ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ಲೇಷಣೆ : ಬಿಎಸ್ವೈ ನೇತೃತ್ವದಲ್ಲಿ ಅಲ್ಪಮತದ ಸರಕಾರ ರಚಿಸಲು ಬಿಜೆಪಿ ಸಿದ್ಧ?

By ಆರ್ ಟಿ ವಿಠ್ಠಲಮೂರ್ತಿ
|
Google Oneindia Kannada News

ಕರ್ನಾಟಕ ಮೊಟ್ಟ ಮೊದಲ ಬಾರಿ ಅಲ್ಪ ಮತದ ಸರ್ಕಾರವೊಂದನ್ನು ನೋಡುವ ಸನ್ನಿವೇಶ ಉದ್ಭವವಾಗಬಹುದೇ?

ಹಾಗೆಂಬ ಪ್ರಶ್ನೆ ರಾಜಕೀಯ ವಲಯಗಳಲ್ಲಿ ಕೇಳಿ ಬರುತ್ತಿದೆ. 1991ರಲ್ಲಿ ಯಾವ ಪಕ್ಷಕ್ಕೂ ಬಹುಮತ ಬರದೇ ಹೋದಾಗ ಪಿ.ವಿ.ನರಸಿಂಹರಾವ್ ಅವರ ನೇತೃತ್ವದ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಲ್ಪ ಮತದ ಸರ್ಕಾರ ರಚಿಸಿತ್ತು. ಕೇಂದ್ರ ಸರ್ಕಾರ ರಚಿಸಲು 273 ಸದಸ್ಯರ ಬೆಂಬಲ ಬೇಕಾದರೂ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಪಕ್ಷದ ಬಲ ಇನ್ನೂರೈವತ್ತರ ಗಡಿಯಲ್ಲಿತ್ತು. ಆದರೂ ಅತ್ಯಂತ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಪಕ್ಷವೇ ಸರ್ಕಾರ ರಚಿಸಿತು. ಮತ್ತು ನರಸಿಂಹರಾವ್ ಕೂಡಾ ಅತ್ಯಂತ ಚಾಣಾಕ್ಷತೆಯಿಂದ ಐದು ವರ್ಷಗಳ ಕಾಲ ಈ ಅಲ್ಪಮತದ ಸರ್ಕಾರವನ್ನು ಮುನ್ನಡೆಸಿದರು.

ಆಪರೇಷನ್ ಕಮಲ : ಆರ್‌ಎಸ್‌ಎಸ್‌ನಿಂದ ಅಮಿತ್‌ ಶಾಗೆ ವರದಿ!ಆಪರೇಷನ್ ಕಮಲ : ಆರ್‌ಎಸ್‌ಎಸ್‌ನಿಂದ ಅಮಿತ್‌ ಶಾಗೆ ವರದಿ!

ಅವತ್ತು ಸರ್ಕಾರ ತನ್ನ ವಿಶ್ವಾಸ ಮತ ಸಾಬೀತು ಪಡಿಸಬೇಕಾದ ಸಂದರ್ಭದಲ್ಲಿ ಇದೇ ದೇವೇಗೌಡರು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸಂಸದರು, ಏನಾದರೊಂದು ಕಾರಣ ಮುಂದಿಟ್ಟು ಸದನ ಕಲಾಪವನ್ನು ಬಹಿಷ್ಕರಿಸಿ ಬಿಡುತ್ತಿದ್ದರು. ಹೀಗಾಗಿ ಸದನದಲ್ಲಿ ಹಾಜರಿದ್ದ ಸದಸ್ಯರ ಬಲಾಬಲದ ಆಧಾರದ ಮೇಲೆ ನರಸಿಂಹರಾಯರ ಸರ್ಕಾರ ಬಚಾವಾಗಿ ಬಿಡುತ್ತಿತ್ತು.

ಮುಂದೆ ಶಿಬುಸೊರೇನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ ಈ ವಿಷಯದಲ್ಲೇ ಹಗರಣವೊಂದಕ್ಕೆ ತಗಲಿಕೊಂಡಿದ್ದು, ಸಿಬಿಐ ತನಿಖೆ ಎದುರಿಸಿದ್ದು ಇತಿಹಾಸ. ಅದೇನೇ ಇರಲಿ, ಒಟ್ಟಿನಲ್ಲಿ ಅಲ್ಪಮತದ ಸರ್ಕಾರವನ್ನು ನರಸಿಂಹರಾವ್ ಅತ್ಯಂತ ಚಾಣಾಕ್ಷತೆಯಿಂದ ನಿಭಾಯಿಸಿದ್ದು ಈಗ ಇತಿಹಾಸ.

