ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತಾಯಿ ಚರಣಕ್ಕೆ ವಂದಿಸಿ, ದಸರೆ ಆಚರಿಸಿ

By ವರದಿ: ಟಿ.ಸಿ.ಮಂಜುನಾಥ ಬಾಬು, ಮೈಸೂರು
|
Google Oneindia Kannada News

Stage set for grand dasara festಈ ಬಾರಿ ನಾಡವರೆಲ್ಲರ ನಾಡ 'ದಸರಾ'
ಮಾರ್ನೋಮಿ ಆಯುಧ ಪೂಜೆಯ ಮಾಡಿ
ಮಾತಾಯಿ ಚರಣದಿ ವರವನು ಬೇಡಿ....

ಬನ್ನಿ, ತಾಯಿ ಚಾಮುಂಡಿಗೆ ನಮಿಸಿ ಮೈಸೂರು ಪ್ರವೇಶಿಸೋಣ. ವಿಶ್ವವಿಖ್ಯಾತ ಮೈಸೂರು ದಸರೆಗೆ ಬಿರುಸಿನ ಸಿದ್ಧತೆಗಳು ಪೂರ್ಣಗೊಳ್ಳುವ ಹಂತಕ್ಕೆ ಬರುತ್ತಿದೆ. ಸೆಪ್ಟೆಂಬರ್ 30ರಂದು ಅದ್ಧೂರಿ ಆರಂಭ. 'ನಡೆದಾಡುವ ದೇವರು' ಎಂದೇ ಖ್ಯಾತರಾದ ಸಿದ್ಧಗಂಗಾ ಮಠಾಧಿಪತಿ ಡಾ| ಶಿವಕುಮಾರ ಸ್ವಾಮೀಜಿಗಳಿಂದ ದಸರಾ ಉತ್ಸವ ಉದ್ಘಾಟನೆಗೊಳ್ಳಲಿದೆ. ರಾಜ್ಯಪಾಲರಿಗೂ ಆಹ್ವಾನ ನೀಡಲಾಗಿದೆ. ದಸರೆಗೆ ಎಲ್ಲ ರೀತಿ ಸಹಕಾರ ಕೋರಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೂ ಆಮಂತ್ರಣ ನೀಡಲಾಗಿದೆ.

ಪಾರಂಪರಿಕ ದಸರೆಯನ್ನು ಜನಾದರಣೀಯ ದಸರಾ ಮಾಡುವ ಉದ್ದೇಶ ರಾಜ್ಯ ಸರ್ಕಾರದ್ದು. ಹೀಗಾಗಿ, ಈ ಬಾರಿ ಆಯವ್ಯಯದಲ್ಲಿ ದಸರೆಗೆ ಹತ್ತು ಕೋಟಿ ರೂ. ನಿಗದಿಪಡಿಸಲಾಗಿತ್ತು. ದಸರಾ ಉನ್ನತಾಧಿಕಾರ ಸಮಿತಿ ಅಧ್ಯಕ್ಷರಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ದಸರಾ ಕಾರ್ಯಕಾರಿ ಸಮಿತಿ ಅಧ್ಯಕ್ಷೆಯಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವೆ ಶೋಭಾ ಕರಂದ್ಲಾಜೆ ಅವರು ದಸರಾ ಸಿದ್ಧತೆಗಳಿಗೆ ಹಲವು ಸುತ್ತು ಸಭೆ ನಡೆಸಿ ಸಿದ್ಧತೆಗೆ ಚಾಲನೆ ನೀಡಿದ್ದಾರೆ. ದಸರಾ ವಿಶೇಷಾಧಿಕಾರಿಯೂ ಆಗಿರುವ ಮೈಸೂರು ಜಿಲ್ಲಾಧಿಕಾರಿ ಪಿ.ಮಣಿವಣ್ಣನ್ ನೇತೃತ್ವದಲ್ಲಿ ಐವರು ಉಪವಿಶೇಷಾಧಿಕಾರಿಗಳ ಸಮನ್ವಯತೆಯಲ್ಲಿ ದಸರಾ ಆಚರಣೆಗೆ ಒಟ್ಟು 21 ಉಪಸಮಿತಿಗಳನ್ನು ರಚಿಸಲಾಗಿದೆ.

