ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಬ್ರಹ್ಮಚಾರಿಗಳ ದಸರಾ!

By Shami
|
Google Oneindia Kannada News

Keerti Shankaraghatta
ಹಬ್ಬ ಬರತ್ತೆ ಹಬ್ಬ ಹೋಗತ್ತೆ. ಆದ್ರೆ ಬೆಂಗಳೂರಿನಲ್ಲಿ ಬಾಳ್ವೆ ಮಾಡೋ ಬ್ರಹ್ಮಚಾರಿಗಳ ಜೀವನ ಮಾತ್ರ ಎಲ್ಲಿ ನಿಂತ್ಕಂಡಿರತ್ತೋ ಅಲ್ಲೇ ನಿಂತ್ಕಂಡಿರತ್ತೆ. ಗಾಡಿ ಮುಂದಕ್ಕೂ ಹೋಗಲ್ಲಾ ಅನ್ನತ್ತೆ, ಹಿಂದಕ್ಕೂ ಹೋಗಲ್ಲಾ ಅನ್ನತ್ತೆ. ಹಿಂಗ್ ಆದ್ರೆ ಎಂಗೆ ಗುರೂ ಅನ್ನೋ ಹಂಗೇನೇ ಇಲ್ಲ. ಯಾಕೆಂದರೆ, ಇದು ಇರೋದು ಹಿಂಗೇನೇಯಾ. ಬೆಂಗಳೂರು ಅನ್ನೋ ಸಮುದ್ರದಾಗೇ ಸ್ನಾನಾನೇ ಮಾಡ್ದೇ ಬರೀ ಕೆಲ್ಸಾನೇ ಮಾಡೋ ಹುಡುಗ್ರಿಗೆ ಹಬ್ಬಾನೂ ಇಲ್ಲ, ಗಿಬ್ಬಾನೂಯಿಲ್ಲ. ಊರೆಂಬೋ ಊರೋ ಹಬ್ಬ ಮಾಡ್ತಾಯಿರೊವಾಗ ಶೂಟಿಂಗು ಎಡಿಟಿಂಗೂ ಮಾಡ್ಕೊಂಡು ಸ್ಟೂಡಿಯೋದಲ್ಲಿ ಕೊಳೆಬಿದ್ದಿರೊ ಒಬ್ಬ ಹುಡ್ಗ ಅವನ ಹಬ್ಬದ ಕಥೆ ಬರೆದುಕೊಂಡವ್ನೆ. ಅವನಿಗೆ ಆಯುಧ ಪೂಜೇನೇ ಇಲ್ಲ, ಪಾಪ. ಆಯುಧಪೂಜೆನೇ ಮಾಡ್ದೆ ಇರೋರಿಗೆ ವಿಜಯದಶಮಿ ಎಲ್ಲಿಂದ ಬರತ್ತೆ, ಅಲ್ವಾ - (ದಟ್ಸ್ ಕನ್ನಡ ಬ್ರಹ್ಮಚಾರಿಗಳ ಸಂಘ.)

* ಕೀರ್ತಿ ಶಂಕರಘಟ್ಟ C/O ಬೆಂಗಳೂರು

ಏನು…? ನಾಳೆ ಹಬ್ಬಾನ? ಯಾವ್ ಹಬ್ಬ…!?" ದೇವರಾಣೆ ಈ ಪ್ರಶ್ನೇನ ನಿನ್ನೆ ರಾತ್ರಿ ಗೆಳತಿ ಚೇತನಾಗೆ ಕೇಳ್ದೆ. ಆಶ್ಚರ್ಯ ಏನಿಲ್ಲ… ಈ ಬೆಂಗಳೂರಲ್ಲಿ ನಾಲ್ಕು ಗೋಡೆ ನಡುವಿನ ಬದುಕು ವಾರ,ತಿಥಿ,ದಿನಾಂಕವನ್ನೆ ನುಂಗಿಬಿಡತ್ತೆ. ಅಂತದ್ರಲ್ಲಿ ಹಬ್ಬದ ನೆನಪಾದ್ರೂ ಹೇಗೆ ಆಗೋಕೆ ಸಾಧ್ಯ. ನೋ ಚಾನ್ಸ್.. ಅಟ್ ಲೀಸ್ಟ್ ಅಮ್ಮ, ತಂಗೀನಾದ್ರೂ ಫೋನ್ ಮಾಡಿ ಹಬ್ಬಕ್ಕೆ ಬರಲ್ವ ಅಂತ ಕೇಳ್ ತಿದ್ರು. ಆದ್ರೆ ಊರಿಗೆ ಕರೆದಾಗಲೆಲ್ಲಾ ನನ್ನ ಹತ್ರ ಬೈಸಿಕೊಂಡು ಅವರೂ ಸುಮ್ನಾಗಿ ಹೋಗಿದಾರೆ. ಹಂಗಾಗಿ ಅವರೂ ಕರೆಯಲ್ಲ, ನಾನೂ ಹೋಗಲ್ಲ. ನಂದೂ ಒಂದು ಬದುಕಾ?

