ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಳು ಮತ್ತು ಅವನು : ಇದು ಜೋಗಿ ಅರ್ಪಿಸಿದ ಕಥೆ

By Mahesh
|
Google Oneindia Kannada News

Kannada Short Story by Girish Rao
'ನಾನು ಬೇಕೂಂತಲೆ ಅವಳನ್ನು ಕಳಕೊಂಡೆ’ ಅಂದ ಗೌರಿ. ನಾನು ಸುಮ್ಮನೆ ಅವನ ಮುಖ ನೋಡಿದೆ. ಪ್ರೀತಿಸಿದವರನ್ನು ಕಳಕೊಂಡವನ ಮುಖದಲ್ಲಿ ಸಣ್ಣದೊಂದು ವಿಷಾದವಾದರೂ ನೆಲೆಸಿರುತ್ತದೆ ಎನ್ನುವ ನಂಬಿಕೆ ನನಗಿರಲಿಲ್ಲ. ಕೆಲವೊಮ್ಮೆ ಕಳೆದುಕೊಳ್ಳುವಾಗ ಆಗುವ ಸುಖ, ಪಡಕೊಂಡಾಗ ಆಗುವುದಿಲ್ಲ.

ನಾನೇನು ಹುಡುಕುತ್ತಿದ್ದೇನೆ ಎನ್ನುವುದು ಗೊತ್ತಾಗದವನಂತೆ ಗೌರಿ ಮಾತು ಮುಂದುವರಿಸಿದ ಆವತ್ತು ಅವಳು ಕರೆದಾಗ ನಾನು ಹೋಗಿಬಿಟ್ಟಿದ್ದರೆ ಬಹುಶಃ ನಾವಿಬ್ಬರೂ ಜೊತೆಯಾಗಿರುತ್ತಿದ್ದೆವೋ ಏನೋ. ಜೊತೆಗಿದ್ದರೂ ಪ್ರೀತಿ ಉಳಿಯುತ್ತಿತ್ತೋ ಇಲ್ಲವೋ ಗೊತ್ತಿಲ್ಲ.

ಕೆಲವೊಂದು ಸಲ ಯಾವುದೂ ಕೈಗೇ ಹತ್ತುವುದಿಲ್ಲ.ತಿಂದದ್ದು ಮೈಗೆ ಹತ್ತೋಲ್ಲ ಅಂತಾರಲ್ಲ ಹಾಗೆ. ಕೈಗೆ ಹತ್ತಿದ್ದರೆ ಏನು ಮಾಡ್ತಿದ್ದೆ ಅನ್ನೋದು ಗೊತ್ತಿಲ್ಲ. ನನ್ನನ್ನು ಮದುವೆ ಆಗು ಅಂತ ಕೇಳಿಕೊಳ್ಳೋ ಸ್ಥಿತೀಲಿ ಇರಲಿಲ್ಲ ಅವಳು.

'ಯಾಕೆ’ ಪ್ರಶ್ನೆ ಅಚಾನಕವಾಗಿ ಬಂತು. ಅದನ್ನು ಕೇಳಬಾರದಿತ್ತು ಅಂತ ಆಮೇಲೆ ಅನ್ನಿಸಿತು. ಪ್ರೇಮಿಗಳನ್ನು ಪ್ರಶ್ನಿಸಬಾರದು. ಅವರ ದುಗುಡ ಜಾಸ್ತಿಯಾಗುತ್ತದೆ. ಹಾಗೆ ನೋಡಿದರೆ ಗೌರಿ ಪ್ರೇಮಿಯಲ್ಲ. ಹದಿನಾರು ವರ್ಷದ ಮಗಳಿದ್ದಾನೆ ಅವನಿಗೆ. ಮಕ್ಕಳಾದ ಮೇಲೆ ಅಪ್ಪ ಪ್ರೇಮದಲ್ಲಿ ಬೀಳಬಾರದು.

