ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಅರಮನೆಗೆ ಆಗಮಿಸಿದ ಗಜಪಡೆಗೆ ಭವ್ಯ ಸ್ವಾಗತ

By Prasad
|
Google Oneindia Kannada News

ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆಂದು ಮೈಸೂರು ಅರಮನೆಗೆ ಶುಕ್ರವಾರ ಆಗಮಿಸಿದ ಗಜಪಡೆಗೆ ಅರಮನೆ ಮೈದಾನದಲ್ಲಿ ಭರ್ಜರಿಯಾಗಿ ಸ್ವಾಗತ ಕೋರಲಾಯಿತು. ಮೈಸೂರು ಉಸ್ತುವಾರಿ ಸಚಿವ ಶ್ರೀನಿವಾಸ ಪ್ರಸಾದ್ ಅವರ ನೇತೃತ್ವದಲ್ಲಿ ಆನೆಗಳಿಗೆ ಆರತಿ ಎತ್ತಿ, ಪುಷ್ಪವೃಷ್ಟಿಸಿ, ಬಾಜಾ ಬಜಂತ್ರಿ ಮೇಳದೊಂದಿಗೆ ಸ್ವಾಗತಿಸಲಾಯಿತು.

ಹುಣಸೂರು ತಾಲ್ಲೂಕಿನ ವೀರನ ಹೊಸಹಳ್ಳಿಯ ನಾಗಾಪುರ ಗಿರಿಜನ ಶಾಲೆ ಆವರಣದಿಂದ ಆ. 28ರಂದು ಹೊರಟಿದ್ದ ಗಜಪಡೆಯನ್ನು ಸ್ವಾಗತಿಸಲು ರಾಜಕಾರಣಿಗಳು, ಅಧಿಕಾರಿಗಳು, ಸಾರ್ವಜನಿಕರು ಅರಮನೆ ತುಂಬ ನೆರೆದಿದ್ದರು. ಆದರೆ, ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ಕೋರುವ ಕಾರ್ಯಕ್ರಮಕ್ಕೆ ತೆರಳಿದ್ದ ಪತ್ರಕರ್ತರಿಗೆ ಪೊಲೀಸರು ದ್ವಾರದಲ್ಲಿಯೇ ಪ್ರವೇಶ ನೀಡುವುದಕ್ಕೆ ಅಡ್ಡಿಪಡಿಸಿದ್ದರಿಂದ ಪೊಲೀಸ್ ಮತ್ತು ಪತ್ರಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಅರಮನೆಯ ಜಯಮಾರ್ತಾಂಡ ದ್ವಾರ ಪ್ರವೇಶಿಸಲು ಆಗಮಿಸಿದ ಪತ್ರಕರ್ತರಿಗೆ ಸ್ಥಳದಲ್ಲಿದ್ದ ಪೊಲೀಸರು ಒಳಹೋಗುವುದಕ್ಕೆ ಅಡ್ಡಿಪಡಿಸಿದರು. ಇದಕ್ಕೆ ಪತ್ರಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆಗ ಪೊಲೀಸರು ಪತ್ರಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ಈ ಕಿರಿಕಿರಿ ವಿರುದ್ಧ ಪತ್ರಕರ್ತರು ಪ್ರತಿಭಟನೆ ಆರಂಭಿಸಿದರು. ಸ್ಥಳಕ್ಕೆ ಆಗಮಿಸಿದ ಉಸ್ತುವಾರಿ ಸಚಿವ ಶ್ರೀನಿವಾಸ ಪ್ರಸಾದ್ ಪತ್ರಕರ್ತರನ್ನು ಸಮಾಧಾನಪಡಿಸಿದರು.

ವೆಬ್ ಸೈಟ್ ಉದ್ಘಾಟನೆ : ವಿಶ್ವವಿಖ್ಯಾತ ಮೈಸೂರು ದಸರಾ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಸ್ಥಳೀಯ ವೆಬ್ ಡೆವಲಪ್ ಸಂಸ್ಥೆ ಸಹಯೋಗದಲ್ಲಿ ವೆಬ್ ಸೈಟ್ ಶುಕ್ರವಾರ ಚಾಲನೆಗೊಂಡಿದೆ. ಅರಮನೆ ಆವರಣದಲ್ಲಿರುವ ಆಡಳಿತ ಮಂಡಳಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ವೆಬ್‌ಸೈಟ್(www.mysoredasara.gov.in)ಗೆ ಚಾಲನೆ ನೀಡಿದರು.

