ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧೀಜಿಗೂ ಪ್ರಿಯವಾಗಿತ್ತಂತೆ ಮೈಸೂರು!

By ಬಿ.ಎಂ.ಲವಕುಮಾರ್
|
Google Oneindia Kannada News

ಮೈಸೂರೇ ಹಾಗೆ... ಇಲ್ಲಿನ ಸೌಂದರ್ಯಕ್ಕೆ, ವಾತಾವರಣಕ್ಕೆ ಮನ ಸೋಲದವರಿಲ್ಲ. ಬಾಯಿ ಚಪ್ಪರಿಸುವಂತೆ ಮಾಡುವ ಮೈಸೂರ್ ಪಾಕ್, ಘಮಘಮಿಸುವ ಮಲ್ಲಿಗೆ, ಬಾಯಿಯೊಳಗಿಟ್ಟರೆ ಕರಗಿ ಹೋಗುವ ವೀಳ್ಯದೆಲೆ.. ಯಾರನ್ನು ಆಕರ್ಷಿಸುವುದಿಲ್ಲ ಹೇಳಿ? ಇಂತಹ ವೈಶಿಷ್ಟ್ಯಪೂರ್ಣ ನಗರಿ ಗಾಂಧೀಜಿಗೂ ಪ್ರಿಯವಾಗಿತ್ತು. ಹಾಗಾಗಿ ಅವರು ಎರಡು ಬಾರಿ ಇಲ್ಲಿಗೆ ಬಂದಿದ್ದರು.

ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ದೇಶ-ವಿದೇಶಗಳ ಹಲವಾರು ನಾಯಕರು, ಅಧಿಕಾರಿಗಳು, ಗಣ್ಯರು ಇಲ್ಲಿಗೆ ಭೇಟಿ ನೀಡಿರುವುದನ್ನು ನಾವು ಕಾಣಬಹುದು. ಈ ಪೈಕಿ ಬ್ರಿಟಿಷ್ ಅಧಿಕಾರಿಗಳ ಭೇಟಿಯ ಸ್ಮರಣೆಯನ್ನು ಇಲ್ಲಿನ ಕಟ್ಟಡಗಳು, ವೃತ್ತಗಳು, ರಸ್ತೆಗಳು ಇಂದಿಗೂ ಮಾಡುತ್ತಿವೆ.[ಅಂಬಾರಿ ಹೊರಲು ಸೈ ಎನಿಸಿಕೊಂಡ ಅರ್ಜುನ!]

Mahatma was gandhi very fond of Mysore

ಎರಡು ಬಾರಿ ಭೇಟಿ: ಗಾಂಧೀಜಿ ಮೈಸೂರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದು 1927ರಲ್ಲಿ. ಅವರಿಗೆ ಮೈಸೂರಿನ ಸೆಳೆತ ಹೇಗಿತ್ತೆಂದರೆ ಭೇಟಿ ನೀಡಿದ ಕೇವಲ ಏಳು ವರ್ಷಕ್ಕೆ ಅಂದರೆ 1934ರಲ್ಲಿ ಮತ್ತೊಮ್ಮೆ ಭೇಟಿ ನೀಡಿದ್ದರು. ಎರಡು ಬಾರಿ ಭೇಟಿ ನೀಡಿದಾಗಲೂ ಅವರು ಶೇಷಾದ್ರಿ ಅಯ್ಯರ್ ರಸ್ತೆಯ ಶೇಷಾದ್ರಿ ಹೌಸ್ ನಲ್ಲಿ ತಂಗಿದ್ದರು ಎಂಬುದು ಮತ್ತೊಂದು ವಿಶೇಷ. ಅವತ್ತಿನ ಶೇಷಾದ್ರಿ ಹೌಸ್ ಇಂದು ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯಾಗಿದೆ.

ಗಾಂಧೀಜಿ ಮೈಸೂರಿಗೆ ಬಂದ ಸಂದರ್ಭ ಇಡೀ ದೇಶದಲ್ಲಿ ಸ್ವಾತಂತ್ರ್ಯದ ಚಳವಳಿ ಕಾವು ಏರಿತ್ತು. ಎಲ್ಲೆಲ್ಲೂ ಗಾಂಧೀಜಿ ಕರೆಗೆ ಓಗೊಟ್ಟು ಜನರು ಬ್ರಿಟಿಷರ ವಿರುದ್ಧ ದಂಗೆ ಎದ್ದಿದ್ದರು. ಹೀಗಾಗಿ ಮೈಸೂರಿಗೆ ಬಂದ ಗಾಂಧೀಜಿ ವಾಸ್ತವ್ಯ ಹೂಡಿದ್ದ ಶೇಷಾದ್ರಿ ಹೌಸ್ ನಲ್ಲಿ ಬಿಡುವಿನ ವೇಳೆಯಲ್ಲಿ ಚರಕದಿಂದ ನೂಲು ನೇಯುತ್ತಾ ಭಜನೆ, ಪ್ರಾರ್ಥನೆಯಲ್ಲಿ ನಿರತರಾಗಿರುತ್ತಿದ್ದರು.[ಮೈಸೂರಿನಲ್ಲಿ ಮೇಳೈಸಿದೆ ದಸರಾ ಸಂಭ್ರಮ]

