ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿ ಲಾಸ್ಟ್ ವಾರ್... ಬೆಚ್ಚಿಬೀಳಿಸುತ್ತೆ ಮಾಜಿ ಸೇನಾಧಿಕಾರಿ ಪ್ರವೀಣ್ ಸಾವ್ನೀ ಬರೆದ ಪುಸ್ತಕ

|
Google Oneindia Kannada News

ಭಾರತ ಮತ್ತು ಚೀನಾ ನಡುವೆ ಇತ್ತೀಚೆಗೆ ತಿಕ್ಕಾಟ, ಸಂಘರ್ಷ ಹೆಚ್ಚುತ್ತಿದೆ. ಗಡಿಭಾಗದಲ್ಲಿ ಚೀನಾ ನಡೆಸುವ ಕಿತಾಪತಿ, ಲಡಾಖ್ ಬಳಿ ಭಾರತ ಮತ್ತು ಚೀನಾ 2020ರಲ್ಲಿ ನಡೆಸಿದ ಸಂಘರ್ಷ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ನಡೆಸುತ್ತಿರುವ ಯೋಜನೆಗಳು, ಮತ್ತು ಈಗ ಶ್ರೀಲಂಕಾದಲ್ಲಿ ಚೀನಾದ ಬೇಹುಗಾರಿಕೆ ಹಡಗು ಬಂದಿಳಿಯಲಿರುವುದು ಇವೆಲ್ಲವೂ ಎರಡೂ ದೇಶಗಳ ಮಧ್ಯೆ ಯುದ್ಧ ಸಂಭವಿಸಬಹುದು ಎಂಬ ಅನುಮಾನ ಹುಟ್ಟುಹಾಕಿವೆ.

ಒಂದು ವೇಳೆ ಭಾರತ ಮತ್ತು ಚೀನಾ ಮಧ್ಯೆ ಯುದ್ಧ ನಡೆದೇ ಬಿಟ್ಟರೆ? ಈಗಿನ ಕಾಲದಲ್ಲಿ ಯಾರೂ ಯುದ್ಧಕ್ಕೆ ಧೈರ್ಯ ಮಾಡೋದಿಲ್ಲ ಎಂದು ಕೆಲ ವರ್ಷಗಳ ಹಿಂದಿನವರೆಗೂ ಜನರು ಮಾತನಾಡುವುದನ್ನು ನಾವು ಕೇಳಿರಬಹುದು. ಆದರೆ, ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿರುವುದು ವಾಸ್ತವ ಸಂಗತಿ.

ಚೀನಾ-ತೈವಾನ್ ಉದ್ವಿಗ್ನತೆ: ತೈವಾನ್‌ ರಕ್ಷಣಾ ಅಧಿಕಾರಿ ಶವವಾಗಿ ಪತ್ತೆಚೀನಾ-ತೈವಾನ್ ಉದ್ವಿಗ್ನತೆ: ತೈವಾನ್‌ ರಕ್ಷಣಾ ಅಧಿಕಾರಿ ಶವವಾಗಿ ಪತ್ತೆ

ತೈವಾನ್ ಮೇಲೆ ಚೀನಾ ಏರಿ ಹೋಗೋದಿಲ್ಲ ಎಂದು ಖಾತ್ರಿಯಾಗಿ ಹೇಳುವುದು ಅಸಾಧ್ಯ. ಭಾರತದ ಮೇಲೂ ಚೀನಾ ಯುದ್ಧಕ್ಕೆ ಮುಂದಾಗೋದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅರುಣಾಚಲಪ್ರದೇಶ, ಲಡಾಖ್ ಮೇಲೆ ಚೀನಾ ಮಾವೋ ಕಾಲದಿಂದಲೂ ಕಣ್ಣಿಟ್ಟೇ ಇದೆ. ಟಿಬೆಟ್‌ನ ಐದು ಬೆರಳುಗಳಲ್ಲಿ ಲಡಾಖ್ ಕೂಡ ಒಂದು ಎಂಬುದು ಚೀನಾದ ಆಂಬೋಣ.

