ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತಿ ಡಿವಿಜಿ ಪುತ್ರಿ ಇಂದಿರಾ 100ನೇ ಜನ್ಮದಿನಕ್ಕೆ ಮೊಮ್ಮಗಳು ಮೀರಾರಿಂದ ಲೇಖನ

By ಮೀರಾ ಕೃಷ್ಣಮೂರ್ತಿ
|
Google Oneindia Kannada News

ದಾರ್ಶನಿಕ ಕವಿ, ಸಾಹಿತಿ ಡಿ. ವಿ ಗುಂಡಪ್ಪ ಅವರ ಪುತ್ರಿ ಇಂದಿರಮ್ಮ ಅವರಿಗೆ ಇಂದು 100ನೇ ಜನ್ಮದಿನದ ಸಂಭ್ರಮ. ಈ ಸಂದರ್ಭದಲ್ಲಿ ಅವರ ಪುತ್ರಿ, ಡಿವಿಜಿ ಅವರ ಮೊಮ್ಮಗಳಾದ ಮೀರಾ ಅವರು ತಮ್ಮ ತಾಯಿ ಡಿ.ವಿ.ಜಿ.ಯವರ ಕಿರಿಯ ಪುತ್ರಿ ಶ್ರೀಮತಿ ಇಂದಿರಾ ಸತ್ಯನಾರಾಯಣ(ಬಿ.ಜಿ.ಲ್.ಸ್ವಾಮಿಯವರ ಕಿರಿಯ ತಂಗಿ) ಕುರಿತು ಬರೆದ ಲೇಖನ ಇಲ್ಲಿದೆ.. ಡಿವಿಜಿ, ಬಿ.ಜಿ. ಎಲ್ ಸ್ವಾಮಿ ಅವರ ಜೊತೆ ಇಂದಿರಾ ಅವರ ಒಡನಾಟ ಸುತ್ತ ಲೇಖಕಿ ಮೀರಾ ಬೆಳಕು ಚೆಲ್ಲಿದ್ದಾರೆ.

ಇಂದಿರಾ ಓದಿದ್ದು ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ, ಬಿ.ಎ. ಪದವಿಯಲ್ಲಿ ಮೊದಲನೇ ರಾಂಕ್ ಗಳಿಸಿ, ಆಗಿನ ಮೈಸೂರು ಮಹಾರಾಜರರಿಂದ ಚಿನ್ನದ ಪದಕ ಪಡೆದಿದ್ದರು. ಅವರಿಗೆ ಎಂ.ಎ. ಓದಲು ಆಸಕ್ತಿ ಇತ್ತು. ತಂದೆಯೂ ಸಹ ಅನುಮೋದಿಸಿದ್ದರು. ಆದರೆ, ಅವರ ಅಜ್ಜಿಯವರು ಅವರ ಮದುವೆಯನ್ನು ಮಾಡಬೇಕೆಂದು ಹೇಳಿದರಂತೆ.

1945ರಲ್ಲಿ ಅವರ ಮದುವೆಯಾದ ಬಳಿಕ, ಡಿ.ವಿ.ಜಿ.ಯವರು ನನ್ನ ತಂದೆ ತಾಯಿ ಅವರಿಗೆ "ನೀವಿಬ್ಬರೂ ಟೀಚಿಂಗ್ ಪ್ರೊಫೆಶನ್‌ಗೆ ಸೇರಿಬಿಡಿ" ಎಂದಿದ್ದರಂತೆ. ಆದರೆ ನನ್ನ ತಂದೆಯವರಾದ ಸತ್ಯನಾರಾಯಣ ಅವರಿಗೆ ಟೀಚರ್ ಆಗಲು ಮನಸ್ಸಿರಲಿಲ್ಲ. ನಂತರ ಅವರು ಸ್ಟೇಟ್ ಎಜುಕೇಶನ್ ಬೋರ್ಡ್‌ನಲ್ಲಿ ಅಕೌಂಟ್ಸ್ ಆಫೀಸರ್ ಆಗಿ ರಿಟೈರ್ ಆದರು.

