ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಆರೋಗ್ಯ ದಿನ: ನಿಮ್ಮ ಆರೋಗ್ಯ ಕಾಪಾಡಲು ಕೆಲವು ಟಿಪ್ಸ್ ಗಳು

By ನೂತನ
|
Google Oneindia Kannada News

ಬೆಂಗಳೂರು, ಏಪ್ರಿಲ್ 07: ಸಣ್ಣ ನೋವಿನ ಅನುಭವವನ್ನೂ ಮರೆಸುವ ಥರಾವರಿ ಗುಳಿಗೆಗಳು, ರೋಗವನ್ನು ಕರಾರುವಕ್ಕಾಗಿ ಪತ್ತೆ ಹಚ್ಚಬಲ್ಲ ಬುದ್ಧಿವಂತ ಯಂತ್ರಗಳು, ಕರೆದಾಗ ಬರುವ ಅಂಬ್ಯುಲೆನ್ಸ್ ಹಾಗೂ ಇತರ ವೈದ್ಯಕೀಯ ಸೇವೆಗಳು, ಮೂರು ಮಾರಿಗೊಂದು ಮಾಯಾಬಜಾರಿನಂತಹ ಮಲ್ಟಿಸ್ಪೆಷಲ್ ಆಸ್ಪತ್ರೆಗಳು.

ಇವುಗಳನ್ನು ನೋಡುತ್ತಿದ್ದರೆ ಆಧುನಿಕ ವೈದ್ಯವಿಜ್ಞಾನದ ಬೆಳವಣಿಗೆಗೆ ಹೆಮ್ಮೆ ಪಡಲೇಬೇಕು. ಸೂಕ್ಷ್ಮವಾಗಿ ಗಮನಿಸಿದರೆ ಭಯಪಡುವಂತಹ ವಿಚಾರವೂ ಇದೇ ಆಗಿದೆ! ಇಷ್ಟು ದೊಡ್ಡ ಮಟ್ಟದಲ್ಲಿ ಯಾವುದೇ ವಿಜ್ಞಾನ ಉದ್ಯಮವಾಗಿ ಬೆಳೆಯುತ್ತಿದೆ ಎಂದರೆ, ಅದು ಅದೇ ಪ್ರಮಾಣದಲ್ಲಿ ತನ್ನ ಗಿರಾಕಿಗಳನ್ನು ಸೃಷ್ಟಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ ಎಂದೇ ಅರ್ಥ! ಇನ್ನೂ ಕಳವಳಕಾರಿಯಾದ ಸಂಗತಿಯೆಂದರೆ ವೈದ್ಯಕೀಯದ ಗಿರಾಕಿಗಳು ಎಂದರೆ ರೋಗಿಗಳಾಗಿರುತ್ತಾರೆ!

ವಿಶ್ವ ಆರೋಗ್ಯ ದಿನ: ಸಾರ್ವತ್ರಿಕ ಆರೋಗ್ಯ ಸರ್ವರಿಗೂ ಸಮಪಾಲುವಿಶ್ವ ಆರೋಗ್ಯ ದಿನ: ಸಾರ್ವತ್ರಿಕ ಆರೋಗ್ಯ ಸರ್ವರಿಗೂ ಸಮಪಾಲು

ನಮ್ಮ ಸುತ್ತ ಮುತ್ತಲಿನ ಪ್ರಪಂಚವನ್ನೇ ನೋಡೋಣ. ಇಂದು ಕುಟುಂಬದಲ್ಲೊಬ್ಬರಾದರೂ ಹೃದ್ರೋಗ, ಕ್ಯಾನ್ಸರ್ ನಂತಹ ತೊಂದರೆಗಳಿಗೆ ತುತ್ತಾದವರು ಸಿಗುತ್ತಾರೆ. ಮನೆಗೊಬ್ಬ ಮಧುಮೇಹಿಯೋ ರಕ್ತದೊತ್ತಡದ ತೊಂದರೆಗೊಳಗಾದವರೋ ಇರುವುದು ಸರ್ವಸಾಮಾನ್ಯವೆಂಬಂತಾಗಿದೆ.