ಅದು ಮಕ್ಕಳ ಮೇಲಿನ ಪ್ರೀತಿಯನ್ನು ಕುಗ್ಗಿಸುತ್ತದೆ. ಮತ್ತೊಂದು ಇಷ್ಟೇ ಚೆಂದದ ಮಗುವನ್ನು ಹುಟ್ಟಿಸಬಲ್ಲೆ ಎಂಬ ಅಹಂಕಾರ ಇದ್ದ ಕಡೆ, ಪ್ರೀತಿಗೆಲ್ಲಿರುತ್ತೆ ಜಾಗ. ಬ್ರಹ್ಮನಿಗೆ ತನ್ನ ಸೃಷ್ಟಿಯ ಬಗ್ಗೆ ವ್ಯಾಮೋಹವಿಲ್ಲ, ಪ್ರೀತಿಯಿಲ್ಲ. ಅವನ ಸೃಷ್ಟಿಯನ್ನು ಪೊರೆಯುವವನು ವಿಷ್ಣು.

'ಅವಳಿಗೆ ನನ್ನೊಂದಿಗೆ ಬಾಳೋದು ಬೇಕಿರಲಿಲ್ಲ. ಅವಳ ಆಸೆಗಳು ಬೇರೆಯೇ ಇದ್ದವು. ಅವಳಿಗೆ ಒಂದು ಮನೆಯನ್ನು ಆಳುವ ಹುಮ್ಮಸ್ಸಿತ್ತು. ನನ್ನನ್ನು ಮದುವೆಯಾದರೆ ಜೀವನಪೂರ್ತಿ ನನ್ನ ಅಡಿಯಾಳಾಗಿಯೇ ಇರಬೇಕು ಅನ್ನುವುದೂ ಅವಳಿಗೆ ಗೊತ್ತಿತ್ತು.

ಗೌರಿ ಎರಡೂ ಕೈಗಳನ್ನು ಜೋಬಿನಿಂದ ಹೊರತೆಗೆದು ಗಸಗಸ ಉಜ್ಜಿದ. ಅಂಗೈಯನ್ನು ಕೆನ್ನೆಗೆ ಒತ್ತಿಕೊಂಡ. ಕೊಂಚ ಬೆಚ್ಚಗಾಗಿರಬೇಕು. ನಾನು ಒಂದು ಸಿಗರೇಟು ಹಚ್ಚಿಕೊಂಡು ಅವನ ಮುಂದೆ ಪ್ಯಾಕ್ ಒಡ್ಡಿದೆ. ಅವನು ಬೇಡ ಅಂತ ಕಣ್ಣಲ್ಲೇ ಹೇಳಿ ನಿಟ್ಟುಸಿರಿಟ್ಟ.

'ನೀನೇನೂ ಸರ್ವಾಧಿಕಾರಿಯಲ್ಲ. ನಿನ್ನನ್ನು ನೋಡಿದರೆ ದರ್ಪದ ಗಂಡಸು ಅಂತಲೂ ಅನ್ನಿಸೋದಿಲ್ಲ. ಮದುವೆಯಾಗಿದ್ದರೆ ನೀನು ಅವಳನ್ನು ಅಡಿಯಾಳಾಗಿ ಮಾಡಿಕೊಳ್ಳುತ್ತಲೂ ಇರಲಿಲ್ಲ. ಅಷ್ಟೂ ಗೊತ್ತಿಲ್ಲದ ದಡ್ಡಿಯಾ ಅವಳು’ ನಾನು ಸಿಗರೇಟಿನ ಬೂದಿಯನ್ನು ಪಕ್ಕದಲ್ಲಿದ್ದ ಗುಲಾಬಿ ಹೂವಿನ ಪಕಳೆಗಳ ಮೇಲೆ ಚೆಲ್ಲಿದೆ. ಅವನಿಗೆ ಅದು ಇಷ್ಟವಾಗಿರಲಿಕ್ಕಿಲ್ಲ.

