ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಸುವಿನ ಇತಿಹಾಸ ನೆನಪಿಸುವ ಕೊಡಗಿನ ಸಂತ ಅನ್ನಮ್ಮ ಚರ್ಚ್

By ಬಿ.ಎಂ ಲವಕುಮಾರ್
|
Google Oneindia Kannada News

ಚರ್ಚ್ ಎಂದಾಕ್ಷಣ ನಮ್ಮ ಕಣ್ಮುಂದೆ ಮೈಸೂರಿನ ಸಂತ ಫಿಲೋಮಿನಾ ಚರ್ಚ್ ಬಂದು ನಿಲ್ಲುತ್ತದೆ. ವಿಭಿನ್ನ, ವಿಶಿಷ್ಟ ಮತ್ತು ಐತಿಹಾಸಿಕವಾಗಿರುವ ಈ ಚರ್ಚ್ ಮೈಸೂರಿಗೊಂದು ಮುಕುಟ ಮಣಿಯಂತಿದೆ.ಇಂತಹದ್ದೇ ಒಂದು ಐತಿಹಾಸಿಕ ಚರ್ಚ್ ಕೊಡಗಿನ ವೀರಾಜಪೇಟೆಯಲ್ಲಿದೆ. ಸಂತ ಅನ್ನಮ್ಮ ಚರ್ಚ್ ಎಂದೇ ಕರೆಯಲ್ಪಡುವ ಚರ್ಚ್ ಈಗಾಗಲೇ 223 ವಸಂತಗಳನ್ನು ಕಂಡಿದೆ.

1791-92ರಲ್ಲಿ ಮೂರನೇ ಆಂಗ್ಲೋ-ಮೈಸೂರು ಯುದ್ದ ಸಮಯದಲ್ಲಿ ಶ್ರೀರಂಗಪಟ್ಟಣದಿಂದ ಕೊಡಗಿಗೆ ದಿಕ್ಕುಪಾಲಾಗಿ ಬಂದ ಸುಮಾರು 700 ಕ್ರೈಸ್ತರಿಗೆ ದೊಡ್ಡವೀರರಾಜೇಂದ್ರನು ಆಶ್ರಯ ನೀಡಿ, ಅವರ ಮತ ಧರ್ಮವನ್ನು ಪಾಲಿಸಲು ಅನುಕೂಲವಾಗುವಂತೆ ಗೋವಾದಿಂದ ಜುವಾಂವ್ ಡಿ'ಕೋಸ್ಟ ಎಂಬ ಧರ್ಮಗುರುವನ್ನು ಕರೆಸಿ 1792ರ ನವೆಂಬರ್ 10ರಂದು ಈ ಚರ್ಚ್ ನ್ನು ಕಟ್ಟಿಸಿದನು ಎಂಬುದಾಗಿ ಇತಿಹಾಸ ಹೇಳುತ್ತದೆ.

ದೂರದಿಂದಲೇ ಸೆಳೆಯುವ ಚರ್ಚ್ ಪ್ರಾಚೀನ-ಅವಾರ್ಚೀನ ಶೈಲಿಯ ವಾಸ್ತುಶಿಲ್ಪ ಹೊಂದಿದ್ದು, ಭವ್ಯ ಗಾಥಿಕ್ ಶೈಲಿಯಲ್ಲಿ ಶೃಂಗ ತ್ರಿಕೋನ ಬಾಹುಗಳ ಮುಖಗೋಪುರವಿದೆ. ದೀರ್ಘ ವೃತ್ತಾಕಾರದ ಪ್ರವೇಶ ದ್ವಾರಗಳಿವೆ. ಗೋಪುರವು ಸುಮಾರು 150 ಅಡಿಗಳಷ್ಟು ಎತ್ತರವಿದ್ದು, ಇದರ ಮೇಲೆ ಪಂಚಲೋಹದ 6 ಅಡಿ ಎತ್ತರದ ಶಿಲುಬೆಯನ್ನು ಸ್ಥಾಪಿಸಲಾಗಿದೆ.

