ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಅವನಲ್ಲ ಅವಳು... ಆರ್ ಜೆ ಪ್ರಿಯಾಂಕ ಜೀವನ ಪಯಣ

|
Google Oneindia Kannada News

Recommended Video

ನಾನು ಅವನಲ್ಲ ಅವಳು... ಆರ್ ಜೆ ಪ್ರಿಯಾಂಕ ಜೀವನ ಪಯಣ | Oneindia Kannada

"ನಮ್ಮ ಸಮಾಜ ಒಬ್ಬ ಕೊಲೆಗಾರನನ್ನ ಒಪ್ಪಿಕೊಳ್ಳುತ್ತೆ, ಒಬ್ಬ ನಿರ್ದಯಿ ಅತ್ಯಾಚಾರಿಯನ್ನ ಕ್ಷಮಿಸುತ್ತೆ... ಆದರೆ ಯಾವ ತಪ್ಪನ್ನೂ ಮಾಡದ ನಮ್ಮನ್ನು ಮಾತ್ರ ಬದುಕಿರುವವರೆಗೂ ತಿರಸ್ಕಾರದ ಕಣ್ಣಲ್ಲೇ ನೋಡೋದು ಸರೀನಾ..?" ಭಾರತದ ಪ್ರಪ್ರಥಮ ಟ್ರಾನ್ಸ್ ಜೆಂಡರ್ ರೇಡಿಯೋ ಜಾಕಿ ಎಂಬ ಪ್ರಶಂಸೆಗೆ ಪಾತ್ರರಾದ ಪ್ರಿಯಾಂಕ ಅವರ ಈ ಪ್ರಶ್ನೆಗೆ ಸಮಾಜದ ಬಳಿ ಖಂಡಿತ ಉತ್ತರವಿರಲಿಕ್ಕಿಲ್ಲ!

ಹೌದು, ಗಂಡಾಗಿ ಹುಟ್ಟಿ, ಹೆಣ್ಮನಸ್ಸಿನೊಂದಿಗೆ ಬೆಳೆದು, ಕೊನೆಗೆ ಸಂಪೂರ್ಣ ಹೆಣ್ಣಾಗಿ ಪರಿವರ್ತನೆಗೊಂಡ ಪ್ರಿಯಾಂಕ ಅವರ ಬದುಕಿನ ಪಯಣವನ್ನೊಮ್ಮೆ ಅವಲೋಕಿಸಿದರೆ, ಈ ಲಿಂಗ ಅಲ್ಪಸಂಖ್ಯಾತರ ಬದುಕಿನ ಬವಣೆಯ ಕುರಿತು ಕೊಂಚವಾದರೂ ಅರಿವಾದೀತು.

ಕೊಳಗೇರಿ ಮಕ್ಕಳ ಬದುಕಿಗೆ ಹೊಸ 'ದಿಕ್ಕು': ನರ್ಮದಾ ಕುರ್ತಕೋಟಿ ಸಂದರ್ಶನಕೊಳಗೇರಿ ಮಕ್ಕಳ ಬದುಕಿಗೆ ಹೊಸ 'ದಿಕ್ಕು': ನರ್ಮದಾ ಕುರ್ತಕೋಟಿ ಸಂದರ್ಶನ

ಪ್ರಪ್ರಥಮ ಮಹಿಳಾ ಆರ್ಜೆಯಾಗಿ, ರೇಡಿಯೋ ಜರ್ನಲಿಸ್ಟ್ ಆಗಿ, ಪ್ರೋಗ್ರಾಂ ಎಗ್ಸಿಕ್ಯೂಟಿವ್ ಆಗಿ, ತೃತೀಯ ಲಿಂಗಿಗಳ ಸಮುದಾಯದ ಧ್ವನಿಯಾಗಿದ್ದಾರೆ ಪ್ರಿಯಾಂಕಾ. ತಮಗೆ ಸಿಕ್ಕ ಅವಕಾಶವನ್ನೆಲ್ಲ ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಪ್ರಿಯಾಂಕಾ ತೃತೀಯ ಲಿಂಗಿಗಳಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯದ ಕುರಿತು, ಅವಕಾಶದ ಕುರಿತು, ಸಮಾಜದಿಂದ ಸಿಗಬೇಕಾದ ಗೌರವ-ಆದರದ ಕುರಿತು, ಆರೋಗ್ಯದ ಅರಿವಿನ ಕುರಿತು ನಿರಂತರವಾಗಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಮಾಜ ಅಂಥವರನ್ನು ನೋಡುವ ದೃಷ್ಟಿಕೋನ ಬದಲಾಗುವಂತೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.

