ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ ಜಂಬೂ ಸವಾರಿಗೆ ಕಳೆ ಕಟ್ಟಲಿವೆ ಸ್ತಬ್ದ ಚಿತ್ರಗಳು

By ಲವಕುಮಾರ್ ಬಿಎಂ
|
Google Oneindia Kannada News

ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿಯನ್ನು ಆಕರ್ಷಣೀಯವನ್ನಾಗಿ ಮಾಡುವ ನಿಟ್ಟಿನಲ್ಲಿ ಸಮಾರೋಪಾದಿಯಲ್ಲಿ ಕೆಲಸಗಳು ನಡೆಯುತ್ತಿವೆ. ಒಂದೆಡೆ ಅರಣ್ಯ ಇಲಾಖೆ ಅಧಿಕಾರಿಗಳು ಅಂಬಾರಿ ಹೊತ್ತು ಸಾಗಲು ಗಜಪಡೆಯನ್ನು ತಾಲೀಮು ಮೂಲಕ ತಯಾರಿ ಮಾಡುತ್ತಿದ್ದರೆ, ಮತ್ತೊಂದೆಡೆ ಜಂಬೂ ಸವಾರಿಗೆ ಮೆರಗು ನೀಡುವ ಸ್ಥಬ್ತ ಚಿತ್ರಗಳ ತಯಾರಿ ಭರದಿಂದ ಸಾಗಿದೆ.

ಕೊರೊನಾ ಕಾರಣದಿಂದಾಗಿ ಎರಡು ವರ್ಷಗಳ ಕಾಲ ಅದ್ಧೂರಿಯಾಗಿ ಜಂಬೂ ಸವಾರಿ ನಡೆದಿರಲಿಲ್ಲ. ಸಾಂಪ್ರದಾಯಿಕವಾಗಿ ಅರಮನೆ ಆವರಣದಲ್ಲಿ ಮಾಡಿ ಮುಗಿಸಲಾಗಿತ್ತು. ಆದರೆ ಈ ಬಾರಿ ಮತ್ತೆ ಎಂದಿನಂತೆ ಜಂಬೂ ಸವಾರಿ ಅರಮನೆ ಆವರಣದಿಂದ ಆರಂಭವಾಗಿ ಬನ್ನಿಮಂಟಪದವರೆಗೆ ಸುಮಾರು ಐದು ಕಿ.ಮೀ.ನಷ್ಟು ದೂರ ಸಾಗಲಿದೆ. ಹೀಗಾಗಿ ಜಂಬೂ ಸವಾರಿಯನ್ನು ಯಾವುದೇ ವಿಘ್ನ ಬಾರದಂತೆ ಯಶಸ್ವಿಯಾಗಿ ನಡೆಸಲು ಬೇಕಾದ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆ.

ಸಾಮಾನ್ಯವಾಗಿ ಜಂಬೂಸವಾರಿಯಲ್ಲಿ ಜಾನಪದ ಕಲಾತಂಡಗಳು, ಅಶ್ವರೋಹಿ, ಪೊಲೀಸ್, ಎನ್‌ಸಿಸಿ, ಗೈಡ್ಸ್ ದಳಗಳು, ಸೇರಿದಂತೆ ಸ್ತಬ್ದ ಚಿತ್ರಗಳು ಇದ್ದೇ ಇರಲಿವೆ. ಜಂಬೂಸವಾರಿ ಮೆರವಣಿಗೆಗೆ ಸ್ತಬ್ದ ಚಿತ್ರಗಳು ಮೆರಗು ನೀಡುತ್ತವೆ. ಅಷ್ಟೇ ಅಲ್ಲದೆ, ರಾಜ್ಯದಲ್ಲಿರುವ ಪ್ರತಿ ಜಿಲ್ಲೆಗಳ ವಿಶೇಷತೆಯನ್ನು ಜನರ ಮುಂದೆ ತೆರೆದಿಡುತ್ತವೆ. ಇವುಗಳೊಂದಿಗೆ ವಿವಿಧ ಇಲಾಖೆಗಳ ಸ್ತಬ್ದ ಚಿತ್ರಗಳು ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪರಿಚಯಿಸುತ್ತವೆ.

