ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಕ್ರವಾರ ಒನ್ಇಂಡಿಯಾ ಕನ್ನಡದಲ್ಲಿ ವೈನ್ ಪಾರ್ಟಿ

By * ಯಶ್
|
Google Oneindia Kannada News

Best wine for Christmas
ವೈನ್ ಇಸ್ ಫೈನ್. ವೈನ್ ಹಳತು ಮತ್ತು ಹೊಸತರ ಏಕೈಕ ಪ್ರತಿನಿಧಿ. ಹೊಸತನ್ನು ಸ್ವಾಗತಿಸುವ ಸಂದರ್ಭದಲ್ಲಿ ವೈನ್ ಗ್ಲಾಸಲ್ಲಿ ತುಳಕಲು ಪ್ರಾರಂಭಿಸುತ್ತದೆ. ಹೊಸದಕ್ಕಿಂತ ಹಳೇ ವೈನೇ ಗ್ರೇಟ್ ಅನ್ನುವಾಗ ಬಾಟಲಿಯಲ್ಲಿ ವರ್ಷಗಟ್ಟಲೆ ತಟಸ್ಥವಾಗಿ ಕುಳಿತಿದ್ದ ವೈನ್ ಕುಂತಲ್ಲಿಯೇ ಕುಲುಕಲು ಪ್ರಾರಂಭಿಸುತ್ತದೆ. ವೈನ್ ಪ್ರತಿಷ್ಠೆಯ ಸಂಕೇತ, ಆರೋಗ್ಯಕ್ಕೂ ಹಿತ.

ಜೀವಮಾನದಲ್ಲಿ ಒಂದೇ ಒಂದು ವೈನ್ ಗುಟುಕರಿಸದ, ವೈನ್ ಹೆಸರು ಕೇಳಿಯೇ ವಾಕರಿಸುವ, ವೈನ್ ಕುಡಿಯುವುದೆಂದರೆ ದಾಸ್ಯದ ಸಂಕೇತ ಅಂತ ತಿಳಿದ ಕೋಟೆ ಕಟ್ಟಿ ಮೆರೆದಾಡಿದವರ ಮನೆಯ ಕಪಾಟಿನಲ್ಲಿ ವೈನ್ ಬೆಚ್ಚಗೆ ಕುಳಿತಿರುತ್ತದೆ. ತಾವೇ ಸ್ವತಃ ಕೊಂಡುಕೊಂಡಿರದಿದ್ದರೂ ಉಡುಗೊರೆ ಕೊಟ್ಟಾಗ ಅತ್ಯಂತ ಹೆಮ್ಮೆಯಿಂದ ವೈನ್ ಬಾಟಲಿಯನ್ನು ಸ್ವೀಕರಿಸಿರುತ್ತಾರೆ. 'ನಮ್ಮನೇಲಿ ಓಲ್ಡ್ ವೈನ್ ಇದೆ' ಅಭಿಮಾನದಿಂದ ತೋರಿಸುವವರೂ ಇದ್ದಾರೆ.

ದ್ರಾಕ್ಷಾರಸಕ್ಕೆ ಶತಮಾನಗಳ ಇತಿಹಾಸವಿದೆ. ಸುಮಾರು 8 ಸಾವಿರ ವರ್ಷಗಳ ಹಿಂದೆಯೇ ವೈನ್ ತಯಾರಿಸಲು ಪ್ರಾರಂಭಿಸಲಾಗಿತ್ತಂತೆ. ಸಾವಿರಾರು ವರ್ಷಗಳ ಹಿಂದೆ ರಾಜನೊಬ್ಬನಿಂದ ಅವಮಾನಕ್ಕೊಳಗಾದ ಸುಂದರ ತರುಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲೆಂದು ವಿಷ ಎಂದು ತಿಳಿದಿದ್ದ ದ್ರಾಕ್ಷಾರಸದ ದ್ರಾವಣವನ್ನು ಸೇವಿಸಿ, ಸಾಯುವ ಬದಲಾಗಿ ಅನಿರ್ವಚನೀಯ ಆನಂದವನ್ನು ಅನುಭವಿಸಿದಳಂತೆ. ಇದೇ ಮುಂದೆ ವೈನ್ ಆಗಿ ತಲತಲಾಂತರಗಳಿಂದ ತನ್ನ ಸ್ಥಾನವನ್ನು ಕಾಪಾಡಿಕೊಂಡು ಬಂದಿದೆ.