ಇದೇನೇ ಇರಲಿ, ಭಾರತ ಮೇಲೆ ಚೀನಾ ಯುದ್ಧ ಸಾರಿಬಿಟ್ಟಿತು ಎಂದುಕೊಳ್ಳಿ. ಯಾರು ಗೆಲ್ಲುತ್ತಾರೆ? ಮಾಜಿ ಸೇನಾಧಿಕಾರಿ ಪ್ರವೀಣ್ ಸಾವನೀ ಎಂಬುವರು ಬೆಚ್ಚಿಬೀಳಿಸುವ ಉತ್ತರ ನೀಡುತ್ತಾರೆ. ಅವರ ಪ್ರಕಾರ ಕೇವಲ 10 ದಿನದಲ್ಲಿ ಭಾರತ ವಿರುದ್ಧ ಚೀನಾ ಯುದ್ಧ ಗೆಲ್ಲಬಲ್ಲುದಂತೆ. ತಮ್ಮ ಹೊಸ ಪುಸ್ತಕವೊಂದರಲ್ಲಿ ಅವರು ಹಾಗೆ ಬರೆದಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿದ್ದಾರೆ.

ಹಂಬನತೋಟದತ್ತ ಚೀನಾ ಸರ್ವೇಕ್ಷಣಾ ಹಡಗು; ಭಾರತಕ್ಕೆ ಏನು ಅಪಾಯ?ಹಂಬನತೋಟದತ್ತ ಚೀನಾ ಸರ್ವೇಕ್ಷಣಾ ಹಡಗು; ಭಾರತಕ್ಕೆ ಏನು ಅಪಾಯ?

ಪ್ರವೀಣ್ ಸಾವ್ನೀ ಯಾರು?

ಪ್ರವೀಣ್ ಸಾವ್ನೀ ಯಾರು?

ಇವರು ನಿವೃತ್ತ ಭಾರತೀಯ ಸೇನಾಧಿಕಾರಿ. ನಂತರ ಮಾಧ್ಯಮಗಳಲ್ಲಿ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಿರುತ್ತಾರೆ. ರಾಷ್ಟ್ರೀಯ ಭದ್ರತಾ ವಿಚಾರ ಮತ್ತು ಸುದ್ದಿಗಳನ್ನು ಪ್ರಕಟಿಸುವ 'ಫೋರ್ಸ್' ಪತ್ರಿಕೆಯ ಸಂಪಾದಕರೂ ಆಗಿದ್ದಾರೆ.

ಅಷ್ಟೇ ಅಲ್ಲ, ಭಾರತದ ಸೇನಾಬಲದಲ್ಲಿರುವ ನ್ಯೂನತೆಗಳನ್ನು ಎತ್ತಿತೋರಿಸಿ ಎಚ್ಚರಿಸುವ ಕೆಲಸ ಮಾಡುತ್ತಾರೆ. ಮೂರು ಪುಸ್ತಕಗಳನ್ನು ಬರೆದಿದ್ದಾರೆ. "ಡ್ರಾಗನ್ ಆನ್ ಅವರ್ ಡೋರ್ ಸ್ಟೆಪ್.", "ಡಿ ಡಿಫೆನ್ಸ್ ಮೇಕ್‌ಓವರ್...", ಮತ್ತು "ಆಪರೇಷನ್ ಪರಾಕ್ರಮ್: ದಿ ವಾರ್ ಅನ್ ಫಿನಿಶ್ಡ್". ಈಗ ಮತ್ತೊಂದು ಪುಸ್ತಕ ಬರೆದಿದ್ದಾರೆ; "ದಿ ಲಾಸ್ಟ್ ವಾರ್..." (The Last War: How AI Will Shape India's Final Showdown With China).

ಇದು ಆಗಸ್ಟ್ 10, ಬುಧವಾರದಂದು ಅನಾವರಣಗೊಳ್ಳಲಿದೆ. ಯುದ್ಧದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಹೇಗೆ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಪ್ರವೀಣ್ ಸಾವ್ನೀ ತಮ್ಮ ಹೊಸ ಪುಸ್ತಕದಲ್ಲಿ ವಿಸ್ತೃತವಾಗಿ ಬರೆದಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧವೇನಾದರೂ ಆದರೆ 10 ದಿನದಲ್ಲಿ ಚೀನಾ ಗೆಲ್ಲುತ್ತದೆ. ಅರುಣಾಚಲಪ್ರದೇಶ ಮತ್ತು ಲಡಾಖ್ ಪ್ರದೇಶಗಳನ್ನು ಬಹಳ ಸುಲಭವಾಗಿ ತನ್ನದಾಗಿಸಿಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