ಅವನಾಗಿ ಹುಟ್ಟಿ, ಅವಳಾಗಿ ಬದಲಾಗಿ ಅಸಾಮಾನ್ಯವಾದುದನ್ನು ಸಾಧಿಸಿದ ಆರ್ ಜೆ ಪ್ರಿಯಾಂಕ ನಮ್ಮ ಈ ವಾರದ ಸಾಧಕಿ. ಅವರು ಒನ್ ಇಂಡಿಯಾದೊಂದಿಗೆ ಕೆಲಹೊತ್ತು ತಮ್ಮ ಅನುಭವಗಳನ್ನು, ಯಾತನೆಗಳನ್ನು ಹಾಗೇ ಬದುಕಿನ ಬಗ್ಗೆ ತಮಗಿರುವ ಭರವಸೆಗಳನ್ನು ವ್ಯಕ್ತಪಡಿಸಿದ್ದು ಹೀಗೆ..

ದೇಹ ಗಂಡಾಗಿ, ಮನಸ್ಸು ಹೆಣ್ಣಾಗಿ..!

ದೇಹ ಗಂಡಾಗಿ, ಮನಸ್ಸು ಹೆಣ್ಣಾಗಿ..!

"ನಾನು ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ. ಗಂಡಾಗಿ ಹುಟ್ಟಿದ್ದರೂ ನನಗೆ ಹೆಣ್ಣಾಗಿ ಇರುವುದಕ್ಕೇ ಒಲವು. ಇದೇ ಕಾರಣಕ್ಕೆ ಹಲವು ಬಾರಿ ಮನೆಯವರಿಂದ ಬೈಗುಳ ತಿನ್ನಬೇಕಾಯ್ತು, 9 ನೇ ತರಗತಿಯ ನಂತರ ಓದನ್ನೂ ಬಿಡಬೇಕಾಯ್ತು.

ನನ್ನ ಈ ವರ್ತನೆಯಿಂದ ಮನೆಯವರಿಗೂ ನೋವಾಗುತ್ತಿದೆ ಅನ್ನಿಸಿ ನಾನೇ ಮನೆಬಿಟ್ಟು ಹೊರಟೆ. ನಂತರ ಲಿಂಗಅಲ್ಪಸಂಖ್ಯಾತರನ್ನು ಸೇರಿಕೊಂಡೆ. ಅಲ್ಲಿಗೆ ಸೇರಿಕೊಂಡಾಗಲೇ ತಿಳಿದಿದ್ದು ತೃತೀಯ ಲಿಂಗಿಗಳ ಬವಣೆ ಎಂಥಾದ್ದು ಅಂತ. ಹೊಟ್ಟೆಪಾಡಿಗಾಗಿ ತೃತೀಯ ಲಿಂಗಿಗಳು ಏನೆಲ್ಲಾ ಕೆಲಸ ಮಾಡುತ್ತಾರೋ ಅವನ್ನೆಲ್ಲ ಮಾಡಬೇಕಾದ ಹಣೆಬರಹ ನನ್ನದಾಗಿತ್ತು!"