ಅದರಲ್ಲೂ ಹಳೆ ಮದ್ಯ ಅಥವಾ ಓಲ್ಡ್ ವೈನ್‌ಗೆ ಎಲ್ಲಿಲ್ಲದ ಬೇಡಿಕೆ. ಅದರಲ್ಲೇನೋ ವಿಶೇಷವಿದೆ. ಹಾಗಾಗಿಯೇ ಸಂತೋಷಗಳಲ್ಲಿ ಮಾತ್ರವಲ್ಲ ದುಃಖದಲ್ಲಿಯೂ ವೈನ್ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡು ಬಂದಿದೆ. 1787ರಲ್ಲಿ ಸುಮಾರು ಒಂದೂವರೆ ಲಕ್ಷ ಡಾಲರ್ ಬೆಲೆಗೆ ವೈನ್ ಹರಾಜಾಗಿತ್ತಂತೆ. ತಮಾಷೆಯ ಸಂಗತಿಯೆಂದರೆ, ಕಪ್ಪನೆಯ ಬಾಟಲಿಯಲ್ಲಿ ತಣ್ಣಗೆ ಕುಳಿತಿರುವ ವೈನ್‌ಗಿರುವ ಬೆಲೆ ಬಾಟಲಿಯನ್ನು ಭದ್ರವಾಗಿಸಿದ ಬಿರಡೆಗೂ ಇರುತ್ತದೆ. ಬಿರಡೆ ಜಾರಿ ಬಾಟಲಿಯಲ್ಲಿ ಬಿದ್ದರೆ, ವೈನ್ ಪ್ರತಿಷ್ಠೆಯೂ ಮಣ್ಣುಪಾಲು!

ಜಾಲಿ ಬಾರಿನಲ್ಲಿ ಕುಳಿತ ಪೋಲಿ ಹುಡುಗರಿಗೆ ದ್ರಾಕ್ಷಾರಸದ ಮೇಲೆ ಯಾಕಿಷ್ಟು ಮಮಕಾರ? ಅದನ್ನು ಹನಿಹನಿಯಾಗಿ ಗಂಟಲಿಗಿಳಿಸುವ ಸುಂದರ ತರುಣಿಯರಿಗೇಕಿಷ್ಟು ದುರಹಂಕಾರ? ವೈನ್‌ನಿಂದ ಆರೋಗ್ಯದ ಮೇಲೆ ಆಗುವ ಪರಿಣಾಮವನ್ನು ತಿಳಿಯದೆ ಕುಡಿತದ ದಾಸರಾಗುವ ಜನರ ಜೀವಕ್ಕೆ ವೈನ್ ಯಾಕೆ ತರುತ್ತದೆ ಸಂಚಕಾರ? ಈ ಮೂರು ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಬಲು ಕಷ್ಟಕರ.

ಆದರೆ, ಇದೇ ದ್ರಾಕ್ಷಾರಸ ನಮ್ಮ ಜೀವನದಲ್ಲಿ ಹಾಲಿನಲ್ಲಿ ಜೇನು ಬೆರೆತಂತೆ ಬೆರೆತುಬಿಟ್ಟಿದೆ. ಮಡಿಕೇರಿಯಲ್ಲಿ ತಾವೇ ತಯಾರಿಸಿದ ದ್ರಾಕ್ಷಾರಸವನ್ನು ಗಂಡುಹೆಣ್ಣೆನ್ನದೆ ಮನೆಮಂದಿಯೆಲ್ಲ ಕುಳಿತು ಜಠರಕ್ಕಿಳಿಸುತ್ತಾರೆ. ಇನ್ನು ಕ್ರಿಸ್ಮಸ್ ಸಂದರ್ಭದಲ್ಲಿ ಮನೆಗೆ ಬರುವ ಅತಿಥಿಗಳಿಗೆ, ಇಗರ್ಜಿಗೆ ಭೇಟಿ ನೀಡುವ ಯೇಸು ಭಕ್ತಾದಿಗಳಿಗೆ ಹೆಬ್ಬೆಟ್ಟಿನಷ್ಟು ಗಾತ್ರದ ವೈನ್ ಅನ್ನು ಪ್ರಸಾದವೆಂಬಂತೆ ನೀಡುವುದು ಸಂಪ್ರದಾಯ. ಇಷ್ಟಿಷ್ಟೇ ಕುಡಿದರೆ ವೈನ್ ಹೃದಯಕ್ಕೂ ಒಳ್ಳೇದು ಅಂತಾರೆ.

ಇದು ಹೇಗೂ ಇರಲಿ. Old books, old friends and Old wine ಯಾವತ್ತಿಗೂ ಅಮೂಲ್ಯ ಎಂದು ಬಲ್ಲವರು ಹೇಳುತ್ತಲೇ ಇರುತ್ತಾರೆ. ಸ್ನೇಹಿತರ ಮತ್ತು ಪುಸ್ತಕಗಳ ಗೊಡವೆಯನ್ನು ಸದ್ಯಕ್ಕೆ ಬದಿಗಿಟ್ಟು ಒಳ್ಳೆ ಒಳ್ಳೆ ದ್ರಾಕ್ಷಾರಸದ ಬಗ್ಗೆ ಮಾತನಾಡುವುದಕ್ಕೆ ಶುರು ಹಚ್ಚಿಕೊಳ್ಳೋಣ. ಈ ಕ್ರಿಸ್ಮಸ್ ನೆಪದಲ್ಲಿ... ಅಮೃತಕ್ಕೆ ಸಮಾನವಾದ ಐದು ಅದ್ಭುತ ದ್ರಾಕ್ಷಾರಸಗಳ ಬಗೆಗಿನ ಪರಿಚಯಾತ್ಮಕ ಲೇಖನ ಶುಕ್ರವಾರದಿಂದ.

English summary
Old wood best to burn, old wine to drink, old friends to trust, and old authors to read - Francis Bacon. So, friends, to begin with, let this winter uncork some true wines, hand picked from the finest yards in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X