ಅಂದಹಾಗೆ ಇವತ್ತಿನ ಹಬ್ಬ ಆಯುಧ ಪೂಜೆ ಅಲ್ವ? ಅದೇ 8 -10 ವರ್ಷಗಳ ಹಿಂದೆ ನಮ್ಮೂರ ರೈಸ್ ಮಿಲ್ ಎದುರು ಕುಂಬಳಕಾಯಿ ಒಡೆದಾಗ ಅದೊರಳಗೆ ಅವಿತು ಕೂತ ಕುಂಕುಮ ತುಂಬಿದ ಕಾಯಿನ್ ಗಳಿಗಾಗಿ ಕೈ ನುಗ್ಗಿಸಿ ಕಿತಾಡ್ತಾ ಇದ್ವಲ್ಲ ಅದೇ ಹಬ್ಬ ತಾನೇ… ಅದೇ ಅದೇ.. ಯಾಕಂದ್ರೆ ನಮ್ ಆಫೀಸ್ ನಲ್ಲೂ ಇವತ್ತು ಕ್ಯಾಮರಾ, ಲೈಟು, ಕಂಪ್ಯೂಟರ್ ಗೆಲ್ಲಾ ಪೂಜೆ ಮಾಡಿ ಅಂತದ್ದೇ ಕುಂಬಳಕಾಯಿಯನ್ನ ಹೊರಗೆ ಓಡೀತಾ ಇದ್ರು… ಅದೇನೇ ಇರ್ಲಿ ನಾನ್ ಹೇಳೋಕೆ ಹೊರಟಿರೋದು ಬ್ಯಾಚುಲರ್ ಗಳ ಹಬ್ಬಗಳು ಈ ಬೆಂಗಳೂರಲ್ಲಿ ಹೇಗಿರುತ್ತೆ ಅಂತ…

ನಾನು ಬೆಂಗಳೂರಿನಲ್ಲಿ 4 ವರ್ಷದಿಂದ ಬ್ಯಾಚುಲರ್.. ಹಂಗಾಗಿ ಅನುಭವದ ಮೇಲೆ ಇವೆಲ್ಲಾ ಹೇಳ್ತಾಯಿದೀನಿ… ನಾನು ಮನೆಗೆ ಹೋಗಿ ಇವತ್ತಿಗೆ ಏಳು ದಿನ ಆಗಿತ್ತು. ಆಫೀಸು ಶೂಟಿಂಗು ಮನೆ ಇಷ್ಟೇ ನನ್ನ ಬದುಕು… ಆದ್ರೆ ಇವತ್ತು ಹಬ್ಬ ಅನ್ನೋ ಕಾರಣಕ್ಕೆ ನನ್ನನ್ನ ಅಪರೂಪಕ್ಕೆ ನೋಡೋ ನನ್ನ ರೂಮಿಗೆ ಹೋಗಿ ನನ್ನ ಬಾತ್ ರೂಂಗೆ ನನ್ನ ಕೊಳಕು ಮೈ ತೋರಿಸಿ, ಡವ್ ಸೋಪೇ ಕಪ್ಪಾಗೋ ಹಾಗೇ ಮೈ ತಿಕ್ಕಿ ಸ್ನಾನ ಮಾಡಿ ಬಂದೆ. ಅದೊಂದೇ ಇವತ್ತಿನ ಮಟ್ಟಿಗೆ ಹಬ್ಬಕ್ಕೆ ನಾನು ನನಗೆ ಕೊಟ್ಟುಕೊಂಡ ಉಡುಗೊರೆ. ಆಫೀಸಿಗೆ ಬಂದ್ರೆ ಎಲ್ಲರ ಬೈಕುಗಳೂ ಲಕ ಲಕ ಮಿಂಚ್ತಾ ಇದೆ. ನನ್ನ ಬೈಕು ಮಾತ್ರ ನಿನ್ನೆ ಮೊನ್ನೆ ಗಂಡನನ್ನ ಕಳೆದುಕೊಂಡವಳ ಹಾಗೆ ಮಂಕಾಗಿದೆ. ನೀನ್ ಮಾತ್ರ ಸ್ನಾನ ಮಾಡಿ ಬಂದೆ ಕನಿಷ್ಠ ನನ್ನ ಹೊದ್ದುಕೊಂಡಿರೋ ಧೂಳಾದ್ರು ಒರೆಸು" ಅಂತ ಬೇಡ್ಕೊಳ್ತಾ ಇರೋ ಹಾಗಿತ್ತು ನನ್ನ ಬೈಕ್…"

