ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021 ಅಕ್ಟೋಬರ್: ಅಭಿಮಾನಿಗಳನ್ನು ಅಳಿಸಿದ 'ಅಪ್ಪು' ಅಗಲಿಕೆ ಕಹಿ ನೆನಪು

|
Google Oneindia Kannada News

ಬೆಂಗಳೂರು, ಡಿಸೆಂಬರ್ 29: ಚಂದನವನದ ಪಾಲಿಗೆ, ಕನ್ನಡಿಗರ ಪಾಲಿಗೆ, ಅಸಹಾಯಕ ವೃದ್ಧರು, ನಿರಾಶ್ರಿತ ಮಕ್ಕಳ ಪಾಲಿಗೆ ಅಷ್ಟೇ ಯಾಕೆ, ಕರುನಾಡಿನ ಕೋಟಿ ಕೋಟಿ ಅಭಿಮಾನಿಗಳ ಪಾಲಿಗೆ ಅಕ್ಟೋಬರ್ ಎಂದೂ ಮರೆಯದ ಕಹಿ ನೆನಪಿಗೆ ಸಾಕ್ಷಿ ಆಯಿತು. ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಕರುನಾಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೃದಯ ಬಡಿತ ನಿಂತು ಹೋದ ಸುದ್ದಿ ಕನ್ನಡಿಗರಿಗೆ ಆಘಾತ ನೀಡಿತು. ಡಿಸೆಂಬರ್ 29ರಂದು ಕನ್ನಡಿಗರ ನೆಚ್ಚಿನ "ಯುವರತ್ನ" ತೆರೆ ಮರೆಗೆ ಸರಿದು ಎರಡು ತಿಂಗಳೇ ಕಳೆದು ಹೋಗಿದೆ.

ಅದು ಅಕ್ಟೋಬರ್ 29ರ ಶುಕ್ರವಾರ. ಬೆಳಗಿನ ಜಾವ ಎದೆನೋವು ಕಾಣಿಸಿಕೊಂಡ ಪುನೀತ್ ರಾಜಕುಮಾರ್ ಅವರನ್ನು ಸಮೀಪದ ರಮಣಶ್ರೀ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದ ಹಿನ್ನೆಲೆ ತಕ್ಷಣ ವೀಕ್ರಂ ಆಸ್ಪತ್ರೆಗೆ ಕಳುಹಿಸಲಾಯಿತು. ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರಿಸಿ ವೈದ್ಯರು ಚಿಕಿತ್ಸೆ ನೀಡಿದರಾದರೂ, ಅಸಂಖ್ಯಾತ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ. ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಪುನೀತ್ ರಾಜಕುಮಾರ್ ವಿಧಿವಶರಾದರು ಎಂಬ ಸುದ್ದಿಯನ್ನು ವೈದ್ಯರು ಸ್ಪಷ್ಟಪಡಿಸಿದರು.

2021ರ ಸೆಪ್ಟೆಂಬರ್: ತಾಯಿ ತೋಳಲ್ಲಿರುವ ಕಂದನಿಗೂ ಕೊವಿಡ್-19 ಚಿಂತೆ! 2021ರ ಸೆಪ್ಟೆಂಬರ್: ತಾಯಿ ತೋಳಲ್ಲಿರುವ ಕಂದನಿಗೂ ಕೊವಿಡ್-19 ಚಿಂತೆ!

ಕನ್ನಡಿಗರು ಕನಸು ಮನಸಿನಲ್ಲೂ ಎನಿಸದ ಸುದ್ದಿ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಕಿವಿಗೆ ರಾಚಿತು. ದೊಡ್ಮನೆ ಹುಡುಗನ ಅಗಲಿಕೆ ಸುದ್ದಿಯಿಂದ ಇಡೀ ರಾಜ್ಯದಲ್ಲಿ ಸ್ಮಶಾನ ಮೌನ ಆವರಿಸಿತು. ಪ್ರತಿ ಮಾಧ್ಯಮ, ಪತ್ರಿಕೆ, ಸಾಮಾಜಿಕ ಜಾಲತಾಣ, ಮೊಬೈಲ್ ಸ್ಟೇಟಸ್ ನಿಂದ ಹಿಡಿದು ರಾಜ್ಯದ ರಸ್ತೆ ರಸ್ತೆಗಳಲ್ಲಿ ಅಪ್ಪು ಅಜರಾಮರ ಎನ್ನುವ ಸಾಲು ಕನ್ನಡಿಗರ ಮನಸಿನ ನೋವಿಗೆ ಸಾಕ್ಷಿ ಎನ್ನುವಂತಿತ್ತು. ಶುಕ್ರವಾರದಿಂದ ಭಾನುವಾರ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ ನಡೆಯುವವರೆಗೂ ಬೆಂಗಳೂರಿನಲ್ಲಿ ಕಣ್ಣಿಗೆ ಕಂಡಿದ್ದು ಅಭಿಮಾನಿಗಳ ಕಣ್ಣೀರಷ್ಟೇ.