ಚರ್ಚ್ ಸಮೀಪದಲ್ಲಿ ಲೂರ್ದ್ ಮಾತೆಯ ಸ್ಮರಣಾರ್ಥವಾಗಿ ನಿರ್ಮಿಸಲಾದ ಫ್ರಾನ್ಸ್ ನ "ಲೂರ್ದ್" ಮಾದರಿಯ ಸುಂದರ ಕೃತ್ರಿಮ ಗವಿಯಿದೆ. ಸಾಲ್ವದೋರ್ ಪಿಂಟೋ ಹಾಗೂ ದೋನಾಥ್ ಲೋಬೋರವರ ಜ್ಞಾಪಕಾರ್ಥವಾಗಿ ಪ್ಯಾರೀಸ್ ನಿಂದ ತರಿಸಲ್ಪಟ್ಟ ಇಂಪಾದ ನಿನಾದವನ್ನು ಹೊರಹೊಮ್ಮಿಸುವ ಬೃಹದಾಕಾರದ ಎರಡು ಗಂಟೆಗಳನ್ನು ಸುಮಾರು ನೂರು ಅಡಿಗಳಷ್ಟು ಎತ್ತರದಲ್ಲಿ ಅಳವಡಿಸಲಾಗಿದೆ.[ಕಣ್ಮನಗಳಿಗೆ ಮುದ ನೀಡುವ ಕ್ರಿಸ್ಮಸ್ ಸಿದ್ಧತೆ ಜೋರೋ ಜೋರು]

Saint Annamma church

ಚರ್ಚ್ ಸ್ಥಾಪಿಸಿದವರು ಯಾರು?

ದೇವಾಲಯಕ್ಕೆ ಪೂರ್ವ ಹಾಗೂ ಉತ್ತರಮುಖವಾಗಿ ಪ್ರವೇಶದ್ವಾರಗಳಿದ್ದು, ದ್ವಾರಗಳನ್ನು ದಾಟಿ ಒಳ ಪ್ರವೇಶಿಸಿದರೆ, ಭವ್ಯ ಸಭಾಂಗಣ ಕಂಡು ಬರುತ್ತದೆ. ಚರ್ಚ್ ಸ್ಥಾಪನೆಗೆ ಕಾರಣನಾದ ದೊರೆ ವೀರರಾಜೇಂದ್ರ ಒಡೆಯ ನೀಡಿರುವ ಎರಡು ದೀಪಕಂಬಗಳು (ಕುತ್ತುಂಬೊಳಿಚ್ಚ) 'ವಿ' ಸಂಕೇತದಿಂದ ಕೂಡಿದ್ದು, ಬಲಿಪೀಠದ ಮೇಜಿನ ಮೇಲೆ ಇಡಲಾಗಿದೆ.

ಮೇಜಿನ ಹಿಂಭಾಗದಲ್ಲಿ ಪರಮ ಪ್ರಸಾದದ ಪೆಟ್ಟಿಗೆಯಿದ್ದು, ಪೆಟ್ಟಿಗೆಯ ಮೇಲೆ ಏಸುವನ್ನು ಶಿಲುಬೆಗೇರಿಸಿದ ಶಿಲ್ಪ ಕಂಡು ಬರುತ್ತದೆ. ಚರ್ಚಿನ ಗೋಡೆಯ ಕೇಂದ್ರಭಾಗದಲ್ಲಿ ಜಗತ್ತಿನ ಪ್ರಸಿದ್ಧ ಕಲಾವಿದ ಮೈಕಲ್ ಎಂಜಿಲೋ ರೂಪಿಸಿದಂತಹ 'ಪಿಯಾತ್' ಶಿಲ್ಪದ ಮಾದರಿಯ 'ಪಿಯಾತ್' ಸ್ಥಿತಿಯ ಅಂದರೆ ತಾಯಿ ಮೇರಿಯ ತೊಡೆ ಮೇಲೆ ಏಸುವಿನ ಮೃತ ಶರೀರ ಅಂಗಾತ ಮಲಗಿದುದನ್ನು ಕಾಣಬಹುದು.

'ಪಿಯಾತ್' ಗೂಡಿನ ಎಡಕ್ಕೆ ಇಡೀ ಜಗತ್ತಿಗೆ ಶಾಂತಿ ತೋರುವ ಪುನರುತ್ಥಾನದ ಏಸುವಿನ ಭಂಗಿ, ಅಲ್ಲದೆ ಏಸುವಿನ ಕಷ್ಟ ಕೋಟಲೆಗಳನ್ನು ಕಣ್ಣಾರೆ ಕಂಡ ಸಾಕ್ಷಿಯಾದ ಸಂತ ಸಭಾಸ್ಟಿಯನ್ ನ ಸ್ಮಾರಕ ಶಿಲ್ಪ ಕಂಡು ಬರುತ್ತದೆ. ಏಸುವಿನ ತೆರೆದ ಹೃದಯ ಸ್ಥಾನ ಶಿಲ್ಪದ ಬಲಬದಿಯಲ್ಲಿದ್ದು, ಪಿಯಾತ್ ಗೂಡಿನ ಬುಡದಲ್ಲಿ INRI-Jesus Nezererus Rexiudaorum ಎಂಬ ಬರವಣಿಗೆ ಕಂಡು ಬರುತ್ತದೆ. ಇದು ನಜರೇತಿನ ಯೇಸು ಜ್ಯೂದರ ಅರಸ ಎಂಬ ಲ್ಯಾಟಿನ್ ಉಕ್ತಿಯಾಗಿದೆ.