ಈಗ ಕರ್ನಾಟಕದಲ್ಲೂ ಅಂತಹ ಅಲ್ಪಮತದ ಸರ್ಕಾರವನ್ನು ಯಡಿಯೂರಪ್ಪ ನೇತೃತ್ವದ ಬಿಜೆಪಿ ರಚಿಸಬಹುದೇ? ಈಗ ಸುನಾಮಿಯಂತೆ ಮೇಲೆದ್ದಿರುವ ಪ್ರಶ್ನೆ ಇದು. ಅಂದ ಹಾಗೆ ಯಾರೇನೇ ಹೇಳಿದರೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಣ ಸಂಬಂಧ ದಿನಕಳೆದಂತೆ ಹದಗೆಡುತ್ತಿದೆಯೇ ಹೊರತು ಸುಧಾರಿಸುತ್ತಿಲ್ಲ.

ಕಾಂಗ್ರೆಸ್ ಶಾಸಕರ ಬೆಂಬಲ ಸಿಕ್ಕರೆ ಬಿಜೆಪಿ ಸರ್ಕಾರ: ಆಪರೇಷನ್‌ಗೆ ಅಸ್ತು?ಕಾಂಗ್ರೆಸ್ ಶಾಸಕರ ಬೆಂಬಲ ಸಿಕ್ಕರೆ ಬಿಜೆಪಿ ಸರ್ಕಾರ: ಆಪರೇಷನ್‌ಗೆ ಅಸ್ತು?

ವಾಸ್ತವವಾಗಿ ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರು, ಈ ಸರ್ಕಾರ ಇರುವುದಕ್ಕಿಂತ ಹೋಗುವುದು ಒಳ್ಳೆಯದು. ಇಲ್ಲದೇ ಹೋದರೆ ದಿನ ಕಳೆದಂತೆ ಜೆಡಿಎಸ್ ಇಮೇಜ್ ಹೆಚ್ಚುತ್ತಾ ಹೋಗಿ, ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕೈ ಪಾಳೆಯ ಮತ್ತಷ್ಟು ದಯನೀಯ ಸ್ಥಿತಿಗೆ ತಲುಪಬಹುದು ಎನ್ನುತ್ತಿದ್ದಾರೆ.

ಹಾಗಂತ ಇವರ ಪೈಕಿ ಬಹುತೇಕರಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಇಚ್ಛೆಯಿಲ್ಲ. ಅದಕ್ಕೆ ಪ್ರಜಾಪ್ರಭುತ್ವದ ಮೇಲಿನ ಗೌರವ ಕಾರಣ ಎನ್ನುವುದಕ್ಕಿಂತ ಮುಖ್ಯವಾಗಿ ಪುನ: ಮತದಾರರೆದುರು ಹೋಗುವುದು ತುಂಬ ಕಷ್ಟದ ಕೆಲಸ ಅನ್ನುವುದು ಮುಖ್ಯ ಕಾರಣ.

ಖರ್ಗೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡೋಣ

ಖರ್ಗೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡೋಣ

ಹೀಗಾಗಿ ಸರ್ಕಾರ ಉರುಳಿ, ತಾವು ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವ ಸ್ಥಿತಿ ಬಂದರೂ ಅದನ್ನು ಗೌರವದಿಂದ ಒಪ್ಪಿಕೊಳ್ಳುವುದು ಅನಿವಾರ್ಯ ಎಂಬುದು ಕಾಂಗ್ರೆಸ್ ಪಕ್ಷದ ಹಲವು ನಾಯಕರ ವಾದ. ಈ ವಾದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲವೂ ಇದೆ.

ಯಾಕೆಂದರೆ ತಮ್ಮನ್ನು ಮುಗಿಸಲು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಮಾರಸ್ವಾಮಿ ನಡೆಸುತ್ತಿರುವ ನಿರಂತರ ಯತ್ನದ ಬಗ್ಗೆ ಸಿದ್ದರಾಮಯ್ಯ ಅವರಿಗೆ ಗೊತ್ತು. ಹೀಗಾಗಿ ತಮ್ಮನ್ನು ಮುಗಿಸಲು ಹೊರಟಿರುವ ಸರ್ಕಾರವನ್ನು ತಾವೇ ಮುಗಿಸಿಬಿಡುವುದು ಒಳ್ಳೆಯದು ಎಂಬುದು ಸಿದ್ದರಾಮಯ್ಯ ಅವರ ಯೋಚನೆ.

