ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂಪ ಅವರ ಅಂದದ ದಸರಾ ಬೊಂಬೆ ಲೋಕ

By * ಜಯಶ್ರೀ
|
Google Oneindia Kannada News

Dasara doll show by Roopa
ನವರಾತ್ರಿ ಹೆಣ್ಣುಮಕ್ಕಳಿಗೆ ಮಾತ್ರವಲ್ಲ ನಮ್ಮ ನಾಡಿನ ಎಲ್ಲರ ಮೆಚ್ಚಿನ ಹಬ್ಬವಾಗಿದೆ. ಅದಲ್ಲೂ ಮೈಸೂರು ದಸರಾ ಎನ್ನುವುದು ವಿಶ್ವಕ್ಕೆ ಸಂಭ್ರಮ ಹಂಚಿರುವ ಖುಷಿಯ ಹಬ್ಬ. ವಿಶ್ವ ವಿಖ್ಯಾತ ದಸರಾ ಹಬ್ಬವನ್ನು ಕರುನಾಡ ಹೆಣ್ಣುಮಕ್ಕಳು ಮತ್ತೊಂದು ಬಗೆಯಲ್ಲೂ ಆದರದಿಂದ ಆಚರಿಸುತ್ತಾರೆ. ಅದೇ ಬೊ೦ಬೆ ಕೂರಿಸುವುದು. ಅದರಲ್ಲೂ ಸಂಪ್ರದಾಯಸ್ಥ ಹೆಣ್ಣುಮಕ್ಕಳು ನವರಾತ್ರಿಯ ಅಷ್ಟೂ ದಿನಗಳು ಬೊಂಬೆಗಳಿಂದ ಮನೆಯನ್ನು ಸಿಂಗಾರ ಬಂಗಾರವಾಗಿ ಇಟ್ಟಿರುತ್ತಾರೆ. ಕೆಲವರು ಅದರ ಪ್ರಮಾಣವನ್ನು ಸಣ್ಣ ಮಟ್ಟದಲ್ಲಿ ಆಚರಿಸಿದರೆ, ಮತ್ತೊಂದಷ್ಟು ಜನ ಹೆಣ್ಣುಮಕ್ಕಳು ಆ ಸಂಭ್ರಮವನ್ನು ಆಸಕ್ತಿಯಾಗಿ ಬೆಳೆಸಿಕೊಳ್ತಾರೆ. ಅವರಲ್ಲಿ ರೂಪ ಮೂರ್ತಿ ಸಹ ಒಬ್ಬರಾಗಿದ್ದಾರೆ.

ಕರ್ನಾಟಕದ ಕೆಲವು ಕಡೆಗಳಲ್ಲಿ ಮದುವೆಯ ದಿನ ವಧುವಿಗೆ ತವರುಮನೆಯವರು ಬಳುವಳಿಯಾಗಿ ಮರದ ಬೊಂಬೆಯನ್ನು ನೀಡುವ ವಾಡಿಕೆ ಇದೆ. ಅದನ್ನು ಸ್ಥಳೀಯ ಕನ್ನಡದಲ್ಲಿ ಹೇಳುವುದಾದರೆ ಪಟ್ಟದ ಬೊಂಬೆ ಎಂದು ಕರೆಯುತ್ತಾರೆ. ಕರಿಮರದ ಈ ಎರಡು ಬೊಂಬೆಗಳು ತೃಪ್ತಿಕರ ದಾಂಪತ್ಯದ ಪ್ರತೀಕವಾಗಿರುತ್ತವೆ. ಆ ಬೊಂಬೆಯನ್ನು ರಾಜ-ರಾಣಿಯ ಪ್ರತೀಕವೆಂದು ಗೌರವಿಸಿ ತವರು ಮನೆಯ ಈ ಜೋಡಿಯನ್ನು ಜೋಪಾನವಾಗಿ ಎತ್ತಿಟ್ಟುಕೊಂಡು ದಸರಾ ಹಬ್ಬದ ದಿನ ಅದನ್ನು ಕೂರಿಸಿ ಪೂಜಿಸಿ ಸಂಭ್ರಮಿಸುತ್ತಾರೆ. ಹೀಗೆ ತಮ್ಮ ಮದುವೆಯಲ್ಲಿ ದೊರೆತ ಪಟ್ಟದ ಬೊಂಬೆಯನ್ನು, ಅದರ ಜೊತೆಗೆ ಒಂದಷ್ಟು ಇತರ ಬೊಂಬೆಗಳನ್ನು ಇಡುವ ಪದ್ಧತಿಯನ್ನು ರೂಪ ಕೂಡ ಆರಂಭಿಸಿದರು. ಆದರೆ ಅವರಲ್ಲಿ ಹುದುಗಿದ್ದ ಆಸಕ್ತಿ, ಸೃಜನಶೀಲತೆ ಕೆಲವೇ ಸಂಗತಿಗಳಿಗೆ ಸೀಮಿತ ಆಗುವುದಕ್ಕೆ ಬಿಡಲಿಲ್ಲ. ಅದರ ಪರಿಣಾಮ ಬೊಂಬೆ ಇಡುವ ಪದ್ಧತಿಯು ಅವರ ಬದುಕಿನ ಹವ್ಯಾಸವಾಯಿತು, ಉಸಿರಾಯಿತು.