ಮೂರ್ನಾಲ್ಕು ವರ್ಷದ ಮಕ್ಕಳು ಚಾಳೀಸಿನ ಕನ್ನಡಕ ಧರಿಸುವುದು ನಮಗೆ ಯಾವುದೇ ಆತಂಕವನ್ನು ಉಂಟುಮಾಡುತ್ತಿಲ್ಲ! ಸಣ್ಣ ತಲೆನೋವಿಗೂ ಮೆಡಿಕಲ್ ಗಿರಾಕಿಯಾಗುವುದು ಅಭ್ಯಾಸವಾಗಿದೆ ನಮಗೆ. ಮಳೆಗೊಂದು ಬಿಸಿಲಿಗೊಂದು ಬರುವ ಸಮಸ್ಯೆಗೆ ಡಾಕ್ಟರ್ ಕೊಡುವ ಮದ್ದಿನ ಹೆಸರುಗಳು ಅವರಿಗಿಂತಲೂ ಚೆನ್ನಾಗಿ ಬಾಯಿಪಾಠ ಆಗಿಹೋಗಿರುತ್ತದೆ ನಮಗೆ.

ಮೋದಿ ಸರ್ಕಾರದಿಂದ 10 ಕೋಟಿ ಕುಟುಂಬಗಳಿಗೆ ಆರೋಗ್ಯ ವಿಮೆಮೋದಿ ಸರ್ಕಾರದಿಂದ 10 ಕೋಟಿ ಕುಟುಂಬಗಳಿಗೆ ಆರೋಗ್ಯ ವಿಮೆ

ಇಷ್ಟಕ್ಕೂ ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳಲು ನಮಗೆ ವ್ಯವಧಾನ ಎಲ್ಲಿದೆ ಹೇಳಿ.. ನಮಗೆ ತೊಂದರೆ ಬಂದರೆ ವೈದ್ಯರಿದ್ದಾರೆ, ಆವಾಗ ನೋಡಿಕೊಂಡರಾಯಿತೆಂಬ ಭಂಡ ಧೈರ್ಯ ಇದೆಯಲ್ಲ! ಆದರೆ ನೆನಪಿರಲಿ; ಆಸ್ಪತ್ರೆಯಲ್ಲಿ ಆರೋಗ್ಯ ಸಿಗುವುದಿಲ್ಲ.. ಅದು ಕೇವಲ ದುಬಾರಿ ದುರಸ್ತಿ ಕೇಂದ್ರ!

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಒಂದು ಹೊಸ ಮೊಬೈಲ್ ಕೈಗೆ ಬಂದರೆ ಅದಕ್ಕೊಂದು ರಕ್ಷಣಾತ್ಮಕ ಕವಚ, ಫರದೆ ರಕ್ಷಕ ಗಾಜು ಎಂದೆಲ್ಲ ಖರ್ಚು ಮಾಡುವ ನಾವು ನಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆ ಎಂದು ನೋಡಿದರೆ ನಾವು ದೇವರು ಕೊಟ್ಟ ಭಾಗ್ಯವನ್ನು ಎಷ್ಟು ಕಡೆಗಣಿಸಿದ್ದೇವೆಂದು ನಮಗೇ ಅರ್ಥವಾಗುತ್ತದೆ.

ಬೇಕು ಒಂದಷ್ಟು ವ್ಯಾಯಾಮ

ಬೇಕು ಒಂದಷ್ಟು ವ್ಯಾಯಾಮ

ಹೇಗೆ ವಾಸವಿಲ್ಲದ ಮನೆ ಪಾಳುಬೀಳುವುದೋ, ಕೆಲಸ ಇಲ್ಲದ ವಸ್ತು ಕ್ಷಯವಾಗುವುದೋ, ಹಾಗೆ ಅಗತ್ಯದ ವ್ಯಾಯಾಮ ಸಿಗದ ಬುದ್ಧಿ, ಮನಸ್ಸು ಮತ್ತು ದೇಹ ರೋಗರುಜಿನಗಳ ಗೂಡಾಗುವುದು ಸಹಜ. ನಾವು ಸೇವಿಸುವ ಆಹಾರ ನಮ್ಮ ದೇಹದ ಪೋಷಣೆಯಾಗಿ ಮಿಕ್ಕಿದ್ದು ತುರ್ತು ಪರಿಸ್ಥಿತಿಯ (ಉಪವಾಸ, ಅಧಿಕ ದೈಹಿಕ ಶ್ರಮ, ಇತ್ಯಾದಿ) ನಿಭಾವಣೆಗೋಸ್ಕರ ಸಂಗ್ರಹವಾಗುತ್ತಲೇ ಇರುತ್ತದೆ. ಈ ಸಂಗ್ರಹವು ಕೊಬ್ಬಿನ ರೂಪದಲ್ಲಾಗುವುದರಿಂದ ಇದು ಮಿತಿ ಮೀರಿದ ಕಾಲಕ್ಕೆ ಅಪಾಯಕಾರಿಯಾಗಿ ಬದಲಾಗುವ ಸಂಭವವಿದೆ.