ಒಡವೆ, ಹಣ ನೀಡಿದ ಜನರು: ಆ ಸಂದರ್ಭದಲ್ಲಿ ನಗರದ ರಂಗಾಚಾರ್ಲು ಪುರಭವನ(ಟೌನ್ ಹಾಲ್)ದಲ್ಲಿ ಕಾಂಗ್ರೆಸ್ ನಿಂದ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ನೆರೆದಿದ್ದ ಜನರಲ್ಲಿ ಗಾಂಧೀಜಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಅಗತ್ಯವಿರುವ ಖರ್ಚು- ವೆಚ್ಚವನ್ನು ಭರಿಸಲು ಸ್ವತಃ ಜನರೇ ತಮ್ಮ ಒಡವೆ, ಹಣ ನೀಡುತ್ತಿದ್ದರು.

ಒಡವೆಗಳನ್ನು ಸಭೆಯಲ್ಲೇ ಬಹಿರಂಗ ಹರಾಜು ಹಾಕಿ, ಅದರಿಂದ ಬಂದ ಹಣದ ಖರ್ಚು- ವೆಚ್ಚಗಳನ್ನು ಅವರು ಸ್ಥಳದಲ್ಲೇ ಪ್ರಕಟಿಸುವ ಮೂಲಕ ಪಾರದರ್ಶಕತೆ ಕಾಯ್ದುಕೊಂಡಿದ್ದರು. ಇದು ಜನರಿಗೆ ಅವರ ಮೇಲೆ ವಿಶ್ವಾಸ ನಂಬಿಕೆ ಉಂಟು ಮಾಡುತ್ತಿತ್ತು. ಈ ಸಂದರ್ಭದಲ್ಲಿ ಕೆ.ಆರ್.ಮಿಲ್ ನ ಕಾರ್ಮಿಕರು ಹಾಗೂ ಆನಂದ ಭವನ ಹೋಟೆಲ್ ಕಾರ್ಮಿಕರು, ನೂರಾರು ಮಹಿಳೆಯರು ಸ್ವಾತಂತ್ರ್ಯ ಹೋರಾಟಕ್ಕೆ ಕೈ ಜೋಡಿಸಿದ್ದರು.[ಮದುವೆ ನಂತರ ಯದುವೀರ್ ಮೊದಲ ಖಾಸಗಿ ದರ್ಬಾರ್!]

Mahatma was gandhi very fond of Mysore

ಬಟ್ಟೆ ಗಿರಣಿ ಉದ್ಘಾಟನೆ: ಮೊದಲ ಬಾರಿಗೆ ಗಾಂಧೀಜಿ ಇಲ್ಲಿಗೆ ಬಂದಾಗ ಆಗ ತಾನೇ ಸ್ಥಾಪನೆಗೊಂಡಿದ್ದ ಕೃಷ್ಣರಾಜೇಂದ್ರ ಬಟ್ಟೆ ಗಿರಣಿ ಉದ್ಘಾಟಿಸಿದ್ದರು. ಎರಡನೇ ಬಾರಿಗೆ ಬಂದಾಗ ಇದೇ ಗಿರಣಿಯ ಕಾರ್ಮಿಕರು ರಾತ್ರಿ- ಹಗಲು ಹೆಚ್ಚುವರಿ ಕೆಲಸ ಮಾಡಿ, ಅದರಿಂದ ಬಂದ ಹಣವನ್ನು ಗಾಂಧೀಜಿಗೆ ನೀಡಿದ್ದರು.

ನಗರಕ್ಕೆ ಆಗಮಿಸಿದ್ದ ಗಾಂಧೀಜಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಅಶೋಕಪುರಂಗೆ ತೆರಳಿ, ಅಲ್ಲಿನವರಿಗೆ ಹಿತ ನುಡಿದು, ಯೋಗಕ್ಷೇಮವನ್ನು ವಿಚಾರಿಸಿದ್ದರು. ಗಾಂಧೀಜಿ ಭೇಟಿ ನೀಡಿದ ಸಂದರ್ಭವನ್ನು ನೆನಪಿಸಿಕೊಳ್ಳುವ ಹಿರಿಯರು, ನಗರ ಹೃದಯಭಾಗದ ಒಲಂಪಿಯಾ ಟಾಕೀಸ್ ಬಳಿಯ ಹೋಟೆಲ್ ಆನಂದ ಭವನದ ಕಾರ್ಮಿಕರು ತಾವು ದುಡಿದ ಹಣವನ್ನು ಒಟ್ಟು ಸೇರಿಸಿ ಕರಂಡಕವನ್ನು ಖರೀದಿಸಿ, ಅದನ್ನು ಉಡುಗೊರೆಯಾಗಿ ಗಾಂಧೀಜಿಗೆ ನೀಡಿದ್ದರಂತೆ.[ದಸರಾ ವಿಶೇಷ: ಬೆಂಗಳೂರಿನಿಂದ ಮೈಸೂರಿಗೆ ವಿಮಾನ ಹಾರಾಟ!]