ಬಾಲ್ಯದಿಂದ ಇದ್ದ ಸಣ್ಣಮಟ್ಟದ ಆಸಕ್ತಿ ಮದುವೆಯಾದ ಬಳಿಕವಂತೂ ವಿಸ್ತಾರರೂಪ ಪಡೆದುಕೊಂಡಿತು. ಅವರ ಈ ಆಸೆಗೆ ಬೆನ್ನೆಲುಬು ಆದವರು ಅವರ ತಾಯಿ ಲಕ್ಷ್ಮೀದೇವಿ ರಾಧಕೃಷ್ಣ. ಈ ಹಿರಿಯ ಹೆಣ್ಣುಮಗಳು ಎಲ್ಲಾ ಸಂಪ್ರದಾಯಸ್ಥ ಹೆಣ್ಣು ಮಕ್ಕಳಂತೆ ಕೆಲವು ಕಲೆಗಳಲ್ಲಿ ನಿಪುಣೆ, ಜೊತೆಗೆ ಕಥೆಗಾರ್ತಿಯೂ ಆಗಿದ್ದಾರೆ. ಕೇವಲ ಲಕ್ಷ್ಮಿ ದೇವಿ ಅವರಲ್ಲ ಅವರ ಸಹೋದರಿಯರಾದ ಮ.ಸು.ಸುಲೋಚನ, ಶರ್ವಾಣಿ, ಸುಂದರೀ ಮೂರ್ತಿ, ಪ್ರಮೀಳ ರಾವ್ ಇವರುಗಳು ಮಹಿಳಾ ಸಾಹಿತ್ಯ ಲೋಕದ ಪರಿಚಿತ ಹೆಸರುಗಳು. ಇವರೆಲ್ಲರೂ ರೂಪ ಆಸಕ್ತಿಯತ್ತ ಪ್ರೋತ್ಸಾಹದ ಬೆಂಬಲ ನೀಡಿದರೆ, ಸೋದರ ಮಾವ ನಾಗಭೂಷಣ ರಾವ್ ಅವರು ಬೆನ್ನೆಲುಬಾಗಿ ನಿಂತರು.

ಬೊಂಬೆ ಜೋಡಿಸುವುದು ಅದೊಂದು ದೊಡ್ದ ಸಂಗತಿಯಲ್ಲ ಎಂದು ಮೂಗುಮುರಿಯುವವರು ಒಮ್ಮೆ ರೂಪರನ್ನು ಭೇಟಿ ಮಾಡಿ ಬರಬೇಕು. ಅದರ ಜೋಡಣೆಗಾಗಿ ಮೀಸಲಿಡುವ ಸಮಯ -ಹಣ ಎರಡರ ಪಟ್ಟಿ ಕೇಳಿದರೆ ಯಾವುದೂ ಸರಳ ಹಾಗೂ ಸುಲಭದ ಸಂಗತಿಯಲ್ಲ ಎನ್ನುವುದು ಮನದಟ್ಟಾಗುತ್ತದೆ.