ಲಿಂಗಪರಿವರ್ತನೆ ಮಾಡಿಸಿಕೊಂಡೆ

ಲಿಂಗಪರಿವರ್ತನೆ ಮಾಡಿಸಿಕೊಂಡೆ

"ಈ ಗೊಂದಲದಲ್ಲಿ ಬದುಕುವುದು ಕಷ್ಟ ಅನ್ನಿಸಿ, ನಾನು ಸಂಪೂರ್ಣ ಹೆಣ್ಣಾಗಿ ಲಿಗ ಪರಿವರ್ತನೆ ಮಾಡಿಸಿಕೊಂಡು, 'ಪ್ರಿಯಾಂಕಾ' ಆದೆ. ಆ ನಂತರ ನಮ್ಮ ಸಮುದಾಯದವರೆಲ್ಲ ಸೇರಿ ಆಗಾಗ ಮೀಟಿಂಗ್ ಮಾಡಿ, ಸಮಾಜದ ಮುಖ್ಯವಾಹಿನಿಯಲ್ಲಿ ನಾವೂ ಒಂದಾಗೋದು ಹೇಗೆ ಎಂಬ ಕುರಿತು ಚರ್ಚೆ ನಡೆಸುವುದಕ್ಕೆ ತೊಡಗಿದೆವು. ನಾವೂ ಎಲ್ಲರಂತೇ ಮನುಷ್ಯರು. ನಮ್ಮಲ್ಲೂ ಪ್ರತಿಭೆಯಿದೆ.

ಅವಕಾಶ ಸಿಕ್ಕರೆ ನಾವೂ ಎಲ್ಲರಂತೆಯೇ ಮುಂದೆ ಬರುತ್ತೇವೆ. ಆದರೆ ನಮಗೆ ಕೆಲಸ ಕೊಡುವವರ್ಯಾರು? ಸಿಗ್ನಲ್ ಗಳಲ್ಲಿ ನಾವು ಭಿಕ್ಷೆ ಬೇಡುತ್ತಿದ್ದರೆ, 'ಗುಂಡುಕಲ್ಲಿನ ಹಾಗಿದ್ದೀಯಾ, ದುಡ್ಕೊಂಡು ತಿನ್ನೋಕೇನು' ಅನ್ನೋರಿಗೆ ಕಡಿಮೆಯಿಲ್ಲ. ದುಡಿಯೋಕೆ ನಮಗೂ ಇಷ್ಟವೇ. ಆದರೆ ಕೆಲಸ ಕೊಡೋರ್ಯಾರು..?"

ಮಂಗಳೂರಿನ ಶಿಲ್ಪಾರ ಯಶೋಗಾಥೆ ಮೆಚ್ಚಿದ ಆನಂದ್ ಮಹೀಂದ್ರಮಂಗಳೂರಿನ ಶಿಲ್ಪಾರ ಯಶೋಗಾಥೆ ಮೆಚ್ಚಿದ ಆನಂದ್ ಮಹೀಂದ್ರ