 ಮೆರವಣಿಗೆಯಲ್ಲಿ 43 ಸ್ತಬ್ದ ಚಿತ್ರಗಳು

ಮೆರವಣಿಗೆಯಲ್ಲಿ 43 ಸ್ತಬ್ದ ಚಿತ್ರಗಳು

ಈ ಬಾರಿ ಪ್ರತಿ ಜಿಲ್ಲೆಗಳ ಐತಿಹಾಸಿಕ, ಪ್ರಾಕೃತಿಕ, ಭೌಗೋಳಿಕ ಮತ್ತು ಪಾರಂಪರಿಕ ಅಂಶಗಳನ್ನೊಳಗೊಂಡ ತಲಾ ಒಂದು ಹಾಗೂ 106ವರ್ಷಗಳ ಸಂಸ್ಥಾಪನಾ ದಿನಾಚರಣೆ ಆಚರಿಸಿಕೊಂಡ ಮೈಸೂರು ವಿಶ್ವವಿದ್ಯಾಲಯ, ಸೆಸ್ಕಾಂ, ಸಮಾಜ ಕಲ್ಯಾಣ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಲಿಡಕರ್, ಕೌಶಲ್ಯ ಕರ್ನಾಟಕ, ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಹಾಮಂಡಳಿ, ಕಾವೇರಿ ನೀರಾವರಿ ನಿಗಮ, ವಾರ್ತಾ ಇಲಾಖೆಗಳಿಂದ ತಲಾ ಒಂದರಂತೆ ಹಾಗೂ ಸ್ತಬ್ಧಚಿತ್ರ ಉಪಸಮಿತಿಯ ಮೂರು ಸ್ತಬ್ದ ಚಿತ್ರಗಳು ಸೇರಿದಂತೆ ಒಟ್ಟು 43 ಸ್ತಬ್ದ ಚಿತ್ರಗಳು ಜಂಬೂಸವಾರಿಯ ಮೆರವಣಿಗೆಯಲ್ಲಿ ಸಾಗಲಿದ್ದು, ನೋಡುಗರ ಗಮನಸೆಳೆಯಲಿವೆ.

 ವಿಜಯನಗರ ಸಾಮ್ರಾಜ್ಯದ ಗತಕಾಲದ ವೈಭವ ಅನಾವರಣ

ವಿಜಯನಗರ ಸಾಮ್ರಾಜ್ಯದ ಗತಕಾಲದ ವೈಭವ ಅನಾವರಣ

ಈ ಸ್ತಬ್ದ ಚಿತ್ರಗಳು ರಾಜ್ಯ ಪ್ರಮುಖ ಪ್ರವಾಸಿ ತಾಣ, ಧಾರ್ಮಿಕ ಸ್ಥಳಗಳು, ರಾಜ್ಯದ ಎಲ್ಲ ಜಿಲ್ಲೆಗಳ ಐತಿಹಾಸಿಕ ಮತ್ತು ಪ್ರಾಕೃತಿಕ ತಾಣಗಳನ್ನು ಪರಿಚಯಿಸುವ ಮತ್ತು ಆಯಾಯ ಜಿಲ್ಲೆಯ ಜಿಐ (ಜಿಯಾಗ್ರಫಿಕಲ್ ಇಂಡಿಕೇಷನ್), ಕನ್ನಡ ನಾಡು-ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಹೊಯ್ಸಳರ ಕಾಲದ ಸೋಮನಾಥಪುರದ ಚೆನ್ನಕೇಶವ ದೇಗುಲದ ವಾಸ್ತುಶಿಲ್ಪ, ಶಿಲ್ಪಕಲೆ ಹಾಗೂ ವಿಜಯನಗರ ಸಾಮ್ರಾಜ್ಯದ ಗತಕಾಲದ ವೈಭವ ಅನಾವರಣ ಮಾಡಲಿವೆ.

ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಪಟ್ಟಿಯಲ್ಲಿ ಸೇರ್ಪಡೆಗೆ ತಜ್ಞರು ತಿ.ನರಸೀಪುರ ತಾಲೂಕಿನ ಸೋಮನಾಥಪುರದಲ್ಲಿರುವ ಅತ್ಯದ್ಭುತ ವಾಸ್ತುಶಿಲ್ಪ, ಕಲೆಯನ್ನು ಹೊಂದಿರುವ ಚನ್ನಕೇಶವ ದೇಗುಲ ಪರಿಶೀಲಿಸಿರುವ ಹಿನ್ನೆಲೆ ಈ ಬಾರಿ ದಸರಾ ಉತ್ಸವದಲ್ಲಿ ದೇಗುಲದ ಪ್ರತಿಕೃತಿ ಇರುವ ಸ್ತಬ್ಧಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಅ.3ರ ವೇಳೆಗೆ ಸ್ತಬ್ದ ಚಿತ್ರಗಳ ನಿರ್ಮಾಣ ಕಾರ್ಯ ಮುಗಿಯ ಬೇಕಾಗಿರುವುದರಿಂದ ಇದೀಗ ಸ್ತಬ್ದ ಚಿತ್ರಗಳ ತಯಾರಿ ಕಾರ್ಯ ಭರದಿಂದ ಸಾಗಿದೆ.

 ಈ ಬಾರಿ ವಿಭಿನ್ನವಾಗಿ ಸ್ತಬ್ಧಚಿತ್ರ ಮೆರವಣಿಗೆ

ಈ ಬಾರಿ ವಿಭಿನ್ನವಾಗಿ ಸ್ತಬ್ಧಚಿತ್ರ ಮೆರವಣಿಗೆ

ಸ್ತಬ್ದ ಚಿತ್ರಗಳ ನಿರ್ಮಾಣ ಕಾರ್ಯಗಳ ಬಗ್ಗೆ ನೋಡಿದ್ದೇ ಆದರೆ ವರ್ಷದಿಂದ ವರ್ಷಕ್ಕೆ ಸ್ತಬ್ದ ಚಿತ್ರಗಳ ತಯಾರಿಯಲ್ಲಿ ತಂತ್ರಜ್ಞಾನ, ಅದ್ಧೂರಿತನ ಹೆಚ್ಚುತ್ತಲೇ ಸಾಗುತ್ತಿದ್ದು, ಇದುವರೆಗೆ ತಯಾರಾಗುತ್ತಿದ್ದ ಸ್ತಬ್ದ ಚಿತ್ರಗಳಿಗೆ ಹೋಲಿಸಿದರೆ ಈ ಬಾರಿ ಸ್ವಲ್ಪ ಮಟ್ಟಿಗೆ ವಿಭಿನ್ನತೆ ಕಂಡು ಬರಲಿದೆ. ಮೊದಲೆಲ್ಲ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸರ್ಕಾರದ ವಿವಿಧ ಯೋಜನೆ ಹಾಗೂ ಪ್ರಾದೇಶಿಕ ಸಂಸ್ಕೃತಿ ಒಳಗೊಂಡ ಸ್ತಬ್ಧಚಿತ್ರಗಳನ್ನಷ್ಟೆ ತಯಾರು ಮಾಡಲಾಗುತ್ತಿತ್ತು. ಆದರೆ ಈ ಬಾರಿ ವಿಭಿನ್ನವಾಗಿ ಸ್ತಬ್ಧಚಿತ್ರ ಮೆರವಣಿಗೆ ಆಯೋಜಿಸಲು ದಸರಾ ಉಪಸಮಿತಿ ನಿರ್ಧರಿಸಿದ್ದು, ಅದರಂತೆ ರಾಜ್ಯದ ಪ್ರತಿ ಜಿಲ್ಲೆಯ ಭೌಗೋಳಿಕ, ಐತಿಹಾಸಿಕ ಮತ್ತು ಪ್ರಾಕೃತಿಕ ಅಂಶಗಳನ್ನೇ ಮುಖ್ಯ ವಸ್ತು ವಿಷಯವನ್ನಾಗಿಸಿಕೊಂಡು ಸ್ತಬ್ದ ಚಿತ್ರಗಳನ್ನು ನಿರ್ಮಿಸಲಾಗುತ್ತಿದೆ.