ಹೊಸ ಹೊಸ ಪರಿಕಲ್ಪನೆ : ಪ್ರತಿ ಬಾರಿಯೂ ಇವರು ಅನೇಕ ರೀತಿಯ ಕಾನ್ಸೆಪ್ಟುಗಳನ್ನು ಬಳಸಿ ಬೊಂಬೆ ಜೋಡಿಸುತ್ತಾರೆ. ಹಬ್ಬಕ್ಕಿನ್ನು ಎಂಟು ದಿನವಿದೆ ಎನ್ನುವಾಗಲೇ ಮನೆ ಪೂರ್ತಿ ಬೊಂಬೆಯ ಜೋಡಣೆಯ ಕೆಲಸ ಆರಂಭಿಸುತ್ತಾರೆ. ಸರಿಸುಮಾರು ಇವರ ಬಳಿ ಇಪ್ಪತೈದರಿಂದ ಮೂವತ್ತು ಸೆಟ್ ಗಳಿವೆ. ಅವುಗಳ ಜೋಡಣೆಗಾಗಿ ಒಂದಿಡೀ ಮನೆಯನ್ನು ಬಳಸಿಕೊಳ್ತಾರೆ ರೂಪ. ಈ ಹೆಣ್ಣುಮಗಳ ಎಲ್ಲಾ ಕೆಲಸಗಳಿಗೆ ಪತಿ ಕೃಷ್ಣಮೂರ್ತಿ, ಮಕ್ಕಳಾದ ದೀಪಕ್, ಕಾರ್ತೀಕ್, ಅಲ್ಲದೆ ಸೊಸೆ ನಾಗಶ್ರಿ, ಅಕ್ಕ, ತಂಗಿ, ಅಣ್ಣ ಅತ್ತಿಗೆಯರ ಪ್ರೀತಿಯ ಸಾಥ್ ಸಿಕ್ತಾ ಇದೆ.

ಇವರ ಬೊಂಬೆಯ ಜೋಡಣೆಯ ವಿಶೇಷತೆಗಳು ರಾಮನಿಗಾಗಿ ಶಬರಿ ಕಾಯುವುದು, ಗೋಕಾಕ್ ಫಾಲ್ಸ್, ಅಷ್ಟ ಲಕ್ಷ್ಮಿಯರು, ಮಂತ್ರಾಲಯ, ತಿರುಪತಿ, ಹಿರಣ್ಯಕಶಿಪು ಸಂಹಾರ, ಶಾಲೆ ವಾತಾವರಣ, ಗೋವರ್ಧನ ಗಿರಿ, ವೇಲೂರಿನ ಗೋಲ್ಡನ್ ಟೆಂಪಲ್... ಹೀಗೆ ಹೊಸ ಹೊಸ ಕಲ್ಪನೆಗಳು. ಈ ಬಾರಿ ರೂಪ ಬೊಂಬೆ ಜೋಡಣೆಯ ವಿಶೇಷತೆ ಅಂದ್ರೆ ಅಮರನಾಥ್ ಐಸ್ ಲಿಂಗ, ಬ್ರ್ಮಹೋತ್ಸವ, ಸೇವ್ ಟೈಗರ್, ಅಯೋಧ್ಯ ರಾಮಮಂದಿರ!