ಸರ್ವ ಜನಾಂಗಕ್ಕೂ ಪ್ರಾತಿನಿಧ್ಯ

ದಸರಾ ಆಚರಣೆಯಷ್ಟೇ ಜನಸಾಮಾನ್ಯರೆಲ್ಲರಿಗೂ ಮಹತ್ವ ದೊರೆಯಬೇಕೆಂಬುದು ಸರ್ಕಾರದ ನಿರ್ಧಾರ. ಈ ಹಿನ್ನಲೆಯಲ್ಲಿ ಈ ಬಾರಿ ಹಲವು ಹೊಸ ಸಮಿತಿ ಕಾರ್ಯೋನ್ಮುಖವಾಗಿವೆ. ಸಾಹಸಪ್ರಿಯರಿಗಾಗಿ ಏರ್ ಷೋ ಸಮಿತಿ, ರೈತರಿಗಾಗಿ ರೈತ ದಸರಾ ಸಮಿತಿ, ತಾಲ್ಲೂಕುಗಳಲ್ಲಿನ ಆಚರಣೆಗೆ ಗ್ರಾಮೀಣ ದಸರಾ ಸಮಿತಿ, ಜನಪದ - ಸಂಸ್ಕೃತಿ ವಿಕಾಸಕ್ಕೆ ದಸರಾ ಜನಪದ ತೇರು ಸಮಿತಿ, ಮಹಿಳಾ ಮತ್ತು ಮಕ್ಕಳ ಸಮಿತಿ, ಆರೋಗ್ಯ ಚೈತನ್ಯಕ್ಕೆ ಯೋಗ ಸಮಿತಿ ರಚಿಸಲಾಗಿದೆ.

ಈ ಬಾರಿ ದಸರಾಕ್ಕೆ ಬಿಡುಗಡೆಯಾಗಿರುವ ಹಣದಲ್ಲಿ ಕಾಯಂ ಕಾಮಗಾರಿಗಾಗಿ ಹೆಚ್ಚು ಹಣ ವಿನಿಯೋಗಿಸಲಾಗುತ್ತಿದೆ. ಮೈಸೂರಿಗೆ ಬರುವ ಪ್ರವಾಸಿಗರನ್ನು ಸೆಳೆಯಲು ಉತ್ತಮ ರಸ್ತೆಗಳು, ನಳನಳಿಸುವ ಪಾರ್ಕ್ ಗಳು, ದೇವನಗರಿಯಂತೆ ಕಂಗೊಳಿಸಲು ಚಾಮುಂಡಿಬೆಟ್ಟದ ಸ್ವಾಗತ ದೀಪಾಲಂಕಾರ, ಅರಮನೆ ಹಾಗೂ ವಸ್ತುಪ್ರದರ್ಶನಗಳ ಕಾಯಂ ದೀಪಾಲಂಕಾರದ ಜೊತೆಗೆ ಫಿಲಿಪ್ಸ್ ಸಂಸ್ಥೆ ಕೈಜೋಡಿಸುವ ಮೂಲಕ ನಗರದ ಬಹುಪಾಲು ರಸ್ತೆ, ಸಾಲುಮರಗಳು, ಕಟ್ಟಡಗಳು ದೀಪಾಲಂಕಾರದಿಂದ ಜಗಮಗಿಸಲಿವೆ. ವಸ್ತುಪ್ರದರ್ಶನ ಕಸರಹಿತವಾಗಿ ಕಂಗೊಳಿಸಲಿದೆ.