ಅಮ್ಮನ ನೆನಪಾಗಿ ಉಮ್ಮಳಿಸಿದ ದುಃಖ

ಅಮ್ಮನ ನೆನಪಾಗಿ ಉಮ್ಮಳಿಸಿದ ದುಃಖ

ನನ್ನ 22ನೇ ವಯಸ್ಸಿನಲ್ಲಿ ಹೆಣ್ಣಾಗಿ ಲಿಂಗಪರಿವರ್ತನೆ ಮಾಡಿಕೊಂಡ ನಂತರ ಅದ್ಯಾಕೋ ಅಮ್ಮ ತುಂಬಾ ನೆನಪಾಗುವುದಕ್ಕೆ ಶುರುವಾದರು. ಸರಿಸುಮಾರು 10 ವರ್ಷ ಮನೆಬಿಟ್ಟು ಬಂದವಳಿಗೆ ಯಾಕೋ ಮನೆ ಇನ್ನಿಲ್ಲದಷ್ಟು ಕಾಡತೊಡಗಿತ್ತು. ಫೋನ್ ಮಾಡೋಕೆ ಭಯ. ನನ್ನನ್ನು ಒಪ್ಪಿಕೊಳ್ತಾರೋ, ಇಲ್ಲವೋ ಅಂತ. ಹಬ್ಬ-ಹರಿದಿನಗಳು ಬಂದರೆ ಬಾಲ್ಯ ನೆನಪಾಗಿ ಕಣ್ಣೀರು ಉಕ್ಕುತ್ತಿತ್ತು. ಯಾರೋ ಸ್ನೇಹಿತರಿಂದ ಮನೆಯ ಫೋನ್ ನಂಬರ್ ಪಡೆದು ಏನಾದರಾಗಲಿ ಅಂತ ಒಂದು ದಿನ ಫೋನ್ ಮಾಡಿಯೇ ಬಿಟ್ಟೆ. ಆದರೆ ನಾನಂದುಕೊಂಡ ಹಾಗಾಗಲಿಲ್ಲ. ನಮ್ಮಮ್ಮ ನನ್ನನ್ನು ಒಪ್ಪಿಕೊಂಡರು. ವಾಪಸ್ ಮನೆಗೆ ಬರುವಂತೆ ಕರೆದರು.

ನಂಗೂ ನಂಬೋದು ಕಷ್ಟವಾಯ್ತು. ಅವರನ್ನೆಲ್ಲ ನೋಡೋ ತುಡಿತವಿತ್ತಲ್ಲ, ತಕ್ಷಣ ಹೊರಟಿಬಿಟ್ಟೆ. 'ಸಮಾಜ ಏನು ಬೇಕಾದರೀ ಹೇಳಿಕೊಳ್ಳಲಿ. ನೀನು ನಮ್ಮೊಂದಿಗೇ ಇರು' ಎಂದರು ಅಮ್ಮ. ಅಪ್ಪನೂ ಒಪ್ಪಿಕೊಂಡರು. ತಂಗಿಯ ಮದುವೆಯನ್ನು ನಾನೇ ಮುಂದೆ ನಿಂತು ಮಾಡಿದೆ. ಆಕೆಯ ಪತಿಯ ಮನೆಯವರೂ ನನ್ನನ್ನು ಒಪ್ಪಿಕೊಂಡರು. ಅಲ್ಲಿಂದ ಬದುಕಿಗೆ ಮತ್ತೊಂದು ತಿರುವು ಸಿಕ್ಕಿತು.

ಹೋರಾಟದ ಹಾದಿ

ಹೋರಾಟದ ಹಾದಿ

ಲಿಂಗ ಅಲ್ಪಸಂಖ್ಯಾತರ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದ 'ಸಂಗಮ' ಎಂಬ ಸಂಘಟನೆ, 'ಸಮರ'ಸಮುದಾಯ ಆಧಾರಿತ ಯೋಜನೆಯೊಂದನ್ನು ಹುಟ್ಟುಹಾಕಿತು. ಅದರ ಮೂಲಕ ಲಿಂಗ ಅಲ್ಪಸಂಖ್ಯಾತರಿಗೆ ಆರೋಗ್ಯದ ಕುರಿತು ಅರಿವು ನೀಡುವುದು, ಅವರ ಹಕ್ಕಿಗಾಗಿ ಹೋರಾಟ ನಡೆಸುವ ಕಾರ್ಯಕ್ರಮಗಳನ್ನು ಮಾಡುವ ಉದ್ದೇಶವನ್ನು ಇದು ಹೊಂದಿತ್ತು. ಈ ಸಂಸ್ಥೆಯಲ್ಲಿ ನನ್ನನ್ನೂ ಸದಸ್ಯೆಯನ್ನಾಗಿ ಸೇರಿಸಿಕೊಂಡರು. ಈ ಸಂಘಟನೆಯ ಮೂಲಕ ಬೇರೆ ಬೇರೆ ಕಡೆಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದ ನಮ್ಮನ್ನುಜೈನ್ ಕಾಲೇಜ್ ಸಂಸ್ಥೆ ಆರಂಭಿಸಿದ Radio activeಕಮ್ಯುನಿಟಿ ರೇಡಿಯೋ ಗುರುತಿಸಿ, ನಮ್ಮಿಂದಲೇ ಒಂದು ಕಾರ್ಯಕ್ರಮ ಕೊಡಿಸಿತು. ಆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾದ ಹಿನ್ನೆಲೆಯಲ್ಲಿ ನಮ್ಮದೇ ಸಮುದಾಯದ ಯಾರಾದರೊಬ್ಬರಿಂದ ನಿರಂತರವಾಗಿ ಕಾರ್ಯಕ್ರಮ ನೀಡುವ ಸಲುವಾಗಿ, ಒಮ್ಮರನ್ನು ಸಿಬ್ಬಂದಿಯನ್ನಾಗಿ ನೇಮಿಸಿಕೊಳ್ಳಲು Radio active ಮುಂದೆಬಂತು. ಈ ಸಂದರ್ಭದಲ್ಲಿ ಸಮುದಾಯದ ವಿಶ್ವಾಸ ಗಳಿಸಿದ್ದ ನನ್ನನ್ನು ಎಲ್ಲರೂ ಒಮ್ಮತದಿಂದ ಆರಿಸಿ ಕಳಿಸಿದರು. ಅಲ್ಲಿಂದ ಬದುಕು ಬದಲಾಯ್ತು.