ಅವನ ತುಟಿ ಕೊಂಚವೇ ಕೊಂಕಿ ಅಸಮಧಾನ ತೋರಿಸಿತು. ನಾನು ಅದನ್ನು ಗಮನಿಸದವನಂತೆ ಕೂತಿದ್ದೆ.
ಅವಳಿಗೆ ಆಗಲೇ ಮದುವೆ ಆಗಿತ್ತು. ಅವಳು ಸುಖವಾಗಿದ್ದಳು. ಅದು ಗೊತ್ತಾದ ನಂತರವೇ ನಾನು ಅವಳಿಗೆ ಹತ್ತಿರವಾದದ್ದು. ನನಗೂ ಅವಳನ್ನು ಮದುವೆಯಾಗುವುದು ಬೇಕಿರಲಿಲ್ಲ.

ಅವಳು ಸುಂದರಿಯೆಂಬುದರಲ್ಲಿ ಅನುಮಾನ ಇಲ್ಲ. ಆದರೆ ಬುದ್ಧಿವಂತೆ ಅಲ್ಲ. ಸುಂದರಿಯರ ಜೊತೆ ಇಡೀ ಜೀವನ ಕಳೆಯಲಾಗುವುದಿಲ್ಲ. ಮಂಚದಿಂದ ಕೆಳಗಿಳಿಯುತ್ತಿದ್ದಂತೆ ಅವರು ರೇಜಿಗೆ ಹುಟ್ಟಿಸತೊಡಗುತ್ತಾರೆ. ಆಮೇಲೆ ಅವರೊಂದಿಗೆ ಮಾತು ಕೂಡ ಸಾಧ್ಯವಾಗುವುದಿಲ್ಲ’.

ಗೌರಿ ಜಾಣನಂತೆ ಮಾತಾಡತೊಡಗಿದ. ನನಗೆ ಅವನ ಮರ್ಜಿ ಅಷ್ಟೇನೂ ಇಷ್ಟವಾಗಲಿಲ್ಲ. ಹೆಂಗಸರನ್ನು ಅವಮಾನಿಸುವವರನ್ನು ಕಂಡರೆ ನನಗೆ ಯಾವತ್ತೂ ಸಿಟ್ಟೇ. ಹಾಗೆ ಅವಮಾನಿಸುವ ಹಕ್ಕು ಯಾವ ಗಂಡಸಿಗೂ ಇಲ್ಲ ಎಂದು ನಾನು ಹೇಳುತ್ತಿದ್ದೆ ಮತ್ತು ನಂಬಿದ್ದೆ.

'ಅವಳು ದಡ್ಡಿ ಅನ್ನೋದು ನಿನ್ನ ಮೂರ್ಖತನದ ಮತ್ತು ಆತುರದ ನಿರ್ಧಾರ ಆಗಿರಬಹುದು. ದಡ್ಡಿಯೇ ಆಗಿದ್ದರೆ ನಿನ್ನನ್ನು ಹುಡುಕಿಕೊಳ್ಳುತ್ತಿರಲಿಲ್ಲ. ಮದುವೆ ಆಗಿದ್ದರೂ ನಿನಗೋಸ್ಕರ ಹಂಬಲಿಸುತ್ತಿರಲಿಲ್ಲ ಮತ್ತು ಅಷ್ಟೆಲ್ಲ ರಿಸ್ಕ್ ಮುಂದಿಟ್ಟುಕೊಂಡು ನಿನ್ನನ್ನು ಭೇಟಿ ಆಗುತ್ತಿರಲಿಲ್ಲ.

ನನ್ನ ಪ್ರಕಾರ ನಿನಗೆ ಅವಳು ಸರಿಯಾದ ಜೋಡಿ’.ಅವನ ಬಗ್ಗೆ ನನಗೇನೂ ಗೊತ್ತಿಲ್ಲದೇ ಇದ್ದರೂ ಗೊತ್ತಿದ್ದವನಂತೆ ಮಾತಾಡಿದೆ. ಅವರಿಬ್ಬರನ್ನೂ ಒಂದಾಗಿಸಬೇಕು ಅಂತ ಯಾಕೋ ಅನ್ನಿಸುತ್ತಿತ್ತು. ಅವನು ಕೂಡ ಕೊಂಚ ಹೊತ್ತಲ್ಲೇ ತನ್ನ ನಿರ್ಧಾರ ಬದಲಾಯಿಸುತ್ತಾನೆ ಅಂತ ಗಾಢವಾಗಿ ಅನ್ನಿಸುತ್ತಿತ್ತು.