ವೆಬ್‌ಸೈಟ್‌ನಲ್ಲಿ ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಮಾಹಿತಿ ನೀಡಲಾಗುವುದು. ಇದನ್ನು 60ಕ್ಕೂ ಹೆಚ್ಚು ಭಾಷೆಗಳಲ್ಲಿ ಓದುವ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಪ್ರತಿದಿನ ಪತ್ರಿಕೆಗಳಲ್ಲಿ ಪ್ರಕಟವಾಗುವ ದಸರಾ ಮಾಹಿತಿಯನ್ನು ಅಪ್‌ಲೋಡ್ ಮಾಡಲಾಗುವುದು. ಇದರೊಂದಿಗೆ ಮೈಸೂರು ಸುತ್ತಮುತ್ತಲಿನ 50ಕ್ಕೂ ಹೆಚ್ಚು ಪ್ರವಾಸಿ ತಾಣಗಳ ಮಾಹಿತಿ ಲಭ್ಯವಾಗಲಿದೆ ಎಂದು ಅವರು ವಿವರಿಸಿದರು.

ನವರಾತ್ರಿಯಲ್ಲಿ ವಿವಿಧೆಡೆ ಪ್ರತಿದಿನ ನಡೆಯುವ ಕಾರ್ಯಕ್ರಮಗಳ ವಿವರ, ಸಮಯ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ದಸರಾ ಉಪಸಮಿತಿಗಳನ್ನು ಇನ್ನೆರಡು ದಿನದಲ್ಲಿ ರಚಿಸಲಾಗುವುದು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಶಾಸಕರಾದ ಎಂ.ಕೆ.ಸೋಮಶೇಖರ್, ವಾಸು, ಜಿಲ್ಲಾಧಿಕಾರಿ ಶಿಖಾ, ಅರಮನೆ ಆಡಳಿತಾಧಿಕಾರಿ ಸುಬ್ರಮಣ್ಯ ಉಪಸ್ಥಿತರಿದ್ದರು.

ಬಲರಾಮನ ನೇತೃತ್ವದಲ್ಲಿ ಬಂದ ಗಜಪಡೆ

ಬಲರಾಮನ ನೇತೃತ್ವದಲ್ಲಿ ಬಂದ ಗಜಪಡೆ

ಈ ಬಾರಿಯ ದಸರಾ ಜಂಬೂ ಸವಾರಿಯಲ್ಲಿ ಬಲರಾಮನ ನೇತೃತ್ವದಲ್ಲಿ ಅರ್ಜುನ, ಮೇರಿ, ಗಜೇಂದ್ರ, ಕವಿತ, ವರಲಕ್ಷ್ಮಿ, ಶ್ರೀರಾಮ, ಅಭಿಮನ್ಯು, ಹರ್ಷ, ವಿಕ್ರಮ್, ಸರಳ, ಕಾಂತಿ ಸೇರಿ ಹನ್ನೆರಡು ಆನೆಗಳು ಪಾಲ್ಗೊಳ್ಳುತ್ತಿವೆ.

ಮೈಸೂರಿಗೆ ಆಗಮಿಸಿದ ಗಜಪಡೆಗೆ ಭವ್ಯ ಸ್ವಾಗತ

ಮೈಸೂರಿಗೆ ಆಗಮಿಸಿದ ಗಜಪಡೆಗೆ ಭವ್ಯ ಸ್ವಾಗತ

ಜಂಬೂ ಸವಾರಿಯಲ್ಲಿ ಯಾವುದೇ ಅಡೆತಡೆಗೆ ಬಗ್ಗದೆ ಮುನ್ನಡೆಯಲು ಸಿದ್ಧವಾಗಿರಲು ಬಲರಾಮನಿಗೆ ಸುಮಾರು 750 ಕೆ.ಜಿ. ತೂಕದ ಮರದ ಅಂಬಾರಿಯನ್ನು, ಉಳಿದ ಆನೆಗಳಿಗೆ ಮರಳಿನ ಮೂಟೆಯನ್ನು ಕಟ್ಟಿ ದಿನಕ್ಕೊಮ್ಮೆ ಅರಮನೆಯಿಂದ ಸಯ್ಯಾಜಿರಾವ್ ರಸ್ತೆಯಲ್ಲಿ ಬನ್ನಿ ಮಂಟಪದವರೆಗೆ ಕಡ್ಡಾಯ ಮಾರ್ಚ್‌ಫಾಸ್ಟ್ ನಡೆಯುತ್ತದೆ.

ಚಿನ್ನದ ಅಂಬಾರಿ ಹೊರುವ ಬಲರಾಮನಿಗೆ 52 ವರ್ಷ

ಚಿನ್ನದ ಅಂಬಾರಿ ಹೊರುವ ಬಲರಾಮನಿಗೆ 52 ವರ್ಷ

ಚಿನ್ನದ ಅಂಬಾರಿ ಹೊತ್ತು ಮುನ್ನಡೆಯುವ ಬಲರಾಮ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ಆನೆ ಶಿಬಿರದಿಂದ ಬಂದಿದ್ದು, ಈಗ 52 ವರ್ಷ.