1991ರ ಯುದ್ಧದ ಉಲ್ಲೇಖ

1991ರ ಯುದ್ಧದ ಉಲ್ಲೇಖ

ಯುದ್ಧದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದಕ್ಕೆ ಪ್ರವೀಣ್ ಸಾವ್ನೀ 1991ರ ಕೊಲ್ಲಿ ಯುದ್ಧವನ್ನು ಉಲ್ಲೇಖಿಸುತ್ತಾರೆ. ಅಗ ಇರಾಕ್ ಮೇಲೆ ಅಮೆರಿಕ ಅನುಸರಿಸಿದ ಯುದ್ಧ ತಂತ್ರಗಳು ಇಡೀ ವಿಶ್ವವನ್ನೇ ಅಚ್ಚರಿಗೊಳಿಸಿದ ರೀತಿಯನ್ನು ಅವರು ಸ್ಮರಿಸಿದ್ದಾರೆ.

"ಸೆನ್ಸಾರ್ಸ್, ದಿಗ್ದರ್ಶಿತ ಶಸ್ತ್ರಾಸ್ತ್ರಗಳು (Munitions), ಸೆಟಿಲೈಟ್‌ಗಳ ಉಪಯೋಗ ಇತ್ಯಾದಿ ಎಲ್ಲವನ್ನೂ ಅಮೆರಿಕ ತನ್ನ ಯುದ್ಧದಲ್ಲಿ ಬಳಕೆ ಮಾಡಿಕೊಂಡಿತ್ತು. ಇದು ವಿಶ್ವಾದ್ಯಂತ ಹಲವರಿಗೆ ಅಚ್ಚರಿ ತಂದಿತ್ತು. ಅದೇ ರೀತಿ ಭಾರತ ವಿರುದ್ಧ ಚೀನಾ ಕೂಡ ಎಐ, ನವೀನ ತಂತ್ರಜ್ಞಾನಗಳು, ಹೊಸ ಮಾದರಿ ಯುದ್ಧ ತಂತ್ರ, ರೋಬೋ ಇತ್ಯಾದಿಯನ್ನು ಬಳಸುತ್ತದೆ," ಎಂದು ಪ್ರವೀಣ್ ಸಾವ್ನೀ ತಮ್ಮ ಹೊಸ ಪುಸ್ತಕದಲ್ಲಿ ಬರೆದಿದ್ದಾರೆನ್ನಲಾಗಿದೆ.

ಚೀನಾ ಯುದ್ಧಕ್ಕೆ ಬರುತ್ತಾ?

ಚೀನಾ ಯುದ್ಧಕ್ಕೆ ಬರುತ್ತಾ?

ಪ್ರವೀಣ್ ಸಾವ್ನಿ ಪ್ರಕಾರ ಚೀನಾ ಐದು ವರ್ಷಗಳಿಂದಲೂ ಯುದ್ಧಕ್ಕೆ ಅಣಿಯಾಗುತ್ತಿದೆಯಂತೆ. ಹಿಂದೆ 1961ರಲ್ಲಿ ಚೀನಾ ದಿಢೀರ್ ಆಗಿ ಭಾರತದ ಮೇಲೆ ಎರಗಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅದಕ್ಕೆ ಐದಾರು ವರ್ಷಗಳ ಹಿಂದಿನಿಂದಲೂ ಚೀನಾ ಆ ಯುದ್ಧಕ್ಕೆ ಸಿದ್ಧತೆ ನಡೆಸಿತ್ತು. ಹಾಗೆಯೇ, ಈ ಬಾರಿಯೂ ಚೀನಾ ಯುದ್ಧಕ್ಕೆ ಸಜ್ಜಾಗುತ್ತಿರುವಂತೆ ಕಾಣುತ್ತಿದೆ.