'ಯಾರೂ ಯಾರಿಗೂ ಸರಿಯಾದ ಜೋಡಿ ಅಲ್ಲ’ ಅಂತ ಅವನು ಇಡೀ ಚರ್ಚೆಯನ್ನು ಸಾರ್ವಕಾಲಿಕವಾಗಿಸಲು ಯತ್ನಿಸಿದ. 'ನಾವು ಹಾಗಂದುಕೊಳ್ಳುವ ಹೊತ್ತಿಗೇ ಎಲ್ಲೋ ಒಂದು ಕಡೆ ಕಂಪ್ಯಾಟಬಿಲಿಟಿ ಸಮಸ್ಯೆ ಎದುರಾಗಿರುತ್ತದೆ. ಪದೇ ಪದೇ ಒಪ್ಪಿಸುವ ಒಪ್ಪಿಸಿಕೊಳ್ಳುವ ರಗಳೆ. ಎಲ್ಲೋ ಒಂದು ಕಡೆ ತಾಂತ್ರಿಕ ಸಮಸ್ಯೆ.ಬಹುಶಃ ನನಗೆ ಸರಿಯಾದ ಜೋಡಿ ಅಂದರೆ ನಾನೇ’.

ಸೆಲ್ಫ್ ಲವ್’ ಅಂದೆ. ಅವನು ನಕ್ಕ. ನಾನು ಮತ್ತೊಂದು ಸಿಗರೇಟು ಹಚ್ಚಿಕೊಳ್ಳುತ್ತಿದ್ದಂತೆ ಅವನು ಕೈ ಚಾಚಿ ನಾನು ಹಚ್ಚಿದ ಸಿಗರೇಟನ್ನೇ ತೆಗೆದುಕೊಂಡು ತುಟಿಗಿಟ್ಟುಕೊಂಡ. ನಾನು ಮತ್ತೊಂದು ಹಚ್ಚಿಕೊಂಡೆ. ಅವನನ್ನೇ ನೋಡುತ್ತಾ ಕೇಳಿದೆ.

' ಅವಳು ನಿನಗೆ ಇಷ್ಟವಾಗಿದ್ದಾದರೂ ಯಾಕೆ?’
ಗೊತ್ತಿಲ್ಲ. ಒಂದು ದುರ್ಬಲ ಕ್ಷಣದಲ್ಲಿ ಅವಳೇನೂ ನನಗೆ ಹತ್ತಿರವಾಗಲಿಲ್ಲ. ನಾನೇ ಅವಳ ಬೆನ್ನಿಗೆ ಬಿದ್ದು ಅವಳ ಸ್ನೇಹಕ್ಕಾಗಿ ಹಂಬಲಿಸಿದೆ. ಅವಳಿಗೆ ಮದುವೆ ಆಗಿದೆ ಅಂತಲೂ ನನಗೆ ಗೊತ್ತಿತ್ತು. ಹಾಗಿದ್ದರೂ ಅದ್ಯಾವುದೂ ನಮ್ಮಿಬ್ಬರ ಸಂಬಂಧಕ್ಕೆ ಅಡ್ಡಿ ಬರುವುದಿಲ್ಲ ಎಂದು ತೀವ್ರವಾಗಿ ನಂಬಿದ್ದೆ. ಅವಳೂ ಹಾಗೇ ನಂಬಿದ್ದಳು.

ಎಷ್ಟೋ ಸಲ ಗಂಡನನ್ನು ಬಿಟ್ಟು ಬಂದುಬಿಡಲಾ ಅಂತ ಕೇಳಿದ್ದಳು. ನಾನೇ ಅವನನ್ನು ನೋಯಿಸಬೇಡ ಅಂತ ಹೇಳಿದ್ದೆ.’ ಅವನು ಕೊಂಚ ಉದಾರಿಯಂತೆ ಸಜ್ಜನನಂತೆ ತೋರಿಸಿಕೊಳ್ಳುವ ಪ್ರಯತ್ನ ಮಾಡಿದ. ನನಗೆ ನಗು ಬಂತು.