ಆದ್ರೆ ನಾನು ಆ ವಿಚಾರದಲ್ಲಿ ನಿಷ್ಕರುಣಿ. ಮಳೆ ಬಂದ್ರೆ ಮಾತ್ರ ನಿಂಗೆ ಸ್ನಾನ" ಅಂತ ಹೇಳಿ ಅದರ ಬೆನ್ನು ಎಳೆದು ಸ್ಟ್ಯಾಂಡ್ ಹಾಕಿ ಆಫೀಸ್ ಒಳಗೆ ಬಂದ್ರೆ ಎಲ್ಲೆಲ್ಲೂ ಕಲರ್ ಕಲರ್ ಕಲರ್.. ಹುಡುಗೀರು ಸೀರೆ ಉಟ್ಕೊಂಡು, ಊ ಮುಡ್ಕೊಂಡು ಮಿಂಚ್ತಾ ಇದಾರೆ, ಹುಡುಗರೆಲ್ಲಾ ಹೊಸ ಬಟ್ಟೆಯಲ್ಲಿ ಶೈನಿಂಗ್.. ಅದೃಷ್ಟಕ್ಕೆ ನಾನಿವತ್ತು ಮನುಷ್ಯನ ಹಾಗೆ ನೀಟಾಗಿ ಫಾರ್ಮಲ್ ಹಾಕ್ಕೊಂಡು ಬಂದಿದ್ದೆ. ಮರ್ಯಾದೆ ಉಳೀತು. ಅವರನ್ನೆಲ್ಲ ನೋಡಿದ ಮೇಲೆ ನಂಗೂ ಗ್ಯಾರಂಟಿ ಆಯ್ತು, ಇವತ್ತು ನಿಜವಾಗಲೂ ಹಬ್ಬ ಅಂತ… !

ಆದರೂ ನಮ್ಮದೇನು ಬದುಕು ಅಂತೀನಿ…? ಹಬ್ಬ ಇಲ್ಲ, ಹರಿದಿನ ಇಲ್ಲ… ಎಲ್ಲಾ ದಿನಾನೂ ಒಂದೇ.. ಆ ಕಾಲ ಎಷ್ಟ್ ಸಕ್ಕತ್ತಾಗಿತ್ತು.. ಇವತ್ ಹೆಂಗಿದೆ…? ಇವತ್ತು ಯಾರೋ ತಂದು ಕಳ್ಳೆಪುರಿ ಕೊಟ್ರು. ಅವತ್ತು ಕವರ್ ಹಿಡ್ಕೊಂಡು ಅಂಗಡಿ ಅಂಗಡಿಲಿ ಕಳ್ಳೆಪುರಿ ಕಲೆಕ್ಷನ್ ಮಾಡ್ತಾ ಇದ್ದಿದ್ದು ನೆನಪಾಯ್ತು. ದುಡಿಮೆಯ ಹೆಸರಲ್ಲಿ ಹಬ್ಬ, ಸಂಸ್ಕೃತಿ, ಆಚರಣೆ ಮರೆತ ಈ ಬದುಕಿಗಿಂತ ಆ ಬದುಕೇ ಸಕ್ಕತ್ತಾಗಿತ್ತು ಅನ್ಸುತ್ತೆ. ಅಮ್ಮ ಮಾಡ್ತಿದ್ದ ಹೋಳಿಗೆ, ಕದ್ದು ತಿಂತಿದ್ದ ಹೂರಣ, ಅಪ್ಪ ತರ್ತಿದ್ದ ಜಿಲೇಬಿ, ಒಟ್ಟಿಗೆ ಕೂತು ಮಾಡ್ತಿದ್ದ ಊಟ.. ವಾ ವಾ.. ಮತ್ಯಾವತ್ತೂ ಆ ಲೈಫ್ ಸಿಗೋಕೆ ಚಾನ್ಸೇ ಇಲ್ಲ…ಅನ್ಸತ್ತೆ.