Writer DV Gundappas Indira turns 100, Special anecdote by her daughter Meera

ನಾನು, ನನ್ನ ತಂದೆ, ತಾಯಿ ಹಾಗು ಅಣ್ಣ ಕೃಷ್ಣ ಎಲ್ಲರೂ ಬಸವನಗುಡಿಯಲ್ಲಿ ಇದ್ದ ನಮ್ಮ ತಾತನ ಮನೆಗೆ ಹೋಗುತ್ತಿದ್ದೆವು. ಅಲ್ಲಿ ಸ್ವಾಮಿ ಮತ್ತು ತಂಗ ಅವರುಗಳು ಬಂದಾಗಲಂತೂ ಬರೀ ನಗೆಯೇ ನಗೆ. ಎಲ್ಲರೂ ಒಟ್ಟಿಗೆ ಸೇರಿದಾಗ, ಹುರುಪು ಬಂದುಬಿಡುತ್ತಿತ್ತು

ಸ್ವಾಮಿ ಅವರು ಸಮ್ಮರ್ ರಜೆಯನ್ನು ಬೆಂಗಳೂರಿನಲ್ಲೇ ಕಳೆಯುತ್ತಿದ್ದರು. ಊರಿಗೆ ಬಂದ ಕೆಲವು ದಿನಗಳ ನಂತರ ನಮ್ಮ ಮನೆಗೆ (ಶೇಷಾದ್ರಿಪುರಂ) ಬರುತ್ತಿದ್ದರು. ಅದರ ಮುಂದಿನ ವಾರಗಳಲ್ಲಿ, ನಾವುಗಳು ಬಹಳ ಉತ್ಸಾಹದಿಂದ ಅವರನ್ನು ಕಾಣಲು ಬಸವನಗುಡಿಗೆ ಹೋಗುತ್ತಿದ್ದೆವು. ನಾವು ಮಕ್ಕಳಿಗೆಲ್ಲ ಬಹಳ ಮಜವಾಗಿರುತ್ತಿತ್ತು. ತಂಗ ಚೆನ್ನಾಗಿ ಮಿಮಿಕ್ರಿ ಮಾಡುತ್ತಿದ್ದರು. ಸ್ವಾಮಿಯೂ ಸಹ ಜೋಕ್ಸ್ ಹೇಳಿ ನಗಿಸುತ್ತಿದ್ದರು.

ಒಮ್ಮೊಮ್ಮೆ ಡಿ.ವಿ.ಜಿ.ಯವರು ಯಾವುದಾದರೂ ವಿಷಯವನ್ನು ಕುರಿತು ಮಾತನಾಡುವುದಕ್ಕೆ ಎಲ್ಲರನ್ನೂ ಅವರ ರೂಮಿಗೇ ಕರೆಯುತ್ತಿದ್ದರು. ಆಗ ಅವರ ಮಕ್ಕಳು ''ನೀವೆಲ್ಲ ಚಿಕ್ಕವರು ಮುಂದಿನ ಚೇರುಗಳಿಗೆ ಹೋಗಿ'', ಎಂದು ನಮ್ಮನ್ನೆಲ್ಲ ಮುಂದೆ ಕಳಿಸಿ ತಾವು ಮೂರು ಜನ ಮಾತ್ರ ಹಿಂದೆ ಕೂತು ಅವರವರೇ ಮಾತನಾಡಿ ಮೆಲ್ಲಗೆ ನಗುತ್ತಿದ್ದರು. ಡಿ.ವಿ.ಜಿ.ಯವರಿಗೆ, ಆ ನಗು ಕೇಳಿಸಿ, ''ಏನದು'' ಎಂದರೆ, ಸ್ವಾಮಿಯವರು ''ಏನಿಲ್ಲ ನೀವು ಮಾತನಾಡಿ'' ಎನ್ನುವರು.