ಕಹಿ ಘಟನೆಯೂ ಇದೆ: ಅದನ್ನು ಗಾಂಧೀಜಿ ಟೌನ್ ಹಾಲ್ ನಲ್ಲಿ ಹರಾಜು ಹಾಕಿದಾಗ ಹೋಟೆಲ್ ಮಾಲೀಕರು ಅದನ್ನು ಖರೀದಿಸಿದರಂತೆ. ಹಾಗೆಂದು ಮೈಸೂರಿಗೆ ಭೇಟಿ ನೀಡಿದ ಗಾಂಧೀಜಿಗೆ ಎಲ್ಲವೂ ಸಿಹಿ ಅನುಭವವಾಗಿರಲಿಲ್ಲ. ಇದರ ನಡುವೆ ಕಹಿ ಘಟನೆಯೂ ನಡೆಯಿತಂತೆ. ಗಾಂಧೀಜಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದಾಗ ಪ್ರಭಾವಿತರಾದ ಹೆಚ್ಚಿನ ಮಹಿಳೆಯರು ತಾವು ಧರಿಸಿದ್ದ ಒಡವೆಗಳನ್ನೇ ಬಿಚ್ಚಿ ಗಾಂಧೀಜಿ ಮುಂದಿಟ್ಟರಂತೆ.

ಇದನ್ನು ಆ ಮಹಿಳೆಯರ ಗಂಡಂದಿರಿಗೆ ಸಹಿಸಿಕೊಳ್ಳಲು ಆಗಲಿಲ್ಲವಂತೆ. ಅವರಿಗೆ ತಮ್ಮ ಪತ್ನಿಯರ ಉದ್ದೇಶವೂ ಗೊತ್ತಾಗಲಿಲ್ಲವಂತೆ. ಹೀಗಾಗಿ ಅವರು ಪತ್ನಿಯರ ವಿರುದ್ಧ ಹರಿಹಾಯ್ದು, ಸಮಾರಂಭದಲ್ಲೇ ಥಳಿಸಿದರಂತೆ ಇದು ಗಾಂಧೀಜಿ ಮನಸ್ಸಿಗೆ ನೋವುಂಟು ಮಾಡಿತ್ತಲ್ಲದೆ, ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ, ಇನ್ನು ಮುಂದೆ ಎಲ್ಲರೂ ತಮ್ಮ ಸ್ವ ಇಚ್ಚೆಯಿಂದಷ್ಟೆ ನೀಡಿದರೆ ಸ್ವೀಕರಿಸುವುದಾಗಿ ಹೇಳಿ ಹೊರಟು ಹೋದರಂತೆ.[ಚೆನ್ನವೀರ ಕಣವಿಯವರಿಗೆ ಸ್ವಾಗತ ಕೋರಿದ್ದು ಪ್ರತಾಪ ಸಿಂಹ]

ಅದೇ ಕೊನೆ. ಆ ನಂತರ ಗಾಂಧೀಜಿ ಮೈಸೂರಿಗೆ ಬರಲಿಲ್ಲ. ಆದರೆ ಅವರ ಮೈಸೂರು ಭೇಟಿ ಇಂದಿಗೂ ಸ್ಮರಣೀಯ. ಮೈಸೂರಿನಲ್ಲಿ ಗಾಂಧೀಜಿ ನೆನಪಿಗಾಗಿ ರಸ್ತೆ, ವೃತ್ತಗಳಿವೆ. ಹೃದಯಭಾಗದಲ್ಲಿರುವ ಗಾಂಧಿಚೌಕ ಪ್ರತಿಭಟನೆ, ಧರಣಿ, ಸತ್ಯಾಗ್ರಹಕ್ಕೆ ವೇದಿಕೆಯಾಗಿದೆ. ಇಲ್ಲಿ ಆಗಾಗ ಪ್ರತಿಭಟನೆ, ಧರಣಿ, ಸತ್ಯಾಗ್ರಹಗಳು ನಡೆಯುತ್ತಲೇ ಇರುತ್ತವೆ.

English summary
Mahatma gandhi visited Mysore twice, 1927 and 1934. He was very fond of Mysore, stayed in Sheshadri ayyar's road Sheshadrai house. People of Mysore gave their jewel, money supporting freedom struggle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X