ಭಾರತದ ಮೊದಲ ಲಿಂಗಪರಿವರ್ತಿತ ರೇಡಿಯೋ ಜಾಕಿ

ಭಾರತದ ಮೊದಲ ಲಿಂಗಪರಿವರ್ತಿತ ರೇಡಿಯೋ ಜಾಕಿ

Radio active ನನ್ನನ್ನು ರೇಡಿಯೋ ಜಾಕಿಯನ್ನಾಗಿ ನೇಮಿಸಿಕೊಳ್ಳುತ್ತಿದ್ದಂತೆಯೇ, ನಾನು ಭಾರತದ ಮೊದಲ ಟ್ರಾನ್ಸ್ ಜೆಂಡರ್ ರೇಡಿಯೋ ಜಾಕಿ ಎಂಬ ಹೆಗ್ಗಳಿಕೆ ಪಾತ್ರಳಾದೆ. ನನ್ನ ಸಮುದಾಯದವರು ನನ್ನ ಮೇಲೆ ವಿಶ್ವಾಸವಿಟ್ಟು ಇಂಥ ಜವಾಬ್ದಾರಿ ನೀಡಿದ್ದರಿಂದ ಅವರ ಹಕ್ಕಿಗಾಗಿ ಹೋರಾಡುವ ಹೊಣೆ ನನ್ನದಾಗಿತ್ತು.

ಅಲ್ಲದೆ, Radio active ನನ್ನ ಮೇಲೆ ಇರಿಸಿದ್ದ ವಿಶ್ವಾಸವನ್ನೂ ಉಳಿಸಿಕೊಳ್ಳಬೇಕಿತ್ತು. ಅದಕ್ಕೆಂದೇ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡಿ ತೃತೀಯ ಲಿಂಗಿಗಳ ಕಷ್ಟಗಳು ಜನಸಾಮಾನ್ಯರಿಗೆ ಮನದಟ್ಟಾಗುವಂತೆ ಮಾಡಲು ಪ್ರಯತ್ನಿಸಿದೆ.

ತೃತೀಯ ಲಿಂಗಿಗಳ ಸಮುದಾಯದ ಧ್ವನಿಯಾಗಿ...

ತೃತೀಯ ಲಿಂಗಿಗಳ ಸಮುದಾಯದ ಧ್ವನಿಯಾಗಿ...

ತೃತೀಯ ಲಿಂಗಿಗಳ ಸಮುದಾಯದ ಧ್ವನಿಯಾಗಿ 'ಯಾರಿವರು?' ಎಂಬ ಕಾರ್ಯಕ್ರಮ ಆರಂಭವಾಯ್ತು. ಲಿಂಗಅಲ್ಪಸಂಖ್ಯಾತರು ತ್ಮ ಕಷ್ಟಕಾರ್ಪಣ್ಯಗಳನ್ನು ಹಂಚಿಕೊಳ್ಳುವುದಕ್ಕೆ ಇದು ವೇದಿಕೆಯಾಯ್ತು.