Writer DV Gundappas Indira turns 100, Special anecdote by her daughter Meera

ಮ್ಯೂಸಿಯಂನಲ್ಲಿ ಪೇಂಟಿಂಗ್ ನೋಡುವ ವಿಧಾನ
ಒಮ್ಮೆ ಮದರಾಸಿಗೆ ನಾನು ತಂದೆ, ತಾಯಿ, ಅಣ್ಣ ಮತ್ತು ನಮ್ಮ ತಂದೆಯ ತಂಗಿಯೊಡನೆ ಸ್ವಾಮಿಯವರ ಮನೆಗೆ ಹೋಗಿ ಅಲ್ಲೇ ತಂಗಿದ್ದೆವು. ಸ್ವಾಮಿ ಮತ್ತು ವಸಂತ ಅವರುಗಳು ನಮ್ಮನ್ನು ಪ್ರತಿ ದಿನ ಹೊರಗೆ ಕರೆದುಕೊಂಡು ಹೋಗುತ್ತಿದ್ದರು. ಅವರ ಮನೆಯ ಬಹಳ ಹತ್ತಿರದಲ್ಲೇ ಬೀಚ್ ಇತ್ತು. ಅದು ಎಲ್ಲರಿಗೂ ಉತ್ಸಾಹವಾಗುತ್ತಿತ್ತು. ಸ್ವಾಮಿಯವರು, ನನ್ನ ತಾಯಿಗೆ ಮದರಾಸಿನ ಮ್ಯೂಸಿಯಂನಲ್ಲಿ ಪೇಂಟಿಂಗ್ ನೋಡುವ ವಿಧಾನ, ಅದರ ಸೂಕ್ಷ್ಮತರ ವಿಷಯಗಳ ಅಭಿರುಚಿಯನ್ನು ಹೇಗೆ ಪಡೆಯುವುದು ಎಂಬೆಲ್ಲ ವಿಚಾರಗಳನ್ನು ವಿವರಿಸಿ ಹೇಳಿದ್ದು, ನೆನಪಿದೆ.

ಸ್ವಾಮಿ ಮತ್ತು ತಂಗಿಯರು ಒಟ್ಟಿಗೆ ಮಾತನಾಡುವಾಗ ಸ್ವಲ್ಪ ಚೇಷ್ಟೆ,ನಗು ಆದ ಮೇಲೆ, ಯಾವಾಗಲೂ ಸಾಹಿತ್ಯ, ಸಂಗೀತದ ಬಗ್ಗೆಯೇ ಮಾತಿರುತ್ತಿತ್ತು. ಸ್ವಾಮಿಯವರು ಮದರಾಸಿನಲ್ಲಿ ಬಹಳ ಉತ್ತಮವಾದ ಕರ್ನಾಟಕ ಸಂಗೀತವನ್ನು ಕೇಳುತ್ತಿದ್ದರು. ಅವರು ತಂಗಿಯರಿಗೆ, ವಾಗ್ಗೇಯಕಾರರಾದ ಅಣ್ಣಮಾಚಾರ್ಯ ಮತ್ತು ಭದ್ರಾಚಲ ರಾಮದಾಸ್ ಅವರ ಕೃತಿಗಳ ಪರಿಚಯ ಮಾಡಿಸಿದರು. ನನ್ನ ತಾಯಿಯು ಬೆಂಗಳೂರಿನಲ್ಲಿ ನಡೆಯುವ ಶ್ರೀ ರಾಮನವಮಿ ಕಚೇರಿಗಳಿಗೆ ಹೋಗುತ್ತಿದ್ದರು.

ಈ ಸಂದರ್ಭದಲ್ಲಿ ನೆನಪಾಗುವುದು ಸ್ವಾಮಿಯವರ ಚಿಕ್ಕಪ್ಪನವರ ಮಗ ಶ್ರೀ ಚಂದ್ರಮೌಳಿ ಮದುವೆ ರಿಸೆಪ್ಶನ್ನಲ್ಲಿ ಸಂಗೀತ ಏರ್ಪಡಿದ್ದರು. ಸ್ವಾಮಿ ಮತ್ತು ತಂಗಿಯರು ಸಂಗೀತ ನಡೆಯುವ ಸ್ಟೇಜ್ ಬಳಿಯಲ್ಲೇ ಕೂತಿರುತ್ತಿದ್ದರು. ಬರುವ ಅತಿಥಿಯರಿಗೆ ಇವರೆಲ್ಲ ಕಾಣದೆ ಎಲ್ಲಿದ್ದಾರೆ ಎಂದು ಹುಡುಕುತ್ತಿದ್ದರು. ಇದರಿಂದ ತಿಳಿಯುವುದೇನೆಂದರೆ ಅವರಿಗೆಲ್ಲ ಜನರ ಜೊತೆ ಹರಟೆಗಿಂತ ಸಂಗೀತ ಕೇಳುವುದು ಇಷ್ಟವಿತ್ತು.