ಇಲ್ಲ, ನಾನು ಸಂಭಾವಿತನಂತೆ ನಟಿಸುತ್ತಿಲ್ಲ’ ನನ್ನ ಭಾವನೆಗಳು ಅರ್ಥವಾದವನಂತೆ ಹೇಳಿದ. ನನಗೆ ಅವಳ ಗಂಡ ಯಾರು ಅನ್ನುವುದೂ ಗೊತ್ತಿಲ್ಲ. ಅವನನ್ನು ಅವಳು ಯಾವತ್ತೂ ಪರಿಚಯ ಮಾಡಿಸಲೂ ಇಲ್ಲ. ನಾನು ಪರಿಚಯ ಮಾಡಿಸು ಎನ್ನಲಿಲ್ಲ.

ಹಾಗೆ ನೋಡಿದರೆ ನಮ್ಮಿಬ್ಬರ ಮಧ್ಯೆ ಅವನ ಮಾತೇ ಬಂದಿರಲಿಲ್ಲ. ಅವಳು ಅದಕ್ಕೆ ಅವಕಾಶ ಕೊಡಲೂ ಇಲ್ಲ. ನಾವು ಭೇಟಿಯಾದಾಗೆಲ್ಲ ನಮ್ಮಿಬ್ಬರ ಕುರಿತು ಮಾತಾಡುವುದೇ ಸಾಕಷ್ಟಿತ್ತು.’ ಇನ್ನೇನು ಹೇಳಲಿ ಎಂಬಂತೆ ಅವನು ಯೋಚಿಸತೊಡಗಿದ. ನಾನು ಕುತೂಹಲಕ್ಕೆಂಬಂತೆ ಅವಳ ಹೆಸರೇನು ಎಂದು ಕೇಳಿದೆ.
ಅವನು ಚೂಪಾಗಿ ನನ್ನನ್ನೇ ನೋಡಿದ. ಭಾವನಾ... ಭಾವನಾ ಜಯಕುಮಾರ್. ಅವನು ಇಂಜಿನಿಯರ್ ಆಗಿದ್ದಾನಂತೆ. ಸದಾ ವಿದೇಶ ಪ್ರವಾಸದಲ್ಲಿರುತ್ತಾನಂತೆ.. ಈಗಲೂ ವಿದೇಶಕ್ಕೆ ಹೋಗಿದ್ದಾನಂತೆ. ಯಾವ ದೇಶ ಅನ್ನುವುದು ಅವಳಿಗೂ ಗೊತ್ತಿಲ್ಲವಂತೆ’ ಎಂದು ಗೌರಿ ನಕ್ಕ.

ಹಾದರ ಹೆಣ್ಣಿಗೂ ಗಂಡಿಗೂ ಅನಗತ್ಯ ಹೆಮ್ಮೆ ಹುಟ್ಟಿಸುತ್ತದೆ. ವಿನಾಕಾರಣ ಅಹಂಕಾರಿಗಳನ್ನಾಗಿಸುತ್ತದೆ. ಸಿಕ್ಕಿಬೀಳುವ ತನಕ ಕಿಂಚಿತ್ತೂ ಪಾಪಪ್ರಜ್ಞೆಯನ್ನೂ ತುಂಬುವುದಿಲ್ಲ. ಅನ್ಯಾಯ ಮಾಡುತ್ತಿದ್ದೇವೆ ಎಂಬ ಸಣ್ಣ ಭಾವವನ್ನೂ ಹುಟ್ಟಿಸುವುದಿಲ್ಲ. ಎಷ್ಟು ವಿಚಿತ್ರ ಅಲ್ವಾ?’ ಎಂದು ಕೇಳುತ್ತಿದ್ದಂತೆ ಗೌರಿ ಗಂಭೀರವಾಗಿ ನನ್ನನ್ನೇ ನೋಡಿದ.

