ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ರ ಹಿನ್ನೋಟ: ಕೊಡಗಿನಲ್ಲಿ ಪ್ರವಾಸಿಗರ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ!

By Lavakumar Bm
|
Google Oneindia Kannada News

ಮಡಿಕೇರಿ, ಡಿಸೆಂಬರ್ 25: ಪ್ರತಿವರ್ಷವೂ ರಾಜ್ಯ ಮಾತ್ರವಲ್ಲದೆ, ದೇಶ- ವಿದೇಶಗಳಿಂದ ಪ್ರವಾಸಿಗರು ಆಗಮಿಸಿ, ಇಲ್ಲಿನ ಹೋಟೆಲ್, ರೆಸಾರ್ಟ್, ಹೋಂಸ್ಟೇಗಳಲ್ಲಿ ವಾಸ್ತವ್ಯ ಹೂಡಿ ಹೊಸವರ್ಷವನ್ನು ಬರಮಾಡಿಕೊಳ್ಳುತ್ತಿದ್ದರು. ಆದರೆ ಕಳೆದ ಕೆಲ ವರ್ಷಗಳಿಂದ ಹಲವು ಕಾರಣಗಳಿಂದ ಕೊಡಗಿನಲ್ಲಿ ವರ್ಷಾಚರಣೆಗೆ ಅವಕಾಶವಿರಲಿಲ್ಲ. ಈ ಬಾರಿಯೂ ಅದು ಮುಂದುವರೆಯಲಿದೆ.

2018ರಲ್ಲಿ ಯಾರೂ ನಿರೀಕ್ಷೆ ಮಾಡದ ಪಾಕೃತಿಕ ವಿಕೋಪ ಸಂಭವಿಸಿ ಜನ ಭಯಪಡುವಂತಾಯಿತು. ದೂರದ ಜನ ಹೆದರಿ ಇತ್ತ ಬರಲೇ ಇಲ್ಲ. ನಂತರ ಪ್ರವಾಸಿಗರನ್ನು ಸೆಳೆಯಲು ಜಿಲ್ಲಾಡಳಿತ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಮುಂದೆ ಎಲ್ಲವೂ ಸರಿಹೋಗುತ್ತದೆ ಎನ್ನುವಾಗಲೇ ಕೊರೊನಾ ಸೋಂಕು ಕಾಣಿಸಿಕೊಂಡು ಲಾಕ್‌ಡೌನ್ ಆಗಿದ್ದರಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಲಾಯಿತು.

 ಪ್ರವಾಸೋದ್ಯಮ ಚೇತರಿಕೆ ಕಾಣಲೇ ಇಲ್ಲ

ಪ್ರವಾಸೋದ್ಯಮ ಚೇತರಿಕೆ ಕಾಣಲೇ ಇಲ್ಲ

ಆ ನಂತರ ಒಂದಷ್ಟು ನಿಯಮಗಳನ್ನು ಸಡಿಲಗೊಳಿಸಿದ್ದರಿಂದ ಪ್ರವಾಸಿಗರು ಅಲ್ಲಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರಾದರೂ ಪ್ರವಾಸೋದ್ಯಮ ಚೇತರಿಕೆ ಕಾಣಲೇ ಇಲ್ಲ. ಈ ಬಾರಿ ಡಿಸೆಂಬರ್ ಆರಂಭದ ತನಕವೂ ಮಳೆ ಸುರಿಯುತ್ತಿದ್ದ ಕಾರಣ ಪ್ರವಾಸಿಗರು ಮುಖ ಮಾಡಲಿಲ್ಲ. ಕಳೆದ ಕೆಲವು ದಿನಗಳಿಂದ ಸ್ವಲ್ಪ ಮಟ್ಟಿಗೆ ಪ್ರವಾಸಿಗರು ಜಿಲ್ಲೆಯತ್ತ ಬರಲಾರಂಭಿಸಿದ್ದರು. ಇದರಿಂದ ವಾರಾಂತ್ಯದ ದಿನಗಳಲ್ಲಿ ಜಿಲ್ಲೆಯಲ್ಲಿ ಜನಜಂಗುಳಿ, ವಾಹನ ದಟ್ಟಣೆ ಕಾಣಿಸಿಕೊಂಡಿತ್ತು. ಹೋಂಸ್ಟೇಗಳಲ್ಲಿ ಪ್ರವಾಸಿಗರು ತಂಗಲಾರಂಭಿಸಿದ್ದರು.