ಇವತ್ತು ನಮ್ಮ ಪರಿಸ್ಥಿತಿ ನೋಡಿ, ಎಂತಹ ಸ್ಪೆಷಲ್ ಡೇ ಆದರೂ ನಮಗೆ ಆಫೀಸ್ ಪಕ್ಕದ ಹೋಟೆಲ್ಲೇ ಗತಿ. ಅಲ್ಲಿ ಸಿಗೋ ಮಿನಿ ಇಡ್ಲಿ, ಎಷ್ಟು ಹುಡುಕಿದ್ರೂ ಒಂದು ಬದ್ನೆಕಾಯಿ ಪೀಸ್ ಸಿಗದೇಯಿರೋ ವಾಂಗಿಭಾತೇ ಪರಮಾನ್ನ. ಎಲ್ಲಾ ಬ್ಯಾಚುಲರ್ಸ್ ಬದುಕೂ ಹೀಗೇನಾ ಅಂತ ಡೌಟ್ ಇತ್ತು ನಂಗೆ. ಪಕ್ಕದ ಹೋಟೆಲ್ ಹುಡುಗನ್ನ ಕೇಳಿದೆ, ಊರಿಗೆ ಹೊಗಿಲ್ವೇನ್ರಿ" ಅಂತ. ಅಯ್ಯೋ ಯಜಮಾನ್ರು ರಜಾ ಕೊಡಲಿಲ್ಲ ' ಅಂದ ಅವನು. ನಿಂದೂ ನನ್ನ ತರದ್ದೇ ಬದುಕು ಬಿಡು ಅನ್ಕೊಂಡೆ.

ನಮ್ಮ ಆಫೀಸಿನ ಗುಂಡುರಾವ್ ನಮಗ್ಯಾವ ಹಬ್ಬ ಬಿಡು ಗುರು, ಇನ್ನೂ ಎಪಿಸೋಡ್ ಹೋಗಿಲ್ಲ" ಅಂತ ಯಾರಿಗೋ ಹೇಳ್ತಾ ಇದ್ದಿದ್ದು ಕಿವಿಗೆ ಬಿತ್ತು… ಮದುವೆಯಾಗಿರೋ ಅನಿಲ್ ಹಬ್ಬದ ಹೆಸರಲ್ಲಿ ರಜಾ ಹಾಕಿ ಇಷ್ಟು ಹೊತ್ತಿಗೆ ಊರಲ್ಲಿ ಸೆಟಲ್ ಆಗಿರ್ತಾನೆ. ಇನ್ನುಳಿದಂತೆ ಬ್ಯಾಚುಲರ್ ಗಳು ಮಾತ್ರ ಎಂದಿನಂತೆ ಕೆಲಸದಲ್ಲಿ ಫುಲ್ ಬ್ಯುಸಿ. ಏನಾದ್ರೂ ಆಗ್ಲಿ ಅಂತ ಸಂಜೆ ಪಕ್ಕದ ಹೋಟೆಲ್ ಗೆ ಹೋದೆ, ಅಲ್ಲಿ ಸಿಗೋ ಕಾಯಿ ಹೋಳಿಗೆನಾದ್ರೂ ತಿಂದು ಬರೋಣ ಅಂತ. ಗ್ರಹಚಾರಕ್ಕೆ ಅದೂ ಬಾಗಿಲು ಹಾಕಿತ್ತು. ವಾಪಸ್ ಬರಬೇಕಾದ್ರೆ ನನ್ನ ಬೈಕ್ ಕಡೆ ಕಣ್ಣು ಹಾಯಿಸ್ದೆ. ಎಲ್ಲಾ ಸಿಂಗಾರಗೊಂಡ ಬೈಕುಗಳ ನಡುವೆ ಅದು ಒಂದು ಶಾವಂತಿಗೆ ಹೂಗಬ ಗತಿಯಿಲ್ದೆ ಅನಾಥ ಪ್ರಜ್ಞೆ ಹೊತ್ತು ಅಲ್ಲೇ ನಿಂತಿತ್ತು. ದೀಪಾವಳಿಗೆ ನಾನೇ ಸ್ನಾನ ಮಾಡಿಸ್ತೀನಿ, ಡೋಂಟ್ ವರಿ…" ಅಂತ ಹೇಳಿ ಲಿಫ್ಟ್ ಹತ್ತಿ ನನ್ನ ಸಿಸ್ಟಂ ಎದುರು ಕೂತು ಈ ಒಂಟಿರೋದನ ಬರ್ಕೊತಾ ಇದೀನಿ. ಹಬ್ಬಾ ಹುಣ್ಣಿಮೆ ಮಾಡ್ತಾಯಿರೋ ನೀವೆಲ್ಲ ನನ್ನ ಫಜೀತಿ ಓದಿ ಮಜಾ ತೊಗೊತಾಯಿದಿರಾಂತ ಗೊತ್ತು. ಇರ್ಲಿ ಬಿಡ್ರೋ. ನನ್ಗೂ ಒಂದು ಕಾಲ ಬತ್ತೈತೆ, ಬತ್ತೈತೆ. ಆವಾಗ ನೋಡ್ಳೊಳವಾ.[ಕೃಪೆ : ನಾನ್ ಕೀರ್ತಿ ಬ್ಲಾಗ್ ]

English summary
How singles spend time during festival season? A Bangalore bachelors confessions, Mysore Dasara special.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X