ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ: ಸಂಭ್ರಮದ ಗಜಪಯಣಕ್ಕೆ ಸಿದ್ಧತೆ

By Staff
|
Google Oneindia Kannada News

ಮೈಸೂರು, ಆ. 11 : ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮ ಗಜಪಯಣಕ್ಕೆ ಅದ್ದೂರಿಯ ಚಾಲನೆ ನೀಡಲು ಸರ್ವಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ ಮಣಿವಣ್ಣನ್ ಅಧಿಕಾರಿಗಳಿಗೆ ಸೂಚಿಸಿದರು.

ದಿನಾಂಕ 13.8.09 ರಂದು ಗುರುವಾರ ಬೆಳಿಗ್ಗೆ 11.30 ಕ್ಕೆ ಹುಣಸೂರು ತಾಲ್ಲೂಕು ವೀರನಹೊಸಳ್ಳಿಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಗಜಪಯಣಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದು ಹುಣಸೂರು ಶಾಸಕ ಹೆಚ್ ಪಿ ಮಂಜುನಾಥ್ ಸಮಾರಂಭದ ಅಧ್ಯಕ್ಷತೆ ವಹಿಸುವರು.

ಸಮಾರಂಭದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಎಸ್ ಎ ರಾಮದಾಸ್, ಗೃಹ ಮಂಡಳಿ ಅಧ್ಯಕ್ಷ ಜಿ ಟಿ ದೇವೇಗೌಡ, ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಪುರುಷೋತ್ತಮ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್ ಎನ್ ಸಿದ್ದಾರ್ಥ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಗಜಪಯಣ ಸಮಾರಂಭವನ್ನು ವ್ಯವಸ್ಥಿತವಾಗಿ ಏರ್ಪಡಿಸಲು ಉಪ ಅರಣ್ಯ ಸಂರಕ್ಷಣಾಧಿಕಾರಿ ಯತೀಶ್ ಕುಮಾರ್ ಅವರನ್ನು ಸಮನ್ವಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಟಿಬೆಟಿಯನ್ ನೃತ್ಯ, ಬುಡಕಟ್ಟು ನೃತ್ಯ, ಹುಣಸೂರು ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ತಿಳಿಸಲಾಯಿತು.

ಮಾರ್ಗಮಧ್ಯದಲ್ಲಿ ಸ್ವಾಗತ ಕಮಾನುಗಳನ್ನು ಹಾಕುವುದು, ಸಮಾರಂಭದ ಸ್ಥಳದಿಂದ 1 ಕಿ.ಮೀ.ವರೆಗೆ ಧ್ವಜಸ್ಥಂಭಗಳನ್ನು ಹಾಕುವುದು, ರಂಗೋಲಿ, ತಳಿರು ತೋರಣಗಳಿಂದ ಗಜಪಯಣ ಆರಂಭದ ಮಾರ್ಗಗಳನ್ನು ಅಲಂಕರಿಸುವುದರ ಮೂಲಕ ಸಮಾರಂಭವನ್ನು ವರ್ಣರಂಜಿತವಾಗಿ ಏರ್ಪಡಿಸಲು ತಿಳಿಸಲಾಯಿತು. ನೃತ್ಯ ಕಾರ್ಯಕ್ರಮ ನೀಡುವ ಬುಡಕಟ್ಟು ಬಾಲಕ ಬಾಲಕಿಯರು ಹಾಗೂ ಟಿಬೆಟಿಯನ್ ಕಲಾವಿದರೆಲ್ಲರಿಗೂ ಹೊಸ ಉಡುಪುಗಳನ್ನು ದಸರಾ ಸಮಿತಿಯಿಂದಲೇ ನೀಡಲು ಯತೀಶ್‌ಕುಮಾರ್ ಅವರಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಆಗಸ್ಟ್ 15 ರಂದು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಬೆಳಿಗ್ಗೆ 11.30 ಕ್ಕೆ ಮೈಸೂರಿನಲ್ಲಿ ಆನೆಗಳನ್ನು ಸ್ವಾಗತಿಸುವ ಕಾರ್ಯಕ್ರಮವಿದ್ದು, ಅರಮನೆ ಮಂಡಳಿ ಉಪನಿರ್ದೇಶಕ ಅವರಾದಿ ಅವರು ಈ ಬಗ್ಗೆ ಸಕಲ ಏರ್ಪಾಡು ಮಾಡಿಕೊಳ್ಳಬೇಕೆಂದು ತಿಳಿಸಲಾಯಿತು. ಅಪರ ಜಿಲ್ಲಾಧಿಕಾರಿ ಬೆಟ್ಟಸೂರ ಮಠ, ಡಿಸಿಎಫ್ ಕಾಂತರಾಜು, ನಾಗರಹೊಳೆ ಪುನರ್ವಸತಿ ಕೇಂದ್ರದ ಎಂ ಬಿ ಪ್ರಭು ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಮೊದಲ ತಂಡದ ಆನೆಗಳ ಪರಿಚಯ:

ಬಲರಾಮ

ಗಂಡು, ವಯಸ್ಸು 51. ಎತ್ತರ 2.7 ಮೀಟರ್, ಉದ್ದ 3.77 ಮೀಟರ್, ಅಂದಾಜು ತೂಕ 4900 ಕೆಜಿ. ಹುಣಸೂರು ವನ್ಯಜೀವಿ ವಿಭಾಗದ ತಿತಿಮತಿ ಆನೆ ಶಿಬಿರಕ್ಕೆ ಸೇರಿದೆ. ಈ ಆನೆಯ ತುಂಬಾ ಸೌಮ್ಯ ಸ್ವಭಾವದಾಗಿದ್ದು, ಇದನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದು, ಈ ಆನೆಯು ತುಂಬಾ ಬಲಶಾಲಿಯಾಗಿದೆ. ಸುಮಾರು 14 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿ. ಹಿಂದಿನ ಅಂಬಾರಿ ಆನೆ ದ್ರೋಣನ ನಂತರ ಕಳೆದ 10 ವರ್ಷಗಳಿಂದ ಚಿನ್ನದ ಅಂಬಾರಿಯನ್ನು ಹೊರುತ್ತಿದೆ. ಈ ಬಾರಿಯೂ ಕೂಡ ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ವಹಿಸಲಾಗಿದೆ.