ಇಲ್ಲಿ ನಾನು ಕೊಬ್ಬು ಅಪಾಯಕಾರಿ ಎಂದೇನೂ ಹೇಳುತ್ತಿಲ್ಲ. ಅತಿಯಾದರೆ ಅಮೃತವೂ ವಿಷವೆನ್ನುವಂತೆ ದೇಹದ ಅಗತ್ಯಕ್ಕಿಂತ ಹೆಚ್ಚಾದ ಯಾವ ಸತ್ವವೂ ನಮಗೆ ಅಪಾಯಕಾರಿ ಆಗಬಲ್ಲದು. ಹೀಗೆ ಅಪಾಯ ತಂದೊಡ್ಡುವ ವಸ್ತುಗಳಲ್ಲಿ ಕೊಬ್ಬು ತನ್ನ ಪರಿಣಾಮವನ್ನು ಚುರುಕಾಗಿ ತೋರುವಂತಹ ವಸ್ತು. ಪ್ರಾಥಮಿಕ ಮಟ್ಟದಲ್ಲಿ ಕೂದಲುದುರುವಿಕೆ, ತ್ವಚೆಯ ಸಮಸ್ಯೆಗಳಿಂದ ಹಿಡಿದು ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳವರೆಗೂ ಇದರ ಪಾತ್ರವಿದೆ. ಹಾಗಾಗಿ ನಮ್ಮ ಸೇವನೆ ಮತ್ತು ನಮ್ಮ ದೈಹಿಕ ಶ್ರಮಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಬೇಕಾದಷ್ಟು ವ್ಯಾಯಾಮ ಮಾಡಲೇಬೇಕು.

ಸಾಕಷ್ಟು ನಿದ್ದೆ

ಸಾಕಷ್ಟು ನಿದ್ದೆ

ಹಗಲೆಲ್ಲ ದುಡಿದು ದಣಿದ ದೇಹ ತನ್ನ ಅಂಗಾಂಗಗಳಿಂದ ಹಲವಾರು ಜೀವಕೋಶಗಳನ್ನು ಕಳೆದುಕೊಂಡಿರುತ್ತದೆ. ಹೀಗೆ ಜೀರ್ಣಾವಸ್ಥೆ ತಲುಪಿದ ಕೋಶಗಳ ಸಮರ್ಪಕ ನಿರ್ವಹಣೆ, ಹೊಸಹುಟ್ಟು ಹಾಗೂ ಮರುಜೋಡಣೆ ಆಗುವುದು ರಾತ್ರಿಯ ನಿದ್ರಾಸ್ಥಿತಿಯಲ್ಲೇ. ಒಂದೊಮ್ಮೆ ಈ ಕ್ರಿಯೆಗಳು ಸರಿಯಾದ ಕ್ರಮದಲ್ಲಿ ನಡೆಯದಿದ್ದರೆ ದೇಹ ನಿರ್ವಹಣೆಯಲ್ಲಿ ಭಂಗವಾಗುವುದರ ಜೊತೆಗೆ ಜೀರ್ಣಾವಸ್ಥೆ ತಲುಪಿದ ಕೋಶಗಳು ವಿಪರೀತವಾಗಿ ವರ್ತಿಸಿ ಕ್ರಮೇಣ ಕ್ಯಾನ್ಸರ್ನಂತಹ ಅಪಾಯಗಳನ್ನೂ ತಂದೊಡ್ಡುವ ಸಾಧ್ಯತೆಗಳಿವೆ. ಹಾಗೆಂದು ಅತಿಯಾಗಿ ನಿದ್ರಿಸಿದರೂ ಅದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಕಂಡಿತವಾಗಿ ಆಗುತ್ತದೆ.