Writer DV Gundappas Indira turns 100, Special anecdote by her daughter Meera

ಸ್ವಾಮಿ, ತಂಗಿಯರು ಮಾತಾಡುವಾಗ ಪ್ರಾಕೃತವಾಗಿ ಎಲ್ಲರು ಮಾತನಾಡುವಂತೆ ಅತ್ತೆ ಮನೆಯವರ ಮೇಲಾಗಲೀ ಅಥವಾ ಆರೋಗ್ಯ, ಅನಾರೋಗ್ಯದ ಲಕ್ಷಣಗಳು, ಅಥವಾ ಅಡುಗೆ, ದಿನಚರಿಯ ವಿಷಯವಾಗಲೀ ಇರುತ್ತಲೇ ಇರಲಿಲ್ಲ. ಸ್ವಾಮಿಯವರಿಗೆ ಜ್ಞಾನಾರ್ಜನೆಯೇ ಮುಖ್ಯವಾಗಿತ್ತು. ಅದಕ್ಕೆ ಬೇಕಾದ ಸೂಕ್ಷ್ಮ ಬುದ್ಧಿ ಮತ್ತು ಕುತೂಹಲ ಇರುವ ಮನಸ್ಸಿತ್ತು.

ಮರುಳ ಮುನಿಯನ ಕಗ್ಗ ಪುಸ್ತಕವು ಡಿ.ವಿ.ಜಿ.ಯ ಕಾಲಾನಂತರ ಪ್ರಿಂಟ್ ಆಯಿತು. ನಮ್ಮ ತಾಯಿಗೆ ಅದರ ಡ್ರಾಫ್ಟ್ ಅನ್ನುಅಚ್ಚಿಗೆ ಸಿದ್ಧ ಮಾಡಲು ಸ್ವಾಮಿಯವರು ಕೊಟ್ಟಿದ್ದರು. ನಮ್ಮ ತಾಯಿಯ ಹ್ಯಾಂಡ್ ರೈಟಿಂಗ್ ಬಹಳ ಉತ್ತಮವಾಗಿತ್ತು. ಅದನ್ನು ಅವರು ತುಂಬಾ ಮುತುವರ್ಜಿಯಿಂದ ಬರೆದರು.

ಸ್ವಾಮಿಯವರು ಅರವತ್ತುನಾಲ್ಕರ ವಯಸ್ಸಿನಲ್ಲೇ ಇದ್ದಕ್ಕಿದ್ದಂತೆ ಕಾಲವಶವಾಗುವುದು ಎಲ್ಲರಿಗೂ, ಶಾಕ್ ಆಯಿತು. ಅವರಂತೂ ಪೂರ್ಣ ಬದುಕನ್ನು ರಸಮಯವಾಗಿಯೂ. ಅರ್ಥಪೂರ್ಣವಾಗಿಯೂ ಕಳೆದಿದ್ದರು. ಅವರ ಮನಸ್ಸು ಹೊಚ್ಚ ಹೊಸದಾಗೆಯೇ ಇತ್ತು.

ನನ್ನ ತಾಯಿಯ ಅರವತ್ತರ ಮುನ್ನವೇ, ಅಣ್ಣ, ಅತ್ತಿಗೆ ಮತ್ತು ಅಕ್ಕ ಎಲ್ಲರನ್ನೂ ಕಳೆದುಕೊಂಡರು. ನಂತರ ನಾವು ಬೆಂಗಳೂರು ದಕ್ಷಿಣ ಭಾಗಕ್ಕೆ ಶಿಫ್ಟ್ ಮಾಡಿದೆವು. ತಂಗ, ಸ್ವಾಮಿ ಅವರ ಮನೆಗಳೂ ಬೆಂಗಳೂರು ದಕ್ಷಿಣ ಭಾಗದಲ್ಲೇ ಇದ್ದವು. ಆದರೆ ಈಗ ಅವರೆಲ್ಲ ಇದ್ದಿದ್ದರೆ, ದಿನಾ ನೋಡಬಹುದಿತ್ತು ಎಂದುಕೊಳ್ಳುತ್ತಿದ್ದೆವು.