ಪ್ರವೀಣ್ ಸಾವ್ನೀ ಪ್ರಕಾರ 2017ರ ಡೋಕ್ಲಾಮ್ ಬಿಕ್ಕಟ್ಟು ಸಂಭವಿಸಿದಾಗಿನಿಂದಲೂ ಚೀನಾ ಯುದ್ಧಕ್ಕೆ ಸನ್ನದ್ಧಗೊಳ್ಳುತ್ತಿದೆಯಮತೆ. ಡೋಕ್ಲಾಮ್ ಘಟನೆ ಬಳಿಕ ಗಡಿಭಾಗದ ಉದ್ದಕ್ಕೂ ಚೀನಾ ತನ್ನ ಸೇನಾ ಪಡೆಗಳನ್ನು ನಿಯೋಜಿಸಿದೆ.

ಲಡಾಖ್‌ನಲ್ಲಿ ಚೀನಾ ಕಿತಾಪತಿ ಮಾಡಿದ್ದೂ ಅದರ ಯುದ್ಧ ತಯಾರಿಯ ಒಂದು ಭಾಗವೇ ಇರಬಹುದು ಎಂಬ ಅನುಮಾನ ಬರಬಹುದು.

ಯುದ್ಧವಾದರೆ ಏನು ಗತಿ?

ಯುದ್ಧವಾದರೆ ಏನು ಗತಿ?

ಚೀನಾ ಅಮೆರಿಕದೊಂದಿಗೆ ಸ್ಪರ್ಧೆ ಮಾಡುತ್ತಿರುವ ದೇಶ. ಚೀನಾಗೆ ಭಾರತ ಯಾವುದೇ ಕಾರಣಕ್ಕೂ ಸಾಟಿ ಅಲ್ಲ. ಚೀನಾ ಸೂಪರ್ ಪವರ್ ದೇಶವಾಗುತ್ತಿದೆ. ಭಾರತ ಮತ್ತು ಚೀನಾ ಮಧ್ಯೆ ಸಾಮರ್ಥ್ಯದ ಅಂತರ ಹೆಚ್ಚಾಗುತ್ತದೆ. ಪೂರ್ಣಪ್ರಮಾಣದ ಯುದ್ಧವಾದರೆ ಚೀನಾದ ಎಐ ಬೆಂಬಲಿತ ಯುದ್ಧ ಯಂತ್ರಗಳಿಗೆ ಭಾರತೀಯ ಸೇನೆ ಯಾವ ಲೆಕ್ಕಕ್ಕೂ ಇಲ್ಲದಂತಾಗುತ್ತದೆ ಎಂದವರು ವಾದ ಮುಂದಿಡುತ್ತಾರೆ.

"ಇಂಥ ಯುದ್ಧದಲ್ಲಿ ಸಾಂಪ್ರದಾಯಿಕ ಸೇನಾ ಪಡೆಗಳಿಗೆ ಕಷ್ಟವಾಗುತ್ತದೆ. ಅಣ್ವಸ್ತ್ರಗಳ ಬಳಕೆ ಸಾಧ್ಯವಾಗುವುದಿಲ್ಲ. ಸೈನಿಕರ ವೈಯಕ್ತಿಕ ಶೌರ್ಯ ಪರಾಕ್ರಮಗಳು ಕೆಲಸಕ್ಕೆ ಬರುವುದಿಲ್ಲ.

"ಭೂಮಿ, ವಾಯು ಮತ್ತು ಸಮುದ್ರ ಈ ಮೂರು ಭೌತಿಕ ಕ್ಷೇತ್ರದಲ್ಲಿ ಭಾರತ ತನ್ನ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಆದರೆ, ಚೀನಾ ಏಳು ಕ್ಷೇತ್ರಗಳಲ್ಲಿ ಅಗಾಧ ಸಾಮರ್ಥ್ಯ ಗಳಿಸುತ್ತಿದೆ. ನೆಲ, ವಾಯು, ಸಮುದ್ರ, ಬಾಹ್ಯಾಕಾಶ, ಸೈಬರ್, ಎಲೆಕ್ಟ್ರೋ ಮ್ಯಾಗ್ನೆಟಿಕ್ ಸ್ಪೆಕ್ಟ್ರಂ ಮತ್ತು ಹೈಪರ್‌ಸೋನಿಕ್ ಇಷ್ಟು ಕ್ಷೇತ್ರಗಳಲ್ಲಿ ಚೀನಾ ಮುಂದಿದೆ.