ಪ್ರತಿ ಗುರುವಾರ ಮಧ್ಯಾಹ್ನ 12-12.30 ರವರೆಗೆ ನಡೆಯುವ ಈ ಕಾರ್ಯಕ್ರಮವನ್ನು ಮೆಚ್ಚಿ ಹಲವರು ಅಭಿನಂದನೆ ಸಲ್ಲಿಸಿದರು. ಆ ನಂತರ ಕೇವಲ ತೃತೀಯ ಲಿಂಗಿಗಳ ಸಮಸ್ಯೆ ಮಾತ್ರವಲ್ಲದೆ, ಬೆಂಗಳೂರಿನ ರಸ್ತೆಗಳಲ್ಲಿ ಕಸ ಗುಡಿಸುವವರ ಸಮಸ್ಯೆಯ ಬಗ್ಗೆಯೂ ಬೆಳಕು ಚೆಲ್ಲುವ ಕಾರ್ಯಕ್ರಮಗಳನ್ನೂ ಮಾಡತೊಡಗಿದೆವು. ಪರಿಸರ, ಪ್ರಾಣಿಗಳ ರಕ್ಷಣೆಯ ಕುರಿತೂ ಜಾಗೃತಿ ಕಾರ್ಯಕ್ರಮ ಮಾಡಿದೆವು. ಈ ಎಲ್ಲ ಹಂತದಲ್ಲೂ Radio active ನನ್ನೊಂದಿಗೆ ಬೆನ್ನೆಲುಬಾಗಿ ಸದಾ ಜೊತೆಯಲ್ಲಿದೆ. ಇಲ್ಲಿನ ಪ್ರತಿಯೊಬ್ಬ ಸಿಬ್ಬಂದಿಯೂ ನನ್ನ ಮನಸ್ಸನ್ನು ನೋಯಿಸದೆ, ನನ್ನನ್ನು ತಿರಸ್ಕಾರದಿಂದ ನೋಡದೆ, ನಾನೂ ಸಾಮಾನ್ಯ ಮನುಷ್ಯಳು ಎಂದು ಅರ್ಥಮಾಡಿಕೊಂಡು ನನಗೆ ಗೌರವಾದರ ನೀಡುತ್ತಿದ್ದಾರೆ.

ಧಾರಾವಾಹಿ, ಜಾಹೀರಾತು, ಶಾರ್ಟ್ ಫಿಲ್ಮ್

ಧಾರಾವಾಹಿ, ಜಾಹೀರಾತು, ಶಾರ್ಟ್ ಫಿಲ್ಮ್

Radio active ಮೂಲಕ ನನಗೆ ಸಾಕಷ್ಟು ಅವಕಾಶಗಳೂ ಹುಡುಕಿಕೊಂಡು ಬರತೊಡಗಿದವು. ಪ್ರಸಿದ್ಧ ಧಾರಾವಾಹಿ 'ವಾರಸುದಾರ' ದಲ್ಲೂ ಅಭಿನಯಿಸುವ ಅವಕಾಶ ಸಿಕ್ಕಿತು, ನಾನು ಅಭಿನಯಿಸಿದ 'ನೀನು ಗಂಡ್ಸಾ, ಹೆಂಗ್ಸಾ' ಎಂಬ ಶಾರ್ಟ್ ಫಿಲ್ಮ್ಅನ್ನು ಯೂಟ್ಯೂಬ್ ನಲ್ಲಿ 3 ಮಿಲಿಯನ್ ಗೂ ಅಧಿಕ ಜನ ನೋಡಿದ್ದಾರೆ. ಅಲ್ಲದೆ ಸರ್ಕಾರದ ಮೈತ್ರಿ ಯೋಜನೆಯ ಜಾಹೀರಾತಿನಲ್ಲೂ ನನ್ನ ಚಿತ್ರವನ್ನು ಬಳಸಿಕೊಳ್ಳಲಾಯ್ತು... ಹಲವು ಡಾನ್ಸ್ ಕಾರ್ಯಕ್ರಮ, ನಾಟಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ.