ಗಜಪಡೆ ಆಗಮನದಿಂದ ಭರ್ಜರಿ ಕಳೆ

ಗಜಪಡೆ ಆಗಮನದಿಂದ ಭರ್ಜರಿ ಕಳೆ

ಆನೆಗಳು ಮೈಸೂರು ದಸರಾದ ಪ್ರಮುಖ ಆಕರ್ಷಣೆ. ಜೊತೆಗೆ ಜಂಬೂ ಸವಾರಿಯ ರೂವಾರಿಗಳೂ ಹೌದು. ಆನೆಗಳಿಲ್ಲದ ದಸರಾವನ್ನು ಊಹಿಸಲೂ ಸಾಧ್ಯವಿಲ್ಲ. ಆನೆಗಳ ಆಗಮನದಿಂದ ಮೈಸೂರಿಗೆ ಭರ್ಜರಿ ಕಳೆ ಬಂದಂತಾಗಿದೆ.

ಶ್ರೀನಿವಾಸ್ ಪ್ರಸಾದ್ ನೇತೃತ್ವದಲ್ಲಿ ಸ್ವಾಗತ

ಶ್ರೀನಿವಾಸ್ ಪ್ರಸಾದ್ ನೇತೃತ್ವದಲ್ಲಿ ಸ್ವಾಗತ

ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರ ನೇತೃತ್ವದಲ್ಲಿ ಆನೆಗಳನ್ನು ಸ್ವಾಗತಿಸಲಾಯಿತು.

ಹೆಂಗಳೆಯರಿಂದ ಗಜಪಡೆಗೆ ಆರತಿ

ಹೆಂಗಳೆಯರಿಂದ ಗಜಪಡೆಗೆ ಆರತಿ

ಮೈಸೂರಿಗೆ ಹೊಸ ಕಳೆ ತಂದ ಹತ್ತು ಆನೆಗಳ ಪಡೆಗೆ ಹೆಂಗಳೆಯರು ಆರತಿ ಎತ್ತಿ ಪೂಜಿಸಿದರು.

ಆನೆಗಳ ನೋಡಲು ಬಂದ ಸಾರ್ವಜನಿಕರು

ಆನೆಗಳ ನೋಡಲು ಬಂದ ಸಾರ್ವಜನಿಕರು

ರಾಜಕಾರಣಿಗಳು, ಅಧಿಕಾರಿಗಳ ಜೊತೆ ಆನೆಗಳನ್ನು ನೋಡಲು ನೂರಾರು ಸಾರ್ವಜನಿಕರು ಅರಮನೆಗೆ ಆಗಮಿಸಿದ್ದರು. ಇಡೀ ಊರಿನಲ್ಲಿ ದಸರಾ ಹಬ್ಬದ ವಾತಾವರಣ ಮನೆಮಾಡಿದೆ.

ಕಂಬಾರರಿಂದ ದಸರಾ ಉದ್ಘಾಟನೆ

ಕಂಬಾರರಿಂದ ದಸರಾ ಉದ್ಘಾಟನೆ

ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಈ ಬಾರಿಯ ಮೈಸೂರು ದಸರಾ ಉತ್ಸವ 2013 ಉದ್ಘಾಟಿಸಲಿದ್ದಾರೆ.

ಗಜಪಡೆಗೆ ಪುಷ್ಪವೃಷ್ಟಿ

ಗಜಪಡೆಗೆ ಪುಷ್ಪವೃಷ್ಟಿ

ಅಕ್ಟೋಬರ್ 5ರಿಂದ 14ರವರೆಗೆ ನಡೆಯಲಿರುವ ದಸರಾ ಉತ್ಸವಕ್ಕೆ ದೇಶವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸಲಿದ್ದಾರೆ. ಈ ಬಾರಿ ಬರದ ಛಾಯೆ ಇರದಿರುವುದರಿಂದ ಉತ್ಸವ ಭರ್ಜರಿಯಾಗಿ ನೆರವೇರಲಿದೆ.

ಅಂಬಾರಿ ತೂಕ ಇಳಿಸುವುದಿಲ್ಲ

ಅಂಬಾರಿ ತೂಕ ಇಳಿಸುವುದಿಲ್ಲ

750 ಕಿ.ಗ್ರಾಂ. ತೂಕದ ಚಿನ್ನದ ಅಂಬಾರಿಯ ಭಾರವನ್ನು ಬಲರಾಮನ ಮೇಲೆ ಏಕೆ ಹೊರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಪ್ರಶ್ನಿಸಿತ್ತು. ಇದಕ್ಕೆ ಪ್ರತಿಯಾಗಿ, ತೂಕವನ್ನು ಇಳಿಸುವುದಿಲ್ಲ, ಅದಕ್ಕಾಗಿ ಆನೆಗಳಿಗೆ ಸಾಕಷ್ಟು ತರಬೇತಿ ನೀಡಲಾಗಿದೆ ಎಂದು ರಾಜ್ಯ ಸರಕಾರ ಉತ್ತರ ನೀಡಿದೆ.

English summary
Elephants which are participating in Jambu Savari were welcomed in a grand fashion in Mysore on August 30. Mysore in-charge minister V Srinivas Prasad launched official website of Mysore Dasara festival 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X