ಅಭಿಮನ್ಯು

ಗಂಡು, ವಯಸ್ಸು 43. ಎತ್ತರ 2.68 ಮೀಟರ್, ಉದ್ದ 3.51 ಮೀಟರ್, ಅಂದಾಜು ತೂಕ 4270 ಕೆಜಿ. ಹುಣಸೂರು ವನ್ಯಜೀವಿ ವಿಭಾಗದ ತಿತಿಮತಿ ಆನೆ ಶಿಬಿರಕ್ಕೆ ಸೇರಿದೆ. ಇದನ್ನು ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. ಈ ಆನೆಯ ವಿಶೇಷ ಗುಣವೆಂದರೆ ಕಾಡಾನೆಯನ್ನು ಹಿಡಿದು ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಆನೆಯು ಸುಮಾರು 11 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ. ಅರಮನೆ ವಾದ್ಯ ಸಂಗೀತದ ಗಾಡಿಯನ್ನು ಎಳೆಯುವ ಜವಾಬ್ದಾರಿಯನ್ನು ಹೊತ್ತಿರುತ್ತದೆ.

ವರಲಕ್ಷ್ಮಿ

ಹೆಣ್ಣು , ವಯಸ್ಸು 54. ಎತ್ತರ 2.29 ಮೀಟರ್, ಉದ್ದ 3 ಮೀಟರ್, ಅಂದಾಜು ತೂಕ 3090 ಕೆಜಿ. ಹುಣಸೂರು ವನ್ಯಜೀವಿ ವಿಭಾಗದ ಸುಂಕದಕಟ್ಟೆ ಶಿಬಿರಕ್ಕೆ ಸೇರಿದೆ. ಈ ಆನೆಯು ತುಂಬಾ ಸಾಧು ಸ್ವಭಾವದ್ದಾಗಿದ್ದು, ಇದನ್ನು 1977ರಲ್ಲಿ ಕಾಕನಕೋಟೆಯಲ್ಲಿ ಸೆರೆ ಹಿಡಿಯಲಾಯಿತು. ಈ ಆನೆಯು 6 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ.

ಗಜೇಂದ್ರ

ಗಂಡು, ವಯಸ್ಸು 54. ಎತ್ತರ 2.84 ಮೀಟರ್, ಉದ್ದ 3.80 ಮೀಟರ್, ಅಂದಾಜು ತೂಕ 4570 ಕೆಜಿ. ಹುಣಸೂರು ವನ್ಯಜೀವಿ ವಿಭಾಗದ ನಾಗರಹೊಳೆ ಆನೆ ಶಿಬಿರಕ್ಕೆ ಸೇರಿದೆ. ಇದನ್ನು 1982ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಈ ಆನೆಯ ವಿಶೇಷ ಗುಣವೆಂದರೆ ಕಾಡಾನೆಯನ್ನು ಹಿಡಿದು ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಆನೆಯು ಬಲಿಷ್ಠವಾಗಿರುತ್ತದೆ. ಈ ಆನೆಯು ಸುಮಾರು 13 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದು, ಇದು ದಸರಾ ಮಹೋತ್ಸವದ ಪಟ್ಟದ ಆನೆಯ ಜವಾಬ್ದಾರಿಯನ್ನು ಹೊತ್ತಿರುತ್ತದೆ.

ಅರ್ಜುನ

ಗಂಡು, ವಯಸ್ಸು 49. ಎತ್ತರ 2.80 ಮೀಟರ್, ಉದ್ದ 3.75 ಮೀಟರ್, ಅಂದಾಜು ತೂಕ 4750 ಕೆಜಿ. ಹುಣಸೂರು ವನ್ಯಜೀವಿ ವಿಭಾಗದ ಬಳ್ಳೆ ಆನೆ ಶಿಬಿರಕ್ಕೆ ಸೇರಿದೆ. ಈ ಆನೆಯನ್ನು 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಈ ಆನೆಯು ಒಂದು ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿರುತ್ತದೆ.

ಸರಳ

ಹೆಣ್ಣು, 67 ವರ್ಷಗಳು. ಎತ್ತರ 2.46 ಮೀಟರ್, ಉದ್ದ 3.34 ಮೀಟರ್, ಅಂದಾಜು ತೂಕ 3250 ಕೆಜಿ. ಹುಣಸೂರು ವನ್ಯಜೀವಿ ವಿಭಾಗದ ಸುಂಕದಕಟ್ಟೆ ಆನೆ ಶಿಬಿರಕ್ಕೆ ಸೇರಿದೆ. ಇದನ್ನು 1968ರಲ್ಲಿ ಖೆಡ್ಡಾದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದು, ಈ ಆನೆಯು ಸುಮಾರು 10 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X