ಸರ್ಕಾರಕ್ಕೆ ಮನವಿ

ಸರ್ಕಾರಕ್ಕೆ ಮನವಿ

ನನ್ನ ಸಮುದಾಯದ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದಕ್ಕೆ, ಮತ್ತು ಅವರಿಗೆ ಸರ್ಕಾರದಿಂದ ಸಿಗಬೇಕಾದ ಗುರುತಿನ ಚೀಟಿ, ಸೌಲಭ್ಯಗಳು, ಪೆನ್ಷನ್ ಇತ್ಯಾದಿಗಳಿಗಾಗಿ ಒಟ್ಟಾಗಿ ಹೋರಾಟ ನಡೆಸುತ್ತಿದ್ದೇವೆ. ಕೋರ್ಟು ಈಗ ತೃತೀಯ ಲಿಂಗಿಗಳ ಸ್ಥಾನಮಾನ ನೀಡಿದೆ. ಆದರೆ ನಮಗೆ ಉದ್ಯೋಗಾವಕಾಶಗಳು ಸಿಗಬೇಕಿದೆ, ಪ್ರತಿ ಸಂಸ್ಥೆಗಳಲ್ಲಿ ನಮಗಾಗಿ ಮೀಸಲಾತಿ ಬೇಕಿದೆ, ನಮಗೆ ಬಾಡಿಗೆ ಮನೆ ನೀಡುವುದಕ್ಕೂ ಯಾರು ಸಿದ್ಧವಿರೋಲ್ಲ. ಆದ್ದರಿಂದ ನಮಗೆ ಸೂರನ್ನು ಕಲ್ಪಿಸುವ ವ್ಯವಸ್ಥೆ ಆಗಬೇಕಿದೆ. ಮಗುವನ್ನು ದತ್ತು ಪಡೆಯುವ ಹಕ್ಕನ್ನೂ ನೀಡಬೇಕಿದೆ. ಸರ್ಕಾರ ಪೆನ್ಷನ್ ನೀಡುವುದಾದರೆ 45 ವರ್ಷ ಮೇಲ್ಪಟ್ಟವರಿಗೆ ನೀಡಲಿ. ಆದರೆ ನಮಗೆ ಪೆನ್ಷನ್ ಬೇಡ. ನಾವು ದುಡಿದು ತಿನ್ನುತ್ತೇವೆ. ಅದಕ್ಕೆ ಅವಕಾಶ ಮಾಡಿಕೊಡಿ.

ಲಿಮ್ಕಾ ದಾಖಲೆಯಲ್ಲಿ ಹೆಸರು

ಲಿಮ್ಕಾ ದಾಖಲೆಯಲ್ಲಿ ಹೆಸರು

ಮೊದಲ ಟ್ರಾನ್ಸ್ ಜೆಂಡರ್ ಆರ್ಜೆ ಎಂಬ ಕಾರಣಕ್ಕೆ ನನ್ನ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿಕೊಂಡಿತು. ನಂತರ ಸುಮಾರು 25 ಕ್ಕೂ ಹೆಚ್ಚು ಬೇರೆ ಬೇರೆ ಪ್ರಶಸ್ತಿಗಳು ನನ್ನನ್ನು ಹುಡುಕಿಕೊಂಡು ಬಂದವು. ಇದರಿಂದಾಗಿ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ನನ್ನ ಜನರಿಗಾಗಿ ನಾನು ಮತ್ತಷ್ಟು ಹೋರಾಡುವ ಸಾಮರ್ಥ್ಯವೂ, ಪ್ರೋತ್ಸಾಹವೂ ಸಿಕ್ಕಿದೆ.

