದಲ್ಲಿ ಆ ದೇವಿಯೇ ತಮ್ಮನ್ನು ಕಾಯಬೇಕು, ತನ್ನ ವ್ಯಥೆಯನ್ನು ಹೋಗಿಸಿ ಕಾಪಾಡಬೇಕೆಂದು ಮೊರೆಯಿಡುತ್ತಾ ಹಾಡಿದ್ದು ಹೊಸ ಕೃತಿಯಾಗಿ ಹೊರಹೊಮ್ಮಿತಂತೆ. ಅದೇ ಚಿಂತಾಮಣಿ ರಾಗ, ಆದಿತಾಳದಲ್ಲಿರುವ ದೇವೀ ಬ್ರೋವ ಸಮಯಮಿದೇ.

ಇಲ್ಲಿ ಕೇಳಿ ಎಮ್.ಎಸ್ ಸುಬ್ಬುಲಕ್ಷ್ಮಿ ಅವರು ಹಾಡಿರುವ ದೇವೀ ಬ್ರೋವ ಸಮಯಮಿದೇ.


ಮರುದಿನ, ಶಾಮಾಶಾಸ್ತ್ರಿ ಶರಭನಂದನವೆಂಬ ತಾಳದಲ್ಲಿ ಹಾಡಿದ ಪಲ್ಲವಿಯನ್ನು, ಕೇಶವಯ್ಯ ಮತ್ತೆ ಹಾಡಲಾರದೆ, ಸೋಲೊಪ್ಪಿ, ತನಗೆ ಸಿಕ್ಕಿದ್ದ ಮರ್ಯಾದೆಗಳನ್ನೆಲ್ಲ ಶಾಮಾಶಾಸ್ತ್ರಿಗಳಿಗೇ ಕೊಟ್ಟು ಹೋದನೆಂಬುದು ಐತಿಹ್ಯ. ಇದು ಬರೀ ದಂತಕತೆಯೇ ಆಗಿರಬಹುದು - ಆದರೂ, ಈ ರಾಗದಲ್ಲಿ ಮೊದಲು ಕೃತಿ ರಚನೆ ಮಾಡಿದ್ದಂತೂ ಶಾಮಾಶಾಸ್ತ್ರಿಗಳೇ ಅನ್ನುವುದಂತೂ ನಿಜ. ಮತ್ತೆ ಬಹಳ ವಾಗ್ಗೇಯಕಾರರೂ ಈ ರಾಗದಲ್ಲಿ ಹೆಚ್ಚಾಗಿ ರಚನೆಗಳನ್ನು ಮಾಡಿಲ್ಲ.

ದಸರಾ ಹಬ್ಬದ ಮೂರನೆಯ ದಿನ ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಹಾಡುವ ಕೃತಿ ಸ್ವಾತಿ ತಿರುನಾಳ್ ಮಹಾರಾಜ ಸಾವೇರಿ ರಾಗದಲ್ಲಿ ರಚಿಸಿರುವ ದೇವಿ ಪಾವನಿ ಎನ್ನುವುದು. ಅದನ್ನು ನೀವು ಇಲ್ಲಿ ಕೇಳಬಹುದು. [ಕೃಪೆ : ಹಂಸ ನಾದ]

English summary
Dasara is celebrated in Tiruvanantapuram in a grand fashion as it is celebrated in Mysore. On all the 9 days of Navaratri musical programmes will be organized. Syama Sastri (Shyama Shastri) (1762-1827) is one of the most renowned composers of Carnatic music.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X