ಇದೇ ಕಾರಣಕ್ಕಾಗಿ ಅವರು ಹಲವು ಸಾಧ್ಯತೆಗಳ ಕಡೆ ಗಮನ ಹರಿಸಿದ್ದಾರೆ. ಈಗ ಜೆಡಿಎಸ್ ಗೆ ಬೆಂಬಲ ನೀಡಿದ್ದೇವೆ. ಅದರ ಬದಲು ಜೆಡಿಎಸ್ ಪಕ್ಷವೇ ಕಾಂಗ್ರೆಸ್ ಗೆ ಬೆಂಬಲ ನೀಡಲಿ. ಕಾಂಗ್ರೆಸ್ ಪಕ್ಷದ ವತಿಯಿಂದ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡೋಣ. ಹಾಗೇನಾದರೂ ಆದರೆ ಇದು ಮುಂದಿನ ಸಂಸತ್ ಚುನಾವಣೆಯ ದೃಷ್ಟಿಯಿಂದ ಜಾತ್ಯಾತೀತ ಶಕ್ತಿಗಳು ಉರುಳಿಸುವ ಅತ್ಯಂತ ಪ್ರಬಲ ಕಾರ್ಡ್ ಆಗಲಿದೆ. ಒಂದು ವೇಳೆ ಜೆಡಿಎಸ್ ಇದಕ್ಕೆ ಒಪ್ಪದಿದ್ದರೆ ಆ ಪಕ್ಷ ದಲಿತ ವಿರೋಧಿ ಎಂದು ಹೇಳುವುದು ಸುಲಭ.

ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮೊದಲ ದಲಿತ ಸಿಎಂ ಆಗಲಿದ್ದಾರೆಯೇ?ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮೊದಲ ದಲಿತ ಸಿಎಂ ಆಗಲಿದ್ದಾರೆಯೇ?

ಮೈತ್ರಿ ಸಂಬಂಧ ಕಳಚಿದರೆ ಕಾಂಗ್ರೆಸ್ಸಿಗೇ ಲಾಭ

ಮೈತ್ರಿ ಸಂಬಂಧ ಕಳಚಿದರೆ ಕಾಂಗ್ರೆಸ್ಸಿಗೇ ಲಾಭ

ಅದೇ ರೀತಿ ಕಾಂಗ್ರೆಸ್ ಜತೆಗಿನ ಸಂಬಂಧವನ್ನು ಕಳಚಿಕೊಂಡು ಬಿಜೆಪಿ ಜತೆಗೇನಾದರೂ ಅದು ಹೋದರೆ ಜಾತ್ಯತೀತ ಜನತಾ ದಳದ ಸೆಕ್ಯೂಲರ್ ಕ್ರೆಡೆನ್ಷಿಯಲ್ ಬಗ್ಗೆ ತೃತೀಯ ರಂಗದಲ್ಲಿರುವ ಪಕ್ಷಗಳು ಅನುಮಾನ ಪಡುತ್ತವೆ. ಹಾಗೇನಾದರೂ ಜೆಡಿಎಸ್ ಪಕ್ಷದವರು ಬಿಜೆಪಿಯ ಜತೆ ಕೈ ಜೋಡಿಸಿದರೆ ನಿಶ್ಚಿತವಾಗಿ ಕೈ ಪಾಳೆಯಕ್ಕೆ ಲಾಭವಾಗುತ್ತದೆ.

ಅರ್ಥಾತ್, ಬಿಜೆಪಿ ವಿರೋಧಿ ಶಕ್ತಿಗಳು ಒಗ್ಗೂಡುವುದು ಸುಲಭವಾಗುತ್ತದೆ. ಹೀಗಾಗಿ ಈ ಆಪ್ಞನ್ ಓಪನ್ ಮಾಡಿಕೊಳ್ಳುವುದು ಒಳ್ಳೆಯದು ಎಂಬುದು ಸಿದ್ದರಾಮಯ್ಯ ಮತ್ತವರ ಗ್ಯಾಂಗಿನ ವಾದ. ಈ ವಾದಕ್ಕೆ ಪೂರಕವಾಗಿಯೇ ಇತ್ತೀಚಿನ ಬೆಳವಣಿಗೆಗಳು ನಡೆಯುತ್ತಿರುವುದು.