ಮಹಿಳೆಯರಿಗೆ ಉಡುಗೊರೆ : ತಮ್ಮ ಮನೆಗೆ ಬೊಂಬೆ ವೀಕ್ಷಿಸಲು ಬರುವ ಪರಿಚಿತ-ಅಪರಿಚಿತ ಹೆಣ್ಣುಮಕ್ಕಳಿಗೆ ತಪ್ಪದೆ ತಾಂಬೂಲ ಕೊಟ್ಟು ಕಳಿಸುತ್ತಾರೆ. ಮಧ್ಯಮವರ್ಗದ ಈ ಹೆಣ್ಣುಮಗಳು ಎಲ್ಲಾ ರೀತಿಯಿಂದಲೂ ವಿಶೇಷವಾಗಿಯೇ ತಮ್ಮನ್ನು ಬೆಳೆಸಿಕೊಂಡು ಇಂದಿನ ಮುಂದಿನ ಜನಾಂಗಕ್ಕೆ ಆದರ್ಶವಾಗಿದ್ದಾರೆ. ದುರ್ಗಾಷ್ಟಮಿಯ ದಿನ ಕನ್ಯೆಯರಿಗೆ ಹುರಿಗಡಲೆ ಹಾಗೂ ಬೆಲ್ಲ ನೀಡಿದರೆ ಶ್ರೇಷ್ಠ ಎಂದು ನಮ್ಮಲ್ಲಿ ನಂಬಿಕೆಯಿದೆ. ಆ ಆಚರಣೆಯನ್ನು ತಪ್ಪದೆ ಮಾಡುತ್ತಾರೆ ರೂಪ. ಜೊತೆಗೆ ತಾವು ಆಹ್ವಾನಿಸಿದ ಅಷ್ಟೂ ಹೆಣ್ಣು ಮಕ್ಕಳಿಗೆ ವಿಶೇಷವಾದ ಉಡುಗೊರೆ ಕೊಡ್ತಾರೆ. ಇಷ್ಟೆ ಅಲ್ಲದೆ ಬೊಂಬೆಗಳ ಮುಂದೆ ರಂಗೋಲಿ ಇವರ ಮತ್ತೊಂದು ವಿಶೇಷ ಸಂಗತಿ. ರೂಪ ಅವರ ಈ ಸಾಧನೆಯು ದೃಶ್ಯ ಮಾಧ್ಯಮಗಳ ಕಣ್ಣಿಗೂ ಕಂಡಿದೆ. ಈಕೆಯ ಕಲ್ಪನೆಗಳಿಗೆ ತಕ್ಕಂತೆ ಬೊಂಬೆಗಳನ್ನು ತಯಾರಿಸುವವರು ಅನ್ನಪೂರ್ಣ ಜಗದೀಶ್ ಎನ್ನುವ ಮತ್ತೋರ್ವ ಪ್ರತಿಭಾವಂತೆ. ರೂಪ ಅವರ ಈ ಸಾಧನೆ ಗುರುತಿಸಿ ಗೌರವಿಸಿದೆ ಭಾರತ ವಿಕಾಸ್ ಪರಿಷತ್.

ಕೆಲವೊಂದು ಮಾರ್ಕೆಟಿಂಗ್ ಕಂಪನಿಗಳಿಗೆ ಫ್ರೀಲ್ಯಾನ್ಸರ್ ಆಗಿರುವ ರೂಪ ಅವರು ಸದಾ ಚಟುವಟಿಕೆಯಿಂದ ಇರುವ ಗೃಹಿಣಿ. ಅವರ ಹಬ್ಬದ ಆಚರಣೆ ಮುಂದಿನ ಪೀಳಿಗೆಗೆ ಮಾದರಿಯಾಗಲಿ. ರೂಪ ಸಿದ್ಧ ಮಾಡಿರುವ ಬೊಂಬೆಗಳ ಲೋಕದೊದಳಗೆ ಆಸಕ್ತರು ತಪ್ಪದೆ ಹೋಗಿಬರಬಹುದು. ಈಗಾಗಲೇ ಬಂದು ಹೋಗುವವರ ಸಂಭ್ರಮ ಆರಂಭ ಆಗಿದೆ. ಹಬ್ಬ ಮುಗಿದು ಮತ್ತೂ ಮೂರ್ನಾಲ್ಕು ದಿನಗಳ ಕಾಲ ಅವರು ಬೊಂಬೆಯನ್ನು ಹಾಗೆ ಇಟ್ಟಿರುತ್ತಾರೆ. ಆಸಕ್ತರು ಒಮ್ಮೆ ವಿಸಿಟ್ ಕೊಡಿ, ಅವರ ಕಲೆಯನ್ನು ಪ್ರೋತ್ಸಾಹಿಸಿ.

ವಿಳಾಸ : ರೂಪ ಮೂರ್ತಿ, #385, 15ನೇ ಮುಖ್ಯ ರಸ್ತೆ, ಎಂ.ಸಿ.ಲೇಔಟ್ (ಪೋಸ್ಟ್ ಆಫೀಸ್ ಹತ್ತಿರ) ವಿಜಯನಗರ, ಬೆಂಗಳೂರು - 560 040. ಮೊಬೈಲ್ ನಂ. : 9845307299

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X