ವಸಂತರವರು ಸ್ವಾಮಿಯ ಜೀವನದಲ್ಲಿ ಪ್ರಮುಖವಾಗಿ, ಆದರೆ ಅವರಿಗೆ ಹಿಂದೆ ಆಸರೆಯಾಗಿದ್ದರು. ನಾವು ಅವರಿಬ್ಬರನ್ನೂ ಒಟ್ಟಿಗೆ ನೋಡುತ್ತಿದ್ದೆವು. ವಸಂತ ಮನೆಯವರನ್ನೆಲ್ಲ ಸಮದೃಷ್ಟಿಯಲ್ಲಿ ಕಾಣುತ್ತಿದ್ದರು. ನಾನು ಸಣ್ಣವಳಿದ್ದಾಗ ಬಂದಾಗೆಲ್ಲ ಏನಾದರು ಗಿಫ್ಟನ್ನು ತರುತ್ತಿದ್ದರು. ನಾನು ಕಾಲೇಜಿನಲ್ಲಿದ್ದಾಗ ಸ್ವಲ್ಪ ಕ್ಯಾಶ್ ಹಾಗೆ ಮೆಲ್ಲಗೆ ಕೈಯಲ್ಲಿಟ್ಟು "ನಿನಗೆ ಬೇಕಾದ್ದು ಏನಾದರೂ ತೆಗೆದುಕೋ" ಎನ್ನುತ್ತಿದ್ದರು. ನನ್ನ ಅಣ್ಣನಿಗೂ ಸಹ ಕೊಡುತ್ತಿದ್ದರು.

ನನ್ನ ತಾಯಿಗೆ ಅವರ ತಂದೆಯ ಮೇಲೆ ಅಪಾರವಾದ ಗೌರವವಿತ್ತು. ಅಣ್ಣನ ಮೇಲೆ ಹೆಮ್ಮೆಯಿತ್ತು. ಅಕ್ಕನೂ ಬಹಳ ಹತ್ತಿರವಾಗಿದ್ದರು. ನಾವು ಅವರ ಅಕ್ಕನಾದ ತಂಗ ಅವರ ಮನೆಗೆ ಮೂರು ನಾಲ್ಕು ವಾರಗಳಿಗೆ ಒಮ್ಮೆಯಾದರು ಹೋಗುತ್ತಿದ್ದೆವು. ಅವರನ್ನು ಕಂಡರೆ ನಮಗೆಲ್ಲ ಬಹಳ ಪ್ರೀತಿ.

ಕಸಿನ್ಸ್ ಮೇಲೆ ಛೇಡಿಸಲೆಂದು ಕವನ
ಸ್ವಾಮಿಯವರು ಚಿಕ್ಕಂದಿನಲ್ಲಿ ಅವರ ಕಸಿನ್ಸ್ ಮೇಲೆ ಛೇಡಿಸಲೆಂದು ಕವನ ಕಟ್ಟುತ್ತಿದ್ದರಂತೆ. ಅವೆಲ್ಲ ಲಿಮೆರಿಕ್ಸ್ ತರಹದ ಚುಟಕಗಳು. ಸ್ವಾಮಿ ಚಿಕ್ಕವರಾದಾಗ ಟ್ಯೂಷನ್ ಹೇಳಿಕೊಡಲು ಟೀಚರ್ ಮನೆಗೆ ಬಂದಾಗ ತಪ್ಪಿಸಿಕೊಳ್ಳಲು, ಮರ ಹತ್ತಿ ಕೂತಿರುತ್ತದ್ದರಂತೆ. ಈ ಸಂಗತಿಗಳನ್ನೆಲ್ಲ ನೆನಪಿಸಿಕೊಂಡು ಅದನ್ನು ನನ್ನ ತಾಯಿ ತಮ್ಮ ಮೊಮ್ಮಕ್ಕಳಿಗೆ (ನನ್ನ ಮಗಳು ಮತ್ತು ಅಣ್ಣನ ಮಗ) ಹೇಳಿ ನಗುತ್ತಿದ್ದರು.

ನನ್ನ ತಾಯಿ ಅಲ್ಲಿ ಕಿರಿಯ ಮಗಳಾದರೂ, ಗಂಡನ ಮನೆಯಲ್ಲಿ ಹಿರಿಯ ಸೊಸೆಯಾಗಿದ್ದರು. ಬಹುತೇಕ ಜವಾಬ್ದಾರಿಗಳನ್ನು, ನನ್ನ ತಂದೆಯ ಜೊತೆಯಲ್ಲಿ ಪೂರ್ಣಗೊಳಿಸಿದರು. ಎಲ್ಲರಿಗೂ ಅವರ ಮೇಲೆ ಬಹಳ ಗೌರವವಿತ್ತು. ಅವರಿಗೆ ತುಂಬಾ ಓದಲು, ಬರೆಯಲು ಪುರುಸೊತ್ತಿರಲಿಲ್ಲ. ಆದರೆ ಅದನ್ನು ರಾಜಿ ಮಾಡಿಕೊಂಡಿದ್ದರು. ಒಳ್ಳೆ ಹೆಸರು ಗಳಿಸಿದ್ದಾರೆಂದು, ಅವರ ತಂದೆಯ ಮನೆಯಲ್ಲಿ ಎಲ್ಲರಿಗೂ ಗೊತ್ತಿತ್ತು.