ಕಾಂಗ್ರೆಸ್ ನಿಂದ ಜಾರಿಕೊಳ್ಳಲು ಯತ್ನಿಸುತ್ತಿರುವ ಬೆಳಗಾವಿಯ ಜಾರಕಿಹೊಳಿ ಬ್ರದರ್ಸ್ ಭಾರೀ ರಾಜಕೀಯ ಆಟವಾಡುತ್ತಿದ್ದಾರೆ, ಕಾಂಗ್ರೆಸ್ ನಾಯಕರನ್ನೇ ಕೈಗೊಂಬೆಯಂತೆ ಆಟವಡಿಸುತ್ತಿದ್ದಾರೆ. ಈ ಅವಕಾಶವನ್ನು ಬಳಸಿಕೊಳ್ಳಲು ಬಿಜೆಪಿ ಸರ್ವ ರೀತಿಯಿಂದಲೂ ಯತ್ನ ನಡೆಸಿದೆ. ಈ ಯತ್ನದಲ್ಲಿ ಬಿಜೆಪಿ ಯಶಸ್ವಿಯಾಗುವುದೆ?

ಸಿದ್ದು 'ಆಟ'ಕ್ಕೆ ಕೈ ಹಿಸುಕಿಕೊಳ್ಳುತ್ತಿವೆ ಜೆಡಿಎಸ್-ಕಾಂಗ್ರೆಸ್, ಸರಕಾರ ಬೀಳಿಸುತ್ತಾ ಬಿಜೆಪಿ?ಸಿದ್ದು 'ಆಟ'ಕ್ಕೆ ಕೈ ಹಿಸುಕಿಕೊಳ್ಳುತ್ತಿವೆ ಜೆಡಿಎಸ್-ಕಾಂಗ್ರೆಸ್, ಸರಕಾರ ಬೀಳಿಸುತ್ತಾ ಬಿಜೆಪಿ?

ಬಹುಮತ ಸಾಬೀತುಪಡಿಸಲು ಬಿಜೆಪಿಗೆ ಸಾಧ್ಯವೆ?

ಬಹುಮತ ಸಾಬೀತುಪಡಿಸಲು ಬಿಜೆಪಿಗೆ ಸಾಧ್ಯವೆ?

ಅಂದ ಹಾಗೆ ಸರ್ಕಾರ ರಚಿಸಲು ಅಗತ್ಯವಾದ ಬಹುಮತವನ್ನು ಸಾಬೀತುಪಡಿಸಲು ಬಿಜೆಪಿಗೆ ಸಾಧ್ಯವಾಗುತ್ತದೆಯೇ? ಅನ್ನುವ ಅನುಮಾನದ ಮಾತನ್ನು ಬಹುತೇಕರು ಕೇಳುತ್ತಾರೆ. ಆದರೆ ರಾಜಕೀಯದಲ್ಲಿ ಏನೂ ಆಗಬಹುದು ಅನ್ನುವುದನ್ನು ಮರೆಯಬಾರದು.

ನಿಜ, ಇವತ್ತು ಸರ್ಕಾರ ರಚಿಸಲು ಬಿಜೆಪಿ ನೂರಾ ಹದಿಮೂರು ಶಾಸಕರ ಬೆಂಬಲ ತೋರಿಸಬೇಕು. ಇಲ್ಲವೇ ತನಗಿರುವ ಬಲವೇ ಹೆಚ್ಚು ಎಂದು ಸಾಬೀತುಪಡಿಸಲು ಪೂರಕವಾಗಿ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ಶಾಸಕರ ಪೈಕಿ ಹದಿನೇಳು ಮಂದಿಯನ್ನು ಸೆಳೆಯಬೇಕು.

ಹೀಗೆ ಸೆಳೆಯಲು ಸಾಧ್ಯವಾಗದಿದ್ದರೂ ನಾಳೆ ಜೆಡಿಎಸ್ ಜತೆಗಿನ ಸಂಬಂಧ ಬೇಡ ಎಂದು ಕಾಂಗ್ರೆಸ್ ನಿರ್ಧರಿಸುವ ಪರಿಸ್ಥಿತಿ ಬಂದರೆ ಆಗ ಸಹಜವಾಗಿಯೆ ಬಿಜೆಪಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತದೆ. ಸರ್ಕಾರ ರಚಿಸಲು ರಾಜ್ಯಪಾಲರು ಅದನ್ನು ಆಹ್ವಾನಿಸುವ ಸನ್ನಿವೇಶ ಸೃಷ್ಟಿಯಾಗುತ್ತದೆ.