ಧನಾತ್ಮಕ ಮನಸ್ಥಿತಿ

ಧನಾತ್ಮಕ ಮನಸ್ಥಿತಿ

ನಮ್ಮ ದೇಹದ ಬಿಲಿಯಾಂತರ ಜೀವಕೋಶಗಳ ಸೂತ್ರಧಾರ ಮಿದುಳೆಂಬ ಅಂಗ. ಮಿದುಳಿನ ಸಂಕೇತಗಳು ಮತ್ತು ರಾಸಾಯನಿಕಗಳು ನಮ್ಮ ಮನಸ್ಥಿತಿಯಿಂದ ಅತಿಯಾಗಿ ಪ್ರಭಾವಿತವಾಗುತ್ತವೆ ಹಾಗೂ ಇದೊಂದು ಸಂಕಲಿತ ಕ್ರಿಯೆ. ಹಾಗಾಗಿ ನೋವು, ದುಃಖ, ಒತ್ತಡಗಳಿಗೆ ಹತಾಶರಾಗದೇ ಎಲ್ಲವನ್ನೂ ಪ್ರೀತಿಸುತ್ತಾ ಬದುಕನ್ನು ಎದುರಿಸುವ ಕ್ರೀಡಾತ್ಮಕ ಮನೋಭಾವ ಬೆಳೆಸಿಕೊಳ್ಳುವುದು ನಮ್ಮ ಆರೋಗ್ಯದ ಅತಿ ಮುಖ್ಯ ಅಂಗ.

ಸಮತೋಲಿತ ಪೋಷಣೆ

ಸಮತೋಲಿತ ಪೋಷಣೆ

ದೇಹ ಹಾಗೂ ಮನಸ್ಸಿನ ಕಾರ್ಯನಿರ್ವಹಣೆಗೆ ಬೇಕಾದ ಕಚ್ಚಾ ವಸ್ತುಗಳೇ ಪೋಷಕಾಂಶಗಳು. ಹೇಗೆ ಯಂತ್ರವೊಂದರ ನಿರ್ವಹಣೆಯಲ್ಲಿ ಇಂಧನ ಹಾಗೂ ನಿರ್ವಾಹಕ ವಸ್ತುಗಳು (ಉದಾ: ಇಂಜಿನ್ ಆಯಿಲ್) ಮುಖ್ಯವೋ, ಕಟ್ಟಡ ನಿರ್ಮಾಣದಲ್ಲಿ ಇಟ್ಟಿಗೆ, ಜೆಲ್ಲಿ, ಮರಳು, ಸಿಮಿಂಟುಗಳ ಸಮತೋಲಿತ ಗುಣಮಟ್ಟದ ಬಳಕೆ ಮುಖ್ಯವೋ ಹಾಗೇ ಪೋಷಕಾಂಶಗಳು ಸಹ. ಇವುಗಳ ಅಸಮತೋಲನ ಉಂಟಾದಲ್ಲಿ ಒಂದಿಲ್ಲೊಂದು ಸಮಸ್ಯೆ ಕಟ್ಟಿಟ್ಟ ಬುತ್ತಿ.

ಬದಲಾಗುತ್ತಿರುವ ಕಾಲಮಾನದಲ್ಲಿ ಮಣ್ಣಿನ ಫಲವತ್ತತೆ ಹಾಳಾಗಿ, ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ ವಿಷವಾಗಿ ಕಾಡುತ್ತಿರುವಾಗ, ಯಾಂತ್ರಿಕ ಮಾರುಕಟ್ಟೆ ತನ್ನ ಗುಣಮಟ್ಟದಲ್ಲಿ ಯಾವುದೇ ಖಾತ್ರಿ ನೀಡದಿರುವಾಗ ನಾವು ತಿನ್ನುವ ಆಹಾರದಲ್ಲಿನ ಪೋಷಕಾಂಶಗಳ ಖಾತ್ರಿಯೂ ಅಷ್ಟಕಷ್ಟೇ ಆಗಿದೆ.

English summary
The World Health Day falls on April 7. On the occasion, we bring to you the need to have health insurance protection even as you do your bit to remain healthy.Health insurance is an important financial tool that helps in dealing with unwanted medical emergencies and beating the impact of health care inflation on your wallet. It is an insurance you must have in your portfolio. The earlier you buy a health cover, the better it is for you.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X