ಮೈಸೂರು ವಿವಿಯಲ್ಲಿ ಡಿವಿಜಿ ಮತ್ತು ಬಿ.ಜಿ.ಎಲ್ ಸ್ವಾಮಿ ಗ್ಯಾಲರಿ ಲೋಕಾರ್ಪಣೆಮೈಸೂರು ವಿವಿಯಲ್ಲಿ ಡಿವಿಜಿ ಮತ್ತು ಬಿ.ಜಿ.ಎಲ್ ಸ್ವಾಮಿ ಗ್ಯಾಲರಿ ಲೋಕಾರ್ಪಣೆ

ಇಲ್ಲಿ ತುಂಬು ಕುಟುಂಬವಾಗಿತ್ತು. ಅತ್ತೆ, ಮಾವ, ನಾದಿನಿಯರು ಮೈದುನಂದಿರು, ಎಲ್ಲರೂ ಇದ್ದರು. ಭಾನುವಾರದ ದಿನಗಳು ಸ್ನೇಹಿತರೋ, ಇಲ್ಲ ನೆಂಟರೋ ಬರುವುದಿತ್ತು. ಎಲ್ಲರನ್ನೂ ಚೆನ್ನಾಗಿ ಮಾತನಾಡಿಸುತ್ತಿದ್ದರು. ಅವರಿಗೆ ಬೇಗ ಏನಾದರೂ ತಿಂಡಿಯನ್ನು ತಯಾರಿಸುತ್ತಿದ್ದರು. ಅಷ್ಟೂ ಜನರ ಜೊತೆಯಲ್ಲಿ, ವಿಶ್ವಾಸದಿಂದ ನಡೆದುಕೊಳ್ಳುವುದನ್ನು ಒಂದು ಜೀವನಕಲೆ ಎಂದೇ ಭಾವಿಸಬೇಕು.

ಸ್ವಾಮಿಗೆ ಮಹತ್ವದ್ದೆಂದರೆ ಪುಸ್ತಕಗಳೇ
ಸ್ವಾಮಿ, ವಸಂತ ನನ್ನ ಮದುವೆಗೆ (1978) ಬಂದು ಪಾಲ್ಗೊಂಡಿದ್ದರು. ನಂತರ, ಅವರು ಬೆಂಗಳೂರಿಗೆ ಬಂದ ಮೇಲೆ, ಅವರ ಮನೆಗೆ ಎಲ್ಲರನ್ನೂ ಕರೆದಿದ್ದರು. ನಾನು ಒಮ್ಮೆ ನನ್ನ ಗಂಡ, ಕೃಷ್ಣಮೂರ್ತಿಯ ಜೊತೆ ಅವರ ಮನೆಗೆ ಹೋಗಿದ್ದೆನು. ಸ್ವಾಮಿಗೆ ಮಹತ್ವದ್ದೆಂದರೆ ಪುಸ್ತಕಗಳೇ. ಅವನ್ನು ಜೋಡಿಸಲಿಕ್ಕೆ ಬೀರುಗಳನ್ನು ತರಿಸಿದ್ದರು. ಒಂದು ರೂಮ್ ಅಂಚುಗಳಲ್ಲೆಲ್ಲ ಹೇರಳವಾಗಿ, ಪುಸ್ತಕಗಳನ್ನು ಜೋಡಿಸಿದ್ದರು ಸ್ವಾಮಿಯೇ, ನಮಗೆ ಒಳ್ಳೆಯ ಕಾಫಿ ತಯಾರಿಸಿ ಕೊಟ್ಟಿದ್ದರು.