ಜಂಬೂಸವಾರಿ ಹಾದಿಯಲ್ಲಿ ಎತ್ತಿನಗಾಡಿ ದರ್ಬಾರ್

ಹೌದು, ಈ ಬಾರಿ ಮೈಸೂರು ನಗರದಲ್ಲಷ್ಟೇ ಅಲ್ಲ, ತಾಲೂಕುಗಳಲ್ಲಿ ಅಕ್ಟೋಬರ್ 1ರಿಂದ 7ರವರೆಗೆ ಗ್ರಾಮೀಣ ದಸರಾ ಆಚರಣೆ ನಡೆಯಲಿದೆ. ರೈತರು ಕೂಡ ದಸರೆಯಲ್ಲಿ ತಮ್ಮ ಹಳ್ಳಿಗಳಲ್ಲಿಯೇ ಭಾಗಿಯಾಗಬೇಕು ಎಂಬುದು ಮುಖ್ಯಮಂತ್ರಿಗಳ ಸದಾಶಯ. ಅಕ್ಟೋಬರ್1ರಿಂದ ರೈತ ದಸರಾ ನಡೆಯಲಿದೆ. ಜಂಬೂ ಸವಾರಿಯಂತೆಯೇ 5 ದಿನಗಳ ಕಾಲ ಎತ್ತಿನ ಬಂಡಿಗಳ ಸಾಲು ಸಾಲು ಮೆರವಣಿಗೆ ನಡೆಯಲಿರುವುದು ಈ ಬಾರಿಯ ವಿಶೇಷ. ಕೃಷಿಕರ ಸವಾಲುಗಳು, ಸಾಧನೆ, ಕೃಷಿ ಕ್ಷೇತ್ರದ ಹೊಸ ತಂತ್ರಜ್ಞಾನ, ಸಾವಯವ ಕೃಷಿಗೆ ಒತ್ತು ನೀಡುವ ವಸ್ತುಪ್ರದರ್ಶನ, ಚರ್ಚೆಗಳು, ಪೌರಾಣಿಕ ನಾಟಕ ಸ್ಪರ್ಧೆ, ಸೈಕಲ್ ಸ್ಪರ್ಧೆ, ಗೋಣಿಚೀಲದ ಓಟ, ತೆಂಗಿನಕಾಯಿ ಒಡೆಯುವ ಸ್ಪರ್ಧೆ ಹೀಗೆ ಹತ್ತಾರು ಕಾರ್ಯಕ್ರಮಗಳು ನಡೆಯಲಿವೆ.

ಮಹಿಳೆ, ಮಕ್ಕಳಿಗೆ ವಿಶೇಷ ಆದ್ಯತೆ : ಅಕ್ಟೋಬರ್ 2ರಿಂದ 4 ರವರೆಗೆ ಮಹಿಳಾ ಮತ್ತು ಮಕ್ಕಳ ದಸರಾ ಜೀವಣ್ಣರಾಯಕಟ್ಟೆ ಮೈದಾನದಲ್ಲಿ ನಡೆಯಲಿದೆ. ಮಹಿಳೆಯರ ಪ್ರತಿಭೆ, ಚಿಂತನೆ, ಮನದಾಳದ ಪಿಸುಮಾತುಗಳಿಗೆ, ಮನದ ದನಿಗೆ ಪ್ರಥಮ ಬಾರಿ ವೇದಿಕೆ ಸಿಗಲಿದೆ. ಸ್ತ್ರೀಶಕ್ತಿ ಸಂಘಗಳ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ 20 ಮಳಿಗೆಗಳು, ಗ್ರಾಮೀಣ ಮಹಿಳೆಯರ ಪ್ರತಿಭಾ ಪ್ರದರ್ಶನಕ್ಕೆ ವ್ಯವಸ್ಥೆಯಾಗಿದೆ. ಈ ಬಾರಿಯ ದಸರಾದಲ್ಲಿ ಪುರುಷ ಕುಸ್ತಿ ಸ್ಪರ್ಧೆಗಳಲ್ಲದೆ ಮಹಿಳಾ ಕುಸ್ತಿ, ಕರಾಟೆ ಸ್ಪರ್ಧೆಗಳೂ ಇವೆ. ದಸರಾ ಕ್ರೀಡಾಕೂಟಕ್ಕೆ ಪೂರ್ವಭಾವಿಯಾಗಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಗಳು ನಡೆದಿವೆ.