 ಅಪ್ಪು ಅಗಲಿಕೆ ನೋವಿನಲ್ಲಿ ಹಣೆಗೆ ಮುತ್ತಿಕ್ಕಿದ ಮುಖ್ಯಮಂತ್ರಿ

ಅಪ್ಪು ಅಗಲಿಕೆ ನೋವಿನಲ್ಲಿ ಹಣೆಗೆ ಮುತ್ತಿಕ್ಕಿದ ಮುಖ್ಯಮಂತ್ರಿ

ಶುಕ್ರವಾರ ವಿಧಿವಶರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಂತಿಮ ದರ್ಶನಕ್ಕೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಪ್ಪು ಅಂತಿಮ ದರ್ಶನ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಅಗಲಿದ ನಟನ ಪಾರ್ಥೀವ ಶರೀರವನ್ನು ಕಂಡು ಭಾವುಕರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಪ್ಪು ಹಣೆಗೆ ಮುತ್ತಿಕ್ಕಿದರು. ಈ ಫೋಟೋ ಭಾವನೆಗಳನ್ನು ಸಾರಿ ಹೇಳುವಂತಿತ್ತು. ಬಹುತೇಕರ ಮೊಬೈಲ್ ಸ್ಟೇಟಸ್ ಆದಿಯಾಗಿ ಹಲವು ಮಾಧ್ಯಮಗಳಲ್ಲಿ ಇದೊಂದು ಫೋಟೋ ನೋವಿನ ನುಡಿಯನ್ನು ಸಾರಿ ಹೇಳುವಂತಿತ್ತು.

 ತಂದೆ ಕಳೆದುಕೊಂಡ ನೋವಿನಲ್ಲಿ ತಾಯಿಯ ಆಸರೆ

ತಂದೆ ಕಳೆದುಕೊಂಡ ನೋವಿನಲ್ಲಿ ತಾಯಿಯ ಆಸರೆ

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜಕುಮಾರ್ ಅಂತ್ಯ ಸಂಸ್ಕಾರದ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುತ್ತಿರುವ ಸಂದರ್ಭದಲ್ಲಿ ಪತಿಯ ಕಳೆದುಕೊಂಡ ನೋವಿನಲ್ಲಿ ಪತ್ನಿ ಅಶ್ವಿನಿ ಭಾವುಕರಾಗಿ ಕುಳಿತಿದ್ದರು. ಈ ವೇಳೆ ಪುತ್ರಿಯರಾದ ದೃತಿ ಮತ್ತು ವಂದಿತಾ, ತಾಯಿ ತೋಳಿನ ಆಸರೆಗೆ ಒರಗಿಕೊಂಡು ಕುಳಿತ ಫೋಟೋ ಮನಕಲಕುವಂತಿತ್ತು.

 ಅಂತಿಮ ನಮನ ಸಲ್ಲಿಸಿದ ಅರ್ಜುನ ಸರ್ಜಾ

ಅಂತಿಮ ನಮನ ಸಲ್ಲಿಸಿದ ಅರ್ಜುನ ಸರ್ಜಾ

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಕನ್ನಡ ಚಿತ್ರರಂಗದ ನಟ ಪುನೀತ್ ರಾಜ್‌ಕುಮಾರ್ ಪಾರ್ಥಿವ ಶರೀರಕ್ಕೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವೇಳೆ ಕನ್ನಡ ಚಿತ್ರರಂಗವಷ್ಟೇ ಅಲ್ಲದೇ ತಮಿಳು, ತೆಲುಗು ಭಾಷೆಯ ನಟ-ನಟಿಯರು ಅಂತಿಮ ದರ್ಶನ ಪಡೆದುಕೊಂಡರು. ಚಿರಂಜೀವಿ, ಎನ್ ಟಿಆರ್ ಸೇರಿದಂತೆ ಪರಭಾಷಾ ನಟರೂ ಸೇರಿದಂತೆ ಚಂದನವನದ ಬಹುಪಾಲು ನಟ-ನಟಿಯರು ಅಂತಿಮ ನಮನ ಸಲ್ಲಿಸಿದರು. ಚಿತ್ರದಲ್ಲಿ ಅರ್ಜುನ್ ಸರ್ಜಾ ಅಂತಿಮ ನಮನ ಸಲ್ಲಿಸುತ್ತಿರುವುದು ಕಂಡು ಬರುತ್ತದೆ.