ಆ ಸಂದರ್ಭದಲ್ಲಿ ಅದು ತನಗಿರುವ ಬಹುಮತವನ್ನು ಅದು ಸಾಬೀತುಪಡಿಸಬೇಕು. ಕಾಂಗ್ರೆಸ್-ಜೆಡಿಎಸ್ ನಡುವಣ ಸಂಬಂಧ ಹದಗೆಟ್ಟ ಕಾರಣದಿಂದ ಅದು ಸಾಬೀತುಪಡಿಸುತ್ತದೆ ಕೂಡಾ. ಈ ಸಂದರ್ಭದಲ್ಲಿ ಜೆಡಿಎಸ್ ನಡೆ ಏನಾಗಬಹುದು? ಅನ್ನುವುದು ಅತ್ಯಂತ ಕುತೂಹಲಕಾರಿ.

ಯಡಿಯೂರಪ್ಪನವರನ್ನು ಒಪ್ಪಿಕೊಳ್ಳುತ್ತಾ ಜೆಡಿಎಸ್?

ಯಡಿಯೂರಪ್ಪನವರನ್ನು ಒಪ್ಪಿಕೊಳ್ಳುತ್ತಾ ಜೆಡಿಎಸ್?

ಒಂದು ವೇಳೆ ಕಾಂಗ್ರೆಸ್ ಜತೆಗಿನ ಸಂಬಂಧ ಕುಸಿದು ಬಿದ್ದು ಅದು ಬಿಜೆಪಿ ಜತೆ ಕೈ ಜೋಡಿಸುವುದೇ ಆದರೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳಬೇಕಾಗುತ್ತದೆ ಜೆಡಿಎಸ್. ಬಿಜೆಪಿ ಜತೆ ಕೈ ಜೋಡಿಸುವ ವಿಷಯ ಬಂದರೆ ಜೆಡಿಎಸ್ ನಲ್ಲಿ ದೊಡ್ಡ ವಿರೋಧವೇನೂ ಇಲ್ಲ.

ಆದರೆ ಯಡಿಯೂರಪ್ಪ ಅವರ ನಾಯಕತ್ವದಡಿ ಕೈ ಜೋಡಿಸುವ ವಿಷಯದಲ್ಲಿ ದೇವೇಗೌಡರ ಕುಟುಂಬಕ್ಕೆ ರಿಸರ್ವೇಷನ್ ಇದೆ. ಯಾಕೆಂದರೆ ಇತ್ತೀಚಿನ ವರ್ಷಗಳಲ್ಲಿ ದೇವೇಗೌಡರ ಕುಟುಂಬ ಮತ್ತು ಯಡಿಯೂರಪ್ಪ ನಡುವೆ ದೊಡ್ಡ ದೊಡ್ಡ ಸಂಘರ್ಷಗಳೇ ನಡೆದು ಹೋಗಿವೆ.

ಆದರೂ ಮೋದಿ ಹಾಗೂ ಅಮಿತ್ ಶಾ ಬಯಸಿದರೆ ಇದು ಅಸಾಧ್ಯದ ಕೆಲಸವೇನೂ ಅಲ್ಲ. ಈ ಮಧ್ಯೆ ಜೆಡಿಎಸ್ ಮತ್ತೊಂದು ಬಗೆಯ ಲೆಕ್ಕಾಚಾರಕ್ಕೂ ಇಳಿಯಬಹುದು. ಬಿಜೆಪಿ ಜತೆ ಬಹಿರಂಗವಾಗಿ ಕೈ ಜೋಡಿಸದೆ ಅದು ವಿಶ್ವಾಸ ಮತ ಯಾಚಿಸುವ ಸಂದರ್ಭದಲ್ಲಿ ಮತದಾನವನ್ನು ಬಹಿಷ್ಕರಿಸಿ ಹೊರಹೋಗುವ ತಂತ್ರ ಅನುಸರಿಸಬಹುದು.