ಕುಸ್ತಿ, ಕರಾಟೆ ಹಾಗೂ ಕ್ರೀಡಾಕೂಟಗಳ ಉದ್ಘಾಟನೆಗೆ ಈ ಬಾರಿಯ ಒಲಿಂಪಿಕ್ಸ್ ಪದಕ ವಿಜೇತರಾದ ಸುಶೀಲ್ ಕುಮಾರ್ ಮತ್ತು ಅಭಿನವ್ ಬಿಂದ್ರಾ ಬರಲಿದ್ದಾರೆ. ಸಾಹಿತ್ಯ ಪ್ರಿಯರಿಗಾಗಿ ಎಂದಿನಂತೆ ಕವಿಗೋಷ್ಠಿ, ಎಳೆಯರಿಗಾಗಿ ಚಿಗುರು ಕವಿಗೋಷ್ಠಿ, ಯುವ ಪ್ರತಿಭೆಗಳಿಗಾಗಿ ಅರಳು ಕವಿಗೋಷ್ಠಿ ಹಾಗೂ ಚುಟುಕು ಕವಿಗೋಷ್ಠಿಗಳು ವ್ಯವಸ್ಥೆಯಾಗಿವೆ. ಚಲನಚಿತ್ರೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಭರದ ಸಿದ್ಧತೆ ನಡೆದಿದೆ. ವಿಶೇಷ ವೆಬ್‌ಸೈಟ್, ಮಾಹಿತಿಕೇಂದ್ರಗಳು ಕಾರ್ಯನಿರ್ವಹಿಸಲಿವೆ. ದಸರಾ ಫಲಪುಷ್ಪಪ್ರದರ್ಶನವು ಸೆ. 26ರಿಂದ ಆರಂಭವಾಗಿ ಹಲವು ಸ್ಪರ್ಧೆಗಳು ಬಹುಮಾನ ವಿತರಣೆಯೊಡನೆ ಅ.10 ರಂದು ಕೊನೆಗೊಳ್ಳಲಿದೆ.

ನಾದಮಯ ಈ ದಸರೆ : ಸಂಗೀತ ಪ್ರಪಂಚದ ದಿಗ್ಗಜರಾದ ಕೆ.ಜೆ.ಯೇಸುದಾಸ್, ಪಂಡಿತ ಶಿವಕುಮಾರ ಶರ್ಮ, ಜಗಜೀತ್ ಸಿಂಗ್ ಮುಂತಾದವರ ಸಂಗೀತ ಸುಧೆ ಕೇಳಲು ಸಂಗೀತ ಪ್ರಿಯರು ತುದಿಗಾಲಲ್ಲಿದ್ದಾರೆ. ಯುವದಸರೆಗಾಗಿ ಯುವಕರ ಹಿಂಡು ಹಾತೊರೆಯುತ್ತಿದೆ. ಈ ಬಾರಿ ದಸರೆಯಲ್ಲಿ ಪಾರಂಪರಿಕ ನಡಿಗೆ, ಮೈಸೂರು ಟಾಂಗಾ ಪ್ರವಾಸ, ವಿವಿಧ ಸಾಹಸ ಕ್ರೀಡೆಗಳು, ಪ್ರವಾಸಿಗರಿಗಾಗಿ ವಿಶೇಷ ಪ್ರವಾಸಿ ತಾಣ ವೀಕ್ಷಣೆ ವ್ಯವಸ್ಥೆ, ವಿಶೇಷ ಬಸ್ ವ್ಯವಸ್ಥೆಗಳು, ವಾಸ್ತವ್ಯಕ್ಕೆ ಹೊಟೆಲ್‌ಗಳು, ಸ್ಟೇ ಹೋಮ್‌ಗಳು ಸಿದ್ದಗೊಂಡಿವೆ.