ಆಸನಗಳಿರುವ ಅಂಕಣವು ಬಲಿಪೀಠದ ಬಲಬದಿಗೆ ಇದ್ದು, ಬಾಲಕ ಏಸುವಿನ ಶೋಭಾಯ ಮುಖ ಶಿಲ್ಪವು ಎಡಬದಿಗಿದೆ. ಏಸುವಿನ ಶಿಲುಬೆಗೆ ಏರಿಸುವ ಹಾದಿ ತೋರಿಸುವ 14 ಕಾಷ್ಠ ಶಿಲ್ಪಗಳು ಸಭಾಂಗಣದ ಗೋಡೆ ಮತ್ತು ಕಂಬಗಳ ನಡುವೆ ಇವೆ.[ಕ್ರಿಸ್ಮಸ್, ಹೊಸವರ್ಷ: ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ]

Saint Annamma church

14 ಕಾಷ್ಠ ಶಿಲ್ಪಗಳು ಏನು ಹೇಳುತ್ತದೆ?

ಒಂದನೆ ಶಿಲ್ಪದಲ್ಲಿ ಏಸುವಿನ ಮರಣಕ್ಕೆ ನಿರ್ಣಯದಲ್ಲಿ ಕ್ರೌರ್ಯ, ದೌರ್ಜನ್ಯ ಪ್ರತೀಕವಾದ ಭಾವ ಕಂಡು ಬರುತ್ತದೆ. ಎರಡನೆ ಶಿಲ್ಪದಲ್ಲಿ ಬದುಕಿನ ಯಾತನೆ ಶಿಲುಬೆಯನ್ನು ಹತ್ತು ಎಣಿಸುವಲ್ಲಿ ಸಮಚಿತ್ತದಿಂದ ಇರುವ ಏಸುವಿನ ಮುಖವನ್ನು ಕಾಣಬಹುದು.

ಮೂರನೆಯದು ಮೊದಲ ಬಾರಿಗೆ ಭಾರ ಶಿಲುಬೆಯೊಡನೆ ಬೋರಲಾಗಿ ಬೀಳುತ್ತಿರುವ ಏಸುವಿನ ನೋವನ್ನು ಸಹಿಸುವ ದೃಢಚಿತ್ತ ಮುಖ ಹೊತ್ತ ಶಿಲ್ಪವಾಗಿದೆ. ಏಸುವು ಶಿಲುಬೆ ಹೊತ್ತು ಹೋಗುವಲ್ಲಿ ತಾಯಿಯ ದರ್ಶನ ಮತ್ತು ಆಕೆಯ ಅವರ್ಣನೀಯ ಅಳಲನ್ನು ಬಿಂಬಿಸುವ ಶಿಲ್ಪವು ನಾಲ್ಕನೆಯದಾಗಿದೆ. ಐದನೆ ಶಿಲ್ಪವು 'ಸಿರೇನ್ಯನಾದಸಿ ಮೋನ' ಏಸುವಿಗೆ ಶಿಲುಬೆ ಹೊರಲು ಸಹಾಯಕ್ಕೆ ಬರುವುದನ್ನು ತೋರಿಸುತ್ತದೆ.[ಕ್ರಿಸ್ಮಸ್ ರಜೆ, ಕೆಎಸ್ಆರ್ ಟಿಸಿಯಿಂದ ವಿಶೇಷ ಬಸ್ಸುಗಳು]

ವೆರೋನಿಕಮ್ಮ ಎಂಬ ವನಿತೆ ಏಸುವಿನ ಬಳಲಿಕೆ ಕಂಡು ಮುಖವೊರೆಸುವುದನ್ನು ಆರನೆಯ ಶಿಲ್ಪದಲ್ಲಿ ಕಾಣಬಹುದಾಗಿದೆ. ಏಳನೆಯ ಶಿಲ್ಪದಲ್ಲಿ ಎರಡನೇ ಬಾರಿಗೆ ಶಿಲುಬೆಯ ಭಾರದಿಂದ ಬಳಲಿ ಬೀಳುವ ಮಾನವನ ಅಂತಃಕರಣ ಮಿಡಿಯುವ ಏಸುವಿನ ಭಂಗಿಯಾಗಿದೆ. ಎಂಟನೆಯ ಶಿಲ್ಪದಲ್ಲಿ ಏಸುವನ್ನು ಹಿಂಬಾಲಿಸಿ ಬಂದ ಪುಣ್ಯ ಸ್ತ್ರೀಯರಿಗೆ ಏಸುವು ನೀಡುತ್ತಿರುವ ಸಾಂತ್ವನ ಕಾಣುತ್ತದೆ. ಏಸುವು ಮೂರನೇ ಬಾರಿ ಶಿಲುಬೆಗೆ ಸಿಲುಕಿ ಭಾರದಿಂದ ಬಳಲಿ ಬೋರಲಾಗಿ ಬೀಳುತ್ತಿದ್ದರೂ, ಹೊಡೆಯುತ್ತಿರುವುದನ್ನು ಒಂಭತ್ತನೆಯ ಶಿಲ್ಪದಲ್ಲಿ ಕಾಣಬಹುದಾಗಿದೆ.