ಸಾಮಾನ್ಯವಾಗಿ ಡಿಸೆಂಬರ್ ತಿಂಗಳು ಕೊಡಗಿನ ವಾತಾವರಣ ತಂಪು ತಂಪಾಗಿರುತ್ತದೆ. ಸಣ್ಣಗೆ ಮೈನಡುಗಿಸುವ ಚಳಿ, ಗಿಡಮರ ಬೆಟ್ಟ- ಗುಡ್ಡಗಳನ್ನು ಆವರಿಸಿ ಕೇಕೆ ಹಾಕುವ ಮಂಜು ಬೀಸುವ ತಂಗಾಳಿ. ಇದೆಲ್ಲವೂ ದೂರದಿಂದ ಬರುವ ಪ್ರವಾಸಿಗರಿಗೆ ಆಹ್ಲಾದಕರವಾಗಿರುತ್ತದೆ. ಕೊಡಗಿನಲ್ಲಿ ಹೊಸ ವರ್ಷವನ್ನು ಆಚರಿಸಿಕೊಳ್ಳುವ ಸಂಪ್ರದಾಯ ಒಂದೆರಡು ದಶಕಗಳಿಂದೀಚೆಗೆ ಬಂದಿದೆ. ಮೊದಲೆಲ್ಲ ವರ್ಷಾಚರಣೆ ಸಮುದ್ರ ತೀರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ತೆರಳುತ್ತಿದ್ದರು. ಆದರೆ ಸುನಾಮಿ ಸೃಷ್ಟಿಸಿದ ಆವಾಂತರದ ನಂತರದ ಹೆದರಿದ ಜನರು ಸಮುದ್ರತೀರದ ಕಡೆಗೆ ಮುಖ ಮಾಡದೆ ಮಲೆನಾಡಿನತ್ತ ಬರತೊಡಗಿದರು.

 ಪ್ರವಾಸೋದ್ಯಮಕ್ಕೆ ಪೂರಕ ಉದ್ಯಮ ಆರಂಭ

ಪ್ರವಾಸೋದ್ಯಮಕ್ಕೆ ಪೂರಕ ಉದ್ಯಮ ಆರಂಭ

ಎರಡು ದಶಕಗಳ ಹಿಂದೆ ಕೊಡಗು ಇವತ್ತಿನಂತೆ ಅಭಿವೃದ್ಧಿಯಾಗಿರಲಿಲ್ಲ. ಹೋಂಸ್ಟೇ, ಹೋಟೆಲ್‌ಗಳ ಸಂಖ್ಯೆಯೂ ವಿರಳವಾಗಿತ್ತು. ಇದ್ದಕ್ಕಿದ್ದಂತೆ ಪ್ರವಾಸಿಗರ ಸಂಖ್ಯೆ ಹೆಚ್ಚಾದ ಕಾರಣ ಮತ್ತು ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಲ್ಲಿ ಜನವೋ ಜನ ಕಂಡು ಬಂದಿದ್ದರಿಂದ ಮತ್ತು ಮುಂದೆಯೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂಬ ನಂಬಿಕೆಯಿಂದ ಪ್ರವಾಸಿಗರನ್ನು ನಂಬಿಕೊಂಡು ಪ್ರವಾಸೋದ್ಯಮಕ್ಕೆ ಪೂರಕವಾದ ಉದ್ಯಮಗಳು ಆರಂಭವಾದವು. ಹೊರಗಿನಿಂದ ಬಂದ ಕೆಲವು ಕಂಪನಿಗಳು ಇಲ್ಲಿ ದೊಡ್ಡ ಮಟ್ಟದಲ್ಲಿ ಬಂಡವಾಳ ಸುರಿದು ಐಷಾರಾಮಿ ಹೋಟೆಲ್, ರೆಸಾರ್ಟ್‌ಗಳನ್ನು ನಿರ್ಮಿಸಿ ಪ್ರವಾಸಿಗರನ್ನು ಸೆಳೆಯಲು ಹಲವು ರೀತಿಯ ಗಿಮಿಕ್‌ಗಳನ್ನು ಮಾಡಿದರು.