ನರಸಿಂಹರಾಯರ ಕಾಲದಲ್ಲಿ ದೇವೇಗೌಡರು ಇದನ್ನು ತಾನೇ ಪದೇ ಪದೇ ಮಾಡುತ್ತಿದ್ದುದು? ಹೀಗಾಗಿ ಈ ವಿಷಯದಲ್ಲಿ ಅವರ ಅನುಭವ ದೊಡ್ಡದು. ಹೀಗಾಗಿ ಜೆಡಿಎಸ್ ಈ ಅನುಭವವನ್ನು ಯಾವ ರೀತಿ ಎನ್ ಕ್ಯಾಶ್ ಮಾಡಿಕೊಳ್ಳುತ್ತದೆ? ಅನ್ನುವುದು ಮತ್ತು ಯಡಿಯೂರಪ್ಪ ಜತೆಗಿನ ಸಂಘರ್ಷವನ್ನು ಮರೆತು ಆಗಿದ್ದಾಗಲಿ ಎಂದು ಕೈ ಜೋಡಿಸುತ್ತದೆಯೇ? ಅನ್ನುವುದು ಮುಂದಿನ ಪ್ರಶ್ನೆ.

ಮೋದಿ ಮತ್ತು ಗೌಡರ ನಡುವೆ ಅಲಿಖಿತ ಒಪ್ಪಂದ

ಮೋದಿ ಮತ್ತು ಗೌಡರ ನಡುವೆ ಅಲಿಖಿತ ಒಪ್ಪಂದ

ವಾಸ್ತವವಾಗಿ ಕಳೆದ ವಿದಾನಸಭಾ ಚುನಾವಣೆಗೂ ಮುನ್ನ ಅತಂತ್ರ ವಿಧಾನಸಭೆಯ ಸಾಧ್ಯತೆಗಳನ್ನು ಊಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಪರಸ್ಪರ ಕೈ ಜೋಡಿಸಿ ಮೈತ್ರಿಕೂಟ ಸರ್ಕಾರ ರಚಿಸುವ ಕುರಿತು ಅಲಿಖಿತ ಒಪ್ಪಂದ ಮಾಡಿಕೊಂಡಿದ್ದರು ಅನ್ನುವುದು ರಹಸ್ಯವಲ್ಲ.

ಭಾರತೀಯ ಜನತಾ ಪಕ್ಷ ಎಂಭತ್ತರಿಂದ ಎಂಭತ್ತೈದು ಸೀಟುಗಳನ್ನು ಗೆಲ್ಲಬಹುದು, ಜಾತ್ಯತೀತ ಜನತಾ ದಳ ನಲವತ್ತೈದರಿಂದ ಐವತ್ತು ಸ್ಥಾನಗಳನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರದ ಮೇಲೆ ಈ ಸಹಾಯಕ ಸೈನ್ಯ ಪದ್ಧತಿಯ ಒಪ್ಪಂದವನ್ನು ಬಿಜೆಪಿ ಹಾಗೂ ಜೆಡಿಎಸ್ ವರಿಷ್ಠರು ಮಾಡಿಕೊಂಡಿದ್ದರು.

ಅವರ ಎಣಿಕೆಯಂತೆ ಅತಂತ್ರ ವಿಧಾನಸಭೆ ಸೃಷ್ಟಿಯಾಯಿತು. ಆದರೆ ಅವರ ಲೆಕ್ಕಾಚಾರ ಮೀರಿ ಬಿಜೆಪಿಗೆ ನೂರಾ ನಾಲ್ಕರಷ್ಟು ಸ್ಥಾನಗಳು ದಕ್ಕಿದವು. ಹೀಗಾಗಿ ಯಡಿಯೂರಪ್ಪ ತಾವೇ ಸರ್ಕಾರ ಮಾಡುವುದಾಗಿ ಹಠ ಹಿಡಿದರು. ತಾವೇ ದುಡುಕಿ ಸರಕಾರ ರಚಿಸಲು ಮುಂದಾದರು ಮತ್ತು ಆ ದುಡುಕಿನ ಫಲವಾಗಿ ಎಡವಿ ಬಿದ್ದರು.