ನಾವು ಅಲ್ಲಿಂದ ಹೊರಡುವಾಗ, ಪಕ್ಕದ ಮನೆಯವರು ನಮ್ಮ ಬಗ್ಗೆ ಕೇಳಿದಾಗ, ತತ್ಕ್ಷಣ ಸ್ವಾಮಿಯವರು ''ಮಗಳು, ಅಳಿಯ ಬಂದಿದ್ದಾರೆ'', ಎಂದು ಹೇಳಿದ್ದು, ನಮಗೆ ಆಪ್ಯಾಯಮಾನವಾಗಿತ್ತು

ನಮ್ಮ ತಂದೆ ತಾಯಿಯರು ನನ್ನ ಅಣ್ಣನ ಮನೆಯಲ್ಲಿಯೇ ಇದ್ದರು. ನಾವೆಲ್ಲರೂ ಆಫೀಸುಗಳಿಗೆ ಹೋಗುತ್ತಿರುವರಾದ್ದರಿಂದ, ಅವರೇ ಮೊಮ್ಮಕ್ಕಳನ್ನು(ಅಣ್ಣನ ಮಗ ಮತ್ತು ನನ್ನ ಮಗಳನ್ನು) ನೋಡಿಕೊಳ್ಳುತ್ತಿದ್ದರು. ನನ್ನ ಸೌಭಾಗ್ಯವೆಂದರೆ, ನನ್ನ 50 ವರುಷಗಳ ಕಾಲವು, ತಂದೆ ತಾಯಿ, ಇವರುಗಳ ನಿಕಟ ಸಂಪರ್ಕ ಇದ್ದೇ ಇತ್ತು.

Recommended Video

ರಾಹುಲ್ vs ಬೆಂಗಳೂರು: RCB ತಂಡದಲ್ಲಿ ಮಹತ್ವದ ಬದಲಾವಣೆ | Oneindia Kannada

ನಮ್ಮ ತಂದೆ ತಾಯಿಯರನ್ನು, ಅವರ ಇಳಿ ವಯಸ್ಸಿನಲ್ಲಿ ನನ್ನ ಅಣ್ಣನಾದ ಕೃಷ್ಣಮತ್ತು ಅತ್ತಿಗೆ ಸರಸ್ವತಿ ನೋ ಡಿಕೊಳುತ್ತಿದ್ದರು. ತಂದೆಯವರ ಕಾಲವಶರಾದ ಒಂದು ವರ್ಷದ ಒಳಗೆ ತಾಯಿಯವರು ಸೆಪ್ಟೆಂಬರ್ 2006ರಲ್ಲಿ ಕಾಲವಶರಾದರು. ಅದಕ್ಕೆ ಸುಮಾರು 15-20 ದಿನಗಳ ಮುನ್ನ ತಾಯಿಯವರು, "ಎಷ್ಟೊತ್ತು ಮಲಗಿಕೊಂಡೆ ಇರೋದು. ಮನೆಗೆ ಹೋಗೋಣ" ಎಂದರು. ಮನೆಯಲ್ಲೇ ಇದ್ದರಾದ್ದರಿಂದ, ನಾನು ಮನೆಯಲ್ಲೇ ಇದ್ದೀಯಲ್ಲ,ಇನ್ಯಾವ ಮನೆ ಎಂದದ್ದಕ್ಕೆ, ಬಸವನಗುಡಿ ಮನೆಗೆ ಎಂದರು. ಅಲ್ಲಿ ಯಾರಿದ್ದಾರೆ ಎಂದು ಕೇಳಿದ್ದಕ್ಕೆ, ಸ್ವಾಮಿ ಎಂದರು.

ಬಹುಶಃ ಕಡೆಯಲ್ಲಿ ಅವರ ತಂದೆಯ ಮನೆ, ಸ್ವಾಮಿ, ಎಲ್ಲವು ನೆನಪಿಗೆ ಬಂತು ಎಂದು ತೋರುತ್ತದೆ. ಅವರಿಗೆ ತಂದೆಯ ಮನೆ, ಅಕ್ಕ ಅಣ್ಣನ ಮೇಲಿನ ಬಾಂಧವ್ಯ, ರೇಶಿಮೆಯ ಎಳೆಯಂತೆ ನವಿರಾಗಿ, ಆದರೆ ಗಟ್ಟಿಯಾಗಿತ್ತು ಎಂದು, ಇದರಿಂದ ಭಾವಿಸಬಹುದು.

English summary
Writer, poet DV Gundappa's Indira sathyanaraya turned 100 on April 19. Here is special anecdote by her daughter Meera
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X