ನಾನು ಹೇಳಬಾರದ್ದೇನನ್ನೋ ಹೇಳಿದೆನೇನೋ ಎಂದು ಗಾಬರಿಯಾಯಿತು. ಅವನಿಗೆ ಬಹುಶಃ ಪಾಪ ಪ್ರಜ್ಞೆಯ ಮಾತು ಬೇಕಿರಲಿಲ್ಲವೇನೋ.

'ಪಾಪಪ್ರಜ್ಞೆಯನ್ನೇನೂ ಹುಟ್ಟಿಸುವುದಿಲ್ಲ. ಆದರೆ ಅವಳು ನಟಿಸುತ್ತಿದ್ದಾಳೋ ಏನೋ ಎಂದು ಅನುಮಾನ ಆಗತ್ತೆ. ಗಂಡನ ಜೊತೆಗೂ ಅವಳು ಅಷ್ಟೇ ಸಲಿಗೆಯಿಂದ ಪ್ರೀತಿಯಿಂದ ನಡೆದುಕೊಳ್ಳುತ್ತಾಳೆ ಅಂತಾದರೆ ಒಂದೋ ಅದು ನಟನೆ ಇರಬೇಕು, ಅಥವಾ ಇದು ನಟನೆ ಇರಬೇಕು.. ಎರಡೂ ನಿಜವಾಗಿರೋದಕ್ಕೆ ಸಾಧ್ಯ ಇಲ್ಲವಲ್ಲ. ಯಾವುದು ನಟನೆ ಎಂದು ತಿಳಿದುಕೊಳ್ಳುವುದು ಹೇಗೆ’ ಗೌರಿ ಸಿಗರೇಟನ್ನು ನಡುಬೆರಳು ಮತ್ತು ಹೆಬ್ಬೆರಳಿನ ನಡುವೆ ಸಿಗಿಸಿ ದೂರಕ್ಕೆಸೆದ.

'ಅದು ನಟನೆ ಅಲ್ಲ. ಗಂಡನ ಜೊತೆಗಿದ್ದಾಗ ಕರ್ತವ್ಯಪಾಲನೆ. ನಿನ್ನ ಜೊತೆಗಿದ್ದಾಗ ಪ್ರೇಮಾಲಾಪನೆ. ಹಾಗೆ ನಾವೆಷ್ಟು ಸುಳ್ಳುಗಳನ್ನು ಹೇಳೋದಿಲ್ಲ. ಆಫೀಸಿಗೆ ನಿಯತ್ತಾಗಿದ್ದವರಂತೆ ತೋರಿಸಿಕೊಳ್ಳುತ್ತೇವೆ. ಅದೇ ಆಫೀಸಿಗೆ ದೋಖಾ ಮಾಡುತ್ತಿರುತ್ತೇವೆ.

ಒಬ್ಬೊಬ್ಬರ ಜೊತೆ ಒಂದೊಂದು ಮಾತಾಡುತ್ತಿರುತ್ತೇವೆ. ಹಾಯ್ ಬ್ರದರ್, ಹೇಗಿದ್ದೀಯಾ ಅಂತ ಮಾತಾಡಿದ ಮರುಕ್ಷಣವೇ, ಅವನೊಬ್ಬ ಲೋಫರ್ ಅಂತ ಮತ್ತೊಬ್ಬನಿಗೆ ಹೇಳುತ್ತಿರುತ್ತೇವೆ. ಮನಸ್ಸು ಇರುವುದೇ ಹಾಗೆ. ಯಾವ ಮಂಚದಲ್ಲಿ ಮಲಗಿದರೂ ನಿದ್ದೆ ಬಂದೇ ಬರುತ್ತದೆ.
ಕೊಳ್ಳುವಾಗ ಮಾತ್ರ ಅದು ಬೀಟೆಯದ್ದೋ ತೇಗದ್ದೋ ಅನ್ನುವುದನ್ನು ಯೋಚಿಸುತ್ತೇವೆ’ ಎಂದೆ. ಅವನು ಪುಳಕಿತನಾದ.