"ಚೀನಾ ಸೇನೆಯ ಈ ಅಗಾಧ ತಂತ್ರಜ್ಞಾನ ಸಾಮರ್ಥ್ಯದಿಂದಾಗಿ ಯುದ್ಧ ಆರಂಭಗೊಂಡ ಮೊದಲ 72 ಗಂಟೆಗಳಲ್ಲಿ ಭಾರತದ ಮೇಲೆ ಪ್ರಾಬಲ್ಯ ಸಾಧಿಸಿಬಿಡುತ್ತದೆ. ಅಲ್ಲಿಂದ ಭಾರತದ ಪ್ರತಿರೋಧ ಬಹಳ ಬೇಗ ಅಂತ್ಯಗೊಳ್ಳುತ್ತದೆ... ವಾಸ್ತವವಾಗಿ ರಣರಂಗವು ಯಾವುದೇ ಭೂಮಿಯಲ್ಲಿ ಆಗುವುದಿಲ್ಲ. ಬದಲಾಗಿ ಸೈಬರ್‌ಸ್ಪೇಸ್ ಮತ್ತು ಎಲೆಕ್ಟ್ರೋ ಮ್ಯಾಗ್ನೆಟಿಕ್ ಸ್ಪೆಕ್ಟ್ರಂನಲ್ಲಿ ಇರಲಿದೆ" ಎಂದು ಪ್ರವೀಣ್ ಸಾವ್ನೀ ತಮ್ಮ 'ದಿ ಲಾಸ್ಟ್ ವಾರ್' ಪುಸ್ತಕದಲ್ಲಿ ಬರೆದಿದ್ದಾರೆ.

ಭಾರತಕ್ಕೇನು ಉಪಾಯ?

ಭಾರತಕ್ಕೇನು ಉಪಾಯ?

ಚೀನಾದ ಗಡಿಭಾಗದ ಸಮೀಪವೇ ಭಾರತದ ಜೊತೆ ಅಮೆರಿಕ ಜಂಟಿ ಸಮರಾಭ್ಯಾಸ ನಡೆಸಲಿರುವ ಸುದ್ದಿ ಕೇಳಿರಬಹುದು. ಪ್ರವೀಣ್ ಸಾವ್ನಿ ತಮ್ಮ ಹೊಸ ಪುಸ್ತಕದಲ್ಲಿ, ಅಮೆರಿಕ ಜೊತೆ ಭಾರತ ಜಂಟಿ ಸಮರಾಭ್ಯಾಸ ನಡೆಸುವ ಗೋಜಿಗೆ ಹೋಗಬಾರದು ಎಂದು ಸಲಹೆ ನೀಡುತ್ತಾರೆ.

"ಈ ಪ್ರದೇಶದಲ್ಲಿ ಅಮೆರಿಕದ ಶಕ್ತಿ ಕುಂಠಿತವಾಗುತ್ತಿದೆ. ಆ ದೇಶದ ಜೊತೆ ಮಿಲಿಟರಿ ಸಂಬಂಧ ಹೆಚ್ಚಿಸುವುದರ ಬದಲು ತನ್ನ ಶತ್ರುಗಳಾದ ಚೀನಾ ಮತ್ತು ಪಾಕಿಸ್ತಾನದ ಜೊತೆ ಶಾಂತಿ ಮಾಡಿಕೊಳ್ಳುವುದು ಉತ್ತಮ. ಅದೇ ವೇಳೆ ಈವರೆಗೆ ತನ್ನ ಗಮನ ನೆಡದ ಕ್ಷೇತ್ರಗಳಲ್ಲಿ ಮಿಲಿಟರಿ ಮತ್ತು ತಾಂತ್ರಿಕ ಶಕ್ತಿಗಳನ್ನು ಕ್ರೋಢೀಕರಿಸುವ ಕೆಲಸ ಮಾಡಬೇಕು. ಆಗ ಮಾತ್ರ ದೇಶದ ಗಡಿಗಳನ್ನು ಸುರಕ್ಷಿತವಾಗಿ ಇಡಬಹುದು" ಎಂದು ಪ್ರವೀಣ್ ಸಾವ್ನೀ ಅಭಿಪ್ರಾಯಪಡುತ್ತಾರೆ.