 ಗಮನ ಸೆಳೆಯಲಿರುವ ವಿವಿಧ ಜಿಲ್ಲೆಗಳ ಚಿತ್ರಗಳು

ಗಮನ ಸೆಳೆಯಲಿರುವ ವಿವಿಧ ಜಿಲ್ಲೆಗಳ ಚಿತ್ರಗಳು

ಈ ಬಾರಿಯ ಸ್ತಬ್ದ ಚಿತ್ರಗಳು ಹೇಗಿರಲಿವೆ ಮತ್ತು ಅವುಗಳ ವಿಶೇಷತೆಗಳೇನು ಎಂಬುದನ್ನು ನೋಡಿದ್ದೇ ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದ ಗೊಮಟೇಶ್ವರ, ಉಡುಪಿ ಜನರ ಜೀವನಾಧಾರವಾದ ಮೀನುಗಾರಿಕೆ, ಉತ್ತರ ಕನ್ನಡದ ಪ್ರಾಕೃತಿಕ ಸೊಬಗು, ಚಿಕ್ಕಮಗಳೂರಿನ ಐತಿಹಾಸಿಕ ತಾಣಗಳು, ಮಂಡ್ಯದ ಧಾರ್ಮಿಕ ಸ್ಥಳಗಳು, ಕೊಡಗು ಜಿಲ್ಲೆಯ ಕೊಡವರ ವೀರ ಪರಂಪರೆ, ಚಾಮರಾಜನರದಿಂದ ವನ್ಯಸಂಪತ್ತು, ಶಿವಮೊಗ್ಗದಿಂದ ಶರಣಪರಂಪರೆಯ ಶ್ರೇಷ್ಠ ಶರಣರಾದ ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭು ಗಮನಸೆಳೆಯಲಿದೆ.

 ಸುಸ್ಥಿತಿಯಲ್ಲಿರುವ ವಾಹನಗಳ ಬಳಕೆ

ಸುಸ್ಥಿತಿಯಲ್ಲಿರುವ ವಾಹನಗಳ ಬಳಕೆ

ಇದೆಲ್ಲದರ ನಡುವೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ದಸರಾ ಸ್ತಬ್ಧಚಿತ್ರ ಹೊತ್ತ ವಾಹನಗಳು ಯಾವುದೇ ತೊಂದರೆಯಿಲ್ಲದೆ ಸಾಗಲು ಮೊದಲಿಗೆ ವಾಹನಗಳ ಸುಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಸುಸ್ಥಿತಿಯಲ್ಲಿರುವ ವಾಹನಗಳನ್ನಷ್ಟೆ ಬಳಸಲು ಅವಕಾಶ ಮಾಡಲಾಗಿದೆ. ಈ ಸಂಬಂಧ ಈಗಾಗಲೇ ವಾಹನಗಳ ಎಫ್ಸಿ, ಫಿಟ್ನೆಸ್ ಸರ್ಟಿ ಫಿಕೆಟ್‌ಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ. ಆದರೂ ಒಂದು ವೇಳೆ ಸ್ತಬ್ದ ಚಿತ್ರ ಹೊತ್ತ ವಾಹನ ಕೆಟ್ಟು ನಿಂತರೆ ಅದನ್ನು ಬೇರೆಡೆಗೆ ಸಾಗಿಸಲು ಅನುಕೂಲವಾಗುವಂತೆ ಕ್ರೇನ್ ವ್ಯವಸ್ಥೆಯನ್ನು ಮುಂಜಾಗ್ರತಾ ಕ್ರಮವಾಗಿ ಮಾಡಿಕೊಳ್ಳಲಾಗುತ್ತಿದೆ. ಸ್ತಬ್ಧಚಿತ್ರಗಳೊಂದಿಗೆ ಇಬ್ಬರು ಚಾಲಕರು ಮತ್ತು ಸಂಯೋಜನಾಧಿಕಾರಿ ಇರಲಿದ್ದಾರೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಎರಡು ವರ್ಷಗಳ ಬಳಿಕ ನಡೆಯುತ್ತಿರುವ ಅದ್ಧೂರಿ ಜಂಬೂಸವಾರಿ ಮೆರವಣಿಗೆಯಲ್ಲಿ ಸ್ತಬ್ದ ಚಿತ್ರಗಳು ಕೋಟ್ಯಂತರ ಜನರ ಮನತಣಿಸಲು ಸಜ್ಜಾಗುತ್ತಿವೆ. ಆದರೆ ಅವುಗಳನ್ನು ಕಣ್ತುಂಬಿಸಿಕೊಳ್ಳಬೇಕಾದರೆ ಅ.5ರಂದು ನಡೆಯಲಿರುವ ಜಂಬೂಸವಾರಿ ತನಕ ಕಾಯಲೇ ಬೇಕಾಗಿದೆ.

English summary
Mysuru Dasara 202: There will be a total of 43 stills in this year's Jumbo Ride to be held on October 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X