'ಎಷ್ಟು ಸುಲಭವಾಗಿ ನನ್ನ ಸಮಸ್ಯೆ ಪರಿಹರಿಸಿಬಿಟ್ರಿ ' ಅನ್ನುತ್ತಾ ಮತ್ತೊಂದು ಸಿಗರೇಟಿಗೆ ಕೈ ಚಾಚಿದ. ನಾನು ಸಿಗರೇಟು ಪ್ಯಾಕೆಟ್ಟು ಮತ್ತು ಲೈಟರ್ ಎರಡನ್ನೂ ಅವನ ಕೈಲಿಟ್ಟೆ. ಅವನು ನನಗೊಂದು ಸಿಗರೇಟು ಹಚ್ಚಿಕೊಟ್ಟ.

'ಹಾಗಿದ್ದರೆ ಮದುವೆ ಆಗೋದು ಒಳ್ಳೇದು ಅಂತೀಯಾ’ ಕೇಳಿದ. ಅವಳು ನನಗೂ ಮೋಸ ಮಾಡಿದರೆ ಏನು ಮಾಡಲಿ. ಮೋಸ ಮಾಡುವುದು ಅವಳ ಚಟವೇ ಆಗಿದ್ದರೆ. ಒಂದೊಂದು ಸಲ ಭಯವಾಗುತ್ತೆ. ಹಾಗೇನಾದ್ರೂ ಮಾಡಿದರೆ ಅವಳನ್ನು ಕೊಂದುಬಿಡುತ್ತೇನೆ.

ಆದರೆ ಯಾಕೋ ಅವಳಿಲ್ಲದೇ ನನಗೆ ಬದುಕೋದು ಕಷ್ಟ ಅನ್ನಿಸ್ತಿದೆ. ತುಂಬ ಚೆನ್ನಾಗಿದ್ದಾಳೆ. ನನಗಿಂತ ಎರಡು ವರ್ಷ ಚಿಕ್ಕೋಳಿರಬಹುದು.. ಆದ್ರೆ ನಾನೇ ಅವಳಿಗಿಂತ ಹತ್ತು ವರ್ಷ ದೊಡ್ಡೋನ ಥರ ಕಾಣಿಸ್ತೀನಿ’ ಎಂದು ಗೌರಿ ಅವನ ಜೊತೆಗೇ ಅವನು ಮಾತಾಡುತ್ತಿದ್ದಾನೇನೋ ಎಂಬಂತೆ ಸಣ್ಣ ದನಿಯಲ್ಲಿ ಮಾತಾಡಿದ.

ಕೊನೆಗೆ ಏನೋ ನಿರ್ಧಾರಕ್ಕೆ ಬಂದವನಂತೆ ನಾಳೆ ಬೆಳಗ್ಗೆ ಅವಳನ್ನು ಮದುವೆ ಆಗಿಬಿಡ್ತೀನಿ. ನಿಮ್ಮ ಜೊತೆ ಮಾತಾಡ್ತಾ ಮಾತಾಡ್ತಾ ಒಂದಷ್ಟು ವಿಚಾರಗಳು ಸ್ಪಷ್ಟವಾದವು. ಥ್ಯಾಂಕ್ಸ್. ನಾಳೆ ಇಲ್ಲೇ ಇರ್ತೀರೇನು.. ಇದ್ರೆ ಅವಳನ್ನೂ ಕರಕೊಂಡು ಬರ್ತೀನಿ. ಮೂವರೂ ಜೊತೆಗೆ ಡಿನ್ನರ್ ಮಾಡೋಣ’ ಅನ್ನುತ್ತಾ ತನ್ನ ವಿಸಿಟಿಂಗ್ ಕಾರ್ಡ್ ಕೈಯಲ್ಲಿಟ್ಟ.