ಹತ್ತನೆಯದರಲ್ಲಿ ಕಠಿಣ ಮನಸ್ಸಿನ ಸೈನಿಕರು ಏಸುವಿನ ವಸ್ತ್ರವನ್ನು ಸೆಳೆದು ಹರಾಜು ಹಾಕುವುದನ್ನು ಕಾಣಬಹುದು. ಹನ್ನೊಂದರಲ್ಲಿ ಏಸುವನ್ನು ಶಿಲುಬೆಗೆ ಜಡಿದ ಚಿತ್ರವಾಗಿ ಸಾಂದರ್ಭಿಕವಾಗಿ ಕೆಂಪು ವರ್ಣಾಚ್ಚಾದಿತವಾಗಿದೆ. ಮರಣವೇ ಮಹಾನವಮಿ ಎನ್ನುವಂತೆ ಏಸುವಿನ ಪ್ರಾಣ ತ್ಯಾಗದ ಚಿತ್ರ ಹನ್ನೆರಡನೆಯದರಲ್ಲಿದೆ.[ಚಿತ್ರಗಳಲ್ಲಿ ಕ್ರಿಸ್ ಮಸ್ ಸಂಭ್ರಮ, ಸಡಗರ]

'ಪಿಯಾತ್' ಭಂಗಿಯ ಶಿಲ್ಪವು ಹದಿಮೂರನೆಯದರಲ್ಲಿದೆ. ಕೊನೆಯ ಶಿಲ್ಪ ದೇವಮಾನವನಾಗುವ ತೇಜೋ ಮುಖದ ಏಸುವಿನ 'ತಿರುಶರೀರ'ದ ಮೂಲಕ ಸಂಕಟದಿಂದ ಶಾಂತಿಯ ಗುರಿಯತ್ತ ಸಾಗುವ ಮನುಕುಲದ ಕತೆಯಾಗಿದೆ. ಮೇಲಿನ ಹದಿನಾಲ್ಕು ಹಂತಗಳಲ್ಲಿ ಶಿಲ್ಪಗಳನ್ನು ವ್ಯವಸ್ಥೆ ಮಾಡಿದ್ದು ಗುಲಿಯನ್ ಪಾದ್ರಿ ಎಂದು ಹೇಳಲಾಗಿದೆ. ಇವುಗಳ ಪಕ್ಕದಲ್ಲಿಯೇ ಬಾಲ ಏಸುವು ತನ್ನ ಅಜ್ಜಿ ಅನ್ನಮ್ಮ ಬಳಿ ನಿಂತು ಲಾಲಿತ್ಯ ಸವಿಯುವ ಶಿಲ್ಪವು ಪ್ರತ್ಯೇಕ ಗೂಡಿನಲ್ಲಿದ್ದು ಮನಮುಟ್ಟುವಂತಿದೆ.

ಚರ್ಚ್ ಬಗ್ಗೆ ಹೇಳಬೇಕೆಂದರೆ ಇದರ ಸಭಾಂಗಣದ ವಿನ್ಯಾಸ, ಬಲಿಪೀಠ, ಗೂಡು, ಮೂಲ ಅಂಕಣ, ಸಭಾ ಸ್ತಂಭಗಳು, ಗುರು ಸಮಾಧಿ ನೆಲೆ ಪರಿವರ ಶಿಲ್ಪ, ಪ್ರದಕ್ಷಿಣೆ ಸಭಾಕಾರ, ಮುಖಗೋಪುರಗಳನ್ನು ಎರಡು ಬಾರಿ ಪುನರ್ರಚಿಸಲಾಗಿದೆ. ಈ ಗುಡಿಯು ಹಿಂದೂ ದೇವಾಲಯದ ಗರ್ಭಾಂಕಣ, ನವರಂಗ ಮುಖಮಂಟಪ, ಗದ್ದುಗೆ ನೆಲೆಗೋಪುರಗಳನ್ನು ಹೋಲುವಂತಿದೆ.

English summary
Saint Annamma church is famous in Kodagu, Karnataka. 14 sculptures is here, this is full enlighten about of God Jesus history. This Annamma church build in 233 years back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X