 ಸಾಗರೋಪಾದಿಯಾಗಿ ಹರಿದು ಬಂದ ಅಭಿಮಾನಿ ಬಳಗ

ಸಾಗರೋಪಾದಿಯಾಗಿ ಹರಿದು ಬಂದ ಅಭಿಮಾನಿ ಬಳಗ

ಅಚ್ಚುಮೆಚ್ಚಿನ ಅಪ್ಪು ಅಗಲಿಕೆ ನೋವಿನಲ್ಲಿ ಅಂತಿಮ ದರ್ಶನ ಪಡೆದುಕೊಳ್ಳಲು ಬೆಂಗಳೂರಿನ ಕಂಠೀರವ ಸ್ಟೇಡಿಯಂನತ್ತ ಸಾಗರೋಪಾದಿಯಲ್ಲಿ ಅಭಿಮಾನಿಗಳು ಹರಿದು ಬಂದರು. ಶನಿವಾರ ಇಡೀ ದಿನ ಪುನೀತ್ ರಾಜಕುಮಾರ್ ಅಂತಿಮ ದರ್ಶನಕ್ಕೆ ಸಾಕಾಗಲಿಲ್ಲ, ಈ ಹಿನ್ನೆಲೆ ಶನಿವಾರದ ಬದಲಿಗೆ ಭಾನುವಾರ ಅಂತ್ಯಕ್ರಿಯೆ ನಡೆಸುವುದಾಗಿ ಸರ್ಕಾರ ಘೋಷಿಸಿತು. ಶನಿವಾರ ಪೂರ್ತಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು.

 ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಅಕ್ಟೋಬರ್ 31ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ತಂದೆ ರಾಜಕುಮಾರ್ ಸಮಾಧಿ ಪಕ್ಕದಲ್ಲಿಯೇ ಪುನೀತ್ ರಾಜಕುಮಾರ್ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನರೆವೇರಿಸಿದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿಯವರಿಗೆ ತ್ರಿವರ್ಣ ಧ್ವಜವನ್ನು ಹಸ್ತಾಂತರಿಸಿದರು.

 ಪುನೀತ್ ರಾಜಕುಮಾರ್ ಫೋಟೋಗೆ ಮುತ್ತಿಕ್ಕುತ್ತಿರುವ ಮಗು

ಪುನೀತ್ ರಾಜಕುಮಾರ್ ಫೋಟೋಗೆ ಮುತ್ತಿಕ್ಕುತ್ತಿರುವ ಮಗು

ಕರ್ನಾಟಕದಾದ್ಯಂತ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ದೊಡ್ಮನೆ ಹುಡುಗನಿಗೆ ಶ್ರದ್ಧಾಂಜಲಿ ಸಲ್ಲಿಸಲು ಹಾಕಿದ ಫೋಟೋಗೆ ಪುಟ್ಟ ಮಗುವೊಂದು ಪ್ರೀತಿಯಿಂದ ಚುಂಬಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

 ರಾಜ್ಯದಲ್ಲಿ ಸಿನಿಮಾ ಪ್ರದರ್ಶನ ರದ್ದು

ರಾಜ್ಯದಲ್ಲಿ ಸಿನಿಮಾ ಪ್ರದರ್ಶನ ರದ್ದು

ಚಂದನವನದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶರಾದ ಹಿನ್ನೆಲೆ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವನ್ನು ರದ್ದುಗೊಳಿಸಲಾಯಿತು. ಚಿತ್ರ ಮಂದಿರಗಳ ಎದುರು ಚಿತ್ರ ಪ್ರದರ್ಶನ ಇರುವುದಿಲ್ಲ ಎಂಬ ಬೋರ್ಡ್ ಅನ್ನು ಹಾಕಲಾಗಿತ್ತು.

English summary
Year End Special Photos: A look at some of the biggest news stories, incidents and events happened in October 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X