'ನಾನು ನಾಳೆ ಇರೋಲ್ಲ. ಅಲ್ಲದೇ, ಅವಳನ್ನು ಹಾಗೆಲ್ಲ ಹೊರಗೆ ಕರೆದುಕೊಂಡು ಬರಬೇಡ. ಅವಳಿಗೆ ಡೈವೋರ್ಸ್ ಸಿಗೋ ತನಕ ವಿಷ್ಯ ಗುಟ್ಟಾಗಿಟ್ಟಿರು. ಅವಳ ಗಂಡನಿಗೆ ಗೊತ್ತಾಗಿ ಅವನೇನಾದರೂ ತೊಂದರೆ ಮಾಡಿದರೆ ಏನು ಮಾಡ್ತೀಯ .. ಯೋಚನೆ ಮಾಡು.. ನಾಳೆ ನೀವಿಬ್ಬರೇ ಎಂಜಾಯ್ ಮಾಡಿ. ಗುಡ್ ಲಕ್’’ಎಂದು ಹೇಳಿ ನಾನು ಅವನ ಕೈ ಕುಲುಕಿದೆ. ಅವನು ನಕ್ಕು ಖುಷಿಯಿಂದ ಹೊರಟು ಹೋದ.

ನಾನು ಅಲ್ಲೇ ತುಂಬ ಹೊತ್ತು ಸಿಗರೇಟು ಸೇದುತ್ತಾ ಕೂತಿದ್ದೆ. ದೂರದಲ್ಲಿ ಓಡಾಡುಡ್ತಿದ್ದ ವಾಹನಗಳ ಸದ್ದು ಕ್ರಮೇಣ ನಶಿಸಿತು. ಸಮುದ್ರದ ಕಡೆಯಿಂದ ತಂಗಾಳಿ ಬೀಸಿಬಂದು, ತೆಂಗಿನಗರಿಗಳನ್ನು ಚಾಮರದಂತೆ ಓಲಾಡಿಸಿದವು. ಆಕಾಶದಲ್ಲಿ ಒಂದಷ್ಟು ನಕ್ಷತ್ರಗಳು ಕಣ್ಣು ಮಿಟುಕಿಸದೇ ನಿಂತಿದ್ದವು.

'ಹೊರಡೋಣವೇ. ಗಂಟೆ ಮೂರುವರೆ. ಮಳೆ ಬರೋ ಹಾಗಿದೆ. ದಯವಿಟ್ಟು ರೂಮಿಗೆ ಬನ್ನಿ ಎಂದು ಫ್ಲೋರ್ ಮ್ಯಾನೇಜರ್ ಜೋಸೆಫ್ ನನ್ನನ್ನು ಕರೆದ. ನಾನು ತಿರುಗಿ ನೋಡಿದೆ. ತಾನು ಕೇಳಿದ್ದು ತಪ್ಪಾಯಿತೇನೋ ಎಂಬ ಸಣ್ಣ ಅಳುಕಿನಿಂದ ಅವನು ನನ್ನ ಮುಖ ನೋಡಿದ. ನಾನು ಎದ್ದು ನಿಂತೆ.

'ಈ ರೆಸಾರ್ಟ್ ತುಂಬ ಚೆನ್ನಾಗಿದೆ. ನನಗೆ ತುಂಬ ಸಂತೋಷಕೊಟ್ಟಿದೆ. ತುಂಬ ಅಪರೂಪದ ವ್ಯಕ್ತಿಗಳನ್ನು ನಾನಿಲ್ಲಿ ಭೇಟಿ ಮಾಡಿದ್ದೀನಿ. ಥ್ಯಾಂಕ್ಸ್ ಜೋಸೆಫ್’ ಅಂದೆ. ಜೋಸೆಫ್ ಖುಷಿಯಿಂದ ತಲೆಬಾಗಿ ಥ್ಯಾಂಕ್ಯೂ ಮಿಸ್ಟರ್ ಜಯಕುಮಾರ್’ ಅಂದ.

English summary
Avalu and Avanu a Kannada short story on youth relationship beyond love and sex. An affair which everyone will come across once in their lifetime and never wish to reveal. A beautiful narrated story by Girish Rao Hathwar aka Jogi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X