ಇಷ್ಟು ನೋಡಿದ ಮೇಲೆ ಹಸಿವಾಯಿತೆ? ಆಹಾರಮೇಳಕ್ಕೆ ಬನ್ನಿ. 25 ಆಹಾರ ಮಳಿಗೆಗಳಿವೆ. ಇವುಗಳಲ್ಲಿ ಉತ್ತರ ಹಾಗೂ ದಕ್ಷಿಣ ಭಾರತೀಯ ಶೈಲಿಯ ರುಚಿಕಟ್ಟಾದ ಆಹಾರಗಳು ಲಭ್ಯ. ಜೊತೆಗೆ ತಿಂಡಿ ತಿನ್ನುವ ಸ್ಪರ್ಧೆ ಇದೆ. ತಿಂದಿದ್ದು ಅರಗಿಸಲು ಯೋಗ ದಸರ ಇದೆ. ಪಾರಂಪರಿಕ ಯೋಗದ ಜತೆ ದಸರಾ ಯೋಗ ಛಾಂಪಿಯನ್‌ಶಿಪ್ ನೀಡಲಾಗುವುದು.

ಪೊಲೀಸ್ ಸರ್ಪಗಾವಲು : ದಸರೆಗೆ ಈ ಬಾರಿ 30 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಈ ಬಾರಿಯ ದಸರೆಗೆ ರಾಜ್ಯದ ಎಲ್ಲಾ ಸಂಸದ್ ಸದಸ್ಯರು, ಶಾಸಕರು ಹಲವಾರು ವಿದೇಶಿ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಜುಲೈ 25ರಂದು ಬೆಂಗಳೂರಿನಲ್ಲಾದ ಸರಣಿ ಬಾಂಬ್ ಸ್ಫೋಟ ಮತ್ತು ಸೆಪ್ಟೆಂಬರ್ 26ರಂದು ಧಾರವಾಡದಲ್ಲೂ ಬಾಂಬ್ ದೊರೆತಿರುವ ಹಿನ್ನೆಲೆಯಲ್ಲಿ ಮೈಸೂರು ದಸರೆಯ ಮೇಲೂ ಭಯೋತ್ಪಾದನೆ ಕರಿನೆರಳಿನ ಆವರಿಸಿಕೊಂಡಿದೆ. ಜಿಲ್ಲಾ ದಂಡಾಧಿಕಾರಿ ಪಿ.ಮಣಿವಣ್ಣನ್ ಈ ಬಗ್ಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ. ಹೆಚ್ಚಿನ ಪೊಲೀಸ್ ತುಕಡಿಗಳು ಬಿಗಿ ಪಹರೆಗಾಗಿ ಆಗಮಿಸುತ್ತಿವೆ. ನಗರದೆಲ್ಲೆಡೆ ಸಿಸಿ ಕ್ಯಾಮರಾಗಳು ಕಣ್ಗಾವಲಾಗಿ ಕಾರ್ಯಪ್ರವೃತ್ತವಾಗಲಿವೆ. ಬನ್ನಿ, ಹೇಳುತ್ತಾ ಹೋದರೆ ನೂರು, ಸಾವಿರ ಮಾತುಗಳಿವೆ. ಅದರ ಬದಲು ನಾವೇ ದಸರೆಗೆ ಹೋಗೋಣ. ಕಣ್ಣು, ತನು-ಮನ ತಣಿಸಿ ಸಂಭ್ರಮಿಸೋಣ.

ಮೈಸೂರು ದಸರಾ ಉತ್ಸವಕ್ಕೆ ಸಿನಿಮಾ ಥಳಕು
ಪಾಕಶಾಲೆ: ಘಂ ಎನ್ನುವ ಮೈಸೂರು ಹುಳಿ
ಮೈಸೂರು ದಸರಾಗೆ ಗಜರಾಜನ ಆಗಮನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X