ರಾಹುಲ್ ಗಾಂಧಿ ಶಿಫಾರಸು

ರಾಹುಲ್ ಗಾಂಧಿ ಶಿಫಾರಸು

ಪ್ರವೀಣ್ ಸಾವ್ನೀ ಅವರ " ದಿ ಲಾಸ್ಟ್ ವಾರ್" ಪುಸ್ತಕಕ್ಕೆ ಹಿನ್ನುಡಿ ಬರೆದವರಲ್ಲಿ ರಾಹುಲ್ ಗಾಂಧಿ ಕೂಡ ಒಬ್ಬರು. "ಬಹಳ ಮುಖ್ಯ ಮತ್ತು ಸಕಾಲಿಕ ಓದು" ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

"ನೀವು ಒಪ್ಪಿ ಅಥವಾ ಒಪ್ಪದಿರಿ... ಆದರೆ, ನಮ್ಮ ಸಂಕಷ್ಟದ ದಿನದಲ್ಲಿ ಪ್ರವೀಣ್ ಸಾವ್ನೀ ಬರೆದಿರುವ ಕಟು ವಿಶ್ಲೇಷಣೆಗಳು ಬಹಳ ಮುಖ್ಯ ಮತ್ತು ಸಕಾಲಿಕ ಬರಹವಾಗಿದೆ" ಎಂದು ರಾಹುಲ್ ಗಾಂಧಿ ಬರೆದಿದ್ದಾರೆ.

ಪುಸ್ತಕದಲ್ಲಿ ಲೇಖಕ ಪ್ರವೀಣ್ ಸಾವ್ನೀ ರಾಹುಲ್ ಗಾಂಧಿ ಜೊತೆ ನಡೆಸಿದ ಚರ್ಚೆಯ ವಿವರವನ್ನು ತಿಳಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರಕಾರ ತನ್ನ ದೃಷ್ಟಿಕೋನವನ್ನು ಹೇಗೆ ಪಾಕಿಸ್ತಾನಕ್ಕೆ ಸೀಮಿತಗೊಳಿಸಿದೆ ಎಂಬುದನ್ನು ರಾಹುಲ್ ಗಾಂಧಿ ಹೇಳಿಕೊಂಡರಂತೆ.

"2014ರಿಂದಲೂ ನಮ್ಮ ಸರಕಾರ ತನ್ನ ಜಾಗತಿಕ ದೃಷ್ಟಿಕೋನವನ್ನು ಪಾಕಿಸ್ತಾನಕ್ಕೆ ಸೀಮಿತಗೊಳಿಸಿದೆ. ಇದರಿಂದ ಅದರ ಚಿಂತನೆ ಮತ್ತು ಕಾರ್ಯತಂತ್ರ ಮಸುಕಾಗಿ ಹೋಗಿದೆ. ಚೀನಾ ಮತ್ತು ಪಾಕಿಸ್ತಾನ ನಡುವಿನ ರೇಖೆ ಮರೆಯಾಗಿರುವುದನ್ನು ಮತ್ತು ನಾವು ಸಂಪೂರ್ಣ ಹೊಸ ಶತ್ರುವನ್ನು ಎದುರಿಸುತ್ತಿರುವುದು ನಮ್ಮ ಆಡಳಿತವರ್ಗದವರ ಅರಿವಿಗೆ ನಿಲುಕದಂತಾಗದೆ" ಎಂದು ರಾಹುಲ್ ಗಾಂಧಿ ಹೇಳಿದರೆಂದು ಪ್ರವೀಣ್ ಸಾವ್ನಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಪ್ರವೀಣ್ ಸಾವ್ನಿ ಅವರ "ದಿ ಲಾಸ್ಟ್ ವಾರ್: ಹೌ ಎಐ ವಿಲ್ ಶೇಪ್ ಇಂಡಿಯಾಸ್ ಫೈನಲ್ ಶೋಡೌನ್ ವಿತ್ ಚೀನಾ" ಎಂಬ ಪುಸ್ತಕ ಆಗಸ್ಟ್ 10ರಂದು ಬಿಡುಗಡೆಯಾಗುತ್ತಿದೆ.

(ಒನ್ಇಂಡಿಯಾ ಸುದ್ದಿ)

English summary
Defence writer Praveen Sawhney in his new book "The Last War" has written on India and China war possibility and how India may lose war in 10 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X