ದೇವೇಗೌಡರು ಮನೆಗೆ ಬಂದಾಗ ಅವರ ಕಾರಿನ ಬಾಗಿಲು ತೆಗೆಯುತ್ತೇನೆ: ಮೋದಿ ದೇವೇಗೌಡರು ಮನೆಗೆ ಬಂದಾಗ ಅವರ ಕಾರಿನ ಬಾಗಿಲು ತೆಗೆಯುತ್ತೇನೆ: ಮೋದಿ

ಯಡಿಯೂರಪ್ಪ ನೇತೃತ್ವದಲ್ಲಿ ಅಲ್ಪ ಮತದ ಸರ್ಕಾರ

ಯಡಿಯೂರಪ್ಪ ನೇತೃತ್ವದಲ್ಲಿ ಅಲ್ಪ ಮತದ ಸರ್ಕಾರ

ಅವತ್ತಿನ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಮಾತಿಗೆ ಎದುರಾಡಿದರೆ ಪ್ರಬಲ ಲಿಂಗಾಯತ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಮೋದಿ ಹಾಗೂ ಅಮಿತ್ ಶಾ ಮೌನವಾಗಿಬಿಟ್ಟರು. ಪರಿಸ್ಥಿತಿಯನ್ನು ಗಮನಿಸಿದ ಕಾಂಗ್ರೆಸ್ ನ ಒಂದು ಗುಂಪು, ಹೈಕಮಾಂಡ್ ಗೆ ಸದ್ಯದ ಸನ್ನಿವೇಶವನ್ನು ವಿವರಿಸಿ, ಸಿಎಂ ಪೋಸ್ಟು ತಮಗೇ ಬೇಕು ಎಂದು ಜೆಡಿಎಸ್ ಹೇಳುತ್ತಿದೆ. ಬಿಟ್ಟುಕೊಡೋಣ ಅಂತ ಒಪ್ಪಿಸಿಬಿಟ್ಟಿತು.

ಹೀಗೆ ಒಪ್ಪಿಸಿದ ಕೈ ಟೀಮು ಈಗ ದೇವೇಗೌಡ ಮತ್ತು ಕುಮಾರಸ್ವಾಮಿ ಜತೆ ಸೇರಿ ಸಿದ್ದರಾಮಯ್ಯ ಅವರನ್ನು ಬಡಿದು ಹಾಕಲು ಹೊರಟಿದೆ. ಆದರೆ ಸಿದ್ದರಾಮಯ್ಯ ಕೂಡಾ ದೇವೇಗೌಡರ ಗರಡಿಯಲ್ಲೇ ಸಾಮು ಮಾಡಿದವರಲ್ಲವೇ? ಹಾಗಂತಲೇ ಅವರೂ ಪ್ರತಿಪಟ್ಟು ಹಾಕಿದ್ದಾರೆ.

ಹೀಗಾಗಿ ರಾಜ್ಯ ರಾಜಕಾರಣ ಯಾವ ತಿರುವು ಪಡೆಯಬಹುದು? ಅನ್ನುವ ಪ್ರಶ್ನೆ ಬಂದಾಗ ಹಲವು ಸಾಧ್ಯತೆಗಳು ಗೋಚರಿಸುತ್ತಿವೆ. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಲ್ಪ ಮತದ ಸರ್ಕಾರ ರಚಿಸುವುದು ಕೂಡಾ ಅಂತಹ ಸಾಧ್ಯತೆಗಳಲ್ಲಿ ಒಂದು.

ಅಂದ ಹಾಗೆ ರಾಜಕೀಯದಲ್ಲಿ ಇದಮಿತ್ಥಂ ಎಂದು ಹೇಳಲು, ಹೀಗೆ ಹೀಗೇ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಪೊಲಿಟಿಕಲ್ ಫ್ಯಾಕ್ಟರಿಯಲ್ಲಿ ಏಕಕಾಲಕ್ಕೆ ಹಲವು ಲೆಕ್ಕಾಚಾರಗಳ ಪ್ರಾಡಕ್ಟುಗಳು ಉತ್ಪಾದನೆಯಾಗುತ್ತಿರುತ್ತವೆ. ಅ ಪೈಕಿ ಯಾವ ಪ್ರಾಡಕ್ಟಿಗೆ ಆಕರ್ಷಣೆ ಜಾಸ್ತಿಯೋ? ಆ ಪ್ರಾಡಕ್ಟು ಸೇಲಬಲ್ ಕಮೋಡಿಟಿಯಾಗಿ ಪರಿವರ್ತನೆಯಾಗುತ್ತದೆ ಅಷ್ಟೇ.

English summary
Will BJP leader Yeddyurappa form minority government in Karnataka? Present situation and developments suggest this possibility. Many politicians including Siddaramaiah want the coalition government to fall. Political analysis by R T Vittal Murthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X