ಮಕ್ಕಳ ಮನಸ್ಸಲ್ಲಿ ವಿಷ ಬಿತ್ತಬೇಡಿ

ಮಕ್ಕಳ ಮನಸ್ಸಲ್ಲಿ ವಿಷ ಬಿತ್ತಬೇಡಿ

ಚಿಕ್ಕ ಮಕ್ಕಳ ಬಳಿ ನಮ್ಮನ್ನು ತೋರಿಸಿ ಹೆದರಿಸುವ ಕೆಲಸ ಮಾಡಬೇಡಿ. ಅವರು ಮಕ್ಕಳನ್ನು ಅಪಹರಿಸುತ್ತಾರೆ ಎಂಬಿತ್ಯಾದಿ ಮಾತುಗಳಿಂದ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ನಮ್ಮ ಬಗ್ಗೆ ಭಯ ಮೂಡಿಬಿಡುತ್ತದೆ. ನಮಗೂ ಮಕ್ಕಳನ್ನು ಮುದ್ದಿಸುವ ಮನಸ್ಸಿದೆ. ನಾವೂ ಮನುಷ್ಯರೇ. ಪಠ್ಯ ಪುಸ್ತಕಗಳಲ್ಲೂ ಇಂಥದೊಂದು ಸಮುದಾಯವಿದೆ ಎಂದು ಮಕ್ಕಳಿಗೆ ಮೊದಲೇ ಅರಿವಾಗುವಂತೆ ಮಾಡಿ. ಇಲ್ಲವೆಂದರೆ ಮಕ್ಕಳಿಗೆ ಸಹಜವಾಗಿಯೇ ಭಯ ಹುಟ್ಟುತ್ತದೆ.

ನಮ್ಮನ್ನೂ ಒಪ್ಪಿಕೊಳ್ಳಿ...

ನಮ್ಮನ್ನೂ ಒಪ್ಪಿಕೊಳ್ಳಿ...

ಈ ಸಮಾಜ ನಮ್ಮ ಜನರನ್ನು ಎಷ್ಟೇ ಕೀಳಾಗಿ ಕಂಡರೂ, ನನಗೆ ಸಿಕ್ಕ ಈ ಮನ್ನಣೆ ಈ ಸಮಾಜದಿಂದಲೇ ಎಂಬುದನ್ನು ಮರೆಯುವಂತಿಲ್ಲ. ಇಲ್ಲಿ ಎರಡು ರೀತಿಯ ಜನರೂ ಇದ್ದಾರೆ. ಆದರೆ ನನಗೆ ಸಿಕ್ಕ ಮನ್ನಣೆ ನನ್ನ ಸಮಾಜದ ಪ್ರತಿಯೊಬ್ಬರಿಗೂ ಸಿಗುವಂತಾಗಬೇಕು. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಇಂಥ ಮಗುವಿದ್ದರೆ ದನ್ನು ಮನೆಯಿಂದ ಆಚೆ ನೂಕದೆ ಒಪ್ಪಿಕೊಳ್ಳುವ ಉದಾರತೆ ಬೆಳೆಸಿಕೊಳ್ಳಬೇಕು. ಮನೆಯವರು ಒಪ್ಪಿಕೊಂಡರೆ ಸಮಾಜ ಒಪ್ಪಿಕೊಳ್ಳುತ್ತೆ. ಹೆತ್ತವರೇ ದೂರ ಮಾಡಿದರೆ, ಸಮಾಜದಿಂದ ನಾವೇನು ನಿರೀಕ್ಷೆ ಮಾಡೋಕೆ ಸಾಧ್ಯ? ಆದ್ದರಿಂದ ನಮ್ಮನ್ನೂ ನಿಮ್ಮಂತೇ ಎಂದು ಸ್ವೀಕರಿಸಿ. ಒಪ್ಪಿಕೊಳ್ಳಿ. ಇದಷ್ಟೇ ನನ್ನ ಮನವಿ.

English summary
Here is an inspirational story of India's first transgender Radio Jackie Priyanka. She is the woman achiever of the week .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X