 ಬೆಳೆಗಾರರಿಗೂ ಪ್ರವಾಸೋದ್ಯಮದತ್ತ ಆಸಕ್ತಿ

ಬೆಳೆಗಾರರಿಗೂ ಪ್ರವಾಸೋದ್ಯಮದತ್ತ ಆಸಕ್ತಿ

ಇದರಿಂದ ರಾಜ್ಯ ಮಾತ್ರವಲ್ಲದೆ, ದೇಶ- ವಿದೇಶಗಳ ಪ್ರವಾಸಿಗರು ಕೊಡಗಿಗೆ ಬರಲಾರಂಭಿಸಿದರು. ನಂತರದ ವರ್ಷಗಳಲ್ಲಿ ಕೊಡಗಿನ ಬೆಳೆಗಾರರಿಗೂ ಪ್ರವಾಸೋದ್ಯಮದತ್ತ ಆಸಕ್ತಿ ಬರಲಾರಂಭಿಸಿತ್ತು. ಕಾರಣ ಅದಾಗಲೇ ಏಲಕ್ಕಿ ನಾಶವಾಗಿ, ಕಾಫಿ ಬೆಲೆ ಕುಸಿತದಿಂದ ಕುಗ್ಗಿ ಹೋಗಿದ್ದ ಕಾಫಿ ಬೆಳೆಗಾರರಿಗೆ ಹೋಂಸ್ಟೇ ಉದ್ಯಮದಿಂದ ಒಂದಷ್ಟು ಸಂಪಾದನೆ ಮಾಡುವ ಆಲೋಚನೆ ಮಾಡಿದರು. ಹೀಗಾಗಿ ಕುಗ್ರಾಮಗಳಲ್ಲಿಯೂ ಹೋಂಸ್ಟೇಗಳು ಸದ್ದಿಲ್ಲದೆ ತಲೆ ಎತ್ತಿದವು. ಒಂದಷ್ಟು ಬಂಡವಾಳ ಸುರಿದು ತಮ್ಮ ಕಾಫಿ ತೋಟಗಳಲ್ಲಿ ಹೋಂಸ್ಟೇಗಳನ್ನು ನಿರ್ಮಿಸಿದರು. ಹೀಗಾಗಿ ನಗರದ ಜಂಜಾಟದಲ್ಲಿ ತೊಡಗಿಸಿಕೊಂಡಿದ್ದವರು ಒಂದಷ್ಟು ದಿನಗಳನ್ನು ಕೊಡಗಿನ ತಂಪಾದ ವಾತಾವರಣದಲ್ಲಿ ಕಳೆದು ಹೋಗುತ್ತಿದ್ದರು.

 ಕೊರೊನಾ ಕೊಡಗಿನಲ್ಲಿ ಶೂನ್ಯಕ್ಕೆ ಇಳಿದಿಲ್ಲ

ಕೊರೊನಾ ಕೊಡಗಿನಲ್ಲಿ ಶೂನ್ಯಕ್ಕೆ ಇಳಿದಿಲ್ಲ

ಯಾವಾಗ ಪ್ರವಾಸಿಗರು ಜಿಲ್ಲೆಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಆರಂಭಿಸಿದ ಬಳಿಕ ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವು ಉದ್ಯಮಗಳು ಹುಟ್ಟಿಕೊಂಡಿದ್ದು ಮಾತ್ರವಲ್ಲದೆ, ಹಲವು ವ್ಯಾಪಾರ ವಹಿವಾಟುಗಳು ಚೇತರಿಸಿಕೊಂಡವು. ಜತೆಗೆ ಉದ್ದಿಮೆಗಾಗಿ ಬಂಡವಾಳ ಸುರಿದು ಮುಂದೆ ಒಳ್ಳೆಯದಾಗಬಹುದು ಎಂದು ನಂಬಿದ್ದರು. ಆದರೆ ಮಹಾಮಳೆ, ಭೂಕುಸಿತ, ಕೊರೊನಾ ಕಾರಣಗಳಿಂದಾಗಿ ಎಲ್ಲ ವಹಿವಾಟುಗಳು ಕುಸಿದು ಬಿದ್ದಿದ್ದು, ಬಹಳಷ್ಟು ಮಂದಿ ಸಂಕಷ್ಟದಲ್ಲಿದ್ದರು. ಹೀಗಾಗಿ ಈ ಬಾರಿ ಎಲ್ಲವೂ ಸರಿಹೋಗಿ ಹೊಸ ವರ್ಷಾಚರಣೆಗೆ ಸರ್ಕಾರ ಅವಕಾಶ ನೀಡಿದರೆ ಪ್ರವಾಸೋದ್ಯಮ ಚೇತರಿಸಿಕೊಂಡು ಬದುಕು ಹಸನಾಗುತ್ತದೆ ಎಂದು ನಂಬಿದ್ದರು.

ಆದರೆ ಕೊರೊನಾ ಕೊಡಗಿನಲ್ಲಿ ಶೂನ್ಯಕ್ಕೆ ಇಳಿದಿಲ್ಲ. ಪ್ರತಿದಿನವೂ ಸೋಂಕಿನ ಪ್ರಕರಣಗಳ ವರದಿಗಳು ಬರುತ್ತಲೇ ಇವೆ. ಜತೆಗೆ ಓಮಿಕ್ರಾನ್ ಲಗ್ಗೆಯಿಡುತ್ತಿದೆ. ಹೀಗಾಗಿ ಸರ್ಕಾರ ರಾಜ್ಯಾದ್ಯಂತ ಡಿಸೆಂಬರ್ 30ರಿಂದ ಜನವರಿ 2ರವರೆಗೂ ಕೆಲವು ನಿರ್ಬಂಧಗಳನ್ನು ಸರ್ಕಾರ ವಿಧಿಸಿದೆ. ಹೀಗಾಗಿ ಮೊದಲಿನಂತೆ ಹೊಸ ವರ್ಷಾಚರಣೆ ನಡೆಸುವುದಕ್ಕೆ ಅವಕಾಶವಿಲ್ಲದಾಗಿದೆ.

English summary
The government has imposed certain restrictions from December 30 to January 2 throughout the state. Thus the number of tourists arriving in Kodagu is also reduced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X